ಪಯಣ, ಬಸ್ಸು , ನಿಲ್ದಾಣ, ಬದುಕು, ಸಾವು ಇತ್ಯಾದಿ
Team Udayavani, Jun 3, 2018, 6:00 AM IST
ಮಹಾನಗರದಲ್ಲಿ ಪ್ರವಾಹದಂತೆ ಮುನ್ನುಗುತ್ತಿರುವ ವಾಹನಗಳನ್ನು ನೋಡುತ್ತ ಒಮ್ಮೆಯಾದರೂ ನೀವು ಉದ್ಗರಿಸಿರಬಹುದಲ್ಲ- “ಇವರೆಲ್ಲ ಇಷ್ಟೊಂದು ಅರ್ಜೆಂಟರ್ಜೆಂಟಾಗಿ ಹೋಗುತ್ತಿದ್ದಾರಲ್ಲ , ಎಲ್ಲಿಗೆ’. ಹಳೆಯ ದಿನಗಳಲ್ಲಿ, ಹಳ್ಳಿಗಳ ಊರಿನ ದಾರಿಯಲ್ಲಿ ಯಾರಾದರೂ ಹೋಗುತ್ತಿದ್ದರೆ, “ದೂರ ಹೊರಟಿದ್ದೀರಿ’ ಎಂದು ಕೇಳಿ ಕುಶಲೋಪರಿ ವಿಚಾರಿಸುವ ಪರಿಪಾಠವಿತ್ತು. ಈಗ ಅದು ಸಾಧ್ಯವಿಲ್ಲ. “ನಾನು ಎಲ್ಲಿಗಾದರೂ ಹೋಗುತ್ತೇನೆ, ನೀನಾರು ಕೇಳಲು’ ಎಂಬ ಅಹಂ-ಭಾವ ಎಲ್ಲ ದಾರಿಹೋಕರೊಳಗೂ ಇರುತ್ತದೆ. ರಸ್ತೆ ಎಂಬುದು ಸಾರ್ವಜನಿಕವಾದುದು, ಯಾರೂ ಎಲ್ಲಿಗೂ ಹೋಗಬಹುದು ಎಂಬ ಅಲಿಖೀತ ಅನುಮತಿ ಇದ್ದೇ ಇರುತ್ತದೆ. ಮನುಷ್ಯಮರದಂತಲ್ಲ , ಇದ್ದಲ್ಲೇ ಇರುವುದಿಲ್ಲ. ಎಲ್ಲರೂ ಒಂದೆಡೆಯಿಂದ ಮತ್ತೂಂದೆಡೆಗೆ ಸಂಚರಿಸುತ್ತಲೇ ಇರುತ್ತಾರೆ. ಬದುಕೇ ಒಂದು ಪಯಣ ! ಎಲ್ಲರಿಗೂ ಗಮ್ಯವನ್ನು ಮುಟ್ಟುವ ತವಕ. ಯಾರೂ ಮುಟ್ಟಿರುವುದಿಲ್ಲ. ಮುಟ್ಟಿದರೆ ಅದು ಮುಕ್ತಾಯ. ಹಾಗಾಗಿ, ನಿರಂತರವಾಗಿ ಪಯಣಿಸುತ್ತಲೇ ಇರುತ್ತಾರೆ. ಜಗತ್ತು ಎಂಬ ಬಸ್ಸು ನಮ್ಮನ್ನು ಹೊತ್ತುಕೊಂಡು ಹೊರಟಿದೆ. ಸನಿಹ ಕುಳಿತವನು ಅಪರಿಚಿತನಾದರೂ ಬಸ್ಸಿನೊಳಗಿರುವವರೆಗೆ ಆತ ನಮ್ಮ ಬಂಧುವಿನಂತೆ. ಎಲ್ಲರೂ ಅವರವರ ನಿಲ್ದಾಣಗಳಲ್ಲಿ ಇಳಿಯುವವರೇ. ಬದುಕಿನ ನಿಲ್ದಾಣದಲ್ಲಿಯೂ ಒಮ್ಮೆ ಇಳಿದು ಪಯಣ ಮುಗಿಸಲೇಬೇಕು. ಮತ್ತೆ ಇನ್ನೊಂದು ಬದುಕಿನೆಡೆಗೆ ಪಯಣ ಮುಂದುವರಿಯಬಹುದು. ಆಧ್ಯಾತ್ಮಿಕರ ಪ್ರಕಾರ ಸಾವು ಎಂಬುದು ಕೂಡ ಒಂದು ನಿಲ್ದಾಣವೇ. ಅಂಥ ನಿಲ್ದಾಣ ಬರುವವರೆಗೂ ನಾವು ಕುಳಿತ ಬಸ್ಸು ಒಯ್ದೆಡೆ ನಾವೂ ಸಾಗಬೇಕು…
ನಮ್ಮ ಮನೆಯ ಎಲ್ಲರ ಕಾಲಲ್ಲೂ ಶ್ವಾನಚಕ್ರವಿದೆ ! ಅಂದರೆ, ಎಲ್ಲ ಸದಸ್ಯರೂ ನಿರಂತರ ಚಲನೆಯಲ್ಲಿರುತ್ತಾರೆ. ಭೂಪಟದ ಎಲ್ಲ ಅûಾಂಕ್ಷ, ರೇಖಾಂಶಗಳ ವಾರಸುದಾರರಂತೆ ವರ್ತಿಸುತ್ತಾರೆ. ಯಾವಾಗಲೂ ಪ್ರಯಾಣ. ಎಲ್ಲಿಗೋ ಹೋಗುವುದು, ಎÇÉೆಲ್ಲಿಂದಲೋ ಬರುವುದು. ಈ ಪ್ರಯಾಣಗಳ ಗುರಿ ಏನು, ಸಾರ್ಥಕತೆ ಏನು? ಎಂದು ಒಂದೇ ಒಂದು ಸಲವಾದರೂ ಸರಿಯೇ ಎಲ್ಲರೂ ಒಟ್ಟಿಗೇ ಕುಳಿತು ಚರ್ಚಿಸಲು ಸಾಧ್ಯವಾಗುತ್ತಿಲ್ಲ. ಕಷ್ಟಪಟ್ಟು ಕುಳಿತುಕೊಂಡರೂ ಆವಾಗಲೂ ಪ್ರಯಾಣದ್ದೇ ಧ್ಯಾನ. ಮತ್ತೆ ಪ್ರಯಾಣ, ಇನ್ನಷ್ಟು ಪ್ರಯಾಣ, ನಿಲುಗಡೆಯೆಂಬುದೇ ಇಲ್ಲ. ಇನ್ನು ನಿಲ್ದಾಣದ ಮಾತೇಕೆ?
