ಗಡಿ ಘರ್ಷಣೆ: ಚೀನದ 43 ಸೈನಿಕರ ಹತ್ಯೆ?
ಲಡಾಖ್‌ನ ಗಾಲ್ವಾನ್‌ನಲ್ಲಿ ಭಾರೀ ಘರ್ಷಣೆ ಭಾರತದ ಕರ್ನಲ್ ಸಹಿತ 20 ಸೈನಿಕರು ಹುತಾತ್ಮ
Team Udayavani, Jun 17, 2020, 5:55 AM IST
ಗಲ್ವಾನ್ ಕಣಿವೆ ಪ್ರದೇಶದಲ್ಲಿ ಭದ್ರತಾ ಕಾರ್ಯದಲ್ಲಿ ನಿಯೋಜನೆಗೊಂಡಿರುವ ಭಾರತೀಯ ಯೋಧರು.
ಹೊಸದಿಲ್ಲಿ: ಐದು ದಶಕಗಳಲ್ಲೇ ಅತ್ಯಂತ ಭೀಕರ ಗಡಿ ಘರ್ಷಣೆಗೆ ಭಾರತ – ಚೀನ ಸಾಕ್ಷಿಯಾಗಿವೆ.
ಭಾರತ-ಚೀನ ನಡುವಣ ನೈಜ ನಿಯಂತ್ರಣ ರೇಖೆ (ಎಲ್‌ಎಸಿ) ಹಾದುಹೋಗುವ ಪೂರ್ವ ಲಡಾಖ್‌ನ ಗಾಲ್ವಾನ್ ಪ್ರದೇಶದಲ್ಲಿ ಚೀನದ ಯೋಧರು ಮತ್ತು ಭಾರತೀಯ ಪಡೆಗಳ ನಡುವೆ ನಡೆದ ಘರ್ಷಣೆಯಲ್ಲಿ ಓರ್ವ ಸೇನಾಧಿಕಾರಿ ಸಹಿತ 20 ಮಂದಿ ಯೋಧರು ಹುತಾತ್ಮರಾಗಿದ್ದಾರೆ. ಇದೇ ವೇಳೆ ಚೀನದ 43 ಮಂದಿ ಸೈನಿಕರು ಸಾವಿಗೀಡಾಗಿರುವ ಶಂಕೆ ಹೊಂದಲಾಗಿದೆ.
ಲಡಾಖ್‌ನ ಗಾಲ್ವಾನ್ ಕಣಿವೆಯಲ್ಲಿ ಸೋಮವಾರ ರಾತ್ರಿ ನಡೆದ ದೈಹಿಕ ಘರ್ಷ ಣೆ ಯಲ್ಲಿ ಭಾರ ತದ 20 ಯೋಧರು ಹುತಾತ್ಮರಾಗಿರುವ ಬಗ್ಗೆ ಮಂಗಳವಾರ ರಾತ್ರಿ ಭಾರತೀಯ ಸೇನೆ ಅಧಿಕೃತವಾಗಿ ಮಾಹಿತಿ ನೀಡಿದೆ. ಸೇನಾಧಿಕಾರಿ ಸಹಿತ ಮೂವರು ಸ್ಥಳದಲ್ಲಿಯೇ ಮೃತಪಟ್ಟರೆ 17 ಮಂದಿ ಯೋಧರು ಗಂಭೀರವಾಗಿ ಗಾಯಗೊಂಡು ಬಳಿಕ ಸಾವನ್ನಪ್ಪಿದರು ಎಂದೂ ಸೇನೆ ತಿಳಿಸಿದೆ.
