ಬುಡಕಟ್ಟು ಸಂಸ್ಕೃತಿಯನ್ನು ಉಳಿಸಿಕೊಂಡೇ ನಡೆಯಬೇಕಿದೆ ಆದಿವಾಸಿಗಳ ಅಭಿವೃದ್ಧಿ!
ಭಾರತದಲ್ಲಿ ಪ್ರಸ್ತುತ ಅನೇಕ ಬುಡಕಟ್ಟು ಯೋಜನೆಗಳಲ್ಲಿ ಅಂದಿನ ಬ್ರಿಟಿಷ್ ಸರಕಾರದ ಪ್ರಭಾವ ಇಂದಿಗೂ ಸಹ ಉಳಿದುಕೊಂಡಿರುವುದನ್ನು ಗಮನಿಸಬಹುದು
Team Udayavani, Aug 19, 2020, 2:02 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
– ಡಾ. ಡಿ. ಸಿ. ನಂಜುಂಡ, ಸಹ ಪ್ರಾಚಾರ್ಯರು
ಭಾರತದಲ್ಲಿ 2011 ನೇ ಜನಗಣತಿಯ ಪ್ರಕಾರ ಒಟ್ಟು ಜನಸಂಖ್ಯೆಯಲ್ಲಿ ಶೇ 8.8 ರಷ್ಟು ಬುಡಕಟ್ಟು ಜನರು ಕಂಡುಬರುತ್ತಾರೆ.
ಸಾಮಾನ್ಯ ಜನರಿಗೆ ಹೋಲಿಸಿದಾಗ ಆದಿವಾಸಿಗಳು, ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ, ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಇತರರಿಗಿಂತ ಭಿನ್ನರಾಗಿದ್ದು ಅತ್ಯಂತ ಹಿಂದುಳಿದವರಾಗಿದ್ದಾರೆ.
ರಾಜ್ಯದಲ್ಲಿ 2011ನೇ ಜನಗಣತಿಯ ಪ್ರಕಾರ ರಾಜ್ಯದಲ್ಲಿ ಸುಮಾರು 43 ಲಕ್ಷ ವಿವಿಧ ರೀತಿಯ ಬುಡಕಟ್ಟು ಜನಾಂಗಗಳು ಕಂಡುಬರುತ್ತವೆ.
ಸೋಲಿಗ, ಜೇನುಕುರುಬ, ಕಾಡು ಕುರುಬ ಬೆಟ್ಟಕುರುಬ, ಇರುಳಿಗ, ಗೊಂಡ, ಮಲೆಕುಡಿಯ, ಎಂಬ ಒಟ್ಟು ಪ್ರಮುಖ 50 ಆದಿವಾಸಿ ಸಮುದಾಯಗಳನ್ನು ನಮ್ಮ ರಾಜ್ಯದಲ್ಲಿ ಗುರುತಿಸಲಾಗಿದ್ದು ಇವರು ಒಟ್ಟು ರಾಜ್ಯದ ಜನಸಂಖ್ಯೆಯಲ್ಲಿ ಶೇ. 6.55 ರಷ್ಟು ಕಂಡುಬರುತ್ತಾರೆ ಎನ್ನಲಾಗಿದೆ.
ಇಡೀ ಜಗತ್ತಿನಲ್ಲಿ ಇಷ್ಟು ದೊಡ್ಡ ಪ್ರಮಾಣದ ಬುಡಕಟ್ಟು ಜನಸಂಖ್ಯೆ ಇರುವುದು ಭಾರತದಲ್ಲಿ ಮಾತ್ರ ಎನ್ನಬಹುದು. ಈ ಸಮುದಾಯಗಳ ಅಭಿವೃದ್ಧಿಗೆ ಸರಕಾರಗಳು ಜಾರಿಗೊಳಿಸುವ ಯೋಜನೆಗಳು ಬಹುತೇಕ ಅನುದಾನ ಒದಗಿಸಲು ಮಾತ್ರ ಸೀಮಿತವಾಗಿದೆ.
