ನಾಡಿಗೆ “ದಾಂಪತ್ಯ ಗೀತ’ ಕೊಟ್ಟ ನಾಡಿಗರು
Team Udayavani, Aug 8, 2018, 12:30 AM IST
ಬೇಂದ್ರೆಯವರ “ಸಖಿಗೀತ’ದ ಬಳಿಕ ಅದರ ಜೊತೆಗೆ ಹೋಲಿಸಬಲ್ಲ ಅಥವಾ ಅದಕ್ಕೆ ಹೊಸ ಆಯಾಮವನ್ನು ಕೊಡಬಲ್ಲ ಅಥವಾ ಅದಕ್ಕಿಂತ ಭಿನ್ನವಾಗಿ ನಿಲ್ಲಬಲ್ಲ ಕಾವ್ಯವನ್ನು ರಚಿಸುವುದು ಬಲು ಕಷ್ಟದ ಕೆಲಸ. ಸುಮತೀಂದ್ರ ನಾಡಿಗರ “ದಾಂಪತ್ಯ ಗೀತ’ವು ಈ ಮೂರು ನೆಲೆಗಳಲ್ಲಿ “ಸಖಿಗೀತ’ದೊಂದಿಗೆ ದಾಂಪತ್ಯ ಹೊಂದಿದ ಕಾವ್ಯ ಆತ್ಮಕಥನದ ಮಾದರಿಯಲ್ಲಿ ಹೆಣ್ಣು-ಗಂಡಿನ ಸಂಬಂಧದ ಚರ್ಚೆ ನಡೆಸುತ್ತಾ ದಾಂಪತ್ಯಗೀತದ ಬಹುವರ್ಣ ಗಳನ್ನು ಬಹುರೂಪಗಳನ್ನು ಕಟ್ಟಿಕೊಡುವ ದಾಂಪತ್ಯದಷ್ಟೇ ಲವಲವಿಕೆಯ ಕಾವ್ಯವೊಂದನ್ನು ನಾಡಿಗರು ನಾಡಿಗೆ ಕೊಟ್ಟಿದ್ದಾರೆ. ನಾಡಿಗರ ಕಾವ್ಯದ ನಾಡಿ ಮಿಡಿತಗಳಾದ ಪ್ರೀತಿ, ಲವಲವಿಕೆ, ತುಂಟತನ, ಕೌತುಕ, ತತ್ವಜ್ಞಾನ, ಹುಡುಗಾಟಿಕೆ ಇವೆಲ್ಲ ಇಲ್ಲಿ ಒಂದರೊಡನೊಂದು ಬೇರೆನಿಸದಂತೆ ಬೆರೆತುಕೊಂಡಿವೆ. ಬದುಕಿನ ಕ್ಷಣಕ್ಷಣದ ತಕ್ಷಣದ ಅನುಭವಗಳ ಮೂಲಕವೇ ಜೀವನ ದರ್ಶನವನ್ನು ಅರಸುವ ಈ ಕವಿ ಎಲ್ಲೂ ಕಠಿಣ ಗಳಿಗೆಯಲ್ಲೂ ನಿಟ್ಟುಸಿರು ಬಿಡುವುದಿಲ್ಲ. ಪಾಲಿಗೆ ಬಂದ ಪಂಚಾಮೃತವನ್ನು ಇನ್ನಷ್ಟು ರುಚಿಕಟ್ಟಾಗಿಸಿ, ಅದನ್ನು ಅದರ ಇಡಿಯಲ್ಲಿ ಅನುಭವಿಸುವ ಮತ್ತು ಹಾಗೆ ಅನುಭವಿಸಿದ್ದನ್ನು ಅತ್ಯುತ್ಸಾಹದಿಂದ ಹಂಚಿಕೊಳ್ಳುವ ನಾಡಿಗರು “ತಮ್ಮ ದಾಂಪತ್ಯ ಗೀತ’ದಲ್ಲಿ ನಾಡಿನ ನಾಳಿನ ದಾಂಪತ್ಯಕ್ಕೆ ಹೊಸ ಭಾಷ್ಯಗಳನ್ನು ಬರೆದಿದ್ದಾರೆ.