ಹಾಗೆ ಕುಳಿತು ಚರ್ಚಿಸದೇ ಹೋದರೂ ಒಂದು ಸಂಗತಿಯ ಬಗ್ಗೆ ನಮ್ಮೆಲ್ಲರಲ್ಲೂ ಒಮ್ಮತವಿದೆ. ನಾನು ಬಸ್‌ನಲ್ಲೇ ಪ್ರಯಾಣ ಮಾಡಲಿ, ರೈಲಿನಲ್ಲೇ ಪ್ರಯಾಣ ಮಾಡಲಿ, ವಿಮಾನದಲ್ಲೇ ಹಾರಾಡಲಿ ನಮ್ಮೂರಿನಿಂದ ಹೊರಟ ಮೇಲೆ ಮಧ್ಯದಲ್ಲಿ ಎಲ್ಲೂ ನಿಲ್ಲಬಾರದು. ನಿರಂತರವಾಗಿ ತಡೆರಹಿತ ಪ್ರಯಾಣ ಮಾಡಿ, ನೇರವಾಗಿ, ವೇಗವಾಗಿ ಹೋಗಿ ಗುರಿ ತಲುಪಬಿಡಬೇಕೆಂಬ ತಹತಹ. ಒಮ್ಮೊಮ್ಮೆ ನಮ್ಮ ಆಸೆಗೆ ವ್ಯತ್ಯಯ ಬರುತ್ತದೆ- ಯಾವ ಯಾವುದೋ ಕಾರಣಗಳಿಗಾಗಿ. ವಾಹನಗಳು ತಡೆರಹಿತವಾಗಿ ಓಡಬಹುದು, ಚಾಲಕರಿಗೆ ಆಗಬೇಕಲ್ಲ. ವಿಶ್ರಾಂತಿ ಬೇಕು, ಕೈಕಾಲು ಆಡಿಸಬೇಕು, ಮುಖ ತೊಳೆಯಬೇಕು. ವಿಮಾನದಲ್ಲಿ ಹಾರಾಡುತ್ತಿದ್ದರೆ ಪ್ಲೇನ್‌ಗಳನ್ನು ಬದಲಾಯಿಸಬೇಕು. ಖಂಡಾಂತರ ಪ್ರಯಾಣವಾದರೆ ಆಗಾಗ್ಗೆ ರಾಜತಾಂತ್ರಿಕ ನಿಗದಿ-ನಿಯಮಗಳನ್ನು ಪೂರೈಸಬೇಕು. ಹೀಗೆ ಮಾರ್ಗಮಧ್ಯದಲ್ಲಿ ನಿಲ್ಲಬೇಕಾಗಿ ಬಂದಾಗ ನಮ್ಮನ್ನು ನೀವು ನೋಡಬೇಕು. ಮಾರ್ಗ ಮಧ್ಯದಲ್ಲಿ ಸಿಗುವ ಊರುಗಳ ಬಗ್ಗೆ ಇನ್ನಿಲ್ಲದ ಸಿಟ್ಟು ಬರುತ್ತದೆ. ನಿಲ್ದಾಣಗಳಲ್ಲಿ ಸಿಗುವ ಜನಗಳ ಬಗ್ಗೆ ಇನ್ನಿಲ್ಲದ ಆಕ್ರೋಶ, ತಿರಸ್ಕಾರ. ಭೂಮಿ ಮೇಲೆ ಏಕೆ ಇಂತಹ ಊರುಗಳೆಲ್ಲ ಇರುತ್ತವೆ? ಏಕೆ ಎಲ್ಲ ಕಡೆಯೂ ಇಷ್ಟೊಂದು ಜನ? ನಮಗೆ ತೊಂದರೆ, ಹಿಂಸೆ, ಮುಜುಗರ ಆಗುತ್ತಿದೆ ಎಂದು ಇವರಿಗೆಲ್ಲ ಗೊತ್ತಾಗುವುದೇ ಇಲ್ಲವೆ? ನಾನಂತೂ ಆಕ್ರೋಶ, ತಿರಸ್ಕಾರದಲ್ಲಿ ಊರುಗಳ ಹೆಸರನ್ನೇ ತಿರುಚಿಬಿಡುತ್ತೇನೆ. ಹಾಗೆ ತಿರುಚಿದ ಹೆಸರುಗಳನ್ನು ವಕ್ರವಾಗಿ, ಕ್ಷಿಪ್ತವಾಗಿ ಮನಸ್ಸಿನಲ್ಲಿ ಹೇಳಿಕೊಳ್ಳುತ್ತೇನೆ. ಯಾರಾದರೂ ಪ್ರಯಾಣಿಕರ ಮುಖ ಎದುರಿಗೆ ಬಂದಾಗ ನಾನು ಮುಖವನ್ನು ತಿರುಚಿಕೊಂಡು ಆ ಕಡೆ ತಿರುಗಿಸಿಬಿಡುತ್ತೇನೆ. ಮನಸ್ಸು ಮತ್ತೆ ಸ್ಥಿಮಿತಕ್ಕೆ ಬರಬೇಕಾದರೆ ನಮ್ಮ ವಾಹನ ಮತ್ತೆ ಇನ್ನಿಲ್ಲದ ವೇಗದಿಂದ, ನಿರಂತರವಾಗಿ ಓಡಲು ಶುರುಮಾಡಬೇಕು. ಇಂತಹ ಇನ್ನಿಲ್ಲದ ಆತುರದಲ್ಲೇ ಒಮ್ಮೆ ನಮ್ಮ ಬಸ್ ನಿಂತ ಕಡೆಯಲ್ಲಿ ನಡುರಾತ್ರಿಯಲ್ಲಿ ರಸ್ತೆ ದಾಟುತ್ತಿದ್ದ ಕುಸುಮಾ ಸೊರಬರು ಅಪಘಾತಕ್ಕೆ ಈಡಾದರು. ಅದನ್ನೆಲ್ಲ ಗಮನಿಸುವ ವ್ಯವಧಾನ ನನಗಾಗಲಿ, ಬಸ್ಸಿನಲ್ಲಿದ್ದ ಪ್ರಯಾಣಿಕರಿಗಾಗಲಿ ಇರಲಿಲ್ಲ.
ಇದು ನನ್ನ ಮನಸ್ಸಿನ ಸ್ಥಿತಿ ಮಾತ್ರವೋ, ಉಳಿದ ದೇಶ-ಕಾಲಗಳ ಪ್ರಯಾಣಿಕರು ಕೂಡ ಇದೇ ಮನಸ್ಥಿತಿಯವರೋ ಎಂಬುದನ್ನು ಕೂಡ ಗಮನಿಸುತ್ತೇನೆ. ಎಲ್ಲರ ಮುಖಭಾವ, ದೇಹದ ಆತುರ, ಕಣ್ಣುಗಳ ಚಡಪಡಿಕೆ ನನ್ನದರಂತೆಯೇ ಇರುತ್ತದೆ. ಒಂದು ರೀತಿಯ ಸಮಾಧಾನ. ಆದರೆ ಈ ಸಮಾಧಾನ ಕ್ಷಣಿಕವಾದದ್ದು. ಇಲ್ಲ, ಇಲ್ಲ, ಹಾಗೆಲ್ಲ ಯೋಚಿಸುವುದು ತಪ್ಪು. ಯಾವುದೇ ಊರಾಗಲಿ, ನಿಲ್ದಾಣವಾಗಲಿ ಅಲ್ಲಿ ಸಿಗುವ ಜನರಾಗಲಿ ಯಾರೂ ಕೂಡ ನಮಗೆ ಮಾರ್ಗ ಮಧ್ಯದಲ್ಲೇ ಸಿಗಬೇಕು, ತೊಂದರೆ ಕೊಡಬೇಕು, ಹಿಂಸೆ ಮಾಡಬೇಕು ಎಂಬ ಭಾವನೆಯಿಂದ ಇರುವುದಿಲ್ಲ ಹಾಗೂ ನಮ್ಮ ಭಾವನೆಗಳು ಯಾರ ಮೇಲೂ ಯಾವ ಪ್ರಭಾವವನ್ನೂ ಬೀರುವುದಿಲ್ಲ. ನಮ್ಮ ಮನಸ್ಸಿನ ಸುಖಕ್ಕೆ ನಾವು ಹಾಗೆಲ್ಲ ಅಂದುಕೊಳ್ಳಬೇಕು ಅಷ್ಟೆ. ಆದರೆ ಗುರಿ ತಲುಪಿ, ಗುರಿಯೂರಿನಲ್ಲಿ ಕೆಲಸ-ಕಾರ್ಯಗಳೆಲ್ಲ ನಮ್ಮ ಮನಸ್ಸಿನ ಲೆಕ್ಕಾಚಾರಕ್ಕನುಗುಣವಾಗಿ ನಡೆದಾಗ, ಎಲ್ಲವೂ ನಿರಾಳವಾದಾಗ ಸ್ವಲ್ಪ ತಾಳ್ಮೆಯಿಂದ ಯೋಚಿಸಲು ಪ್ರಾರಂಭಿಸುತ್ತೇನೆ.
