ಹೈದರಾಬಾದ್-ಪಂಜಾಬ್ ಲಾಸ್ಟ್ ಶೋ; ಇಂದು ಕೊನೆಯ ಲೀಗ್ ಪಂದ್ಯ ; ಕೇವಲ ಔಪಚಾರಿಕ ಮುಖಾಮುಖಿ
Team Udayavani, May 22, 2022, 7:30 AM IST
ಮುಂಬಯಿ: ನಿನ್ನೆ ಮೊನ್ನೆ ಆರಂಭ ವಾದಂತಿದ್ದ 2022ನೇ ಐಪಿಎಲ್ ಪಂದ್ಯಾವಳಿ ರವಿವಾರ ಮಹತ್ವದ ಘಟ್ಟವನ್ನು ಪೂರೈಸಲಿದೆ. 70ನೇ ಹಾಗೂ ಕೊನೆಯ ಪಂದ್ಯದೊಂದಿಗೆ ಲೀಗ್ ಹಂತಕ್ಕೆ ತೆರೆ ಬೀಳಲಿದೆ. ಇಲ್ಲಿ ಎದುರಾಗುವ ತಂಡಗಳೆಂದರೆ ಸನ್‌ರೈಸರ್ ಹೈದರಾಬಾದ್ ಮತ್ತು ಪಂಜಾಬ್ ಕಿಂಗ್ಸ್. ಈಗಾಗಲೇ ಈ ಎರಡೂ ತಂಡಗಳು ಪ್ಲೇ ಆಫ್ ರೇಸ್‌ನಿಂದ ಹೊರಬಿದ್ದಿರುವುದರಿಂದ ಇದರ ಫಲಿತಾಂಶದ ಬಗ್ಗೆ ಯಾರೂ ಕುತೂಹಲ ಹೊಂದಿಲ್ಲ. ಇದು ಲೆಕ್ಕದ ಭರ್ತಿಯ ಮ್ಯಾಚ್, ಅಷ್ಟೇ.
ಗೆಲುವಿನೊಂದಿಗೆ ಗುಡ್‌ಬೈ
ಆದರೆ ಗೆಲುವಿನೊಂದಿಗೆ ಕೂಟಕ್ಕೆ ವಿದಾಯ ಹೇಳುವುದು ಎರಡೂ ತಂಡಗಳ ಗುರಿ ಆಗಿರುವುದರಲ್ಲಿ ಅನುಮಾನವಿಲ್ಲ. ಅಲ್ಲದೇ ಇದು ಪಂಜಾಬ್ ಪಾಲಿಗೆ ಸೇಡಿನ ಪಂದ್ಯವೂ ಹೌದು. ಮೊದಲ ಸುತ್ತಿನ ಮುಖಾಮುಖಿಯಲ್ಲಿ ಹೈದರಾಬಾದ್ 7 ವಿಕೆಟ್‌ಗಳಿಂದ ಪಂಜಾಬನ್ನು ಕೆಡವಿತ್ತು. ಆಗ ಮಾಯಾಂಕ್ ಅಗರ್ವಾಲ್ ಗಾಯಾಳಾದ್ದರಿಂದ ಶಿಖರ್ ಧವನ್ ಪಂಜಾಬ್ ನೇತೃತ್ವ ವಹಿಸಿದ್ದರು. ವೇಗಿ ಉಮ್ರಾನ್ ಮಲಿಕ್ ದಾಳಿಗೆ (4-1-28-4) ಕುಸಿದ ಪಂಜಾಬ್ 151ಕ್ಕೆ ಆಲೌಟ್ ಆಗಿತ್ತು. ಹೈದರಾಬಾದ್ 18.5 ಓವರ್‌ಗಳಲ್ಲಿ ಮೂರೇ ವಿಕೆಟಿಗೆ 152 ರನ್ ಬಾರಿಸಿ ಗೆದ್ದು ಬಂದಿತ್ತು.
