ಬ್ಯಾಟಿಂಗ್ ದಿಗ್ಗಜ ವಿರಾಟ್ ಕೊಹ್ಲಿಗೆ ವಿಶ್ರಾಂತಿ ಅಗತ್ಯವಿದೆ: ರವಿಶಾಸ್ತ್ರಿ
Team Udayavani, Apr 21, 2022, 8:20 AM IST
ಮುಂಬಯಿ: ಬ್ಯಾಟಿಂಗ್ ದಿಗ್ಗಜ ವಿರಾಟ್ ಕೊಹ್ಲಿ ಇದೀಗ ಮಾನಸಿಕವಾಗಿ ಬಳಲಿದ್ದಾರೆ ಮತ್ತು ಇನ್ನೂ ಆರೇಳು ವರ್ಷ ದೇಶದ ಪರ ಕ್ರಿಕೆಟ್ ಆಡಬೇಕಿದ್ದರೆ ಸದ್ಯ ಅವರಿಗೆ ವಿಶ್ರಾಂತಿಯ ಅಗತ್ಯವಿದೆ ಎಂದು ಭಾರತೀಯ ತಂಡದ ಮಾಜಿ ಕೋಚ್ ರವಿಶಾಸ್ತ್ರಿ ಅಭಿಪ್ರಾಯಪಟ್ಟಿದ್ದಾರೆ.
ಈ ಐಪಿಎಲ್‌ನಲ್ಲಿ ಕೊಹ್ಲಿ ಅವರ ಬ್ಯಾಟಿಂಗ್ ನೀರಸವಾಗಿ ಸಾಗುತ್ತಿದೆ. 7 ಪಂದ್ಯಗಳಲ್ಲಿ ಕೇವಲ ಎರಡು ಬಾರಿ 40 ಪ್ಲಸ್ ರನ್ ಗಳಿಸಿದ್ದಾರೆ.
ಕೊಹ್ಲಿ ಎಲ್ಲ ಮಾದರಿಯೂ ಒಳಗೊಂಡಂತೆ ಕಳೆದ 100 ಪಂದ್ಯಗಳಲ್ಲಿ ಒಮ್ಮೆಯೂ ಶತಕ ಸಿಡಿಸಿಲ್ಲ. ಇದರ ನಡುವೆ ಟಿ20 ಕ್ರಿಕೆಟ್‌ನಲ್ಲಿ ಅವರು ಭಾರತ ಮತ್ತು ಆರ್‌ಸಿಬಿ ನಾಯಕತ್ವದಿಂದ ಹಿಂದೆ ಸರಿದಿದ್ದಾರೆ. ಟೆಸ್ಟ್ ಮತ್ತು ಏಕದಿನ ತಂಡದ ನಾಯಕತ್ವದಿಂದ ಅವರನ್ನು ಕೈಬಿಡಲಾಗಿದೆ.
ಕ್ರಿಕೆಟ್ ಆಡಿ ಬಳಲಿದ್ದಾರೆ
“ಕೋವಿಡ್-19 ನಿರ್ಬಂಧದಿಂದಾಗಿ ಐಪಿಎಲ್ ಆಟಗಾರರು ಬಯೋ ಬಬಲ್ಸ್ ಒಳಗಡೆ ಇರಬೇಕಾಗಿದೆ. ಇಂತಹ ಸಂದರ್ಭದಲ್ಲಿ ಕೊಹ್ಲಿ ಅವರಂತಹ ಆಟಗಾರರನ್ನು ಬಹಳಷ್ಟು ಎಚ್ಚರಿಕೆ ಮತ್ತು ಸಹಾನುಭೂತಿಯಿಂದ ನೋಡಿಕೊಳ್ಳಬೇಕಾಗಿದೆ. ನೇರ ಮಾತುಗಳಲ್ಲಿ ಹೇಳುವುದಾದರೆ ವಿರಾಟ್ ಕೊಹ್ಲಿ ಬಹಳಷ್ಟು ಕ್ರಿಕೆಟ್ ಆಡಿ ಬಳಲಿದ್ದಾರೆ. ಯಾರಿಗಾದರೂ ವಿಶ್ರಾಂತಿಯ ಅಗತ್ಯವಿದ್ದರೆ ಅದು ಕೊಹ್ಲಿಗೆ…’ ಎಂದು ರವಿಶಾಸ್ತ್ರಿ ತಿಳಿಸಿದರು.
“ವಿಶ್ರಾಂತಿ ಎರಡು ತಿಂಗಳು ಅಥವಾ ಒಂದೂವರೆ ತಿಂಗಳು ಬೇಕಾಗಬಹುದು. ಅದು ಇಂಗ್ಲೆಂಡ್ ಪ್ರವಾದ ಮೊದಲು ಅಥವಾ ಅನಂತರ. ಆದರೆ ಅವರಿಗೆ ವಿಶ್ರಾಂತಿಯ ಅಗತ್ಯ ಮಾತ್ರ ಬಹಳ ಇದೆ. ಅವರು ಮುಂದೆ ಆರೇಳು ವರ್ಷ ಕ್ರಿಕೆಟ್ ಆಡಬೇಕಾಗಿದೆ. ಅದಕ್ಕಾಗಿ ನಾವು ಎಚ್ಚರ ವಹಿಸಬೇಕಾಗಿದೆ’ ಎಂದವರು ಹೇಳಿದರು. ಕೊಹ್ಲಿ ಮಂಗಳವಾರ ನಡೆದ ಲಕ್ನೋ ವಿರುದ್ಧದ ಪಂದ್ಯದಲ್ಲಿ ಶೂನ್ಯಕ್ಕೆ ಔಟಾಗಿದ್ದರು.
ಪೀಟರ್‌ಸನ್ ಅಭಿಪ್ರಾಯ
ಇಂಗ್ಲೆಂಡ್ ತಂಡದ ಮಾಜಿ ನಾಯಕ ಕೆವಿನ್ ಪೀಟರ್‌ಸನ್ ಕೂಡ ಇದೇ ರೀತಿಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕೊಹ್ಲಿ ಅವರು ಮತ್ತೆ ಬ್ಯಾಟಿಂಗ್ ವೈಭವಕ್ಕೆ ಮರಳಬೇಕಾದರೆ ಸದ್ಯ ಕ್ರಿಕೆಟ್ ಮತ್ತು ಸಾಮಾಜಿಕ ಜಾಲತಾಣಗಳಿಂದ ದೂರ ಇರಬೇಕು ಎಂದವರು ಹೇಳಿದ್ದಾರೆ. ಕಡಿಮೆ ಪಕ್ಷ ಆರು ತಿಂಗಳು ಕ್ರಿಕೆಟ್‌ನಿಂದ ದೂರ ಇರಿ. ಸಾಮಾಜಿಕ ಜಾಲತಾಣವನ್ನು ಆಫ್ ಮಾಡಿ. ವಿಶ್ರಾಂತಿ ಪಡೆದು ಮತ್ತೆ ಬ್ಯಾಟಿಂಗ್ ಅಬ್ಬರಕ್ಕೆ ಮರಳಿ. ನಾನು ತಡವಾಗಿ ನಿಮ್ಮನ್ನು ನೋಡುತ್ತೇನೆ ಎಂದವರು ಹೇಳಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.