ಸಹಜ ನಡೆ, ಮೊದಲೇ ನಿರ್ಧರಿಸಿರಲಿಲ್ಲ: ಅಶ್ವಿನ್
Team Udayavani, Mar 27, 2019, 7:01 AM IST
ಜೈಪುರ: ಕ್ರೀಸ್ ಗೇಲ್ ಅವರ ಹೊಡಿಬಡಿ ಆಟ ನೋಡಲು ಕಾತರದಿಂದ ಕಾಯುತ್ತಿದ್ದ ಅಭಿಮಾನಿಗಳು ಗೇಲ್ ಅಬ್ಬರದ ಬ್ಯಾಟಿಂಗ್‌ನಿಂದ ತೃಪ್ತರಾಗಿದ್ದಾರೆ. ಗೇಲ್ ಮತ್ತು ಬಟ್ಲರ್ ಅವರ ಸ್ಫೋಟಕ ಬ್ಯಾಟಿಂಗ್ ಜೈಪುರದ “ಸವಾಯ್ ಮಾನ್‌ಸಿಂಗ್ ಸ್ಟೇಡಿಯಂ’ ಕ್ರೀಡಾ ಭಿಮಾನಿಗಳಿಗೆ ರಸದೌತಣವನ್ನೇ ನೀಡಿದೆ. ಕಿಂಗ್ಸ್ ಇಲೆವನ್ ಪಂಜಾಬ್ ಮೊದಲ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ 14 ರನ್‌ಗಳ ಅಂತರದ ಜಯ ದಾಖಲಿಸಿ ಐಪಿಎಲ್‌ನ 12ನೇ ಆವೃತ್ತಿಯನ್ನು ಸ್ವಾಗತಿಸಿದೆ. ಈ ಪಂದ್ಯದ ವೇಳೆಯಲ್ಲಿ ವಿವಾದವೊಂದು ಹುಟ್ಟಿಕೊಂಡಿದೆ. ಬಟ್ಲರ್ ಅವರನ್ನು “ಮಂಕಡ್’ ಮೂಲಕ ಔಟ್ ಮಾಡಿರುವ ಅಶ್ವಿನ್ ಅವರ ನಡೆ ಕ್ರೀಡಾ ಜಗತ್ತಿನಲ್ಲಿ ಬಿಸಿ ಚರ್ಚೆಯಾಗಿ ಬದಲಾಗಿದೆ. ಈ ಕುರಿತು ಅಶ್ವಿನ್ ತಮ್ಮ ಅನಿಸಿಕೆಯನ್ನು ಹೇಳಿಕೊಂಡಿದ್ದಾರೆ.
ಆ ಸಂದರ್ಭದಲ್ಲಿ ತೆಗೆದುಕೊಂಡ ನಿರ್ಧಾರ
ಜಾಸ್ ಬಟ್ಲರ್ ಅವರನ್ನು “ಮಂಕಡ್’ ಮೂಲಕ ಔಟ್ ಮಾಡಿರುವ ರವಿಚಂದ್ರನ್ ಅಶ್ವಿನ್ ಅದು ಆ ಸಂದರ್ಭ ತೆಗೆದುಕೊಂಡ ನಿರ್ಧಾರವೇ ಹೊರತು ಮೊದಲೇ ನಿರ್ಧರಿಸಿದ್ದಲ್ಲ. ಒಂದು ವೇಳೆ ನನ್ನ ನಡೆ ಕ್ರೀಡಾ ಸ್ಫೂರ್ತಿಗೆ ಧಕ್ಕೆಯಾಗಿದೆ ಎಂದಾದರೇ ಕ್ರೀಡಾ ನಿಯಮವನ್ನು ಮರು ಪರಿಶೀಲಿಸಬೇಕು ಎಂದು ಹೇಳಿದ್ದಾರೆ.
ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ನಾಯಕ ಆರ್. ಅಶ್ವಿನ್ ಸೋಮವಾರ ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಜಾಸ್ ಬಟ್ಲರ್ ಅವರನ್ನು “ಮಂಕಡ್ ಔಟ್’ ಮೂಲಕ ಔಟ್ ಮಾಡಿದ್ದರು. ಈ ನಡೆ ಇಂದು ಕ್ರೀಡಾ ಸ್ಫೂರ್ತಿಯ ವಿಷಯದ ಮೇಲೆ ಚರ್ಚೆ ನಡೆಯುವಂತೆ ಮಾಡಿದೆ. ಕಳೆದ 12 ಐಪಿಎಲ್ ಆವೃತ್ತಿಗಳಲ್ಲಿ ಇದೇ ಮೊದಲ ಬಾರಿಗೆ ಇಂತಹ ಘಟನೆ ನಡೆದಿದ್ದು, ಅಶ್ವಿನ್ 13ನೇ ಓವರ್‌ನ ಎಸೆತದಲ್ಲಿ ನಾನ್ ಸ್ಟ್ರೈಕರ್ ಎಂಡ್‌ನಲ್ಲಿ ಇದ್ದ ಜಾಸ್ ಬಟ್ಲರ್ ಅವರನ್ನು ರನೌಟ್ ಮಾಡಿದ್ದಾರೆ. ಈ ನಡೆಯೂ “ಮಂಕಡ್ ಔಟ್’ ಎಂದು ಪ್ರಚಲಿತದಲ್ಲಿದೆ. ಅಶ್ವಿನ್ ಅವರು ಬೆಲ್ಸ್ ಬೀಳಿಸಲು ಬಟ್ಲರ್ ಕ್ರೀಸ್ ಬಿಟ್ಟು ಹೊರನಡೆಯುವುದನ್ನು ಕಾಯುತ್ತಿದ್ದರು ಎಂದು ಟಿವಿ ರಿಪ್ಲೇನಲ್ಲಿ ತೋರಿಸಿರುವುದು ಕೂಡ ಚರ್ಚೆಗೆ ಕಾರಣವಾಗಿದೆ.
“ಅದು ಸಹಜವಾಗಿಯೇ ನಡೆದಿರುವುದು. ಮೊದಲು ನಿರ್ಧರಿಸಿ ಮಾಡಿದಂತಹ ಯೋಜನೆ ಯಲ್ಲ. ಕ್ರಿಕೆಟ್ ನಿಯಮದಲ್ಲಿ “ಮಂಕಡ್ ಔಟ್’ ಈಗಾಗಲೇ ಇದೆ. ಈ ನಡೆಯಲ್ಲಿ ಕ್ರೀಡಾ ಸ್ಫೂರ್ತಿ ಎಲ್ಲಿಂದ ಬರುತ್ತದೆ ಎಂಬುದು ಮಾತ್ರ ನನಗೆ ಅರ್ಥವಾಗುತ್ತಿಲ್ಲ’ ಎಂದು ಅಶ್ವಿನ್ ಪಂದ್ಯದ ಬಳಿಕ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.
ಐಸಿಸಿನ 41.16 ನಿಯಮದಂತೆ “ಮಂಕಡ್ ಔಟ್’ ರೀತಿಯ ರನೌಟ್‌ಗೆ ಅವಕಾಶವಿದೆ. ಇದರ ಪ್ರಕಾರ ಬ್ಯಾಟ್ಸ್‌ಮನ್‌ಗೆ ಎಚ್ಚರಿಕೆ ನೀಡುವ ಆವಶ್ಯಕತೆ ಇಲ್ಲ. “ಸ್ವಾಭಾವಿಕವಾಗಿ ನಿಯಮದಲ್ಲಿ “ಮಂಕಡ್ ಔಟ್’ಗೆ ಅವಕಾಶವಿದೆ. ಹೀಗಾಗಿ ಕ್ರೀಡಾ ಸ್ಫೂರ್ತಿ ಮರೆಯಾಗಿದೆ ಎಂದು ಹೇಳುತ್ತಿರುವುದನ್ನು ನಂಬಲು ಸಾಧ್ಯವಾಗುತ್ತಿಲ್ಲ. ಬಹುಶಃ ನಿಯಮ ಗಳನ್ನು ಮೊದಲೇ ತಿಳಿದುಕೊಳ್ಳಬೇಕಾದ ಅಗತ್ಯ ಬಂದಿದೆ. 1987ರ ವಿಶ್ವಕಪ್ ಪಂದ್ಯದಲ್ಲಿ ಇದೇ ರೀತಿಯ ಪರಿಸ್ಥಿತಿ ಬಂದಿತ್ತು. ಅಂದು ವೆಸ್ಟ್ ಇಂಡೀಸ್‌ನ ಮಾಜಿ ನಾಯಕ ಕೋರ್ಟ್ನಿ ವಾಲ್ಸ್ ಪಾಕಿಸ್ಥಾನದ ಸಲೀಂ ಜಾಫರ್ ಅವರನ್ನು “ಮಂಕಡ್ ಔಟ್’ ರೀತಿಯಲ್ಲೇ ಔಟ್ ಮಾಡಿದ್ದರು’ ಎಂದು ಆ ಘಟನೆಯನ್ನು ನೆನೆಪಿಸಿಕೊಂಡರು.
