ಆರ್‌ಸಿಬಿ-ಮುಂಬೈ ಮೊದಲ ಜೈಕಾರಕ್ಕೆ ಕಾತರ
Team Udayavani, Apr 9, 2021, 7:10 AM IST
ಚೆನ್ನೈ: “ರಾಯಲ್ ಚಾಲೆಂಜರ್ ಬೆಂಗಳೂರು ಈ ವರೆಗಿನ ಮೂರೂ ಉದ್ಘಾಟನಾ ಪಂದ್ಯಗಳಲ್ಲಿ ಗೆಲುವಿನ ಮುಖ ಕಂಡಿಲ್ಲ, ಮುಂಬೈ ಇಂಡಿಯನ್ಸ್ 2013ರಿಂದೀಚೆ ತನ್ನ ಮೊದಲ ಪಂದ್ಯವನ್ನು ಗೆದ್ದಿಲ್ಲ’ ಎಂಬ ಸ್ವಾರಸ್ಯಕರ ಅಂಕಿಅಂಶದೊಂದಿಗೆ 14ನೇ ಐಪಿಎಲ್ ಶುಕ್ರವಾರದಿಂದ ಕಾವೇರಿಸಿಕೊಳ್ಳಲಿದೆ. ಕೊರೊನಾ ಕಾಟದ ನಡುವೆಯೂ ಈ ಎರಡು ಬಲಿಷ್ಠ ತಂಡಗಳು ತಟಸ್ಥ ಕೇಂದ್ರವಾದ ಚೆನ್ನೈಯಲ್ಲಿ ಟಿ20 ಜೋಶ್ ಹೆಚ್ಚಿಸಲು ಸಜ್ಜುಗೊಂಡು ನಿಂತಿವೆ. ಮೊದಲ ಜೈಕಾರದ ಕಾತರದಲ್ಲಿವೆ.
ವರ್ಷಾಂತ್ಯದ ಟಿ20 ವಿಶ್ವಕಪ್ ಹಿನ್ನೆಲೆಯಲ್ಲಿ ಎಲ್ಲ ತಂಡಗಳೂ ಈ ಬಾರಿಯ ಐಪಿಎಲ್ ಪಂದ್ಯಾವಳಿಯನ್ನು ಹೆಚ್ಚು ಗಂಭೀರವಾಗಿ ತೆಗೆದುಕೊಳ್ಳಲಿವೆ. ಆದರೆ ಬ್ಯಾಟ್-ಬಾಲ್ ನಡುವಿನ ಈ ಬೊಂಬಾಟ್ ಆಟವನ್ನು ಸ್ಟೇಡಿಯಂನಲ್ಲಿದ್ದು ಕಣ್ತುಂಬಿಸಿಕೊಳ್ಳುವ ಯೋಗ ಮಾತ್ರ ಕ್ರಿಕೆಟ್ ಪ್ರೇಮಿಗಳಿಗಿಲ್ಲ. ಕೋವಿಡ್ ಮಾರಿ ಇದಕ್ಕೆ ಕಲ್ಲು ಹಾಕಿದೆ. ಆದರೂ ಕೊನೆಯಲ್ಲಿ ಗೆಲ್ಲುವುದು ಮಾತ್ರ ಐಪಿಎಲ್ ಎಂಬುದರಲ್ಲಿ ಅನುಮಾನವಿಲ್ಲ.
ನಾಯಕ-ಉಪನಾಯಕರ ಮೇಲಾಟ :
ಆರ್‌ಸಿಬಿ-ಮುಂಬೈ ಮುಖಾಮುಖೀಯೆಂದರೆ ಅದು ಟೀಮ್ ಇಂಡಿ ಯಾದ ನಾಯಕ ಮತ್ತು ಉಪನಾಯಕರ ನಡುವಿನ ಮೇಲಾಟ. ಆದರೆ ಇಲ್ಲಿ ಉಪನಾಯಕನೇ ಲಕ್ಕಿ ಎಂದು ಐಪಿಎಲ್ ಇತಿಹಾಸ ಸಾಬೀತುಪಡಿಸುತ್ತಲೇ ಬಂದಿದೆ. ಆರ್‌ಸಿಬಿ ವಿರುದ್ಧ ಆಡಲಾದ 29 ಪಂದ್ಯಗಳಲ್ಲಿ ಮುಂಬೈ 19ರಲ್ಲಿ ಜಯಭೇರಿ ಮೊಳಗಿಸಿದೆ. ಹಾಗೆಯೇ ಕಳೆದ 8 ಕೂಟಗಳಲ್ಲಿ ಅತ್ಯಧಿಕ 5 ಸಲ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಈ ಬಾರಿ ಹ್ಯಾಟ್ರಿಕ್ ಹಾದಿಯಲ್ಲಿದೆ.