ಚೀನದ ಕಡೆಯಲ್ಲೂ 43ಕ್ಕೂ ಹೆಚ್ಚು ಯೋಧರು ಸಾವನ್ನಪ್ಪಿದ್ದಾರೆ ಮತ್ತು ಕೆಲವರು ಗಂಭೀರ ಗಾಯಗೊಂಡಿದ್ದಾರೆ ಎಂದು ಕೇಂದ್ರ ಸರಕಾರದ ಮೂಲಗಳು ತಿಳಿಸಿವೆ. ಇದಕ್ಕೆ ಪುಷ್ಟಿ ನೀಡುವಂತೆ ಘಟನೆಯ ಅನಂತರ ಗಾಲ್ವಾನ್ ವ್ಯಾಲಿಯ ಕಡೆಯಲ್ಲಿ ಚೀನದ ಹೆಲಿಕಾಪ್ಟರ್‌ಗಳ ಓಡಾಟ ಹೆಚ್ಚಾಗಿತ್ತು. ಚೀನವು ತನ್ನ ಮೃತ ಯೋಧರನ್ನು ಈ ಹೆಲಿಕಾಪ್ಟರ್ ಗಳಲ್ಲಿ ಒಯ್ದಿದೆ ಎಂದು ಎ.ಎನ್..ಐ ವರದಿ ಮಾಡಿದೆ.
ಇದನ್ನೂ ಓದಿ: ಡ್ರ್ಯಾಗನ್ ರಾಷ್ಟ್ರದೊಂದಿಗಿನ ತಿಕ್ಕಾಟದ ಮೂಲ ಗೊತ್ತೇ?
ಮಂಗಳವಾರ ಬೆಳಗ್ಗಿನ ವರದಿಯಂತೆ ಭಾರತದ ಕಡೆ ಮೂವರು ಹುತಾತ್ಮರಾಗಿದ್ದರು. ತೆಲಂಗಾಣ ಮೂಲದ, ಬಿಹಾರ ರೆಜಿಮೆಂಟ್‌ನ ಕರ್ನಲ್ ಬಿ. ಸಂತೋಷ್ ಬಾಬು, ಹವಾಲ್ದಾರರಾದ ತ.ನಾಡು ಮೂಲದ ಪಳನಿ, ಝಾರ್ಖಂಡ್ ಮೂಲದ ಸಿಪಾಯಿ ಓಝಾ ಹುತಾತ್ಮರು ಎಂದು ತಿಳಿಸಲಾಗಿತ್ತು. ಈ ಘಟನೆಯ ಮೂಲಕ ಶಾಂತಿ ಮಂತ್ರ ಪಠಿಸುತ್ತಲೇ ಬೆನ್ನಿಗೆ ಇರಿಯುವ ಕಮ್ಯುನಿಸ್ಟ್ ಚೀನದ ಕಪಟ ಬುದ್ಧಿ ಮತ್ತೆ ಸಾಬೀತಾಗಿದೆ.
ಸೋಮವಾರ ರಾತ್ರಿ ಭಾರತೀಯ ಭೂಪ್ರದೇಶದೊಳಕ್ಕೆ ಅಕ್ರಮವಾಗಿ ಪ್ರವೇಶಿಸಿದ ಚೀನದ ಯೋಧರು ವಾಪಸ್ ತೆರಳಲು ಪ್ರತಿರೋಧ ತೋರಿದ್ದಲ್ಲದೆ, ಭಾರತೀಯ ಯೋಧರೊಂದಿಗೆ ಕಾದಾಟಕ್ಕಿಳಿದರು. ಈ ಸಂದರ್ಭದಲ್ಲಿ ಎರಡೂ ಕಡೆಗಳ ಪಡೆಗಳು ಪರಸ್ಪರ ಮುಖಾಮುಖೀ ಕಾದಾಟಕ್ಕಿಳಿದಿದ್ದು, ದೊಣ್ಣೆ, ಕಲ್ಲುಗಳಿಂದ ಹೊಡೆದಾಡಿಕೊಂಡವು.