ನಾಚಿಕೆಗೇಡಿನ ನಡೆ: ಶೇನ್ ವಾರ್ನ್
ಜಾಸ್ ಬಟ್ಲರ್ ಅವರನ್ನು “ಮಂಕಡ್ ಔಟ್’ ರೀತಿಯಲ್ಲಿ ಔಟ್ ಮಾಡಿರುವ ಅಶ್ವಿನ್ ಅವರ ನಡೆಯನ್ನು ರಾಜಸ್ಥಾನ ರಾಯಲ್ಸ್ ತಂಡದ ರಾಯಭಾರಿ ಶೇನ್ ವಾರ್ನ್ ತೀವ್ರವಾಗಿ ಖಂಡಿಸಿದ್ದು, ನಾಚಿಕೆಗೇಡಿನ ನಡೆ ಮತ್ತು ಕ್ರೀಡಾ ಸ್ಫೂರ್ತಿಗೆ ದಕ್ಕೆಯಾಗಿದೆ ಎಂದು ಹೇಳಿದ್ದಾರೆ.
“ಆರ್. ಅಶ್ವಿನ್ ಅವರ ನಡೆಯಿಂದ ತೀರಾ ನಿರಾಶೆ ಉಂಟಾಗಿದೆ. ಎಲ್ಲ ತಂಡಗಳ ನಾಯಕರು ಕ್ರೀಡಾ ಸ್ಫೂರ್ತಿಯಿಂದ ಆಡುತ್ತೇವೆ ಎಂದು ಐಪಿಎಲ್ ವಾಲ್‌ನಲ್ಲಿ ಸಹಿ ಹಾಕಿದ್ದಾರೆ. ಅಶ್ವಿನ್ ಆ ರೀತಿಯಲ್ಲಿ ನಡೆದುಕೊಳ್ಳುವ ಉದ್ದೇಶ ಹೊಂದಿರಲಿಲ್ಲ. ಆದ್ದರಿಂದ ಆ ಎಸೆತವನ್ನು ಡೆಡ್‌ಬೌಲ್ ಎಂದು ಪರಿಗಣಿಸಬಹುದಿತ್ತು. ಇದು ಐಪಿಎಲ್‌ನ ಉತ್ತಮವಾದ ನೋಟವಲ್ಲ. ಇನ್ನು ಈ ಪ್ರಕರಣ ಬಿಸಿಸಿಐಗೆ ಬಿಟ್ಟಿದ್ದು. ಅಶ್ವಿನ್ ಅವರ ನಡೆ ನಾಚಿಕೆ ಗೇಡಿನ ನಡೆ. ಬಿಸಿಸಿಐ ಈ ರೀತಿಯ ವರ್ತನೆ ಯನ್ನು ಕ್ಷಮಿಸುವುದಿಲ್ಲ ಎಂದು ಭಾವಿಸಿದ್ದೇನೆ. ನೀವು ಕ್ರೀಡಾಸ್ಫೂರ್ತಿಯನ್ನು ಮರೆತಿದ್ದೀರಿ’ ಎಂದು ವಾರ್ನ್ ಬರೆದುಕೊಂಡಿದ್ದಾರೆ.
