ಆಯುಷ್ ವಾಹಿನಿ ಲೋಕಾರ್ಪಣೆ
Team Udayavani, Jan 16, 2017, 3:45 AM IST
ಬೆಂಗಳೂರು: ಭಾರತೀಯ ಪ್ರಾಚೀನ ವಿದ್ಯೆಗಳಾದ ಯೋಗ, ಆಧ್ಯಾತ್ಮ, ಧ್ಯಾನ, ಪ್ರಾಣಯಾಮ ವಿದ್ಯೆಗಳನ್ನು ದಿನನಿತ್ಯ ಪ್ರಸಾರ ಮಾಡುವ ಮೂಲಕ ಜನರಿಗೆ ಅವುಗಳನ್ನು ಕಲಿಸುವ “ಆಯುಷ್ ವಾಹಿನಿ’ಯನ್ನು ಭಾನುವಾರ ಯೋಗಗುರು ಬಾಬಾ ರಾಮ್‌ದೇವ್ ಲೋಕಾರ್ಪಣೆ ಮಾಡಿದರು.
ಕಾಮಧೇನು ಟೆಲಿ ಫಿಲಮ್ಸ್ ಅವರ ನೂತನವಾದ ಆಯುಷ್ ವಾಹಿನಿಯನ್ನು ನಗರದ ಸ್ವಾತಂತ್ರ್ಯ ಉದ್ಯಾನವನದಲ್ಲಿ ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ಭಾರತೀಯ ಪ್ರಾಚೀನ ವಿದ್ಯೆಗಳನ್ನು ಆಯುಷ್ ವಾಹಿನಿ ಮೂಲಕ ಪ್ರತಿದಿನ ಇಡೀ ವಿಶ್ವಕ್ಕೆ ಕಲಿಸಲಾಗುವುದು ಎಂದರು.
ಪ್ರತಿ ಮುಂಜಾನೆ ಯೋಗ ಮಾಡುವುದರಿಂದ ಸರ್ವರೋಗಗಳಿಂದ ಮುಕ್ತರಾಗಬಹುದು. ಯೋಗದಲ್ಲಿ ಶಕ್ತಿ ಇದೆ. ಅದರಿಂದ ದೇಹ, ಆತ್ಮ ಶುದ್ಧಿಯಾಗಿ ಆರೋಗ್ಯ ಲಭ್ಯವಾಗುತ್ತದೆ ಎಂಬ ಸತ್ಯವನ್ನು ಅರಿಯಬೇಕು ಎಂದು ಹೇಳಿದರು.
“ನಾನು ರಾಜಕಾಣಿಯಲ್ಲ. ಯೋಗಿ, ಸನ್ಯಾಸಿ. ಬಡಕುಟುಂಬದಲ್ಲಿ ಹುಟ್ಟಿ, ಸರ್ಕಾರಿ ಶಾಲೆಯಲ್ಲಿ ಮತ್ತೂಬ್ಬರ ಪಠ್ಯಪುಸ್ತಕಗಳನ್ನು ಪಡೆದು ಓದಿದ್ದೇನೆ. ಭಾರತೀಯ ಸಂಸ್ಕೃತಿಯಲ್ಲಿ ಉಲ್ಲೇಖೀತವಾದ, ಪರಿಸರದಿಂದ ಸಿಗುವಂತಹ ಆಯುರ್ವೇದ ಗಿಡಮೂಲಿಕೆಗಳನ್ನು ಬಳಸಿ ವಿವಿಧ ಪತಂಜಲಿ ಉತ್ಪನ್ನಗಳನ್ನು ತಯಾರಿಸಿ ಕೊಡುತ್ತಿದ್ದೇನೆ. ಅದರಿಂದ ನನಗೆ ಒಂದು ಪೈಸೆಯೂ ಬರುವುದಿಲ್ಲ. ವಿದೇಶಿ ಉತ್ಪನ್ನಗಳಿಗೆ ಪರ್ಯಾಯವಾಗಿ ದೇಶಿ ಉತ್ಪನ್ನಗಳನ್ನು ಮಾಡಿದ್ದು, ಇದರಿಂದ ವಿದೇಶಕ್ಕೆ ಹೋಗುವ ಹಣ ಸಾಕಷ್ಟು ಕಡಿಮೆಯಾಗಿದೆ’ ಎಂದರು.
ಆರೋಗ್ಯ ಸಚಿವ ರಮೇಶ್‌ಕುಮಾರ್ ಮಾತನಾಡಿ, ವೈದ್ಯ ವಿಜ್ಞಾನದಲ್ಲಿ ಆಗುತ್ತಿರುವ ಸಂಶೋಧನೆಗಳಿಂದ ಸಾಮಾನ್ಯ ಮನುಷ್ಯನಿಗೆ ಪರಿಹಾರ ಸಿಗದಿದ್ದರೆ ಅಂತಹ ಸಂಶೋಧನೆಗಳ ಅಗತ್ಯವಿದೆಯೇ ಎಂದು ಪ್ರಶ್ನಿಸಿದರು. ಪ್ರಸ್ತುತ ದಿನಗಳಲ್ಲಿ ವೈದ್ಯಕೀಯ ನೀತಿ ಸಂಹಿತೆಯನ್ನೇ ಮರೆತು ಹಲವು ವೈದ್ಯರು ವ್ಯಾಪಾರಕ್ಕೆ ಇಳಿದಿದ್ದಾರೆ. ಯಾರು ವೈದ್ಯ ವೃತ್ತಿಯಲ್ಲಿ ತೊಡಗಿದ್ದಾರೋ ಅವರ ನಡೆ, ನುಡಿ, ಬದ್ಧತೆ, ಪ್ರಾಮಾಣಿಕತೆಯೇ ಅವರಿಗೆ ಗೌರವ ಹೆಚ್ಚುವಂತೆ ಮಾಡುತ್ತದೆ. ಸರ್ಕಾರ ಎಲ್ಲ ರೀತಿಯ ಸವಲತ್ತುಗಳನ್ನು ನೀಡಿದರೂ ಅದು ಇಂದು ಜನಸಾಮಾನ್ಯರಿಗೆ ಸರಿಯಾಗಿ ತಲುಪುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಕೆಲವು ವರ್ಷಗಳ ಹಿಂದೆ ಖಾಸಗಿ ಆಸ್ಪತ್ರೆ, ಖಾಸಗಿ ಶಾಲೆಗಳು ಎಲ್ಲಿದ್ದವು? ಈಗ ಸರ್ಕಾರಿ ಆಸ್ಪತ್ರೆಗಳಲ್ಲಿ ಉತ್ತಮ ಚಿಕಿತ್ಸೆ ದೊರೆಯುತ್ತಿದ್ದರೂ ಜನ ಅಲ್ಲಿಗೆ ಹೋಗಲು ಹಿಂದೇಟು ಹಾಕುತ್ತಾರೆ. ಕೆಲವು ಆಸ್ಪತ್ರೆಗಳಲ್ಲಿ ಆಯುಷ್ ವೈದ್ಯ ಪದ್ಧತಿ ಆರಂಭಿಸಿದಾಗ ಕೆಲವರು ವಿರೋಧಿಸಿದರು. ಚಿಕಿತ್ಸೆಯ ಆಯ್ಕೆ ರೋಗಿಗಳಿಗೆ ಇರಲಿ ಎಂಬ ಕಾರಣಕ್ಕೆ ಎರಡೂ ರೀತಿಯ ಪದ್ಧತಿಯನ್ನು ಒದಗಿಸಿದ್ದೇವೆ. ಇದಕ್ಕೆ ಯಾರು ಅಡ್ಡಿಪಡಿಸಿದರೂ ನಾನು ಅಧಿಕಾರದಲ್ಲಿರುವವರೆಗೆ ಮುಂದುವರೆಸುತ್ತೇನೆ ಎಂದರು.
ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಮಾತನಾಡಿ, ಹಿಂದಿದ್ದ ಜೀವನ ಶೈಲಿ ಮತ್ತು ಆಹಾರ ಪದ್ಧತಿಯನ್ನು ಈಗ ನೆನಪಿಸಿಕೊಳ್ಳುವಂತಾಗಿದೆ. ಪ್ರಕೃತಿಯೇ ಎಲ್ಲಕ್ಕೂ ಪರಿಹಾರ ಮತ್ತು ಚಿಕಿತ್ಸೆ ನೀಡುತ್ತದೆ. ಭಾರತೀಯ ಸಂಸ್ಕೃತಿ, ಯೋಗ, ಆಯುರ್ವೇದಗಳು ಮನುಷ್ಯ ಹೇಗಿರಬೇಕು ಎಂಬುದನ್ನು ಪ್ರಾಚೀನ ಕಾಲದಲ್ಲಿಯೇ ಹೇಳಿದೆ. ನಮ್ಮ ಗುರು, ಹಿರಿಯರು ನೂರಾರು ವರ್ಷ ಬಾಳಿ, ಬದುಕಿದ ನಿದರ್ಶನ ನಮ್ಮ ಮುಂದಿದೆ. ಪಾಶ್ಚಾತ್ಯ ಪದ್ಧತಿಗಳನ್ನು ಇಲ್ಲಿಗೆ ತರುವುದರ ಜತೆಗೆ ಅಲ್ಲಿನ ರೋಗಗಳನ್ನು ತರಲಾಗಿದ್ದು, ನಮ್ಮ ಪ್ರಾಚೀನ ಪದ್ಧತಿ ಅಳವಡಿಸಿಕೊಂಡು ಅವುಗಳಿಗೆ ಪರಿಹಾರ ಕಂಡುಕೊಳ್ಳಬೇಕಿದೆ ಎಂದು ಹೇಳಿದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್, ಶಾಸಕ ಎನ್.ಎ.ಹ್ಯಾರೀಸ್, ಪದ್ಮಭೂಷಣ ಪುರಸ್ಕೃತರಾದ ಡಾ.ಬಿ.ಎಂ.ಹೆಗ್ಡೆ, ಡಾ.ವಿ.ಆರ್.ಗೌರಿಶಂಕರ್, ಹಿರಿಯ ನ್ಯಾಯವಾದಿ ಸಿ.ವಿ.ನಾಗೇಶ್, ಆಯುಷ್ ಟಿವಿಯ ರಾಯಭಾರಿಯೂ ಆಗಿರುವ ಚಿತ್ರನಟ ಉಪೇಂದ್ರ, ಪ್ರಶಾಂತಿ ಆಯುರ್ವೇದಿಕ್ ಕೇಂದ್ರದ ಡಾ.ಗಿರಿಧರ್ ಕಜೆ, ಎಸ್‌ಡಿಎಂ ಯೋಗ ಮತ್ತು ಪ್ರಕೃತಿ ಚಿಕಿತ್ಸೆ ಆಸ್ಪತ್ರೆಯ ಪ್ರಾಂಶುಪಾಲ ಡಾ.ಪ್ರಶಾಂತ್ ಶೆಟ್ಟಿ, ಆಯುಷ್ ಇಲಾಖೆ ನಿರ್ದೇಶಕ ರಾಜ್‌ಕಿಶೋರ್ ಸಿಂಗ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಆಸ್ತಾ ಟಿವಿಯಲ್ಲಿ ಹಿಂದಿಯಲ್ಲಿ ಮಾತ್ರ ಯೋಗ ಹೇಳಿಕೊಡುತ್ತಿದ್ದೆ. ಫೆ.1ರಿಂದ ಪ್ರತಿದಿನ ಆಯುಷ್ ವಾಹಿನಿಯಲ್ಲಿ ಕನ್ನಡ ಮತ್ತು ತಮಿಳಿನಲ್ಲಿ ಧ್ಯಾನ, ಆಧ್ಯಾತ್ಮ, ಯೋಗ, ಪ್ರಾಣಾಯಾಮ ವಿದ್ಯೆಗಳನ್ನು ಹೇಳಿಕೊಡಲಾಗುವುದು.
– ಬಾಬಾ ರಾಮ್‌ದೇವ್, ಯೋಗಗುರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.