ಯಕ್ಷಗಾನ ಅಕಾಡೆಮಿ ಪ್ರಶಸ್ತಿಗೆ ಕರಾವಳಿಯ 9 ಮಂದಿ ಕಲಾವಿದರು ಆಯ್ಕೆ


Team Udayavani, Mar 8, 2022, 6:15 AM IST

ಯಕ್ಷಗಾನ ಅಕಾಡೆಮಿ ಪ್ರಶಸ್ತಿಗೆ ಕರಾವಳಿಯ 9 ಮಂದಿ ಕಲಾವಿದರು ಆಯ್ಕೆ

ಕರ್ನಾಟಕ ಯಕ್ಷಗಾನ ಅಕಾಡೆಮಿಯು 2021ನೇ ಸಾಲಿನ ವಿವಿಧ ಪ್ರಶಸ್ತಿಗಳನ್ನು ಪ್ರಕಟಿಸಿದ್ದು, ಪ್ರತಿಷ್ಠಿತ ಪಾರ್ತಿಸುಬ್ಬ ಪ್ರಶಸ್ತಿಗೆ ಡಾ| ಕಬ್ಬಿನಾಲೆ ವಸಂತ ಭಾರದ್ವಾಜ ಆಯ್ಕೆಯಾಗಿದ್ದಾರೆ. ಪ್ರಶಸ್ತಿಯನ್ನು ಮಾರ್ಚ್‌ ತಿಂಗಳ ಕೊನೆಯ ವಾರದಲ್ಲಿ ಕಾರ್ಕಳದಲ್ಲಿ ನೀಡಲಾಗುತ್ತಿದ್ದು 1 ಲಕ್ಷ ರೂ. ನಗದು ಸಹಿತ ಪ್ರಶಸ್ತಿ ಫಲಕ ನೀಡಿ ಗೌರವಿಸಲಾಗುತ್ತದೆ. ಉಳಿದಂತೆ ಗೌರವ ಪ್ರಶಸ್ತಿ, ಯಕ್ಷಸಿರಿ ಪ್ರಶಸ್ತಿ ಮತ್ತು ಪುಸ್ತಕ ಬಹುಮಾನಕ್ಕೆ ಮಂಗಳೂರು, ಉಡುಪಿ, ಕಾಸರಗೋಡು ಜಿಲ್ಲೆಗಳ 8 ಕಲಾವಿದರು ಆಯ್ಕೆಯಾಗಿದ್ದಾರೆ.

ಡಾ| ಕಬ್ಬಿನಾಲೆ ಅವರಿಗೆ ಪಾರ್ತಿಸುಬ್ಬ ಪ್ರಶಸ್ತಿ
ಹೆಬ್ರಿ: ಸ್ಟೇಟ್‌ ಬ್ಯಾಂಕ್‌ ಆಫ್‌ ಮೈಸೂರು ಕನ್ನಡ ವಿಭಾಗದ ಮುಖ್ಯಸ್ಥ ರಾಗಿ ತರಬೇತಿ ಕಾಲೇಜಿನ ಪ್ರಾಧ್ಯಾಪಕರಾಗಿದ್ದ ಹೆಬ್ರಿ ತಾಲೂಕಿನ ಕಬ್ಬಿನಾಲೆಯ ವಸಂತ ಭಾರದ್ವಾಜ ಅವರು ಸಾಹಿತ್ಯ ಸಂಶೋಧನೆಗಾಗಿ ಸ್ವಯಂ ನಿವೃತ್ತಿ ಪಡೆದು ಯಕ್ಷಗಾನ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ವಿನೂತನ ಸಾಧನೆ ಮಾಡಿದ್ದಾರೆ.
ಯಕ್ಷಗಾನ ಅಷ್ಠಾವಧಾನಿ ಎಂದೇ ಪ್ರಸಿದ್ಧರಾದ ಅವರು ಯಕ್ಷಗಾನದಲ್ಲಿ ಶ್ರೀರಾಮ ಲೀಲಾದರ್ಶನಂ ಎಂಬ ಮಹಾಕಾವ್ಯ ರಚಿಸಿದ್ದಾರೆ. “ಯಕ್ಷಗಾನ ಛಂದಸ್ಸು’ ಸಂಶೋಧನ ಪ್ರಬಂಧಕ್ಕೆ ಮೈಸೂರು ವಿ.ವಿ. ಪಿಎಚ್‌ಡಿ ಪದವಿ ನೀಡಿದೆ.