ಒಂದು ಕಾಲದಲ್ಲಿ ಮಾತ್ರವಲ್ಲ, ಈಗಲೂ ಕೂಡ ನಮ್ಮ ಊರು ಮಾರ್ಗ ಮಧ್ಯದಲ್ಲೇ ಇರುವುದು. ಅದು ಪ್ರಾರಂಭದ ಬಿಂದುವೂ ಅಲ್ಲ. ತಲುಪಬೇಕಾದ ಗುರಿಯೂ ಅಲ್ಲ. ಹಾಗಾಗಬೇಕಾದ ಗುರಿಯೇ ಊರಿಗೆ ಇರಲಿಲ್ಲ. ಮೇಲಾಗಿ ನಮಗೂ ಕೂಡ ಮಾರ್ಗ ಮಧ್ಯದಲ್ಲಿ, ಮಾರ್ಗದುದ್ದಕ್ಕೂ ಒಂದಾದ ಮೇಲೆ ಒಂದು ಊರು ಸಿಗುತ್ತಿದ್ದವು. ಊರಿಗೆ ಮುಂಚೆ ಸಂತೆ ಮಾಳ, ಹೊಲ, ಗದ್ದೆ, ತೋಟ, ನಾಲೆ-ಗೋಮಾಳ ಕೂಡ ಸಿಗುತ್ತಿದ್ದವು. ಎಲ್ಲ ಊರುಗಳಲ್ಲೂ ನಮ್ಮಂಥ ಜನರೇ ಬಸ್‌ಗೆ ಹತ್ತುತ್ತಿದ್ದರು, ಇಳಿಯುತ್ತಿದ್ದರು, ನಮ್ಮ ಪಕ್ಕ ಕೂರುತ್ತಿದ್ದರು, ಎದುರಿಗೆ ನಿಲ್ಲುತ್ತಿದ್ದರು. ಬರೇ ಮುಖದ ವರಸೆಯ ಮೇಲೆ ಕೊನೆಯ ಪಕ್ಷ ಒಂದು ಕಸಬಾದ, ಒಂದು ತಾಲೂಕಿನ ಜನರೆಲ್ಲರ ಪರಿಚಯವಿರುತ್ತಿತ್ತು. ಪರಸ್ಪರ ಮಾತನಾಡದೆ ಹೋದರೂ, ಬಸ್ ತುಂಬಾ ಮಾತು, ನಗು, ತಮಾಷೆ. ಯಾರನ್ನೂ ಉದ್ದೇಶಿಸಿ ಅಲ್ಲ, ಎಲ್ಲರನ್ನೂ ಉದ್ದೇಶಿಸಿ. ಕಳೆದ ನಾಲ್ಕು ದಶಕಗಳಲ್ಲಿ ನಾನು ಆರೇಳು ಲಕ್ಷ ಕಿ.ಮೀ. ಸುತ್ತಿರಬಹುದು. ಇಷ್ಟು ಉದ್ದನೆಯ, ದೀರ್ಘ ಪ್ರಯಾಣದಲ್ಲಿ ಒಬ್ಬನೇ ಒಬ್ಬ ಆತ್ಮೀಯ ಕೂಡ ಸಿಗಲಿಲ್ಲ. ಯಾರೊಬ್ಬರ ಮುಖವೂ ನೆನಪಿನಲ್ಲಿ ಉಳಿದಿಲ್ಲ. ನನ್ನ ಬಗ್ಗೆ ಕೂಡ ಇತರರಿಗೆ ಹೀಗೇ ಅನಿಸಿರಬೇಕು. ಪ್ರಯಾಣವನ್ನು ಅನುಭವವೇದ್ಯವೆಂದು ಕರೆಯುವುದು ಸುಮ್ಮನೆ ಬಾಯಿ ಚಪಲಕ್ಕಿರಬೇಕಷ್ಟೆ.
ಊರಿಂದ ಊರಿಗೆ ಪ್ರಯಾಣದ ಮಾತು ಬಿಡಿ, ನಮ್ಮೂರೊಂದರಲ್ಲೇ ಎಷ್ಟೊಂದು ನಿಲ್ದಾಣಗಳಿದ್ದವು. ಬಸ್ ಒಂದು ಹೋಟೆಲ್ ಎದುರಿಗೆ ನಿಂತಿದೆ. ಡ್ರೆçವರ್ ಮಾಮನ, ಕಂಡಕ್ಟರ್ ಭಾವನ ಫಲಾರ ಆಗುತ್ತಿದೆ. ಬಸ್ ಹತ್ತಬೇಕಾದವರೆಲ್ಲ ಇವರಿಬ್ಬರೂ ಇಡ್ಲಿ, ವಡೆ, ಉಪ್ಪಿಟ್ಟು ತಿನ್ನುವುದನ್ನು, ಕಾಫಿ ಗುಟುಕರಿಸುವುದನ್ನು ನೋಡುತ್ತ ನಿಂತಿ¨ªಾರೆ. ತಿಂಡಿ ತಿನ್ನುವುದರಲ್ಲಿ ಇಬ್ಬರ ನಡುವೆಯೇ ಆದರೂ ನಾಲ್ಕಾರು ನಿಮಿಷಗಳ ವ್ಯತ್ಯಾಸವಿದೆ. ಪ್ರಯಾಣಿಕರು ನಿಧಾನವಾಗಿ ಮಾತನಾಡುತ್ತ, ಆಕಳಿಸುತ್ತ¤, ಮೈ ಮುರಿಯುತ್ತ ಒಬ್ಬೊಬ್ಬರಾಗಿ ಬಸ್ ಹತ್ತಿದರು. ಹತ್ತು ಹೆಜ್ಜೆ ಹೋಗಿಲ್ಲ, ಬಸ್ ನಿಂತೇಬಿಟ್ಟಿತು. ಪಕ್ಕದ ಕೋಡಿಹಳ್ಳಿಯಿಂದ ಬಸ್ ಹತ್ತಲು ಬರುತ್ತಿರುವವರು ರಸ್ತೆಯ ತುದಿಯಲ್ಲಿ ಕಂಡರಪ್ಪ. ಅವರೆಲ್ಲರೂ ಬಂದು ಬಸ್ ಒಳಗೆ ಕೂರುವ-ನಿಲ್ಲುವ ತನಕ ಬಸ್ ಹಾಗೇ ನಿಂತಿತ್ತು. ಒಳಗೆ ಬಂದವರು ಈಗಾಗಲೇ ಕುಳಿತಿರುವವರ ಹತ್ತಿರ, ಹಿಂದಿನ ಮಾತುಕತೆಯನ್ನು ಮುಂದುವರಿಸುವರು. ಇನ್ನು ಇಪ್ಪತ್ತು ಹೆಜ್ಜೆಯ ನಂತರ ಅಧಿಕೃತ ಬಸ್ ನಿಲ್ದಾಣ. ಬಸ್ ಈಗ ನಿಲ್ಲಲೇಬೇಕಲ್ಲ. ಮತ್ತೆ ಜನ ಬಸ್ ಹತ್ತಿದರು. ಮುಂದಿನ ಬಸ್‌ಗೆ ಬಂದಿದ್ದವರು ಕೂಡ ಈಗಲೇ ಬಸ್ ಹತ್ತಿದ್ದರು. ತಪ್ಪು ಗೊತ್ತಾದ ತತ್‌ಕ್ಷಣ ಬಸ್ ಇಳಿದರು. ಬಸ್ ಹತ್ತುವುದು ನಾಲ್ಕು ಜನವಾದರೆ, ಅವರನ್ನು ಹತ್ತಿಸುವವರು ನಲವತ್ತು ಜನ. ಇವರಲ್ಲಿ ಕೆಲವರು ಮುಂದಿನ ನಿಲ್ದಾಣದ ತನಕವೂ ಬಸ್ ಹಿಂದೆ ನಡೆದುಕೊಂಡು ಬಂದು, ಪ್ರಯಾಣ ಹೊರಟಿರುವ ಬಂಧುಗಳನ್ನು ಮತ್ತಷ್ಟು ಮಾತನಾಡಿಸುವರು, ಇನ್ನೊಮ್ಮೆ ಸುಖ ಪ್ರಯಾಣ ಕೋರುವರು. ಮರೆತಿರುವ ಎಲೆ ಅಡಕೆ, ಕಡ್ಡಿ ಹುಡಿ ಕೂಡ ಕೊಟ್ಟುಬಿಡುವರು. ಸ್ವಲ್ಪ ಜುಲುಮೆ ಮಾಡಿದರೂ ಸಾಕು ಸುಖ ಪ್ರಯಾಣ ಕೋರುತ್ತಿದ್ದವರೇ ಬಸ್ ಹತ್ತಿಬಿಡುತ್ತಿದ್ದರು. ಇನ್ನು ಇಪ್ಪತ್ತೆçದು ಹೆಜ್ಜೆಯ ನಂತರ ಪೊಲೀಸ್ ಸ್ಟೇಷನ್. ಇನ್‌ಸ್ಪೆಕ್ಟರ್ ಕುಟುಂಬವೋ, ದಫೇದಾರನ ಷಡ್ಡಕನೋ ಬಸ್ ಬಳಿಗೆ ಬರುವರು. ಅದಕ್ಕಾಗಿ ಬಸ್ ನಿಲ್ಲಬೇಕು. ಪೊಲೀಸಿನವರಾದ್ದರಿಂದ ಆತುರ ಪಡುವ ಹಾಗೂ ಇಲ್ಲ, ಆತುರ ಪಡಿಸುವ ಹಾಗೂ ಇಲ್ಲ. ಲಗೇಜ್ ಮಾತ್ರ ಹತ್ತು ಜನರದ್ದು. ಬಾಳೆಗೊನೆ, ಬೆಲ್ಲದ ಪಿಂಡಿ, ತೋಟದ ತರಕಾರಿ, ಸಣ್ಣಕ್ಕಿ ಇವೆಲ್ಲ ಊರ ಕಾಣಿಕೆಯಾದ್ದರಿಂದ ಉಳಿದ ಪ್ರಯಾಣಿಕರು ಒಡೆತನದ ಭಾವದಿಂದಲೂ, ಅಸೂಯೆಯಿಂದಲೂ ಕಣ್ಣು ಹಾಕುವರು. ಈಗ ಪ್ರಯಾಣಿಕರಿಗೆ ಒಂದು ರೀತಿಯ ಅಂತಿಮ ಬೀಳ್ಕೊಡುಗೆ. ಸುಖ ಪ್ರಯಾಣ ಕೋರಲು ಬಂದವರೆಲ್ಲ ವಾಪಸು ಹೊರಡುವರು. ಬಸ್ ಒಳಗೆ ಕುಳಿತವರು, ಸರಿ, ಇನ್ನು ಈ ಜಗತ್ತು ತಮ್ಮದೆಂದು ಇಡೀ ಬಸ್‌ನೊಳಗಿರುವವರನ್ನೆಲ್ಲ ಒಮ್ಮೆ ಗಮನಿಸುವರು. ಓ, ಎಲ್ಲರೂ ಗೊತ್ತಿರುವವರೇ, ಎಲ್ಲರಿಗೂ ಗೊತ್ತಿರುವವರೇ.
