ಸೆಪ್ಟೆಂಬರ್‌ 29ರಂದು ವಿಶ್ವ ಹೃದಯ ದಿನ


Team Udayavani, Sep 26, 2021, 6:10 AM IST

ಸೆಪ್ಟೆಂಬರ್‌ 29ರಂದು ವಿಶ್ವ ಹೃದಯ ದಿನ

ವಿಶ್ವ ಹೃದಯ ದಿನವನ್ನು ಪ್ರತೀ ವರ್ಷ ಸೆಪ್ಟೆಂಬರ್‌ 29ರಂದು ವಿಶ್ವದಾದ್ಯಂತ ಹೃದಯ ರಕ್ತನಾಳದ ಕಾಯಿಲೆಗಳು, ಅವುಗಳ ತಡೆಗಟ್ಟುವಿಕೆ ಮತ್ತು ಜಾಗತಿಕ ಪರಿಣಾಮದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಪ್ರಯತ್ನವಾಗಿ ಆಚರಿಸಲಾಗುತ್ತದೆ. ತಂಬಾಕು ಬಳಕೆ, ಅನಾರೋಗ್ಯಕರ ಆಹಾರ, ಒತ್ತಡ, ದೈಹಿಕ ನಿಷ್ಕ್ರಿಯತೆ ಮತ್ತು ಇತರ ಸಹ ರೋಗಗಳಂತಹ ಅಪಾಯಕಾರಿ ಅಂಶಗಳನ್ನು ನಿಯಂತ್ರಿಸುವ ಮೂಲಕ ಹೃದಯ ರೋಗ ಮತ್ತು ಪಾರ್ಶ್ವವಾಯುವಿನಿಂದ ಕನಿಷ್ಠ ಶೇ. 80 ಅಕಾಲಿಕ ಮರಣವನ್ನು ತಪ್ಪಿಸಬಹುದು ಎಂದು ಜನರಿಗೆ ಶಿಕ್ಷಣ ನೀಡುವುದು ಈ ಆಚರಣೆಯ ಗುರಿಯಾಗಿದೆ.

ವಿಶ್ವ ಹೃದಯ ದಿನವು ಜಾಗತಿಕ ಅಭಿಯಾನ ವಾಗಿದ್ದು, ಈ ಸಮಯದಲ್ಲಿ ವ್ಯಕ್ತಿಗಳು, ಕುಟುಂಬಗಳು, ಸಮುದಾಯಗಳು ಮತ್ತು ಪ್ರಪಂಚದಾದ್ಯಂತದ ಸರಕಾರಗಳು ತಮ್ಮ ಹೃದಯದ ಆರೋಗ್ಯ ಮತ್ತು ಇತರರ ಆರೋಗ್ಯದ ಮೇಲೆ ಗಮನ ಇರಿಸುವ ಚಟುವಟಿಕೆಗಳಲ್ಲಿ ಭಾಗವಹಿಸುತ್ತವೆ. ವಿಶ್ವ ಹೃದಯ ಒಕ್ಕೂಟವು ಈ ಅಭಿಯಾನದ ಮೂಲಕ ಹೃದಯ ರಕ್ತನಾಳದ ಕಾಯಿಲೆಗಳ ಹೊರೆಯ ವಿರುದ್ಧದ ಹೋರಾಟದಲ್ಲಿ ಎಲ್ಲ ದೇಶಗಳು ಮತ್ತು ಎಲ್ಲ ಹಿನ್ನೆಲೆಗಳ ಜನರನ್ನು ಒಗ್ಗೂಡಿಸುತ್ತದೆ. ಜತೆಗೆ ವಿಶ್ವದಾದ್ಯಂತ ಆರೋಗ್ಯಕರ-ಹೃದಯ ಜೀವನವನ್ನು ಪ್ರೋತ್ಸಾಹಿಸಲು ಅಂತಾರಾಷ್ಟ್ರೀಯ ಕ್ರಮಗಳನ್ನು ಪ್ರೇರೇಪಿಸುತ್ತದೆ ಮತ್ತು ಚಾಲನೆ ನೀಡುತ್ತದೆ.

ಹೃದಯ ರಕ್ತನಾಳದ ಕಾಯಿಲೆ
ಹೃದಯ ರಕ್ತನಾಳದ ಕಾಯಿಲೆಗಳು ವಿಶ್ವಾದ್ಯಂತ ರೋಗಗಳ ಪ್ರಮುಖ ಹೊರೆಗಳಲ್ಲಿ ಒಂದಾಗಿವೆ. ಕಡಿಮೆ ಮತ್ತು ಮಧ್ಯಮ ಆದಾಯದ ದೇಶಗಳಲ್ಲಿ ಇನ್ನೂ ಹೆಚ್ಚಿನ ಹೊರೆಯಾಗಿ ಇವು ಕಂಡುಬರುತ್ತವೆ. ಹೀಗಾಗಿ ಹೃದಯ ರಕ್ತನಾಳದ ಕಾಯಿಲೆಯೊಂದಿಗೆ ಅನೇಕ ಜನರು ದೀರ್ಘ‌ಕಾಲದವರೆಗೆ ವಾಸಿಸುತ್ತಿದ್ದಾರೆ. ಮಾತ್ರವಲ್ಲದೆ ಅವರಲ್ಲಿ ಇದು ಅನಾರೋಗ್ಯ ಮತ್ತು ಮರಣದ ಅಪಾಯವನ್ನು ಹೆಚ್ಚಿಸುತ್ತದೆ. ಅದೇ ರೀತಿ ಸಮಾಜ ಮತ್ತು ಆರೋಗ್ಯ ವ್ಯವಸ್ಥೆಗಳಿಗೂ ಕೂಡ ದುಬಾರಿಯಾಗಿದೆ. ಭಾರತದಲ್ಲಿ ಉದಾಹರಣೆಗೆ, ಹೃದಯ ರಕ್ತನಾಳದ ಕಾಯಿಲೆಗಳ ಹರಡುವಿಕೆಯು 5.45 ದಶಲಕ್ಷ ಎಂದು ಅಂದಾಜಿಸಲಾಗಿದೆ. ಆದ್ದರಿಂದ ಈ ಸಂಗತಿಯನ್ನು ಗಮನಿಸಿ ಹೃದಯ ರಕ್ತನಾಳದ ಕಾಯಿಲೆಗಳನ್ನು ತಡೆಗಟ್ಟಲು ಮತ್ತು ನಿಯಂತ್ರಿಸಲು ಕೆಳಗಿನ ಸೂಕ್ತ ಕ್ರಮಗಳನ್ನು ಅನುಸರಿಸಿ.

ಇದನ್ನೂ ಓದಿ:ಬಿಜೆಪಿ ಸೇರಲು ಕಾಂಗ್ರೆಸ್ಸಿಗರು ತುದಿಗಾಲಿನಲ್ಲಿ ನಿಂತಿದ್ದಾರೆ : ಶಾಸಕ ರೇಣುಕಾಚಾರ್ಯ

ಆಹಾರದ ಸಾಮಾನ್ಯ
ಮಾರ್ಗಸೂಚಿಗಳು
ನಮ್ಮೆಲ್ಲರ ಜೀವನದಲ್ಲಿ ಆಹಾರವು ಬಹಳ ಮುಖ್ಯ ಪಾತ್ರವನ್ನು ವಹಿಸುತ್ತದೆ ಎಂದು ನಮಗೆಲ್ಲರಿಗೂ ತಿಳಿದಿದೆ. ಅದೇ ರೀತಿ, ವಿವಿಧ ರೀತಿಯ ಕಾಯಿಲೆಗಳ ತಡೆಗಟ್ಟುವಿಕೆ ಮತ್ತು ಕಾರಣಗಳಲ್ಲಿಯೂ ನಮ್ಮ ಆಹಾರವು ಪ್ರಮುಖ ಪಾತ್ರ ವಹಿಸುತ್ತದೆ. ಆಹಾರ ಸೇವನೆಯು ತೂಕ ಮತ್ತು ಆಕಾರವನ್ನು ಪ್ರಭಾವಿಸುತ್ತದೆ. ಆರೋಗ್ಯಕರ ತೂಕ ಮತ್ತು ಆಕಾರದ ನಿರ್ವಹಣೆಯು ಹೃದ್ರೋಗದ ಅಪಾಯವನ್ನು ಕಡಿಮೆ ಮಾಡುತ್ತದೆ. ಆದ್ದರಿಂದ ಇದರ ಮೇಲ್ವಿಚಾರಣೆಯನ್ನು ನಾವು ಮಾಡಬೇಕು.

