ಸ-ದೂರ ಸಾಧನೆಯೊಂದು ಅರಿವಿನ ಅಗ್ನಿ
Team Udayavani, Aug 17, 2020, 7:10 AM IST
ನಾವು ಯಾಕಾಗಿ ಬೇಸರ ಪಡುತ್ತೇವೆ? ಯಾವುದಕ್ಕಾಗಿ ದುಃಖೀತರಾಗುತ್ತೇವೆ?
ನಮ್ಮ ಸುತ್ತಮುತ್ತಲಿನ ಸನ್ನಿವೇಶಗಳು, ಘಟನೆಗಳು, ವ್ಯಕ್ತಿಗಳ ನಡವಳಿಕೆಗಳು ನಮಗೆ ಬೇಸರ ತರಿಸುತ್ತವೆ, ನೋವು ಉಂಟು ಮಾಡುತ್ತವೆ, ಅಸಂತೋಷ ನೀಡುತ್ತವೆ. ಆದರೆ ಆ ಸನ್ನಿವೇಶಗಳು, ಘಟನೆಗಳು, ವ್ಯಕ್ತಿಗಳು ಚಿರಕಾಲ ಹಾಗೆಯೇ ಇರುತ್ತವೆಯೇ? ಇಲ್ಲ. ಅವೆಲ್ಲವೂ ಬದಲಾಗುತ್ತವೆ.
ಜಗತ್ತು ಅದರಷ್ಟಕ್ಕೆ ಅದು ಮುನ್ನಡೆಯು ತ್ತಿರುತ್ತದೆ, ನಾವು ಮಾಡುವುದು ಏನೂ ಇಲ್ಲ; ಹೀಗಾಗಿ ದುಃಖಪಡಲು ಕಾರಣವೇ ಇಲ್ಲ ಎನ್ನುತ್ತಾರೆ ಗುರು ಶ್ರೀ ರವಿಶಂಕರ್.
ನಿನ್ನೆ ಸಂಜೆಯ ಹೊತ್ತು ನಿಮ್ಮ ಗೆಳೆಯನ ವರ್ತನೆ ನಿಮಗೆ ಬೇಸರ ಉಂಟುಮಾಡಿತ್ತು ಎಂದಿಟ್ಟುಕೊಳ್ಳಿ. ಇವತ್ತೂ ಅವನ ನಡವಳಿಕೆ ಹಾಗೆಯೇ ಇದೆಯೇ? ಇಲ್ಲ; ಅದು ಬದಲಾಗಿದೆ. ಇವತ್ತು ಬೆಳಗ್ಗೆ ಅವನು ನಿಮ್ಮಲ್ಲಿ ಕ್ಷಮೆ ಕೇಳಿರಲೂಬಹುದು. ಹಾಗೆಯೇ ಅವನ ಇವತ್ತಿನ ವರ್ತನೆಯಂತೆ ಆತನ ನಾಳೆಯ ವರ್ತನೆ ಇರುವುದಿಲ್ಲ. ನಮ್ಮ ಸುತ್ತಮುತ್ತಲಿನ ಎಲ್ಲವೂ ಹೀಗೆಯೇ, ನೀರ ಮೇಲಿನ ಗುಳ್ಳೆಗಳಂತೆ ಹುಟ್ಟಿಕೊಳ್ಳುತ್ತವೆ, ಕ್ಷಣ ಕಳೆದು ಇಲ್ಲವಾಗುತ್ತವೆ; ಹರಿಯುವ ನದಿಯಂತೆ ಬದಲಾಗುತ್ತಲೇ, ಚಲಿಸುತ್ತಲೇ ಇರುತ್ತವೆ.
ಹಾಗೆಯೇ ನಿಮ್ಮ ಆರೋಗ್ಯದ ಬಗ್ಗೆ ಚಿಂತೆಗೊಳಗಾಗಿದ್ದೀರಾ? ಉತ್ತಮ ಆರೋಗ್ಯ, ಸದೃಢ ದೇಹವನ್ನು ಎಷ್ಟು ಕಾಲ ಹೊಂದಿರಲು ಸಾಧ್ಯ? ವಯಸ್ಸು ಮಾಗುತ್ತ ಹೋದಂತೆ ಒಂದಲ್ಲ ಒಂದು ದಿನ ಕಾಯಿ ಹಣ್ಣಾಗಲೇ ಬೇಕು, ಹಣ್ಣು ಉದುರಲೇ ಬೇಕು. ದೇಹಕ್ಕೆ ಅನಾರೋಗ್ಯವುಂಟಾದರೆ ಚಿಕಿತ್ಸೆ ಕೊಡಿಸಿ, ಆರೈಕೆ ಮಾಡಿ; ಮುಗಿಯಿತಲ್ಲ! ಅದರ ಬಗ್ಗೆ ಚಿಂತಿಸುವುದು, ಬೇಸರ ಪಟ್ಟುಕೊಳ್ಳುವುದೇಕೆ?