ಆರ್‌ಸಿಬಿ ಹೆಚ್ಚು ಬಲಿಷ್ಠ :
ಈ ತನಕ “ಕಪ್ ನಮ್ದೇ’ ಎಂದು ಅಭಿಮಾನಿಗಳೆಲ್ಲ ಜಿದ್ದಿಗೆ ಬಿದ್ದವರಂತೆ ಆರ್‌ಸಿಬಿ ಮೇಲೆ ನಂಬಿಕೆ ಇರಿಸುತ್ತ ಬಂದರೂ ಕೊಹ್ಲಿ ಪಡೆ ಮಾತ್ರ ಇದನ್ನಿನ್ನೂ ಸಾಕಾರಾಗೊಳಿಸಿಲ್ಲ. 2021ರಲ್ಲಾದರೂ ಬೆಂಗಳೂರು ಫ್ರಾಂಚೈಸಿಗೆ ಐಪಿಎಲ್ ಕಿಂಗ್ ಎನಿಸುವ ಯೋಗ ಕೂಡಿಬಂದೀತೇ ಎಂಬುದು ಬಹು ದೊಡ್ಡ ನಿರೀಕ್ಷೆ.
ಕಳೆದ ಕೆಲವು ವರ್ಷಗಳಿಗೆ ಹೋಲಿಸಿದರೆ ಆರ್‌ಸಿಬಿ ಈ ಬಾರಿ ಹೆಚ್ಚು ಬಲಿಷ್ಠ, ಹೆಚ್ಚು ಸಂತುಲಿತ ಹಾಗೂ ಅಷ್ಟೇ ವೈವಿಧ್ಯಮಯ ತಂಡವಾಗಿ ಗೋಚರಿಸುತ್ತಿದೆ. ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್, ವೇಗಿ ಕೈಲ್ ಜಾಮೀಸನ್, ಅಲೆನ್ ಫಿನ್, ಡೇನಿಯಲ್ ಸ್ಯಾಮ್ಸ್, ಡೇನಿಯಲ್ ಕ್ರಿಸ್ಟಿ ಯನ್ ಮೊದಲಾದ ವಿದೇಶಿ ಟಿ20 ಸ್ಪೆಷಲಿಸ್ಟ್ ಗಳ ಸೇರ್ಪಡೆ ತಂಡಕ್ಕೆ ಹೆಚ್ಚಿನ ಬಲ ತಂದಿದೆ. ಮುಖ್ಯವಾಗಿ, ಬಲಿಷ್ಠ ಬ್ಯಾಟಿಂಗ್ ಸರದಿ ಯನ್ನು ಹೊಂದಿದ್ದರೂ ಘಾತಕ ಬೌಲರ್ಗಳಿಲ್ಲದೆ ವೈಫಲ್ಯ ಅನುಭವಿಸುತ್ತಿತ್ತು. ಈ ಸಮಸ್ಯೆಗೆ ಈ ಬಾರಿ ಪರಿಹಾರ ಸಿಗುವ ನಿರೀಕ್ಷೆ ಇದೆ. ಉಳಿದಂತೆ ಪಡಿಕ್ಕಲ್, ಕೊಹ್ಲಿ, ಎಬಿಡಿ, ವಾಷಿಂಗ್ಟನ್, ಚಹಲ್, ಸೈನಿ, ಸಿರಾಜ್, ಸಚಿನ್ ಬೇಬಿ, ಅಜರುದ್ದೀನ್, ಝಂಪ, ರಿಚರ್ಡ್‌ಸನ್ ಅವರನ್ನೊಳಗೊಂಡ ಶಕ್ತಿಶಾಲಿ ಪಡೆಯನ್ನು ಆರ್‌ಸಿಬಿ ಹೊಂದಿದೆ. ಆದರೆ ಎಲ್ಲಕ್ಕಿಂತ ಮಿಗಿಲಾಗಿ ಬೇಕಿರುವುದು ಲಕ್!
