ಬಾನಂಗಳದ ಬೆರಗು
Team Udayavani, Nov 5, 2017, 12:59 PM IST
ಮನೆಯೊಳಗಣ ಕಲಹವ ಊರು ನುಂಗಿತ್ತು ನೋಡ/ ಊರೊಳಗಣ ಕಲಹವ ನಾಡು ನುಂಗಿತ್ತು ನೋಡ/ ನಾಡುನಾಡುಗಳ ಪೆಳಕವ ನುಂಗಿತ್ತು ಇಳೆಯೆಂಬ ಸೂರು/ ಇಳೆಯ ಮರುಕವನ್ನೇ ಸೂರ್ಯ, ಚಂದ್ರ, ಬಾನಚುಕ್ಕಿಗಳು ನುಂಗಿದ್ದವು ನೋಡ! ಉಸಿರಬೆಡಂಗಯ್ಯ, ನಿನ್ನ ಬಯಲು ನನ್ನ ಬಯಲನ್ನೇ ನುಂಗಿತ್ತು, ಲೀನವಾಗಿಸಿತು”
ಮೇಲಿನ ಸಾಲುಗಳಂತೆ, ನಮ್ಮ ಅರಿವು ಹರಡಿಕೊಂಡಂತೆ, ಬಾನಬಯಲಿನೊಳಗೆ ನುಸುಳಿಕೊಂಡಂತೆ, ನಮ್ಮ ಬದುಕಿನ ಬವಣೆಗಳು ನಗಣ್ಯವೆನಿಸುವವು. ಕೋಟಿ ಮಿಗಿಲು ತಾರೆಗಳ, ತಾರೆಗುಂಪುಗಳ (Galaxies) ಇರುವಿಕೆಯೇ ಒಂದು ಬೆರಗಾದರೆ, ಅವುಗಳ ನಡುವಣ ಹರಡಿರುವ ಬಯಲ ಆಳ ಮತ್ತು ವಿಸ್ತಾರವು ಮತ್ತೂಂದು ಬೆರಗು!
ಬನ್ನಿ, ವಿಶ್ವದ ಈ ಬೆರಗನ್ನೊಮ್ಮೆ ಸವಿದುಬರೋಣ. ಮೊದಲು ನಮ್ಮ ಭೂಮಿಯಿಂದ ತೊಡಗೋಣ. ನಮ್ಮ ಭೂಮಿಯ ದುಂಡಗಲ ಸರಿಸುಮಾರು 12756 ಕಿ.ಮೀ. ಇದರ ರಾಶಿ ಆರರ ಪಕ್ಕ ಇಪ್ಪತ್ತನಾಲಕ್ಕು ಸೊನ್ನೆಗಳನ್ನು ಹಾಕಿದರೆ ಎಷ್ಟು ಕೇಜಿ ಬರುತ್ತದೋ ಅಷ್ಟು! ಭೂಮಿ ಸೂರ್ಯನಿಂದ 15 ಕೋಟಿ ಕಿ.ಮೀ ದೂರದಲ್ಲಿದೆ. ಬೆಳಕಿಗೆ ನಮ್ಮ ನೆಲವನ್ನು ತಲುಪಲು ಸುಮಾರು 8 ನಿಮಿಷಗಳೇ ಬೇಕು (ಬೆಳಕು ಒಂದು ಸೆಕೆಂಡಿಗೆ ಮೂರು ಲಕ್ಷ ಕಿ.