ಇಂದು ಕಾರ್ಗಿಲ್ ವಿಜಯ ದಿವಸ: ಭಾರತದ ತಾಕತ್ತು ಸಾಬೀತುಪಡಿಸಿದ ‘ಆಪರೇಷನ್ ವಿಜಯ್’
Team Udayavani, Jul 26, 2020, 3:28 PM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಮರೆವು ನಮಗಿರುವ ಒಳ್ಳೆಯ ಹಾಗೂ ಕೆಟ್ಟ ಗುಣ ಎನ್ನಬಹುದು. ಈ ದೇಶದ ಪರಂಪರೆ, ಇತಿಹಾಸ, ಘನತೆ, ಶ್ರೇಷ್ಟತೆಯನ್ನು ಮರೆತರೆ ಮರೆವು ಕೆಟ್ಟದ್ದು ಆದರೆ ಕಹಿ ಘಟಕಗಳನ್ನು ಮರೆಯುವುದಾದರೆ ಅದು ಒಳ್ಳೆಯದೇ ಎನ್ನಬಹುದು.
ಯುದ್ಧವೆಂದರೆ ಕೇವಲ ಎರಡು ರಾಷ್ಟ್ರಗಳ ನಡುವಿನ ಕಿತ್ತಾಟವಲ್ಲ ಅಥವಾ ಸೈನಿಕರು ದಾಳಿಮಾಡಿ ಎದುರಾಳಿಗಳನ್ನು ನಾಶ ಮಾಡುವುದೆಂದಲ್ಲ. ಅದೊಂದು ಭಾವನಾತ್ಮಕ ವಿಚಾರ. ಅದಕ್ಕೆ ಬಹು ದೀರ್ಘಕಾಲದ ತಯಾರಿಬೇಕು.
ಸರ್ಕಾರವೊಂದು ಸಾಕಷ್ಟು ಮುನ್ನೆಚ್ಚರಿಕೆ ತೆಗೆಕೊಳ್ಳಬೇಕು. ತನ್ನನ್ನು ಮಾನಸಿಕವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ ಸನ್ನದ್ಧಗೋಳಿಸಿಕೊಳ್ಳಬೇಕು. ಸಂಬಧಪಟ್ಟ ಎಲ್ಲ ಇಲಾಖೆಗಳು ಪೂರಕವಾಗಿ ಕೆಲಸ ಮಾಡಲಾರಂಭಿಸಬೇಕು. ಜಗತ್ತಿನ ರಾಷ್ಟ್ರಗಳಿಗೆ ಯುದ್ಧದ ಅವಶ್ಯಕತೆಗಳನ್ನು ಮನಗಾಣಿಸಬೇಕು.
ಭಾರತ ಅಣ್ವಸ್ತ್ರ ಪ್ರಯೋಗಿಸಿ 15 ದಿನಗಳಲ್ಲಿ ಪಾಕಿಸ್ತಾನ ಕೂಡಾ ಅಣು ಪರೀಕ್ಷೆ ನಡೆಸಿತು. ಪರಿಣಾಮ ಜಗತ್ತಿನ ರಾಷ್ಟ್ರಗಳು ಭಾರತ ಮತ್ತು ಪಾಕಿಸ್ತಾನದ ಮೇಲೆ ನಿರ್ಬಂಧ ಹೇರಿದವು. ಭಾರತ ಹಿರಿಯಣ್ಣನಾಗಿ ಪಾಕಿಸ್ತಾನವನ್ನು ತಬ್ಬಿಕೊಳ್ಳಲು, ಸ್ನೇಹದ ಮಾತುಗಳನ್ನಾಡಲು ಕೈ ಚಾಚಿತು.
ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ 1999ರ ಫೆಬ್ರವರಿ 20ನೇ ತಾರೀಖು ಭಾರತದಿಂದ ಪಾಕಿಸ್ತಾನದತ್ತ ಬಸ್ಸೊಂದನ್ನು ಹೊರಡಿಸಿದರು. ಇತಿಹಾಸದ ಪುಟಕ್ಕೆ ಹೊಸ ದಾಖಲೆ ಸೇರಿಸುವ ಸಂತಸ. ಇನ್ನು ಮುಂದೆ ನಾವಿಬ್ಬರೂ ವೈರಿಗಳಲ್ಲ! ಬಸ್ಸು-ರೈಲುಗಳ ಮೂಲಕ ಸಂಬಂಧ ಬೆಸೆಯಲಿರುವ ಹಳೆಯ ಗೆಳೆಯರು! ಪೂರ್ವಜರ ಪ್ರಮಾದಗಳನ್ನು ತಿದ್ದುವ ಪ್ರಜ್ಞಾವಂತರು ಎಂದು ಒಳಗೊಳಗೆ ಬೀಗಲಾರಂಭಿಸಿದ್ದರು.