ಸತತ ಸೋಲುಗಳ ಕಂಟಕ
ನಿಜಕ್ಕಾದರೆ ಇತ್ತಂಡಗಳಲ್ಲಿ ಪ್ಲೇ ಆಫ್‌ಗೆ ಏರುವ ಉಜ್ವಲ ಅವಕಾಶ ಹೈದರಾಬಾದ್ ಮುಂದಿತ್ತು. ಮೊದಲೆರಡು ಪಂದ್ಯಗಳನ್ನು ಸೋತ ಬಳಿಕ ಅಮೋಘ ರೀತಿಯಲ್ಲಿ ಲಯ ಕಂಡುಕೊಂಡ ಸನ್‌ರೈಸರ್ ಸತತ 5 ಪಂದ್ಯಗಳನ್ನು ಗೆದ್ದು ಟಾಪ್-2 ಗೌರವ ಸಂಪಾದಿಸಿತ್ತು. ಆದರೆ ಮುಂದಿನ ಐದೂ ಪಂದ್ಯಗಳಲ್ಲಿ ಮಣ್ಣುಮುಕ್ಕಿತು. ಮೊನ್ನೆ ಆರ್‌ಸಿಬಿ ಪಡೆ ಗುಜರಾತ್‌ಗೆ ಸೋಲಿನ ಗುದ್ದು ಕೊಟ್ಟ ಬಳಿಕ ಹೈದರಾಬಾದ್ ಜತೆಗೆ ಪಂಜಾಬ್ ಕೂಡ ಗಂಟುಮೂಟೆ ಕಟ್ಟಿತು.
ಹೈದರಾಬಾದ್ ಉತ್ತಮ ದರ್ಜೆಯ ಟಿ20 ಸಂಪನ್ಮೂಲವನ್ನು ಹೊಂದಿದ ತಂಡವಾಗಿತ್ತು ಎಂಬುದರಲ್ಲಿ ಅನುಮಾನವಿಲ್ಲ. ಆದರೆ ನಾಯಕ ಕೇನ್ ವಿಲಿಯಮ್ಸನ್ ಅವರ ಕೈಕೊಟ್ಟ ಫಾರ್ಮ್ ತಂಡಕ್ಕೆ ದೊಡ್ಡ ಹಿನ್ನಡೆಯಾಗಿ ಪರಿಣಮಿಸಿತು. ಅಲ್ಲದೇ ಅವರು ಓಪನಿಂಗ್ ಬಂದು ಬೇಗ ಔಟಾಗಿ ಹೋಗುತ್ತಿದ್ದುದರಿಂದ ತಂಡ ಆರಂಭಿಕ ಒತ್ತಡಕ್ಕೆ ಸಿಲುಕಿತು.
ಹೊಡಿಬಡಿ ಆಟಗಾರ ಅಬ್ದುಲ್ ಸಮದ್ ವೈಫಲ್ಯ ಹೈದರಾಬಾದ್ ಪಾಲಿಗೆ ಬಲವಾದ ಏಟು ಕೊಟ್ಟಿತು. ಡೆತ್ ಓವರ್‌ಗಳಲ್ಲಿ ತಂಡ ಇವರನ್ನು ಅತಿಯಾಗಿ ಅವಲಂಬಿಸಿತ್ತು. ಆದರೆ ಕೊನೆಗೆ ಆಡುವ ಬಳಗದಲ್ಲೇ ಸಮದ್‌ಗೆ ಅವಕಾಶ ಸಿಗದೇ ಹೋಯಿತು. ಹಾಗೆಯೇ ಬರೀ ವೇಗದ ಬೌಲರ್‌ಗಳನ್ನೇ ನಂಬಿದ್ದು ಕೂಡ ಗ್ಯಾಂಬ್ಲಿಂಗ್ ನಡೆಸಿದಂತಾಯಿತು. ಮುಖ್ಯವಾಗಿ ಟಿ. ನಟರಾಜನ್ ನಿರೀಕ್ಷಿತ ಎತ್ತರ ತಲುಪಲು ವಿಫಲರಾದರು. ಅಫ್ಘಾನಿಸ್ಥಾನದ ಫಜಲ್ ಫಾರೂಖೀ ಅವರನ್ನು ಬಹಳ ವಿಳಂಬವಾಗಿ ಬಳಸಿಕೊಂಡಿತು. ರಶೀದ್ ಖಾನ್ ಅವರಂಥ ವಿಶ್ವ ದರ್ಜೆಯ ಸ್ಪಿನ್ನರ್ ಕೊರತೆ ಕೊನೆಯ ತನಕವೂ ತಂಡವನ್ನು ಕಾಡಿತು.