ಸಾರ್ವಭೌಮತೆ ವಿಚಾರದಲ್ಲಿ ರಾಜಿ ಇಲ್ಲ
ಗಡಿಯಲ್ಲಿ ಘರ್ಷಣೆಗಾಗಲಿ, ದಾಳಿಗಾಗಲಿ ಭಾರತ ಆಸ್ಪದ ನೀಡುವುದಿಲ್ಲ. ನಾವು ಶಾಂತಿಯನ್ನೇ ಬಯಸುತ್ತೇವೆ. ಗಡಿ ವಿವಾದವನ್ನು ಮಾತುಕತೆಯ ಮೂಲಕವೇ ಇತ್ಯರ್ಥ ಮಾಡಿಕೊಳ್ಳಬೇಕು ಎಂದೂ ಬಯಸುತ್ತೇವೆ. ಆದರೆ ನಮ್ಮ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಯ ವಿಚಾರದಲ್ಲಿ ನಾವು ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಭಾರತ ಸ್ಪಷ್ಟ ಮಾತುಗಳಲ್ಲಿ ಪ್ರತಿಕ್ರಿಯೆ ವ್ಯಕ್ತಪಡಿಸಿದೆ.
ಇದನ್ನೂ ಓದಿ: ಮಾತುಕತೆಗೆಂದು ತೆರಳಿದ್ದ ಭಾರತೀಯ ಯೋಧರ ಮೇಲೆ ಚೀನಿ ಸೈನಿಕರ ಅಟ್ಟಹಾಸ
3ನೇ ಮಹಾಯುದ್ಧ ಎಂದ ಬ್ರಿಟಿಶ್ ಪತ್ರಿಕೆ
ಭಾರತ ಮತ್ತು ಚೀನ ನಡುವಿನ ಈ ಘರ್ಷಣೆಯನ್ನು ಬ್ರಿಟನ್‌ನ “ಎಕ್ಸ್ ಪ್ರಸ್ ಯುಕೆ’ ಮೂರನೇ ಮಹಾಯುದ್ಧ ಎಂದು ಕರೆದಿದೆ. ಸೋಮವಾರ ರಾತ್ರಿ ನಡೆದ ಘರ್ಷಣೆಯಲ್ಲಿ ಚೀನ ಮತ್ತು ಭಾರತ ಎರಡೂ ಕಡೆಯೂ ಭಾರೀ ಸಾವುನೋವುಗಳು ಸಂಭವಿಸಿವೆ ಎಂದು ಅದು ವರದಿ ಮಾಡಿದೆ.
ಸಾವು ಒಪ್ಪಿದ ಗ್ಲೋಬಲ್ ಟೈಮ್ಸ್ ಸಂಪಾದಕ
ಗಡಿಯಲ್ಲಿ ಈ ಘರ್ಷಣೆಯಿಂದಾಗಿ ಎರಡೂ ಕಡೆ ಸಾವು ನೋವು ಸಂಭವಿಸಿರುವುದು ಸತ್ಯ ಎಂದು ಚೀನ ಸರಕಾರದ ಮುಖವಾಣಿಯಂತಿರುವ ಗ್ಲೋಬಲ್ ಟೈಮ್ಸ್‌ನ ಸಂಪಾದಕರೊಬ್ಬರು ಸ್ವತಃ ಒಪ್ಪಿಕೊಂಡಿದ್ದಾರೆ. ಆದರೆ ಸಂಪಾದಕನ ಈ ಮಾಹಿತಿ ಬಹಿರಂಗದ ಬಗ್ಗೆ ಪತ್ರಿಕೆಯಲ್ಲಿ ವರದಿ ಮಾಡಲಾಗಿಲ್ಲ.
ಉಗ್ರ ಕ್ರಮ ಕೈಗೊಳ್ಳಲಿ
ಮಾಜಿ ಸೇನಾಧಿಕಾರಿ ಮತ್ತು ಪಂಜಾಬ್ ಸಿಎಂ ಕ್ಯಾ| ಅಮರೀಂದರ್ ಸಿಂಗ್, ಚೀನಕ್ಕೆ ಬುದ್ಧಿ ಕಲಿಸಲು ಇದು ಸಕಾಲ ಎಂದಿದ್ದಾರೆ.
