ಮನಸ್ಸು ಹಗ್ಗ ಕಟ್ಟಿದ ಹಸುವಿನಂತೆ
Team Udayavani, Sep 12, 2020, 6:00 AM IST
ಸಾಂದರ್ಭಿಕ ಚಿತ್ರ
ಗುರು ತನ್ನ ಶಿಷ್ಯರ ಜತೆಗೂಡಿ ರಸ್ತೆಯುದ್ದಕ್ಕೆ ನಡೆದು ಹೋಗುತ್ತಿದ್ದ. ಸಿಕ್ಕಿದ ಸಂದರ್ಭಗಳನ್ನು ಚೆನ್ನಾಗಿ ಉಪಯೋಗಿಸಿಕೊಂಡು ಶಿಷ್ಯರಿಗೆ ಸೋದಾಹರಣವಾಗಿ ಕಲಿಸಿಕೊಡುವುದು ಅವನ ರೂಢಿ. ಈ ಬಾರಿ ಕಣ್ಣಿಗೆ ಕಂಡದ್ದು ಒಬ್ಬ ರೈತ. ಆ ರೈತ ಒಂದು ಹಸುವನ್ನು ಹಗ್ಗದಲ್ಲಿ ಕಟ್ಟಿ ಮನೆಯತ್ತ ಎಳೆದೊಯ್ಯುತ್ತಿದ್ದ. ಹಸು ಹಠಮಾರಿ, ಬರಲು ಕೇಳುತ್ತಿರಲಿಲ್ಲ. ಈ ಸನ್ನಿವೇಶವನ್ನು ಕಂಡವರೇ ಗುರುಗಳು ಆತನನ್ನು ನಿಲ್ಲಿಸಿದರು, ಶಿಷ್ಯರನ್ನು ಹತ್ತಿರಕ್ಕೆ ಕರೆದರು.
“ಇಲ್ಲಿ ನೋಡಿ, ಹಸುವನ್ನು ರೈತನಿಗೆ ಬಿಗಿಯಲಾಗಿದೆಯೋ ಅಥವಾ ರೈತನನ್ನು ಹಸುವಿಗೆ ಬಂಧಿಸಲಾಗಿದೆಯೋ?’ ಗುರುಗಳ ಪ್ರಶ್ನೆ. “ಹಸುವನ್ನು ರೈತನು ಹಗ್ಗ ಬಿಗಿದು ಹಿಡಿದುಕೊಂಡಿದ್ದಾನೆ’ ಎಂದು ಒಬ್ಬ ಶಿಷ್ಯ ಉತ್ತರಿಸಿದ. “ಹಾಗಾದರೆ ಈಗ ನೋಡಿ’ ಎಂದವರೇ ಗುರು ಹಗ್ಗವನ್ನು ತುಂಡರಿಸಿ ಬಿಟ್ಟರು. ಮೊದಲೇ ರೈತನ ಜತೆಗೆ ತೆರಳಲು ಒಲ್ಲದೆ ಹಠ ಹಿಡಿಯುತ್ತಿದ್ದ ಹಸು ಎದ್ದೆನೋ ಬಿದ್ದೆನೋ ಎಂದು ಓಡಿಹೋಯಿತು. ಇದನ್ನು ನಿರೀಕ್ಷಿಸದಿದ್ದ ರೈತ ಹಸುವನ್ನು ಹಿಡಿಯಲು ಅದರ ಹಿಂದೆ ಓಡಿದ. ಗುರುಗಳು ಶಿಷ್ಯರನ್ನು ಪ್ರಶ್ನಿಸಿದರು, “ಈಗ ಹೇಳಿ, ಯಾರು ಯಾರನ್ನು ನಿಯಂತ್ರಿಸುತ್ತಿದ್ದಾರೆ, ಹಸುವು ರೈತನನ್ನು ನಿಯಂತ್ರಿಸುತ್ತಿದೆ ಅಲ್ಲವೇ?’ ಶಿಷ್ಯರು “ಹೌದು ಹೌದು’ ಎಂದರು.
ಇದೊಂದು ಸೂಫಿ ಕತೆ.
