ಕುಷ್ಠ ರೋಗ ಭಯ ಬೇಡ ;ಜಾಗ್ರತೆ ಇರಲಿ
ಜನವರಿ 30 2022 ವಿಶ್ವ ಕುಷ್ಠರೋಗ ದಿನ ಘನತೆಗಾಗಿ ಒಗ್ಗೂಡುವಿಕೆ
Team Udayavani, Jan 30, 2022, 7:55 AM IST
ವಿಶ್ವ ಕುಷ್ಠರೋಗ ದಿನವನ್ನು ಪ್ರತೀ ವರ್ಷ ಜನವರಿ ಕೊನೆಯ ರವಿವಾರ ಆಚರಿಸಲಾಗುತ್ತದೆ. ಈ ಅಂತಾರಾಷ್ಟ್ರೀಯ ದಿನದ ಆಚರಣೆಯ ಮೂಲಕ ಸಾರ್ವಜನಿಕರಲ್ಲಿ ಕುಷ್ಠ ರೋಗದ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಕುಷ್ಠರೋಗಕ್ಕೆ ಸಂಬಂಧಿಸಿದ ಕಳಂಕ ಮತ್ತು ತಾರತಮ್ಯವನ್ನು ಕೊನೆಗೊಳಿಸಲು ಕರೆ ನೀಡಲು ಒಂದು ಅವಕಾಶವಾಗಿದೆ. ಭಾರತದಲ್ಲಿ ಮಹಾತ್ಮಾ ಗಾಂಧೀಜಿಯವರು ಕುಷ್ಠರೋಗದ ನಿರ್ಮೂಲನೆಗಾಗಿ, ರೋಗಿಗಳ ಪರವಾಗಿ ಹೋರಾಟ ನಡೆಸಿದ ಸಲುವಾಗಿ ಅವರ ಪುಣ್ಯತಿಥಿ ದಿನವಾದ ಜನವರಿ 30ರಂದು ಕುಷ್ಠರೋಗ ದಿನವನ್ನಾಗಿ ಆಚರಿಸಲಾಗುತ್ತದೆ.
ಪ್ರತೀ ವರ್ಷ ವಿಶ್ವ ಕುಷ್ಠರೋಗ ದಿನವನ್ನು ವಿವಿಧ ಧ್ಯೇಯ ವಾಕ್ಯಗಳೊಂದಿಗೆ ಹಮ್ಮಿಕೊಳ್ಳಲಾಗುತ್ತದೆ. ಈ ಬಾರಿ ಕುಷ್ಠರೋಗಕ್ಕೆ ತುತ್ತಾದವರ ಘನತೆ ಅವರ ಜೀವನದ ಅನುಭವಗಳನ್ನು ಗೌರವಿಸುವುದು ಮತ್ತು ಅವರ ಮಾನಸಿಕ ಯೋಗಕ್ಷೇಮ ಮತ್ತು ರೋಗ-ಸಂಬಂಧಿತ ಕಳಂಕದಿಂದ ಮುಕ್ತವಾದ ಘನತೆಯ ಜೀವನದ ಹಕ್ಕನ್ನು ಪ್ರತಿಪಾದಿಸುವ ಸಲುವಾಗಿ “ಘನತೆಗಾಗಿ ಒಗ್ಗೂಡುವಿಕೆ’ ಎಂಬ ಧ್ಯೇಯ ವಾಕ್ಯದೊಂದಿಗೆ ಅಭಿಯಾನ ನಡೆಸಲಾಗುತ್ತದೆ. ಅಂಕಿ ಅಂಶಗಳ ಪ್ರಕಾರ ಭಾರತದಲ್ಲಿ ಮಾರ್ಚ್ 31, 2018ರ ವರೆಗೆ, 29 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಕುಷ್ಠರೋಗ ನಿರ್ಮೂಲನೆಯ ಮಟ್ಟವನ್ನು ಸಾಧಿಸಿವೆ. ಅಂದರೆ, 10,000 ಜನಸಂಖ್ಯೆಗೆ 1ಕ್ಕಿಂತ ಕಡಿಮೆ ಕುಷ್ಠರೋಗದ ಹರಡುವಿಕೆಯ ಪ್ರಮಾಣ ಮತ್ತು ಒಟ್ಟು 705 ಜಿಲ್ಲೆಗಳಲ್ಲಿ 572 ಜಿಲ್ಲೆಗಳು (81.13%) ನಿರ್ಮೂಲನ ಮಟ್ಟವನ್ನು ಸಾಧಿಸಿವೆ.