ದಿಲ್ಲಿಯಲ್ಲೂ ಕಾವು
ಎಲ್‌ಎಸಿಯಲ್ಲಿ ನಡೆದಿರುವ ಘಟನೆ ರಾಜಧಾನಿ ದಿಲ್ಲಿಯಲ್ಲೂ ಪ್ರತಿಧ್ವನಿಸಿದ್ದು, ಕಾವು ಪಡೆದಿದೆ. ಮಾಹಿತಿ ಲಭಿಸಿದ ತತ್‌ಕ್ಷಣ ರಕ್ಷಣ ಸಚಿವ ರಾಜನಾಥ್ ಸಿಂಗ್ ಅವರು ವಿದೇ ಶಾಂಗ ಸಚಿವ ಜೈಶಂಕರ್, ಮೂರೂ ಪಡೆಗಳ ಮುಖ್ಯಸ್ಥರಾದ ಜ| ಬಿ ಪಿನ್ ರಾವತ್, ಭೂಸೇನಾ ಮುಖ್ಯಸ್ಥ ಜ| ಎಂ.ಎಂ. ನರವಾಣೆ ಅವರೊಂದಿಗೆ ಚರ್ಚೆ ನಡೆಸಿದ್ದಾರೆ. ಬಳಿಕ ಪ್ರಧಾನಿ ಮೋದಿ ಅವರಿಗೆ ಸಭೆಯ ಮಾಹಿತಿ ನೀಡಿ ದ್ದಾರೆ. ಅನಂತರ ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡ ಮೋದಿ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದಾರೆ.
ಆದುದೇನು?
ಸೋಮವಾರ ರಾತ್ರಿ ಈ ದುರ್ಘಟನೆ ನಡೆದಿದ್ದು, ಚೀನದ ಪಡೆಗಳು ಗಾಲ್ವಾನ್ ವ್ಯಾಲಿಯಲ್ಲಿ ಭಾರತೀಯ ಭೂಪ್ರದೇಶದೊಳಕ್ಕೆ ಅಕ್ರಮವಾಗಿ ಪ್ರವೇಶಿಸಿರುವುದನ್ನು ಗಮನಿಸಿದ ಭಾರತೀಯ ಯೋಧರು ವಾಪಸ್ ತೆರಳಲು ಹೇಳಿದ್ದಾರೆ. ಇದಕ್ಕೆ ಚೀನದ ಯೋಧರು ವಿರೋಧ ವ್ಯಕ್ತಪಡಿಸಿದ್ದು, ಕಾದಾಟಕ್ಕಿಳಿದಿದ್ದಾರೆ. ಎರಡೂ ಕಡೆಗಳ ಯೋಧರು ಗುಂಡು ಹಾರಾಟ ನಡೆಸಿಲ್ಲವಾದರೂ ಕಲ್ಲು, ಬಡಿಗೆಗಳಿಂದ ಹೊಡೆದಾಟ ನಡೆಸಿದ್ದಾರೆ ಎಂದು ಭಾರತೀಯ ವಿದೇಶಾಂಗ ಇಲಾಖೆ ಇಡೀ ಘಟನೆಯ ಬಗ್ಗೆ ಸ್ಪಷ್ಟ ಮಾಹಿತಿ ನೀಡಿದೆ.
ಭಾರತೀಯ ಯೋಧರು ಚೀನದ ಭೂ ಪ್ರದೇಶದ ಕಡೆ ಹೋಗಿರಲೇ ಇಲ್ಲ. ನಮ್ಮವರ ಎಲ್ಲ ಚಟುವಟಿಕೆಗಳು ಗಡಿಯೊಳಗೇ ಇದ್ದವು ಎಂದು ವಿದೇಶಾಂಗ ಇಲಾಖೆ ವಕ್ತಾರ ಅನುರಾಗ್ ಶ್ರೀವಾಸ್ತವ ಹೇಳಿದ್ದಾರೆ. ಗಾಲ್ವಾನ್ ವ್ಯಾಲಿ ಎಂದೆಂದಿಗೂ ನಮ್ಮದೇ ಎಂದು ತಿಳಿಸಿದ್ದು, ಈ ಕಣಿವೆ ತನ್ನದೆನ್ನುವ ಚೀನಕ್ಕೆ ಕಠಿನ ತಿರುಗೇಟು ನೀಡಿದ್ದಾರೆ.