ಆಹಾರದ ಸೂಚನೆಗಳು
– ಕಾಲೋಚಿತ ಹಣ್ಣುಗಳನ್ನು ಕೇಂದ್ರೀಕರಿಸಿ ದಿನಕ್ಕೆ 150-200 ಗ್ರಾಂ ಹಣ್ಣುಗಳನ್ನು ತೆಗೆದುಕೊಳ್ಳಿ.
– ದಿನಕ್ಕೆ 450 ಗ್ರಾಂ ತರಕಾರಿಗಳನ್ನು ಸೇವಿಸಿ, ಅದರಲ್ಲಿ ಕನಿಷ್ಠ 150 ಗ್ರಾಂ ಹಸುರು ಎಲೆ ತರಕಾರಿಗಳಾಗಿರಬೇಕು.
– 2-3 ಭಾಗಗಳಷ್ಟು (300 ಮಿಲಿ) ಕಡಿಮೆ ಕೊಬ್ಬಿನ ಹಾಲಿನ ಉತ್ಪನ್ನಗಳು, ಮೇಲಾಗಿ ಹುದುಗು ಬರಿಸಿದ ಉತ್ಪನ್ನಗಳಾದ ಮಜ್ಜಿಗೆ, ಲಸ್ಸಿ ನಿಮ್ಮ ಆಹಾರದ ಒಂದು ಭಾಗವಾಗಿರಬೇಕು.
-ದಿನಕ್ಕೆ 20-30 ಗ್ರಾಂ ಅಥವಾ ವಾರಕ್ಕೆ 150 ಗ್ರಾಂ ಒಮೆಗಾ 3 ಕೊಬ್ಬುಗಳು ಸಮೃದ್ಧವಾಗಿರುವ ಬೀಜಗಳು ನಿಮ್ಮ ಆಹಾರದ ಅವಿಭಾಜ್ಯ ಅಂಗವಾಗಬೇಕು.
– ಸಾಕಷ್ಟು ನೀರು ಕುಡಿಯಿರಿ (ದಿನಕ್ಕೆ ಕನಿಷ್ಠ 6-8 ಲೋಟ).
– ಉಪ್ಪಿನ ಸೇವನೆಯನ್ನು ದಿನಕ್ಕೆ ಒಟ್ಟು 1 ಟೀ ಚಮಚಕ್ಕೆ ಅಥವಾ ವೈದ್ಯರು/ಪೌಷ್ಟಿಕ ತಜ್ಞರು ಶಿಫಾರಸು ಮಾಡಿದಂತೆ ಸೀಮಿತಗೊಳಿಸಿ.
– ಅಡುಗೆಗೆ ಎಣ್ಣೆ ದಿನಕ್ಕೆ – 15 ಮಿಲಿ ಅಥವಾ 3 ಟೀ ಚಮಚ.
– ವಾರಕ್ಕೆ 5 ಮೊಟ್ಟೆಗಳನ್ನು ಆಹಾರದಲ್ಲಿ ಸೇರಿಸಿಕೊಳ್ಳಬಹುದು. ನೀವು ದಿನದಲ್ಲಿ ಒಂದಕ್ಕಿಂತ ಹೆಚ್ಚು ಮೊಟ್ಟೆಗಳನ್ನು ತಿನ್ನುತ್ತಿದ್ದರೆ ಮೊಟ್ಟೆಯ ಹಳದಿ ಭಾಗವನ್ನು/ಲೋಳೆಯನ್ನು ತಪ್ಪಿಸಿ.
– ಮೊಟ್ಟೆ / ಮೀನು / ಮಾಂಸದ ಬದಲಿಗೆ ದ್ವಿದಳ ಧಾನ್ಯಗಳನ್ನು ತಿನ್ನಬಹುದು.
– ಆಲೂಗಡ್ಡೆ ಹೊರತುಪಡಿಸಿ ಇತರ ತರಕಾರಿಗಳನ್ನು ಬೇಯಿಸಿದ / ಸಲಾಡ್‌ ರೂಪದಲ್ಲಿ ಸೇವಿಸಬಹುದು.

ಆರೋಗ್ಯಕರ ಹೃದಯಕ್ಕಾಗಿ ಆಹಾರ ಸಲಹೆಗಳು
-ಸಾಕಷ್ಟು ಹಣ್ಣುಗಳು, ತರಕಾರಿಗಳು, ಧಾನ್ಯಗಳನ್ನು ಸೇರಿಸಿ.
– ಸಂಸ್ಕರಿಸಿದ ಆಹಾರಗಳ (ಹೆಚ್ಚಿನ ಪ್ರಮಾಣದಲ್ಲಿ ಉಪ್ಪು ಅಥವಾ ಸೋಡಿಯಂ) ಬಳಕೆಯನ್ನು ಕಡಿಮೆ ಮಾಡಿ.
– ಆಳವಾಗಿ ಹುರಿಯುವ ಬದಲು ಬೇಯಿಸಿದ (ಬೆಣ್ಣೆ / ಎಣ್ಣೆಯನ್ನು ಲೇಪಿಸದೆ), ಆವಿಯಿಂದ ಬೇಯಿಸಿದ ಅಥವಾ ಒಲೆಯಲ್ಲಿ ಬೇಯಿಸಿದ ವಸ್ತುಗಳಿಗೆ ಆದ್ಯತೆ ನೀಡಿ.
-ಪೊಟ್ಯಾಸಿಯಂ ಭರಿತ ಆಹಾರಗಳಾದ ಉದ್ದಿನ ಬೇಳೆ, ಹುರುಳಿ, ತೊಗರಿ ಬೇಳೆ, ಬಸಳೆ, ಬೂದಿ ಕುಂಬಳಕಾಯಿ, ನುಗ್ಗೆ ಕೋಡು ಇತ್ಯಾದಿಗಳನ್ನು ಸೇವಿಸಿ.
– ಕಡಿಮೆ ಸೋಡಿಯಂ ಇರುವ ಉಪ್ಪನ್ನು ಬಳಸಿ.
– ವಿವಿಧ ಬಗೆಯ ಅಡುಗೆ ಎಣ್ಣೆಗಳನ್ನು (ಸಸ್ಯಜನ್ಯ ಎಣ್ಣೆಗಳಾದ ಸೂರ್ಯಕಾಂತಿ, ಜೋಳ, ನೆಲಗಡಲೆ, ಕೊಬ್ಬರಿ ಎಣ್ಣೆ,ಸನ್‌ಫ್ಲವರ್‌, ಅಕ್ಕಿ ಹೊಟ್ಟು, ಎಳ್ಳೆಣ್ಣೆ, ಸೋಯಾಬೀನ್‌, ಸಾಸಿವೆ ಎಣ್ಣೆ) ಬಳಸಿ.
-ಪ್ರತೀ 3-4 ಗಂಟೆಗಳಿಗೊಮ್ಮೆ ಊಟ / ಆರೋಗ್ಯಕರ ಲಘು ತಿಂಡಿಗಳನ್ನು ಸೇವಿಸಿ ಮತ್ತು ಊಟವನ್ನು ಬಿಡಬೇಡಿ.
– ಕೆಂಪು ಮಾಂಸ, ಇಡಿ ಮೊಟ್ಟೆ ಮತ್ತು ಕೋಳಿ ಮಾಂಸಗಿಂತ ಮೀನಿಗೆ (ಹುರಿಯದ) ಆದ್ಯತೆ ನೀಡಿ.
– ಹಣ್ಣಿನ ರಸವನ್ನು ಸೇವಿಸುವ ಬದಲು ಇಡೀ ಹಣ್ಣನ್ನು ಸೇವಿಸಿ, ಇದರಲ್ಲಿ ಹೆಚ್ಚಿನ ನಾರಿನಂಶ ಇದ್ದು ಕೊಲೆಸ್ಟ್ರಾಲ್‌ ಮತ್ತು ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ.
– ಪ್ಯಾಕ್‌ ಮಾಡಿದ ಆಹಾರದ ಬದಲು ತಾಜಾ ಆಹಾರ ಮತ್ತು ಹಣ್ಣುಗಳನ್ನು ಸೇವಿಸಿ.
-ಆಹಾರ ವಸ್ತುಗಳ ಹೆಸರಿನ ಚೀಟಿಯನ್ನು ಟ್ರಾನ್ಸ್‌ ಕೊಬ್ಬಿನ ಉಪಸ್ಥಿತಿಗಾಗಿ ಪರಿಶೀಲಿಸಬೇಕು ಮತ್ತು ಅದನ್ನು ತಪ್ಪಿಸಬೇಕು (ಉದಾ.: ಬಿಸ್ಕತ್ತುಗಳು, ರೋಲ್‌ಗ‌ಳು).
– ಸಮತೋಲಿತ ಆಹಾರವನ್ನು ಖಚಿತಪಡಿಸಿಕೊಳ್ಳಲು ಧಾನ್ಯಗಳು, ದ್ವಿದಳ ಧಾನ್ಯಗಳು, ಕಡಿಮೆ ಕೊಬ್ಬಿನ ಹಾಲಿನ ಉತ್ಪನ್ನಗಳು, ಕಡಿಮೆ ಕೊಬ್ಬಿನ ಮಾಂಸ, ಮೀನು, ಮೊಟ್ಟೆ, ಬೀಜಗಳು, ಎಣ್ಣೆ, ಹಣ್ಣುಗಳು ಮತ್ತು ತರಕಾರಿಗಳನ್ನು ನಿಮ್ಮ ಆಹಾರದಲ್ಲಿ ಸೇರಿಸುವ ಮೂಲಕ ವೈವಿಧ್ಯ ಇರಲಿ.
-ತಿಂಡಿ ಸಮಯದಲ್ಲಿ ಎಣ್ಣೆಯುಕ್ತ ತಿಂಡಿಗಳನ್ನು ಬದಲಿಸಲು ಒಣ ಹಣ್ಣುಗಳು ಮತ್ತು ಬೀಜಗಳನ್ನು ಸೇವಿಸಿ.
-ಎಲ್ಲ ಕಚ್ಚಾ ತರಕಾರಿಗಳು ಮತ್ತು ಹಣ್ಣುಗಳನ್ನು ಕತ್ತರಿಸುವ ಅಥವಾ ಸಿಪ್ಪೆ ಸುಲಿಯುವ ಮೊದಲು ಅವುಗಳನ್ನು ಚೆನ್ನಾಗಿ ತೊಳೆಯಬೇಕು.
– ಅಧಿಕ ತೂಕ ಮತ್ತು ಬೊಜ್ಜು ತಡೆಯಲು ಅತಿಯಾಗಿ ತಿನ್ನುವುದನ್ನು ತಪ್ಪಿಸಿ.
-ಮನೆಯಲ್ಲಿ ತಯಾರಿಸಿದ ಸಾಂಪ್ರದಾಯಿಕ ಆಹಾರಗಳಿಗೆ ಆದ್ಯತೆ ನೀಡಿ.

