ಕೋಟ್ಲಾದಲ್ಲಿ ಸೇಡು ತೀರಿಸೀತೇ ಮುಂಬೈ?
Team Udayavani, Apr 18, 2019, 5:33 AM IST
ಹೊಸದಿಲ್ಲಿ: ಬಲಿಷ್ಠ ಸನ್‌ರೈಸರ್ ಹೈದರಾಬಾದ್ ತಂಡವನ್ನು ಅವರದೇ ಅಂಗಳದಲ್ಲಿ ಊಹಿಸಲೂ ಆಗದ ರೀತಿಯಲ್ಲಿ ಕೆಡವಿದ ಡೆಲ್ಲಿ ಕ್ಯಾಪಿಟಲ್ಸ್ ಗುರುವಾರ ಮತ್ತೂಂದು ಪರೀಕ್ಷೆಗೆ ಸಜ್ಜಾಗಿದೆ. ಶ್ರೇಯಸ್ ಅಯ್ಯರ್ ಪಡೆ ತವರಿನ ಕೋಟ್ಲಾದಲ್ಲೇ ಮುಂಬೈ ಇಂಡಿಯನ್ಸ್ ವಿರುದ್ಧ ಸೆಣಸಲಿದೆ.
ಅಂದಹಾಗೆ ಡೆಲ್ಲಿಗೆ ಇದು ತವರಿನ ಪಂದ್ಯವಾದರೂ ಮುಂಬೈಗೆ ಸೇಡಿನ ಪಂದ್ಯ ಎಂಬುದನ್ನು ಮರೆಯುವಂತಿಲ್ಲ. ವಾಂಖೇಡೆಯಲ್ಲಿ ಆಡಲಾದ ಮೊದಲ ಸುತ್ತಿನ ಮುಖಾಮುಖೀಯಲ್ಲಿ ಮುಂಬೈಗೆ 37 ರನ್ನುಗಳ ಸೋಲು ಎದುರಾಗಿತ್ತು. ಮೊದಲು ಬ್ಯಾಟಿಂಗ್ ನಡೆಸಿದ ಡೆಲ್ಲಿ 6 ವಿಕೆಟಿಗೆ 213 ರನ್ ಪೇರಿಸಿದರೆ, ಮುಂಬೈ 176ಕ್ಕೆ ಆಲೌಟ್ ಆಗಿತ್ತು. 27 ಎಸೆತಗಳಿಂದ ಅಜೇಯ 78 ರನ್ ಸಿಡಿಸಿದ ರಿಷಬ್ ಪಂತ್ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾಗಿದ್ದರು. ಪಂತ್ ಈ ಪಂದ್ಯದಲ್ಲೂ ಪಂಥಾಹ್ವಾನವೊಂದನ್ನು ಸ್ವೀಕರಿಸಬೇಕಿದೆ. ವಿಶ್ವಕಪ್ ತಂಡದಿಂದ ಕೈಬಿಟ್ಟ ಆಯ್ಕೆ ಮಂಡಳಿಗೆ ಭರ್ಜರಿ ಬ್ಯಾಟಿಂಗ್ ಮೂಲಕ ಸವಾಲೆಸೆಯಬೇಕಿದೆ!
ಡೆಲ್ಲಿ ಬೌಲಿಂಗ್ ಬಲಿಷ್ಠ
ಡೆಲ್ಲಿ ತಂಡದಲ್ಲಿ ಹೆಚ್ಚಾಗಿ ಯುವ ಆಟಗಾರರೇ ತುಂಬಿದ್ದಾರೆ. ಆರಂಭ ಕಾರ ಪೃಥ್ವಿ ಶಾ, ನಾಯಕ ಶ್ರೇಯಸ್ ಅಯ್ಯರ್ ಮೂಲತಃ ಮುಂಬಯಿ ತಂಡದ ಪ್ರತಿನಿಧಿಗಳೆಂಬುದನ್ನು ಮರೆಯುವಂತಿಲ್ಲ. ಶಿಖರ್ ಧವನ್, ಕಾಲಿನ್ ಮನ್ರೊ ತಂಡದ ಸ್ಟಾರ್ ಬ್ಯಾಟ್ಸ್‌ಮನ್‌ಗಳು.
ಡೆಲ್ಲಿ ಬೌಲಿಂಗ್ ಹೆಚ್ಚು ವೈವಿಧ್ಯಮಯ. ಇಶಾಂತ್ ಶರ್ಮ, ಕಾಗಿಸೊ ರಬಾಡ, ಕೀಮೊ ಪೌಲ್, ಕ್ರಿಸ್ ಮಾರಿಸ್, ಅಕ್ಷರ್ ಪಟೇಲ್ ಉತ್ತಮ ಫಾರ್ಮ್ನಲ್ಲಿದ್ದಾರೆ. ತವರಿನಲ್ಲಿ ಇವರು ಘಾತಕ ಬೌಲಿಂಗ್ ನಡೆಸಬಲ್ಲರೆಂಬ ವಿಶ್ವಾಸವಿದೆ. ಅಂಕಪಟ್ಟಿಯಲ್ಲಿ ಡೆಲ್ಲಿ 2ನೇ ಸ್ಥಾನ ಅಲಂಕರಿಸಿದರೆ, ಮುಂಬೈ 3ನೇ ಸ್ಥಾನದಲ್ಲಿದೆ.
ಅಪಾಯಕಾರಿ ಪಾಂಡ್ಯ
ಮುಂಬೈ ಕೂಡ ಸಶಕ್ತ ತಂಡ. ಬ್ಯಾಟಿಂಗ್, ಬೌಲಿಂಗ್ ಎರಡರಲ್ಲೂ ಬಲಿಷ್ಠ. ಕೊನೆಯ ಹಂತದಲ್ಲಿ ಕ್ರೀಸ್ ಇಳಿದು, ಮುನ್ನುಗ್ಗಿ ಬಾರಿಸುವ ಮೂಲಕ ಪಂದ್ಯದ ಗತಿಯನ್ನೇ ಬದಲಿಸುವ ಹಾರ್ದಿಕ್ ಪಾಂಡ್ಯ ತಂಡದ ಆಸ್ತಿ. ಆರ್‌ಸಿಬಿ ವಿರುದ್ಧ ಒಂದೇ ಓವರ್‌ನಲ್ಲಿ 21 ರನ್ ಬಾರಿಸಿ ಮುಂಬೈಗೆ ಗೆಲುವು ದಾಖಲಿಸುವ ಮೂಲಕ ಪಾಂಡ್ಯ ಹೆಚ್ಚು ಅಪಾಯಕಾರಿಯಾಗಿ ಗೋಚರಿಸಿದ್ದಾರೆ. ಸಹೋದರ ಕೃಣಾಲ್ ಪಾಂಡ್ಯ ಕೂಡ ಹಾರ್ಡ್ ಹಿಟ್ಟರ್.
ರೋಹಿತ್, ಡಿ ಕಾಕ್, ಪೊಲಾರ್ಡ್ ಉತ್ತಮ ಫಾರ್ಮ್ನಲ್ಲಿರುವುದು ಮುಂಬೈ ಮೇಲೆ ಹೆಚ್ಚಿನ ವಿಶ್ವಾಸ ಇಡುವಂತೆ ಮಾಡಿದೆ. ಕೋಟ್ಲಾದಲ್ಲೂ ಇವರು ಸಿಡಿದು ನಿಂತರೆ ಮುಂಬೈ ಸೇಡು ಪೇರಿಸಲೂಬಹುದು. ಬುಮ್ರಾ, ಮಾಲಿಂಗ ಮುಂಬೈ ತಂಡದ ಪ್ರಮುಖ ಬೌಲಿಂಗ್ ಅಸ್ತ್ರವಾಗಿದ್ದಾರೆ. ಅಲ್ಜಾರಿ ಜೋಸೆಫ್ ನಿರ್ಗಮನ ದೊಡ್ಡ ಸಮಸ್ಯೆಯೇನಲ್ಲ. ಕೋಟ್ಲಾ ಟ್ರ್ಯಾಕ್ ನಿಧಾನ ಗತಿಯಿಂದ ವರ್ತಿಸುವುದರಿಂದ ಇಲ್ಲಿ ಬೌಲರ್‌ಗಳು ಮೇಲುಗೈ ಸಾಧಿಸುವ ಸಾಧ್ಯತೆ ಹೆಚ್ಚು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.