ಕನ್ನಡದ ಹಿರಿಮೆ ಸಾರುವ ಹಲ್ಮಿಡಿಗೆ ಬೇಕಿದೆ ಕಾಯಕಲ್ಪ
Team Udayavani, Nov 3, 2018, 12:30 AM IST
ಕನ್ನಡ ನಾಡು, ನುಡಿಯ ಗತ ವೈಭವವನ್ನು ಸಾಕ್ಷೀಕರಿಸಲು ಕೇಂದ್ರ ಸರ್ಕಾರವು ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಘೋಷಣೆ ಮಾಡಬೇಕೆಂದು ಹೋರಾಟ ನಡೆದಿತ್ತು. ಶಾಸ್ತ್ರೀಯ ಸ್ಥಾನಮಾನ ಸಿಕ್ಕಿದೆ. ಇಂತಹ ಸ್ಥಾನಮಾನ ಪಡೆಯಲು ನಡೆದ ಹೋರಾಟದ ಸಂದರ್ಭದಲ್ಲಿ ಕನ್ನಡ ಭಾಷೆಯ ಹಿರಿಮೆ, ಪ್ರಾಚೀನತೆಯ ದಾಖಲೆಗಳ ಸಂಗ್ರಹವೂ ನಡೆದಿತ್ತು. ಅಂತಹ ದಾಖಲೆಗಳಲ್ಲಿ ಕನ್ನಡದ ಪ್ರಾಚೀನತೆಯನ್ನು ಸಾಬೀತುಪಡಿಸುವ ಹಲ್ಮಿಡಿ ಶಿಲಾಶಾಸನವೂ ಒಂದು.
ಕನ್ನಡವು ಪ್ರಾಚೀನ ಭಾಷೆ ಎಂಬುದಕ್ಕೆ ಹಲ್ಮಿಡಿ ಶಿಲಾಶಾಸನ ಕನ್ನಡಲ್ಲಿಲ್ಲದಿದ್ದರೂ ಶಾಸನದಲ್ಲಿರುವ ವಿಷಯ ಹಾಗೂ ಕೆಲವು ಪದಗಳು ಕನ್ನಡವು ಪ್ರಾಚೀನ ಕಾಲದಲ್ಲಿಯೇ ಬಳಕೆಯಲ್ಲಿತ್ತು ಎಂಬುದನ್ನು ದೃಢಪಡಿಸುತ್ತವೆ. ಹಲ್ಮಿಡಿ ಶಿಲಾ ಶಾಸನವು ಕ್ರಿ.ಶ.450ರಲ್ಲಿ ರೂಪುಗೊಂಡಿದೆ ಎಂದು ಶಾಸನದಲ್ಲಿನ ಉಲ್ಲೇಖಗಳು ಹಾಗೂ ಕೆಲ ಪೂರಕ ದಾಖಲೆಗಳನ್ನು ಆಧರಿಸಿ ನಿರ್ಧರಿಸಲಾಗಿದೆ.