ದೈಹಿಕ ಚಟುವಟಿಕೆ ಮತ್ತು ವ್ಯಾಯಾಮದ ಆರೋಗ್ಯ ಪ್ರಯೋಜನಗಳು
ವ್ಯಾಯಾಮ ಮತ್ತು ದೈಹಿಕ ಚಟುವಟಿಕೆ
-ನಿಯಮಿತವಾಗಿ ವ್ಯಾಯಾಮ ಮಾಡಿ ಮತ್ತು ಪ್ರತಿದಿನ ದೈಹಿಕವಾಗಿ ಸಕ್ರಿಯರಾಗಿರಿ. ಹೃದಯರಕ್ತನಾಳದ ಕಾಯಿಲೆಗಳ ತಡೆಗಟ್ಟುವಿಕೆ ಮತ್ತು ನಿರ್ವಹಣೆಯಲ್ಲಿ ಆಹಾರದಷ್ಟೇ ಇದು ಮುಖ್ಯವಾಗಿದೆ.
ಯಾವುದೇ ರೀತಿಯ ವ್ಯಾಯಾಮ ಅಥವಾ ದೈಹಿಕ ಚಟುವಟಿಕೆಯಲ್ಲಿ ಭಾಗವಹಿಸುವುದು ಹೃದಯ ರಕ್ತನಾಳದ ಕಾಯಿಲೆಯ ವಿವಿಧ ಹಂತಗಳ ತಡೆಗಟ್ಟುವಿಕೆಯಲ್ಲಿ ಪ್ರಯೋಜನಕಾರಿಯಾಗಿದೆ. ವ್ಯಾಯಾಮ ಮಾಡಲು ಯಾವುದೇ ವೆಚ್ಚವಾಗುವುದಿಲ್ಲ ಮತ್ತು ಎಲ್ಲಿಯಾದರೂ ಕೂಡ ಇದನ್ನು ಮಾಡಬಹುದು. ಇದನ್ನು ಮನೆಯಲ್ಲಿಯೇ, ನಿಮ್ಮ ಮನೆಯ ಹೊರಗೆ ಮತ್ತು ನಿಮ್ಮ ಮನೆಯ ಕೋಣೆಯೊಳಗೆಯೂ ಮಾಡಬಹುದು.
ಪುರಾವೆಗಳ ಪ್ರಕಾರ ದೈಹಿಕ ಚಟುವಟಿಕೆಯು:
-ಎಲ್‌ಡಿಎಲ್‌ (ಕೆಟ್ಟ) ಕೊಲೆಸ್ಟ್ರಾಲ್‌ ಮಟ್ಟವನ್ನು ಕಡಿಮೆ ಮಾಡಿ ಮತ್ತು ಎಚ್‌ಡಿಎಲ್‌ (ಉತ್ತಮ) ಕೊಲೆಸ್ಟ್ರಾಲ್‌ ಮಟ್ಟವನ್ನು ಹೆಚ್ಚಿಸಿ ಮತ್ತಷ್ಟು ಹೃದಯದ ತೊಂದರೆಗಳ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ.
-ಫಿಟ್‌ನೆಸ್‌, ಉಸಿರಾಟದ ಸಾಮರ್ಥ್ಯ, ಸ್ನಾಯುವಿನ ಶಕ್ತಿ, ಮೂಳೆಯ ಆರೋಗ್ಯ, ನೆನಪಿನ ಶಕ್ತಿ, ಗಮನ, ಏಕಾಗ್ರತೆಯನ್ನು ಸುಧಾರಿಸುತ್ತದೆ ಮತ್ತು ದೈಹಿಕ ಆರೋಗ್ಯವನ್ನು ವೃದ್ಧಿಸುತ್ತದೆ.
-ಅರಿವಿನ ಅವನತಿಯನ್ನು ತಡೆಯುತ್ತದೆ.
-ಒತ್ತಡದ ಮಟ್ಟವನ್ನು ಕಡಿಮೆ ಮಾಡುತ್ತದೆ.
-ಉತ್ತಮ ನಿದ್ದೆ ಮಾಡಲು ಸಹಾಯ ಮಾಡುತ್ತದೆ.
-ನೀವು ಉತ್ಪತ್ತಿ ಮಾಡುವ ಇನ್ಸುಲಿನ್‌ಗೆ ನಿಮ್ಮ ದೇಹ ಹೆಚ್ಚು ಸೂಕ್ಷ್ಮವಾಗಿಸುವ ಮೂಲಕ ಮತ್ತು ಗ್ಲೂಕೋಸ್‌ (ಕ್ಯಾಲೊರಿಗಳನ್ನು) ಉಪಯೋಗಿಸುವ ಮೂಲಕ ರಕ್ತದಲ್ಲಿನ ಗ್ಲೂಕೋಸ್‌ ಮಟ್ಟವನ್ನು ಕಡಿಮೆ ಮಾಡುತ್ತದೆ.
-ದೇಹದ ಕೊಬ್ಬನ್ನು ಕಡಿಮೆ ಮಾಡುತ್ತದೆ ಮತ್ತು ಇನ್ಸುಲಿನ್‌ ಸಂವೇದನೆಯನ್ನು ಸುಧಾರಿಸುತ್ತದೆ.
-ದೇಹದ ತೂಕವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.
-ಜೀವನದ ಗುಣಮಟ್ಟವನ್ನು ಸುಧಾರಿಸುತ್ತದೆ.
-ವಿವಿಧ ದೀರ್ಘ‌ಕಾಲದ ಕಾಯಿಲೆಗಳನ್ನು ತಡೆಯುತ್ತದೆ.
-ಮಾನಸಿಕ ಯೋಗಕ್ಷೇಮವನ್ನು ಸುಧಾರಿಸುತ್ತದೆ.
-ಸಾಮಾನ್ಯ ಶಕ್ತಿಯ ಮಟ್ಟವನ್ನು ಹೆಚ್ಚಿಸುತ್ತದೆ.
-ಮನಃಸ್ಥಿತಿ, ಲೈಂಗಿಕ ಜೀವನ ಮತ್ತು ಜೀವನವನ್ನು ಆನಂದಿಸುತ್ತದೆ.ಈ ಎಲ್ಲ ಪ್ರಯೋಜನಗಳಿಗೆ ಯಾವುದೇ ಬೆಲೆ ತೆರಬೇಕಾಗಿಲ್ಲ!