ಕುಷ್ಠ ರೋಗದ ಲಕ್ಷಣಗಳು
– ಚರ್ಮದ ಮೇಲೆ ಮೂಡುವ ತಿಳಿ ಬಿಳಿ ಅಥವಾ ತಾಮ್ರ ಬಣ್ಣದ ಮಚ್ಚೆಗಳು ಕುಷ್ಠ ರೋಗದ ಪ್ರಾರಂಭಿಕ ಲಕ್ಷಣಗಳಾಗಿವೆ.
– ದೇಹದ ಭಾಗಗಳಾದ ಕಾಲು, ಮುಖ, ಪೃಷ್ಠ, ಬೆನ್ನುಗಳಲ್ಲಿ ಈ ಮಚ್ಚೆಗಳು ಹೆಚ್ಚಾಗಿ ಕಂಡು ಬರುತ್ತವೆ.
– ಮುಖ್ಯವಾಗಿ ಈ ಕಲೆಗಳಲ್ಲಿ ಸ್ಪರ್ಶ ಜ್ಞಾನ ಇಲ್ಲದೇ ಇರುವುದರಿಂದ ಬಿಸಿ, ಸ್ಪರ್ಶ, ನೋವು, ತುರಿಕೆ ಗೊತ್ತಾಗುವುದಿಲ್ಲ.
– ಕುಷ್ಠರೋಗದಲ್ಲಿ ನರಗಳಿಗೂ ತೊಂದರೆ ಉಂಟಾಗುವುದರಿಂದ ವಸ್ತುಗಳನ್ನು ಹಿಡಿಯುವಾಗ ಕೈಯಲ್ಲಿ ದೌರ್ಬಲ್ಯ ಅಥವಾ ಅಸಮರ್ಥತೆ/ಬಲಹೀನತೆ. ಚರ್ಮದ ಮೇಲೆ ಗಂಟುಗಳು, ನಡೆದಾಡುವಾಗ ಕಾಲುಗಳು ಎಳೆಯುವ ಲಕ್ಷಣಗಳು ಕಂಡುಬರುತ್ತವೆ.
– ಕತ್ತಿನ ಪಕ್ಕದಲ್ಲಿ ಮೊಣಕೈ ಹಾಗೂ ಮೊಣಕಾಲಿನ ಹಿಂಭಾಗದಲ್ಲಿ ನರಗಳ ಊತ ಮತ್ತು ನೋವು. ಕಣ್ಣಿನ ಹುಬ್ಬಿನ ಕೂದಲು ಉದುರುವುದು. ಕೈಕಾಲುಗಳಲ್ಲಿ ಸ್ಪರ್ಶಜ್ಞಾನವಿಲ್ಲದಿರುವ ಲಕ್ಷಣ ಕಂಡು ಬರುತ್ತವೆ.
ಇವು ಕುಷ್ಠ ರೋಗದ ಲಕ್ಷಣಗಳಲ್ಲ.
– ಹುಟ್ಟಿನಿಂದಲೇ ದೇಹದಲ್ಲಿ ಇರುವ ಮಚ್ಚೆಗಳು, ತುರಿಕೆ, ಸ್ಪರ್ಶ ಜ್ಞಾನ ಇರುವ ಮಚ್ಚೆಗಳು, ಕಪ್ಪು, ಕೆಂಪು ಬಣ್ಣದ ಮಚ್ಚೆಗಳು
ರೋಗ ಹರಡುವ ವಿಧಾನ
– ಕುಷ್ಠರೋಗವು ಶ್ವಾಸಕೋಶದ ಮೂಲಕ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ.
– ಕುಷ್ಠ ರೋಗವು ಎಲ್ಲ ವಯಸ್ಸಿನವರಿಗೂ ಹರಡಬಹುದು.
– ಕುಷ್ಠ ರೋಗ ಹೊಂದಿರುವ ವ್ಯಕ್ತಿಯೊಂದಿಗೆ ನಿಕಟ ಸಂಪರ್ಕ ಅಥವಾ ಚಿಕಿತ್ಸೆ ಪಡೆಯದೇ ರೋಗಾಣು ಹೊಂದಿರುವ ವ್ಯಕ್ತಿ ಕೆಮ್ಮಿದಾಗ ಆ ರೋಗಾಣುಗಳು ಆರೋಗ್ಯವಂತ ವ್ಯಕ್ತಿಗೆ ಹರಡಬಹುದು.
