ಕಷ್ಟ, ಪರಿಶ್ರಮ, ಸವಾಲು, ಹೋರಾಟಗಳೇ ಬದುಕು
Team Udayavani, Sep 19, 2020, 6:31 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ನಮ್ಮೆದುರು ಎರಡು ಆಯ್ಕೆಗಳಿವೆ ಎಂದುಕೊಳ್ಳಿ. ಒಂದನೆಯದು ನಾಳೆ ನಾವು ಕುಮಾರ ಪರ್ವತಕ್ಕೆ ಚಾರಣ ಹೋಗಿ ಬೆಟ್ಟದ ತುದಿಯಲ್ಲಿ ರಾತ್ರಿ ಕಳೆಯುವುದು, ಇನ್ನೊಂದು ಮನೆಯಲ್ಲಿಯೇ ಇರುವುದು.
ಈಗ ಚಾರಣದ ವಿವರಗಳನ್ನು ನೋಡೋಣ – ಕಡಿದಾದ ಬೆಟ್ಟ ಹತ್ತುವಾಗ ಕಾಲುಗಳು ನೋಯುತ್ತವೆ, ಜಿಗಣೆಗಳು ಕಚ್ಚಬಹುದು, ರಾತ್ರಿ ಒಳ್ಳೆಯ ಊಟ ಸಿಗಲಾರದು, ರಾತ್ರಿ ಟೆಂಟ್‌ನಲ್ಲಿ ಮಲಗಬೇಕು – ಚಳಿಯಾಗಬಹುದು, ಮಳೆಯಲ್ಲಿ ಒದ್ದೆಯಾಗಬಹುದು.
ಈಗ ಮನೆಯಲ್ಲಿಯೇ ಇರುವುದರ ವಿವರ – ಒಳ್ಳೆಯ ಮನೆಯೂಟ, ಕಾಲು ನೋಯುವುದಿಲ್ಲ, ಜಿಗಣೆ ಕಚ್ಚುವುದಿಲ್ಲ, ರಾತ್ರಿ ಸುಖವಾಗಿ ಮಲಗಬಹುದು, ಯಾವ ತೊಂದರೆಯೂ ಇಲ್ಲ.
ನಮ್ಮಲ್ಲಿ ನೂರಕ್ಕೆ ತೊಂಬತ್ತು ಮಂದಿಯೂ ಎರಡನೆಯದನ್ನು ಆಯ್ದುಕೊಳ್ಳುತ್ತಾರೆ. ಕಷ್ಟಗಳ ನಡುವೆಯೂ ಚಾರಣ ಹೋಗುವ ಥ್ರಿಲ್, ಪರಿಶ್ರಮ ಪಟ್ಟು ಬೆಟ್ಟ ಏರಿದ ಮೇಲೆ ಸುತ್ತಲೂ ನೋಡುವಾಗ ಸಿಗುವ ಖುಷಿ, ಪರ್ವತ ಏರಿದ ಸಂತೃಪ್ತಿಗಳಿಂದ ತಪ್ಪಿಸಿಕೊಳ್ಳುತ್ತಾರೆ. ಕಷ್ಟ, ಪರಿಶ್ರಮ, ಸವಾಲುಗಳ ದಾರಿಯಲ್ಲಿ ನಡೆಯುವುದು ಎಲ್ಲರ ಆಯ್ಕೆ ಅಲ್ಲ.
ಯಾಕೆ ಅಂದರೆ ಜೀವನವನ್ನು ಸುಲಭ ಮಾಡಿಕೊಳ್ಳುವುದನ್ನು ನಾವು ಚಿಕ್ಕಂದಿನಿಂದಲೇ ಅಭ್ಯಾಸ ಮಾಡಿಕೊಂಡಿರುತ್ತೇವೆ. ಆದರೆ ಕಷ್ಟಗಳನ್ನು ಎದುರಿಸದೆ, ಪರಿಶ್ರಮ ಪಡದೆ, ಹೋರಾಡದೆ ಇರುವುದು ಬದುಕೇ ಅಲ್ಲ ಎನ್ನುತ್ತಾರೆ ಸದ್ಗುರು. ‘ಸುಲಭ’ವನ್ನು ಅಭ್ಯಾಸ ಮಾಡಿಕೊಂಡಿರುವ ನಾವು ಎಲ್ಲದರಲ್ಲೂ ಅದನ್ನೇ ಹುಡುಕುತ್ತೇವೆ, ಆಯ್ದುಕೊಳ್ಳುತ್ತೇವೆ. ಅದರಿಂದಾಗಿ ನಿಜಕ್ಕೂ ನಮಗೆ ಬೇಕಾಗಿರುವುದು ಬದಿಗೆ ಸರಿಯುತ್ತದೆ, ಏಕೆಂದರೆ ಅದಕ್ಕಿಂತ ಸುಲಭವಾಗಿ ಸಿಗುವಂಥದ್ದು ಸದಾ ನಮ್ಮನ್ನು ಆಕರ್ಷಿಸುತ್ತದೆ.