ಸ್ವತಃ ಅಟಲ್‌ಜೀ ಎಲ್ಲ ಒತ್ತಡಗಳನ್ನು ಮೀರಿ ಪಾಕಿಸ್ತಾನಕ್ಕೆ ಹೊರಟರು. ಅಷ್ಟೇ ಅಲ್ಲ ಲಾಹೋರ್ ಒಪ್ಪಂದಕ್ಕೆ ಸಹಿ ಹಾಕಿ, ಶಿಮ್ಲಾ ಒಪ್ಪಂದಕ್ಕೆ ಬದ್ಧರಾಗುವಂತೆ ಮತ್ತು ಜಮ್ಮು-ಕಾಶ್ಮೀರದ ಸಮಸ್ಯೆಗಳನ್ನು ತಮ್ಮೊಳಗೆ ಬಗೆಹರಿಸಿಕೊಳ್ಳುವಂತೆ ಭರವಸೆಯನ್ನು ಒಬ್ಬರಿಗೊಬ್ಬರು ನೀಡಿಕೊಂಡರು.
ಇತ್ತ ‘ಜಂಟಲ್ ಮನ್” ಒಪ್ಪಂದದ ಕರಾರುಗಳನ್ನು ಮರೆತು ಲಾಹೋರ್ ಘೋಷಣೆಗೆ ಅಂಕಿತ ಬಿದ್ದ ಐದೇ ವಾರಗಳಲ್ಲಿ ಅಂದರೆ 1999 ಮಾರ್ಚ್ 28ರ ವೇಳೆಗೆ ಕಾರ್ಗಿಲ್ ಬೆಟ್ಟಗಳತ್ತ ಪಾಕಿಸ್ತಾನಿ ಸೇನೆ ದಾಳಿಗೆಂದು ಕಾಲಿಟ್ಟಿತ್ತು. ಪಾಕಿಸ್ತಾನ ಭಾರತದೊಂದಿಗೆ 1948, 1965, 1971ರ ಮೂರು ನೇರ ಯುದ್ಧಗಳಲ್ಲಿ ಸೋಲುಂಡಮೇಲೆ ಈ ಬಾರಿ ಛದ್ಮ ಯುದ್ಧದ ಮಾರ್ಗ ಹಿಡಿಯಿತು.
ಪಾಕೀ ಸೈನ್ಯ ಹಾಗೂ ಐಎಸ್‌ಐ ಸೇರಿಕೊಂಡು ಸಮರ್ಥ ಯೋಜನೆಗಳನ್ನು ರೂಪಿಸಿದ್ದವು. ಯೋಜನೆಯಂತೆ ಭಾರತದ ಸೇನೆಯ ದಿಕ್ಕು ತಪ್ಪಿಸಲು ಪಾಕ್ ಆಕ್ರಮಿತ ಜಿಲ್ಲೆಗಳಾದ ಅಜೌರಿ, ಪೂಂಚ್, ಗಂದರ್‌ಬಾಲ್, ಅನಂತನಾಗ್‌ಗಳಲ್ಲಿ ಭಯೋತ್ಪಾದಕ ಕೃತ್ಯ ಮಿತಿ ಮೀರಿತು.