ಪ್ರಧಾನಿ ಮೋದಿಯವರ ಕವಿತೆಗಳ ಕನ್ನಡ ಅನುವಾದ ಹೊಸದಿಕ್ಕಿನ ಹಾಡು ಇವರ ಇತ್ತೀಚೆಗಿನ ಮುಖ್ಯ ಕೃತಿ. ಯಕ್ಷಗಾನ ತಾಳಮದ್ದಳೆಯಲ್ಲಿ ಕಲಾವಿದರಾಗಿ, ಗಮಕ ಕಲೆಯಲ್ಲಿ ವ್ಯಾಖ್ಯಾನಕಾರರಾಗಿ, ಭಾರತೀಯ ಕಾವ್ಯ ಪುರಾಣಗಳ ಕುರಿತು ಉತ್ತಮ ವಾಗ್ಮಿಯಾಗಿ ನಾಡಿನಾದ್ಯಂತ ಪ್ರಸಿದ್ಧರಾಗಿದ್ದಾರೆ.

ಪ್ರಶಸ್ತಿಯಿಂದ ಸಾಹಿತ್ಯ ಹಾಗೂ ಸಂಶೋಧನಾ ಕ್ಷೇತ್ರದಲ್ಲಿ ಇನ್ನಷ್ಟು ಸಾಧನೆ ಮಾಡಬೇಕು ಎನ್ನುವ ಸ್ಫೂರ್ತಿ ಬಂದಿದೆ ಎಂದು ವಸಂತ ಭಾರದ್ವಾಜ ಪ್ರತಿಕ್ರಿಯಿಸಿದ್ದಾರೆ.

ಮುತ್ತಪ್ಪ ತನಿಯ ಪೂಜಾರಿ
ಮುಂಬಯಿ: ಗೌರವ ಪ್ರಶಸ್ತಿಗೆ ಪಾತ್ರರಾಗಿರುವ ಮುತ್ತಪ್ಪ ತನಿಯ ಪೂಜಾರಿ ಉಡುಪಿ ಜಿಲ್ಲೆಯ ಕಿನ್ನಿಮೂಲ್ಕಿ ಬೈಲೂರಿನಲ್ಲಿ 1947ರಲ್ಲಿ ಜನಿಸಿದ್ದು, ಕ್ರಿಶ್ಚಿಯನ್‌ ಹೈಸ್ಕೂಲಿನಲ್ಲಿ ಎಸೆಸೆಲ್ಸಿ ತೇರ್ಗಡೆಯಾಗಿ 1966ರಲ್ಲಿ ಮುಂಬಯಿ ಸೇರಿದ್ದರು. ಅಲ್ಲಿ ಐದೂವರೆ ದಶಕಗಳಿಂದ ಯಕ್ಷಗಾನದ ಸ್ತ್ರೀ ವೇಷಧಾರಿಯಾಗಿದ್ದಾರೆ. ಕನ್ನಡ, ತುಳು, ಮರಾಠಿ ಭಾಷೆಗಳಲ್ಲಿ 22ಕ್ಕೂ ಮಿಕ್ಕಿ ಪ್ರಸಂಗಗಳನ್ನು ರಚಿಸಿ ಎಂ.ಟಿ. ಪೂಜಾರಿ ಎಂದೇ ಖ್ಯಾತರಾಗಿದ್ದಾರೆ.