ಇದರ ಪರಿಣಾಮ ಒಂದಿಷ್ಟು ಮೂಲಭೂತ ಸೌಲಭ್ಯಗಳು ಈ ಸಮುದಾಯವು ತಲುಪಬಹುದು. ಆದರೆ ಯಾವ ಕಾರಣಕ್ಕೂ ಇದು ಬುಡಕಟ್ಟು ಜನಾಂಗದ ತಲೆಮಾರಿನ ಸಂಸ್ಕೃತಿಗಳನ್ನು ಉಳಿಸಿ-ಬೆಳೆಸಲು ಸಾಧ್ಯವಾಗುವುದಿಲ್ಲ ಎನ್ನುತ್ತಾರೆ ತಜ್ಞರು.
ಭಾರತದಲ್ಲಿ ಪ್ರಸ್ತುತ ಅನೇಕ ಬುಡಕಟ್ಟು ಯೋಜನೆಗಳಲ್ಲಿ ಅಂದಿನ ಬ್ರಿಟಿಷ್ ಸರಕಾರದ ಪ್ರಭಾವ ಇಂದಿಗೂ ಸಹ ಉಳಿದುಕೊಂಡಿರುವುದನ್ನು ಗಮನಿಸಬಹುದು. ಕ್ರಿಶ 1858ರಿಂದಲೇ ಭಾರತದ ಬುಡಕಟ್ಟು ಜನಾಂಗಗಳ ಮೇಲೆ ಬ್ರಿಟಿಷ್ ಪ್ರಭಾವ ಉಂಟಾಯಿತು ಎಂದು ಹೇಳಬಹುದು.
ಇದು ದೇಶದ ಹಲವಾರು ಬುಡಕಟ್ಟು ಜನಾಂಗಗಳು ಒಂದು ಕಡೆ ಸಂಪೂರ್ಣ ಅಭಿವೃದ್ಧಿಯ ಪಥಕ್ಕೆ ಬರಲು ಆಗದೆ ಇನ್ನೊಂದು ಕಡೆ ತಲೆಮಾರುಗಳಿಂದ ಉಳಿದ ಬಂದ ಸಂಸ್ಕೃತಿಯನ್ನು ಅನುಸರಿಸಲು ಆಗದೆ ಅಡ್ಡದಾರಿಯಲ್ಲಿ ಬಂದು ನಿಲ್ಲುವಂತಾಯಿತು. ಇಲ್ಲೇ ನಿಜವಾದ ಸಮಸ್ಯೆ ಆರಂಭವಾಗಿದ್ದು.
ಯಾವುದೇ ದೇಶದಲ್ಲಿ ಆದಿವಾಸಿಗಳಿಗೆ ಮತ್ತು ಅರಣ್ಯಕ್ಕೂ ಒಂದು ನೇರ ನೇರ ಸಂಬಂಧ ಇರುತ್ತದೆ. ತೀರ ಇತ್ತೀಚಿನವರೆಗೆ ಅರಣ್ಯಗಳ ಮೇಲೆ ಆದಿವಾಸಿಗಳಿಗೆ ಮಮಕಾರವಿತ್ತು. ಆದರೆ ಸರಕಾರದ ಅರಣ್ಯ ಕಾಯ್ದೆಗಳು ದಿನ ಬದಲಾದ ಹಾಗೆ ಅರಣ್ಯ ಮತ್ತು ಆದಿವಾಸಿಗಳ ನಡುವಿನ ಸಂಬಂಧ ಬದಲಾವಣೆಗೊಂಡು ಕೊನೆಗೆ ಸಂಪೂರ್ಣವಾಗಿ ಬಿಗಡಾಯಿಸಿತ್ತು.
ಸರ್ಕಾರದ ಕಾಯ್ದೆಗಳು ಅರಣ್ಯದಲ್ಲಿ ಬುಡಕಟ್ಟು ಜನರ ಆಸ್ತಿತ್ವವನ್ನೇ ಪ್ರಶ್ನಿಸುವಂತೆ ಮಾಡಿತ್ತು.
ಕ್ರಮೇಣ ಅರಣ್ಯ ಅಧಿಕಾರಶಾಹಿಗಳ ಮತ್ತು ಬಂಡವಾಳಶಾಹಿಗಳ ಕಪಿಮುಷ್ಟಿಗೆ ಸಿಲುಕಿಕೊಂಡಿತ್ತು. ಅರಣ್ಯ ಇವರುಗಳ ಖಾಸಗಿ ಸ್ವತ್ತು ಆಯಿತು. ಇದರಿಂದ ಬುಡಕಟ್ಟು ಜನರ ಮತ್ತು ಅರಣ್ಯಗಳ ನಡುವಿನ ಸಂಬಂಧದ ವ್ಯಾಖ್ಯಾನವೇ ಬದಲಾಯಿತು.
ರೆಸಾರ್ಟ್ ಗಳು, ಹೋಂಸ್ಟೇಗಳು ಕ್ರಮೇಣ ಬುಡಕಟ್ಟು ಜನಗಳ ಬುಡವನ್ನೇ ಅಲುಗಾಡಿಸತೊಡಗಿದವು. ಇದರಿಂದ ತಲೆಮಾರುಗಳಿಂದ ಅರಣ್ಯವನ್ನು ನಂಬಿಕೊಂಡು ಮತ್ತು ಅದರ ಮೂಲಕ ತಮ್ಮ ಸಂಸ್ಕೃತಿಯನ್ನು ಪೋಷಿಸಿಕೊಂಡು ಬಂದಿದ್ದ ಬುಡಕಟ್ಟು ಜನರು ಸಂಪೂರ್ಣ ಅತಂತ್ರರಾದರು. ಇಂದಿಗೂ ಕಾಯ್ದೆಗಳ ಮೂಲಕ ಅರಣ್ಯವನ್ನು ಯಾರಿಂದ ರಕ್ಷಿಸಲಾಗುತ್ತಿದೆ ಕುರಿತು ಯಾವುದೇ ರೀತಿಯ ವಿವರಣೆಗಳನ್ನು ಒಳಗೊಳ್ಳದೇ ಇರುವುದು ಸೋಜಿಗವೇ ಸರಿ.
ಕ್ರಿ.ಶ 1972 ಜಾರಿಗೆ ತಂದ ರಾಷ್ಟ್ರೀಯ ಅರಣ್ಯ ನೀತಿ ಮತ್ತು ಸಂರಕ್ಷಿಸಲ್ಪಟ್ಟ ರಾಷ್ಟ್ರೀಯ ಉದ್ಯಾನವನಗಳು ಎಂಬ ಹೆಸರಿನಲ್ಲಿ ದೇಶದಲ್ಲಿ ಮಿಲಿಯನ್‍ಗಟ್ಟಲೆ ಬುಡಕಟ್ಟು ಜನರನ್ನು ಸ್ಥಳಾಂತರಿಸಲಾಯಿತು. ಇವರ ಮೂಲ ಜಾಗದಲ್ಲಿ, ಆಣೆಕಟ್ಟುಗಳು, ಜಲಾಶಯ, ವಿದ್ಯುತ್ ಉತ್ಪಾದನೆ ಯೋಜನೆಗಳು ಬಂದು ಸೇರಿಕೊಂಡವು. ಬುಡಕಟ್ಟು ಜನಗಳ ಸ್ಥಳಾಂತರದೊಂದಿಗೆ ಅವರ ಸಂಸ್ಕೃತಿಗಳು ಸಹ ಕ್ರಮೇಣ ಕಣ್ಮರೆಯಾದವು. ಅಮೆರಿಕದ ರೆಡ್ ಇಂಡಿಯನ್ನರನ್ನು, ಆಸ್ಟ್ರೇಲಿಯಾದ ಮೂಲನಿವಾಸಿಗಳು ಮತ್ತು ಲ್ಯಾಟಿನ್ ಅಮೆರಿಕದ ಬುಡಕಟ್ಟು ಜನರನ್ನು ಹೀಗೆ ಬಲವಂತವಾಗಿ ಒಕ್ಕಲೆಬ್ಬಿಸಿ ಅವರನ್ನು ಕವಲು ದಾರಿಗೆ ತಂದು ನಿಲ್ಲಿಸಲಾಯಿತು.