ಅಲ್ಲಿಂದ ನೂರು ವಿೂàಟರ್ ಕ್ರಮಿಸಿದರೆ ಶೆಟ್ಟರ ಮನೆಗಳು. ಊರಿಗೇ ಕುಳಸ್ಥರು. ಬಸ್ ನಿಲ್ಲಲೇಬೇಕು. ಅವರ ಶ್ರೀಮಂತಿಕೆಗನುಗುಣವಾಗಿ, ನಿಧಾನವಾಗಿ ಸೀಟುಗಳಲ್ಲಿ ವಿರಾಜಮಾನರಾಗುವರು. ಹೆಂಗಸರು ಬಸ್ ಹತ್ತಿದರೆ, ಅವರ ಒಡವೆಗಳ, ಸೀರೆಯ ಒಂದು ಅಂದಾಜನ್ನು ಬಸ್ ಒಳಗೆ ಇರುವ ಎಲ್ಲ ಕಣ್ಣುಗಳ ಜೋಡಿಯು ತೆಗೆಯುವುದು. ಗಂಡಸರಾದರೆ ನಮಸ್ಕಾರವು ಬೀಳುವುದು. ಬಸ್‌ಗೆ ಊರು ಬಿಡಲು ಇಷ್ಟವಿಲ್ಲವೋ ಅಥವಾ ಬಸ್ಸಿನ ವೇಗವೇ ಅಷ್ಟೊಂದು ಕಡಿಮೆಯೋ ಬಸ್‌ನ ಗತಿಯಲ್ಲೇ ಒಂದು ರೀತಿಯ ಉದಾಸೀನ. ನಾಲ್ಕು ನಿಮಿಷದ ನಂತರ ಊರಿನ ಹಿಂದಿನ ಬೀದಿಗಳು. ಮುಖ್ಯ ರಸ್ತೆಗೆ ಬಂದು ಸೇರುವ ಚೌಕ ಬರುವುದು. ಅಲ್ಲಿ ಪ್ರತಿದಿನವೂ ಬಸ್ ಹತ್ತುವವರು ಇದ್ದೇ ಇರುತ್ತಾರೆಂದಲ್ಲ. ಒಬ್ಬರಾದರೂ ಸರಿ ಒಂದು ವಾರದಲ್ಲಿ. ಆದರೂ ಅವರು ನಮ್ಮ ಊರಿನವರಲ್ಲವೇ? ಅದಕ್ಕಾಗಿ ವಾಡಿಕೆಯಿಂದಲೂ, ಮರ್ಯಾದೆಯಿಂದಲೂ ಕಾಯಲಾಗುವುದು.
ನಂತರ ಊರಿನ ಸ್ಕೂಲುಗಳು, ಸಾಬರ ಕೇರಿ, ಜನಗಳ ಆಸ್ಪತ್ರೆ, ದನದ ಆಸ್ಪತ್ರೆ, ಎತ್ತುಗಳ ಕಾಲಿಗೆ ಲಾಳ ಹೊಡೆಯುವ ಅಂಗಡಿ, ಸೆಲೂನು, ಎಲ್ಲವೂ ಒಟ್ಟಿಗೇ. ಬಸ್‌ಗೆ ಇದೊಂದು ಮೇಜರ್ ನಿಲ್ದಾಣ. ಕೊಡೆ, ಚೀಲ, ಕೋಳಿ, ಕುರಿ, ಗೂರಲು ರೋàಗದವರು, ನಾಯಕಸಾನಿ, ಇಂಗ್ಲೀಷ್ ಕಲಿಸುವ ಮೇಷ್ಟರು, ಎಲ್ಲ ವರ್ಣಾಶ್ರಮಗಳ ಜನರೂ ಬಸ್ ಹತ್ತುವರು. ಬಸ್ ಒಳಗೆ ಒಂದು ರೀತಿಯ ಜಾತ್ರೆಯ, ಸಂತೆಯ ವಾತಾವರಣ. ಒಬ್ಬರ ಮೈಮೇಲೆ ಇನ್ನೊಬ್ಬರು ಕೂತ ಅನುಭವ. ಈಗ ಒತ್ತಿಕೊಳ್ಳಬೇಕೆಂದರೂ ಸ್ಥಳವಿಲ್ಲ, ಒತ್ತರಿಸಿಕೊಳ್ಳಬೇಕೆಂದರೂ ಜಾಗವಿಲ್ಲ. ನಂತರ ಊರ ಗೌಡರ ಮನೆಗಳ ದೊಡ್ಡ ಕಾಂಪೌಂಡ್. ಕಾಂಪೌಂಡ್ ಮುಂದೆ ಕಬ್ಬಿಣದ ದೊಡ್ಡ ಗೇಟು. ಗೇಟ್ ಒಳಗಡೆಯಿಂದ ಯಾರು ಬರುತ್ತಾರೋ ಇಲ್ಲವೋ ಎಂಬುದೇ ನಿಗದಿಯಿಲ್ಲ. ಬಸ್ ಆದರೂ ಊರ ಗೌರವಕ್ಕಾಗಿ ಕಾಯಬೇಕು. ಕಾಯುತ್ತ ನಿಂತೇಬಿಡುತ್ತಿತ್ತು.