ವೃತ್ತಿಯಲ್ಲಿ ಮೆಕ್ಯಾನಿಕಲ್‌ ಡ್ರಾಫ್ಟ್ಮ್ಯಾನ್‌ ಕಂ. ಟರ್ನರ್‌ ಆಗಿದ್ದ ಅವರು ಬ್ರಹ್ಮಶ್ರೀ ನಾರಾಯಣ ಗುರು ಸ್ವಾಮಿ ಯಕ್ಷಗಾನ ಮಂಡಳಿಯಲ್ಲಿ 25 ವರ್ಷ ಪ್ರಧಾನ ಸ್ತ್ರೀ ವೇಷಧಾರಿಯಾಗಿದ್ದು ಹಲವು ಮಂದಿ ಸ್ತ್ರೀವೇಷ ಧಾರಿಗಳಿಗೂ, ಹಾಸ್ಯಗಾರರಿಗೂ ಉತ್ತೇಜನ ನೀಡಿದರು. ಅವರ 15 ಪ್ರಸಂಗಗಳು ಮುದ್ರಣ ಗೊಂಡಿವೆ. ಅನೇಕ ಪ್ರಸಂಗಗಳು ಸುಂಕದ ಕಟ್ಟೆ ಮೇಳದಲ್ಲಿ ಪ್ರದರ್ಶನಗೊಳ್ಳುತ್ತಿವೆ. 2014ರಲ್ಲಿ ಅವರ “ಶ್ರೀ ಫಂಡರ್‌ಪುರ್‌ ಮಹಿಮಾ’ ಮರಾಠಿ ಭಾಷಾ ಪ್ರಸಂಗವು 21 ಬಾರಿ ಮುಂಬಯಿ ಮತ್ತು ಗೋವಾದಲ್ಲಿ ಪ್ರದರ್ಶಿಸಲ್ಪಟ್ಟು ಜನಮೆಚ್ಚುಗೆ ಪಡೆದಿದೆ. ತನ್ನ ಐವತ್ತನೇ ವಯಸ್ಸಿನಲ್ಲಿ ಬಣ್ಣದ ಬದುಕಿನಿಂದ ದೂರವಾಗಿದ್ದಾರೆ. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮುಂಬಯಿ ಸಹಿತ ವಿವಿಧೆಡೆ ಅವರು ಪ್ರಶಸ್ತಿಗಳಿಂದ ಪುರಸ್ಕೃತರಾಗಿದ್ದಾರೆ.

ನರೇಂದ್ರ ಕುಮಾರ್‌ ಜೈನ್‌
ಬೆಳ್ತಂಗಡಿ: ಅಕಾಡೆಮಿಯ ಗೌರವ ಪ್ರಶಸ್ತಿಗೆ ಪಾತ್ರರಾಗಿರುವ ಉಜಿರೆಯ ಎಸ್‌.ಬಿ. ನರೇಂದ್ರ ಕುಮಾರ್‌ ಜೈನ್‌ ಯಕ್ಷಗಾನ ಕ್ಷೇತ್ರದಲ್ಲಿ ಬಹುಸ್ತರಗಳಲ್ಲಿ ದುಡಿದಿದ್ದಾರೆ. ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢಶಾಲೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾಗಿ ಸುದೀರ್ಘ‌ಕಾಲ ಸೇವೆ ಸಲ್ಲಿಸಿದವರು.