ಮೀ ನಷ್ಟು ಸಾಗುತ್ತದೆ). ತುಂಬ ವಿಶೇಷವಾಗಿರುವ ಭೂಮಿಯ ವಯಸ್ಸು ಗೊತ್ತೆ? ಬರೋಬ್ಬರಿ 460 ಕೋಟಿ ವರ್ಷಗಳು! ಇನ್ನು ನಮ್ಮ ಸೂರ್ಯನ ಕತೆ ಕೇಳಬೇಕೆ? ಸುಮಾರು 10 ಲಕ್ಷ ಭೂಮಿಗಳನ್ನು ಒಳಗೊಳ್ಳಬಲ್ಲ ದೈತ್ಯ ಕಾಯವಿದು. ಹೊರಮೈ ಕಾವು 5,500 ಡಿಗ್ರಿ ಸೆಲ್ಸಿಯಸ್‌ನಷ್ಟಿರುವ, 14 ಲಕ್ಷ ಕಿ.ಮೀ ದುಂಡಗಲ ಹೊಂದಿರುವ ಸೂರ್ಯನು, ವಿಶ್ವದಲ್ಲಿರುವ ತಾರೆಗಳÇÉೇ ಚಿಕ್ಕ ಗುಂಪಿಗೆ ಸೇರಿದವನಂತೆ! ಆದರೂ, ಎಲ್ಲ ಗ್ರಹಗಳನ್ನು ಒಳಗೊಂಡಂತೆ, ಸೂರ್ಯ ವ್ಯವಸ್ಥೆಯ ಒಟ್ಟು ರಾಶಿಯಲ್ಲಿನ 99.86% ಪಾಲು ಈ ಬೆಂಗದಿರನದೇ! ಸೂರ್ಯನ ವಯಸ್ಸು ಹೆಚ್ಚುಕಡಿಮೆ ಭೂಮಿಯಷ್ಟೆ ಆಗಿದೆ. ಹೈಡ್ರೊಜನ್ನನ್ನು ಹೀಲಿಮಯ… ಆಗಿಸಿ, ಮತ್ತಷ್ಟು ತೂಕದ ಮೂಲವಸ್ತುಗಳನ್ನು (elements) ಹುಟ್ಟುಹಾಕುವ ದೊಡ್ಡ ಕಾರ್ಖಾನೆ ಈ ಸೂರ್ಯ.
ಸೂರ್ಯನ ಹೊರತಾಗಿ, ಬಾನಲ್ಲಿ ಕಾಣುವ ಸಾವಿರಾರು ಕಾಯಗಳಲ್ಲಿ ಒಂದಷ್ಟು ಗ್ರಹಗಳೂ ಇವೆ! ಬುಧನಿಂದ ಶನಿಯವರೆಗೆ, ಬರಿಗಣ್ಣಿನಲ್ಲಿ ಕಾಣುವ ಒಟ್ಟು ಗ್ರಹಗಳ ಎಣಿಕೆ 5. ಇನ್ನುಳಿದ ದೈತ್ಯ ಗ್ರಹಗಳಾದ ಯುರೇನಸ್ ಮತ್ತು ನೆಪ್ಚ್ಯೂನನ್ನು ದೂರತೋರುಕದ (telescope) ಮೂಲಕ ನೋಡಬಹುದು. ಹೆಚ್ಚಿನ ಎಲ್ಲಾ ಗ್ರಹಗಳಿಗೂ ಉಪಗ್ರಹಗಳಿದ್ದು, ಗುರುವಿನ ಉಪಗ್ರಹಗಳ ಬಳಗದಲ್ಲಿ 60ಕ್ಕೂ ಹೆಚ್ಚು ಸದಸ್ಯರಿದ್ದಾರೆ! ಆದರೆ ಅವನಿಗೆ ಗಟ್ಟಿ ನೆಲವೇ ಇಲ್ಲ. ಆವಿ, ಅನಿಲಗಳನ್ನು ಹೊಂದಿರುವ, ಸಾವಿರ ಭೂಮಿಗಳನ್ನು ಒಳಗೊಳ್ಳುವಷ್ಟು ದೊಡ್ಡ ಕಾಯ.