ನಮ್ಮ ಮನಸ್ಸು ಕೂಡ ಈ ಕತೆಯಲ್ಲಿ ಬರುವ ಹಸು ಮತ್ತು ರೈತನ ಹಾಗೆಯೇ. ಮನಸ್ಸಿನೊಳಗೆ ನೂರೆಂಟನ್ನು ತುಂಬಿಸಿಕೊಂಡಿರುತ್ತೇವೆ, ಅದರ ಭಾರದಿಂದ ಬೆನ್ನು ಬಾಗಿರುತ್ತದೆ. ಅವುಗಳಲ್ಲಿ ಯಾವುದಕ್ಕೂ ನಮ್ಮ ಮೇಲೆ ಆಸಕ್ತಿ ಇರುವುದಿಲ್ಲ. ಹಗ್ಗ ಬಿಚ್ಚಿದ ಹಸುವಿನಂತೆ ನಮ್ಮಿಂದ ದೂರ ಹೋಗಲು ಬಯಸುತ್ತಿರುತ್ತವೆ. ಆದರೆ ನಾವೇ ಅವುಗಳನ್ನು ಬಂಧಿಸಿ ನಮ್ಮೊಳಗೆ ಇರಿಸಿಕೊಂಡಿರುತ್ತೇವೆ. ನಮ್ಮ ಯೋಚನೆಗಳು, ಚಿಂತೆಗಳು, ವ್ಯಾಕುಲತೆಗಳು, ಭಾವನೆಗಳು, ಬಂಧನಗಳು… ಇವೆಲ್ಲವನ್ನೂ ನಮಗೆ ನಾವೇ ಹಗ್ಗ ಹಾಕಿ ಬಂಧಿಸಿದ ಹಸುವಿನಂತೆ ನಮ್ಮೊಳಗೆ ಇರಿಸಿಕೊಂಡಿದ್ದೇವೆ.
ಅವೆಲ್ಲವುಗಳನ್ನೂ ಬಿಟ್ಟು ಬಿಡಿ. ಆ ಕ್ಷಣ ಅವೆಲ್ಲವೂ ದೂರ ಓಡಿಹೋಗುತ್ತವೆ. ಮನಸ್ಸು ಹಗುರವಾಗುತ್ತದೆ. ಜೀವನ ಸುಖವಾಗುತ್ತದೆ.
ನಾವು ಸರಳವಾಗಿ ಜೀವಿಸುವುದನ್ನು ಕಲಿಯಬೇಕು. ಮಗುಸಹಜ ಮುಗ್ಧತೆಯಿಂದ ಎಲ್ಲವನ್ನೂ ನೋಡಬೇಕು, ಬೆರಗು ಪಡಬೇಕು, ಸುಖೀಸಬೇಕು. ಮಗುವನ್ನು ಗಮನಿಸಿ. ಅದು ತುಂಟತನ ಮಾಡಿದಾಗ ಅಮ್ಮ ಬೈಯುತ್ತಾಳೆ, ಅದು ಅಳುತ್ತದೆ. ಕೆಲವೇ ನಿಮಿಷಗಳಲ್ಲಿ ಬೈದುದನ್ನು ಮರೆತು ಮತ್ತೆ ಅಮ್ಮನ ಸೆರಗಿಗೆ ಅಂಟಿಕೊಳ್ಳುತ್ತದೆ. ನೋವು – ನಲಿವು ಎರಡಕ್ಕೂ ಮಗು ಹೆಚ್ಚು ಕಾಲ ಜೋತುಬೀಳುವುದಿಲ್ಲ. ಬಾಲ್ಯದಲ್ಲಿ ನಾವೂ ಹಾಗೆಯೇ ಇದ್ದೆವು. ಆದರೆ ವಯಸ್ಸು ಹೆಚ್ಚಿದಂತೆ, ದೊಡ್ಡವರಾದಂತೆ, ಹೆಚ್ಚು ಕಲಿಯುತ್ತಿದ್ದಂತೆ, ಪ್ರಾಪಂಚಿಕ ಜ್ಞಾನ ಹೆಚ್ಚಿದಂತೆ ಕೋಪತಾಪಗಳು, ರಾಗ ದ್ವೇಷಗಳನ್ನು ಅಂಟಿಸಿಕೊಳ್ಳಲಾರಂಭಿಸಿದೆವು. ಈಗ ಅವು ಎಷ್ಟು ಉಜ್ಜಿ ತೊಳೆದರೂ ಹೋಗದಷ್ಟು ಭದ್ರವಾಗಿ ಕಿಲುಬಿನಂತೆ ಹಿಡಿದುಕೊಂಡಿವೆ. ಮನಸ್ಸು ರಾಡಿಯೆದ್ದಿದೆ. ಮತ್ತೆ ಬಾಲ್ಯಕ್ಕೆ ಹಿಂದಿರುಗಬೇಕು ಎನ್ನುವುದು ಇದೇ ಕಾರಣಕ್ಕೆ ಮಹತ್ವದ್ದು. ಮಗುವಾಗುವುದು ಮುಗ್ಧತೆಗಾಗಿ. ಬಂಧಗಳಿಂದ ಮುಕ್ತವಾದ ಸರಳ ಜೀವನಕ್ಕಾಗಿ.
(ಸೂಫಿ ಸಾರಸಂಗ್ರಹ)
ಲೇಖನಗಳನ್ನು ಈ ವಿಳಾಸಕ್ಕೆ ಕಳುಹಿಸಿ
ಬರಹಗಾರರು ಪ್ರಚಲಿತ ವಿದ್ಯಮಾನಗಳಿಗೆ ಸಂಬಂಧಿಸಿದ ಲೇಖನಗಳನ್ನು [email protected]ಗೆ ಕಳುಹಿಸಬಹುದು. ಸೂಕ್ತವಾದವುಗಳನ್ನು ಪ್ರಕಟಿಸಲಾಗುವುದು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.