ಹಲ್ಮಿಡಿ ಶಾಸನ ದೊರೆತದ್ದು ಹಾಸನ ಜಿಲ್ಲೆ, ಬೇಲೂರು ತಾಲೂಕಿನ ಹಲ್ಮಿಡಿ ಗ್ರಾಮದಲ್ಲಿ. ಈ ಗ್ರಾಮ ಬೇಲೂರಿನಿಂದ 13 ಕಿ.ಮೀ.ದೂರದಲ್ಲಿದೆ. ಈ ಶಾಸನ ಪತ್ತೆಯಾಗಿದ್ದು 1930ರಲ್ಲಿ. ಸಂಶೋಧಕ ಮೈಸೂರಿನ ಎಂ.ಎಚ್.ಕೃಷ್ಣ ಅವರು 1930ರಲ್ಲಿ ಹಲ್ಮಿಡಿ ಗ್ರಾಮಕ್ಕೆ ಬಂದು ಈ ಶಿಲಾಶಾಸನವನ್ನು ಅಧ್ಯಯನ ಮಾಡಿದ ನಂತರ ಇದು ಕನ್ನಡದ ಮೊಟ್ಟ ಮೊದಲ ಶಿಲಾ ಶಾಸನ ಎಂದು ಅಧಿಕೃತವಾಗಿ ಘೋಷಣೆಯಾಗಿದೆ. ಹಲ್ಮಿಡಿ ಶಾಸನ ಕ್ಕಿಂತಲೂ ಪುರಾತನ ಶಾಸನಗಳಿವೆ ಎಂಬ ವಾದ ವಿವಾದಗಳಿದ್ದರೂ ಈಗಲೂ ಅಧಿಕೃತವಾಗಿ ಹಲ್ಮಿಡಿ ಶಾಸನವೇ ಕನ್ನಡದ ಪ್ರಪ್ರಥಮ ಶಿಲಾ ಶಾಸನ. ಮುಂದಿನ ನೂರಾರು ವರ್ಷಗಳಿಗೂ ಇದೇ ದಾಖಲೆ ಎನ್ನುವುದು ನಿರ್ವಿವಾದ.
ಶಿಲಾ ಶಾಸನ ಪತ್ತೆಯಾದ ಬಗೆ ಹೇಗೆ: ಹಲ್ಮಿಡಿ ಗ್ರಾಮದ ಹಿರಿಯರು ಹೇಳುವಂತೆ ಕೋಟೆಯಂತೆಯೇ ಇದ್ದ ಗ್ರಾಮದ ಊರ ಬಾಗಿಲಿನಲ್ಲಿ ಹಲವು ಕಲ್ಲುಗಳಿದ್ದವು. ಅವುಗಳನ್ನು ದನಗಳು ಮೈ ಉಜುcವ ಕಲ್ಲುಗಳು ಎಂದೇ ಕರೆಯಲಾಗುತ್ತಿತು. 1930ರಲ್ಲಿ ಊರ ಬಾಗಿಲು ಬಿದ್ದು ಹೋದ ಸಂದರ್ಭದಲ್ಲಿ ಒಂದು ಕಲ್ಲಿನ ಮೇಲೆ ಇದ್ದ ಲಿಪಿಯನ್ನು ಗಮನಿಸಿ ಅದು ದೇವರ ಕಲ್ಲಿರಬಹುದೆಂದು ಭಾವಿಸಿ ಅದನ್ನು ಗ್ರಾಮದ ವೀರಭದ್ರೇಶ್ವರ ದೇವಾಲಯದ ಆವರಣಕ್ಕೆ ಕೊಂಡೊಯ್ದು ನಿಲ್ಲಿಸಿದರು. 1929ರಲ್ಲಿ ಮೈಸೂರು ಪುರಾತತ್ವ ಇಲಾಖೆಯ ನಿರ್ದೇಶಕರಾಗಿ ಬಂದ ಎಂ.ಎಚ್.ಕೃಷ್ಣ ಅವರು ಗ್ರಾಮೀಣ ಕ್ಷೇತ್ರ ಮಾಡುತ್ತಾ ಬಂದಾಗ ಹಲ್ಮಿಡಿ ಗ್ರಾಮಕ್ಕೂ ಬರುತ್ತಾರೆ. ಗ್ರಾಮದ ವೀರಭದ್ರೇಶ್ವರ ದೇಗುಲದ ಆವರಣದಲ್ಲಿ ನಿಲ್ಲಿಸಿದ್ದ ಕಲ್ಲಿನ ಮೇಲಿನ ಬರಹವನ್ನು ಓದುತ್ತಾ ನಿಬ್ಬೆರಗಾಗುತ್ತಾರೆ. ಬಾಹ್ಮಿ ಲಿಪಿಯಲ್ಲಿದ್ದ ಶಾಸನದ ಸಾರ ಕದಂಬ ದೊರೆ ಕಾಕುಸ್ಥ ವರ್ಮ ತಾನು ಸಾಮ್ರಾಜ್ಯ ವಿಸ್ತರಿಸಿದಾಗ ಬರೆಸಿದ ಶಾಸನವೆಂದು, ಕನ್ನಡದ ಪ್ರಾಚೀನತೆಯನ್ನು ಸಾರುವ ಪ್ರಥಮ ಶಾಸನವೆಂದು ದೃಢಪಡಿಸಿದರು. ಆನಂತರ 1936ರ ವೇಳೆಗೆ ಅಧಿಕೃತವಾಗಿ ಹಲ್ಮಿಡಿ ಕನ್ನಡದ ಮೊಟ್ಟ ಮೊದಲ ಶಿಲಾಶಾಸನ ಎಂದು ಘೋಷಣೆಯಾಯಿತು.