ಮಂಕಡ್: ವಿವಾದ ಇದೇ ಮೊದಲಲ್ಲ
ರಾಜಸ್ಥಾನ ರಾಯಲ್ಸ್ ಆಟಗಾರ ಜೋಸ್ ಬಟ್ಲರ್ ಅವರನ್ನು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ನಾಯಕ ಆರ್. ಅಶ್ವಿನ್ ರನೌಟ್ ಮಾಡಿದ ರೀತಿ ಈಗ ವಿವಾದಕ್ಕೂ ಕಾರಣವಾಗಿದೆ. ಐಪಿಎಲ್ ಇತಿಹಾಸದಲ್ಲಿ “ಮಂಕಡ್’ ನಿದರ್ಶನ ಇದೇ ಮೊದಲು. ಬೌಲರ್ ರನ್-ಅಪ್ ಅವಧಿಯಲ್ಲೇ ಆಟಗಾರ ಕ್ರೀಸ್ ಬಿಟ್ಟಿದ್ದರೆ ಎಸೆತವನ್ನು ಸ್ಥಗಿತಗೊಳಿಸಿ ಸ್ಟಂಪ್‌ನ ಬೇಲ್ಸ್ ಹಾರಿಸಿ, ಆಟಗಾರರನ್ನು ಔಟ್ ಮಾಡಲು ಎಂಸಿಸಿ ನಿಯಮ 41.16ರಲ್ಲಿ ಅವಕಾಶವಿದೆ. ಇದನ್ನು “ರನೌಟ್’ ಎಂದೇ ಪರಿಗಣಿಸಲಾಗುತ್ತದೆ. ಭಾರತದ ವಿಮೂ ಮಂಕಡ್ 1947ರ ಡಿಸೆಂಬರ್ 13ರಂದು ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಬಿಲ್ ಬ್ರೌನ್ ಅವರನ್ನು ಔಟ್ ಮಾಡಿದಲ್ಲಿಂದ ಇದಕ್ಕೆ “ಮಂಕಡ್’ ಎಂಬ ಹೆಸರು ಬಂದಿದೆ. ಇದು ಕ್ರೀಡಾಸ್ಫೂರ್ತಿಗೆ ವಿರುದ್ಧವೆಂದು ಮಂಕಡ್ ಸಾಕಷ್ಟು ಟೀಕೆಗಳನ್ನೂ ಎದುರಿಸಿದ್ದರು. ಡಾನ್ ಬ್ರಾಡ್‌ಮನ್ ಮಾತ್ರ ಸಮರ್ಥಿಸಿಕೊಂಡಿದ್ದರು.
2012ರಲ್ಲಿ ಅಶ್ವಿನ್ ಶ್ರೀಲಂಕಾದ ಲಹಿರು ತಿರಿಮನ್ನೆ ಅವರನ್ನೂ “ಮಂಕಡ್’ ಮಾಡಿದ್ದರು. ಆದರೆ, ಸಚಿನ್ ತೆಂಡುಲ್ಕರ್ ಸಲಹೆಯಂತೆ ವೀರೇಂದ್ರ ಸೆಹ್ವಾಗ್ ಲಹಿರು ಆಟ ಮುಂದು ವರಿಸಲು ಅವಕಾಶ ಮಾಡಿಕೊಟ್ಟಿದ್ದರು. 1992ರಲ್ಲಿ ಹಲವು ಸಲ ಕ್ರೀಸ್ ಬಿಟ್ಟ ದಕ್ಷಿಣ ಆಫ್ರಿಕಾದ ಪೀಟರ್ ಕರ್ಸ್ಟನ್ ಅವರನ್ನು ಕಪಿಲ್ ದೇವ್ ಪೆವಿಲಿಯನ್‌ಗೆ ಅಟ್ಟಿದ್ದು ಮಂಕಡ್ ಮಾದರಿಯಲ್ಲೇ. ಆಮೇಲೆ ಕೆಪ್ಲರ್ ವೆಸೆಲ್ಸ್ ರನ್ ಓಡುವ ನೆಪದಲ್ಲಿ ಕಪಿಲ್‌ಗೆ ಬ್ಯಾಟ್ ಬಡಿಸಿ, ಸಿಟ್ಟು ತೀರಿಸಿಕೊಂಡಿದ್ದರು.
ಸಂಕ್ಷಿಪ್ತ ಸ್ಕೋರ್
ಕಿಂಗ್ಸ್ ಇಲೆವೆನ್ ಪಂಜಾಬ್-4 ವಿಕೆಟಿಗೆ 184. ರಾಜಸ್ಥಾನ ರಾಯಲ್ಸ್-20 ಓವರ್‌ಗಳಲ್ಲಿ 9 ವಿಕೆಟಿಗೆ 170 (ಜಾಸ್ ಬಟ್ಲರ್ 69, ಸಂಜು ಸ್ಯಾಮ್ಸನ್ 30, ರಹಾನೆ 27, ಸ್ಯಾಮ್ ಕರನ್ 52ಕ್ಕೆ 2, ರೆಹಮಾನ್ 31ಕ್ಕೆ 2, ಅಂಕಿತ್ ರಜಪೂತ್ 33ಕ್ಕೆ 2. ಪಂದ್ಯ ಶ್ರೇಷ್ಠ: ಕ್ರೀಸ್ ಗೇಲ್.