ಗಿರಿ ಜನರಿಗೆ ಶಿಕ್ಷಣ ನೀಡಿ ಅವರಿಗೆ ಉದ್ಯೋಗ ದಕ್ಕಿಸಿಕೊಳ್ಳುವುದು ಅಭಿವೃದ್ಧಿ ಎಂದು ಹಿಂದೆ ಭಾವಿಸಲಾಗಿತ್ತು. ಆದರೆ ಈಗ ಅಭಿವೃದ್ಧಿಯ ಪರಿಕಲ್ಪನೆ ಬದಲಾಗಿದೆ. ಅವರ ಸಂಸ್ಕೃತಿಯನ್ನು ಗೌರವಿಸುತ್ತಾ ಅವರನ್ನು ಅವರ ಸ್ಥಳದಲ್ಲಿ ಅಭಿವೃದ್ಧಿಯತ್ತ ಮುಖ ಮಾಡುವುದರ ಕಡೆ ಚಿಂತಿಸಲಾಗುತ್ತಿದೆ. ಇದರಿಂದ ಅವರು ತಮ್ಮತನವನ್ನು ಕಳೆದುಕೊಳ್ಳದೆ ನಾಗರಿಕತೆಯ ಹೊಡೆತಕ್ಕೆ ಸಿಲುಕಿ ನಾಶವಾಗುವುದು ತಪ್ಪುತ್ತದೆ.
ಗಿರಿಜನರ ಅಭಿವೃದ್ಧಿ ಎಂದರೆ ಭಾರತದ ಮುಖ್ಯಭೂಮಿಯಲ್ಲಿರುವ ಗಿರಿಜನರನ್ನು ಮಾತ್ರ ನೋಡಲಾಗುತ್ತಿದೆ. ಆದರೆ ಭಾರತದ ಭೂಮಿಯಿಂದ ಬಹಳ ದೂರವಿರುವ ಅಂಡಮಾನ್-ನಿಕೋಬಾರ್ ನಲ್ಲಿ ಇರುವ ಗಿರಿಜನರನ್ನು ಸಹ ನಾವು ನೋಡಬೇಕಾಗುತ್ತದೆ. ಇಲ್ಲಿ ವಿಶ್ವದ ಅತಿ ಅಪರೂಪ ಬುಡಕಟ್ಟು ಜನಾಂಗಗಳು ವಾಸಿಸುತ್ತಿದ್ದು ಇವರುಗಳು ಅಭಿವೃದ್ದಿಯ ಹೊಡೆತಕ್ಕೆ ಸಿಲುಕಿ ತಮ್ಮ ಸಂಸ್ಕೃತಿಯನ್ನು ಕಳೆದುಕೊಳ್ಳುವತ್ತ ಸಾಗುತ್ತಿದ್ದಾರೆ ಎನ್ನುತ್ತಾರೆ ತಜ್ಞರು.
ಇಲ್ಲಿ ಬ್ರಿಟಿಷ್ ಕಾಲದಲ್ಲಿ ಸುಮಾರು 23 ವಿವಿಧ ಗಿರಿಜನ ಪಂಗಡಗಳಿದ್ದವು ಮತ್ತು ಅವರ ಒಟ್ಟು ಜನಸಂಖ್ಯೆ 7000 ಇತ್ತು. ಈಗದು ಬೆರಣಿಕೆಯಷ್ಟು ಮಾತ್ರ ಇದೆ ಎನ್ನುತ್ತವೆ ವರದಿಗಳು. ನಾಗರಿಕತೆಗೆ ಹೊಂದಿಕೊಳ್ಳಲಾಗದೆ ಹಲವಾರು ಬುಡಕಟ್ಟು ಪ್ರವರ್ಗಗಳು ನಾಶವಾಗುತ್ತಿರುವುದಕ್ಕೆ ಜೀವಂತ ಉದಾಹರಣೆ ಎನ್ನಬಹುದು. ಸಾಂಪ್ರದಾಯಿಕ ಜ್ಞಾನ ವ್ಯವಸ್ಥೆಯನ್ನು ಒಳಗೊಂಡಂತೆ ಬುಡಕಟ್ಟು ಜನರು ಹೊಂದಿರುವ ಅಮೂರ್ತ ಸಂಸ್ಕೃತಿ ಮತ್ತು ಪರಂಪರೆಯು ಅನೇಕ ಸಕಾರಾತ್ಮಕ ಮತ್ತು ಉತ್ಪಾದಕ ಅಂಶಗಳನ್ನು ಒಳಗೊಂಡಿದೆ.