ಕಿಡಿಕಾರಿದ ಟ್ವೀಟಿಗರು
ಘಟನೆ ಬಗ್ಗೆ ಟ್ವಿಟರ್‌ನಲ್ಲಿ ಭಾರೀ ಖಂಡನೆ ವ್ಯಕ್ತವಾಗಿದೆ. #GalwanValley, #ChinaIndia Faceoff, #LadakhBorder ಎಂಬ ಹ್ಯಾಶ್‌ಟ್ಯಾಗ್‌ಗಳ ಅಡಿಯಲ್ಲಿ ಹಲವಾರು ಜನರು ಚೀನ ವಿರುದ್ಧ ಕಿಡಿಕಾರಿದ್ದಾರೆ. ಚೀನ ವಿರುದ್ಧ ಭಾರತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. #worldwar3 ಎಂಬ ಹ್ಯಾಶ್‌ಟ್ಯಾಗ್ ಅಡಿಯಲ್ಲಿ ಭಾರತ ಮತ್ತು ಚೀನ ಎರಡೂ ದೊಡ್ಡ ಅಣು ಶಕ್ತಿಗಳಾಗಿದ್ದು, ಇಂಥ ಘಟನೆ 3ನೇ ಮಹಾ ಯುದ್ಧಕ್ಕೆ ನಾಂದಿಯೇ ಎಂಬ ಚರ್ಚೆಗಳಾಗಿವೆ.
ಭಾರತೀಯ ಸೇನೆ ಹೇಳಿದ್ದೇನು?
ಹುತಾತ್ಮ ಯೋಧರಿಗೆ ಗುಂಡು ತಾಗಿಲ್ಲ. ಕೈ ಮಿಲಾಯಿಸಿದ್ದರಿಂದ, ದೊಣ್ಣೆಗಳಿಂದ ಹಲ್ಲೆ ನಡೆಸಿದ್ದರಿಂದ ಅವರು ಮೃತಪಟ್ಟಿದ್ದಾರೆ. ಚೀನದ ಸೈನಿಕರ ಪರಿಸ್ಥಿತಿಯ ಬಗ್ಗೆ ಮಾಹಿತಿಯಿಲ್ಲ ಎಂದು ಭಾರತೀಯ ಸೇನೆ ತಿಳಿಸಿದೆ. ಆದರೆ ಘಟನೆಯಲ್ಲಿ ತನ್ನ ಸೈನಿಕರಿಗೂ ಗಾಯಗಳಾಗಿವೆ ಎಂದು ಚೀನದ ಸೇನೆ ಹೇಳಿಕೊಂಡಿದೆ. ಪರಿಸ್ಥಿತಿ ತಿಳಿಗೊಳಿಸಲು ಉಭಯ ಸೇನೆಗಳ ಮೇಜರ್ ಜನರಲ್ ಮಟ್ಟದಲ್ಲಿ ಮಾತುಕತೆ ನಡೆದಿತ್ತು ಎಂದೂ ಸೇನೆ ತಿಳಿಸಿದೆ.
45 ವರ್ಷಗಳ ಅನಂತರದ ದುರ್ಘಟನೆ
ಭಾರತ-ಚೀನ ನಡುವಣ ಎಲ್‌ಎಸಿಯಲ್ಲಿ ಭಾರತೀಯ ಸೈನಿಕರು ಯುದ್ಧೇತರ ಹಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಹುತಾತ್ಮರಾಗಿರುವುದು 45 ವರ್ಷಗಳ ಬಳಿಕ ಇದೇ ಮೊದಲು. 1975 ರಲ್ಲಿ ಅರುಣಾ ಚಲದ ಟುಲುಂಗ್ ಲಾದಲ್ಲಿ ನಡೆದಿದ್ದ ಇಂಥದ್ದೇ ಘಟನೆಯಲ್ಲಿ ಚೀನದ ಪಡೆಗಳು ಹಲ್ಲೆ ಮಾಡಿದ್ದರಿಂದ ಭಾರತದ ನಾಲ್ವರು ಯೋಧರು ಹುತಾತ್ಮರಾಗಿದ್ದರು.
ಮಾತುಕತೆಗೆ ಕರೆದು ಸೈನಿಕರ ಮೇಲೆ ಹಲ್ಲೆ ?