ಹ್ಯಾಟ್ರಿಕ್‌ನತ್ತ ಮುಂಬೈ :
ಕಳೆದೆರಡು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ಈ ಬಾರಿಯೂ ತನ್ನ ಎಂದಿನ ಬಲಾಡ್ಯ ಆಟಗಾರರ ಟೀಮ್‌ನೊಂದಿಗೆ ಅಖಾಡಕ್ಕೆ ಧುಮುಕಲಿದೆ. ಸ್ಫೋಟಕ ಬ್ಯಾಟಿಂಗ್, ಅಷ್ಟೇ ಘಾತಕ ಬೌಲಿಂಗ್ ಮುಂಬೈ ತಂಡದ ಹೆಚ್ಚುಗಾರಿಕೆ. ಆದರೆ ಆರಂಭದ ಕೆಲವು ಪಂದ್ಯಗಳಲ್ಲಿ ಮುಂಬೈ ತಂಡ ಪ್ರಯೋಗಕ್ಕೆ ಮುಂದಾಗುವುದು ವಾಡಿಕೆ. ಮೀಸಲು ಆಟಗಾರರ ಸಾಮರ್ಥ್ಯವನ್ನು ಅಳೆಯಲು ಅದು ಇಂಥ ನಿರ್ಧಾರ ತೆಗೆದುಕೊಳ್ಳುತ್ತದೆ. ಇಲ್ಲಿ ಸೋತರೂ ಚಿಂತೆ ಮಾಡುವುದಿಲ್ಲ. ಬಳಿಕ ತನ್ನ ನೈಜ ಸಾಮರ್ಥ್ಯವನ್ನು ಪಣಕ್ಕಿಟ್ಟು ಗೆಲುವಿನ ಟ್ರ್ಯಾಕ್ ಏರುತ್ತದೆ.
ರೋಹಿತ್, ಸೂರ್ಯಕುಮಾರ್, ಇಶಾನ್ ಕಿಶನ್, ಪಾಂಡ್ಯಾಸ್, ಬುಮ್ರಾ, ಚಹರ್ ಅವರನ್ನೆಲ್ಲ ಕಂಡಾಗ ಇದೊಂದು ಮಿನಿ ಟೀಮ್ ಇಂಡಿಯಾದಂತೆ ಭಾಸವಾಗುತ್ತದೆ. ಡಿ ಕಾಕ್, ಪೊಲಾರ್ಡ್, ಬೌಲ್ಟ್, ಲಿನ್, ನೀಶಮ್, ಕೋಲ್ಟರ್ ನೈಲ್ ಅವರೆಲ್ಲ ವಿದೇಶಿ ಹೀರೋಗಳು.
ಮ್ಯಾಚ್ ಮ್ಯಾಟರ್ :
l ಐಪಿಎಲ್‌ನಲ್ಲಿ ಈ ವರೆಗೆ ಆರ್‌ಸಿಬಿ 3 ಸಲ ಉದ್ಘಾಟನಾ ಪಂದ್ಯಗಳಲ್ಲಿ ಆಡಿದೆ. ಮೂರರಲ್ಲೂ ಸೋತಿದೆ.
l 2013ರಿಂದೀಚೆ ಮುಂಬೈ ಇಂಡಿಯನ್ಸ್ ತನ್ನ ಮೊದಲ ಐಪಿಎಲ್ ಪಂದ್ಯದಲ್ಲಿ ಗೆಲುವು ಕಾಣುವಲ್ಲಿ ವಿಫಲವಾಗಿದೆ. ಸತತ ಎಂಟರಲ್ಲೂ ಸೋಲನುಭವಿಸಿದೆ.
l ಆರ್‌ಸಿಬಿ ಕಳೆದ ಋತುವಿನ ಕೊನೆಯ ಐದೂ ಪಂದ್ಯಗಳಲ್ಲಿ ಸೋತಿದೆ. 2018 ಮತ್ತು 2019ರಲ್ಲಿ ಸತತ 7 ಪಂದ್ಯಗಳಲ್ಲಿ ಎಡವಿದ್ದು ಆರ್‌ಸಿಬಿಯ ಅತೀ ದೊಡ್ಡ ಸೋಲಿನ ಸರಪಣಿಯಾಗಿದೆ.
l ವಿರಾಟ್ ಕೊಹ್ಲಿ ಇನ್ನು 122 ರನ್ ಗಳಿಸಿದರೆ ಐಪಿಎಲ್‌ನಲ್ಲಿ 6 ಸಾವಿರ ರನ್ ಪೂರ್ತಿಗೊಳಿಸಿದ ಮೊದಲ ಕ್ರಿಕೆಟಿಗನಾಗಲಿದ್ದಾರೆ.