ಯಾವ ರೀತಿಯ ದೈಹಿಕ ಚಟುವಟಿಕೆ ಮತ್ತು ವ್ಯಾಯಾಮ?
-ಏನೂ ಮಾಡದಿರುವುದಕ್ಕಿಂತ ಯಾವುದೇ ವ್ಯಾಯಾಮ ಮಾಡುವುದು ಉತ್ತಮವಾಗಿದೆ!
– ಏರೋಬಿಕ್‌ ವ್ಯಾಯಾಮಗಳಾದ ಚುರುಕಾದ ವಾಕಿಂಗ್‌, ಜಾಗಿಂಗ್‌, ಓಟ, ಈಜು, ಬೈಸಿಕಲ್‌, ನೃತ್ಯವನ್ನು ಹೆಚ್ಚು ಮಾಡಲು ಸೂಚಿಸಲಾಗಿದೆ.
-ಯೋಗಾಸನಗಳು ಮತ್ತು ಪ್ರಾಣಾಯಾಮಗಳು ಸಹ ಪ್ರಯೋಜನಗಳನ್ನು ಹೊಂದಿವೆ ಎಂದು ಸಾಬೀತಾಗಿದೆ.
-ನಿಮ್ಮ ಕಾಲು ಅಥವಾ ಕಾಲುಗಳ ನರಗಳಲ್ಲಿ ಸಮಸ್ಯೆ ಇದ್ದರೆ ಈಜು, ಬೈಕಿಂಗ್‌ ಇತ್ಯಾದಿಗಳ ಮೂಲಕ ನಿಮ್ಮ ಕಾಲುಗಳಿಗೆ ನೀವು ಕಡಿಮೆ ಒತ್ತಡವನ್ನು ಬೀರಬೇಕಾಗಬಹುದು.
-ವಾಕಿಂಗ್‌, ಮನೆ ಕೆಲಸ, ತೋಟಗಾರಿಕೆ / ಅಂಗಳದ ಕೆಲಸ, ಮಕ್ಕಳೊಂದಿಗೆ ಆಟವಾಡುವುದು, ಅಂಗಡಿಗೆ ಹೋಗಬೇಕಾದಲ್ಲಿ ಸ್ವಲ್ಪ ದೂರ ನಡೆದು ಹೋಗುವುದು, ವಾಹನವನ್ನು ಬಳಸುವ ಬದಲು ನಡೆದುಕೊಂಡು ಹಾಲು ಮತ್ತು ತರಕಾರಿಗಳನ್ನು ತರುವುದು, ಉದ್ದೇಶಪೂರ್ವಕವಾಗಿ ಲಿಫ್ಟ್ ಬಳಸದೆ ಮೆಟ್ಟಿಲುಗಳನ್ನು ಹತ್ತುವುದು ಇಂತಹ ದಿನನಿತ್ಯದ ಚಟುವಟಿಕೆಗಳನ್ನು ಮಾಡಿ. ವಾಹನವನ್ನು ಶಾಪಿಂಗ್‌ ಕೇಂದ್ರದ ಬಾಗಿಲಿನಿಂದ ದೂರದಲ್ಲಿ ನಿಲ್ಲಿಸಿ.
-ವಾರದ ಹೆಚ್ಚಿನ ದಿನಗಳಲ್ಲಿ ಕನಿಷ್ಠ 30 ನಿಮಿಷಗಳ ಕಾಲ ಮಧ್ಯಮ ತೀವ್ರತೆಯ ದೈಹಿಕ ಚಟುವಟಿಕೆ ಅಥವಾ ವ್ಯಾಯಾಮದಲ್ಲಿ ಭಾಗವಹಿಸಿ (ವಾರದಲ್ಲಿ 3-5 ದಿನಗಳು ಅಥವಾ ವಾರಕ್ಕೆ 1000 ಕ್ಯಾಲೊರಿಗಳನ್ನು ಸುಡುವುದು ಪ್ರಯೋಜನಕಾರಿ).
-ದೈಹಿಕ ಚಟುವಟಿಕೆ ಅಥವಾ ವ್ಯಾಯಾಮವನ್ನು ಒಂದೇ ಬಾರಿಗೆ ಅಥವಾ ಹಗಲಿನಲ್ಲಿ ಎರಡು ಅಥವಾ ಮೂರು ಭಾಗಗಳಾಗಿ ವಿಂಗಡಿಸುವ ಮೂಲಕ ಮಾಡಬಹುದು.
-ಒಮ್ಮೆಗೆ ಒಂದೇ ಸ್ಥಳದಲ್ಲಿ 60 ನಿಮಿಷಗಳಿಗಿಂತ ಹೆಚ್ಚು ಮತ್ತು ದಿನಕ್ಕೆ ಒಟ್ಟಿಗೆ 8 ಗಂಟೆಗಳಿಗಿಂತ ಹೆಚ್ಚು ಕಾಲ ಕುಳಿತುಕೊಳ್ಳುವುದನ್ನು ತಪ್ಪಿಸಿ.
-ನಡೆಯುವಾಗ ಮತ್ತು ಯಾವುದೇ ದೈಹಿಕ ಚಟುವಟಿಕೆಯ ಸಮಯದಲ್ಲಿ ಸಡಿಲವಾದ, ಹತ್ತಿ ಬಟ್ಟೆ ಮತ್ತು ಆರಾಮದಾಯಕ ಪಾದರಕ್ಷೆಗಳನ್ನು ಧರಿಸಿ.
-ವ್ಯಾಯಾಮದ ಮೊದಲು ಮತ್ತು ಅನಂತರ, “ವಾರ್ಮ್ ಅಪ್‌’ ಮತ್ತು “ಕೂಲ್‌-ಡೌನ್‌’ ಅವಧಿಗಳನ್ನು ಸೇರಿಸಿ.
-ವ್ಯಾಯಾಮ ಮಾಡುವಾಗ ನೀವು ಯಾವುದೇ ಅಸ್ವಸ್ಥತೆಯನ್ನು ಬೆಳೆಸಿಕೊಂಡರೆ (ಉದಾ.: ಎದೆ ನೋವು, ತಲೆತಿರುಗುವಿಕೆ, ಉಸಿರಾಟದ ತೊಂದರೆ, ಹೆಚ್ಚು ಬೆವರುವುದು, ಲಘು ತಲೆನೋವು, ಜಾಸ್ತಿಯಾದ ಎದೆಬಡಿತ, ಹಠಾತ್‌ ಕೆಮ್ಮು) ತತ್‌ಕ್ಷಣ ವ್ಯಾಯಾಮ ಮಾಡುವುದನ್ನು ನಿಲ್ಲಿಸಿ, ಸ್ವಲ್ಪ ಸಮಯ ವಿಶ್ರಾಂತಿ ಪಡೆಯಿರಿ ಮತ್ತು ಅದರ ಬಗ್ಗೆ ನಿಮ್ಮ ವೈದ್ಯರಿಗೆ ತಿಳಿಸಿ.

ಬೊಜ್ಜು ನಿರ್ಧರಿಸಲು ಬಿಎಂಐ ಲೆಕ್ಕಾಚಾರ:
-ಬಿಎಂಐ = (ಕೆ.ಜಿ.ಯಲ್ಲಿ ತೂಕ)ಭಾಗಿಸು (ಮೀಟರ್‌ಗಳಲ್ಲಿ ಎತ್ತರ)2
-ಸೊಂಟದ ಸುತ್ತಳತೆಯನ್ನು ಅಳೆಯಲು, ಅಳತೆ ಪಟ್ಟಿ ಯನ್ನು ಸೊಂಟದ ಸುತ್ತಲೂ ಇರಿಸಿ ಮತ್ತು ಅದನ್ನು ಮೃದುವಾಗಿ ಎಳೆದು ಸುತ್ತಳತೆಯನ್ನು ಅಳೆಯಿರಿ.
-ಮಹಿಳೆಯರಿಗೆ ಅಪೇಕ್ಷ ಣೀಯ ಸೊಂಟದ ಗಾತ್ರ: 88 ಸೆಂ.ಮೀ.ಗಿಂತ ಕಡಿಮೆ (35 ಇಂಚುಗಳು).
ಏಷ್ಯನ್‌-ಇಂಡಿಯನ್‌ ಬಿಎಂಐ
ಕಡಿಮೆ ತೂಕ
<18.5 kg/m2ಸಾಮಾನ್ಯ
18.5   22.9 kg/m2 ಅಧಿಕ ತೂಕ
23   27.4 kg/m2 ಬೊಜ್ಜು 27.5kg/m2