ಎಕ್ಸ್‌ಟ್ರಾ ಇನ್ನಿಂಗ್ಸ್
ಕಿಂಗ್ಸ್ ಇಲೆವೆನ್ ಪಂಜಾಬ್ ಜೈಪುರದ “ಸವಾಯ್ ಮಾನ್‌ಸಿಂಗ್ ಸ್ಟೇಡಿಯಂ’ನಲ್ಲಿ ಇದೇ ಮೊದಲ ಬಾರಿಗೆ ಜಯ ಸಾಧಿಸಿದೆ. ರಾಜಸ್ಥಾನ ವಿರುದ್ಧ ಜೈಪುರದಲ್ಲಿ ನಡೆದ ಕಳೆದ 5 ಪಂದ್ಯಗಳಲ್ಲೂ ಪಂಜಾಬ್ ಸೋತಿತ್ತು.
ಜೈಪುರದಲ್ಲಿ ಪಂಜಾಬ್ ಮೊದಲ 6 ಓವರ್‌ಗಳಲ್ಲಿ ಕಡಿಮೆ ರನ್ ಕಲೆಹಾಕಿ ದಾಖಲೆ ಸೃಷ್ಟಿಸಿದೆ. ಈ ಪಂದ್ಯದಲ್ಲಿ ಪಂಜಾಬ್ 6 ಓವರ್‌ಗಳಲ್ಲಿ ಗಳಿಸಿದ್ದು ಕೇವಲ 32 ರನ್.
ಈ ಜಯದಿಂದ ಪಂಜಾಬ್ 5 ಪಂದ್ಯಗಳ ಸೋಲಿನ ಪರಂಪರೆಯನ್ನು ಕೊನೆಗೊಳಿಸಿದೆ. ಪಂಜಾಬ್ ಕಳೆದ ಆವೃತ್ತಿಯ ಕೊನೆಯ 5 ಪಂದ್ಯಗಳಲ್ಲಿ ಸೋತಿತ್ತು.
ಪಂಜಾಬ್ ವಿರುದ್ಧ ಜಾಸ್ ಬಟ್ಲರ್ ಸತತ 4ನೇ ಬಾರಿ ಅರ್ಧಶತಕ ಬಾರಿಸಿದ್ದಾರೆ. ಕಳೆದ ಆವೃತ್ತಿಯಲ್ಲಿ ರಾಜಸ್ಥಾನ ಪರ 82 ರನ್, 2017ರ ಆವೃತ್ತಿಯಲ್ಲಿ ಮುಂಬೈ ಪರ 77 ರನ್ ಬಾರಿಸಿದ್ದರು. ಈ 4 ಪಂದ್ಯಗಳಲ್ಲಿ ಬಟ್ಲರ್ ಆರಂಭಿಕರಾಗಿ ಆಡಲಿಳಿದಿದ್ದರು.
ಆರ್. ಅಶ್ವಿನ್ ಐಪಿಎಲ್‌ನಲ್ಲಿ 4 ಬಾರಿಗೆ ಅಜಿಂಕ್ಯ ರಹಾನೆ ಅವರ ವಿಕೆಟ್ ಕಿತ್ತಿದ್ದಾರೆ.
ಈ ಪಂದ್ಯ ಸಹಿತ ಕೆ.ಎಲ್. ರಾಹುಲ್ ಧವಳ್ ಕುಲಕರ್ಣಿಯ ಎಸೆತದಲ್ಲಿ 4 ಬಾರಿ ಔಟಾಗಿದ್ದಾರೆ.
