ಸ್ವಾತಂತ್ರ್ಯ ನಾನು ಕಂಡಂತೆ… ಸ್ವಾತಂತ್ರ್ಯದ ಬಗ್ಗೆ ಒಬ್ಬೊಬ್ಬರದು ಒಂದೊಂದು ವ್ಯಾಖ್ಯಾನ…


Team Udayavani, Aug 15, 2024, 6:35 AM IST

ಸ್ವಾತಂತ್ರ್ಯ ನಾನು ಕಂಡಂತೆ… ಸ್ವಾತಂತ್ರ್ಯದ ಬಗ್ಗೆ ಒಬ್ಬೊಬ್ಬರದು ಒಂದೊಂದು ವ್ಯಾಖ್ಯಾನ…

ಸ್ವಾತಂತ್ರ್ಯ ಎಂದರೆ ಏನು? ಇಂಥದ್ದೊಂದು ಪ್ರಶ್ನೆಯನ್ನು “ಉದಯವಾಣಿ’ ಮುಂದಿರಿಸಿದಾಗ ರಾಜ್ಯದ ಜನ ವಿಭಿನ್ನ ಭಾವ, ವಿಭಿನ್ನ ಅರ್ಥವನ್ನು ಮುಂದಿರಿಸಿದರು.ಸ್ವಾತಂತ್ರ್ಯ ಸ್ವೇಚ್ಛೆಯಲ್ಲ, ಅದು ಕರ್ತವ್ಯಗಳ ಜತೆಗೆ ಮೂಲಭೂತ ಹಕ್ಕು ಅನುಭವಿಸುವ ಅನುಭೂತಿ. ಸಮಭಾವ, ಸಮಪಾಲು ಹಾಗೂ ರಾಷ್ಟ್ರ ವೇ ಮಿಗಿಲು ಎಂಬ ಮನೋಧರ್ಮವೇ ದೇಶದ ಸ್ವಾತಂತ್ರ್ಯ ಎನಿಸಿಕೊಂಡರೆ,ಹಕ್ಕುಗಳನ್ನು ಅನುಭವಿಸುತ್ತಲೇ ದೇಶದ ಏಳಿಗೆಗೆ ದುಡಿಯುವುದೇ ನಿಜವಾದ ವೈಯಕ್ತಿಕ ಸ್ವಾತಂತ್ರ್ಯ ಎಂಬ ಅಭಿಮತ ಮುಂದಿಟ್ಟಿದ್ದಾರೆ.

ಸ್ವಾತಂತ್ರ್ಯವೆಂದರೆ ಸ್ವೇಚ್ಛಾಚಾರವಲ್ಲ
ಜಾತಿ, ಧರ್ಮ, ಲಿಂಗಾತೀತವಾಗಿ ದೇಶವಾಸಿಗಳೆಲ್ಲರೂ ಸಂವಿಧಾನಬದ್ಧವಾದ ಹಕ್ಕುಗಳನ್ನು ನಿರ್ಭಯವಾಗಿ ಅನುಭವಿಸುವುದು ಸ್ವಾತಂತ್ರ್ಯ. ಆದರೆ ಹಕ್ಕುಗಳನ್ನು ಅನುಭವಿಸುವಾಗ ಬೇರೊಬ್ಬರಿಗೆ ತೊಂದರೆ, ಮುಜುಗರವಾಗದಂತೆ ನೋಡಿಕೊಳ್ಳಬೇಕು. ಇದರರ್ಥ ಸ್ವಾತಂತ್ರ್ಯವೆಂದರೆ ಸ್ವೇಚ್ಛಾಚಾರವಲ್ಲ. ದೇಶದ ಸಾರ್ವಭೌಮತ್ವವನ್ನು ಗೌರವಿಸಿ, ಎಂತಹ ಸಂದರ್ಭಗಳಲ್ಲಿಯೂ ದೇಶದ ಪರವಾದ ಆಲೋಚನೆಗಳನ್ನು ಪ್ರಸ್ತತಪಡಿಸುತ್ತಾ, ದೇಶಕ್ಕೆ ಯಾವುದೇ ಆತಂಕಗಳು ಎದುರಾಗದಂತೆ ಆಂತರಿಕ ಶಾಂತಿ, ಸೌಹಾರ್ದತೆಯನ್ನು ಕಾಪಾಡಿಕೊಳ್ಳುವುದು. ಜತೆಗೆ ದೇಶದಲ್ಲಿರುವ ಸವಲತ್ತುಗಳು ಎಲ್ಲರಿಗೂ ಸಮಾನವಾಗಿ ಹಂಚಿಕೆ ಹಾಗೂ ಎಲ್ಲರೂ ಸಮಾನವಾಗಿ ಸವಲತ್ತುಗಳನ್ನು ಅನುಭವಿಸಲು ಅವಕಾಶ ಕಲ್ಪಿಸುವುದು.ಸಂವಿಧಾನಬದ್ಧವಾಗಿ ಲಭ್ಯವಾದ ಹಕ್ಕುಗಳನ್ನು ಇತರರಿಗೆ ತೊಂದರೆಯಾಗದಂತೆ ನಿರ್ಭಯವಾಗಿ ಮತ್ತು ಸಮಾಜಮುಖಿಯಾಗಿ ಬದುಕುವುದು ವೈಯಕ್ತಿಕ ಸ್ವಾತಂತ್ರ್ಯ.
-ಡಾ| ಹಂಪನಹಳ್ಳಿ ತಿಮ್ಮೇಗೌಡ,
ನಿವೃತ್ತ ಪ್ರಾಧ್ಯಾಪಕರು, ಅಧ್ಯಕ್ಷರು, ಜಿಲ್ಲಾ ಜಾನಪದ ಪರಿಷತ್ತು, ಹಾಸನ