1965ರಲ್ಲಿ ದಿ| ಬಾಬುರಾವ್‌ ಧರ್ಮಸ್ಥಳ ಅವರ ಮಾರ್ಗದರ್ಶನದಲ್ಲಿ ಕಲಾವಿದರಾಗಿ ರಾಜ್ಯದ ಹಲವು ಕಡೆ ನಾಟಕ ಪ್ರದರ್ಶನ, ಬಳ್ಳಂಬೆಟ್ಟು ಮೇಳದಲ್ಲಿ ತಿರುಗಾಟ ನಡೆಸಿದರು. ವಿದ್ಯಾರ್ಥಿನಿಯರಿಗೆ ಯಕ್ಷಗಾನ ತರಬೇತಿ ನೀಡಿ ಶ್ರೇಷ್ಠ ಮಟ್ಟದ ತಂಡವನ್ನು ರಚಿಸಿ ರಾಜ್ಯದ ಹಲವು ಕಡೆಗಳಲ್ಲಿ ಹಾಗೂ ಹೊರರಾಜ್ಯಗಳಲ್ಲೂ ಪ್ರದರ್ಶನ ನೀಡಿದ್ದಾರೆ. ದûಾಧ್ವರದ ವೀರಭದ್ರನ ಪಾತ್ರವನ್ನು ಸುಮಾರು 1000ಕ್ಕಿಂತಲೂ ಹೆಚ್ಚು ಬಾರಿ ನಿರ್ವಹಿಸಿದ್ದಾರೆ. ಧರ್ಮಸ್ಥಳದ ಯಕ್ಷಗಾನ ತರಬೇತಿ ಕೇಂದ್ರದ ಸಲಹಾ ಸಮಿತಿಯ ಸ್ಥಾಪಕ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ. ಅವರನ್ನು ಸ್ಥಳೀಯ ಸಂಘ-ಸಂಸ್ಥೆಗಳು ಸಮ್ಮಾನಿಸಿವೆ.

ಹಳ್ಳಾಡಿ ಜಯರಾಮ ಶೆಟ್ಟಿ
ಕುಂದಾಪುರ: ಯಕ್ಷಸಿರಿ ಪ್ರಶಸ್ತಿಗೆ ಪಾತ್ರರಾಗಿರುವ ಹಳ್ಳಾಡಿ ಜಯರಾಮ ಶೆಟ್ಟಿ ಅವರು ಕುಂದಗನ್ನಡವನ್ನು ಯಕ್ಷಗಾನದಲ್ಲಿ ಅತಿಹೆಚ್ಚು ಬಳಸುವ ಮೂಲಕ ಹೆಸರಾದ ಹಳ್ಳಾಡಿ ಜಯರಾಮ ಶೆಟ್ಟರು ಕುಂಜಾಲು ಹಾಸ್ಯಗಾರರ ಹಾದಿಯಲ್ಲಿ ಕ್ರಮಿಸಿದವರು.

ಇಲ್ಲಿನ ಶಿರಿಯಾರ ಸಮೀಪ ಹಳ್ಳಾಡಿಯಲ್ಲಿ 1956ರಲ್ಲಿ ಜನಿಸಿದ್ದು, ಐದನೇ ತರಗತಿಗೇ ಮಂಗಳ ಹಾಡಿ, 12ನೇ ವಯಸ್ಸಿನಲ್ಲೇ ಕಲಾಜೀವನ ಆರಂಭಿಸಿದರು. ಅಮಾಸೆಬೈಲು ಕಿಟ್ಟಪ್ಪ ಹೆಬ್ಟಾರ್‌ ಅವರು ಹಳ್ಳಾಡಿ ಅವರನ್ನು ವೃತ್ತಿಮೇಳಕ್ಕೆ ಪರಿಚಯಿಸಿದರೆ, ಹಳ್ಳಾಡಿ ಮಂಜಯ್ಯ ಶೆಟ್ಟರು ಮೇಳದಲ್ಲಿ ಗುರುವಾಗಿ ದೊರೆತರು. ನಾರ್ಣಪ್ಪ ಉಪ್ಪೂರರ ನಿರ್ದೇಶನದಲ್ಲಿ ಹಾಸ್ಯ ಭೂಮಿಕೆಯೊಂದನ್ನು ನಿರ್ವಹಿಸಿ ಗೆಲುವು ಕಂಡರು.