ಇತರ ಜೀವನಶೈಲಿಯ ಮಾರ್ಪಾಡುಗಳು
ಹೃದಯದ ಅಪಾಯಕಾರಿ ಅಂಶಗಳು, ನಿಮ್ಮ ಹೃದ್ರೋಗ ಉಲ್ಬಣಗೊಳ್ಳುವ ಸಾಧ್ಯತೆಯನ್ನು ಹೆಚ್ಚಿಸುತ್ತವೆ. ನೀವು ಒಂದಕ್ಕಿಂತ ಹೆಚ್ಚು ಅಪಾಯಕಾರಿ ಅಂಶಗಳನ್ನು ಹೊಂದಿರುವಾಗ ನಿಮ್ಮ ಹೃದ್ರೋಗ ಉಲ್ಬಣಗೊಳ್ಳುವ ಸಾಧ್ಯತೆಗಳು ಜಾಸ್ತಿಯಾಗುತ್ತವೆ ಮತ್ತು ನಿಮ್ಮ ಅಪಾಯಕಾರಿ ಅಂಶಗಳು ನಿಯಂತ್ರಣದಲ್ಲಿ ಇಲ್ಲದಿದ್ದರೆ, ನಿಮ್ಮ ಹೃದ್ರೋಗವು ತುಂಬಾ ಉಲ್ಬಣಗೊಳ್ಳುವ ಸಾಧ್ಯತೆಯಿದೆ. ನಿಮ್ಮ ಅಪಾಯಕಾರಿ ಅಂಶಗಳನ್ನು ನಿರ್ವಹಿಸಲು, ಹೃದ್ರೋಗಕ್ಕೆ ಕಾರಣವಾಗುವ ಎಲ್ಲ ಅಪಾಯಗಳ ಬಗ್ಗೆ ನೀವು ಹೆಚ್ಚು ಜಾಗೃತರಾಗಿರಬೇಕು ಮತ್ತು ಅವುಗಳನ್ನು ನಿಯಂತ್ರಣಕ್ಕೆ ತರುವಲ್ಲಿ ನಿಮಗೆ ಸಹಾಯ ಮಾಡಲು ನೀವು ಕೆಲವು ಜೀವನಶೈಲಿಯ ಮಾರ್ಪಾಡುಗಳನ್ನು ಮಾಡಬೇಕಾಗುತ್ತದೆ.

ಒತ್ತಡ, ಆತಂಕ, ಖಿನ್ನತೆ ಮತ್ತು ಕೋಪವನ್ನು ನಿಯಂತ್ರಿಸಿ: ಒತ್ತಡವು ರೋಗ ನಿರೋಧಕ ಶಕ್ತಿಯನ್ನು ಕುಗ್ಗಿಸುತ್ತದೆ ಮತ್ತು ರೋಗವನ್ನು ಉತ್ತೇಜಿಸುತ್ತದೆ. ಯೋಗ, ಧ್ಯಾನ, ಪ್ರಾಣಾಯಾಮ, ಸಂಗೀತ ಕೇಳುವುದು ಅಥವಾ ಒಮ್ಮೊಮ್ಮೆ ರಜೆ ತೆಗೆದುಕೊಳ್ಳುವಂತಹ ವಿಶ್ರಾಂತಿ ತಂತ್ರಗಳನ್ನು ಬಳಸಿಕೊಂಡು ನೀವು ಒತ್ತಡವನ್ನು ನಿಯಂತ್ರಿಸಬಹುದು. ಸರಳ ಉಸಿರಾಟದ ವ್ಯಾಯಾಮವು ಒತ್ತಡದ ಮಟ್ಟವನ್ನು ಕಡಿಮೆ ಮಾಡುವಲ್ಲಿ ಹೆಚ್ಚಿನ ಮೌಲ್ಯವನ್ನು ಹೊಂದಿದೆ. ಆರೋಗ್ಯಕರ ಸಂಬಂಧಗಳನ್ನು ಖಚಿತಪಡಿಸಿಕೊಳ್ಳಿ ಮತ್ತು ಪ್ರೀತಿಪಾತ್ರರ ಬೆಂಬಲವನ್ನು ಪಡೆಯಿರಿ. ಒತ್ತಡ, ಆತಂಕ ಮತ್ತು ಖನ್ನತೆಯು ಹೃದ್ರೋಗದೊಂದಿಗೆ ನಿಕಟ ಸಂಬಂಧ ಹೊಂದಿದೆ. ಕೆಲವೊಮ್ಮೆ ಹೃದ್ರೋಗವು ಒತ್ತಡ ಮತ್ತು ಖಿನ್ನತೆಗೆ ಕಾರಣವಾಗುತ್ತದೆ, ಅಥವಾ ಒತ್ತಡ ಮತ್ತು ಖನ್ನತೆಯು ಹೃದ್ರೋಗಕ್ಕೆ ಕಾರಣವಾಗುತ್ತದೆ.

ಧೂಮಪಾನವನ್ನು ತ್ಯಜಿಸಿ ಮತ್ತು ತಂಬಾಕು ಉತ್ಪನ್ನಗಳನ್ನು (ಪಾನ್‌ ಮಸಾಲ) ಜಗಿಯುವುದನ್ನು ತಪ್ಪಿಸಿ: ಧೂಮಪಾನ ಮತ್ತು ತಂಬಾಕು ಜಗಿಯುವುದು ಇವೆರಡೂ ಹೃದ್ರೋಗ ಉಲ್ಬಣಗೊಳ್ಳುವ ಅಪಾಯವನ್ನು ಹೆಚ್ಚಿಸುತ್ತವೆ. ಸೆಕೆಂಡ್‌ ಹ್ಯಾಂಡ್‌ ಹೊಗೆಗೆ (ಸುಡುವ ಸಿಗರೇಟಿನ ತುದಿಯಿಂದ ಅಥವಾ ಧೂಮಪಾನಿ ಉಸಿರಾಡುವಾಗ ಬರುವ ಹೊಗೆ) ಒಡ್ಡಿಕೊಳ್ಳುವುದನ್ನು ತಪ್ಪಿಸಿ.

ಮದ್ಯಪಾನ ನಿಲ್ಲಿಸಿ: ಆರೋಗ್ಯ ಪ್ರಯೋಜನಕ್ಕಾಗಿ ಮದ್ಯಪಾನ ಪ್ರಾರಂಭಿಸಲು ಯಾವುದೇ ಶಿಫಾರಸು ಇಲ್ಲ. ನಿಯಮಿತವಾಗಿ ನೀವು ಕುಡಿಯುತ್ತಿದ್ದರೆ, ದಿನಕ್ಕೆ ಒಂದು ಪಾನೀಯಕ್ಕೆ ಮಿತಿಗೊಳಿಸಿ.

ರಕ್ತದೊತ್ತಡ, ರಕ್ತದಲ್ಲಿನ ಕೊಲೆಸ್ಟ್ರಾಲ್‌, ಸಕ್ಕರೆಯ ಮಟ್ಟ ಸುಧಾರಿಸಲು, ಮತ್ತು ಇತರ ಕಾಯಿಲೆಗಳನ್ನು ನಿಯಂತ್ರಿಸಲು ಆಹಾರ ಮಾರ್ಗಸೂಚಿಗಳು, ವ್ಯಾಯಾಮ ಕಟ್ಟುಪಾಡು ಮತ್ತು ಇತರ ಜೀವನಶೈಲಿಯ ಮಾರ್ಪಾಡುಗಳನ್ನು ಅನುಸರಿಸಿ.

ಸಾಕಷ್ಟು ನಿದ್ರೆ ಮಾಡಿ: ಕಡಿಮೆ ಕುಳಿತುಕೊಳ್ಳಿ ಮತ್ತು ಹಗಲಿನಲ್ಲಿ ಹೆಚ್ಚು ಚಲಿಸಿ. ಒಂದೇ ಸಮಯದಲ್ಲಿ ಹೆಚ್ಚು ಹೊತ್ತು ಕುಳಿತುಕೊಳ್ಳಬೇಡಿ (ಉದಾ. ಟಿವಿ ನೋಡುವುದು, ದೂರವಾಣಿಯಲ್ಲಿ ಮಾತನಾಡುವುದು, ಕಥೆ ಪುಸ್ತಕಗಳನ್ನು ಓದುವುದು, ಕೆಲಸ ಮಾಡುವುದು). ಬದಲಿಗೆ ಆಗಾಗ್ಗೆ ಎದ್ದು ಅಡ್ಡಾಡಿ.

ಮನೆಯಲ್ಲಿ ರಾಸಾಯನಿಕಗಳ ಬಳಕೆಯನ್ನು ಕಡಿಮೆ ಮಾಡುವುದರ ಮೂಲಕ ಮತ್ತು ನಿಮ್ಮ ಸುತ್ತಮುತ್ತಲಿನಲ್ಲಿ ವಾಯು ಶುದ್ಧೀಕರಣ ಸಸ್ಯಗಳನ್ನು ಬೆಳೆಸುವ ಮೂಲಕ ವಾಯುಮಾಲಿನ್ಯ ಮಟ್ಟವನ್ನು ಕಡಿಮೆ ಮಾಡುವುದು, ಹೃದಯದ ಆರೋಗ್ಯವನ್ನು ಸುಧಾರಿಸಲು ಸಹಕಾರಿಯಾಗಿದೆ.