ಸಮಾಜವನ್ನು ಸಂಯೋಜಿಸಲು ಮತ್ತು ಸಂಬಂಧಪಟ್ಟ ಜನರಿಗೆ ಸಾಂಸ್ಕೃತಿಕ ಮತ್ತು ಮಾಲೀಕತ್ವದ ಪ್ರಜ್ಞೆಯನ್ನು ಹೆಚ್ಚಿಸುವಲ್ಲಿ ಅದರ ಮಹತ್ವದ ಪಾತ್ರದ ಹೊರತಾಗಿಯೂ, ಅನೇಕ ಗಂಭೀರ ಬೆದರಿಕೆಗಳನ್ನು ಇಂದು ಎದುರಿಸುತ್ತಿದೆ. ಭಾರತದ ಅನೇಕ ಭಾಗಗಳಲ್ಲಿ ಆಧುನೀಕರಣದ ವೇಗವು ಬುಡಕಟ್ಟು ಸಂಸ್ಕೃತಿಯ ಮೇಲೆ ಪ್ರಭಾವ ಬೀರುತ್ತಿದೆ. ಜಾಗತೀಕರಣ, ಏಕರೂಪೀಕರಣ ಮತ್ತು ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವದ ಕ್ಷಿಪ್ರ ಪ್ರಕ್ರಿಯೆಯಿಂದಲೂ ಅಪಾಯವು ಬರುತ್ತಿದೆ. ಇಂದು ಬುಡಕಟ್ಟು ಸಂಸ್ಕೃತಿಯ ಎದುರಿಸುತ್ತಿರುವ ಇನ್ನೂ ಅನೇಕ ಮತ್ತು ತಪ್ಪಿಸಲಾಗದ ನಿರ್ಣಾಯಕ ಅಂಶಗಳಿವೆ.
ಪ್ರತಿಯೊಂದು ಮಾನವ ಸಮುದಾಯವು ಶತಮಾನಗಳಾದ್ಯಂತ ನಿರ್ದಿಷ್ಟ ಪರಿಸರ ಮತ್ತು ಸಮಾಜದೊಂದಿಗೆ ಸಂವಹನ ನಡೆಸುವ ಪ್ರಕ್ರಿಯೆಯ ಮೂಲಕ ಮಾನವ ಅಗತ್ಯಗಳನ್ನು ಪೂರೈಸಲು ತನ್ನದೇ ಆದ ಜೀವನ ವಿಧಾನಗಳನ್ನು ಅಭಿವೃದ್ಧಿಪಡಿಸಿದೆ. ಈ ಪ್ರಕ್ರಿಯೆಗಳು ಸಮುದಾಯಗಳಿಗೆ ಅದರ ಹಿಂದಿನ ಪೀಳಿಗೆಯೊಂದಿಗೆ ನಿರಂತರತೆಯ ಸಮಪ್ಠಿ ಪ್ರಜ್ಞೆಯನ್ನು ಒದಗಿಸುತ್ತವೆ ಮತ್ತು ಸಾಂಸ್ಕೃತಿಕ ಗುರುತಿಗೆ ಮುಖ್ಯವಾಗಿವೆ. ಜೊತೆಗೆ ಸಾಂಸ್ಕೃತಿಕ ವೈವಿಧ್ಯತೆ ಮತ್ತು ಮಾನವೀಯತೆಯ ಸೃಜನಶೀಲತೆಯನ್ನು ಕಾಪಾಡಿಕೊಳ್ಳಲು ಕಾರಣವಾಗುತ್ತದೆ.