ಘಟನೆಯ ಕುರಿತಂತೆ ಸರಕಾರದಿಂದ ಪೂರ್ಣ ಮಾಹಿತಿ ಹೊರಬಿದ್ದಿಲ್ಲ. ಒಂದು ಮೂಲದ ಪ್ರಕಾರ ಭಾರತದ ಗಡಿ ಪ್ರವೇಶಿಸಿದ್ದ ಚೀನ ಪಡೆಗಳನ್ನು ಹಿಮ್ಮೆಟ್ಟಿಸುವ ವೇಳೆ ಈ ಘರ್ಷಣೆ ನಡೆದಿದ್ದರೆ, ಮತ್ತೂಂದು ಮೂಲದ ಪ್ರಕಾರ ಮಾತುಕತೆಗೆಂದು ಕರೆದ ಚೀನ ಸೇನೆ ಭಾರತೀಯ ಸೇನಾಧಿಕಾರಿ ಸಹಿತ ಸೈನಿಕರ ಮೇಲೆ ಏಕಾಏಕಿ ಹಲ್ಲೆ ನಡೆಸಿದೆ.
ಕೆಲವು ಸಮಯದಿಂದ ನಡೆಯುತ್ತಿದ್ದ ಗಡಿ ಘರ್ಷಣೆಗೆ ಸಂಬಂಧಿಸಿ ಮಾತುಕತೆಗೆ ಬರುವಂತೆ ಚೀನ ಸೇನೆ ತಿಳಿಸಿತ್ತು.
ಅದರಂತೆ ಸೋಮವಾರ ಸಂಜೆ ಕ| ಬಾಬು ನೇತೃತ್ವದ ತಂಡ ತೆರಳಿತ್ತು. ಪ್ರದೇಶದಿಂದ ಹಿಂದೆ ಸರಿಯಲು ಕೇಳದ ಚೀನಿ ಅಧಿಕಾರಿಗಳು ಭಾರತದ ಸೇನಾಧಿಕಾರಿಗಳ ಮೇಲೆ ಮುಳ್ಳುತಂತಿ ಸುತ್ತಿದ ದೊಣ್ಣೆ ಸಹಿತ ಇತರ ವಸ್ತುಗಳಿಂದ ಭೀಕರ ಹಲ್ಲೆ ನಡೆಸಿತು. ಈ ಹಲ್ಲೆಯಲ್ಲಿ ಮೂವರು ಸ್ಥಳದಲ್ಲಿಯೇ ಸಾವಿಗೀಡಾಗಿದ್ದರು ಎಂದು ಮೂಲಗಳನ್ನು ಉಲ್ಲೇಖೀಸಿ ಇಂಡಿಯಾ ಟುಡೇ ವರದಿ ಮಾಡಿದೆ.
ಪುತ್ರನ ಬಗ್ಗೆ ಹೆಮ್ಮೆ
ಸೋಮವಾರದ ಘಟನೆಯಲ್ಲಿ ಹುತಾತ್ಮರಾಗಿರುವ ಕ| ಸಂತೋಷ್ ಬಾಬು ಅವರ ತಂದೆ ನಿವೃತ್ತ ಬ್ಯಾಂಕ್ ಅಧಿಕಾರಿಯಾಗಿದ್ದು, ತನ್ನ ಪುತ್ರ ದೇಶ ಸೇವೆ ಸಲ್ಲಿಸಿ ಪ್ರಾಣ ಅರ್ಪಿಸಿರುವುದಕ್ಕಾಗಿ ಹೆಮ್ಮೆ ವ್ಯಕ್ತಪಡಿಸಿದ್ದಾರೆ. ಸದ್ಯವೇ ಹೈದರಾಬಾದ್‌ಗೆ ಪೋಸ್ಟಿಂಗ್ ಪಡೆಯಲಿದ್ದ ಕ| ಬಾಬು ರವಿವಾರವಷ್ಟೇ ಫೋನ್ ಮಾಡಿ ತಾಯಿಯ ಜತೆಗೆ ಗಡಿಯ ಉದ್ವಿಗ್ನ ಪರಿಸ್ಥಿತಿಯ ಬಗ್ಗೆ ಚರ್ಚಿಸಿದ್ದರು. ಕ| ಬಾಬು ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಹುತಾತ್ಮ ಇನ್ನೋರ್ವ ಯೋಧ ಕೆ. ಪಳನಿ ಅವರೂ ತಮಿಳುನಾಡಿನವರಾಗಿದ್ದು , 22 ವರ್ಷಗಳ ಸೇವೆಯ ಬಳಿಕ ಮುಂದಿನ ವರ್ಷ ನಿವೃತ್ತರಾಗಲಿದ್ದರು. ಇವರ ಸಹೋದರನೂ ಸೇನೆಯಲ್ಲಿದ್ದಾರೆ.