ಆರೋಗ್ಯಕರ ದೇಹದ ತೂಕ ಮತ್ತು ಆಕಾರವನ್ನು ಕಾಪಾಡಿಕೊಳ್ಳಿ: ತೂಕ ಹೆಚ್ಚಾಗುವುದರಿಂದ ರಕ್ತದೊತ್ತಡ, ಮಧುಮೇಹ ಮತ್ತು ರಕ್ತದಲ್ಲಿನ ಕೊಲೆಸ್ಟ್ರಾಲ್‌ ಹೆಚ್ಚಾಗುವ ಅಪಾಯವನ್ನುಂಟು ಮಾಡುತ್ತದೆ. ದೈಹಿಕ ಚಟುವಟಿಕೆಯು ಹೆಚ್ಚುವರಿ ಕ್ಯಾಲೊರಿಗಳನ್ನು ಸುಡುವ ಮೂಲಕ ಆದರ್ಶ ದೇಹದ ತೂಕವನ್ನು ಕಾಪಾಡಿಕೊಳ್ಳಲು ಅತ್ಯಗತ್ಯ ಮತ್ತು ಸಾಂಕ್ರಾಮಿಕವಲ್ಲದ ಕಾಯಿಲೆಗಳ ತಡೆಗಟ್ಟುವಿಕೆಗೆ, ಅದೇ ರೀತಿ ಆರೋಗ್ಯಕ್ಕೂ ಇದು ಮಹತ್ವದ್ದಾಗಿದೆ.

ಚಿಕಿತ್ಸೆಯ ಅನುಸರಣೆ
– ಔಷಧಗಳು ಮತ್ತು ವೈದ್ಯಕೀಯ ತಪಾಸಣೆ
-ಹೃದ್ರೋಗದ ಔಷಧಗಳು ನಿಮ್ಮ ಆರೋಗ್ಯವನ್ನು ಸುಧಾರಿಸಲು ಮತ್ತು ನಿರ್ವಹಿಸಲು ಸಹಾಯ ಮಾಡುತ್ತವೆ.
-ನಿಮ್ಮ ವೈದ್ಯರು ನಿಮ್ಮ ಸ್ಥಿತಿ ಮತ್ತು ಪರಿಸ್ಥಿತಿಗೆ ಉತ್ತಮವಾದ ಔಷಧಗಳನ್ನು ನಿರ್ಧರಿಸುತ್ತಾರೆ.
-ಔಷಧಗಳು, ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸುವ ಮೂಲಕ, ರಕ್ತದಲ್ಲಿನ ಅಧಿಕ ಕೊಲೆಸ್ಟ್ರಾಲ್‌ ಅನ್ನು ಸುಧಾರಿಸುವ ಮೂಲಕ, ನಿಮ್ಮ ರಕ್ತನಾಳಗಳ ಒಳಪದರವನ್ನು ಸುಧಾರಿಸುವ ಮೂಲಕ, ರಕ್ತ ಹೆಪ್ಪುಗಟ್ಟುವಿಕೆಯನ್ನು ತಡೆಗಟ್ಟುವ ಮೂಲಕ, ನಿಮ್ಮ ಹೃದಯವು ಮಾಡಬೇಕಾದ ಕೆಲಸದ ಪ್ರಮಾಣವನ್ನು ಕಡಿಮೆ ಮಾಡುವ ಮೂಲಕ ಮತ್ತು ನಿಮ್ಮ ಜೀವನದ ಗುಣಮಟ್ಟವನ್ನು ಸುಧಾರಿಸುವ ಮೂಲಕ ರೋಗಲಕ್ಷಣಗಳನ್ನು ನಿರ್ವಹಿಸಲು ಸಹಾಯ ಮಾಡುತ್ತವೆ.
-ನೀವು ತೆಗೆದುಕೊಳ್ಳುತ್ತಿರುವ ಔಷಧಗಳು ಯಾವುವು ಮತ್ತು ಅವು ಯಾಕೆ ನೀಡಲಾಗಿದೆ ಎಂಬುದನ್ನು ಅರ್ಥಮಾಡಿಕೊಳ್ಳಿ.
-ಔಷಧಗಳ ವಿಶಿಷ್ಟ ಅಡ್ಡಪರಿಣಾಮಗಳ ಬಗ್ಗೆ ತಿಳಿಯಿರಿ.
– ಅಡ್ಡಪರಿಣಾಮಗಳು ಅಥವಾ ಸಮಸ್ಯೆಗಳಿದ್ದಲ್ಲಿ ಹೃದ್ರೋಗ ತಜ್ಞರನ್ನು ಸಂಪರ್ಕಿಸಿ.
-ತೊಡಕುಗಳನ್ನು ತಪ್ಪಿಸಲು ಸರಿಯಾದ ಸಮಯದಲ್ಲಿ ಹೃದ್ರೋಗ ತಜ್ಞರು ಸೂಚಿಸಿದಂತೆ ನಿಮ್ಮ ಔಷಧಗಳನ್ನು ನಿಯಮಿತವಾಗಿ ತೆಗೆದುಕೊಳ್ಳಿ.
-ಚಿಕಿತ್ಸೆ ನೀಡುವ ವೈದ್ಯರನ್ನು ಸಂಪರ್ಕಿಸದೆ ನಿಮ್ಮ ಔಷಧಗಳನ್ನು ತೆಗೆದುಕೊಳ್ಳುವುದನ್ನು ನಿಲ್ಲಿಸಬೇಡಿ.
-ನೀವು ಮುಂದಿನ ವೈದ್ಯಕೀಯ ತಪಾಸಣೆಗೆ ಬರುವಾಗ ನಿಮ್ಮ ಹೃದ್ರೋಗ ತಜ್ಞರು ಸೂಚಿಸಿದ ರಕ್ತ ಪರೀಕ್ಷೆಗಳನ್ನು ತಪ್ಪದೆ ಮಾಡಿರಿ.
-ನಿಮ್ಮ ಹೃದಯವನ್ನು ನೀವು ಆರೋಗ್ಯವಾಗಿ ಇರಿಸಿಕೊಳ್ಳುತ್ತೀರೆಂದು ಖಚಿತಪಡಿಸಿಕೊಳ್ಳಲು ನಿಯಮಿತವಾಗಿ ವೈದ್ಯಕೀಯ ತಪಾಸಣೆ ಮಾಡಿ.
-ನಿಮ್ಮ ರೋಗಲಕ್ಷಣಗಳಲ್ಲಿ ನೀವು ಬದಲಾವಣೆಯನ್ನು ಅನುಭವಿಸಿದರೆ, ನೀವು ಹೊಸ ರೋಗಲಕ್ಷಣವನ್ನು ಹೊಂದಿದ್ದರೆ ಮತ್ತು ಕಡಿಮೆ ಮಟ್ಟದ ದೈಹಿಕ ಚಟುವಟಿಕೆಯಲ್ಲಿಯೂ ಆಗಾಗ್ಗೆ ಹೆಚ್ಚು ಎದೆ ನೋವು ಕಂಡುಬಂದರೆ ನಿಮ್ಮ ವೈದ್ಯರನ್ನು ಭೇಟಿ ಮಾಡಿ.
ಆಂಥ್ರೊಪೊಮೆಟ್ರಿ (ದೇಹದ ಅಳತೆ)
-ನಿಮ್ಮ ದೇಹದ ಆಕಾರ, ಗಾತ್ರ, ಬಾಡಿ ಮಾಸ್‌ ಇಂಡೆಕ್ಸ್‌ (ಬಿಎಂಐ) ಮತ್ತು ಸೊಂಟದ ಸುತ್ತಳತೆಯನ್ನು ನಿಯಮಿತವಾಗಿ ಪರಿಶೀಲಿಸಿ.
-ನೇರವಾಗಿ ನಿಲ್ಲುವ ಮೂಲಕ, ಪಾದರಕ್ಷೆಗಳಿಲ್ಲದೆ ನಿಮ್ಮನ್ನು ತೂಗಿಸಿ ಮತ್ತು ಕೆ.ಜಿ.ಯಲ್ಲಿ ತೂಕವನ್ನು ಪಡೆಯಿರಿ.
-ಎತ್ತರವನ್ನು ಸ್ಟೇಡಿಯೊಮೀಟರ್‌(ಎತ್ತರ ಸ್ಕೇಲ್‌) ನೊಂದಿಗೆ ಮೀಟರ್‌ಗಳಲ್ಲಿ ಅಳೆಯಲಾಗುತ್ತದೆ. ಎತ್ತರವನ್ನು ಪಡೆಯಲು ನೀವು ನೇರವಾಗಿ ನಿಂತು, ಪಾದಗಳು ಒಟ್ಟಿಗೆ ಇದ್ದು, ಹಿಮ್ಮಡಿ ಮತ್ತು ತಲೆ, ಗೋಡೆಗೆ ತಾಗಿರಬೇಕು.