ಸುಲಭವಾಗಿ ಸಿಗುವುದನ್ನೇ ನಾವು ಆರಿಸಿಕೊಳ್ಳುತ್ತೇವೆ ಎಂದಾದರೆ ನಮಗೆ ಬದುಕು ಇಷ್ಟವಿಲ್ಲ ಎಂದರ್ಥ. ಸುಲಭದ ಮುಂದಿನ ಹಂತ ಎಂದರೆ ನಿದ್ದೆ. ಅದರ ಉತ್ತುಂಗ ಎಂದರೆ ಮೃತ್ಯು. ಬದುಕು ಎಂದರೆ ಕಷ್ಟಗಳು, ಸವಾಲು, ಪರಿಶ್ರಮ, ಹೋರಾಟ. ಯಾವುದೋ ಒಂದು ನಮಗೆ ಕಷ್ಟ ಅಥವಾ ಸುಲಭವಾಗಿ ಅನುಭವಕ್ಕೆ ಬರುವುದು, ಕಾಣುವುದು, ಗ್ರಹಿಕೆಯಾಗುವುದು ಅದು ನಮ್ಮ ಬದುಕಿನಲ್ಲಿ ಎಷ್ಟು ಮುಖ್ಯವಾಗಿದೆ ಎಂಬುದನ್ನು ಆಧರಿಸಿರುತ್ತದೆ. ಮಾವಿನ ಗಿಡ ನೆಡುವುದಕ್ಕಾಗಿ ಹಿತ್ತಿಲಿನಲ್ಲಿ ಗುಂಡಿ ತೋಡುವುದು ಎಂದಿಟ್ಟುಕೊಳ್ಳಿ.
ಆ ಕೆಲಸ ಮಾಡುವುದು ನಮಗೆ ಎಷ್ಟೇ ಕಷ್ಟವಾದರೂ ಮಾಡಿಯೇ ಮಾಡುತ್ತೇವೆ. ಏಕೆಂದರೆ ನಮ್ಮ ಜಾಗ ದಲ್ಲೊಂದು ಮಾವಿನ ಮರ ಬೆಳೆಯುವುದು, ನಮ್ಮದೇ ಮರದ ಮಾವಿನ ಹಣ್ಣು ತಿನ್ನುವುದು ನಮಗೆ ಬಹಳ ಮುಖ್ಯವಾಗಿರುತ್ತದೆ, ಆಪ್ತವಾಗಿರುತ್ತದೆ. ಮೇಲೆ ಹೇಳಿದ ಟ್ರೆಕಿಂಗ್ ವಿಚಾರವನ್ನೇ ತೆಗೆದುಕೊಳ್ಳಿ. ಕಷ್ಟಪಟ್ಟು ಬೆಟ್ಟ ಹತ್ತುವ ಥ್ರಿಲ್, ಪರ್ವತ ಏರಿದ ಮೇಲೆ ಸಿಗುವ ಸಂತೃಪ್ತಿ ನಿಮಗೆ ಬಹಳ ಬೇಕಾದುದಾಗಿದ್ದರೆ, ಅದನ್ನು ನೀವು ಇಷ್ಟಪಡುವಿರಾಗಿದ್ದರೆ ಮಾತ್ರ ಚಾರಣ ಹೋಗುತ್ತೀರಿ.
ಇದುವೇ ಬದುಕು. ಬದುಕಿನಲ್ಲಿ ದೊಡ್ಡ ಗುರಿಗಳನ್ನು ಇರಿಸಿಕೊಳ್ಳಬೇಕು, ಅವುಗಳನ್ನು ಸಾಧಿಸುವುದಕ್ಕಾಗಿ ಶ್ರಮಿಸಬೇಕು ಎಂದು ಹೇಳುವುದು ಇದಕ್ಕಾಗಿಯೇ. ಪ್ರತಿಯೊಬ್ಬನಲ್ಲೂ ಅಪಾರ ಪ್ರಮಾಣದ ಸಾಮರ್ಥ್ಯ ಇರುತ್ತದೆ. ನಮ್ಮ ಸಾಧನೆಗೆ ಆಕಾಶವು ಮಿತಿಯಾಗಬೇಕು ಎನ್ನುವುದು ಇದೇ ಕಾರಣಕ್ಕೆ. ದೊಡ್ಡ ಕನಸುಗಳನ್ನು ಕಂಡರೆ, ಭಾರೀ ಗುರಿಗಳನ್ನು ಇರಿಸಿಕೊಂಡರೆ ಮಾತ್ರ ಅವುಗಳನ್ನು ಸಾಧಿಸುವುದಕ್ಕಾಗುತ್ತದೆ. ಜಸ್ಟ್ ಪಾಸ್ ಅಂಕ ತೆಗೆದರೆ ಸಾಕು ಎಂದುಕೊಂಡರೆ ಅಷ್ಟಕ್ಕೆ ಸೀಮಿತವಾಗುತ್ತೇವೆ.
(ಸಂಗ್ರಹ)
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.