ಚೀನ ಆರೋಪ
ಜೂನ್ 15ರ ರಾತ್ರಿ ಎಲ್‌ಎಸಿ ಹಾದುಹೋಗಿರುವ ಗಾಲ್ವಾನ್ ಪ್ರದೇಶದಲ್ಲಿ ಭಾರತೀಯ ಸೈನಿಕರು ಗಡಿಯನ್ನು ಎರಡು ಬಾರಿ ದಾಟಿ, ಚೀನ ನೆಲಕ್ಕೆ ಕಾಲಿಟ್ಟು ಚೀನ ಸೈನಿಕರ ಮೇಲೆ ದಾಳಿ ನಡೆಸಿದ್ದಾರೆ. ಗಡಿ ಪ್ರದೇಶದಲ್ಲಿ ಕಾನೂನುಬಾಹಿರ ಚಟುವಟಿಕೆಯ ಆರೋಪ ಹೊರಿಸಿ ನಮ್ಮ ಸೈನಿಕರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಚೀನ ಸರಕಾರ ಆರೋಪಿಸಿದೆ. ನಾವು ಎಲ್ಲಿಯೂ ಗಡಿ ದಾಟಿ ಭಾರತದ ಪ್ರದೇಶಕ್ಕೆ ಹೋಗಿಲ್ಲ ಎಂದಿರುವುದಲ್ಲದೆ, ಗಾಲ್ವಾನ್ ವ್ಯಾಲಿಯನ್ನೂ ತನ್ನದು ಎಂದು ಹೇಳಿ ಕೊಂಡಿದೆ.
ಸಂಧಾನದ ಬೆನ್ನಿಗೆ ಕೃತ್ಯ
ಎಲ್‌ಎಸಿಯ ಈ ಭಾಗದಲ್ಲಿ ಕಳೆದ ಐದು ವಾರಗಳಿಂದ ಭಾರತ-ಚೀನ ಪಡೆಗಳ ನಡುವೆ ನಿಕಟ ಘರ್ಷಣೆಯ ವಾತಾವರಣ ಇದೆ. ಪರಿಸ್ಥಿತಿಯನ್ನು ತಿಳಿಗೊಳಿಸಲು ಕಮಾಂಡರ್ ಮಟ್ಟದ ಮಾತುಕತೆಗಳು ವಿಫಲವಾದ ಬಳಿಕ ಜೂ.6ರಂದು ಲೆಫ್ಟಿನೆಂಟ್ ಜನರಲ್ ಸ್ತರದಲ್ಲಿ ಮಾತುಕತೆ ನಡೆದು ಪಡೆಗಳನ್ನು ಹಿಂದಕ್ಕೆ ಕರೆಸಿಕೊಳ್ಳುವ ನಿರ್ಧಾರಕ್ಕೆ ಎರಡೂ ದೇಶಗಳು ಬಂದಿದ್ದವು. ಸ್ಥಳದಿಂದ ಸೇನೆಯ ವಾಪಸಾತಿ ಹಂತ ಹಂತವಾಗಿ ಪ್ರಗತಿಯಲ್ಲಿದೆ ಎಂದು ಶನಿವಾರವಷ್ಟೇ
– ಭೂಸೇನಾ ಮುಖ್ಯಸ್ಥ ಜ| ನರವಾಣೆ ಹೇಳಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.