ಕಮಲಶಿಲೆ, ಪೆರ್ಡೂರು, ಮೂಲ್ಕಿ ಮೊದಲಾದ ಮೇಳಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಸಾಲಿಗ್ರಾಮ ಮೇಳದಲ್ಲಿ ನಿರಂತರ 24 ವರ್ಷಗಳಷ್ಟು ದೀರ್ಘ‌ ಕಾಲ ಸೇವೆ ಸಲ್ಲಿಸಿದ್ದ ಅವರು ತೆಂಕಿನ ಕುಂಬಳೆ ಮೇಳದಲ್ಲೂ ಸೇವೆ ಸಲ್ಲಿಸಿ ಮೂರುತಿಟ್ಟುಗಳ ಕಲಾವಿದ ರೊಂದಿಗೆ ಹೊಂದಾಣಿಕೆಯಿಂದ ತಿರುಗಾಟ ಮಾಡಿದವರು. ಒಟ್ಟಾರೆ 50 ವರ್ಷಗಳ ಕಲಾ ವ್ಯವಸಾಯ ಮಾಡಿದ್ದಾರೆ.

ಆಜ್ರಿ ಗೋಪಾಲ ಗಾಣಿಗ
ಕುಂದಾಪುರ: ಯಕ್ಷ ಸಿರಿ ಪ್ರಶಸ್ತಿಗೆ ಪಾತ್ರರಾಗಿರುವ ಬಡಗುತಿಟ್ಟಿನ ಹಿರಿಯ ಕಲಾವಿದ ಆಜ್ರಿ ಗೋಪಾಲ ಗಾಣಿಗ ಮಂದಾರ್ತಿ ಮೇಳವೊಂದರಲ್ಲಿಯೇ 30 ವರ್ಷಗಳಿಗೂ ಹೆಚ್ಚಿನ ಕಲಾ ಸೇವೆ ಮಾಡಿದ್ದಾರೆ. ಇದು ಅವರ 50ನೇ ವರ್ಷದ ತಿರುಗಾಟ.

ಹಾರಾಡಿ ರಾಮ ಗಾಣಿಗರ ಮೊಮ್ಮಗನಾಗಿರುವ 63 ವರ್ಷದ ಗೋಪಾಲ ಗಾಣಿಗರು 13ನೇ ವರ್ಷದಲ್ಲಿಯೇ ರಂಗ ಪ್ರವೇಶ ಮಾಡಿದ್ದರು. ಕಲಿತದ್ದು ಕೇವಲ 3ನೇ ತರಗತಿ. 1972ರಲ್ಲಿ ಮೊದಲ ಬಾರಿಗೆ ಕಮಲಶಿಲೆ ಮೇಳದಲ್ಲಿ ಬಣ್ಣ ಹಚ್ಚಿದ್ದು, ಅಲ್ಲಿಂದ ಪೆರ್ಡೂರು, ಉಡುಪಿ ಯಕ್ಷಗಾನ ಕೇಂದ್ರ, ಇಡಗುಂಜಿ ಮೇಳ, ಮತ್ತೆ ಕಮಲಶಿಲೆ, ಶೃಂಗೇರಿ, ಮಂದಾರ್ತಿ, ಸೌಕೂರು, ಮೂಲ್ಕಿ ಮೇಳದಲ್ಲಿ ಸೇವೆ ಸಲ್ಲಿಸಿದ್ದರು.

