ಈ ಕ್ಷಣದ ಜೀವನ ನಾಲಗೆ ಮೇಲಿನ ಜೇನ ಹನಿ
Team Udayavani, Mar 22, 2021, 6:00 AM IST
ಸಾಂದರ್ಭಿಕ ಚಿತ್ರ
ಧ್ಯಾನಿಸಿದಷ್ಟೂ ಅರ್ಥಗಳನ್ನು ಮೊಗೆದು ಕೊಡುವ ಬೌದ್ಧ ಕಥೆಯಿದು.
ಒಬ್ಟಾತ ಒಮ್ಮೆ ಒಂದು ಕಾಡಿನೊಳ ಹೊಕ್ಕಿದ್ದ. ರಣ ಭಯಂಕರ ಸಿಂಹ ವೊಂದು ಎದುರಾಯಿತು. ಈತ ಅದರಿಂದ ತಪ್ಪಿಸಿಕೊಳ್ಳಲು ತೋಚಿದ ದಿಕ್ಕಿನತ್ತ ಓಟಕಿತ್ತ. ಸಿಂಹ ಬೆನ್ನುಹತ್ತಿತು.
ಓಡಿ ಓಡಿ ಸುಸ್ತಾಯಿತು. ಮೈಕೈಗೆಲ್ಲ ಗಾಯವಾಯಿತು. ಸಿಂಹ ಬೆನ್ನು ಬಿಡಲಿಲ್ಲ. ಓಟಕ್ಕೆ ಅಂತ್ಯವೆಂಬಂತೆ ಆತ ಪ್ರಪಾತವೊಂದರ ಅಂಚಿಗೆ ಬಂದುನಿಂತ. ಸಿಂಹ ಹತ್ತಿರವಾಗುತ್ತಿತ್ತು. ಮುಂದೆ ದಾರಿಯಿಲ್ಲ; ಆಳವಾದ ಪ್ರಪಾತ. ಹೆಜ್ಜೆ ಮುಂದಿ ಟ್ಟರೆ ಸಾವು ಖಚಿತ. ನಿಂತರೆ ಸಿಂಹದ ಬಾಯಿಗೆ ಸಿಲುಕುವುದು ನಿಶ್ಚಿತ. ಕ್ಷಣಕಾಲ ಆತನಿಗೆ ಏನೂ ತೋಚಲಿಲ್ಲ.
ಆದರೂ ಏನಾದರೂ ಪವಾಡ ಸಂಭವಿಸ ಬಹುದು ಎಂಬ ಸಣ್ಣ ಒಂದು ವಿಶ್ವಾಸದ ಎಳೆ ಆತನಿಗೆ. ಮೆಲ್ಲನೆ ಪ್ರಪಾತದ ಆಳಕ್ಕೆ ಇಣುಕಿ ನೋಡಿದ. ಕಣ್ಣು ಕಿರಿದು ಮಾಡಿ ನಿರುಕಿಸಿದ. ಕಣಿವೆಯ ಆಳದಲ್ಲಿ ಎರಡು ಸಿಂಹಗಳು ಬಾಯಗಲಿಸಿ ಮೇಲಕ್ಕೆ ಮುಖ ಮಾಡಿ ನೋಡುತ್ತಿವೆ. ಕಣಿವೆಗೆ ಹಾರಿ ಜೀವ ಉಳಿಸಿಕೊಳ್ಳುವ ಸಾಧ್ಯತೆಯೂ ಇಲ್ಲ.
ಬೆನ್ನುಬಿದ್ದಿರುವ ಸಿಂಹ ಹತ್ತಿರ ಬರು ತ್ತಿದೆ. ಅದರ ಗರ್ಜನೆ ನಿಕಟವಾಗುತ್ತಿದೆ. ಪ್ರಪಾತದ ಅಂಚಿನಲ್ಲಿ ಬೆಳೆದಿದ್ದ ಒಂದು ಮರದ ಬೇರುಗಳನ್ನು ಆಧರಿಸಿ ಹಿಡಿದು ಈತ ಮೆಲ್ಲನೆ ಕೆಳಕ್ಕೆ ಇಳಿದ. ಪ್ರಪಾತದ ಅಂಚಿನಲ್ಲಿ ನಿಲ್ಲಲು ಸಾಧ್ಯವಿಲ್ಲ, ಕಣಿವೆಗೆ ಹಾರುವುದೂ ಸಾಧ್ಯವಿಲ್ಲ. ಹಾಗಾಗಿ ಇವೆರಡರ ನಡುವಣ ಆಯ್ಕೆ – ಮರದ ಬೇರು ಹಿಡಿದು ತೂಗಾಡುವುದು. ಆದರೆ ಅದು ಕೂಡ ದೀರ್ಘಕಾಲ ಸಾಧ್ಯವಿಲ್ಲವೇನೋ. ಏಕೆಂದರೆ ಬೇರುಗಳು ಲಡ್ಡಾಗಿವೆ. ಅಲ್ಲದೆ ಸೂರ್ಯ ಕಂತಿ ಇರುಳು ಮುಸುಕುತ್ತಿದೆ. ಚಳಿಯಲ್ಲಿ ಕೈ-ಮೈ ಕೊರಡುಗಟ್ಟುತ್ತಿವೆ. ಬಹುಹೊತ್ತು ಬೇರು ಹಿಡಿದು ನೇತಾಡುತ್ತಿರುವ ಸಾಧ್ಯತೆ ಇಲ್ಲ.
