ನಮ್ಮ ಒಂಟೆಯನ್ನು ನಾವೇ ಕಟ್ಟಿ ಹಾಕಬೇಕು
Team Udayavani, Apr 23, 2021, 6:00 AM IST
ನಾವು ದಿನವೂ ದೇವರನ್ನು ಪ್ರಾರ್ಥಿಸುತ್ತೇವೆ, ಒಳ್ಳೆಯದು ಮಾಡು ಎಂದು ಬೇಡುತ್ತೇವೆ. “ಪರೀಕ್ಷೆಯಲ್ಲಿ ಉತ್ತೀರ್ಣಗೊಳಿಸು ದೇವರೇ’ ಎನ್ನುವುದು ವಿದ್ಯಾರ್ಥಿಯ ಪ್ರಾರ್ಥನೆ. ಹೊಸ ವ್ಯಾಪಾರ ಆರಂಭಿಸುವಾಗ ವರ್ತಕ ಅವನವನ ಧರ್ಮಕ್ಕೆ ಅನುಸಾರವಾಗಿ ಪೂಜೆ, ಪ್ರಾರ್ಥನೆ ನಡೆಸುತ್ತಾನೆ – “ವಹಿವಾಟು ಸಮೃದ್ದವಾಗಲಿ ದೇವರೇ’. ಮದುವೆಯ ದಿನವೂ “ದೇವರು ನಿಮ್ಮನ್ನು ಚೆನ್ನಾಗಿ ಇಟ್ಟಿರಲಿ’ ಎಂದು ಎಲ್ಲರೂ ನವದಂಪತಿಯನ್ನು ಆಶೀರ್ವದಿಸುತ್ತಾರೆ.
ಹಾಗೆಂದು, ದೇವರೇ ಎಲ್ಲವನ್ನೂ ಮಾಡಿ ಕೊಡುತ್ತಾನೆ ಎಂದು ಕೊಂಡು ನಾವು ಸುಮ್ಮನಿದ್ದರೆ ಆಗು ತ್ತದೆಯೇ? ವಿದ್ಯಾರ್ಥಿ ತನ್ನ ಪ್ರಯತ್ನವನ್ನು ಮಾಡುತ್ತಾನೆ, ವ್ಯಾಪಾರಿ ಶಕ್ತಿಮೀರಿ ಶ್ರಮಿಸುತ್ತಾನೆ, ಹೊಸ ಗಂಡ-ಹೆಂಡತಿ ಸಮರಸದ ಜೀವನಕ್ಕಾಗಿ ಅರ್ಥ, ಕಾಮ, ಮೋಕ್ಷ ಮಾರ್ಗಗಳಲ್ಲಿ ಪ್ರಯತ್ನಿಸುತ್ತಾರೆ. ಅವರು ಮಾತ್ರ ಅಲ್ಲ; ಎಲ್ಲರೂ ನಮ್ಮ ನಮ್ಮ ಪ್ರಯತ್ನವನ್ನು ಮಾಡಲೇ ಬೇಕು. ನಮ್ಮ ಪ್ರಯತ್ನ, ಶ್ರಮ, ಕಾಯಕ ಶ್ರದ್ಧೆಯ ಫಲವಾಗಿ ತಕ್ಕ ಯಶಸ್ಸು ದೊರಕುತ್ತದೆ ಅಥವಾ ನಾವು ನಂಬುವ ದೇವರು ತಕ್ಕ ಫಲವನ್ನು ನಮಗೆ ಕರುಣಿಸುತ್ತಾನೆ. ನಮ್ಮ ಪ್ರಯತ್ನ ಮತ್ತು ದೇವರಲ್ಲಿ ವಿಶ್ವಾಸ – ಯಶಸ್ಸಿಗೆ ಇವೆರಡೂ ಬೇಕು.
ಅದು ಬಿಟ್ಟು ದೇವರ ಮೇಲೆ ಭಾರ ಹಾಕಿ ನಮ್ಮ ಪ್ರಯತ್ನವನ್ನು ನಾವು ಮಾಡದೆ ಇದ್ದರೆ ಏನೂ ದಕ್ಕುವುದಿಲ್ಲ.
ಸೂಫಿ ಸಂತನೊಬ್ಬನಿದ್ದ. ಒಂದು ಬಾರಿ ಅವನು ದೂರ ದೇಶಕ್ಕೆ ಪ್ರಯಾಣ ಹೊರಟ. ಅವನೊಂದಿಗೆ ಇದ್ದದ್ದು ಒಂದು ಒಂಟೆ ಮತ್ತು ಆ ಒಂಟೆಯ ದೇಖರೇಖೀ ನೋಡಿಕೊಳ್ಳಲು ಒಬ್ಬ ಶಿಷ್ಯ.
ಮರುಭೂಮಿಯಲ್ಲಿ ಸಾಕಷ್ಟು ದೂರ ಪ್ರಯಾಣಿಸಿದ ಬಳಿಕ ಅವರು ಒಂದೂರಿಗೆ ತಲುಪಿದರು. ಅವರಿಗೆ ಸಾಕಷ್ಟು ಸುಸ್ತಾಗಿತ್ತು, ಸೂರ್ಯ ಕಂತಿ ಕತ್ತಲು ಕೂಡ ಕವಿದಿತ್ತು. ಅವರು ಅಲ್ಲಿಯೇ ಗುಡಾರ ಹೂಡಿ ತಂಗಲು ನಿಶ್ಚಯಿಸಿದರು.