ರಕ್ತದೊತ್ತಡ (ಬಿಪಿ)
-ಅಧಿಕ ರಕ್ತದೊತ್ತಡವು ರಕ್ತನಾಳಗಳ ಅಥವಾ ಹೃದಯದ ಗೋಡೆಗಳನ್ನು ಹಾನಿಗೊಳಿಸುತ್ತದೆ ಮತ್ತು ಅಂತಿಮವಾಗಿ
ಹೃದಯಕ್ಕೆ ರಕ್ತದ ಹರಿವನ್ನು ತಡೆಯುತ್ತದೆ.
-ಚಿಕಿತ್ಸೆ ನೀಡದ ಅಧಿಕ ರಕ್ತದೊತ್ತ ಡವು, ಮೂತ್ರಪಿಂಡದ ರೋಗ, ಪಾರ್ಶ್ವವಾಯು ಮತ್ತು ದುರ್ಬಲಗೊಂಡ ಹೃದಯದ ಕಾರ್ಯಚಟು ವಟಿಕೆಗೆ (ಹೃದಯ ವೈಫಲ್ಯ) ಕಾರಣವಾಗಬಹುದು. ಆದ್ದರಿಂದ ಇದನ್ನು ನಿಯಮಿತವಾಗಿ ಮೇಲ್ವಿಚಾರಣೆ ಮಾಡಬೇಕಾಗಿದೆ.
-ಯಾವಾಗಲೂ ನಿಮ್ಮ ಬಿಪಿಯನ್ನು ವಿಶ್ರಾಂತಿ ಸ್ಥಿತಿಯಲ್ಲಿ ಪರೀಕ್ಷಿಸಿ.
-ನೀವು ತಲೆತಿರುಗುವಿಕೆ, ಕುಳಿತುಕೊಂಡಲ್ಲಿಂದ ನಿಲ್ಲುವಾಗ ಅಥವಾ ಮಲಗಿದ್ದಲ್ಲಿಂದ ಎದ್ದು ನಿಲ್ಲುವಾಗ, ಹೀಗೆ ನಿಮ್ಮ ಸ್ಥಾನವನ್ನು ಬದಲಾಯಿಸಿದಾಗ ಸಮತೋಲನ ಕಳೆದುಕೊಳ್ಳು ವಂತಹ ಲಕ್ಷಣಗಳನ್ನು ಅನುಭವಿಸಿದರೆ, ನೀವು ಅದರ ಬಗ್ಗೆ ಜಾಗರೂಕರಾಗಿರಬೇಕು ಮತ್ತು ನಿಮ್ಮ ವೈದ್ಯರಿಗೆ ವರದಿ ಮಾಡಬೇಕು. ಯಾಕೆಂದರೆ, ಬಿಪಿ ಇಳಿಯುವುದರಿಂದ ನೀವು ಈ ರೋಗಲಕ್ಷಣಗಳನ್ನು ಅನುಭವಿಸಬಹುದು.
-ಸಾಮಾನ್ಯ ಬಿಪಿ: 120/80 mm Hg
-ಅಪೇಕ್ಷಣೀಯ ರಕ್ತದೊತ್ತಡದ ಮಟ್ಟ: 140/90 mm Hg ಕ್ಕಿಂತ ಕಡಿಮೆ (ಮಧುಮೇಹ ವಿಲ್ಲದವರಿಗೆ) ಮತ್ತು 130/80 mm Hg ಕ್ಕಿಂತ ಕಡಿಮೆ (ಮಧುಮೇಹ ಇರುವವರಿಗೆ).

ಗ್ಲೈಕೋಸಿಲೇಟೆಡ್‌ ಹಿಮೋಗ್ಲೋಬಿನ್‌ (ಎಚ್‌ಬಿಎ 1 ಸಿ)
-ಇದು ಕಳೆದ 3 ತಿಂಗಳುಗಳಲ್ಲಿ ನಿಮ್ಮ ರಕ್ತದಲ್ಲಿನ ಗ್ಲೂಕೋಸ್‌ನ ಸರಾಸರಿ ಮಟ್ಟವನ್ನು ಸೂಚಿಸುತ್ತದೆ.
-ಅಪೇಕ್ಷಣೀಯ ಮಟ್ಟ: ಮಧುಮೇಹ ಇರುವ ಹೆಚ್ಚಿನ ಜನರಿಗೆ ಶೇ. 7ಕ್ಕಿಂತ ಕಡಿಮೆ.
ರಕ್ತದಲ್ಲಿನ ಗ್ಲೂಕೋಸ್‌ (ಸಕ್ಕರೆ) ಪರೀಕ್ಷೆ
ನಿಮ್ಮ ರಕ್ತದಲ್ಲಿನ ಗ್ಲೂಕೋಸ್‌ ಮಟ್ಟವು ಈ ಕೆಳಗಿನ ಶ್ರೇಣಿಗಳಲ್ಲಿರಬೇಕು.
ಉಪವಾಸದಲ್ಲಿನ ರಕ್ತದ ಗ್ಲೂಕೋಸ್‌ (FBS)
ಸಾಮಾನ್ಯ 100 ಞಜ/ಛl ಕ್ಕಿಂತ ಕಡಿಮೆ
ಪ್ರಿಡಯಾಬಿಟಿಸ್‌ / ಬಾರ್ಡರ್‌ಲೈನ್‌ ಡಯಾಬಿಟಿಸ್‌ 100 – 125 ಞಜ/ಛl ಡಯಾಬಿಟಿಸ್‌ 126 mg/dl ಕ್ಕಿಂತ ಹೆಚ್ಚು

ರಕ್ತದ ಕೊಲೆಸ್ಟ್ರಾಲ್‌ ಪರೀಕ್ಷೆ
ನಿಮ್ಮ ರಕ್ತದ ಕೊಲೆಸ್ಟ್ರಾಲ್‌ ಮಟ್ಟವು ಈ ಕೆಳಗಿನ ಶ್ರೇಣಿಗಳಲ್ಲಿರಬೇಕು.
ಟೋಟಲ್‌ ಕೊಲೆಸ್ಟ್ರಾಲ್‌:140-200 mg/dL
ಟ್ರೆ„ಗ್ಲಿಸರೈಡ್‌ಗಳು: 60-150 mg/dL
ಎಚ್‌ಡಿಎಲ್‌ (ಉತ್ತಮ) ಕೊಲೆಸ್ಟ್ರಾಲ್‌: 40-60 mg/dL
ಎಲ್ಡಿಎಲ್‌ (ಕೆಟ್ಟ) ಕೊಲೆಸ್ಟ್ರಾಲ್‌: 50-130 mg/dL
ಟೋಟಲ್‌ ಕೊಲೆಸ್ಟ್ರಾಲ್‌ / ಎಚ್‌ಡಿಎಲ್‌ ಕೊಲೆಸ್ಟ್ರಾಲ್‌ ಅನುಪಾತ: < 5

ಅಪಾಯಕಾರಿ ಅಂಶಗಳನ್ನು ನಾವು ಎಷ್ಟು ಉತ್ತಮವಾಗಿ ನಿಯಂತ್ರಿಸುತ್ತೇವೆಯೋ, ಅಷ್ಟು ಹೃದ್ರೋಗ ಸಮಸ್ಯೆಗಳು ಮರುಕಳಿಸುವ ಸಾಧ್ಯತೆಗಳು ಕಡಿಮೆ.ಹೃದಯ ರಕ್ತನಾಳದ ಕಾಯಿಲೆಗಳನ್ನು ಹಿಮ್ಮೆಟ್ಟಿಸಲು, ವಿಶೇಷವಾಗಿ ಚಿಕ್ಕ ವಯಸ್ಸಿನಲ್ಲಿ ತಡೆಗಟ್ಟುವ ಕಾರ್ಯತಂತ್ರಗಳ ಮೇಲೆ ಹೆಚ್ಚಿನ ಗಮನ ವಹಿಸುವ ಅಗತ್ಯವಿದೆ. ಹೃದಯ ರಕ್ತನಾಳದ ಕಾಯಿಲೆ ಇರುವವರು ಅಥವಾ ಹೆಚ್ಚಿನ ಅಪಾಯದಲ್ಲಿರುವವರು ಹೃದಯ ರಕ್ತನಾಳದ ಕಾಯಿಲೆ ಗಳ ಮರುಕಳಿಸುವ ಘಟನೆಗಳನ್ನು ತಡೆಗಟ್ಟಲು, ಅನಾರೋಗ್ಯ, ಸಾವು ಮತ್ತು ಜೀವನದ ಗುಣಮಟ್ಟವನ್ನು ಸುಧಾರಿಸಲು ಬಹಳ ಮುಖ್ಯವಾದ ವೈದ್ಯರೊಂದಿಗಿನ ಸಮಾಲೋಚನೆ, ಔಷಧಗಳನ್ನು ಬಳಸಿಕೊಂಡು ಆರಂಭಿಕ ಪತ್ತೆ ಹಚ್ಚುವಿಕೆ ಮತ್ತು ಕಾಯಿಲೆ ನಿರ್ವಹಣೆ ಮಾಡುವ ಅಗತ್ಯವಿದೆ. ನಮ್ಮ ಜೀವನದಲ್ಲಿ ಕೆಲವು ಸಣ್ಣ ಬದಲಾವಣೆಗಳನ್ನು ಮಾಡುವ ಮೂಲಕ, ನಾವು ಹೃದಯ ರಕ್ತನಾಳದ ಕಾಯಿಲೆಗಳನ್ನು ಸೋಲಿ ಸಲು ಮತ್ತು ಕೋವಿಡ್‌ 19 ವಿರುದ್ಧ ಹೋರಾಡಲು ಹೃದಯವನ್ನು ಬಳಸಬಹುದು.