ಸೂರ್ಯ ವ್ಯವಸ್ಥೆಯ ಬೆರಗುಗಳಲ್ಲಿ ಬಾನಬಂಡೆಗಳು (aster-oids), ಬಾಲಚುಕ್ಕಿಗಳು(comets), ಬೀಳುcಕ್ಕೆಗಳು (meteor-oids); ಒಂದೇ ಎರಡೇ! ಬಾನಬಂಡೆಗಳು ಮಂಗಳ ಮತ್ತು ಗುರುವಿನ ನಡುವೆ ಸುತ್ತುತ್ತಿದ್ದರೂ, ಕೆಲವೊಂದು ಹಾದಿತಪ್ಪಿ ನಮ್ಮ ಭೂಮಿಯೆಡೆಗೆ ಬರುವುದೂ ಇವೆಯಂತೆ! 6 ಕೋಟಿ ವರ್ಷಗಳ ಹಿಂದೆ ಉಂಟಾದ ಡೈನಾಸೋರ್‌ಗಳ ಮಾರಣಹೋಮಕ್ಕೂ ಇಂತಹ ದಾರಿತಪ್ಪಿ ಬಂದೆರಗಿದ ಬಾನಬಂಡೆಗಳೇ ಕಾರಣವಂತೆ. ಅಲ್ಲದೆ, ನೀರಿನಗಡ್ಡೆಯಿಂದಲೇ ಮೈತುಂಬಿಕೊಂಡಿರುವ ಬಾಲಚುಕ್ಕಿಗಳಲ್ಲಿ, ಹಲವು ಬಗೆಯ ಲೋಹಗಳುಳ್ಳ ಬೀಳುcಕ್ಕಿಗಳಲ್ಲಿ ಕಿರುಜೀವಿಗಳೂ ಇರಬಹುದು ಎಂಬುದು ಅರಕೆಗಾರರ ಅಂಬೋಣ. ಕಾಯಗಳ ಅಚ್ಚರಿ ಇಷ್ಟಾದರೆ, ಸೂರ್ಯ ವ್ಯವಸ್ಥೆಯ ಹರವು ಇನ್ನೊಂದು ಬೆರಗು! ಸೂರ್ಯನಿಂದ ಹೊರಟ ಬೆಳಕು 17 ಗಂಟೆಗಳು ಸಾಗುವವರೆಗೂ ಸೂರ್ಯನ ಬಳಗ ಹರಡಿದೆ. ಆದರೆ, ಕ್ಯುಪರ್ ಬೆಲ್ಟ್, ಊರ್ಟ್ ಮೋಡಗಳನ್ನು ದಾಟಿ, ಮುಂದೆ ಬೆಳಕು ಸಾಗುತ್ತಿದ್ದಂತೆ ಸುತ್ತಲೂ ಬಟ್ಟ ಬಯಲು ಆವರಿಸುತ್ತದೆ. ಏಕೆಂದರೆ, ಹತ್ತಿರದ ಇನ್ನೊಂದು ತಾರೆಯನ್ನು ತಲುಪಲು ಬೆಳಕಿಗೆ 4 ವರುಷಗಳೇ ಬೇಕು! ನಮ್ಮ ಸೂರ್ಯನಂತೆ ವಿಶ್ವದಲ್ಲಿ ಹಲವಾರು ತಾರೆಗಳಿವೆ. ತಾರೆಗೆ ಅಚ್ಚಗನ್ನಡದಲ್ಲಿ ಅರಿಲು, ಬೆಳ್ಳಿಚುಕ್ಕಿಯೆಂಬ ಹೆಸರುಗಳಿವೆ. ಇಲ್ಲಿಯವರೆಗೆ ಕಂಡುಬಂದ ವಿಶ್ವದಲ್ಲಿ ಎಷ್ಟು ತಾರೆಗಳಿವೆ ಗೊತ್ತೇ? ಒಂದರ ಪಕ್ಕ 24 ಸೊನ್ನೆಹಾಕಿದರೆ ಎಷ್ಟು ಬರುತ್ತೋ ಅಷ್ಟು! ಇವುಗಳಲ್ಲಿ ಒಂದರ್ಧದಷ್ಟಾದರೂ ಅರಿಲುಗಳಿಗೆ ಗ್ರಹಗಳಿವೆ. ಅವುಗಳಲ್ಲಿಯೂ ಜೀವಿಗಳಿರಬಹುದು!