ಕುಷ್ಠ ರೋಗದ ವರ್ಗೀಕರಣ
– ಕುಷ್ಠ ರೋಗವನ್ನು ಮಚ್ಚೆಗಳ ಸಂಖ್ಯೆಯ ಆಧಾರದ ಮೇಲೆ ಪಾಸಿಬ್ಯಾಸಿಲರಿ ಹಾಗೂ ಮಲ್ಟಿ ಬ್ಯಾಸಿಲರಿ ಎಂದು ವರ್ಗೀಕರಿಸಲಾಗುತ್ತದೆ.
– ದೇಹದಲ್ಲಿ 1-5 ಮಚ್ಚೆಗಳಿದ್ದಲ್ಲಿ ಅದನ್ನು ಪಾಸಿಬ್ಯಾಸಿಲರಿ ಕುಷ್ಠ ರೋಗ ಎಂದು ಕರೆಯಲಾಗುತ್ತದೆ.
– ದೇಹದಲ್ಲಿ 6ಕ್ಕೂ ಹೆಚ್ಚು ಮಚ್ಚೆಗಳಿದ್ದಲ್ಲಿ ಅದನ್ನು ಮಲ್ಟಿಬ್ಯಾಸಿಲರಿ ಕುಷ್ಠ ರೋಗ ಎಂದು ಕರೆಯಲಾಗುತ್ತದೆ.
ಕುಷ್ಠ ರೋಗವನ್ನು ಪತ್ತೆ ಹಚ್ಚುವ ವಿಧಾನ
– ಕುಷ್ಠ ರೋಗವನ್ನು ವೈದ್ಯಕೀಯ ರೋಗ ಲಕ್ಷಣಗಳಿಂದ ಗುರುತಿಸಿ ನಿರ್ಣಯಿಸಲಾಗುತ್ತದೆ.
– ರೋಗಿಯ ಚರ್ಮವನ್ನು ಹಗಲು ಬೆಳಕಿನಲ್ಲಿ ಅಥವಾ ಒಳ್ಳೆಯ ಪ್ರಕಾಶಮಾನ ಬೆಳಕು ಇರುವ ಕೊಠಡಿಯಲ್ಲಿ ಪರೀಕ್ಷಿಸಲಾಗುತ್ತದೆ.
– ಮಚ್ಚೆಗಳಲ್ಲಿನ ಸ್ಪರ್ಶ ಜ್ಞಾನ ಪರೀಕ್ಷಿಸಲಾಗುತ್ತದೆ. ಸ್ಪರ್ಶ ಜ್ಞಾನ ಇಲ್ಲದವರನ್ನು ಪರೀಕ್ಷಿಸಲು, ರೋಗಿಗೆ ಕಣ್ಣು ಮುಚ್ಚಲು ಹೇಳಿ ಪೆನ್ನಿನಂತಹ ಮೊನಚಾದ ವಸ್ತುವಿನ ಮೂಲಕ ಮಚ್ಚೆಯನ್ನು ಸ್ಪರ್ಶಿಸಿ ಪರೀಕ್ಷಿಸಲಾಗುತ್ತದೆ.
– ನರಗಳಲ್ಲಿ ಊತ ಉಂಟಾಗುವ ಸಾಧ್ಯತೆ ಇರುವುದರಿಂದ ನರಗಳ ಪರೀಕ್ಷೆಯನ್ನು ಮಾಡಲಾಗುತ್ತದೆ.
– ಕಣ್ಣು, ಮುಖ, ಕೈ ಕಾಲುಗಳಲ್ಲಿ ಎದ್ದು ಕಾಣುವಂತಹ ಊನಗಳು ಇವೆಯೇ ಎಂದು ಪರೀಕ್ಷಿಸಲಾಗುತ್ತದೆ.
– ಮಚ್ಚೆ ಇರುವಲ್ಲಿ ಯಾವುದೇ ರೀತಿಯ ಸ್ಪರ್ಶ ಜ್ಞಾನ ಇಲ್ಲದೇ ಇದ್ದಲ್ಲಿ ಅದು ಕುಷ್ಠ ರೋಗವಾಗಿರುವ ಸಾಧ್ಯತೆ ಇದೆ.