ನಿರ್ಭಯ, ಘನತೆಯ ಜೀವನಕ್ರಮ
ಯಾವುದೇ ಶಕ್ತಿಗೆ ಅಡಿಯಾಳಾಗಿ ಬದುಕದ ರಚನಾತ್ಮಕ ಜೀವನಕ್ರಮವೇ ಸ್ವಾತಂತ್ರ್ಯ. ನಿರ್ಭಯವಾಗಿ ಮತ್ತು ಘನತೆಯಿಂದ ಜೀವನಕ್ರಮವೊಂದನ್ನು ರೂಪಿಸಿಕೊಂಡು ನಡೆಸುವ ಬಾಳು. ದಕ್ಕುವ ಅರಿವು ಮತ್ತು ಅನುಕೂಲಗಳನ್ನು ಬಳಸಿಕೊಂಡು ಸ್ವಾಭಿಮಾನದಿಂದ ಮುನ್ನಡೆಯುವ ರೀತಿಯೇ ಸ್ವಾತಂತ್ರ್ಯ. ದೇಶದ ಸ್ವಾತಂತ್ರ್ಯ ಎಂದರೆ, ಅದು ರಾಷ್ಟ್ರೀಯ ಅಸ್ಮಿತೆ. ಮಾನಸಿಕ ಮತ್ತು ದೈಹಿಕವಾದ ಗುಲಾಮಗಿರಿಯಿಂದ ಹೊರಬಂದು ಸ್ವಂತ ಬಾಳನ್ನು ನಡೆಸುವಿಕೆ. ದೇಶದ ಸಂಪನ್ಮೂಲ ಮತ್ತು ವ್ಯಕ್ತಿ ಸಂಪತ್ತನ್ನು ಯಾರ ಹಂಗಿಲ್ಲದೇ ಬಳಸಿಕೊಂಡು ಮುಕ್ತವಾಗಿ ಯೋಚಿಸುವ ಶಕ್ತಿ. ಇಲ್ಲಿ ದೇಶ ಎಂಬುದೇ ಚೈತನ್ಯದಾಯಕ ಇರುವಿಕೆ. ಪರರಲ್ಲಿ ಕೈಚಾಚದೆ ಮತ್ತು ವಿಶ್ವವನ್ನೂ ಒಳಗೊಳ್ಳುವ ಸ್ವಾಭಿಮಾನದ ನಡಿಗೆ. ವೈಯುಕ್ತಿಕ ಸ್ವಾತಂತ್ರ್ಯ ಎಂದರೆ, ತನ್ನ ಅನನ್ಯತೆ, ಹಂಬಲ ಹಾಗೂ ವಾಂಛೆಯನ್ನೂ ಉಳಿಸಿಕೊಂಡು ಸಮೂಹದ ಜತೆಗೆ ಮುನ್ನಡೆಯುವ ಬಗೆ. ತನ್ನ ಇಷ್ಟದ ಆಚಾರ, ವಿಚಾರ, ಆಹಾರ ಕ್ರಮ, ಕಲಿಯುವ ಶೈಲಿ, ಜೀವನ ನಿರ್ವಹಣೆಯ ಕ್ರಮ. “ತನ್ನಂತೆ ಪರರ ಬಗೆವ’ ಮತ್ತು “ಸರ್ವೇಜನಃ ಸುಖಿನೋಭವಂತುಃ’ ಎಂಬ ಆದರ್ಶ ವೈಯಕ್ತಿಕ ಸ್ವಾತಂತ್ರ್ಯದ ಮೂಲ ದ್ರವ್ಯವಾಗಬೇಕು.
-ವಾಸುದೇವ ನಾಡಿಗ್‌, ಕವಿ, ಬೆಂಗಳೂರು

ಸಮಷ್ಠಿಯೆಡೆಗೆ ಕರೆದೊಯ್ಯುವ ದಾರಿ
ಸಂಸ್ಕೃತ ಶ್ಲೋಕದಲ್ಲಿ ಬರುವಂತೆ “ಯಾ ವಿದ್ಯಾ ಸಾ ವಿಮುಕ್ತಯೇ’ ಯಾವ ವಿದ್ಯೆಯು ಒಬ್ಬನನ್ನು ವಿಮುಕ್ತಿಯೆಡೆಗೆ ಕರೆದುಕೊಂಡು ಹೋಗುತ್ತದೆಯೇ ಅದೇ ನಿಜವಾದ ವಿದ್ಯೆ. ಅದೇ ನಿಜ ವಾದ ಸ್ವಾತಂತ್ರ್ಯ. ಈ ಸ್ವಾತಂತ್ರ್ಯವು ವ್ಯಕ್ತಿಯನ್ನು ಸಮಷ್ಠಿಯೆಡೆಗೆ ಕರೆದೊಯ್ಯಬೇಕು ಹಾಗೂ ಅದರ ಬೆಳಕಿನಲ್ಲಿ ನಡೆಸುವಂತಿರಬೇಕು. ಅದರದ್ದೇ ಭಾಗವಾಗಿ ನಮ್ಮ ದೈನಂದಿನ ಬದುಕಿನಲ್ಲಿ ನೋಡುತ್ತಾ ಹೋದಾಗ ತನ್ನ ಸ್ವಧರ್ಮ ಮತ್ತು ಸ್ವಭಾವ ಈ ಎರಡರ ಪಾಲನೆಗೂ ಚ್ಯುತಿ ಬರದಂತೆ ಪರಿಪಾಲನೆ ಮಾಡಲಿಕ್ಕಿರುವಂತಹ ವಾತಾವರಣವೇ ಸ್ವಾತಂತ್ರ್ಯ. ಇದೊಂದು ಪರಿಪೂರ್ಣ ಸ್ಥಿತಿ.ದೇಶದ ಸ್ವಾತಂತ್ರ್ಯ ಎಂದರೆ, ರಾಷ್ಟ್ರದಲ್ಲಿ ಯಾವಾಗ ಸ್ವರಾಜ್ಯ ಸಂಸ್ಥಾಪನೆಯಾಗುತ್ತದೆಯೋ ಆಗ ದೇಶಕ್ಕೆ ಸ್ವಾತಂತ್ರ್ಯ ದೊರಕಿದೆ ಎಂದರ್ಥ. ವೈಯಕ್ತಿಕ ಸ್ವಾತಂತ್ರ್ಯವು ವೈಯಕ್ತಿಕತೆಯ ಜತೆಗೆ “ಸ್ವಾತಂತ್ರ್ಯ’ ಎನ್ನುವ ಪದದೊಂದಿಗೆ ಬೆಸೆದುಕೊಂಡಿದೆ. ವ್ಯಕ್ತಿಗೆ ಸ್ವಭಾವ ಹಾಗೂ ಸ್ವ ಧರ್ಮದನುಸಾರ ನಡೆಯಲು ಅವಕಾಶ ಮಾಡಿಕೊಟ್ಟಾಗ ವ್ಯಕ್ತಿಗೆ ಪರಿಪೂರ್ಣ ಅವಕಾಶಗಳು ಲಭ್ಯವಾಗುತ್ತದೆ. ಈ ಸ್ಥಿತಿಯೇ ನಿಜವಾದ “ವೈಯಕ್ತಿಕ ಸ್ವಾತಂತ್ರ್ಯ’.
-ಸೋಮೇಶ್ವರ್‌ ಗುರುಮಠ, ಪಿಎಚ್‌.ಡಿ ವಿದ್ಯಾರ್ಥಿ, ಬೆಂಗಳೂರು.