ಕೊಕ್ಕಡ ಈಶ್ವರ ಭಟ್‌
ಬೆಳ್ತಂಗಡಿ: ಯಕ್ಷಸಿರಿ ಪ್ರಶಸ್ತಿಗೆ ಪಾತ್ರರಾಗಿರುವ “ಗುಣಸುಂದರಿ ಭಟ್ಟರು’ ಖ್ಯಾತಿಯ ಕೊಕ್ಕಡ ಈಶ್ವರ ಭಟ್ಟರು ಬಂಟ್ವಾಳದ ಸಮೀಪದ ಕಡೆಂಗೋಡ್ಲಿನಲ್ಲಿ 1940ರಲ್ಲಿ ಜನಿಸಿದರು. ಕಡುಬಡತನದ ನಡುವೆಯೂ 6ನೇ ತರಗತಿಯವರೆಗೆ ವಿದ್ಯಾಭ್ಯಾಸ ಮಾಡಿ ಬಳಿಕ ಪುತ್ತೂರು ನಾರಾಯಣ ಭಟ್ಟರ ನೆಂಟಸ್ತಿಕೆಯೊಂದಿಗೆ ಮೂಲ್ಕಿ ಮೇಳದಲ್ಲಿ ಕೆಲಸಕ್ಕೆ ಸೇರಿದರು. ಪಾತಾಳ ವೆಂಕಟರಮಣ ಭಟ್ಟರ ಗೈರುಹಾಜರಿಯಲ್ಲಿ ಮುಖ್ಯ ಸ್ತ್ರೀ ಪಾತ್ರಧಾರಿಯಾಗಿ ಅವಕಾಶ ಪಡೆದು ಮುಂದೆ ಮುಖ್ಯಸ್ತ್ರೀ ವೇಷಧಾರಿಯಾಗಿ ಬೆಳೆದು ಕೀರ್ತಿ ಪಡೆದರು. 1951ರಿಂದ ವೃತ್ತಿಪರ ಕಲಾವಿದರಾಗಿ ತೊಡಗಿಕೊಂಡು 2009ರಲ್ಲಿ ತಿರುಗಾಟದಿಂದ ನಿವೃತ್ತಿ ಪಡೆದ ಬಳಿಕವೂ ಹವ್ಯಾಸಿ ಮೇಳಗಳಲ್ಲಿ ಆಹ್ವಾನಿತ ಕಲಾವಿದರಾಗಿ ಇತ್ತೀಚೆಗಿನವರೆಗೂ ಪಾತ್ರ ನಿರ್ವಹಿಸುತ್ತಿದ್ದರು.

ಬೋಳಾರ ಸುಬ್ಬಯ್ಯ ಶೆಟ್ಟಿ

ಮಂಗಳೂರು: ಯಕ್ಷಸಿರಿ ಪ್ರಶಸ್ತಿಗೆ ಆಯ್ಕೆಯಾಗಿರುವ ಬೋಳಾರ ಸುಬ್ಬಯ್ಯ ಶೆಟ್ಟಿ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ಮೂಡಂಬೈಲು ಗ್ರಾಮದ ದಡ್ಡಂಗಡಿಯಲ್ಲಿ 1943ರಲ್ಲಿ ಜನಿಸಿದರು. 6ನೇ ತರಗತಿ ಓದಿದ ಬಳಿಕ ಮಂಗಳೂರಿನ ಬೋಳಾರದಲ್ಲಿ ಹೊಟೇಲ್‌ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದು, ಆಗ ಯಕ್ಷಗಾನ ಕಲೆಯ ಬಗ್ಗೆ ಆಕರ್ಷಿತರಾಗಿದ್ದರು.

80ರ ಪ್ರಾಯದಲ್ಲಿಯೂ ಅವರು ಕಳವಾರು ಶ್ರೀ ಬೆಂಕಿನಾಥೇಶ್ವರ ಮೇಳದ ಪ್ರಧಾನ ವೇಷಧಾರಿ
ಯಾಗಿದ್ದಾರೆ. ಶ್ರೀ ಸುಂಕದಕಟ್ಟೆ ಮೇಳದಲ್ಲಿ ಗೆಜ್ಜೆ ಕಟ್ಟಿ, ಕದ್ರಿ, ಮಧೂರು, ಕರ್ನಾಟಕ, ಪುತ್ತೂರು, ಕುಂಟಾರು ಮೇಳಗಳಲ್ಲಿ 55 ವರ್ಷ ತಿರುಗಾಟ ಮಾಡಿದ್ದಾರೆ. ನಾಟಕೀಯ ವೇಷ, ಪೀಠಿಕೆ ವೇಷ, ತುಳು   ಕನ್ನಡ ಪ್ರಸಂಗಗಳಲ್ಲಿ ವೇಷಧಾರಿಯಾಗಿ  ಪ್ರಸಿದ್ಧರು.ತಾಳಮದ್ದಳೆ ಅರ್ಥಧಾರಿಯಾಗಿ ಬೋಳಾರ, ಪಾಂಡೇಶ್ವರ ಸಂಘಗಳಲ್ಲಿ ಸೇವೆ ಮಾಡಿದವರು.

ರಾಮ ಸಾಲಿಯಾನ್‌ ಮಂಗಲ್ಪಾಡಿ
ಕಾಸರಗೋಡು: ಯಕ್ಷಸಿರಿ ಪ್ರಶಸ್ತಿಗೆ ಪಾತ್ರರಾಗಿರುವ ಮಂಗಲ್ಪಾಡಿಯ ರಾಮ ಸಾಲಿಯಾನ್‌ ಯಕ್ಷಗಾನದ ಸರ್ವಾಂಗಗಳನ್ನೂ ಬಲ್ಲ ಕಲಾವಿದ. ದೂರವಾಣಿ ಇಲಾಖೆಯ ನಿವೃತ್ತ ಅಧಿಕಾರಿಯಾಗಿದ್ದು, ಉತ್ತಮ ಭಾಗವತ, ಅರ್ಥಧಾರಿ, ಯಕ್ಷಗಾನ ಸಂಘಟಕ, ಯಕ್ಷ ಗುರುಗಳಾಗಿದ್ದಾರೆ. 66ರ ಹರೆಯದ ಅವರು 23ನೇ ವಯಸ್ಸಿನಿಂದಲೂ ಯಕ್ಷಗಾನ ಕ್ಷೇತ್ರದಲ್ಲಿದ್ದಾರೆ.

ಡಾ| ರಮಾನಂದ ಬನಾರಿ ಮಂಜೇಶ್ವರ ಪುಸ್ತಕ ಬಹುಮಾನ ಪ್ರಶಸ್ತಿ ಪುರಸ್ಕೃತ ಡಾ| ರಮಾನಂದ ಬನಾರಿ ವೃತ್ತಿಯಲ್ಲಿ ವೈದ್ಯರು. ಸಾಹಿತಿ, ಸಂಘಟಕ, ಯಕ್ಷಗಾನ ಅರ್ಥಧಾರಿ, ಕನ್ನಡ ಹೋರಾಟಗಾರ, ಕಾಸರಗೋಡು ಜಿಲ್ಲಾ ಕನ್ನಡ ಲೇಖಕರ ಸಂಘದ ಸ್ಥಾಪಕಾಧ್ಯಕ್ಷರಾಗಿದ್ದಾರೆ. ಯಕ್ಷಗಾನಕ್ಕೆ ಸಂಬಂಧಿಸಿದ ಹಲವು ಕೃತಿಗಳನ್ನು ರಚಿಸಿದ್ದಾರೆ.