ಹಲ್ಮಿಡಿಯ ಮೂಲ ಶಾಸನ ಈಗ ಬೆಂಗಳೂರಿನಲ್ಲಿರುವ ಕರ್ನಾಟಕ ಪುರಾತತ್ವ ಇಲಾಖೆಯ ವಸ್ತು ಸಂಗ್ರಹಾಲಯದಲ್ಲಿದೆ. ಅದರ ಪ್ರತಿಕೃತಿ (ತದ್ರೂಪ)ಯನ್ನು ಹಲ್ಮಿಡಿ ಗ್ರಾಮದಲ್ಲಿರಿಸಿ ಅದಕ್ಕೆ ಮಂಟಪ ನಿರ್ಮಿಸಲಾಗಿದೆ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಕರ್ನಾಟಕ ರಕ್ಷಣಾ ವೇದಿಕೆ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳು ಸಾರ್ವಜನಿಕರಿಂದ ದೇಣಿಗೆ ಸಂಗ್ರಹಿಸಿ 2002ರಲ್ಲಿ ಹಲ್ಮಿಡಿ ಶಾಸನದ ಪ್ರತಿಕೃತಿ ಮತ್ತು ಮಂಟಪ ನಿರ್ಮಿಸಿವೆ. ಶಿಲಾ ಶಾಸನದ ಕನ್ನಡ ಅನುವಾದದ ಶಿಲಾಫಲಕವೂ ಅಲ್ಲಿದೆ. ಹಾಸನ- ಬೇಲೂರು- ಚಿಕ್ಕಮಗಳೂರು ಹೆದ್ದಾರಿಯ ತುಸು ದೂರದಲ್ಲಿ ಸ್ವಾಗತ ಕಮಾನು ನಿರ್ಮಾಣವಾಗಿದೆ.
ಕನ್ನಡದ ಪ್ರಪ್ರಥಮ ಶಿಲಾ ಶಾಸನ ದೊರೆತ ಹಲ್ಮಿಡಿ ಗ್ರಾಮದಲ್ಲಿ ಈಗ ಶಾಸನದ ಪ್ರಕೃತಿಯೊಂದೇ ನೆನಪಾಗಿ ಉಳಿದಿದೆ. ಅಂತಹ ಮಹತ್ವದ ಸ್ಥಳವನ್ನು ವೀಕ್ಷಿಸಲು ಪ್ರೋತ್ಸಾಹಿಸುವ ಕ್ರಮಗಳಂತೂ ಆಗಿಲ್ಲ. ಗ್ರಾಮಕ್ಕೆ ಈಗಲೂ ಸುಸಜ್ಜಿತ ರಸ್ತೆ ಇಲ್ಲ. ಗ್ರಾಮದ ಪರಿಸರವೂ ಸುಧಾರಿಸಿಲ್ಲ. ಕನ್ನಡದ ಹಿರಿಮೆ ಸಾರುವ ದಾಖಲೆ ಸಿಕ್ಕಿದ ಹಲ್ಮಿಡಿ ಪ್ರವಾಸಿ ಸ್ಥಳವಾಗಿ ಅಭಿವೃದ್ಧಿಯಾಗಬೇಕು ಎಂಬ ಕೂಗು ಬಹಳ ವರ್ಷಗಳಿಂದ ಕೇಳಿಬರುತ್ತಿದೆ. ಆದರೆ ಸರ್ಕಾರ ಮಾತ್ರ ಗಮನ ಹರಿಸಿಲ್ಲ. ಜಿಲ್ಲೆಯ ಬೇಲೂರು, ಹಳೆಬೀಡು, ಶ್ರವಣಬೆಳಗೊಳಕ್ಕೆ ನೀಡಿರುವ ಸೌಲಭ್ಯದ ಕಿಂಚಿತ್ತಾದರೂ ಹಲ್ಮಿಡಿಗೆ ಸಿಕ್ಕಿದ್ದರೆ ಕನ್ನಡಾಭಿಮಾನಿಗಳು, ಸಾಹಿತಿಗಳು, ಕನ್ನಡ ಸಾಹಿತ್ಯದ ಶಿಕ್ಷಕರು, ವಿದ್ಯಾರ್ಥಿಗಳಾದರೂ ಜೀವನದಲ್ಲಿ ಒಮ್ಮೆ ಹಲ್ಮಿಡಿಗೆ ಹೋಗಿ ಬರುತ್ತಿದ್ದರು. ಆದರೆ ಸರ್ಕಾರ ಹಲ್ಮಿಡಿಗೆ ಸುಸಜ್ಜಿತ ರಸ್ತೆ ಶಾಸನದ ಪ್ರತಿಕೃತಿ ಇರುವ ಪ್ರದೇಶದಲ್ಲಿಯೇ ಒಂದು ಗ್ರಂಥಾಲಯ ಹಾಗೂ ಕನ್ನಡಕ್ಕೆ ಸಂಬಂಧಿಸಿದ ದಾಖಲೆಗಳ ಸಂಗ್ರಹಾಲಯ ರೂಪಿಸುವುದರ ಜೊತೆಗೆ ಹಲ್ಮಿಡಿ ಗ್ರಾಮವನ್ನು ಮಾದರಿ ಗ್ರಾಮವಾಗಿ ರೂಪಿಸಿ ಪ್ರವಾಸೋದ್ಯಮ ಕೇಂದ್ರವಾಗಿ ಪರಿಚಯಿ ಸಬೇಕಾಗಿದೆ. ಆ ಮೂಲಕ ಕನ್ನಡ ಕಂಪು ಹರಡಬೇಕಾಗಿದೆ.
ಎನ್. ನಂಜುಡೇಗೌಡ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Putturu: ಠಾಣೆ ಮುಂಭಾಗದಲ್ಲಿ ಜನರ ಆಕ್ರೋಶ; ಶಾಸಕ ಅಶೋಕ್ ಕುಮಾರ್ ರೈ ಭೇಟಿ
Explained:ಈ ವರ್ಷ ಸೌದಿ ಅರೇಬಿಯಾ 100ಕ್ಕೂ ಅಧಿಕ ವಿದೇಶಿಯರನ್ನು ನೇಣಿಗೇರಿಸಲು ಕಾರಣ ಏನು!
ಹೋಮ್ ವರ್ಕ್ ಮಾಡದ್ದಕ್ಕೆ ಥಳಿಸಿದ ಶಿಕ್ಷಕ; ಕಣ್ಣ ದೃಷ್ಟಿಯನ್ನೇ ಕಳೆದುಕೊಂಡ ವಿದ್ಯಾರ್ಥಿ
Mudhol: ಎರಡೂ ಬಣಗಳಿಂದ ಪ್ರತಿಭಟನೆ ಬಿಸಿ; ಸ್ಥಳದಲ್ಲೇ ಬೀಡುಬಿಟ್ಟಿರುವ ಎಸ್ಪಿ; ಹೈ ಅಲರ್ಟ್
Belagavi: ಹೊಸಬರು, ಹಳಬರನ್ನೂ ಬಿಜೆಪಿಯವರು ಟಚ್ ಮಾಡ್ತಿದ್ದಾರೆ: ಶಾಸಕ ಬಾಬಾಸಾಹೇಬ ಪಾಟೀಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.