ಯಾವುದೂ ನನ್ನದಲ್ಲ, ನಾನು ಯಾವುದಕ್ಕೂ ಅಂಟಿಕೊಂಡಿಲ್ಲ, ಎಲ್ಲವೂ ತಾನಾಗಿ ಆಗುತ್ತಿರುವುದು ಎಂಬ ಸ-ದೂರ ಸಾಧಿಸಿ ಎಲ್ಲವನ್ನೂ ಗಮನಿಸಿ. ದೇಹದ ಯಾವುದೋ ಒಂದು ಭಾಗದಲ್ಲಿ ನೋವಾಗುತ್ತಿದ್ದರೆ, ಅದನ್ನು ಗಮನಿಸಿ. ಮನಸ್ಸು ಬೇಸರ ಪಟ್ಟುಕೊಂಡಿದ್ದರೆ ಅದು ಬೇರೆಲ್ಲೋ ಆಗುತ್ತಿರುವುದು ಎಂಬಂತೆ ಅದನ್ನು ನೋಡಿ. ಹಾಗೆಯೇ ಸಂತೋಷವನ್ನೂ ಕ್ರೋಧವನ್ನೂ ಎಲ್ಲೋ ಯಾರಿಗೋ ಆಗುತ್ತಿರುವುದು ಎಂಬಂತೆ ಕಾಣಿರಿ. ಒಂದು ರೀತಿಯಲ್ಲಿ ತಾವರೆ ಎಲೆಯ ಮೇಲೆ ಇರುವ ನೀರಿನ ಬಿಂದುವಿನಂತೆ; ಇರಬೇಕು, ಅಂಟಿಕೊಂಡಿರಬಾರದು.
‘ನಾನು ಮಾಡುತ್ತಿರುವುದು’, “ನಾನು ಮಾಡಿದ್ದು’ ಎಂಬ ಭಾವನೆ ಬೇಡ. ಈ ಭೂಮಿಯಲ್ಲಿ ಬದುಕು ಅದರಷ್ಟಕ್ಕೆ ಅದು ಅರಳಿ, ಸುಗಂಧ ಬೀರಿ, ಬಾಡಿ, ಉದುರುತ್ತದೆ. ಎಲ್ಲವೂ ಅದರಷ್ಟಕ್ಕೆ ನಡೆಯುತ್ತಿದೆ. ಎಲ್ಲವೂ ಚಲಿಸುತ್ತಿದೆ. ಸ್ಥಾವರವಾಗಿರುವುದು ಯಾವುದೂ ಇಲ್ಲ. ನಮ್ಮ ಮನಸ್ಸಿನಲ್ಲಿಯೂ ಸಂತೋಷ ವುಂಟಾಗುತ್ತದೆ, ಮರುಕ್ಷಣ ದುಃಖ ಮೂಡುತ್ತದೆ, ಇನ್ನೊಂದು ಕ್ಷಣದಲ್ಲಿ ವಿಷಾದ ಆವರಿಸುತ್ತದೆ. ದೇಹದಲ್ಲಿಯೂ ಹಾಗೆಯೇ. ಎಲ್ಲವೂ ಅದರಷ್ಟಕ್ಕೆ ಅದು, ಆಯಾ ಕಾಲದಲ್ಲಿ ನಡೆಯುತ್ತಿರುತ್ತದೆ. ಯಾವುದನ್ನೂ ನಾನು, ನೀವು ಸಹಿತ ಯಾರೂ ಮಾಡಿದ್ದಲ್ಲ.
‘ನಾನು ಮಾಡಿದ್ದು’ ಎನ್ನುವುದು ಉದ್ವಿಗ್ನತೆ, ತರಾತುರಿ, ಕಿರಿಕಿರಿ, ಹತಾಶೆ ಉಂಟುಮಾಡುತ್ತದೆ. ‘ನಾನಲ್ಲ’ ಎಂಬ ನಿರ್ಮಮ ಭಾವವು ತಿಳಿನೀರಿನಂತಹ ಸಂತೋಷದಿಂದ ಹತ್ತಿಯಷ್ಟು ಹಗುರವಾಗುವುದನ್ನು ಸಾಧ್ಯವಾಗಿಸುತ್ತದೆ. ಉಳಿದೆಲ್ಲ ಅಜ್ಞಾನವನ್ನು ಸ್ವಾಹಾ ಮಾಡುವುದು ಈ ಅರಿವಿನ ಅಗ್ನಿ.
ಈಗ ಹೇಳಿ, ನಮ್ಮ ಸುತ್ತಲಿನ ಘಟನೆ, ವ್ಯಕ್ತಿಗಳು, ಸನ್ನಿವೇಶಗಳ ಬಗ್ಗೆ ದುಃಖ, ಅಸಂತೋಷ ಪಟ್ಟುಕೊಳ್ಳುವುದಕ್ಕೆ ಕಾರಣವಿದೆಯೇ!?
(ಸಂಗ್ರಹ)
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.