ಶಿಷ್ಯ ಡೇರೆ ಸಿದ್ಧಪಡಿಸಿದ. ಸಂತ ಅದರೊಳಗೆ ಪವಡಿಸಿದ. ಮಲಗುವುದಕ್ಕೆ ಮುನ್ನ ಒಂಟೆಗೆ ಹುಲ್ಲಿನ ದಂಟು, ನೀರು ಇರಿಸಿ ಗುಡಾರದ ಗೂಟಕ್ಕೆ ಕಟ್ಟಿಹಾಕಲು ಹೇಳಿ ಸಂತ ನಿದ್ದೆಹೋದ.
ಶಿಷ್ಯನಿಗೆ ದೂರ ಪ್ರಯಾಣ ಹೊಸತು. ಹಾಗಾಗಿ ಅವನಿಗೆ ತುಂಬಾ ಆಯಾಸ ವಾಗಿತ್ತು. ಒಂಟೆಗೆ ಹುಲ್ಲು, ನೀರು ಇರಿಸು ವುದು ಬಿಡಿ, ಕಟ್ಟಿ ಹಾಕುವುದಕ್ಕೂ ತ್ರಾಣವಿರಲಿಲ್ಲ. ಹಾಗಾಗಿ ಆತ ಮಂಡಿಯೂರಿ ದೇವರನ್ನು ಪ್ರಾರ್ಥಿಸಿದ, “ದೇವರೇ, ಒಂಟೆಯ ರಕ್ಷಣೆಯ ಭಾರ ನಿನ್ನದು. ಅದನ್ನು ನಿನ್ನ ಸುಪರ್ದಿಗೆ ಬಿಟ್ಟಿದ್ದೇನೆ…’ ಇಷ್ಟು ಹೇಳಿ ಆತನೂ ನಿದ್ದೆಹೋದ.
ಬೆಳಗಾಯಿತು. ಒಂಟೆ ಇರಲಿಲ್ಲ. ಒಂದೋ ಅದು ಆಹಾರ, ನೀರು ಅರಸಿ ಎಲ್ಲೋ ಹೋಗಿದ್ದಿರಬಹುದು ಅಥವಾ ಯಾರಾದರೂ ಕದ್ದೊಯ್ದಿದ್ದಿರಬಹುದು. ಅಂತೂ ಒಂಟೆ ಇರಲಿಲ್ಲ.
ಸಂತ ಕೇಳಿದ, “ಒಂಟೆಯನ್ನು ಕಟ್ಟಿ ಹಾಕಿರಲಿಲ್ಲವೇ?’
“ಇಲ್ಲ. ದೇವರ ಮೇಲೆ ಭಾರ ಹಾಕಿದ್ದೆ…’ ಎಂದ ಶಿಷ್ಯ.
ಸಂತ ಉತ್ತರಿಸಿದ, “ದೇವರ ಮೇಲೆ ಭಾರ ಹಾಕಬೇಕು ನಿಜ. ಆದರೆ ನೀನೇ ಅದನ್ನು ಕಟ್ಟಿಹಾಕಬೇಕು. ದೇವರು ಒಂಟೆಯನ್ನು ಕಟ್ಟಿ ಹಾಕುವುದಿದ್ದರೆ ಅದು ನಿನ್ನ ಕೈಗಳ ಮೂಲಕವೇ. ಅಲ್ಲದೆ ಅದು ನಿನ್ನ ಒಂಟೆ, ನೀನೇ ಅದನ್ನು ಕಟ್ಟಬೇಕಲ್ಲದೆ ಮತಾöರು! ಕಟ್ಟಿ ಹಾಕಿದ ಒಂಟೆಯನ್ನೂ ಕದಿಯಬಹುದು. ಹಾಗಾಗಿ ನಮ್ಮ ಒಂಟೆಯನ್ನು ನಾವೇ ಕಟ್ಟಬೇಕು; ಆ ಬಳಿಕ ದೇವರ ಮೇಲೆ ಭಾರ ಹಾಕಬೇಕು…’
ನಮ್ಮ ಪ್ರಯತ್ನವನ್ನು ನಾವು ಮೊದಲು ಮಾಡಬೇಕು. ಅದಕ್ಕೆ ತಕ್ಕುದಾದ ಫಲವನ್ನು ಕರುಣಿಸುವ ಕೆಲಸವನ್ನು ಮಾತ್ರ ದೇವರಿಗೆ ಬಿಡಬೇಕು.
( ಸಾರ ಸಂಗ್ರಹ)
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BJP: ವಿಜಯೇಂದ್ರ ದಿಲ್ಲಿಗೆ: ವರಿಷ್ಠರ ಜತೆ “ಬಣ’ ರಾಜಕೀಯ ಚರ್ಚೆ?
Congress; ಅಧಿವೇಶನಕ್ಕೆ ಮುನ್ನ ಸಂಪುಟಕ್ಕೆ ಸರ್ಜರಿ? ಸಾಧ್ಯತೆಗಳೇನು?
Mahayuti ಗೆಲುವು: ಆ್ಯಕ್ಸಿಸ್ ಮೈ ಇಂಡಿಯಾ, ಚಾಣಕ್ಯ ಸಮೀಕ್ಷೆ ಭವಿಷ್ಯ
High Court: ನಕ್ಸಲ್ ಚಟುವಟಿಕೆ: ಸಾವಿತ್ರಿ ಬಾಡಿ ವಾರಂಟ್ ಮನವಿ ಮರು ಪರಿಶೀಲನೆಗೆ ನಿರ್ದೇಶ
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.