-ಹೆನಿಟಾ ಜೋಸ್ನಾ ಮಿನೇಜಸ್‌
ಪಿಎಚ್‌.ಡಿ ಸಂಶೋಧನ ವಿದ್ಯಾರ್ಥಿನಿ

-ಡಾ| ಸೋನಿಯಾ ಆರ್‌.ಬಿ. ಡಿ’ಸೋಜಾ
ಪ್ರೊಫೆಸರ್‌ಮತ್ತು ಮುಖ್ಯಸ್ಥೆ, ಒಬಿಜಿ ನರ್ಸಿಂಗ್‌ ವಿಭಾಗ, ಮಣಿಪಾಲ ಕಾಲೇಜ್‌ ಆಫ್‌ ನರ್ಸಿಂಗ್‌, ಮಾಹೆ, ಮಣಿಪಾಲ

-ಡಾ| ಅಶ್ವಲ್‌ ಎ.ಜೆ.
ಪ್ರೊಫೆಸರ್‌ ಮತ್ತು ಯುನಿಟ್‌ ಹೆಡ್‌, ಹೃದ್ರೋಗ ವಿಭಾಗ, ಕಸ್ತೂರ್ಬಾ ಆಸ್ಪತ್ರೆ, ಮಣಿಪಾಲ

 

ಟಾಪ್ ನ್ಯೂಸ್

PM ಮೋದಿ ಮನೆ ಮುಂದೆ ಧರಣಿ ನಡೆಸುವಿರಾ? ಎಂ.ಬಿ. ಪಾಟೀಲ್‌

PM ಮೋದಿ ಮನೆ ಮುಂದೆ ಧರಣಿ ನಡೆಸುವಿರಾ? ಎಂ.ಬಿ. ಪಾಟೀಲ್‌

Karnataka: 18 ತಿಂಗಳಲ್ಲಿ 18 ಎಸ್‌ಐಟಿ ರಚಿಸಿದ ಕಾಂಗ್ರೆಸ್‌: ಛಲವಾದಿ

Karnataka: 18 ತಿಂಗಳಲ್ಲಿ 18 ಎಸ್‌ಐಟಿ ರಚಿಸಿದ ಕಾಂಗ್ರೆಸ್‌: ಛಲವಾದಿ

Belagavi: ಮರಕ್ಕೆ ಕ್ರೂಸರ್‌ ಢಿಕ್ಕಿ: ಸ್ಥಳದಲ್ಲೇ ಮೂವರ ಸಾವು

Belagavi: ಮರಕ್ಕೆ ಕ್ರೂಸರ್‌ ಢಿಕ್ಕಿ: ಸ್ಥಳದಲ್ಲೇ ಮೂವರ ಸಾವು

Road Mishap: ಶಾಲಾ ವಾಹನ ಹರಿದು 4 ವರ್ಷದ ಬಾಲಕಿ ಸಾ*ವು

Road Mishap: ಶಾಲಾ ವಾಹನ ಹರಿದು 4 ವರ್ಷದ ಬಾಲಕಿ ಸಾ*ವು

Karnataka: ಅರ್ಹರಿಗಷ್ಟೇ ಬಿಪಿಎಲ್‌ ಕಾರ್ಡ್‌: ಸಿಎಂ ಸಿದ್ದರಾಮಯ್ಯKarnataka: ಅರ್ಹರಿಗಷ್ಟೇ ಬಿಪಿಎಲ್‌ ಕಾರ್ಡ್‌: ಸಿಎಂ ಸಿದ್ದರಾಮಯ್ಯ

Karnataka: ಅರ್ಹರಿಗಷ್ಟೇ ಬಿಪಿಎಲ್‌ ಕಾರ್ಡ್‌: ಸಿಎಂ ಸಿದ್ದರಾಮಯ್ಯ

Karnataka Govt: ವಕ್ಫ್ ವಿರುದ್ಧ ಬೀದಿಗಿಳಿದ ಕಮಲ ಪಡೆ; ಉಡುಪಿ ಸೇರಿ ಹಲವೆಡೆ ಪ್ರತಿಭಟನೆ

Karnataka Govt: ವಕ್ಫ್ ವಿರುದ್ಧ ಬೀದಿಗಿಳಿದ ಕಮಲ ಪಡೆ; ಉಡುಪಿ ಸೇರಿ ಹಲವೆಡೆ ಪ್ರತಿಭಟನೆ

Karnataka: ದೆಹಲಿ ಮಾರುಕಟ್ಟೆಗೆ ಲಗ್ಗೆ ಇಟ್ಟ ಕೆಎಂಎಫ್

Karnataka: ದೆಹಲಿ ಮಾರುಕಟ್ಟೆಗೆ ಲಗ್ಗೆ ಇಟ್ಟ ಕೆಎಂಎಫ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

4(1)

Lupus Nephritis: ಲೂಪಸ್‌ ನೆಫ್ರೈಟಿಸ್‌ ರೋಗಿಗಳಿಗೆ ಒಂದು ಮಾರ್ಗದರ್ಶಿ

3(1)

Naturopathy: ಉತ್ತಮ ಆರೋಗ್ಯಕ್ಕಾಗಿ ಪ್ರಕೃತಿ ಚಿಕಿತ್ಸೆ

2(1)

AI ಆರೋಗ್ಯ ರಕ್ಷಣೆಯ ವ್ಯವಸ್ಥೆಯಲ್ಲಿ ಸ್ವೀಕಾರದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆಯೇ?

1(3)

World Prematurity Day: ಅಂತಾರಾಷ್ಟ್ರೀಯ ಅವಧಿಪೂರ್ವ ಶಿಶು ಜನನ ದಿನ; ನವೆಂಬರ್‌ 17

3-health

Mother: ತಾಯಂದಿರ ಮಾನಸಿಕ ಆರೋಗ್ಯ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

PM ಮೋದಿ ಮನೆ ಮುಂದೆ ಧರಣಿ ನಡೆಸುವಿರಾ? ಎಂ.ಬಿ. ಪಾಟೀಲ್‌

PM ಮೋದಿ ಮನೆ ಮುಂದೆ ಧರಣಿ ನಡೆಸುವಿರಾ? ಎಂ.ಬಿ. ಪಾಟೀಲ್‌

Karnataka: 18 ತಿಂಗಳಲ್ಲಿ 18 ಎಸ್‌ಐಟಿ ರಚಿಸಿದ ಕಾಂಗ್ರೆಸ್‌: ಛಲವಾದಿ

Karnataka: 18 ತಿಂಗಳಲ್ಲಿ 18 ಎಸ್‌ಐಟಿ ರಚಿಸಿದ ಕಾಂಗ್ರೆಸ್‌: ಛಲವಾದಿ

Belagavi: ಮರಕ್ಕೆ ಕ್ರೂಸರ್‌ ಢಿಕ್ಕಿ: ಸ್ಥಳದಲ್ಲೇ ಮೂವರ ಸಾವು

Belagavi: ಮರಕ್ಕೆ ಕ್ರೂಸರ್‌ ಢಿಕ್ಕಿ: ಸ್ಥಳದಲ್ಲೇ ಮೂವರ ಸಾವು

Road Mishap: ಶಾಲಾ ವಾಹನ ಹರಿದು 4 ವರ್ಷದ ಬಾಲಕಿ ಸಾ*ವು

Road Mishap: ಶಾಲಾ ವಾಹನ ಹರಿದು 4 ವರ್ಷದ ಬಾಲಕಿ ಸಾ*ವು

Karnataka: ಅರ್ಹರಿಗಷ್ಟೇ ಬಿಪಿಎಲ್‌ ಕಾರ್ಡ್‌: ಸಿಎಂ ಸಿದ್ದರಾಮಯ್ಯKarnataka: ಅರ್ಹರಿಗಷ್ಟೇ ಬಿಪಿಎಲ್‌ ಕಾರ್ಡ್‌: ಸಿಎಂ ಸಿದ್ದರಾಮಯ್ಯ

Karnataka: ಅರ್ಹರಿಗಷ್ಟೇ ಬಿಪಿಎಲ್‌ ಕಾರ್ಡ್‌: ಸಿಎಂ ಸಿದ್ದರಾಮಯ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.