ತನ್ನಿಚ್ಛೆಯಂತೆ ಇರುವ ಅಧಿಕಾರ
ಯಾರಿಗೂ ಅಧೀನನಾಗಿ ಇಲ್ಲದಿರುವುದೇ ನಿಜವಾದ ಸ್ವಾತಂತ್ರ್ಯ. ವ್ಯಕ್ತಿಯ ಪ್ರತಿಯೊಂದು ನಿರ್ಧಾರವು ಸ್ವ-ಇಚ್ಛೆಯಿಂದ ಕೂಡಿದ್ದು, ಸ್ವ-ಸಾಮರ್ಥ್ಯ ಹಾಗೂ ಅದೊಂದು ಸ್ವಂತಿಕೆಯ ಪ್ರತಿಬಿಂಬವಾಗಿದ್ದರೆ ಮಾತ್ರ ಆ ವ್ಯಕ್ತಿ ಸ್ವತಂತ್ರನಾಗಿದ್ದಾನೆ ಎಂದರ್ಥ. ಸ್ವಾತಂತ್ರ್ಯವು ದಾಸ್ಯದ ಆಲೋಚನೆಗಳಿಂದ ಹೊರತಾದ ಮನಃಸ್ಥಿತಿ ಎಂಬುದನ್ನು ಮರೆಯಬಾರದು.
ಸ್ವಾತಂತ್ರ್ಯವು ಪರಾಧೀನತೆಯ ಪ್ರತೀಕವಾಗಿದೆ. ದೇಶದ ಸ್ವಾತಂತ್ರ್ಯ ಎಂದರೆ, ದೇಶದ ಸ್ವಾತಂತ್ರ್ಯವು ನಿಗದಿತ ಭೌಗೋಳಿಕ ಚೌಕಟ್ಟಿಗೆ ಸಂಬಂಧಿಸಿದ್ದಾಗಿದೆ. ಆದ್ದರಿಂದ ಒಂದು ನಿಗದಿತ ಭೂ ಪ್ರದೇಶದಲ್ಲಿ ಸ್ವಾರ್ಥವಿಲ್ಲದೇ, ಒಕ್ಕೂಟದ ವ್ಯವಸ್ಥೆಯಲ್ಲಿ, ಪರಸ್ಪರ ಹೊಂದಾಣಿಕೆಯಿಂದ ತನ್ನ ಇಚ್ಛೆಯಿಂದ ಇರುವ ಅಧಿಕಾರವಾಗಿದೆ. ವೈಯಕ್ತಿಕ ಸ್ವಾತಂತ್ರ್ಯ ಎಂದರೆ, ಹಮ್ಮು ಬಿಮ್ಮಗಳಿಲ್ಲದ, ಡಾಂಭಿಕತನಕ್ಕೆ ಜಾರದೇ, ಕಪಟವಿಲ್ಲದ ಜೀವನದ ಒಂದು ಮನಃಸ್ಥಿತಿ.
-ಅಂಜನಾದ್ರಿ, ನಿವೃತ್ತ ತೋಟಗಾರಿಕೆ ಉಪನಿರ್ದೇಶಕ, ಬೆಂಗಳೂರು

ದಬ್ಬಾಳಿಕೆಯಿಂದ ಮುಕ್ತಿ ದೊರೆಯಬೇಕು
ಬೇರೆಯವರು ನಮ್ಮ ಮೇಲೆ ಮಾಡುತ್ತಿರುವ ದೌರ್ಜನ್ಯ, ದರ್ಪ, ದಬ್ಟಾಳಿಕೆಯಿಂದ ವಿಮುಕ್ತಿಗೊಳಿಸಿ, ದೇಶದಲ್ಲಿರುವ ಸರ್ವರಿಗೂ ಸಹಜ ಜೀವನ ನಡೆಸಲು ಕಲ್ಪಿಸುವ ಅವಕಾಶವೇ ನಿಜವಾದ ಸ್ವಾತಂತ್ರ್ಯ. ದೇಶವನ್ನು ಪರಕೀಯರ ಆಡಳಿತದಿಂದ ಸಂಪೂರ್ಣವಾಗಿ ಮುಕ್ತಿಗೊಳಿಸಿ, ದೇಶದ ಪ್ರತಿಯೊಬ್ಬ ವಾಸಿಗೂ ಸಿಗುವ ಹಕ್ಕು, ಸಮಾನತೆ, ಗೌರವದ ಬದುಕನ್ನು ನೀಡುವ ಸುವರ್ಣ ಸಮಯ ಎಲ್ಲರದಾಗಬೇಕು. ಪ್ರಕೃತಿಯಲ್ಲಿರುವ ಪ್ರತಿಯೊಂದು ಜೀವಿಗೂ ಸಂವಿಧಾನದ ಪ್ರಕಾರ ಸಿಗುವ ಹಕ್ಕುಗಳನ್ನು ನೀಡಿ, ತಮ್ಮ ಇಚ್ಛೆಯಿಂದ ಜೀವನವನ್ನು ನಡೆಸಲು ಅವಕಾಶ ಒದಗಿಸುವುದು ಹಾಗೂ ದೇಶದ ಯಾವುದೇ ಮೂಲೆಯಲ್ಲಾದರೂ ಅವರು ಜೀವಿಸಲು ಅವಕಾಶ ಇರುವುದೇ ವೈಯಕ್ತಿಕ ಸ್ವಾತಂತ್ರ್ಯ. ಇದರಿಂದ ನಾವೆಲ್ಲರೂ ಒಂದು ಎಂಬ ಭಾವನೆ ಒಡಮೂಡುತ್ತದೆ. ಸಹೋದರತ್ವದಿಂದಾಗಿ ಸಹಜೀವನ ಸಾಧ್ಯವಾಗುತ್ತದೆ.
-ಜೆನಿಷಾ .ಎನ್‌. 9 ನೇ ತರಗತಿ, ಚಿಂತಾಮಣಿ, ಚಿಕ್ಕಬಳ್ಳಾಪುರ ಜಿಲ್ಲೆ

ಗೌರವಯುತ ಬದುಕಿನ ಪಯಣ…
ಯಾವುದೇ ದೇಶ ಮತ್ತು ವ್ಯಕ್ತಿ ಗುಲಾಮತನಕ್ಕೆ ಒಳಗಾಗದೆ ಮುಕ್ತವಾಗಿ ಗೌರವಯುತ ಬದುಕನ್ನು ಸಾಗಿಸುವಂಥದ್ದೇ ನಿಜವಾದ ಸ್ವಾತಂತ್ರ್ಯ. ಇಡೀ ದೇಶವೇ ಒಂದು. ನಾವೆಲ್ಲರೂ ಭಾರತೀಯರು ಎಂದೇ ಎಲ್ಲ ರಾಜ್ಯ, ಕೇಂದ್ರಾಡಳಿತ ಪ್ರದೇಶಗಳು ಒಟ್ಟಾಗಿ ಅಖಂಡತೆ ಮತ್ತು ದೇಶದ ಸಾರ್ವ ಭೌಮತ್ವ ಎತ್ತಿ ಹಿಡಿಯುವ ಮುಕ್ತ ಸ್ವಾತಂತ್ರ್ಯ ಇರಬೇಕು. ಪ್ರತಿಯೊಬ್ಬ ನಾಗರಿಕರಿಗೆ ಸಂವಿಧಾನ ವೈಯಕ್ತಿಕ ಸ್ವಾತಂತ್ರ್ಯ ಕಲ್ಪಿಸಿದೆ. ಆದರೆ ಪ್ರಸ್ತುತ ಕೆಲವು ಕ್ಷೇತ್ರದಲ್ಲಿ ವಾಸ್ತವತೆಯನ್ನು ಗಮನಿಸಿದಲ್ಲಿ ಕೆಲವರಿಗೆ ವೈಯಕ್ತಿಕ ಸ್ವಾತಂತ್ರ್ಯ ದೂರವೇ ಉಳಿದಿದೆ. ಎಲ್ಲರಿಗೂ ವೈಯಕ್ತಿಕ ಸ್ವಾತಂತ್ರ್ಯ ಅತ್ಯಂತ ಮುಖ್ಯ. ವೈಯಕ್ತಿಕ ಸ್ವಾತಂತ್ರ್ಯದ ನೆಲೆಯಲ್ಲಿ ಸ್ವೇಚ್ಛಾಚಾರಕ್ಕೆ ಅವಕಾಶವಿಲ್ಲ. ದೇಶದ ಏಳಿಗೆಗೆ ಪರವಾದ ನಡವಳಿಕೆಯನ್ನು ಪ್ರದರ್ಶಿಸಬೇಕಾದದ್ದೂ ಎಲ್ಲರ ಜವಾಬ್ದಾರಿ ಮತ್ತು ಕರ್ತವ್ಯವಾಗಿರುತ್ತದೆ ಎಂಬುದನ್ನು ಮರೆಯಬಾರದು.
-ಸುನೀತಾ ಪ್ರಕಾಶ್‌, ಸಾಹಿತಿ, ದಾವಣಗೆರೆ