l ಕೊಹ್ಲಿ ಇನ್ನು 8 ಪಂದ್ಯಗಳನ್ನಾಡಿದರೆ 200 ಐಪಿಎಲ್ ಪಂದ್ಯಗಳಲ್ಲಿ ಕಾಣಿಸಿಕೊಂಡ 3ನೇ ಕ್ರಿಕೆಟಿಗನಾಗಲಿದ್ದಾರೆ. ಉಳಿದಿಬ್ಬರೆಂದರೆ ಎಂ.ಎಸ್. ಧೋನಿ ಮತ್ತು ರೋಹಿತ್ ಶರ್ಮ.
l ಇನ್ನು 269 ರನ್ ಬಾರಿಸಿದರೆ ಕೊಹ್ಲಿ ಟಿ20 ಮಾದರಿಯಲ್ಲಿ 10 ಸಾವಿರ ರನ್ ಪೂರ್ತಿಗೊಳಿಸಿದ ಭಾರತದ ಮೊದಲ ಆಟಗಾರನಾಗಲಿದ್ದಾರೆ.
l ಯಜುವೇಂದ್ರ ಚಹಲ್ ಐಪಿಎಲ್ ಪಂದ್ಯಗಳ “ಶತಕ’ದ ಹೊಸ್ತಿಲಲ್ಲಿದ್ದಾರೆ. ಈ ಸಾಧನೆಗೆ ಇನ್ನೊಂದೇ ಪಂದ್ಯದ ಅಗತ್ಯವಿದೆ.
ಆರ್‌ಸಿಬಿ: ವಿರಾಟ್ ಕೊಹ್ಲಿ (ನಾಯಕ), ದೇವದತ್ತ ಪಡಿಕ್ಕಲ್, ಎಬಿ ಡಿ ವಿಲಿಯರ್, ಡೇನಿಯಲ್ ಕ್ರಿಸ್ಟಿಯನ್, ಮೊಹಮ್ಮದ್ ಅಜರುದ್ದೀನ್, ಗ್ಲೆನ್ ಮ್ಯಾಕ್ಸ್‌ವೆಲ್, ವಾಷಿಂಗ್ಟನ್ ಸುಂದರ್, ಯಜುವೇಂದ್ರ ಚಹಲ್, ನವದೀಪ್ ಸೈನಿ, ಸಿರಾಜ್, ಕೈಲ್ ಜಾಮೀಸನ್.
ಮುಂಬೈ: ರೋಹಿತ್ ಶರ್ಮ (ನಾಯಕ), ಇಶಾನ್ ಕಿಶನ್ , ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ಪೊಲಾರ್ಡ್, ಜೇಮ್ಸ್ ನೀಶಮ್, ಕೃಣಾಲ್ ಪಾಂಡ್ಯ, ರಾಹುಲ್ ಚಹರ್, ಟ್ರೆಂಟ್ ಬೌಲ್ಟ್, ಜಸ್‌ಪ್ರೀತ್ ಬುಮ್ರಾ, ನಥನ್ ಕೋಲ್ಟರ್ ನೈಲ್.
ಏಕದಿನ ಟೂರ್ನಿ ಆಗಬೇಕಿತ್ತು! :
ಇಂಡಿಯನ್ ಪ್ರೀಮಿಯರ್ ಲೀಗ್ ಈಗ ವಿಶ್ವದ ಅತ್ಯಂತ ಶ್ರೀಮಂತ ಮತ್ತು ಜನಪ್ರಿಯ ಟಿ20 ಪಂದ್ಯಾವಳಿ ಆಗಿದೆ. ಆದರೆ ಆರಂಭದಲ್ಲಿ ಇದನ್ನು 50 ಓವರ್‌ಗಳ ಏಕದಿನ ಪಂದ್ಯಾವಳಿಯಾಗಿ ಯೋಜಿಸಬೇಕೆಂಬುದು ಇದರ “ಮಾಸ್ಟರ್ ಮೈಂಡ್’ ಲಲಿತ್ ಮೋದಿ ಅವರ ಕನಸಾಗಿತ್ತು. ಇದನ್ನು ಅವರು 1995ರಲ್ಲೇ ಬಿಸಿಸಿಐ ಗಮನಕ್ಕೆ ತಂದಿದ್ದರು. ಆದರೆ ಬಿಸಿಸಿಐ ಇದನ್ನು ತಿರಸ್ಕರಿಸಿತು. ಯಾವಾಗ 2007ರಲ್ಲಿ ಝೀ ನೆಟ್‌ವರ್ಕ್ ಬಿಸಿಸಿಐಗೆ ಸಡ್ಡು ಹೊಡೆದು “ಇಂಡಿಯನ್ ಕ್ರಿಕೆಟ್ ಲೀಗ್’ (ಐಸಿಎಲ್) ಆರಂಭಿಸಿತೋ ಆಗ ಮಂಡಳಿ ಎಚ್ಚೆತ್ತುಕೊಂಡಿತು. ಲಲಿತ್ ಮೋದಿ ಅವರ 12 ವರ್ಷಗಳ ಹಿಂದಿನ ಪ್ರಸ್ತಾವವನ್ನು ಪುನರ್‌ಪರಿಶೀಲಿಸಿತು. ಆದರೆ ಇದು ಏಕದಿನ ಬದಲು ಟಿ20 ಮಾದರಿಯ ಟೂರ್ನಿಯಾಗಿ ಹವಾ ಎಬ್ಬಿಸಿದ್ದು ಈಗ ಇತಿಹಾಸ.