ಟಾಪ್ ನ್ಯೂಸ್

1—amanatulla-khan

Waqf; ಅಮಾನತುಲ್ಲಾ ಖಾನ್ ಗೆ ಜಾಮೀನು: ಮೋದಿಯ ಸುಳ್ಳು ಪ್ರಕರಣ ಬಹಿರಂಗ ಎಂದ ಆಪ್

marriage 2

Davangere: ಮದುವೆಯಾಗುವುದಾಗಿ ಯುವತಿಯರಿಗೆ 62 ಲಕ್ಷ ರೂ.ಗೂ ಹೆಚ್ಚು ವಂಚಿಸಿದವನ ಬಂಧನ

Vimana 2

Kochi airport; ಶಬರಿಮಲೆ ಭಕ್ತರಿಗೆ ಅನುಕೂಲವಾಗುವಂತೆ ವಿಶೇಷ ವ್ಯವಸ್ಥೆಗಳು

Mika Singh: ಮಿಕಾ ಹಾಡಿಗೆ ಫಿದಾ..‌ಪಾಕ್‌ ಅಭಿಮಾನಿಯಿಂದ 3 ಕೋಟಿ ರೂ. ವಾಚ್‌, ಚಿನ್ನ ಗಿಫ್ಟ್

Mika Singh: ಮಿಕಾ ಹಾಡಿಗೆ ಫಿದಾ..‌ಪಾಕ್‌ ಅಭಿಮಾನಿಯಿಂದ 3 ಕೋಟಿ ರೂ. ವಾಚ್‌, ಚಿನ್ನ ಗಿಫ್ಟ್

1-kanna

Maharashtra Election; ಫಡ್ನವಿಸ್ ಪತ್ನಿಯ ವಿರುದ್ಧ ಕನ್ಹಯ್ಯಾ ಕುಮಾರ್ ಹೇಳಿಕೆ

1-raga

Modiji ಸಂವಿಧಾನವನ್ನು ಓದಲೇ ಇಲ್ಲ, ಹಾಗಾಗಿ…: ರಾಹುಲ್ ಗಾಂಧಿ

ಎಸ್‌ಡಿಎ ರುದ್ರಣ್ಣ ಕೇಸ್:‌ ಮೂವರು ಆರೋಪಿಗಳಿಗೆ ನಿರೀಕ್ಷಣಾ ಜಾಮೀನು

Belagavi: ಎಸ್‌ಡಿಎ ರುದ್ರಣ್ಣ ಕೇಸ್:‌ ಮೂವರು ಆರೋಪಿಗಳಿಗೆ ನಿರೀಕ್ಷಣಾ ಜಾಮೀನು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

POLICE-5

Malpe: ಜುಗಾರಿ ಅಡ್ಡೆಗೆ ದಾಳಿ, ವಶಕ್ಕೆ

POlice

Malpe: ಜೂಜಾಟ; 12 ಮಂದಿ ಅಂದರ್‌; ಪ್ರಕರಣ ದಾಖಲು

7

Malpe: ಫಿಶರೀಸ್‌ ಕಾಲೇಜು ಆವರಣ ಕೊಳಚೆ ಮುಕ್ತಿ

6

Kaup ತಾಲೂಕಿನಲ್ಲಿ ತಹಶೀಲ್ದಾರ್‌ ನೇತೃತ್ವದಲ್ಲಿ ಬೆಳೆ ಕಟಾವು

ಮಣಿಪಾಲ ಎನರ್ಜಿ ಪ್ರೈ.ಲಿ. ಮತ್ತು ಲಯನ್ಸ್ ಸಹಯೋಗ: ರಜತ ಸಂಭ್ರಮ ಸಭಾಂಗಣ ಉದ್ಘಾಟನೆ

ಮಣಿಪಾಲ ಎನರ್ಜಿ ಪ್ರೈ.ಲಿ. ಮತ್ತು ಲಯನ್ಸ್ ಸಹಯೋಗ: ರಜತ ಸಂಭ್ರಮ ಸಭಾಂಗಣ ಉದ್ಘಾಟನೆ

MUST WATCH

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

ಹೊಸ ಸೇರ್ಪಡೆ

1-eweweq

Muddebihal; ಬೊಲೇರೊ-ಬೈಕ್ ಮುಖಾಮುಖಿ ಡಿಕ್ಕಿ: ಸವಾರ ಮೃ*ತ್ಯು

byndoor

Kundapura: ಪ್ರತ್ಯೇಕ ಅಪಘಾತ ಪ್ರಕರಣ; ಗಾಯ

1-p-r

US; ಒಬಾಮಾ ಮನೆಯಲ್ಲಿ ಪ್ರೇಯಸಿ ಕರೆಸಿ ಸೆ*ಕ್ಸ್ ಮಾಡಿದ ಸೀಕ್ರೆಟ್ ಸರ್ವಿಸ್ ಏಜೆಂಟ್ ವಜಾ!

POLICE-5

Malpe: ಜುಗಾರಿ ಅಡ್ಡೆಗೆ ದಾಳಿ, ವಶಕ್ಕೆ

POlice

Malpe: ಜೂಜಾಟ; 12 ಮಂದಿ ಅಂದರ್‌; ಪ್ರಕರಣ ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.