ಕ್ರೀಸ್ ಗೇಲ್ ಐಪಿಎಲ್‌ನಲ್ಲಿ 4 ಸಾವಿರ ರನ್ ಪೂರೈಸಿದ 2ನೇ ವಿದೇಶಿ ಆಟಗಾರ ಮತ್ತು ಒಟ್ಟಾರೆಯಾಗಿ 9ನೇ ಆಟಗಾರ. ಈ ಮೈಲುಗಲ್ಲನ್ನು ಗೇಲ್ 112 ಇನ್ನಿಂಗ್ಸ್‌ಗಳಲ್ಲಿ ತಲುಪಿದ್ದಾರೆ. ಇದರಿಂದಾಗಿ ವಾರ್ನರ್ ಅವರ ದಾಖಲೆ ಪತನಗೊಂಡಿದೆ (114 ಇನ್ನಿಂಗ್ಸ್).
ರಾಜಸ್ಥಾನ ವಿರುದ್ಧ ಗೇಲ್ ಅತ್ಯಧಿಕ ರನ್ (47 ಎಸೆತಗಳಲ್ಲಿ 79 ರನ್) ದಾಖಲಿಸಿದರು.
ಆರ್. ಅಶ್ವಿನ್ ಅವರು ಜಾಸ್ ಬಟ್ಲರ್ ಅವರನ್ನು “ಮಂಕಡ್ ಔಟ್ (ನಾನ್ ಸ್ಟ್ರೈಕ್ ಬ್ಯಾಟ್ಸ್‌ಮನ್ ಔಟ್) ಮಾಡಿದರು. ಐಪಿಎಲ್‌ನಲ್ಲಿ ಈ ರೀತಿ ಔಟ್ ಆಗಿರುವುದು ಇದೇ ಮೊದಲು.
ಬಟ್ಲರ್ 2ನೇ ಬಾರಿ ಈ ಸನ್ನಿವೇಶದಲ್ಲಿ (ಮಂಕಡ್ ಔಟ್) ಔಟಾಗಿದ್ದಾರೆ. 2014ರ ಶ್ರೀಲಂಕಾ ವಿರುದ್ಧದ ಏಕದಿನ ಪಂದ್ಯದಲ್ಲಿ ಸಚಿತ್ರ ಸೇನಾನಾಯಕ ಬೌಲಿಂಗ್‌ನಲ್ಲಿ ಈ ರೀತಿ ಔಟಾಗಿದ್ದರು.
ಸಫ್ರಾಜ್ ಖಾನ್ ಈ ಪಂದ್ಯದಲ್ಲಿ ಗಳಿಸಿದ ಅಜೇಯ 46 ರನ್ ಐಪಿಎಲ್‌ನಲ್ಲಿ ಅವರ ಅತ್ಯಧಿಕ ರನ್ ಗಳಿಕೆ. 2015ರಲ್ಲಿ ಆರ್‌ಸಿಬಿ ತಂಡದ ಪರ ರಾಜಸ್ಥಾನ ವಿರುದ್ಧದ ಪಂದ್ಯದಲ್ಲಿ ಅವರು ಅಜೇಯ 45 ರನ್ ಗಳಿಸಿದ್ದು ಈ ಹಿಂದಿನ ಗರಿಷ್ಠ ರನ್ ಆಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Manipal ಪಾಯ್ಸನ್ ಇನ್‌ಫಾರ್ಮೇಶನ್ ಸೆಂಟರ್; ಸಮುದಾಯಕ್ಕೊಂದು ಉಪಕಾರಿ ಸೇವೆ
UV Fusion: ಆತ್ಮಹತ್ಯೆಗೂ ಆಯಸ್ಸು ಮುಗಿದಿರಬೇಕು
Vavar Mosque: ಶಬರಿಮಲೆ ಯಾತ್ರಿಗಳು ವಾವರ ಮಸೀದಿಗೆ ಹೋಗಬಾರದು: ಬಿಜೆಪಿ ಶಾಸಕ
Sydney: ಆಸ್ಟ್ರೇಲಿಯಾ ಪ್ರೇಕ್ಷಕರಿಗೆ ಸ್ಯಾಂಡ್‌ಪೇಪರ್ ಕೇಸ್ ನೆನಪು ಮಾಡಿದ ವಿರಾಟ್|Video
Viral: ಇನ್ಸ್ಟಾಗ್ರಾಮ್‌ನಲ್ಲಿ ಪರಿಚಯವಾದ 16ರ ಬಾಲಕನ ಜತೆ ಮನೆ ಬಿಟ್ಟು ಓಡಿದ 10ರ ಬಾಲಕಿ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.