ಗಾಳಿ-ಮಳೆ: ಸುಳ್ಯ ತಾಲೂಕಿನ ವಿವಿಧೆಡೆ ಹಾನಿ
Team Udayavani, May 5, 2020, 5:32 AM IST
ಸುಳ್ಯ : ತಾಲೂಕಿನ ಹಲವೆಡೆ ರವಿವಾರ ರಾತ್ರಿ ಸುರಿದ ಮಳೆ ಗಾಳಿ ಪರಿಣಾಮ ಹಲವು ಮನೆ, ಮರ, ವಿದ್ಯುತ್ ಕಂಬಗಳು ಧರೆಗುರುಳಿದ್ದು, ಹೆಚ್ಚಿನ ನಷ್ಟ ಸಂಭವಿಸಿದೆ.
ನ.ಪಂ. ವ್ಯಾಪ್ತಿಯ ಹೊಸಗದ್ದೆ ಬಳಿ ಅಯ್ಯಪ್ಪ ಗುಡಿ ಸಮೀಪದ ನಿವಾಸಿ ಲೂಸಿ ಡಿ’ಸೋಜಾ ಮನೆಯ ಮೇಲ್ಛಾವಣಿಗೆ ಮರದ ಗೆಲ್ಲು ಮುರಿದು ಬಿದ್ದು ಸಂಪೂರ್ಣ ಹಾನಿ ಸಂಭವಿಸಿದೆ.
ಜಯನಗರದಲ್ಲಿ ಗುಲಾಬಿ ಅವರ ಮನೆ ಶೀಟು ಗಾಳಿಗೆ ಹಾರಿ ಹೋಗಿದೆ. ಇದೇ ಪರಿಸರದ ಉಮೇಶ ಅವರ ಮನೆ ಮೇಲೆ ವಿದ್ಯುತ್ ಕಂಬ ಹಾಗೂ ತೆಂಗಿನ ಮರ ಮುರಿದು ಬಿದ್ದು ತೀವ್ರ ಹಾನಿ ಉಂಟಾಗಿದೆ. ನಾರಾಯಣ ಮಣಿಯಾಣಿ ಅವರ ಮನೆಗೆ ವಿದ್ಯುತ್ ಕಂಬ, ತೆಂಗಿನ ಮರ ಬಿದ್ದು ಹಾನಿ ಉಂಟಾಗಿದೆ. ಮೂರು ವಿದ್ಯುತ್ ಕಂಬಗಳು ಧರೆಗುರುಳಿವೆ. ಜಯನಗರ ಕೃಷ್ಣ ಮಣಿಯಾಣಿ ಅವರ ಮನೆಗೆ ವಿದ್ಯುತ್ ಕಂಬ ಬಿದ್ದು ಹಾನಿ ಸಂಭವಿಸಿದೆ. ಮನೆಯ ಪಕ್ಕಾಸು ಮುರಿದು ಛಾವಣಿಗೆ ಹಾನಿ ಉಂಟಾಗಿದೆ.
ಕಾನತ್ತಿಲ ನಿವಾಸಿ ಸುಬ್ರಹ್ಮಣ್ಯ ಭಟ್ ಅವರ ಮನೆಯ ಛಾವಣಿಗೆ ಮರ ಬಿದ್ದು ಹಾನಿ ಉಂಟಾಗಿದೆ. ಜಟ್ಟಿಪಳ್ಳದಲ್ಲಿ ಅಮ್ಮಿ ಅವರ ಮನೆಯ ಶೀಟು ಹಾರಿ ಹೋಗಿದೆ. ಲೀಲಾವತಿ ಅವರ ಮನೆಗೆ ಮರದ ಗೆಲ್ಲು ಬಿದ್ದು ಹಾನಿ ಉಂಟಾಗಿದೆ. ಮಾಧವ ಜಟ್ಟಿಪಳ್ಳ ಅವರ ಮನೆಗೂ ಹಾನಿ ಉಂಟಾಗಿದೆ.
ರಸ್ತೆ ಸಂಪರ್ಕ ಕಡಿತ
ಬೆಳ್ಳಾರೆ-ಪೆರುವಾಜೆ-ಸವಣೂರು ರಸ್ತೆಯ ಪೆರುವಾಜೆ ಶಾಲಾ ಸನಿಹದಲ್ಲಿ ರಸ್ತೆಗೆ ಮರ ಮತ್ತು ವಿದ್ಯುತ್ ಕಂಬ ಬಿದ್ದು ರಸ್ತೆ ಸಂಚಾರ ಸ್ಥಗಿತಗೊಂಡಿತ್ತು. ಬಳಿಕ ತೆರವು ಕಾರ್ಯ ನಡೆಸಿ ಸಂಚಾರ ವ್ಯವಸ್ಥೆ ಸುಗಮಗೊಳಿಸಲಾಯಿತು.
ಆವರಣ ಗೋಡೆ ಕುಸಿದು ಹಾನಿ
ಅರಂತೋಡು ಗ್ರಾಮದ ಉದಯನಗರದಲ್ಲಿ ಬಾಡಿಗೆ ಮನೆಯ ಆವರಣ ಗೋಡೆ ಜರಿದು ಪಕ್ಕದಲ್ಲಿರುವ ಅಬ್ದುಲ್ ರಹಿಮಾನ್ ಹಾಗೂ ರುಖೀಯಾ ಅವರ ಮನೆಗೆ ಹಾನಿ ಉಂಟಾಗಿದೆ.
ಮೆಸ್ಕಾಂಗೆ ಲಕ್ಷಾಂತರ ನಷ್ಟ
ಸುಳ್ಯ ಸಬ್ ಡಿವಿಜನ್ ವ್ಯಾಪ್ತಿಗೆ ಒಳಪಟ್ಟ ಪ್ರದೇಶದಲ್ಲಿ ಮೆಸ್ಕಾಂಗೆ 12 ಲಕ್ಷ ರೂ. ನಷ್ಟ ಸಂಭವಿಸಿದೆ. 70ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಧರೆಗುರುಳಿವೆ. ಟ್ರಾನ್ಸ್‌ಫಾರ್ಮರ್‌ಗೂ ಹಾನಿ ಉಂಟಾಗಿದೆ ಎಂದು ಮೆಸ್ಕಾಂ ಸುಳ್ಯ ಪ್ರಭಾರ ಕಾರ್ಯನಿರ್ವಾಹಕ ಅಧಿಕಾರಿ ಹರೀಶ್ ನಾಯ್ಕ ತಿಳಿಸಿದ್ದಾರೆ.
ಶಾಸಕ ಅಂಗಾರ ಭೇಟಿ
ಹಾನಿಯಾದ ಪ್ರದೇಶಗಳಿಗೆ ಶಾಸಕ ಎಸ್. ಅಂಗಾರ, ನಗರ ಪಂ. ಸದಸ್ಯರಾದ ಶಿಲ್ಪಾ ಸುದೇವ್, ವಿನಯಕುಮಾರ್ ಕಂದಡ್ಕ ಹಾಗೂ ಗ್ರಾಮ ಲೆಕ್ಕಾಧಿಕಾರಿ ತಿಪ್ಪೇಶಪ್ಪ ಭೇಟಿ ನೀಡಿ ಪರಿಶೀಲಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.