ಕಳೆದ ಪಂದ್ಯದಲ್ಲಿ ಮುಂಬೈಯನ್ನು 3 ರನ್ನುಗಳಿಂದ ಮಣಿಸುವ ಮೂಲಕ ಹೈದರಾಬಾದ್ ಮತ್ತೆ ಗೆಲುವಿನ ಲಯಕ್ಕೆ ಮರಳಿದೆ. ಆದರೆ ಇದರಿಂದ ಯಾವುದೇ ಪ್ರಯೋಜನವಿಲ್ಲ. ಅಂದಹಾಗೆ ಈ ಪಂದ್ಯಕ್ಕೆ ನಾಯಕ ಕೇನ್ ವಿಲಿಯಮ್ಸನ್ ಇರುವುದಿಲ್ಲ. ಅವರು ಈಗಾಗಲೇ ತವರಿಗೆ ವಾಪಸಾಗಿದ್ದಾರೆ.
ಹೆಸರಿಗಷ್ಟೇ ಕಿಂಗ್!
ಪಂಜಾಬ್ ಕಿಂಗ್ಸ್ ಹೆಸರಿಗೆ ಮಾತ್ರ ಕಿಂಗ್ ಎಂಬುದನ್ನು ಈ ಸಲವೂ ಸಾಬೀತುಪಡಿಸಿತು. ಅಸ್ಥಿರ ಪ್ರದರ್ಶನ ತಂಡಕ್ಕೆ ಮುಳುವಾಯಿತು. ಸತತ ಎರಡು ಪಂದ್ಯಗಳನ್ನು ಗೆಲ್ಲಲು ಸಾಧ್ಯವಾಗಲೇ ಇಲ್ಲ. ಮಾಯಾಂಕ್ ಆಗರ್ವಾಲ್ ನಾಯಕರಾಗಿ ಘೋರ ವೈಫಲ್ಯ ಕಂಡರು. ಧವನ್, ಬೇರ್‌ಸ್ಟೊ, ಲಿವಿಂಗ್‌ಸ್ಟೋನ್ ಅವರಂಥ ವಿಶ್ವ ದರ್ಜೆಯ ಬ್ಯಾಟರ್‌ಗಳಿಂದಲೂ ತಂಡಕ್ಕೆ ನ್ಯಾಯ ಒದಗಿಸಲು ಸಾಧ್ಯವಾಗಲಿಲ್ಲ.
ಮಸ್ಟ್ ವಿನ್ ಪಂದ್ಯದಲ್ಲಿ ಆರ್‌ಸಿಬಿಯನ್ನು 54 ರನ್ನುಗಳಿಂದ ಮಣಿಸಿದ ಪಂಜಾಬ್, ಬಳಿಕ ಡೆಲ್ಲಿಗೆ 17 ರನ್ನುಗಳಿಂದ ಶರಣಾಗಿ ನಿರ್ಗಮನವನ್ನು ಖಚಿತಗೊಳಿಸಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್
Udupi: ಶತಚಂಡಿಕಾಯಾಗ, ಬ್ರಹ್ಮಮಂಡಲ ಸೇವೆ ಆಮಂತ್ರಣ ಪತ್ರಿಕೆ ಬಿಡುಗಡೆ
Children’s Day: ಶಿಕ್ಷಣವನ್ನು ಪ್ರೋತ್ಸಾಹಿಸಿ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ
Bantwal: ನಾಪತ್ತೆಯಾದವರ ಮೃತ*ದೇಹ ಉಳ್ಳಾಲ ರೈಲು ಹಳಿಯಲ್ಲಿ ಪತ್ತೆ
Dharmasthala; ಗ್ರಾಮಾಭಿವೃದ್ಧಿ ಯೋಜನೆ ಜನರ ನಾಡಿಮಿಡಿತ: ನಿರ್ಮಲಾ ಸೀತಾರಾಮನ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.