ದಾಂಪತ್ಯ ಎನ್ನುವುದು ಒಂದು ಕಟ್ಟಾಗಲೀ ಅಥವಾ ಚೌಕಟ್ಟಾಗಲೀ ಅಲ್ಲ; ಅದೊಂದು ನಿರಂತರ ಪಯಣದ ಪ್ರಕ್ರಿಯೆ ಎನ್ನುವುದು ಬದುಕಿನ ನೂರಾರು ಉಬ್ಬುತಗ್ಗು ಸಂಗತಿಗಳಿಂದ ಹೆಕ್ಕಿ ತೆಗೆದು ಪೋಣಿಸಿ ಹುಮ್ಮಸ್ಸಿನಿಂದ ಉತ್ಸಾಹದಿಂದ ಕವಿ ಹಾಡುತ್ತಾರೆ
“ನಿನ್ನ ಉಡುಪಿನ ಶ್ರದ್ಧೆ ಇರುವ ಹಾಗೇ ನನ್ನ
ದಾಂಪತ್ಯ ಶ್ರದ್ಧೆಯೂ ಶುದ್ಧ ಅವಿಚಾರ’
ಎಂದು ಆರಂಭಿಸುವ ಕವಿ
“ನಿನಗೆ ರುಚಿಸುವ ಹಾಗೆ ನಾನು ಪರಿವರ್ತಿಸಿದ
ಅನುಭವದ ಲೋಕವಿದು ನನ್ನ ಕಾವ್ಯ
ನಿನ್ನ ಅಂಗಾಂಗಗಳ ಸ್ಪುಟತೆಯಾಚೆಗೆ ಇರುವ
ಲಾವಣ್ಯದಂತೆಯೇ ಸರ್ವಸಂಭಾವ್ಯ’
ಎನ್ನುವ ಮೂಲಕ ಕಾವ್ಯ ಮತ್ತು ಹೆಣ್ಣನ್ನು ಹೊಸಬಗೆಯಲ್ಲಿ ಸಮೀಕರಿಸಲು ಬಯಸುತ್ತಾರೆ. ತೋರಿಕೆಗೆ ಇದು ಸಾಂಪ್ರದಾಯಿಕ ಪ್ರತಿಮೆಯಂತೆ ಕಂಡರೂ, ನಾಡಿಗರ ಕಾವ್ಯದಲ್ಲಿ ಈ ರೂಪಕ ಹೊಸ ನುಡಿಗಟ್ಟುಗಳಿಂದ ಹೊಸ ಜಗತ್ತುಗಳನ್ನು ಸೃಷ್ಟಿ ಮಾಡುತ್ತದೆ.
ಕವಿ ತನ್ನ ಬಾಲ್ಯದ ಕಾವ್ಯಾಶ್ವವನ್ನೇರಿ ಹುಡುಗಾಟದ ವಯಸ್ಸಿನ ಆಟಗಳ ಸುತ್ತಲಿನ ಮುಕ್ತ ಬದುಕನ್ನು, ಕೀಟಲೆಯನ್ನು ಮತ್ತು ಅನು ಭವದ ಎಳೆಎಳೆಗಳನ್ನು ಸುಖೀಸುವ ತವಕವನ್ನು ವರ್ಣಿಸುತ್ತಾರೆ.
“ಎಷ್ಟೊಂದು ಹುಡುಗರಿಗೆ ಇಂಥ ಭಗ್ನ ಪ್ರೇಮ
ಆ ಹೊತ್ತಿನಿಂದಲೂ ಆಗುತ್ತಿದೆ,
ನಾಕುದಿನ ಖನ್ನತೆಯ ಬಳಿಕ ಇನ್ನೊಂದಕ್ಕೆ
ಹೇಗೊ ಏನೊ ಮನಸು ಕೂಡುತ್ತದೆ’
ಎನ್ನುವ ಮಾತುಗಳು ಪ್ರೇಮದ ಒಡೆಯುವಿಕೆಯಿಂದಲೇ ದಾಂಪತ್ಯದ ಕಡೆಗೆ ಮನಸ್ಸು ಚಲಿಸುವ ದಾರಿಗಳನ್ನು ಹುಡುಕುವ ಪ್ರಯತ್ನ ಮಾಡುತ್ತದೆ. ಪ್ರಥಮ ನೋಟದ ಪ್ರೇಮ ಮತ್ತು ಹುಚ್ಚು ಖೋಡಿಯ ಮೈಮರೆತ ಬದುಕಿನ ಚಿತ್ರಣಗಳು ಗಂಡು-ಹೆಣ್ಣಿನ ಸಂಬಂಧ ತಾಳುವ ಕಾಮನಬಿಲ್ಲಿನ ವರ್ಣಮಯ ಜಗತ್ತನ್ನು ಅನಾವರಣ ಮಾಡುತ್ತವೆ.