ಎಲ್ಲರೂ ಮುಕ್ತವಾಗಿ ಬದುಕಬೇಕು
ಸ್ವಾತಂತ್ರ್ಯ ಅನ್ನುವುದು ವೈಯಕ್ತಿಕ ಬೆಳವಣಿಗೆಗೆ ಅಡ್ಡಿಯಾಗುವಂಥ ಯಾವುದೇ ಅಂಶಗಳಿಂದ ಮುಕ್ತವಾದ ಸ್ಥಿತಿ. ದೇಶದ ಏಕತೆ, ದೇಶದ ಅಭಿವೃದ್ಧಿಗೆ ಮಾರಕವಾಗುವ ನಡವಳಿಕೆಗಳನ್ನು ಹೊರತು ಪಡಿಸಿ ಪ್ರತಿಯೊಬ್ಬರೂ ಮುಕ್ತವಾಗಿ ಬದುಕುವುದೇ ಸ್ವಾತಂತ್ರ್ಯ. ಈಗಲೂ ನಮ್ಮಲ್ಲಿ ಬಹಳಷ್ಟು ಮಲ್ಟಿ ನ್ಯಾಶನಲ್‌ ಕಂಪೆನಿಗಳು ಭಾರತದಲ್ಲಿ ತಮ್ಮ ಅಸ್ತಿತ್ವವನ್ನು ಹೊಂದಿರುವುದು ದೇಶದ ಆರ್ಥಿಕ ಅಭಿವೃದ್ಧಿಗೆ ಪೂರಕವಾದರೂ ಎಲ್ಲೋ ಒಂದು ಕಡೆ ದಾಸ್ಯಕ್ಕೆ ಒಳಗಾಗುತ್ತಿದ್ದೇವೆ ಎಂಬ ಭಾವನೆ ಮನಸ್ಸಿನಲ್ಲಿ ಮೂಡುತ್ತದೆ. ಒಬ್ಬ ವ್ಯಕ್ತಿ ಆತ್ಮಗೌರವವನ್ನು ಉಳಿಸಿಕೊಂಡು ಬದುಕುವುದಕ್ಕೆ ಯಾವುದೇ ಅಡ್ಡಿಗಳು ಇರದೆ ಇರುವುದೇ ವೈಯಕ್ತಿಕ ಸ್ವಾತಂತ್ರ್ಯ. ಒಂದು ಉದಾಹರಣೆ ಹೇಳುವುದಾದರೆ ಒಬ್ಬ ಸ್ತ್ರೀ ಆಕೆ ಸ್ತ್ರೀ ಎಂಬ ಕಾರಣಕ್ಕೆ ತನ್ನ ಮೇಲಾಗುತ್ತಿರುವ ದೌರ್ಜನ್ಯವನ್ನು ಮುಕ್ತವಾಗಿ ವಿರೋಧಿಸುವುದು.
-ಸಮೃದ್ಧಿ, 7ನೇ ತರಗತಿ, ಸರಕಾರಿ ಪ್ರಾಥಮಿಕ ಶಾಲೆ , ಶಿವಮೊಗ್ಗ

ಸ್ವಾತಂತ್ರ್ಯಕ್ಕೂ ಸ್ವೇಚ್ಛೆಗೂ ವ್ಯತ್ಯಾಸವಿದೆ
ಜೀವನಾವಶ್ಯಕತೆಗಳೆಲ್ಲವೂ ಸಮಯ ಸಮಯಕ್ಕೆ ಕೈಸೇರಿದ ಮಾತ್ರಕ್ಕೆ ನಾವು ಸ್ವತಂತ್ರರು ಎನ್ನಲಾಗದು. ಆ ಸೌಕರ್ಯಗಳನ್ನು ಅನುಭೋಗಿ ಸುವ ಮುಕ್ತತೆಯೂ ಬೇಕಲ್ಲವೇ? ಯಾವ ವಿಷಯದಲ್ಲೂ ಇನ್ನೊಬ್ಬರ ಹಂಗು-ಪ್ರಭಾವಗಳಿಗೆ ವಶವಾಗದೆ, ತನ್ನಷ್ಟಕ್ಕೆ ನಿಶ್ಚಿಂತನಾಗಿ ಬದುಕುವಂತಾದರೆ ಅದುವೇ ಸ್ವಾತಂತ್ರ್ಯ. ಇಲ್ಲಿ ನಿರಾತಂಕವಾದ ಅಭಿವ್ಯಕ್ತಿಗಷ್ಟೇ ಆಸ್ಪದವಿರುತ್ತದೆ. ಹಾಗೆಂದು ಬೇಕಾಬಿಟ್ಟಿಯಾಗಿ ಮನಸೋಇಚ್ಛೆ ದಿನಗಳೆಯುವುದು ಸ್ವಾತಂತ್ರ್ಯವಲ್ಲ. ಸ್ವಾತಂತ್ರ್ಯಕ್ಕೂ, ಸ್ವೇಚ್ಛೆಗೂ ವ್ಯತ್ಯಾಸವಿದೆ. ಮಣ್ಣು, ಮಳೆ, ಗಾಳಿಯಲ್ಲಿ ಸಮಪಾಲಿರುವಂತೆ ಅವಕಾಶ -ಅನುಕೂಲಗಳೆರಡೂ ಪ್ರತಿಯೊಬ್ಬರಿಗೂ ಸುಲಭಸಾಧ್ಯವಾಗಬೇಕು. ನಾನೊಬ್ಬನೇ ಬದುಕುತ್ತೇನೆ ಎಂದರೆ ಅದು ಸ್ವಾರ್ಥ. ನಮ್ಮ ಸ್ವಾತಂತ್ರ್ಯದ ಪರಿಕಲ್ಪನೆಯಲ್ಲಿ ನಮ್ಮಂತೆಯೇ ಇತರರೂ ನೆಮ್ಮದಿಯಿಂದ ಬದುಕಬೇಕೆಂಬ ಸದಾಶಯವಿರಬೇಕು. ಇದರಿಂದ ರಾಷ್ಟ್ರದ ಹಿತರಕ್ಷಣೆಯೂ ಸಾಧ್ಯ.
-ಡಾ| ಅರುಣ್‌ ಉಳ್ಳಾಲ್‌, ಪ್ರಾಧ್ಯಾಪಕರು, ಮಂಗಳೂರು