ಜಗತ್ತಿನ ಅನೇಕ ರಾಷ್ಟ್ರಗಳಲ್ಲಿ ಇಂದು ಕುಷ್ಠ ರೋಗವು ಸಂಪೂರ್ಣವಾಗಿ ನಿರ್ಮೂಲನೆ ಯಾಗಿದ್ದರೂ ಈ ರೋಗದ ಬಗ್ಗೆ ಇರುವ ಮಾಹಿತಿ ಕೊರತೆ, ಸೂಕ್ತವಾದ ಚಿಕಿತ್ಸೆ ಪಡೆಯದಿ ರುವುದು ಹಾಗೂ ಜನರಲ್ಲಿ ಈ ರೋಗದ ಬಗ್ಗೆ ಇರುವ ಕೆಲವು ಮೂಢನಂಬಿಕೆಗಳ ಕಾರಣ ದಿಂದಾಗಿ ಭಾರತದಲ್ಲಿ ಇನ್ನೂ ಪೂರ್ಣವಾಗಿ ನಿರ್ಮೂಲನೆಯಾಗಿಲ್ಲ. ಕುಷ್ಠರೋಗವು ಮೈಕೋಬ್ಯಾಕ್ಟೀರಿಯಂ ಲೆಪ್ರೇ ಎಂಬ ಬ್ಯಾಕ್ಟೀರಿಯಾದಿಂದ ಬರುತ್ತದೆ. ಇದು ನಿಧಾನ ವಾಗಿ ಹರಡುವ ಸೋಂಕು ರೋಗ. ಮುಖ್ಯವಾಗಿ ಚರ್ಮ ಮತ್ತು ನರಗಳ ಮೇಲೆ ಪ್ರಭಾವ ಬೀರುತ್ತದೆ. ಈ ರೋಗದ ಪ್ರಾರಂಭದ ಹಂತದಲ್ಲಿ ನಮ್ಮ ದೈನಂದಿನ ಚಟುವಟಿಕೆಗಳಿಗೆ ಯಾವುದೇ ರೀತಿಯ ತೊಂದರೆ ಉಂಟಾಗುವುದಿಲ್ಲ. ಆದರೆ ರೋಗಾಣುಗಳು ದೇಹದಲ್ಲಿ ಅತೀ ಹೆಚ್ಚು ಉತ್ಪತ್ತಿಯಾದಂತೆ ವ್ಯಕ್ತಿಯ ಚರ್ಮ, ನರ, ಕೈಕಾಲು ಹಾಗೂ ಕಣ್ಣುಗಳಿಗೆ ಹಾನಿಯುಂಟು ಮಾಡುತ್ತವೆ. ಪೂರ್ಣ ಪ್ರಮಾಣದ ಚಿಕಿತ್ಸೆಯನ್ನು ಸರಿಯಾಗಿ ಪಡೆದಲ್ಲಿ ಈ ರೋಗದಿಂದ ಮುಕ್ತವಾಗಬಹುದು.
ಕುಷ್ಠ ರೋಗಕ್ಕೆ ಚಿಕಿತ್ಸೆ
ರಾಷ್ಟ್ರೀಯ ಕುಷ್ಠರೋಗ ನಿಯಂತ್ರಣ ಕಾರ್ಯಕ್ರಮವನ್ನು ಭಾರತ ಸರಕಾರವು 1955 ರಲ್ಲಿ ಪ್ರಾರಂಭಿಸಿತು. 1982ರಲ್ಲಿ ಬಹು ಔಷಧ ಚಿಕಿತ್ಸೆಯನ್ನು ಪರಿಚಯಿಸಿದ ಅನಂತರ, ಈ ಕಾರ್ಯಕ್ರಮವನ್ನು 1983ರಲ್ಲಿ ರಾಷ್ಟ್ರೀಯ ಕುಷ್ಠರೋಗ ನಿರ್ಮೂಲನೆ ಕಾರ್ಯಕ್ರಮವಾಗಿ ಪರಿವರ್ತಿಸಲಾಯಿತು. ಈ ಕಾರ್ಯಕ್ರಮದ ಅನ್ವಯ ಕುಷ್ಠರೋಗಕ್ಕೆ ಉಚಿತ ಚಿಕಿತ್ಸೆ ಹಾಗೂ ಈ ಕಾಯಿಲೆಯಿಂದ ಅಂಗವೈಕಲ್ಯ ಹೊಂದಿರುವವರಿಗೆ ಅಗತ್ಯವಿರುವ ಸೂಕ್ತವಾದ ಶಸ್ತ್ರಚಿಕಿತ್ಸೆಯನ್ನು ಉಚಿತವಾಗಿ ಮಾಡಲಾಗುತ್ತದೆ.