ಸಂಪ್ರದಾಯದಂತೆ ಆದ ಮದುವೆ ಕೂಡಾ ಒಂದು ಸಂಭ್ರಮವಾಗಿ ಸಖಿ-ಸಖರಾಗಿ ಬದುಕಲು ಅವಕಾಶ ಮಾಡಿಕೊಟ್ಟ ಕ್ಷಣಗಳನ್ನು ಕವಿ ನೆನಪಿಸಿಕೊಳ್ಳುತ್ತಾರೆ.
“ಇಬ್ಬರಿಗೂ ಹಿತ ಬಯಸಿ, ಸುಖ ಸಂತೋಷ ಸಹಭಾಗಿಗಳಾಗಿ,
ಆಸೆ, ಆಕಾಂಕ್ಷೆ ಚಿತ್ತಗಳ ಕೂಡಿಸುವ’
ಎಂದು ಮದುವೆ ಮಂಟಪದಲ್ಲಿ ಹೇಳುವಾಗಲೇ ಅಲ್ಲಿ ಕನಸಿನೊಳಗೊಂದು ಮನಸು ಇತ್ತು.
ಮದುವೆಯಾದ ಬಳಿಕವೂ “ದಾಂಪತ್ಯ’ ಎನ್ನುವುದು ಒಂದು ಕಲ್ಪನೆ ಮಾತ್ರ, ಸುಖದ ಅತಿಲೋಲುಪತೆ ಸಂತೃಪ್ತಿಯನ್ನು ಆತ್ಮತೃಪ್ತಿ ಯನ್ನು ಎಂದೂ ಕೊಡುವುದಿಲ್ಲ ಅದಕ್ಕಾಗಿಯೇ ಕವಿ ಹೇಳುತ್ತಾರೆ:
“ಒಂದೊಂದು ಇಂದ್ರಿಯಕೆ ಮಿಕ್ಕೆಲ್ಲ ಇಂದ್ರಿಯದ
ಕೆಲಸಗಳ ಹೇರಿದ್ದೆ ಐದರಷ್ಟು,
ದಾಹ ಹೆಚ್ಚಾಯೆ¤ಂದು ಎಷ್ಟೆ ನದಿ ಕುಡಿದರೂ
ನನ್ನ ಕಡಲಿನ ದಾಹ ಕುಗ್ಗಲಿಲ್ಲ;
ನಿನ್ನ ಕೊರೆಯುವ ನೋಟ ಹಿಮವಾಗಿಸಲು ನನ್ನ
ಹಿಮಪುರುಷ ನೀರ್ಗಲ್ಲು ನಿಂತೆ ನಾನು
ನಿನ್ನೊಲವು ಬಿಸಿಲಲ್ಲಿ ಕರಗಿ ನೀರಾಗಿದ್ದೆ,
ನಿನ್ನ ಸುತ್ತೀ ಬಳಸಿ ಹರಿದೆ ನಾನು’
ಹೀಗೆ ದಾಂಪತ್ಯದ ಆರಂಭದಲ್ಲಿ ಗಂಡುಹೆಣ್ಣಿನ ಸಂಬಂಧಗಳು ಬಹುತೇಕ ದೇಹ ಸಂಬಂಧದ ಸಾಧ್ಯತೆಗಳಲ್ಲಿ ಸಂತೃಪ್ತಿ ಪಡೆಯುತ್ತವೆ ಮತ್ತು ಇನ್ನಷ್ಟು ಆಸೆಗಳನ್ನು ಹುಟ್ಟಿಸುತ್ತವೆ.