ಇಂದಿನ ದಿನಗಳಲ್ಲಿ ಬುಡಕಟ್ಟು ಸಂಸ್ಕೃತಿಗೆ ತ್ವರಿತವಾಗಿ ಮತ್ತು ಶಾಶ್ವತ ಬದಲಾವಣೆಗಳನ್ನು ತರುತ್ತಿರುವ ಅನೇಕ ಬಾಹ್ಯ ಸವಾಲಿನ ಅಂಶಗಳಿವೆ. ಆಧುನಿಕ ಸಮಾಜವು ಮುಖ್ಯವಾಗಿ ಬುಡಕಟ್ಟಿನ ಸಾಂಸ್ಕೃತಿಕ ಆನುವಂಶಿಕತೆಯನ್ನು ಅದರ ಬಹುರೂಪತೆಗಳನ್ನು ಮತ್ತು ಅಭಿವ್ಯಕ್ತಿಗಳನ್ನು ಸಂರಕ್ಷಿಸುವ ಬಗ್ಗೆ ಕಾಳಜಿ ವಹಿಸಬೇಕು. ಹೀಗೆ ಮಾನವಕುಲದ ಅಭಿವೃದ್ಧಿಗೆ ಸಹಕಾರಿಯಾಗಲು ಅಮೂರ್ತ ಬುಡಕಟ್ಟು ಪರಂಪರೆಯನ್ನು ಕಾಪಾಡುವ ತುರ್ತು ಅವಶ್ಯಕತೆಯಿದೆ ಎನ್ನುತ್ತಾರೆ ತಜ್ಞರು.
ಪ್ರಸ್ತುತ ಕ್ಷಣದಲ್ಲಿ ಭಾರತದ ಇಡೀ ಬುಡಕಟ್ಟು ಸಮಾಜವು ಪರಿವರ್ತನೆಯ ಮತ್ತು ನಿರ್ಣಾಯಕ ಹಂತದ ಮೂಲಕ ಸಾಗುತ್ತಿದೆ. ವಿವಿಧ ಆಧುನೀಕರಣ ಶಕ್ತಿಗಳು ಇಡೀ ಬುಡಕಟ್ಟು ಸಾಮಾಜಿಕ-ಸಾಂಸ್ಕೃತಿಕ ಪರಿಸರದಲ್ಲಿ ಶೀಘ್ರ ಪರಿವರ್ತನೆ ತಂದಿವೆ. ಸಾಂಸ್ಕೃತಿಕ ಮಿಶ್ರಣವು ಹೆಚ್ಚುತ್ತಿದೆ ಮತ್ತು ಇದು ಬುಡಕಟ್ಟು ಜನಾಂಗದವರ ಜೀವನ ಶೈಲಿಯಲ್ಲಿ ಗ್ರಹಿಸಬಹುದಾದ ಬದಲಾವಣೆಯನ್ನು ಮುಂದಿನ ದಿನಗಳಲ್ಲಿ ಉಂಟುಮಾಡುವುದು ಖಚಿತ.
ಆಧುನಿಕ ಮತ್ತು ವೈಜ್ಞಾನಿಕ ವರ್ತನೆಗಳ ಮೂಲಕ ತರಲಾದ ಬದಲಾವಣೆಗಳು ಬುಡಕಟ್ಟು ಅಭಿವೃದ್ಧಿಗೆ ಆರೋಗ್ಯಕರ ಸಂಕೇತವಾಗಿದೆ, ಆದರೆ ಅದೇ ಸಮಯದಲ್ಲಿ ಅಪಾರ ಮೌಲ್ಯವನ್ನು ಹೊಂದಿರುವ ಬುಡಕಟ್ಟು ಸಾಂಪ್ರದಾಯಿಕ ವ್ಯವಸ್ಥೆಗಳನ್ನು ಸಂರಕ್ಷಿಸಲು ಗಮನ ನೀಡಬೇಕು. ಅಭಿವೃದ್ಧಿಯ ಒಟ್ಟಾರೆ ಯೋಜನೆಯಲ್ಲಿ ಬುಡಕಟ್ಟು ಜನಾಂಗದವರ ಕಲೆ ಮತ್ತು ಸಂಸ್ಕೃತಿಗೆ ಹೊಸ ದೃಷ್ಟಿಕೋನ ಮತ್ತು ಗೌರವವನ್ನು ನೀಡಬೇಕು. ಸಂಪ್ರದಾಯ ಮತ್ತು ಆಧುನಿಕತೆ ಎರಡರ ಅತ್ಯುತ್ತಮ ಗುಣಲಕ್ಷಣಗಳನ್ನು ಅವರುಗಳ ಸುಸ್ಥಿರ ಅಭಿವೃದ್ಧಿಗೆ ಸಂಶ್ಲೇಷಿಸಬೇಕು. ಸರ್ಕಾರದ ಹೊಸ ನೀತಿಗಳು ಬುಡಕಟ್ಟು ಜನಾಂಗಗಳ ಅಂತರ್ವರ್ಧಕ ಅಭಿವೃದ್ಧಿಯನ್ನು ಉತ್ತೇಜಿಸುವ ಅನ್ವಯದೊಂದಿಗೆ ಪೂರಕವಾಗಿ ಇರಬೇಕಾಗುತ್ತದೆ.