ಪಾಕಿಸ್ತಾನದ ಸೇನಾ ಮುಖ್ಯಸ್ಥ ಫರ್ವೇಜ್ ಮುಷರ್ರಫ್ ತಡಮಾಡಲಿಲ್ಲ ‘ಆಪರೇಷನ್ ಬಿದ್ರ್’ಗೆ ಚಾಲನೆ ನೀಡಿದರು. ಶತ್ರುಗಳಿಗೆ ತಿಳಿಯುವ ಮುನ್ನ ಎತ್ತರದ ಗುಡ್ಡಗಳನ್ನು ವಶಪಡಿಸಿಕೊಳ್ಳುವುದೇ ಈ ಯೋಜನೆಯ ಗುರಿಯಾಗಿತ್ತು. ಮೇ 8ರ ಹೊತ್ತಿಗೆ ಪಾಕೀಗಳು ಗುಡ್ಡಗಳನ್ನು ಆಕ್ರಮಿಸಿ ಬಂಕರುಗಳಲ್ಲಿ ಕುಳಿತುಬಿಟ್ಟರು. ಮರುದಿನ ಸೇನಾ ಠಾಣ್ಯಕ್ಕೆ ದನಗಾಯಿಗಳು ಸುದ್ಧಿ ತಲುಪಿಸಿದರು.
ಮರುದಿನವೇ ಸೇನೆ ಜಾಟ್ ರೆಜಿಮೆಂಟ್‌ನ ಕ್ಯಾಪ್ಟನ್ ಸೌರಭ್ ಕಾಲಿಯಾರನ್ನು ಕಳುಹಿಸಿತು 6 ಜನರ ತಂಡದೊಂದಿಗೆ ‘ಬಜರಂಗ್’ ಪೋಸ್ಟಿನತ್ತ ಹೊರಟರು, ಶತ್ರುಗಳಿರುವುದು ಖಾತ್ರಿಯಾಗಿ ತಂಡ ಕದನಕ್ಕಿಳಿಯಿತು. ಶತ್ರುಗಳ ಸಂಖ್ಯೆಯನ್ನು ಅಂದಾಜಿಸಲು ಎಡವಿದ್ದ ತಂಡ ಸೆರೆ ಸಿಕ್ಕಿತು. ಅವರನ್ನು ಚಿತ್ರವಿಚಿತ್ರವಾಗಿ ಹಿಂಸಿಸಿ 22 ದಿನಗಳ ಸೆರೆಯ ನಂತರ ಕೊಲ್ಲಲಾಯಿತು.
ಮೇ 24ರಂದು ಇದು ವ್ಯವಸ್ಥಿತ ದಾಳಿ ಎಂದರಿತ ಸೇನೆ ಪ್ರಧಾನಿ, ರಕ್ಷಣಾ ಸಚಿವರು, ವಿದೇಶಾಂಗ ಸಚಿವರು, ಐಬಿ, ನಮ್ಮ ಗುಪ್ತಚರ ಇಲಾಖೆ ‘ರಾ’ ಮತ್ತು ಮೂರೂ ಸೇನೆಯ ಮುಖ್ಯಸ್ಥರುಗಳನ್ನು ಸೇರಿಸಿ ಮಹತ್ವದ ಸಭೆ ಮಾಡಲಾಯಿತು
ಭಾರತ ಸೇನೆಯ ಜನರಲ್ ಮಲಿಕ್ “ಸೇನೆಯ ಮೂರೂ ವಿಭಾಗಗಳು ಜೊತೆಗೂಡಿ ದಾಳಿಗೈದರೆ ಮಾತ್ರ ಪರಿಹಾರ. ಅನುಮತಿ ಕೊಡಿ” ಎಂದು ಪ್ರಧಾನಿಗೆ ತಾಕೀತು ಮಾಡಿದರು. ಅನುಮತಿ ದೊರೆತ ನಂತರ ಕೊನೆಯಲ್ಲಿ ಎದ್ದುನಿಂತು ನಿಶ್ಚಿತ ಗೆಲುವಿನ ಭರವಸೆಯಿಂದ ಇಡೀಯ ಹೋರಾಟವನ್ನು ‘ಆಪರೇಷನ್ ವಿಜಯ್’ ಎಂದು ಕರೆದರು.
ಯುದ್ಧ ಬಹಳ ಜೋರಾಗಿಯೇ ಶುರುವಾಯಿತು, ದಾಳಿ-ಪ್ರತಿದಾಳಿಗಳು ನಡೆದವು. ವಿಮಾನಗಳ ಹಾರಾಟ, ಹೆಲಿಕಾಪ್ಟರ್‌ಗಳ ಸದ್ಧು, ಮದ್ದು-ಗುಂಡುಗಳ ಸಿಡಿತ, ರಾಷ್ಟ್ರಕ್ಕಾಗಿ ಪ್ರಾಣಕೊಡುವ ಸೈನಿಕನ ತುಡಿತ ಎಲ್ಲವೂ ಜೋರಾಗಿಯೇ ನಡೆದಿತ್ತು.
ಮೊದಮೊದಲು ಸ್ವಲ್ಪ ನಷ್ಟ ಅನುಭವಿಸಿದ ಭಾರತೀಯ ಸೇನೆ ಪಾಕಿಗಳನ್ನು ಬಗ್ಗುಬಡೆದು ತೋಲೋಲಿಂಗ್, ಟೈಗರ್ ಹಿಲ್, ಪಾಯಿಂಟ್ 5140, 4700, 5100, ಲೋನ್ ಹಿಲ್ ಮತ್ತು ಥ್ರೀ ಪಿಂಪಲ್ಸ್‌ಗಳನ್ನು ಸೇರಿದಂತೆ ಹಲವಾರು ಪ್ರದೇಶಗಳನ್ನು ಜುಲೈ 15ರ ಹೊತ್ತಿಗೆ ಅವರ ಕಪಿಮುಷ್ಠಿಯಿಂದ ವಶಪಡಿಸಿಕೊಳ್ಳಲಾಯಿತು.
ಸುಮಾರು 527 ಯೋಧರ ಬಲಿದಾನದ ಬಳಿಕ 1999ರ ಜುಲೈ 26ಕ್ಕೆ ಕಾರ್ಯಾಚರಣೆ ನಿಲ್ಲಿಸಿ “ಆಪರೇಷನ್ ವಿಜಯ್”ನ ಸಂಭ್ರಮಾಚರಣೆಯಲ್ಲಿ ತೊಡಗಿತ್ತು. ಭಾರತ ತನ್ನ ಸಾಮರ್ಥ್ಯವನ್ನು ಜಗತ್ತಿಗೆ ಸಾಬೀತು ಪಡಿಸಿತ್ತು. ಪಾಕಿಸ್ತಾನ ತೀವ್ರ ಮುಖಭಂಗಕ್ಕೆ ಒಳಗಾಗಿತ್ತು. ಬೆನ್ನಿಗೆ ಚೂರಿಹಾಕುವ ರಾಷ್ಟ್ರ ಪಾಕಿಸ್ತಾನ ಎಂದು ಜಗತ್ತಿಗೆ ತಿಳಿಯಿತು.
ಕ್ಯಾಪ್ಟನ್ ಸೌರಭ್ ಕಾಲಿಯಾ, ಕ್ಯಾಪ್ಟನ್ ವಿಕ್ರಂ ಬಾತ್ರಾ, ಗ್ರೇನೇಡಿಯರ್ ಯೋಗೇಂದರ್ ಸಿಂಗ್ ಯಾದವ್, ಕ್ಯಾಪ್ಟನ್ ಅಮೋಲ್ ಕಾಲಿಯಾ, ರಾಜೇಶ್ ಅಧಿಕಾರಿ, ಅಜಯ್ ಅಹುಜಾ, ಮೇಜರ್ ವಿವೇಕ್ ಗುಪ್ತಾ,ಕೆಂಗುರುಸೆ,ಲೆಫ್ಟಿನೆಂಟ್ ಮನೋಜ್ ಕುಮಾರ್ ಪಾಂಡೆ ಸೇರಿದಂತೆ ಸಾವಿರಾರು ಯೋಧರ ಸಾಹಸ ಮತ್ತು ತ್ಯಾಗದ ಪ್ರತೀಕವಾಗಿ ಗೆಲುವು ಪ್ರಾಪ್ತವಾಯಿತು.