“ನೀನೆ ಕಡಲಾಗಿದ್ದೆ, ನಿನ್ನ ವಿಸ್ತಾರಕ್ಕೆ
ಮೂಕವಿಸ್ಮಿತನಾಗಿ ನಿಂತೆ ಇದ್ದೆ’
ಎನ್ನುವ ಮಾತುಗಳನ್ನು ಗಮನಿಸಬಹುದು. ದಾಂಪತ್ಯದಲ್ಲಿ ದೇಹಗಳು ಸೇರಿದರೂ ಮನಸ್ಸುಗಳು ತರ್ಕಗಳು ಒಂದಾಗುವುದು ಅನೇಕ ಬಾರಿ ಸಾಧ್ಯವಾಗುವುದಿಲ್ಲ
“ನಿನ್ನ ತರ್ಕವೆ ಬೇರೆ, ನನ್ನ ತರ್ಕವೆ ಬೇರೆ
ನಮ್ಮೆರಡು ದೃಷ್ಟಿಗಳು ಕೂಡಲಿಲ್ಲ’
ಯೌವನದ ಉನ್ಮಾದ ಅನೇಕ ಸತ್ಯಗಳನ್ನು ಕಾಣದಂತೆ ಕುರುಡು ಮಾಡುತ್ತದೆ. ಹಾಗಾಗಿ ಕವಿ ಹೇಳುತ್ತಾರೆ:
“ಭಾಷೆಗೂ ಹಲವಾರು ಉಪಯೋಗ ಇದೆಯೆಂದು
ಯೌವನದ ರಭಸದಲಿ ಹೊಳೆಯಲಿಲ್ಲ,
ನನ್ನ ಮಾರ್ಗವೆ ನಿನ್ನ ಮಾರ್ಗವಾಗಲಿ ಎಂದು
ನನ್ನಹಂಕಾರವನೆ ಮೆರೆದೆನಲ್ಲ’
ಎನ್ನುವ ಮಾತುಗಳಲ್ಲಿ ಯೌವನದ ಆವೇಶದ ಉದ್ವೇಗದ ಉನ್ಮತ್ತತೆಯ ಅತಿರೇಕದ ಅಂಧತ್ವವನ್ನು ಮನಗಾಣುವ ವಿವೇಕವಿದೆ. ಯೌವನದ ಅಬ್ಬರ ಉಬ್ಬರ ಕಡಿಮೆಯಾಗುತ್ತಾ ಬಂದಂತೆ ದಾಂಪತ್ಯದ ಒಳಗಿನ ಬಿರುಕುಗಳು ರೋಷಗಳು ಜಗಳಗಳು ಸ್ಫೋಟಗೊಳ್ಳುತ್ತವೆ.
“ನೀರೆ ನೀನಾಗಿದ್ದೆ, ಮುನಿದಾಗ ಮುನ್ನೀರೆ
ಒಲಿದರಾಗುವ ನಾರಿ ಮಾರಿಯಾಗಿದ್ದೆ
ಹೆಡೆಯ ಬಿಚ್ಚಿದ ನಾಗ ಭುಸುಗುಡುತ್ತಿದ್ದವನು
ಹೆಡೆ ಮುದುರಿ ಹಿಂಜರಿದು ತೆಪ್ಪಗಾದೆ’
ಹಾಗೆ ಒಳಗೆಳೆದುಕೊಂಡ ಕಾರಣವೇ,
“ಸಖ್ಯ ಚಿಗುರಿತು ಮತ್ತೆ, ಮುಂಜಾನೆ ಮಧ್ಯಾಹ್ನ
ಸಂಜೆ ರಾತ್ರಿಗಳೆಲ್ಲ ಹಿತವಾದವು’
ಎನ್ನುವ ಮೂಲಕ ದಾಂಪತ್ಯದೊಳಗಿನ ಎಲ್ಲ ಜಗಳಗಳು ಕ್ರಮೇಣ ಸಖ್ಯದ ಕಡೆಗೆ ತಿರುಗುವ ಮತ್ತು ಕೊನೆಗೆ ಎಲ್ಲ ಸ್ನೇಹಿತರು ದೂರವಾದಾಗ ಸಖೀಯೊಬ್ಬಳೇ ಉಳಿಯುವ ವಾಸ್ತವವನ್ನು ಕಂಡುಕೊಳ್ಳಲಾಗಿದೆ. ಗೆಳೆಯರ ಸಂಬಂಧಗಳು ಆಶ್ರಯ ಕೊಟ್ಟ ಮರವನ್ನೇ ನಾಶ ಮಾಡುವ “ಮರಕುಟಿಗ ಕಾಗೆ ಅಳಿಲು ಕೋತಿಗಳಾದವು’ ಎನ್ನುವ ಸತ್ಯದರ್ಶನವಾದದ್ದು “ಸ್ನೇಹ’ದ ತೊಗಟೆ ಕಳಚಿ, “ದಾಂಪತ್ಯ’ದ ಮರ ಗಟ್ಟಿಯಾಗಲು ಸಾಧ್ಯವಾದದ್ದು ಒಂದು ಮುಖ್ಯ ತಿರುವು. ಬಳ್ಳಿಯೊಂದು ಕೊನೆಗೂ ಮರವಾಗಿ ಬೇರು ಬಿಡುತ್ತದೆ. ದಾಂಪತ್ಯದ ಚೌಕಟ್ಟಿನಲ್ಲಿ ಮಕ್ಕಳ ಆಗಮನವು ಉಂಟುಮಾಡುವ ಆಂದೋಲನ ಯಾವುದೇ ಕ್ರಾಂತಿಗೂ ಕಮ್ಮಿಯಿಲ್ಲ. ತನ್ನ ಮಕ್ಕಳ ಹುಟ್ಟು ಮತ್ತು ಕವನಗಳ ಹುಟ್ಟನ್ನು ಸಮೀಕರಿಸುತ್ತಲೇ ಕವಿ ಎದುರಿಸುವ ತಲ್ಲಣಗಳು-ಮಗುವಿನ ಕೊರಳ ಹತ್ತಿರ ಚೂರಿ ಒತ್ತುವುದು, ಆಗ ಕವಿಗಾಗುವ ದರ್ಶನ:
“ಅಂತರಂಗದ ಒಳಗೆ ಎಂಥ ನರಕವಿದೆಯೆಂದು ಹೇಸಿಹೋದೆ’
ಭಿನ್ನ ಭಿನ್ನ ಭೂಪ್ರದೇಶಗಳಲ್ಲಿ ಸಂಸಾರ ಹೂಡಿದ ಮತ್ತು ಹಲವೊಮ್ಮೆ ಏಕಾಂಗಿಯಾಗಿ ಬದುಕಿದ ಕವಿ ತನ್ನ ಅಂತರಂಗದ ದರ್ಶನವನ್ನು ಹೊಸ ರೀತಿಯಲ್ಲಿ ಕಾಣಲು ಬಯಸುತ್ತಾರೆ
“ಅಂದು ಸತ್ತವ ಗಾಂಧಿ ಇಂದಿಗೂ ಇದ್ದಾನೆ
ಆತ್ಮಶೋಧನೆಯಲ್ಲಿ ತೊಡಗಿಸುತ್ತ
ತನ್ನ ದಾಂಪತ್ಯವನ್ನು ಬಿಟ್ಟು ದೇಶಕ್ಕಾಗಿ
ಕಸ್ತೂರಿಬಾಳದ್ದು ತೇದು ಇಟ್ಟ’
ನಾಸ್ತಿಕತೆ ಮತ್ತು ಆತ್ಮದರ್ಶನ, ಅಮೇರಿಕಾದಲ್ಲಿ ದಾಂಪತ್ಯದ ಕುರಿತ ಚಿಂತನ ಇವು ಪರಸ್ಪರ ಸಂಬಂಧಿಯಾದವು.
“ಹಿಮದ ಸಕ್ಕರೆ ಸುರಿದ ಹಗಲು ಬೆಳದಿಂಗಳಿನ
ಮಾಯಕದ ಮಂಕು ಕವಿದು’
ಎನ್ನುವ ಕವಿ
“ಮಕ್ಕಳಿದ್ದವು ಎರಡು, ಆದರೂ ನಾ ನಿನ್ನ
ಸಂಬಂಧಿ ಸಖನೆಂದು ಅನಿಸಲಿಲ್ಲ
ಅಗಲಿಕೆಯ ನೋವಿಲ್ಲ, ವಿರಹದುರಿ ಇರಲಿಲ್ಲ
ನನ್ನದೆನ್ನುವ ಮಮತೆ ಕಾಡಲಿಲ್ಲ’
ಎಂದು ತಮ್ಮ ದಾಂಪತ್ಯ ಬದುಕಿನ ಬರಡುತನವನ್ನು ಬಯಲು ಮಾಡುತ್ತಾರೆ. ಅಮೇರಿಕಾದಲ್ಲಿ ಹೆಣ್ಣುಗಳು ಅರಸಿಕೊಂಡು ಬಂದಾಗ ಮಾಂಸದ ದಾಹ ಮತ್ತು ಹಣದ ದಾಹಗಳನ್ನು ತೀರಿಸಿಕೊಳ್ಳಲು ಆ ದೇಶ ನೀಡಿದ ಆಹ್ವಾನ-ಇವುಗಳ ನಡುವೆ ಕರಗಿಹೋಗುವುದರಲ್ಲಿದ್ದ ಕವಿ ಆ ಮಾಯಾಲೋಕವನ್ನು ತಿರಸ್ಕರಿಸಿ ಬಂದ ವಿದ್ಯಮಾನವೇ “ದಾಂಪತ್ಯ’ಕ್ಕೆ ಹೊಸ ಆಕೃತಿಯೊಂದನ್ನು ಕೊಡುತ್ತದೆ.