ಕೋಟಿ ಕೋಟಿ ತಾರೆಗಳು ಕೂಡಿದ ಕುಟುಂಬಕ್ಕೆ ಗ್ಯಾಲಕ್ಸಿ ಎನ್ನುತ್ತಾರೆ. ತಾರೆಗುಂಪು ಎಂದು ನಾವು ಕರೆಯಬಹುದು. ತಾರೆಗುಂಪು ಸುರುಳಿಯ, ದುಂಡನೆಯ ಇಲ್ಲವೇ ಬೇರೆ ಬಗೆಯ ಆಕಾರವನ್ನು ಹೊಂದಿರಬಹುದು. ಸೂರ್ಯನನ್ನು ಒಳಗೊಂಡ ತಾರೆಗುಂಪು ಸುರುಳಿಯಾಕಾರದಲ್ಲಿದ್ದು, ಬಿಳುಪಾಗಿ ಹೊಳೆಯುವಂತೆ ಕಾಣುವುದರಿಂದ ಇದನ್ನು ಹಾಲೊªರೆ ಇಲ್ಲವೇ ಹಾಲುಹಾದಿ ತಾರೆಗುಂಪು (milkyway galaxy) ಅನ್ನುತ್ತಾರೆ. ತನ್ನ ಒಡಲಲ್ಲಿ ಎರಡು ಲಕ್ಷ ಕೋಟಿಗಳಷ್ಟು ತಾರೆಗಳನ್ನು ತುಂಬಿಕೊಂಡಿರುವ ಈ ಗುಂಪಿನ ಒಂದು ತುದಿಯಿಂದ ಇನ್ನೊಂದು ತುದಿಗೆ ಸಾಗಲು, ಬೆಳಕಿಗೆ ಒಂದು ಲಕ್ಷ ವರುಷಗಳೇ ಬೇಕು! ಇಲ್ಲಿಯವರೆಗೆ ಕಂಡುಬಂದಿರುವ ಇಂತಹ ತಾರೆಗುಂಪುಗಳ ಎಣಿಕೆ ಎಷ್ಟು ಗೊತ್ತೇ? ಇಪ್ಪತ್ತು ಲಕ್ಷ ಕೋಟಿ! ಅಬ್ಟಾ ಏನಿದು ಬಾನಂಗಳದ ಎಲ್ಲೆ ಮೀರಿದ ಹರಡುವಿಕೆ! ಲಕ್ಷ, ಕೋಟಿಗಳ ಲೆಕ್ಕಾಚಾರವನ್ನು ಬದಿಗೆ ಸರಿಸಿ ಒಂದಿಷ್ಟು ಬೇರೆ ಬಗೆಯ ಬಾನೊಡಮೆಗಳತ್ತ ಈಗ ಕಣ್ಣು ಹಾಯಿಸೋಣ. ತಾರೆಗಳೂ ಸಾಯುತ್ತವೆ. ಇನ್ನು 500 ಕೋಟಿ ವರುಷಗಳಲ್ಲಿ ನಮ್ಮ ಸೂರ್ಯನ ಉರುವಲಾದ ಹೈಡ್ರೊಜನ್ನೆ ಬರಿದಾಗಿ, ಅವನೂ ಸಾಯುತ್ತಾನೆ. ಸತ್ತ ತಾರೆಗಳ ಮುಂದಿನ ಹಂತವನ್ನು ಅವುಗಳ ರಾಶಿಯು ತೀರ್ಮಾನಿಸುತ್ತದೆ. ಸೂರ್ಯನಂತಿರುವ ತಾರೆಗಳು ಹಿಗ್ಗಿ, ಕೆಂಪುದೈತ್ಯನಾಗಿ (red giant), ತನ್ನ ಹೊರಮೈಯನ್ನು ಕಳೆದುಕೊಂಡು, ಕಿರುತಾರೆಗಳಾಗುತ್ತವೆ (dwarfs). ಸೂರ್ಯನಿಂದ 1.4 ಪಟ್ಟು ದೊಡ್ಡಗಿರುವ ಇಲ್ಲವೇ ಇದಕ್ಕೂ ಮೀರಿದ ತಾರೆಗಳು, ಒಂದು ಮಹಾಸಿಡಿತದಲ್ಲಿ ಅಸುನೀಗುತ್ತವೆ. ಈ ಸಿಡಿತಕ್ಕೆ ತಾರೆಸಿಡಿತ (supernova) ಎನ್ನುತ್ತಾರೆ. ಅಳಿದುಳಿದ ರಾಶಿಯು ಒತ್ತೂಟ್ಟಾಗಿ ಸೇರಿ, ತಿರುಗುವ ನ್ಯೂಟ್ರಾನ್ ತಾರೆಗಳಾಗುತ್ತವೆ. ಇವುಗಳಿಂದ ಎಕ್ಸ್ ರೇ ಕಿರಣಗಳು ಹೊರಹೊಮ್ಮುತ್ತವೆ. ಆದ್ದರಿಂದ ಇವುಗಳಿಗೆ ಮಿಡಿತಾರೆಗಳೆಂದೂ(pulsars) ಕರೆಯಬಹುದು. ಇಲ್ಲಿಯವರೆಗೆ 2000ಕ್ಕೂ ಹೆಚ್ಚಿನ ನ್ಯೂಟ್ರಾನ್ ತಾರೆಗಳನ್ನು ಕಂಡುಹಿಡಿಯಲಾಗಿದೆ. ಇನ್ನು, ಸೂರ್ಯನಿಗಿಂತ ಹತ್ತು ಪಟ್ಟು ದೊಡ್ಡಗಿರುವ ತಾರೆಗಳು ಸಿಡಿದ ಬಳಿಕ ಎಷ್ಟು ಒತ್ತಟ್ಟಾಗಿ ಸೇರಿಕೊಳ್ಳುತ್ತವೆಯೆಂದರೆ, ಅವುಗಳಿಂದ ಬೆಳಕೇ ಹೊರಬರದು! ಅವೇ ಕಪ್ಪುಕುಳಿಗಳು (black holes). ಇವೆಲ್ಲದಕ್ಕಿಂತಲೂ ತಾರೆಸಿಡಿತದ ಮಹತ್ವವೊಂದಿದೆ. ಈ ಸಿಡಿತದಿಂದ ಹೊರಚೆಲ್ಲಲ್ಪಡುವ ಆವಿಯೇ ಮುಂದಿನ ಹೊಸ ತಾರೆಗಳ ಹುಟ್ಟಿಗೆ ಉರುವಲು. ನಮ್ಮ ಸೂರ್ಯನ ಹುಟ್ಟಿಗೂ ಇದೇ ಕಾರಣ. ಇವಿಷ್ಟು ವಿಶ್ವದಲ್ಲಿ ಕಂಡುಬರುವ ಒಟ್ಟೂ ವಸ್ತುಗಳ ಕಿರುಚಿತ್ರಣ. ಇರಿ…ಒಟ್ಟೂ ವಸ್ತುಗಳಲ್ಲಿ ತಿಳಿವಿಗೆ ನೇರವಾಗಿ ರಾಚುವ ಚಿತ್ರಣವಷ್ಟೇ. ವಿಶ್ವದ ಒಟ್ಟೂ ಶಕ್ತಿಯಲ್ಲಿ ಇದರ ಪಾಲು ಬರೇ 5% ಅಷ್ಟೇ! ಉಳಿದವುಗಳಲ್ಲಿ 27% ಪಾಲು ಕಪ್ಪುವಸ್ತುಗಳದ್ದು(dark matter) ಮತ್ತು ಉಳಿದ 68% ಪಾಲು ಕಪ್ಪುಶಕ್ತಿಯದು (dark energy). ಕಪ್ಪುವಸ್ತುಗಳ ಇರುವು ಅವುಗಳ ಗುರುತ್ವಬಲದಿಂದ ಗೊತ್ತಾಗಿದೆ. ಕಪ್ಪುಶಕ್ತಿಯು ಈ ವಿಶ್ವದ ಹಿಗ್ಗುವಿಕೆಯನ್ನು ಮತ್ತಷ್ಟು ಹೆಚ್ಚಿಸುತ್ತಲೇ ಇವೆ. ಇಲ್ಲಿ ಕಪ್ಪುಶಕ್ತಿ ಎಂದರೆ ಯಾವುದೋ ಮಾಂತ್ರಿಕನ ಮಂತ್ರಗಾರಿಕೆಯ ಶಕ್ತಿಯಲ್ಲ, ಈ ಶಕ್ತಿ ನಿಜವಾಗಿ ಏನೆಂದು ಸರಿಯಾಗಿ ತಿಳಿದುಕೊಳ್ಳಲು ವಿಜ್ಞಾನಕ್ಕೂ ಸವಾಲಾಗಿರುವುದರಿಂದ ಹೀಗೆ ಹೆಸರು ಬಂದಿದೆಯಷ್ಟೇ. ಬೆರಗು ಇಷ್ಟೆಕ್ಕೆ ನಿಲ್ಲಲಿಲ್ಲ, ನಿಮಗೆ ಗೊತ್ತೆ ವಿಶ್ವವು ಹಿಗ್ಗುತ್ತಿದೆ! ತನ್ನ ಹಿಗ್ಗಿನ ವೇಗವನ್ನು ಹೆಚ್ಚಿಸಿಕೊಳ್ಳುತ್ತ! 1930ರ ದಶಕದಲ್ಲಿ ಎಡ್ವಿನ್ ಹಬಲ… ಎನ್ನುವವರು, ನಮ್ಮಿಂದ ಎಲ್ಲಾ ತಾರೆಗುಂಪುಗಳು ದೂರ ಸರೆಯುತ್ತಿವೆ, ಅಂದರೆ, ನಮ್ಮ ವಿಶ್ವವು ಹಿಗ್ಗುತಿದೆ ಎಂದು ಕಂಡುಹಿಡಿದ. ಆ ಬಾನೊಡಮೆಗಳು ನಮ್ಮಿಂದ ದೂರ ಇದ್ದಷ್ಟು ಅವುಗಳ ವೇಗ ಹೆಚ್ಚು. ಅಲ್ಲದೆ, ಕೆಲವು ದಶಕಗಳ ಹಿಂದೆ, ಈ ಹಿಗ್ಗು ತನ್ನ ವೇಗವನ್ನು ಹೆಚ್ಚಿಸಿಕೊಳ್ಳು ತ್ತಿದೆ ಎಂದೂ ಕಂಡುಹಿಡಿಯಲಾಯಿತು. ಇದು ಈ ವಿಶ್ವ ಹೇಗೆ ಹುಟ್ಟಿರಬ ಹುದೆಂದು ಊಹಿಸುವ ಬಿಗ್‌ಬ್ಯಾಂಗ್ ಸಿದ್ಧಾಂತದ ಅಡಿಪಾಯವಾಯಿತು. ಬಯಲು ಬಯಲನೆ ಬಿತ್ತಿ, ಬಯಲು ಬಯಲ ಬೆಳೆದು, ಬಯಲು ಬಯಲಾಗಿ ಬಯಲಾಯಿತ್ತಯ್ಯ. ಅನ್ನುವ ಅಲ್ಲಮ ಪ್ರಭುವಿನ ಸಾಲುಗಳು ಬಾನಂಗಳದ ಹರಡುವಿಕೆಯನ್ನು ಚೆನ್ನಾಗಿ ತೋರ್ಪಡಿಸುತ್ತದೆ ಅಲ್ಲವೇ?!
(ಬೆಂಗಳೂರಿನ ಮುನ್ನೋಟ ಪುಸ್ತಕ ಮಳಿಗೆ ಪ್ರತಿ ತಿಂಗಳು ತಿಳಿಗನ್ನಡದಲ್ಲಿ ವಿಜ್ಞಾನ ವಿಷಯಗಳ ಮಾತುಕತೆ ಏರ್ಪಡಿಸುತ್ತಿದೆ. ಈ ತಿಂಗಳ ಮಾತುಕತೆಯಿಂದ ಆಯ್ದ ಬರಹವಿದು.)
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಬೈಕ್ ನಲ್ಲಿ ಚಲಿಸುತ್ತಿದ್ದ ವೇಳೆ ತುಂಡಾಗಿ ಬಿದ್ದ ಕೊಂಬೆ;ಸವಾರರಿಗೆ ಗಂಭೀರ ಗಾಯ, ಮೂಳೆ ಮುರಿತ
ಐದನೇ ಬಾರಿ ಜತೆಯಾದ ಧನುಷ್ – ವೆಟ್ರಿಮಾರನ್; ತೆರೆಮೇಲೆ ʼಕೆಜಿಎಫ್ʼ ರಿಯಲ್ ಕಹಾನಿ?
Belagavi: ಇಬ್ಬರು ಅಪ್ರಾಪ್ತೆಯರ ಮೇಲೆ ಸಾಮೂಹಿಕ ಅತ್ಯಾಚಾ*ರ
ಶಿವಮೊಗ್ಗದಲ್ಲಿ ಹೆಚ್ಚಾಯ್ತು ಪುಂಡರ ಹಾವಳಿ… ಕಚೋರಿ ವ್ಯಾಪಾರಿಗೆ ಚಾಕು ಇರಿದು ಪರಾರಿ
Manipal: ಮಣ್ಣಪಳ್ಳ ಕೆರೆಯಲ್ಲಿ ನಡೆದಿತ್ತು ಕಂಬಳ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.