ಆರೇಂಜ್ ಕ್ಯಾಪ್ ವಿನ್ನರ್ :
ವರ್ಷ ಬ್ಯಾಟ್ಸ್‌ಮನ್ ರನ್
2008 ಶಾನ್ ಮಾರ್ಷ್ 616
2009 ಮ್ಯಾಥ್ಯೂ ಹೇಡನ್ 572
2010 ಸಚಿನ್ ತೆಂಡುಲ್ಕರ್ 618
2011 ಕ್ರಿಸ್ ಗೇಲ್ 608
2012 ಕ್ರಿಸ್ ಗೇಲ್ 733
2013 ಮೈಕಲ್ ಹಸ್ಸಿ 733
2014 ರಾಬಿನ್ ಉತ್ತಪ್ಪ 660
2015 ಡೇವಿಡ್ ವಾರ್ನರ್ 562
2016 ವಿರಾಟ್ ಕೊಹ್ಲಿ 973
2017 ಡೇವಿಡ್ ವಾರ್ನರ್ 641
2018 ಕೇನ್ ವಿಲಿಯಮ್ಸನ್ 735
2019 ಡೇವಿಡ್ ವಾರ್ನರ್ 692
2020 ಕೆ.ಎಲ್. ರಾಹುಲ್ 670
ಪರ್ಪಲ್ ಕ್ಯಾಪ್ ವಿನ್ನರ್ :
ವರ್ಷ ಬೌಲರ್ ವಿಕೆಟ್
2008 ಸೊಹೈಲ್ ತನ್ವೀರ್ 22
2009 ಆರ್.ಪಿ. ಸಿಂಗ್ 23
2010 ಪ್ರಗ್ಯಾನ್ ಓಜಾ 21
2011 ಲಸಿತ ಮಾಲಿಂಗ 28
2012 ಮಾರ್ನೆ ಮಾರ್ಕೆಲ್ 25
2013 ಡ್ವೇನ್ ಬ್ರಾವೊ 32
2014 ಮೋಹಿತ್ ಶರ್ಮ 23
2015 ಡ್ವೇನ್ ಬ್ರಾವೊ 26
2016 ಭುವನೇಶ್ವರ್ ಕುಮಾರ್ 23
2017 ಭುವನೇಶ್ವರ್ ಕುಮಾರ್ 26
2018 ಆ್ಯಂಡ್ರೂ ಟೈ 24
2019 ಇಮ್ರಾನ್ ತಾಹಿರ್ 26
2020 ಕಾಗಿಸೊ ರಬಾಡ 30
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
YouTuber: ನೀಲಿ ಚಿತ್ರತಾರೆ ಆಗಲು ಪಿಎಚ್ ಡಿ ಕಲಿಕೆಯನ್ನೇ ತೊರೆದ ಖ್ಯಾತ ಯೂಟ್ಯೂಬರ್
UPSC ವಂಚನೆ ಪ್ರಕರಣ: ಪೂಜಾ ಖೇಡ್ಕರ್ ನಿರೀಕ್ಷಣಾ ಜಾಮೀನಿಗೆ ಹೈಕೋರ್ಟ್ ನಕಾರ
Alnavar: ಟಿಟಿ- ಕ್ಯಾಂಟರ್ ನಡುವೆ ಭೀಕರ ಅಪಘಾತ; ಸ್ಥಳದಲ್ಲಿಯೇ ಮೂವರ ಸಾವು
N.Maharajan: ವಲ್ಲರಸು ನಿರ್ದೇಶಕರ ಚಿತ್ರದಲ್ಲಿ ಶಿವಣ್ಣ ಸಿನಿಮಾ
Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.