ನನ್ನಂತಹ ಕೆಲವರಾದರೂ ಬಸ್‌ನಿಂದ ಇಳಿದು, ರಸ್ತೆಗೆ ಆದ ಹಾಗೆ ಇರುವ ಮನೆಗಳ ಜಗುಲಿಗಳ ಮೇಲೆ ಚೌಕಾಭಾರ ಆಡುತ್ತಿರುವದನ್ನು ನೋಡುತ್ತ ನಿಲ್ಲುವೆವು. ಕುಂಟೇಬಿÇÉೆ ಆಡುವ ಹುಡುಗಿಯರು ನೆಗೆಯುವಾಗ, ಲಂಗವನ್ನು ಕೈಯಲ್ಲಿ ಎತ್ತಿ ಹಿಡಿದುಕೊಳ್ಳುವುದರಿಂದ ಅವರ ಕಾಲಿನ ಮಾಂಸಖಂಡಗಳು ಎಲ್ಲರ ಕಣ್ಣಿಗೂ ಬೀಳುವುದು. ಅದನ್ನು ನೋಡಿದ ನಂತರ ನಾವು ಒಬ್ಬರನ್ನೊಬ್ಬರು ನೋಡಿಕೊಳ್ಳುತ್ತಿದ್ದೆವು.
ಆಮೇಲೆ ಬರುವುದು ಸಂತೆಮಾಳ, ಪಟ್ಟಲದಮ್ಮನ ಗುಡಿ, ಸಿನೆಮಾ ಹಾಲ್, ದಿನಸಿ-ಜವಳಿ ಅಂಗಡಿಗಳು, ಹೋಟೆಲ್, ಹಲಸಿನ ತೊಳೆ, ಸೌತೆಕಾಯಿ, ಕಲ್ಲಂಗಡಿ, ಕಬೂìಜ ಮಾರುವ ಅಂಗಡಿ. ಬಸ್ ನಿಂತೇಬಿಡುತ್ತಿತ್ತು. ಬೇರೆ ಬೇರೆ ದಿಕ್ಕುಗಳಿಂದ ಬರುವ ಬಸ್‌ಗಳ ಗಡಿಬಿಡಿ. ಕಂಡಕ್ಟರ್ ಪ್ರತಿಯೊಬ್ಬರಿಗೂ ಟಿಕೆಟ್ ಕೊಟ್ಟು, ದುಡ್ಡು ಪಡೆದು ತಲೆ ಎಣಿಸಿ, ಎಲ್ಲವನ್ನೂ ಖಚಿತ ಮಾಡಿಕೊಂಡು ಬಸ್ ಏಜೆಂಟ್ ಬಸ್‌ನಿಂದ ಕೆಳಗಿಳಿದ ಮೇಲೆ ಬಸ್ ನಮ್ಮೂರ ಎಲ್ಲ ನಿಲ್ದಾಣಗಳನ್ನು ನಿರ್ವಹಿಸಿ ಕೊನೆಗೂ ನಮ್ಮೂರಿನಿಂದ ಹೊರಟೇಬಿಡುತ್ತಿತ್ತು. ಇಷ್ಟೊಂದು ನಿಲ್ದಾಣ, ಇಷ್ಟೊಂದು ಚಟುವಟಿಕೆ, ಇಷ್ಟೆಲ್ಲ ದೂರ, ಇಷ್ಟೆಲ್ಲ ಜನ ಸೇರಿದರೂ ಕೇವಲ ಮೂರು ಫರ್ಲಾಂಗ್ ಕೂಡ ಆಗುತ್ತಿರಲಿಲ್ಲ. ಇಷ್ಟಾಗಿಯೂ ಇವೆಲ್ಲ ಅಧಿಕೃತ ರೂಢಿಗತ ನಿಲ್ದಾಣಗಳು. ಯಾರದಾದರೂ ಮನೆಯಲ್ಲಿ ಲಗ್ನವಾಗಿದ್ದರೆ, ಆ ಮನೆಯಿಂದ ಹೆಣ್ಣು ಗಂಡಿನ ಊರಿಗೆ ಹೊರಟಿದ್ದರೆ, ಬಸ್ ಆ ಮನೆಯ ಮುಂದೆ ನಿಲ್ಲಬೇಕಾಗುವುದು ಕಡ್ಡಾಯವೇ. ಯಾರದಾದರೂ ಮನೆಯಲ್ಲಿ ತಿಥಿಯೋ, ಹಾಲು-ತುಪ್ಪವೋ ಜರುಗುತ್ತಿದ್ದರೆ, ಆ ಮನೆಯ ಮುಂದೆ ಜಮಾಯಿಸಿದ ಅಕ್ಕಪಕ್ಕದ ಊರುಗಳಿಂದ ಬಂದಿರುವ ಜನಸಂದಣಿಯ ವಿಶೇಷ ಸೇವೆಗಾಗಿಯೂ ಬಸ್ ನಿಲ್ಲುತ್ತಿತ್ತು. ಹೀಗೆ ಒಂದರ್ಧ ಕಿ. ಮೀ. ಒಳಗೆ ಹತ್ತು-ಹನ್ನೆರಡು ನಿಲ್ದಾಣಗಳು ಬಂದರೂ ಯಾರೂ ಗೊಣಗುತ್ತಿರಲಿಲ್ಲ. ತಾಳ್ಮೆ ಕಳೆದುಕೊಳ್ಳುತ್ತಿರಲಿಲ್ಲ. ನಾನೇ ಹೆಚ್ಚು ಕಡಿಮೆ ಊರಿನಲ್ಲಿರುವ ಬಹುತೇಕ ನಿಲ್ದಾಣಗಳಿಂದ ಒಂದಲ್ಲ ಒಂದು ಸಂದರ್ಭದಲ್ಲಿ ಬಸ್ ಹತ್ತಿದ್ದೇನೆ. ಬಸ್ ನಿಲ್ಲಲಿ, ಜನ ಹತ್ತಲಿ, ನಮ್ಮನ್ನು ಮಾತನಾಡಿಸಲೆಂದೇ ನಾವೆಲ್ಲರೂ ಕಾಯುತ್ತಿ¨ªೆವು. ಯಾರು ಯಾರು ಬರುತ್ತಾರೆ, ಯಾವ ರೀತಿಯ ಬಟ್ಟೆ ಹಾಕಿಕೊಂಡಿರುತ್ತಾರೆ, ಕೈಯಲ್ಲಿ ಹಿಡಿದುಕೊಂಡು ಬರುವ ಚೀಲದ ಬಣ್ಣ ಯಾವುದು, ಯಾವ ಯಾವ ಕೆಲಸಕ್ಕೆ ಯಾವೂರಿಗೆ ಹೋಗುತ್ತಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿರುತ್ತಿತ್ತು. ಹೀಗೆ ಎಲ್ಲವೂ ಎಲ್ಲರಿಗೂ ಗೊತ್ತಿದ್ದರಿಂದಲೇ ಎಲ್ಲರಿಗೂ ಕಾಯುವ ತಾಳ್ಮೆ, ವ್ಯವಧಾನವಿರುತ್ತಿತ್ತು.
ಈಗ ಇದೆಲ್ಲವನ್ನೂ ಯಾರಿಗೆ ಹೇಳಲಿ? ಕುಟುಂಬದ ಸದಸ್ಯರ ಜೊತೆ ಚರ್ಚಿಸುವಷ್ಟು ಸಮಯ ಮತ್ತು ವ್ಯವಧಾನ ಸಿಗುತ್ತಿಲ್ಲವೆಂದು ಮೊದಲೇ ಹೇಳಿದೆ. ಅವರಿಗೆ ಮಾರ್ಗ ಮಧ್ಯವು ಬೇಕಿಲ್ಲದೆಯೂ ಇರಬಹುದು. ಅವರನ್ನೇಕೆ ಸುಮ್ಮನೆ ಅನ್ನಬೇಕು. ಜೊತೆಯಲ್ಲಿ ಪ್ರಯಾಣಿಸುವ ಪಯಣಿಗರಲ್ಲೂ ಈ ಉತ್ಸಾಹ ಕಂಡುಬರುತ್ತಿಲ್ಲ.
ಮಾರ್ಗ ಮಧ್ಯದ ನಿಲ್ದಾಣಗಳಿರಲಿ, ಮನೆಯ ಅಕ್ಕ-ಪಕ್ಕ ಇರುವ ನಿಲ್ದಾಣಗಳು ಕೂಡ ನನಗೆ ಗೊತ್ತಿಲ್ಲ. ನಮಗೆ ಏನಾದರೂ ಗೊತ್ತಿಲ್ಲವೆಂದರೆ ಆಳದಲ್ಲಿ ಅದು ನಮಗೆ ಬೇಕಿಲ್ಲವೆಂದೇ ಅರ್ಥ. ಅದು ಬೇಕಿಲ್ಲವೆಂದು ಬೇಸರವೂ ಆಗದಷ್ಟು ಮನಸ್ಸು ಯಾಂತ್ರಿಕವಾಗಿದೆ. ಯಾವಾಗಲೂ ಚಲಿಸುತ್ತಿರುವ, ಯಾವಾಗಲೂ ಆವೇಗದಲ್ಲಿರುವ ಮನಸ್ಸು ಯಾವೊಂದು ಭಾವನೆಯೂ ಮೂಡದಷ್ಟು, ಸೂಕ್ಷ್ಮವೂ ಗೊತ್ತಾಗದಷ್ಟು ಜಡವಾಗಿಬಿಟ್ಟಿರಬಹುದು.
ಕೆ. ಸತ್ಯನಾರಾಯಣ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ
Hysteroscopy: ಸಂತಾನಹೀನತೆಯ ಪತ್ತೆ ಮತ್ತು ಚಿಕಿತ್ಸೆಗೆ ಒಂದು ಅತ್ಯವಶ್ಯಕ ಕಾರ್ಯವಿಧಾನ
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ಅವಹೇಳನಕಾರಿ ಪದಬಳಕೆ: ಪ್ರಸಾದ್ ರಾಜ್ ಕಾಂಚನ್ ಖಂಡನೆ
Puttur: ತೆಂಕಿಲದಲ್ಲಿ ರಿಕ್ಷಾ ಅಪಘಾತ: ಚಾಲಕ ಸಾವು
Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್ ಬಾಂಡ್’ ಚಿತ್ರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.