ಸತ್ಯ, ಧರ್ಮ, ನಿಸ್ವಾರ್ಥ, ಕರ್ತವ್ಯ ಬದ್ಧತೆ, ತ್ಯಾಗ, ಶೌರ್ಯಗಳಲ್ಲಿ ಭಾರತೀಯ ಸೈನಿಕರಿಗೆ ಸರಿಸಮ ಮತ್ತಾರೂ ಇಲ್ಲ. ಆತ ಆಧ್ಯಾತ್ಮಿಕವಾಗಿ ಬೆಳೆದಿದ್ದಾನೆ. ಮಾನಸಿಕವಾಗಿ ಗಟ್ಟಿಯಾಗಿದ್ದಾನೆ. ದೈಹಿಕವಾಗಿ ಬಲಾಢ್ಯನೂ, ಚುರುಕೂ ಆಗಿದ್ದಾನೆ. ಸೂಕ್ತ ನಾಯಕನ ನೇತೃತ್ವದಲ್ಲಿ ಅವನು ಅದ್ಭುತವಾದ ಕೊಡುಗೆಗಳನ್ನು ಕೊಡಬಲ್ಲ! ಎಂಬುದು ಜಗತ್ತಿನೆದುರು ಮತ್ತೆ ಸಾಬೀತಾಯಿತು.
ಅಂತಹ ಸಾವಿರ ಸಾವಿರ ಯೋಧರ ಬಲಿದಾನವನ್ನು ನಾವಿಂದು ಸ್ಮರಿಸಿಕೊಳ್ಳಬೇಕಿದೆ. ನಾವು ಈ ಬಲಿದಾನದ ಕಥನಗಳನ್ನು ಮರೆತದ್ದೇ ಆದರೆ ಅದು ರಾಷ್ಟ್ರಕ್ಕೆ ಮಾಡುವ ಮೋಸ ಎಂದೇ ಹೇಳಬಹುದು.
‘ಶಾಂತಿಯ ಹೊತ್ತಲ್ಲಿ ಮಗ ತಂದೆಯ ಶವಕ್ಕೆ ಅಂತ್ಯಸಂಸ್ಕಾರ ಮಾಡಿದರೆ, ಯುದ್ಧದ ಹೊತ್ತಲ್ಲಿ ತಂದೆಯೇ ಮಗನ ಚಿತೆಗೆ ಕೊಳ್ಳಿ ಇಡುತ್ತಾನೆ’. ಎಂದು ಕೇಳಿದ್ದೆ. ಕಾರ್ಗಿಲ್ ಯುದ್ಧ ಇಂತಹ ಅನೇಕ ಘಟನಾವಳಿಗಳಿಗೆ ಮೂಕ ಪ್ರೇಕ್ಷಕವಾಯಿತು. ಅದು ಪಾಕಿಸ್ತಾನದಡೆಯಿಂದ ಅನಿರೀಕ್ಷಿತ ದಾಳಿ, ಆದರೆ ನಮ್ಮೆಡೆಯಿಂದ ನಿರೀಕ್ಷಿತ ಪ್ರತ್ಯುತ್ತರ. ಈ ಗೆಲುವಿನ ಶ್ರೇಯಸ್ಸೆಲ್ಲ ಹೋರಾಡಿದ, ಮಡಿದ ಸೈನಿಕರಿಗೇ ಸಲ್ಲಬೇಕು.
– ಕಿರಣ್ ಕುಮಾರ್ ವಿವೇಕ ವಂಶಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
By Election: ಶಿಗ್ಗಾಂವಿ ಸವಿ ಬೊಮ್ಮಾಯಿ ಪುತ್ರನಿಗೋ, ಯಾಸಿರ್ ಪಠಾಣಗೋ?
King Cobra: “ಕಾಳಿಂಗ’ ಸರ್ಪಕ್ಕೆ ಕನ್ನಡದ್ದೇ ವೈಜ್ಞಾನಿಕ ಹೆಸರು!
Mysuru:’ಕರ್ನಾಟದಲ್ಲಿ “ಗ್ಯಾರಂಟಿ’ ಹೆಸರಲ್ಲಿ ಲೂಟಿ, ಮಹಾರಾಷ್ಟ್ರದಲ್ಲಿ ನೀವು ಘೋಷಿಸಬೇಡಿ’
By Election: ಚನ್ನಪಟ್ಟಣದಲ್ಲಿ ಎಚ್.ಡಿ.ದೇವೇಗೌಡ Vs ಡಿ.ಕೆ.ಶಿವಕುಮಾರ್ ಮೇಕೆದಾಟು ಜಟಾಪಟಿ
Active Politics: ನಾನು ಎಂದೂ ಮಂಡ್ಯ ಕ್ಷೇತ್ರ ಬಿಡುವುದಿಲ್ಲ: ಮಾಜಿ ಸಂಸದೆ ಸುಮಲತಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.