ಬಹು ಔಷಧ ಚಿಕಿತ್ಸೆಯಿಂದ 6-12 ತಿಂಗಳ ಒಳಗೆ ಕುಷ್ಠರೋಗ ಸಂಪೂರ್ಣ ಗುಣವಾಗುತ್ತದೆ. ಈ ಚಿಕಿತ್ಸೆ ಎಲ್ಲ ಸರಕಾರಿ ಆಸ್ಪತ್ರೆಗಳಲ್ಲೂ ಉಚಿತವಾಗಿ ದೊರೆಯುತ್ತದೆ. ರೋಗಲಕ್ಷಣಗಳನ್ನು ಆರಂಭದಲ್ಲಿಯೇ ಗುರುತಿಸಿ ಎಂ.ಡಿ.ಟಿ. ಚಿಕಿತ್ಸೆಯಿಂದ ರೋಗವನ್ನು ಗುಣಪಡಿಸುವುದರ ಜತೆಗೆ ಸಂಭವಿಸಬಹುದಾದ ಅಂಗವಿಕಲತೆಯನ್ನು ತಡೆಗಟ್ಟಬಹುದು. ಸಮಾಜದಲ್ಲಿ ರೋಗಪ್ರಸಾರವನ್ನು ತಡೆಗಟ್ಟಬಹುದು. ಎಂ.ಡಿ.ಟಿ. ಚಿಕಿತ್ಸೆ ಪಡೆಯುತ್ತಿರುವ ರೋಗಿಗಳು ಸಂಪೂರ್ಣವಾಗಿ ಸಹಜವಾದ ಜೀವನವನ್ನು ನಡೆಸಬಹುದಾಗಿದ್ದು, ಅವರಿಂದ ಕುಟುಂಬದ ಇತರ ಸದಸ್ಯರಿಗೆ ಆಗಲಿ, ಸಮುದಾಯಕ್ಕಾಗಲೀ ಯಾವುದೇ ರೀತಿಯ ಅಪಾಯ ಇರುವುದಿಲ್ಲ.
ಕುಷ್ಠರೋಗದ ಲಕ್ಷಣಗಳು ಕಂಡುಬಂದಲ್ಲಿ ಕೂಡಲೇ ಸಮೀಪವಿರುವ ಸರಕಾರಿ ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರಗಳ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬೇಕು. ಕುಷ್ಠ ರೋಗ ಎಂದಿಗೂ ಶಾಪವಲ್ಲ. ಕುಷ್ಠ ರೋಗಕ್ಕೆ ಒಳಗಾದ ವ್ಯಕ್ತಿಯನ್ನು ಇತರ ವ್ಯಕ್ತಿಯಂತೆ ಸಹಜವಾಗಿ ನೋಡಿಕೊಂಡು ಸೂಕ್ತವಾದ ಚಿಕಿತ್ಸೆ ನೀಡುವ ಮೂಲಕ ಅದನ್ನು ನಿವಾರಿಸಬಹುದು.
-ಡಾ| ಚೈತ್ರಾ ಆರ್. ರಾವ್
ಸಹ ಪ್ರಾಧ್ಯಾಪಕರು, ಸಮುದಾಯ ವೈದ್ಯಕೀಯ ವಿಭಾಗ ಮತ್ತು ಕೋ-ಆರ್ಡಿನೇಟರ್, ಸೆಂಟರ್ ಫಾರ್ ಟ್ರಾವೆಲ್ ಮೆಡಿಸಿನ್, ಕೆಎಂಸಿ ಮಣಿಪಾಲ
-ರಾಘವೇಂದ್ರ ಭಟ್ ಎಂ.
ಆರೋಗ್ಯ ಸಹಾಯಕರು, ಸಮುದಾಯ ವೈದ್ಯಕೀಯ ವಿಭಾಗ, ಕೆಎಂಸಿ ಮಣಿಪಾಲ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್ ಮುಖ್ಯಸ್ಥೆ
Daily Horoscope: ಉದ್ಯೋಗಾಸಕ್ತರಿಗೆ ಹೊಸ ಅವಕಾಶಗಳು ಗೋಚರ, ಸ್ವರ್ಣೋದ್ಯಮಕ್ಕೆ ಲಾಭ
Kinnigoli: ಪಕ್ಷಿಕೆರೆ; ಕೊಲೆ ಪ್ರಕರಣ ಮತ್ತಷ್ಟು ಸಂಗತಿಗಳು ಬೆಳಕಿಗೆ?
Media powerhouse: ರಿಲಯನ್ಸ್- ಡಿಸ್ನಿ ಕಂಪನಿ ವಿಲೀನ ಈಗ ಅಧಿಕೃತ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.