ಕೈಗಳ ಹಿಡಿತ ಸಡಿಲವಾಗುತ್ತಿದೆ. ಹಸ್ತಗಳು ಚಳಿಯಿಂದಾಗಿ ಮರಗಟ್ಟು ತ್ತಿವೆ. ಪ್ರತೀ ಕ್ಷಣವೂ ಸಾವು ಇನ್ನಷ್ಟು ಮತ್ತಷ್ಟು ಹತ್ತಿರವಾಗುತ್ತಿದೆ.
ಅಷ್ಟರಲ್ಲಿ ಈತ ಕತ್ತು ಮೇಲೆತ್ತಿ ನೋಡಿದ. ಅಲ್ಲೆರಡು ಇಲಿಗಳು! ಒಂದು ಬಿಳಿ, ಇನ್ನೊಂದು ಕಪ್ಪು- ಹಗಲು ಮತ್ತು ಇರುಳಿನ, ಕಾಲದ ಪ್ರತೀಕಗಳವು. ಅವು ಈತ ಹಿಡಿದಿದ್ದ ಬೇರನ್ನು ನಿಧಾನವಾಗಿ ಕಡಿದು ಕತ್ತರಿಸುತ್ತಿವೆ. ಅವುಗಳಿಗೆ ಆದಷ್ಟು ಬೇಗನೆ ತಮ್ಮ ಕೆಲಸ ಮುಗಿಸಿ ಗೂಡು ಸೇರುವ ಆತುರ.
ಯಾವುದೇ ಕ್ಷಣದಲ್ಲಿ ಮರದ ಬೇರು ಕಡಿಯಬಹುದು.
ಅಷ್ಟು ಹೊತ್ತಿಗೆ ಈತನ ಗಮನ ಮರ ದತ್ತ ಹರಿಯಿತು. ಅಲ್ಲೊಂದು ಜೇನು ಗೂಡು. ಹುಳುಗಳು ಸಂಗ್ರಹಿಸಿದ ಜೇನು ಬಿರಿದು ಹನಿಹನಿಯಾಗಿ ತೊಟ್ಟಿಕ್ಕುತ್ತಿದೆ.
ಈತನಿಗೆ ಕ್ಷಣಾರ್ಧದಲ್ಲಿ ಎಲ್ಲವೂ ಮರೆತುಹೋಯಿತು. ತೂಗುತ್ತಿದ್ದ ಲ್ಲಿಂದಲೇ ಜೇನುಬಿಂದುಗಳು ಬಾಯೊಳಗೆ ಬೀಳುವಂತೆ ಕತ್ತು ಚಾಚಿದ. ಒಂದು ಹನಿ ನಾಲಗೆಗೆ ಬಿತ್ತು. ಆಹ್, ಎಷ್ಟು ಮಧುರ, ಎಷ್ಟು ಸಿಹಿ, ಎಂಥ ಆಹ್ಲಾದಕರ ಸವಿ!
ವರ್ತಮಾನದಲ್ಲಿ ಬದುಕುವುದರ ಸಿಹಿ ಇದು. ಈ ಕ್ಷಣದಲ್ಲಿ ಜೀವಿಸುವುದು ನಿಜಕ್ಕೂ ತುಂಬ ಸುಂದರ, ಬಹಳ ಆಹ್ಲಾದಮಯ. ಬದುಕುವ ರೀತಿ ಇದು, ಇದೊಂದೇ ರೀತಿಯಲ್ಲಿ ಬದುಕಬೇಕು. ಪ್ರತೀಕ್ಷಣವೂ ಜೀವನ ಹೀಗೆ ನಡೆಯಬೇಕು.
ಈ ಕಥೆಯಲ್ಲಿ ಬರುವ ಬೇರು ಹಿಡಿದು ನೇತಾಡುತ್ತಿರುವ ಮನುಷ್ಯ ನಾವೇ; ನಮ್ಮ ಸುತ್ತಲೂ ಸಾವು ಮುತ್ತಿಕೊಂಡಿದೆ. ಪ್ರತೀ ಮರುಕ್ಷಣ ದಲ್ಲೂ ಕಾದುನಿಂತಿದೆ- ಯಾವುದೇ ಕ್ಷಣದಲ್ಲಿ ಬೇರು ಕಡಿಯಬಹುದು. ಹಾಗಾಗಿಈ ಕ್ಷಣದಲ್ಲಿ ಮಾಡಬೇಕಾ ದ್ದೇನು – ಕಳೆದು ಹೋದುದರ ಬಗ್ಗೆ ಚಿಂತಿಸುವುದು? ಮುಂದೆ ಬರಲಿ ರುವುದರ ಬಗ್ಗೆ ಕಳವಳಿಸುವುದು? ಮೃತ್ಯುವಿನ ಬಗ್ಗೆ ಭಯಪಡುವುದು? ಅಲ್ಲ ; ಈ ಕ್ಷಣವನ್ನು ಬದುಕುವುದು.
( ಸಾರ ಸಂಗ್ರಹ)
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.