ಬುಡಕಟ್ಟು ಸಮುದಾಯಗಳ ಅಭಿವೃದ್ಧಿ ಯೋಜನೆಗಳಲ್ಲಿ ಕೇವಲ ಆರ್ಥಿಕ ತಜ್ಞರನ್ನು ಮಾತ್ರ ಬಳಸಿಕೊಂಡರೆ ಅವು ಕೇವಲ ಹಣಕಾಸು ಒದಗಿಸಲು ಹಾಗೂ ಆ ಮೂಲಕ ಒಂದಿಷ್ಟು ಸೌಲಭ್ಯ ಕಲ್ಪಿಸುವ ಅಂಶವನ್ನು ನೀಡಲು ಮಾತ್ರ ಸಾಧ್ಯವಾಗುತ್ತದೆ. ಹೀಗಾಗಿ ಯೋಜನೆಗಳ ಸಿದ್ಧಪಡಿಸುವಿಕೆಯಲ್ಲಿ ಆರ್ಥಿಕ ತಜ್ಞರೊಂದಿಗೆ ಮುಖ್ಯವಾಗಿ ಮಾನವಶಾಸ್ತ್ರ ತಜ್ಞರು ಸಹ ಕಡ್ಡಾಯವಾಗಿ ಭಾಗವಹಿಸಬೇಕಾಗುತ್ತದೆ.
ಭಾರತದಲ್ಲಿ ಮೊದಲಿನಿಂದಲೂ ಬುಡಕಟ್ಟು ಅಭಿವೃದ್ಧಿ ಯೋಜನೆಗಳಿಗೆ ಕೇವಲ ಹಣಕಾಸು ಸೌಲಭ್ಯವನ್ನು ಒದಗಿಸುವುದಕ್ಕೆ ಮಾತ್ರ ಸೀಮಿತವಾಗಿದೆ. ಭಾರತದಲ್ಲಿ ಬುಡಕಟ್ಟು ಹೆಸರಿನಲ್ಲಿ ಮಾನವಶಾಸ್ತ್ರಜ್ಞರು ಮಾತ್ರ ಅಭಿವೃದ್ಧಿ ಹೊಂದಿದ್ದಾರೆ ಎಂಬ ಸಾಮಾನ್ಯ ಆರೋಪವಿದೆ. ಆದರೆ ಬ್ರಿಟಿಷ್ ನೀತಿಯಿಂದ ಈಶಾನ್ಯ ಭಾರತದಲ್ಲಿ ಬುಡಕಟ್ಟು ಸಮುದಾಯಗಳು ಸಾಕಷ್ಟು ಅಭಿವೃದ್ಧಿ ಹೊಂದಿದೆ ಮತ್ತು ಸಾಮಾಜಿಕ ಮತ್ತು ಆರ್ಥಿಕ ಕ್ಷೇತ್ರಗಳಲ್ಲಿ ಈ ಭಾಗದ ಬುಡಕಟ್ಟು ಜನಾಂಗ ತನ್ನದೇ ಛಾಪು ಮೂಡಿಸಿದೆ ಎನ್ನುವುದು ಸತ್ಯ.