ಸಮಾನತೆ ಬಂದಾಗಲೇ ಸ್ವಾತಂತ್ರ್ಯ
ಸ್ವಾತಂತ್ರ್ಯ ಎಂದರೆ ಭಾರತ ದೇಶದಲ್ಲಿ ಪ್ರತಿಯೊಬ್ಬರೂ ಮುಕ್ತವಾಗಿ, ನ್ಯಾಯ ಸಮ್ಮತವಾಗಿ, ನಿರ್ಭೀತಿಯಿಂದ ಬದುಕುವುದೇ ಸ್ವಾತಂತ್ರ್ಯ. ಸಾಮಾಜಿಕ, ರಾಜಕೀಯ, ಆರ್ಥಿಕ, ಶೆ„ಕ್ಷಣಿಕ, ಧಾರ್ಮಿಕ ಹಾಗೂ ಸಾಂಸ್ಕೃತಿಕವಾದ ಮೌಲ್ಯಗಳು ಪ್ರತಿಯೊಬ್ಬರಿಗೆ ದೊರೆಕಿದರೆ ಸ್ವಾವಲಂಬನೆ ಬಲಿಷ್ಠ ದೇಶವಾಗುತ್ತದೆ. ನಮ್ಮ ರಾಷ್ಟ್ರದಲ್ಲಿ ಪ್ರತಿಯೊಬ್ಬರ ಸರ್ವಾಂಗೀಣ ಅಭಿವೃದ್ಧಿ ಆಗಬೇಕು. ಮೂಲಭೂತವಾದ ಹಕ್ಕುಗಳು ದೊರೆಯಬೇಕು. ಎಲ್ಲರನ್ನೂ ಸಮಾನತೆಯ ಮನೋಭಾವದಿಂದ ಕಾಣಬೇಕು. ಸಮಪಾಲು, ಸಮ ಬಾಳು ತಣ್ತೀವು ಅನುಷ್ಠಾನಗೊಳ್ಳಬೇಕು. ಎಲ್ಲರಿಗೂ ಸರಿಯಾಗಿ ಆಹಾರ, ಬಟ್ಟೆ, ವಸತಿ ಸಿಗಬೇಕು. ಜಾತಿ, ಮತ, ಪಂಥ, ವರ್ಣಗಳಿಂದ ಮುಕ್ತವಾಗಬೇಕು. ಪುರುಷ-ಮಹಿಳೆಯರಲ್ಲಿ ಸಮಾನತೆ ಇರಬೇಕು. ದೇಶದಲ್ಲಿ ಯಾವುದೇ ರೀತಿಯ ಭೇದಭಾವ ಮಾಡಬಾರದು.
-ವರ್ಷಾ ಕೋಳಿ, ಬಿಸಿಎ ವಿದ್ಯಾರ್ಥಿನಿ, ಬೆಳಗಾವಿ

ಅತಿಯಾದ ಕಟ್ಟುಪಾಡುಗಳು ಬೇಡ
ಒಬ್ಬ ವ್ಯಕ್ತಿ, ರಾಜ್ಯ ಅಥವಾ ದೇಶವು ಇನ್ನೊಬ್ಬ ವ್ಯಕ್ತಿ, ದೇಶ, ರಾಜ್ಯದ ನಿರ್ಬಂಧಕ್ಕೆ ಒಳಪಡದೇ ಇರಲು ಸಾಧ್ಯವಾದರೆ ಅದೇ ಸ್ವಾತಂತ್ರ್ಯ. ಸ್ವಾತಂತ್ರ್ಯ ಪ್ರತೀ ವ್ಯಕ್ತಿಗೂ ಅತೀ ಮುಖ್ಯ. ಸ್ವತಂತ್ರನಾಗಿ ಬದುಕಬೇಕು ಎಂಬುದು ಪ್ರತಿಯೊಬ್ಬರ ಆಸೆಯೂ ಆಗಿರುತ್ತದೆ. ಹಲವು ಕಾರಣದಿಂದ ಸ್ವತಂತ್ರವಾಗಿ ಬದುಕಲು ಸಾಧ್ಯವಾಗದೆಯೂ ಇರಬಹುದು. ಯಾರೂ ಇತರರ ಕೈ ಕೆಳಗೆ ಗುಲಾಮರಾಗಿ ಅವರ ದಬ್ಬಾಳಿಕೆಗೆ ಒಳಗಾಗಲು ಇಷ್ಟ ಪಡುವುದಿಲ್ಲ. ದೇಶವು ಬ್ರಿಟಿಷರ ವಶದಲ್ಲಿದ್ದಾಗ ಭಾರತೀಯರು ಸ್ವಾತಂತ್ರ್ಯವನ್ನು ಕಳೆದುಕೊಂಡು ಗುಲಾಮರಾಗಿದ್ದರು. ಆ ಪರಿಸ್ಥಿತಿಯಿಂದ ದೇಶ ಹೊರಬರಲು ಹಲವು ರೀತಿಯ ಹೋರಾಟಗಳು ನಡೆದಿವೆ. ದೇಶದ ಸ್ವಾತಂತ್ರ್ಯದಿಂದ ವ್ಯಕ್ತಿ ಸ್ವಾತಂತ್ರ್ಯವೂ ಲಭಿಸಿದೆ. ದೇಶ ಸ್ವತಂತ್ರವಾಗಿದ್ದಾಗ ಮಾತ್ರ ಅಲ್ಲಿರುವ ಪ್ರಜೆಗಳು ಸ್ವತಂತ್ರರಾಗಿ ಬದುಕಲು ಸಾಧ್ಯ. ವೈಯಕ್ತಿಕ ಸ್ವಾತಂತ್ರ್ಯದ ಕುರಿತು ಅಸ್ಪಷ್ಟತೆ, ಅತಿಯಾದ ಕಟ್ಟುಪಾಡುಗಳು ಅಪಾಯ ತಂದೊಡ್ಡುವ ಸಾಧ್ಯತೆಯೂ ಇದೆ. ಹಾಗಾಗಿ, ವೈಯಕ್ತಿಕ ಸ್ವಾತಂತ್ರ್ಯಕ್ಕೆ ಯಾವುದೇ ಕಟ್ಟುಪಾಡುಗಳು ಇರಬಾರದು.
-ತನುಶ್ರೀ ಎಸ್‌. 10ನೇ ತರಗತಿ, ಸರಕಾರಿ ಪ್ರೌಢಶಾಲೆ, ಉಡುಪಿ

ಹಕ್ಕುಗಳನ್ನು ಅನುಭವಿಸುವ ಅವಕಾಶ
ದೇಶದ ಸ್ವಾತಂತ್ರ್ಯ ನಮ್ಮನ್ನು ರಕ್ಷಣೆ ಮಾಡುತ್ತದೆ. ಶಿಕ್ಷಣ, ವ್ಯಾಪಾರ, ವ್ಯವಹಾರ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ನಮ್ಮ ದೇಶದ ಆಡಳಿತಕ್ಕೆ ಒಳಪಟ್ಟು ಬದುಕಲು ಅವಕಾಶ ಕಲ್ಪಿಸಿರುವುದಾಗಿದೆ. ಅದು ಇದ್ದಲ್ಲಿ ಮಾತ್ರವೇ ದೇಶದಲ್ಲಿ ಜೀವನ ನಡೆಸಲು ಸಾಧ್ಯವಿದೆ. ದೇಶದ ಸ್ವಾತಂತ್ರ್ಯದಿಂದ ಸರ್ವ ಮತ್ತು ಸರ್ವರ ಏಳಿಗೆ ಸಾಧ್ಯ ಎಂಬುದನ್ನು ಮರೆಯಬಾರದು. ವೈಯಕ್ತಿಕ ಸ್ವಾತಂತ್ರ್ಯ ಎಂದರೆ ನಮಗೆ ಒದಗಿಸಲಾಗಿರುವ ಮೂಲಭೂತ ಹಕ್ಕುಗಳನ್ನು ಅನುಭವಿಸಲು ಅವಕಾಶ ಕಲ್ಪಿಸುವುದಾಗಿದೆ ಹಾಗೂ ಯಾವುದೇ ಅಡ್ಡಿ ಆತಂಕಗಳು ಎದುರಾಗದೇ ಜೀವಿಸುವುದಾಗಿದೆ. ಭಯ ಮುಕ್ತ ಸಮಾಜ ಸ್ಥಿತಿಯೂ ಇದರಡಿ ಬರುತ್ತದೆ. ದೇಶದ ಸ್ವಾತಂತ್ರ್ಯ ಮತ್ತು ವೈಯಕ್ತಿಕ ಸ್ವಾತಂತ್ರ್ಯ ಇವೆರಡೂ ಪರಸ್ಪರ ಕೊಂಡಿ ಇದ್ದಂತೆ. ಈ ಪೈಕಿ ಒಂದು ಕೊಂಡಿ ಕಳಚಿದರೂ ಸ್ವಾತಂತ್ರ್ಯಕ್ಕೆ ಧಕ್ಕೆ ಎದುರಾಗುತ್ತದೆ. ಇದನ್ನು ದೇಶದ ಪ್ರತಿಯೊಬ್ಬ ಪ್ರಜೆ ಅರ್ಥೈಸಿಕೊಂಡು ಬಾಳ್ವೆ ನಡೆಸಿದಾಗಲಷ್ಟೇ ವೈಯಕ್ತಿಕವಾಗಿ ನೆಮ್ಮದಿಯ ಜೀವನ ನಡೆಸಲು ಸಾಧ್ಯ, ಹಾಗಾದಾಗ ದೇಶವೂ ಸಮೃದ್ಧಿಯ ಪಥದಲ್ಲಿ ಮುನ್ನಡೆಯಬಲ್ಲುದು.
-ಎಂ.ಕೆ. ಕುಕ್ಕಾಜೆ, ಹಿರಿಯ ನಾಗರಿಕರು, ವಿಟ್ಲ, ದ.ಕ.ಜಿಲ್ಲೆ

ಜವಾಬ್ದಾರಿ ನಿರ್ವಹಣೆಯೇ ಮುಖ್ಯ
ಸ್ವಾತಂತ್ರ್ಯವು ನಾಗರಿಕ ಸುಸಂಸ್ಕೃತಿಯ ಜೀವಾಳ. ಸ್ವಾತಂತ್ರ್ಯವಿಲ್ಲದ ಜೀವನ ಎಂದರೆ ಘನತೆ ಗೌರವವಿಲ್ಲದ ಬರಡು ಭೂಮಿಯಂತೆ. ಮನೋ ನಿರ್ಧಾರಗಳಿಗೆ ಅನುಸಾರವಾಗಿ ಕಾರ್ಯ ಪ್ರವೃತ್ತವಾಗುವ ಶಕ್ತಿ ಸಾಮರ್ಥ್ಯ ಸ್ವಾತಂತ್ರ್ಯದಿಂದ ಸಾಧ್ಯ. ದೇಶದ ಸ್ವಾತಂತ್ರ್ಯ ಮತ್ತು ವೈಯಕ್ತಿಕ ಸ್ವಾತಂತ್ರ್ಯ ಎರಡೂ ಪ್ರಸ್ತುತ ಸಮಾಜದ ಶ್ರೇಷ್ಠ ಗುಣಮಟ್ಟವನ್ನು ಪ್ರತಿನಿಧಿಸುತ್ತವೆ. ಇವು ಪರಸ್ಪರ ಸಂಬಂಧ ಹೊಂದಿದ್ದು, ಒಂದು ಇನ್ನೊಂದರ ಮೇಲೆ ಪ್ರಭಾವ ಬೀರುತ್ತದೆ. ದೇಶದ ಸ್ವಾತಂತ್ರ್ಯವು ರಾಷ್ಟ್ರದ ರಾಜಕೀಯ, ಆರ್ಥಿಕ ಮತ್ತು ಸಾಂಸ್ಕೃತಿಕ ಹಕ್ಕುಗಳ ಅನುಸರಣೆ ಮತ್ತು ನಿರ್ವಹಣೆಯ ಅಧಿಕಾರವನ್ನು ಒಳಗೊಂಡಿರುತ್ತದೆ. ವೈಯಕ್ತಿಕ ಸ್ವಾತಂತ್ರ್ಯ ವ್ಯಕ್ತಿಚಿಂತನೆ, ಅಭಿಪ್ರಾಯಗಳಿಗೆ ಸಂಬಂಧಿಸಿದ್ದು. ಇದರಿಂದ ಸಮರ್ಥ ವ್ಯಕ್ತಿತ್ವ ಬೆಳೆಸಲು, ಗುರಿ ಸಾಧನೆಯ ಮೂಲಕ ಸಾಮಾಜಿಕ ಅಭಿವೃದ್ಧಿಗೆ ಪೂರಕವಾಗುತ್ತದೆ. ಸ್ವಾತಂತ್ರ್ಯದೊಳಗೆ ಜವಾಬ್ದಾರಿಯೂ ಇದೆ. ಮನುಷ್ಯನು ವಿವೇಚನೆಯಿಂದ ವ್ಯಕ್ತಿ ಸ್ವಾತಂತ್ರ್ಯವನ್ನು ಸಾಕ್ಷಾತ್ಕರಿಸಿಕೊಂಡು, ಇವುಗಳ ಸಮನ್ವಯದಿಂದ ಸಮಾಜದ ಪ್ರಗತಿ, ಸಮೃದ್ಧಿ ಸಾಧ್ಯ.
-ದಿವ್ಯಶ್ರೀ ಜಗದೀಶ್‌ ಪೈ, ಸಂಸ್ಕೃತ ಉಪನ್ಯಾಸಕಿ, ಉಡುಪಿ

ವ್ಯಕ್ತಿ, ವ್ಯಕ್ತಿತ್ವಕ್ಕೆ ಬೆಲೆ ಸಿಗಬೇಕು
ಸ್ವಾತಂತ್ರ್ಯ ಎಂದರೆ ಪ್ರತಿಯೊಬ್ಬರಿಗೂ ಸಮಾನತೆ ದೊರೆಯಬೇಕು. ಪ್ರತಿಯೊಬ್ಬರೂ ತ್ಯಾಗ ಮನೋಭಾವ ಬೆಳೆಸಿಕೊಳ್ಳಬೇಕು, ನಾವೆಲ್ಲರೂ ಭಾರತೀಯರು ಎನ್ನುವ ಭಾವನೆ ಮೂಡಬೇಕು. ಸೇನೆಯಲ್ಲಿ ಈಶ್ವರ, ದುರ್ಗೆ, ಅಲ್ಲಾ, ಏಸು, ದರ್ಗಾ ಎಲ್ಲವೂ ಒಂದರ ಪಕ್ಕ ಒಂದು ಇದ್ದು, ನಮ್ಮ ರಾಷ್ಟ್ರದ ಐಕ್ಯತೆಯನ್ನು ವಿಶ್ವಕ್ಕೆ ನಾವು ಭಾರತೀಯರು “ಹೀಗೆ’ ಎಂಬುದನ್ನು ತೋರಿಸುತ್ತದೆ. ಅದರಂತೆ, ನಮ್ಮ ತುಂಬೆ ನಾಡು ಚಿಕ್ಕನಾಯ್ಕನಹಳ್ಳಿಯಲ್ಲಿ ನಡೆಯುವ ತಾತಯ್ಯನ ಉರೂಸ್‌ ಮತ್ತು ಸಿದ್ಧಗಂಗೆಯಲ್ಲಿ ನಡೆಯುವ ಜಾತ್ರೆ ವಿಶ್ವಕ್ಕೆ ವಾಸ್ತವಿಕ ಪ್ರಜ್ಞೆ ಬೆಳಗಿಸಿ, ಮೈಸೂರಿನ ಚಾಮುಂಡಿ ಹಾಗೂ ಸಿದ್ಧಗಂಗಾ ಮಠದ ಡಾ| ಶ್ರೀ ಶಿವಕುಮಾರ ಸ್ವಾಮೀಜಿ ಸ್ವತಂತ್ರ ಹಾಗೂ ಸ್ವಾತಂತ್ರÂಕ್ಕೆ ಮನ್ನಣೆಯಲ್ಲವೇ!. ನನಗೆ ಇಷ್ಟ ಆಗಿದ್ದನ್ನು ಮಾಡುವ ಸ್ವಾತಂತ್ರ್ಯಇರಬೇಕು, ವ್ಯಕ್ತಿ ವ್ಯಕ್ತಿತ್ವಕ್ಕೆ ಬೆಲೆ ಸಿಗಬೇಕು. ಇದರಲ್ಲಿ ಯಾವುದೇ ಅಡ್ಡಿ ಆತಂಕಗಳು ಇರಬಾರದು.
-ಪ್ರೊ| ಟಿ.ಆರ್‌. ಲೀಲಾವತಿ, ನಿವೃತ್ತ ಪ್ರಾಂಶುಪಾಲರು, ತುಮಕೂರು

ಇನ್ನೊಬ್ಬರಿಗೆ ತೊಂದರೆಯಾಗಬಾರದು
ಸ್ವಾತಂತ್ರ್ಯ ಎಂಬುದು ಹಕ್ಕು ಮತ್ತು ಕರ್ತವ್ಯಗಳ ಸಮ್ಮಿಲನ. ಒಬ್ಬ ಆಸೆ, ಆಕಾಂಕ್ಷೆ, ಅಭಿರುಚಿ ಇತರರಿಗೆ ತೊಂದರೆಯಾಗದಂತೆ ಅನು ಭವಿಸುವ ಅವಕಾಶವೇ ಸ್ವಾತಂತ್ರ್ಯ. ನಮ್ಮ ದೇಶ ಪರಕೀಯ ರಿಂದ ಸ್ವಾತಂತ್ರ್ಯಗೊಂಡಿದೆಯಾದರೂ ಇಂದಿಗೂ ಜಾತಿ, ಮತ, ಧರ್ಮ, ಪ್ರಾದೇಶಿಕತೆಯಂತಹ ಅಡಚಣೆಗೆ ಸಿಲುಕಿ ನರಳುತ್ತಿದೆ. ಈ ಅಡಚಣೆಗಳನ್ನು ನಿರ್ಮೂಲನ ಮಾಡಿ ಇಡೀ ದೇಶ ಮುಕ್ತವಾಗಿ ಅಭಿವೃದ್ಧಿ ಹೊಂದುವ ವಾತಾವರಣ ನಿರ್ಮಿಸಬೇಕಿದ್ದು, ಇಂತಹ ವಾತಾವರಣ ನಿರ್ಮಾಣ ಮಾಡುವುದೇ ದೇಶದ ಸ್ವಾತಂತ್ರ್ಯವಾಗಿದೆ. ಜನತೆ ಮುಕ್ತವಾಗಿ ಬದುಕಲು ಇರುವ ಇತಿಮಿತಿಗಳನ್ನು ತೊಡೆದುಹಾಕಿ ಎಲ್ಲರಿಗೂ ಸಮಾನ ಅವಕಾಶ ದೊರಕಿಸಿಕೊಡುವುದು ವೈಯಕ್ತಿಕ ಸ್ವಾತಂತ್ರ್ಯ. ಸಂಪತ್ತು ಕೆಲವರ ಬಳಿ ಸಂಗ್ರಹವಾಗಿ ಹಲವರು ವಂಚಿತರಾಗಿದ್ದಾರೆ. ಎಲ್ಲರೂ ಸಮಾನ ಅವಕಾಶ ಪಡೆಯಲು ಇದು ಮಿತಿಯಾಗಿ ಪರಿಣಮಿಸಿದೆ. ಈ ಮಿತಿಯನ್ನು ತೊಡೆದುಹಾಕುವ ಕೆಲಸ ಮಾಡಿದಾಗ ವ್ಯಕ್ತಿ ಸ್ವಾತಂತ್ರ್ಯ ಕಲ್ಪಿಸಿದಂತಾಗುತ್ತದೆ.
ಪ್ರೊ| ಎಂ.ಶಿವನಂಜಯ್ಯ, ಸಾಹಿತಿ, ರಾಮನಗರ

ಒಕ್ಕೂಟ ವ್ಯವಸ್ಥೆ ಬಲಶಾಲಿಯಾಗಲಿ..
ದೇಶದ ಅಖಂಡತೆ ಹಾಗೂ ಸಮಗ್ರತೆಗೆ ಕಿಂಚಿತ್ತೂ ಧಕ್ಕೆ ಬಾರದಂತೆ ನಮ್ಮ ಕೆಲಸ ಕಾರ್ಯಗಳನ್ನು ಯಾವುದೇ ಅಡೆತಡೆಯಿಲ್ಲದೇ ಮುಕ್ತವಾಗಿ ನಿರ್ಭೀತಿಯಿಂದ ಮಾಡುವುದೇ ಸ್ವಾತಂತ್ರ್ಯ.ಭಾರತ ಒಕ್ಕೂಟದ ವ್ಯವಸ್ಥೆ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ದೇಶದಲ್ಲಿ ಸ್ವಾತಂತ್ರ್ಯವು ಸದೃಢವಾಗಿ ಇನ್ನೂ ಆಳವಾದ ಬೇರನ್ನು ಬಿಡಬೇಕಾದರೆ ಎಲ್ಲ ರಾಜ್ಯಗಳು ಸಮನ್ವಯದಿಂದ ಕಾರ್ಯತಂತ್ರಗಳನ್ನು ರೂಪಿಸಿಕೊಂಡು ಕೇಂದ್ರ ಸರಕಾರದ ನೀತಿ ನಿಯಮಗಳಿಗೆ ಗೌರವ ಕೊಟ್ಟು ಆಡಳಿತ ನಡೆಸಬೇಕು. ಆಗ ದೇಶದ ಸ್ವಾತಂತ್ರ್ಯ ಇನ್ನೂ ಗಟ್ಟಿಯಾಗುತ್ತದೆ. ಭಾರತೀಯ ನಾಗರಿಕರಾಗಿ ಸಂವಿಧಾನದ ಅಡಿಯಲ್ಲಿ ಇರುವ ಸೌಲಭ್ಯಗಳನ್ನು ಬಳಕೆ ಮಾಡಿಕೊಂಡು ಸಮಾಜದಲ್ಲಿ ಧಾರ್ಮಿಕ, ಸಾಮಾಜಿಕ ಹಾಗೂ ಸಂವಿಧಾನದ ಚೌಕಟ್ಟಿನಲ್ಲಿ ಯಾವುದೇ ಅಡೆತಡೆ ಇಲ್ಲದೆ ಮುಕ್ತವಾಗಿ ಜೀವಿಸುವುದೇ ವೈಯಕ್ತಿಕ ಸ್ವಾತಂತ್ರ್ಯವಾಗಿದೆ.
-ರವೀಂದ್ರ ಎಚ್‌.ಆರ್‌. ಪದವಿ ವಿದ್ಯಾರ್ಥಿ, ಮೈಸೂರು