“ಸಖ್ಯ ಕಳೆದೀತೆಂದು ಭೀತಿ ಶುರುವಾಗಿತ್ತು
ನನ್ನ ಕರ್ಮದ ಹಾಲು ಕುದಿಗೆ ಬಂತು
ಹಾಲು ಕೆನೆಗಟ್ಟಿತ್ತು, ಬೆಂಕಿಯೂ ಆರಿತ್ತು
ಹಾಲು ಉಕ್ಕದೆ ಗಟ್ಟಿ ಕೆನೆಯಾಯಿತು’
ಎಂತಹ ಭೋಗ ಸುಖವನ್ನಾದರೂ ಒದ್ದು ಹೊರಬರುವ ಹುಂಬ ಧೈರ್ಯದ ಕವಿ ಓದನ್ನು ಅರ್ಧಕ್ಕೆ ನಿಲ್ಲಿಸಿ “ಓದೆ? ಕತ್ತೆಬಾಲ, ಬರುವೆ’ ಎಂದು ಧಿಕ್ಕರಿಸುವ ದಾರ್ಶನಿಕರಾಗುತ್ತಾರೆ.
“ದಾಂಪತ್ಯಗೀತ’ವೆಂದರೆ ಒಬ್ಬ ಗಂಡಸಿನ ಆತ್ಮಕಥನ ಎನ್ನುವ ಗೃಹೀತಕ್ಕೆ ಆ ಕಾವ್ಯದ ಒಳಗಡೆಯೇ ಪ್ರಶ್ನೆಗಳ ಸುರಿಮಳೆ ಇದೆ. ಈ ಸರಸದ ಜಗಳ ಕೊನೆಗೂ ಕೊನೆ ಮುಟ್ಟುವುದು ನಿಸರ್ಗದ ನಡುವಿನ ಕಾರಡ್ಕದಲ್ಲಿ. ತೋಟದ ಮಧ್ಯ ಜಲಪಾತ ನೆನೆಸಿಕೊಂಡಾಗ ನಿಸರ್ಗದ ವಿಶಿಷ್ಟ ಸೊಬಗುಗಳು ದಾಂಪತ್ಯದ ಸುಖಕ್ಕೆ ಆವರಣವನ್ನು ನಿರ್ಮಿಸುತ್ತವೆ.
“ಪಾಲೆ ಹೂಬಿಟ್ಟಾಗ ಅದರ ಕಂಪಿಗೆ ಸೋತು
ಹಾವು ಮರವೇರುವುದ ನೋಡಬೇಕು,
ಇಡಿ ರಾತ್ರಿ ಜಲಪಾತ ಸದ್ದನ್ನು ಕೇಳುತ್ತ
ಹಗಲೆಲ್ಲ ನೋಡುತ್ತ ಕೂಡಬೇಕು’
ಎನ್ನುವಾಗ ಕವಿ ದಾಂಪತ್ಯವನ್ನು ಗಂಡು-ಹೆಣ್ಣುಗಳ ದೇಹಗಳಾಚೆ ನಿಸರ್ಗದ ನಡುವೆ ರೂಪಿಸಿಕೊಳ್ಳುತ್ತಾರೆ.