ಸ್ವಾತಂತ್ರ್ಯ ಬಂದು ಇಂದಿಗೆ ಸುಮಾರು 75 ವರ್ಷ ಕಳೆದರೂ ಅವರನ್ನು ಅಭಿವೃದ್ದಿಯ ಮುಖ್ಯವಾಹಿನಿಗೆ ತರಬೇಕೆ ಅಥವಾ ಕೇವಲ ಅವರ ಸಂಸ್ಕೃತಿಯನ್ನು ಮಾತ್ರ ಉಳಿಸಿ ಘೋಷಿಸಬೇಕೆ ಎಂಬುದರ ಕುರಿತು ನಮ್ಮ ಚರ್ಚೆ ಇನ್ನೂ ಮುಗಿದಿಲ್ಲ! ಒಂದೆಡೆ ಇಡೀ ವಿಶ್ವವೇ ಬುಡಕಟ್ಟು ಮಾಸಾಚರಣೆ ಆಚರಿಸುತ್ತಿದ್ದರೆ, ಇತ್ತ, ಭಾರತೀಯ ಬುಡಕಟ್ಟು ಜನಾಂಗಗಳು ಆಹಾರ ಮತ್ತು ನೀರಿಗಾಗಿ ಹೋರಾಡುತ್ತಿರುವುದು ನಿಜಕ್ಕೂ ಬೇಸರದ ಸಂಗತಿ. ಬುಡಕಟ್ಟು ಅಭಿವೃದ್ಧಿಯ ವಿಚಾರದಲ್ಲಿ ಇನ್ನೊಂದು ಬಹುಮುಖ್ಯ ಅಂಶವೆಂದರೆ ಅವರಿಗೆ ಯಾವ ರೀತಿ ಅಭಿವೃದ್ಧಿಯನ್ನು ನಾವು ನೀಡಬೇಕಾಗುತ್ತದೆ, ಅವರು ಯಾವ ರೀತಿಯ ಅಭಿವೃದ್ಧಿ ನಮ್ಮಿಂದ ಬಯಸುತ್ತಿದ್ದಾರೆ?, ಅವರ ಮನಸ್ಸಿನಲ್ಲಿರುವ ಅಭಿವೃದ್ಧಿಯ ಪರಿಕಲ್ಪನೆ ಇವುಗಳ ಬಗ್ಗೆ ಇನ್ನಷ್ಟು ಸಂಶೋಧನೆಗಳು ನಡೆಯಬೇಕಾಗಿದೆ. ಅವರ ಪಾರಂಪರಿಕ ಸಂಸ್ಕೃತಿಯ ಮತ್ತು ಹಕ್ಕುಗಳಿಗೆ ನಾವು ಗಮನ ನೀಡಿದಷ್ಟು ಬೇಗ ಅವರು ರಾಷ್ಟ್ರದ ಮುಖ್ಯವಾಹಿನಿಯನ್ನು ಸೇರಿಕೊಳ್ಳುವ ಸಾಧ್ಯತೆ ಹೆಚ್ಚಾಗಿರುತ್ತದೆ.
ಡಾ. ಡಿ.ಸಿ. ನಂಜುಂಡ, ಸಹ ಪ್ರಾಚಾರ್ಯರು
ಸೆಂಟರ್ ಫಾರ್ ದಿ ಸ್ಟಡೀ ಆಫ್ ಸೋಷಿಯಲ್ ಎಕ್ಸ್ ಕ್ಲೂಷನ್ & ಇನ್ ಕ್ಲೂಸಿವ್ ಪಾಲಿಸಿ (CSSEIP)
ಹ್ಯುಮಾನಿಟೀಸ್ ಬ್ಲಾಕ್, ಮೈಸೂರು ವಿಶ್ವವಿದ್ಯಾನಿಲಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Clown Kohli: ವಿರಾಟ್ ಕೊಹ್ಲಿಗೆ ಅವಮಾನ ಮಾಡಿದ ಆಸೀಸ್ ಮಾಧ್ಯಮಗಳು!
ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: 16 ವರ್ಷದ ಬಾಲಕ ಮೃತ್ಯು, ಮೃತರ ಸಂಖ್ಯೆ 3ಕ್ಕೆ ಏರಿಕೆ
ನನ್ನ ಮಾರ್ಗದರ್ಶಕರನ್ನು ಕಳೆದುಕೊಂಡಿದ್ದೇನೆ… ಮಾಜಿ ಪ್ರಧಾನಿ ನಿಧನಕ್ಕೆ ರಾಹುಲ್ ಸಂತಾಪ
Gangavathi: 25 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ
Patna: “ರಘುಪತಿ ರಾಘವ’ ಭಜನೆ ಹಾಡಿದ ಗಾಯಕಿ ವಿರುದ್ಧ ಪ್ರತಿಭಟನೆ: ಹಾಡುಗಾರ್ತಿ ಕ್ಷಮೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.