ಟಾಪ್ ನ್ಯೂಸ್

Udayavani.com “ನಮ್ಮನೆ ಕೃಷ್ಣ”: ಮೆಚ್ಚುಗೆ ಗಳಿಸಿದ 10ನೇ ರೀಲ್ಸ್ ಪ್ರಸಾರ

Udayavani.com “ನಮ್ಮನೆ ಕೃಷ್ಣ”: ಮೆಚ್ಚುಗೆ ಗಳಿಸಿದ 10ನೇ ರೀಲ್ಸ್ ಪ್ರಸಾರ

akhilesh

Akhilesh Yadav ಗಂಭೀರ ಆರೋಪ: ಅಯೋಧ್ಯೆಯಲ್ಲಿ ಭಾರೀ ಭೂ ಹಗರಣ

1-sadsadasd

Ganesh festival; ಡೋಲು-ತಾಸೆಯವರ ಸಂಖ್ಯೆಗೆ NGT ನಿರ್ಬಂಧಕ್ಕೆ ಸುಪ್ರೀಂ ತಡೆ

Jawan‌ Movie: ಜಪಾನ್‌ನಲ್ಲಿ ಈ ದಿನ ರಿಲೀಸ್‌ ಆಗಲಿದೆ ಶಾರುಖ್‌ – ಅಟ್ಲಿ ʼಜವಾನ್‌ʼ

Jawan‌ Movie: ಜಪಾನ್‌ನಲ್ಲಿ ಈ ದಿನ ರಿಲೀಸ್‌ ಆಗಲಿದೆ ಸೂಪರ್‌ ಹಿಟ್ ʼಜವಾನ್‌ʼ

Good News: ಶೀಘ್ರದಲ್ಲಿ ಪೆಟ್ರೋಲ್‌, ಡೀಸೆಲ್‌ ಬೆಲೆ ಇಳಿಕೆ ಸಾಧ್ಯತೆ? ಪಂಕಜ್‌ ಜೈನ್

Good News: ಶೀಘ್ರದಲ್ಲಿ ಪೆಟ್ರೋಲ್‌, ಡೀಸೆಲ್‌ ಬೆಲೆ ಇಳಿಕೆ ಸಾಧ್ಯತೆ? ಪಂಕಜ್‌ ಜೈನ್

1-ffsdf

Chikkaballapur ನಗರಸಭೆ ಕೋಲಾಹಲ; ಡಾ.ಸುಧಾಕರ್ ಮೇಲುಗೈ: ಸವಾಲು ಹಾಕಿದ ಪ್ರದೀಪ್ ಈಶ್ವರ್!

HDK

Nagamangala Riots: ಗಲಭೆಗೆ ಕಾಂಗ್ರೆಸ್‌ ಸರಕಾರದ ತುಷ್ಟೀಕರಣ ನೀತಿಯೇ ಕಾರಣ: ಎಚ್‌ಡಿಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Western Ghats ಕಸ್ತೂರಿ ರಂಗನ್‌ ವರದಿ ಯಥಾವತ್‌ ಜಾರಿ ಬೇಡ

Western Ghats ಕಸ್ತೂರಿ ರಂಗನ್‌ ವರದಿ ಯಥಾವತ್‌ ಜಾರಿ ಬೇಡ

Congress ಪಕ್ಷದ‌ಲ್ಲಿ ನಾಯಕತ್ವಕ್ಕಾಗಿ ಗಲಾಟೆ ಇಲ್ಲ

Congress ಪಕ್ಷದ‌ಲ್ಲಿ ನಾಯಕತ್ವಕ್ಕಾಗಿ ಗಲಾಟೆ ಇಲ್ಲ

Today World Suicide Prevention Day ಸಮಸ್ಯೆಗಳಿಗೆ ಆತ್ಮಹತ್ಯೆ ಪರಿಹಾರವಲ್ಲ

Today World Suicide Prevention Day ಸಮಸ್ಯೆಗಳಿಗೆ ಆತ್ಮಹತ್ಯೆ ಪರಿಹಾರವಲ್ಲ

ತೋಳ ಬಂತು ಜೀವ ತಿಂತು! ಉತ್ತರ ಪ್ರದೇಶ, ಮಧ್ಯ ಪ್ರದೇಶದಲ್ಲಿ ತೋಳಗಳ ದಾಳಿ, ಜನರಲ್ಲಿ ಭೀತಿ

ತೋಳ ಬಂತು ಜೀವ ತಿಂತು! ಉತ್ತರ ಪ್ರದೇಶ, ಮಧ್ಯ ಪ್ರದೇಶದಲ್ಲಿ ತೋಳಗಳ ದಾಳಿ, ಜನರಲ್ಲಿ ಭೀತಿ

ganapa

Ganesha Festival: ಇಂದು ಗಣೇಶ ಚತುರ್ಥಿ; ವಿಘ್ನ ನಿವಾರಕ ವಿನಾಯಕ ವಿಶ್ವನಾಯಕನೂ ಹೌದು

MUST WATCH

udayavani youtube

ಕೃಷ್ಣ ಮಠದ ಗಣಪತಿ ವಿಸರ್ಜನೆ ವೇಳೆ ತಾಸೆಯ ಪೆಟ್ಟಿಗೆ ಕುಣಿದು ಕುಪ್ಪಳಿಸಿದ ಭಕ್ತರು|

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

ಹೊಸ ಸೇರ್ಪಡೆ

1-baghi

Hombale Films ಬಹು ನಿರೀಕ್ಷಿತ ಬಘೀರ ಚಿತ್ರದ ರಿಲೀಸ್ ಡೇಟ್ ಘೋಷಣೆ

Road Mishap: ಸ್ಕೂಟಿಗೆ ಬೈಕ್‌ ಡಿಕ್ಕಿ; ಬೈಕ್ ಸವಾರ ಮೃತ್ಯು

Road Mishap: ಸ್ಕೂಟಿಗೆ ಬೈಕ್‌ ಡಿಕ್ಕಿ; ಬೈಕ್ ಸವಾರ ಮೃತ್ಯು

Udayavani.com “ನಮ್ಮನೆ ಕೃಷ್ಣ”: ಮೆಚ್ಚುಗೆ ಗಳಿಸಿದ 10ನೇ ರೀಲ್ಸ್ ಪ್ರಸಾರ

Udayavani.com “ನಮ್ಮನೆ ಕೃಷ್ಣ”: ಮೆಚ್ಚುಗೆ ಗಳಿಸಿದ 10ನೇ ರೀಲ್ಸ್ ಪ್ರಸಾರ

Ronny actress Samikshaa

Ronny ಗೆಲ್ಲುವ ಸಿನಿಮಾ: ನಟಿ ಸಮೀಕ್ಷಾ

akhilesh

Akhilesh Yadav ಗಂಭೀರ ಆರೋಪ: ಅಯೋಧ್ಯೆಯಲ್ಲಿ ಭಾರೀ ಭೂ ಹಗರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.