ಸಾಹಿತ್ಯೋತ್ಸವಗಳ ಪರ್ವಕಾಲ
Team Udayavani, Sep 2, 2018, 6:00 AM IST
ಭಾರತೀಯ ಭಾಷೆಗಳಲ್ಲಿ ಈಗ ಸಾಹಿತ್ಯೋತ್ಸವಗಳ ಪರ್ವಕಾಲ. ಈಗ್ಗೆ ಹತ್ತು-ಹನ್ನೆರಡು ವರ್ಷಗಳ ಹಿಂದೆ ಸಾಹಿತ್ಯೋತ್ಸವಗಳೆಂದರೆ- ಅವು ನಮ್ಮ ಕನ್ನಡ ಸಾಹಿತ್ಯ ಪರಿಷತ್ತು ಪ್ರತಿವರ್ಷ ನಡೆಸುವ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ರೀತಿಯ ಬೃಹತ್ ಸಮ್ಮೇಳನಗಳು. ಬಂಗಾಲಿ, ಅಸ್ಸಾಮಿಯಾ, ಮರಾಠಿ ಮುಂತಾದ ಕೆಲವು ಭಾರತೀಯ ಭಾಷೆಗಳು ಪ್ರತಿವರ್ಷ ನಡೆಸುವ ಸಾಹಿತ್ಯ ಸಮ್ಮೇಳನಗಳು ಹೆಚ್ಚುಕಡಿಮೆ ನಮ್ಮ ಕನ್ನಡ ಸಾಹಿತ್ಯ ಪರಿಷತ್ತು ನಡೆಸುವ ಸಮ್ಮೇಳನಗಳ ಹಾಗೆಯೇ ಒಂದು ಜಾತ್ರೆಯ ಗುಣವನ್ನು, ಭಾಷಾಭಿಮಾನದ ಗುರುತಾಗಿ, ಉತ್ಸಾಹದ ಪ್ರವಾಹವಾಗಿ, ಪುಸ್ತಕ ಮಾರಾಟದ ಭರಾಟೆಗಳಾಗಿ, ಅಭಿಮಾನಿ ಓದುಗರು ತಮ್ಮ ಮೆಚ್ಚಿನ ಲೇಖಕರ ದರ್ಶನಾಕಾಂಕ್ಷಿಗಳಾಗಿ ಓಡಾಡುವ ಪರದಾಡುವ ಬೃಹತ್ ಪೆಂಡಾಲುಗಳ ಕೆಳಗೆ ನಡೆಯುವ ಸಾಂಸ್ಕೃತಿಕ ಚಟುವಟಿಕೆಗಳೇ ಆಗಿದ್ದವು ಮತ್ತು ಆಗಿವೆ! ಅಲ್ಲಿ ