ದೊಡ್ಡಬ್ದುಲ್ಲರಾಗಿ ಬದುಕಿದ ಕುಂಞ್ಞಬ್ದುಲ್ಲ!
Team Udayavani, Nov 5, 2017, 6:00 AM IST
ಬಡವನಾಗಿ ರೈಲ್ವೆ ಸ್ಟೇಷನಿನ ಬೆಂಚಲ್ಲಿ ಮಲಗಿರುವಾಗ ಸತ್ತರೆ ಸಾಕು. ಸತ್ತ ಮೇಲೆ ನನ್ನನ್ನು 5.3 ಅಡಿಯಷ್ಟು (ನಾನಿರುವುದೇ ಅಷ್ಟು) ಮಣ್ಣ ಮೇಲೆ ಇರಿಸಿ ಸುಡಬೇಕು. ಆ ಬೂದಿಯನ್ನು ಯಾವುದಾದರು ನದಿಯಲ್ಲಿ ಚೆಲ್ಲಬೇಕು. ಅಷ್ಟೇ, ಬೇರೆ ಯಾವ ಆಸೆ ನನಗಿಲ್ಲ”
ಜಾತಕದಲ್ಲಿ ಹೇಳಿದ ಹಾಗೆ ತಾನು 86 ವರ್ಷಗಳ ತನಕವೂ ಬದುಕುತ್ತೇನೆ ಎಂದು ಗಾಢವಾಗಿ ನಂಬಿದ್ದ ಆದರೆ ಕಳೆದ ವಾರ 77 ನೇ ವಯಸ್ಸಿನಲ್ಲಿ ಲೋಕವನ್ನು ಬಿಟ್ಟ ಮಲಯಾಳದ ಖ್ಯಾತ ಸಾಹಿತಿ ಪುನಥಿಲ್ ಕುಂಞಬ್ದುಲ್ಲ (ಚಿಕ್ಕಬ್ದುಲ್ಲಾ) ಒಮ್ಮೆ ಮನಬಿಚ್ಚಿ ಆಡಿದ್ದ ಮಾತುಗಳು ಮೇಲಿನವು. ಇಸ್ಲಾಂ ಹಿನ್ನಲೆಯಲ್ಲಿ ಹುಟ್ಟಿದ ಈ ವಿಶಿಷ್ಟ ಪ್ರತಿಭೆ ಸತ್ತ ಬಳಿಕ ತನ್ನ ದೇಹವನ್ನು ಹಿಂದು ಪದ್ಧತಿಯಂತೆ ಸುಡಬೇಕೆಂದು ಆಸೆ ಪಟ್ಟಿತ್ತು!
ಮಾರ್ಕ್ಸಿಸ್ಟುಗಳ ಕೋಟೆಯಾದ ವಡಕರಯ ಒಂಚಿಯಂನ ಶ್ರೀಮಂತ ಕುಟುಂಬದಲ್ಲಿ ಹುಟ್ಟಿ ಬೆಳೆದ ಕುಂಞಬ್ದುಲ್ಲ ಸಾಹಿತ್ಯಕ್ಷೇತ್ರದ ಕಡೆಗೆ ಚಿಕ್ಕವನಾಗಿ¨ªಾಗಲೆ ಕುತೂಹಲ ಇಟ್ಟುಕೊಂಡಿದ್ದ. ಎಳೆಯ ವಯಸ್ಸಿನಲ್ಲಿ ಬರೆದ ಕಲ್ಯಾಣ ರಾತ್ರಿ ಎಂಬ ಕಥೆಯನ್ನು ಮಾತೃಭೂಮಿ ವಾರಪತ್ರಿಕೆಯ ಮಕ್ಕಳ ವಿಭಾಗಕ್ಕೆ ಕಳುಹಿಸಿದಾಗ ಆಯ್ಕೆ ಸಮಿತಿಯಲ್ಲಿ ಇದ್ದ ಎಂ.ಟಿ. ವಾಸುದೇವನ್ ನಾಯರ್‌ರಿಗೆ ಕಥೆಯ ವಸ್ತು, ನಿರೂಪಣೆ ಶೈಲಿ ನೋಡಿ ಆಶ್ಚರ್ಯವಾಯಿತು. ಮಕ್ಕಳದಾಗಬೇಕಿದ್ದ ಆ ಕಥೆಯನ್ನು ಅವರು ಪತ್ರಿಕೆಯ ದೊಡ್ಡವರ ವಿಭಾಗದಲ್ಲಿ ಪ್ರಕಟಿಸಿದರು!
ಯುವಕ ಅಬ್ದುಲ್ಲಾ ವಿಜ್ಞಾನದಲ್ಲಿ ಪದವಿ ಶಿಕ್ಷಣ ಮುಗಿಸಿದ ಮೇಲೆ ಮಲಯಾಳ ಸಾಹಿತ್ಯದಲ್ಲಿ ಸ್ನಾತಕೋತರ ಪದವಿ ಪಡೆಯುವುದಕ್ಕೆ ಆಸೆಪಟ್ಟ. ಗುರುಗಳಾದ ಖ್ಯಾತ ವಿಮರ್ಶಕ ಎಂ. ಎನ್. ವಿಜಯನ್ ಬಳಿ ಕನಸನ್ನು ಹೇಳಿದಾಗ ಅವರು, “”ಸಾಹಿತಿಯಾಗಲು ಪದವಿಯ ಅಗತ್ಯವಿಲ್ಲ, ಅಕ್ಷರಗಳು ಗೊತ್ತಿದ್ದರೆ ಸಾಕಯ್ನಾ, ನೀನು ಎಂಬಿಬಿಎಸ್ ಮಾಡು. ನಿನಗೆ ಪ್ರಯೋಜನವಾಗುತ್ತದೆ” ಎಂಬ ಸಲಹೆ ನೀಡಿದರು. ಆಲಿಗಢ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ ನಡೆದ ಪ್ರವೇಶ ಪರೀಕ್ಷೆಯಲ್ಲಿ 7ನೆಯ ರ್‍ಯಾಂಕು ಗಳಿಸಿದ ಕುಂಞಬ್ದುಲ್ಲ ಕೇರಳದ ಹೆಮ್ಮೆಯ ವೈದ್ಯಕೀಯ ವಿದ್ಯಾರ್ಥಿಯಾದ. ಉತ್ತರಭಾರತದ ವಿಶ್ವವಿದ್ಯಾಲಯದ ವಾತಾವರಣ ಕುಂಞಬ್ದುಲ್ಲ ರಿಗೆ ಸೃಜನಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಸ್ಫೂ³ರ್ತಿನೀಡಿತು, ಚಿಂತನೆಗೆ ವಿನ್ಯಾಸವನ್ನು ಕೊಟ್ಟಿತು. ಕುಂಞಬ್ದುಲ್ಲನ ಸೃಜನಶೀಲ ಪಯಣ ಆಲೀಗಢದಿಂದ, ಆಲಿಗಢ್ ಕಥೆಗಳು ಎಂಬ ಕಥಾಸಂಕಲನದ ಮೂಲಕ ಶುರುವಾಯಿತು.
ವಿಚಿತ್ರವೂ ಮೋಹಕವೂ ನಿರಂಕುಶವೂ ಅರಾಜಕವೂ ಆದ ಈ ಪಯಣವು ಅಂತ್ಯವಾದುದುದು ನಿನ್ನೆ ಮೊನ್ನೆ. ಆಲಿಗಢ ಮತ್ತು ತನ್ನ ಮಧ್ಯೆ ಗಾಢವಾಗಿ ಬೆಳೆದು ನಿಂತ ನಂಟು ಎಂತಹುದು ಎಂದು ತೋರಿಸುವ ಅವರ ಕಾದಂಬರಿಯೇ ಪ್ರಶಸ್ತಿ ವಿಜೇತ ಆಲೀಗಢ್‌ನ ಸೆರೆಯಾಳು .
ಚಿಕ್ಕ ಪ್ರಾಯದಲ್ಲಿ ಅಮ್ಮನನ್ನು ಕಳೆದುಕೊಂಡ ಕುಂಞಬ್ದುಲ್ಲನನ್ನು ನೋಡಿಕೊಂಡದ್ದು ಅಮ್ಮನ ಸಹೋದರಿ. ಅವರು ಹೇಳಿಕೊಟ್ಟ ಕಥೆಗಳನ್ನು ಕೇಳಿ ಬೆಳೆದ ಹುಡುಗನಿಗೆ ಪ್ರೇತಗಳು, ದೆವ್ವಗಳು ಮತ್ತು ಅವರೊಂದಿಗೆ ಬದುಕುವ ಮನುಷ್ಯರು ಎಲ್ಲ ಒಟ್ಟಾಗಿ ಸೇರಿಕೊಂಡು ಸ್ನೇಹಿತರಾದರು. ಪುರಾಣಗಳು, ದಂತಕಥೆಗಳು ಅವನ ಗ್ರಾಮವನ್ನು ಪೂರ್ತಿ ಸುತ್ತುವರಿದ ಕಾರಣ ಇಂತಹ ಲೋಕವನ್ನೊಳಗೊಂಡು ತನ್ನದೇ ದಾರಿಯಲ್ಲಿ ಕಥೆ ಸೃಷ್ಟಿಸುವ ನೈಪುಣ್ಯ ಅವನಲ್ಲಿ ನಿಸರ್ಗಸಹಜವಾಗಿ ಮೂಡಿತು. ಹಾಗಾಗಿ, ತನ್ನ ಮೇರುಕೃತಿಯಾದ ಸ್ಮಾರಕ ಶಿಲಕಳ್ (ಸ್ಮಾರಕ ಶಿಲೆಗಳು) ಮೂಲಕ ಮಲಯಾಳ ಸಾಹಿತ್ಯದ ಆಧುನಿಕತಾವಾದದ ಆರಂಭಿಕನಾಗಿ ಗುರುತಿಸಲ್ಪಟ್ಟರೂ, ಕುಂಞಬ್ದುಲ್ಲ ಇತರ ನವ್ಯ ಸಾಹಿತಿಗಳಿಂದ ಭಿನ್ನವಾಗಿ ಉಳಿದರು. ದೊಡ್ಡ ಒಂದು ಕ್ಯಾನ್ವಾಸ್ ಸಿದ್ಧªಪಡಿಸಿ ಅದರಲ್ಲಿ ಅನೇಕ ತಲೆಮಾರುಗಳಿಗೆ ಸೇರಿದ ಜನರನ್ನು ಕುಳ್ಳಿರಿಸಿ, ಅವರ ಜೀವನವನ್ನು ರೂಪಿಸಿದ ನಂಬಿಕೆಗಳು, ದಂತಕಥೆಗಳು, ಪುರಾಣಗಳು, ಆಚರಣೆಗಳು, ಸದ್ಗುಣಗಳು, ದುರ್ಗುಣಗಳು, ಸಾಮರ್ಥ್ಯಗಳು, ದುರ್ಬಲತೆಗಳು ಎಲ್ಲವನ್ನು ನಂಬಲು ಅಸಾಧ್ಯವಾದ ಘಟನೆಗಳೊಂದಿಗೆ ಬೆರೆಸಿ ಕಾವ್ಯಾತ್ಮಕವಾಗಿ ನಂಬಿಸಿ ಮನುಕುಲದ ನಿಗೂಢ ಹೊಳಹುಗಳ ಕಡೆಗೆ ಓದುಗರ ಹೃದಯ ಸೆಳೆದವರು ಕುಂಞಬ್ದುಲ್ಲ.
ಕೇರಳ ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರಕಿಸಿಕೊಟ್ಟ ಸ್ಮಾರಕ ಶಿಲೆಗಳು ಕಾದಂಬರಿ ಸಾಹಿತ್ಯ ಜಗತ್ತಿನಲ್ಲಿ ಅವರು ಒಂದು ಅವಿನಾಶಿ ಸೃಜನಶಿಲೆಯಾಗಿ ಉಳಿಯುವಂತೆ ಮಾಡಿತು. ಶ್ರೀಮಂತ ಅರಕ್ಕಲ್ ಮನೆತನದ ಊಳಿಗಮಾನ್ಯ ಅಧಿಪತಿ ಖಾನ್ ಬಹದ್ದೂರ್ ಪೂಕೋಯ ತಂಗಳ್ ಪ್ರಬಲವಾದ ವೈಯಕ್ತಿಕ ಸಾಮ್ರಾಜ್ಯವನ್ನು ಕಟ್ಟಿ, ಇಳಿಯದ ಉದಾರತೆ ಮತ್ತು ದಣಿಯದ ಕಾಮವನ್ನು ಅಸ್ತ್ರವಾಗಿ ಉಪಯೋಗಿಸಿ ಅದ್ದೂರಿಯಾಗಿ ಮೆರೆದು, ಅಂತಿಮವಾಗಿ ಹೇಗೆ ಒಂದು ಸ್ಮಾರಕಶಿಲೆಯಾಗಿ ಮಾರ್ಪಾಡಾದ- ಎಂದು ತೋರಿಸಿಕೊಟ್ಟವರು ಕುಂಞಬ್ದುಲ್ಲ. ಸದ್ಯ ಅವರೇ ಈಗ ತಾನೊಂದು ಬೃಹತ್ ಸಾಹಿತ್ಯ ಶಿಲೆಯಾಗಿ ಕಾರಕ್ಕಡ್ ಜುಮಾ ಮಸೀದಿಯಲ್ಲಿ ಮಣ್ಣಿನಾಳಕ್ಕಿಳಿದುಬಿಟ್ಟರು. ಚಿತೆಯಾಗುವ ಅವರ ವಿಚಿತ್ರ ಆಸೆಯು ಆಗಲಿಲ್ಲ!
ಲೈಂಗಿಕತೆಯ ಸಂಭ್ರಮ
ಜೀವನವನ್ನು ತಮಾಷೆಯಾಗಿ ಕಂಡ ಕುಂಞಬ್ದುಲ್ಲರಿಗೆ ಬದುಕೆಲ್ಲ ಕಥಾವಸ್ತುಗಳು. ಬೂಟಾಟಿಕೆಯ ವಿರುದ್ಧ ಯುದ್ಧ ಘೋಷಿಸಿದ ಅವರಿಗೆ ನಿಷ್ಠೆ ಇದ್ದುದು ತನ್ನ ಆತ್ಮಸಾಕ್ಷಿಗೆ ಮಾತ್ರ. ಆದುದರಿಂದ ಎಲ್ಲರೂ ಮುಚ್ಚಿಡುವ ಲೈಂಗಿಕ ವಿಷಯಗಳ ಕುರಿತು ದಟ್ಟವಾಗಿ ಪ್ರತಿಪಾದಿಸುವುದು ಅವರಿಗೆ ಬಹಳ ಇಷ್ಟ. ಅವರ ಎಲ್ಲ ಕೃತಿಗಳಲ್ಲಿ ಸುಲಭವಾಗಿ ಸಹಜವಾಗಿ ಲೈಂಗಿಕತೆ ಪ್ರವೇಶಿಸುತ್ತದೆ. ನಿಜಜೀವನದಲ್ಲೂ ಲೈಂಗಿಕತೆಯನ್ನು ಸಂಭ್ರಮವಾಗಿ ಆಚರಿಸಿ, ಅದರ ಬಗ್ಗೆ ನೇರ ನುಡಿಗಳಲ್ಲಿ ಮಾತನಾಡಿದ ಇನ್ನೊಬ್ಬ ಸಾಹಿತಿ ಮಲಯಾಳದಲ್ಲಿ ಇಲ್ಲ ಎನ್ನಬಹುದು. ಇವರ ಅರಾಜಕ ಜೀವನಕ್ರಮದಿಂದ ಬೇಸರಗೊಂಡ ಹೆಂಡತಿ-ಮಕ್ಕಳು ಇವರನ್ನು ಬಿಟ್ಟು ಹೋಗಿ ವರ್ಷಗಳೇ ಆಯಿತು. ತನ್ನ ನಡೆಗಳ ಬಗ್ಗೆ ಕೊಂಚವಾದರೂ ತಪ್ಪಿತಸ್ಥ ಭಾವನೆ ಕಾಡದ ಕುಂಞಬ್ದುಲ್ಲ – ಎಲ್ಲವು ಒಳ್ಳೆಯದಕ್ಕೆ ಸಂಭವಿಸುತ್ತವೆ, ನಾನೊಬ್ಬನೇ ಇದ್ದ ಕಾರಣ ಹೆಂಗಸರಿಗೆ ತನ್ನ ಬಳಿ ಸೇರಲು ಸುಲಭವಾಗುತ್ತದೆ ಎಂದು ಯಾವುದೇ ಮುಚ್ಚುಮರೆಯಿಲ್ಲದೆ, ಗಿಲೀಟುಗಳಿಲ್ಲದೆ ಹೇಳಿಬಿಡುತ್ತಿದ್ದರು. ಹಾಗಾಗಿಯೇ ಇವರ ಬರವಣಿಗೆಗೆ ಮರುಳಾದ ಓದುಗರು, “ಈತನನ್ನು ಓದಬೇಕು, ತಪ್ಪಿಯೂ ಬದುಕಿಗೆ ಮಾದರಿಯಾಗಿ ಪರಿಗಣಿಸಬಾರದು’ ಎನ್ನುತ್ತಿದ್ದರು. ನನ್ನ ಊರಿನಲ್ಲಿ ಎಷ್ಟೋ ಮಕ್ಕಳು ನಾನು ಅವರ ತಂದೆಯೆಂದು ತಿಳಿಯದೆ ಸುತ್ತಮುತ್ತ ಓಡಾಡುತ್ತ¤ ಇ¨ªಾರೆ ಎಂಬುದಾಗಿ ಇತ್ತೀಚೆಗೆ ಒಂದು ಸಂದರ್ಶನದಲ್ಲಿ ಮಾರ್ಮಿಕವಾಗಿ ಹೇಳಿ ಎಲ್ಲರನ್ನು ಬೆಚ್ಚಿಬೀಳಿಸಿದ ಈ ಬರಹಗಾರನಿಗೆ ಬರಹದ ಲೋಕದಲ್ಲೂ ಬದುಕಿನ ಲೋಕದಲ್ಲೂ ಅಡಗಿಸುವ ಸಂಗತಿಗಳು ಇರಲಿಲ್ಲ.
ಎಂಬಿಬಿಎಸ್ ಕೋರ್ಸ್ ಮುಗಿಸಿ ಸರ್ಕಾರಿ ಆಸ್ಪತ್ರೆಯಲ್ಲಿ ಮೂರು ವರ್ಷ ಸೇವೆ ಸಲ್ಲಿಸಿ ಬಳಿಕ ಸ್ವಂತ ಆಸ್ಪತ್ರೆ ಸ್ಥಾಪಿಸಿದ ಕುಂಞಬ್ದುಲ್ಲ ಬೇಕಾದಷ್ಟು ದುಡ್ಡಿನೊಂದಿಗೆ ಬೆಲೆಬಾಳುವ ಅನುಭವಗಳನ್ನು ಪಡೆದರು. ಅನುಭವ ಶ್ರೀಮಂತಿಕೆಯೊಂದಿಗೆ ಸಾಹಿತ್ಯ ಕ್ಷೇತ್ರ ಪ್ರವೇಶಿಸಿ ಅಲ್ಲಿಯ ಸಾಂಪ್ರದಾಯಿಕ ಚೌಕಟ್ಟುಗಳನ್ನು ಮುರಿದು ಹಾಕಿದರು. ಇತರರೊಂದಿಗೆ ಸಹಜವಾಗಿ ಕತೆ ಹೇಳುತ್ತ ಮಾತನಾಡುವ ರೀತಿಯÇÉೇ ಸಣ್ಣಕಥೆಗಳನ್ನು ಬರೆದರು. ಮದ್ದು, ಸೂರ್ಯ, ದುಃಖೀತರಿಗೆ ಒಂದು ಹೂಮರ, ಖಲೀಫಾ, ಕನ್ಯಾವನಗಳು- ಕುಂಞಬ್ದುಲ್ಲರ ಜನಪ್ರಿಯ ಕಾದಂಬರಿಗಳು. ಆಕಾಶದ ಇನ್ನೊಂದೆಡೆ, ಬೆಟ್ಟದ ಮೇಲಿರುವ ಅಬ್ದುಲ್ಲಾ, ಬಟ್ಟೆ ಇಲ್ಲದ ಪಾತ್ರಗಳು, ಕೃಷ್ಣನ ರಾಧಾ ಮೊದಲಾದವು ಕಾಮ ಹಾಗೂ ಭ್ರಮೆಗಳು ತುಂಬಿ ತುಳುಕುವ ಅವರ ಸಣ್ಣಕಥೆಗಳು.
ವಾಜಪೇಯಿ ಮೇಲಿನ ಪ್ರೀತಿ
ಅನೇಕ ಪ್ರಶಸ್ತಿಗಳು ಪಡೆದುಕೊಂಡ ಕುಂಞಬ್ದುಲ್ಲ ಬದುಕಿನಲ್ಲಿ ವಿನೀತರಾಗಿ ಉಳಿದರು. ಖ್ಯಾತಿ ಮತ್ತು ಸಂಪತ್ತು ಯಾವ ರೀತಿಯಲ್ಲೂ ಇವರನ್ನು ಬದಲಿಸಲಿಲ್ಲ. ರಾಜಕೀಯದಿಂದ ಸದಾ ದೂರವಿದ್ದ ಇವರು ಒಮ್ಮೆ ಚುನಾವಣೆಯಲ್ಲಿ ಕೇರಳದ ಕಮ್ಯುನಿಸ್ಟರ ನಡುವೆಯೂ ಬಿಜೆಪಿಯಿಂದ ಸ್ಪರ್ಧಿಸಿ ಸೋತದ್ದು ಅಂದಿನ ಪ್ರಧಾನಿ ವಾಜಪೇಯಿ ಮೇಲಿದ್ದ ಪ್ರೀತಿಗಾಗಿ! ಜೀವನವು ವ್ಯರ್ಥವಲ್ಲ , ಅದನ್ನು ನಿರರ್ಥಕ ಮಾಡಬಾರದು ಎಂದು ನಂಬಿದ ಕುಂಞಬ್ದುಲ್ಲ ತನ್ನ ಭೋಗ ಬದುಕಿನ ಓಟದಲ್ಲಿ ಎಲ್ಲವನ್ನು ಕಳೆದುಕೊಂಡು ಒಂಟಿಯಾಗಿ ತನ್ನ ಕೊನೆಯ ದಿನಗಳನ್ನು ಎಳೆದುಕೊಂಡರು . ತನ್ನನ್ನು ತಿದ್ದಲು ಪ್ರಯತ್ನಿಸಿದ ಎಲ್ಲರಲ್ಲೂ ಕುಂಞಬ್ದುಲ್ಲ ಹೇಳಿದ್ದು ಒಂದೇ ಮಾತು: ಜೀವನ ಭೋಗಿಸಲು ಇರುವುದು, ಅದನ್ನು ನಾನು ಸಾಕಷ್ಟು ಅನುಭವಿಸಿದ್ದೇನೆ. ಯಾವ ಬೇಸರವೂ ಇಲ್ಲ. ಹೀಗೆಯೇ ನಾನು ಹೋದರೆ ಸಾಕು. ಅವರೊಬ್ಬ ನಮ್ಮ ಕಾಲದ ಶುದ್ಧ ಎಪಿಕ್ಯೂರಿಯನ್!
ಹಿಂದೂ ಧರ್ಮ ಪ್ರತಿಪಾದಿಸುವ ಉದಾರ ಮಾನವತಾವಾದ, ಅಭಿವ್ಯಕ್ತಿಯ ಸ್ವಾತಂತ್ರ್ಯ, ನಮನೀಯತೆ ಮೊದಲಾದ ಗುಣಗಳಿಂದ ಆಕರ್ಷಿತನಾಗಿ, ತಾನು ಮುಸಲ್ಮಾನನಾಗಿ ಹುಟ್ಟಿದರೂ ಸಂಸ್ಕೃತಿಯಲ್ಲಿ ಹಿಂದು ಎನ್ನುತ್ತಿದ್ದರು! ಸಾಹಿತಿಗಳೆಲ್ಲರೂ ಸಾಮಾನ್ಯವಾಗಿ ಎಡಪಂಥೀಯ ವೈಚಾರಿಕ ನಿಲುವು ಸ್ವೀಕರಿಸುವ ಜಗತ್ತಿನಲ್ಲಿ ಇವರು ಮನೆಯಲ್ಲಿ ಕೃಷ್ಣನನ್ನು ಆರಾಧಿಸಿದರು. ಬರಹಗಾರನು ತನ್ನ ಕಾಲಲ್ಲಿ ತಾಗಿರುವ ಧೂಳನ್ನು ಸದಾ ಒರೆಸಿಕೊಳ್ಳುತ್ತಲೇ ಒಬ್ಬ ಪ್ರವಾದಿಯಾಗಿ ಊರನ್ನು ಸುತ್ತಬೇಕು, ಅವನು ಆತ್ಮಹತ್ಯೆ ಒಂದನ್ನು ಹೊರತುಪಡಿಸಿ ಎಲ್ಲಾ ಅನುಭವಗಳನ್ನು ಎದುರಿಸಬೇಕು, ಆ ಅನುಭವಗಳನ್ನು ಅನುಭೂತಿಗಳಾಗಿ ಪರಿವರ್ತಿಸಬೇಕು ಎಂದು ಹೇಳಿ, ಹಾಗೆಯೇ ತನ್ನ ಬರಹಗಳಲ್ಲಿ ಮಾಡಿ ತೋರಿಸಿದ ವಿಶಿಷ್ಟ ದಾರ್ಶನಿಕನಾದ ಈ ಅರಾಜಕ ತನಗೆ ದೊರಕಿದ ನಶ್ವರ ಜನ್ಮವನ್ನು ಅನಶ್ವರಗೊಳಿಸುವುದೇ ಒಬ್ಬ ಬರಹಗಾರನ ಧರ್ಮ ಎಂದು ನಂಬಿದ್ದರು.
ಮಲಯಾಳದಲ್ಲಿ ಕುಂಞ ಅಂದರೆ ಸಣ್ಣ ಅಂತ ಅರ್ಥವಿದೆ. ಈತನನ್ನು ಹತ್ತಿರದಿಂದ ಬಲ್ಲ ಖ್ಯಾತ ಲೇಖಕ ದಿ. ವೈಕಂ ಮುಹಮ್ಮದ್ ಬಷೀರ್ ಒಮ್ಮೆ ಹೇಳಿದ ಮಾತಿದು-ಇವನೋ ಕುಂಞಬ್ದುಲ್ಲ ಅಲ್ಲವೇ ಅಲ್ಲ, ಇವನೊಬ್ಬ ದೊಡ್ಡಬ್ದುಲ್ಲಾ!
– ಟಿ. ಕೆ. ರವೀಂದ್ರನ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ
Hysteroscopy: ಸಂತಾನಹೀನತೆಯ ಪತ್ತೆ ಮತ್ತು ಚಿಕಿತ್ಸೆಗೆ ಒಂದು ಅತ್ಯವಶ್ಯಕ ಕಾರ್ಯವಿಧಾನ
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ಅವಹೇಳನಕಾರಿ ಪದಬಳಕೆ: ಪ್ರಸಾದ್ ರಾಜ್ ಕಾಂಚನ್ ಖಂಡನೆ
Puttur: ತೆಂಕಿಲದಲ್ಲಿ ರಿಕ್ಷಾ ಅಪಘಾತ: ಚಾಲಕ ಸಾವು
Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್ ಬಾಂಡ್’ ಚಿತ್ರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.