ದಾಂಪತ್ಯಗೀತದ ಕೊನೆಯ ಭಾಗಗಳು ಇಡೀ ಕಾವéವನ್ನು ದಾರ್ಶನಿಕವನ್ನಾಗಿಸುತ್ತವೆ. ಬದುಕಿನ ಎಲ್ಲ ಅನುಭವಗಳ ದಾಂಪತ್ಯದ ಇಡೀ ಪರಿಕಲ್ಪನೆಯನ್ನು ಹೊಸದಾಗಿ ಹೇಗೆ ಮತ್ತೆ ನಿರ್ವಚನ ಮಾಡುತ್ತವೆ ಎನ್ನುವುದನ್ನು ವಿವರಿಸುತ್ತವೆ. “ಪ್ರೀತಿ’ ಎನ್ನುವುದು ಬಯಸುವಂಥದ್ದೇ ಅಥವಾ ಕೊಡುವಂಥದ್ದೇ? “ದಾಂಪತ್ಯ’ ಎನ್ನುವುದು ಭೋಗವೇ ಅಥವಾ ತ್ಯಾಗವೇ? ಹೀಗೆ ಪ್ರಶ್ನಿಸುತ್ತಾ ಹೋದಾಗ ದಾಂಪತ್ಯದ ಅನಂತ ಸಾಧ್ಯತೆಗಳು ಗೋಚರವಾಗುತ್ತವೆ.
“ಬಹಳ ಜನರಿಗೆ ಪರರ ಪ್ರೀತಿಬೇಕೇ ಹೊರತು
ತಾವು ಕೊಡಬೇಕೆನ್ನುವುದು ತಿಳಿವುದೆಂದು?’
ಸುಮತೀಂದ್ರ ನಾಡಿಗರ “ದಾಂಪತ್ಯ ಗೀತ’ ಹುಟ್ಟಿನಿಂದ ತೊಡಗಿ ಬದುಕಿನ ಎಲ್ಲ ಕ್ಷಣಗಳನ್ನು, ಅದರ ಸಿಹಿಕಹಿಗಳಲ್ಲಿ ಅನುಭವಿಸಿ ಪ್ರತಿಯೊಂದು ಸನ್ನಿವೇಶದಲ್ಲೂ ಎರಡು ಒಂದಾಗುವ, ಬೆರೆಯುವ, ಬೆಸೆಯುವ ಮತ್ತು ಆ ಮೂಲಕ ಹೊಸ ಬದುಕಿನ ಸಾಧ್ಯತೆಯೊಂದನ್ನು ಕೊಡುವ ಕನಸುಗಳನ್ನು ಬಿಚ್ಚಿಡುತ್ತದೆ. ಇಲ್ಲಿ ಯಾವುದೇ ಅನುಭವದ ಬಗ್ಗೆ ..
“ಹಣ್ಣು ಕಳಚಿದರೇನು ಹಣ್ಣಿನೊಳಗಡೆ ಬೀಜ
ಬೀಜದೊಳಗಡೆ ಹಣ್ಣು ಎಷ್ಟೊಂದಿವೆ!’
ಎನ್ನುವ ಕವಿ ನಾಡಿಗರ ಮಾತು ಅವರ ದಾಂಪತ್ಯಗೀತಕ್ಕೆ ಬಹಳ ಅರ್ಥಪೂರ್ಣವಾಗಿ ಅನ್ವಯವಾಗುತ್ತದೆ. ಹಾಗಾಗಿಯೇ ನಾಡಿಗರ ದಾಂಪತ್ಯ ಗೀತ ನಾಡಿಗೇ ದಾಂಪತ್ಯಗೀತ!
ಬಿ ಎ ವಿವೇಕ್ ರೈ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mandya :ಗಂಡ ಗದ್ಯ, ಹೆಂಡತಿ ಪದ್ಯ, ಮಕ್ಕಳು ರಗಳೆ!: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್
Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!
Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್
World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ
Meditation; ಮಾನಸಿಕ ಆರೋಗ್ಯಕ್ಕೆ ದಿವ್ಯೌಷಧ: ಡಿ.21ರಂದೇ ಏಕೆ ಧ್ಯಾನ ದಿನ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ಅವಹೇಳನಕಾರಿ ಪದಬಳಕೆ: ಪ್ರಸಾದ್ ರಾಜ್ ಕಾಂಚನ್ ಖಂಡನೆ
Puttur: ತೆಂಕಿಲದಲ್ಲಿ ರಿಕ್ಷಾ ಅಪಘಾತ: ಚಾಲಕ ಸಾವು
Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್ ಬಾಂಡ್’ ಚಿತ್ರ
N Kannaiah Naidu ಅವರಿಗೆ ಗೌರವಧನ ನೀಡಲು ಮರೆತ ತುಂಗಭದ್ರಾ ಬೋರ್ಡ್, ಜಲಸಂಪನ್ಮೂಲ ಇಲಾಖೆ
Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.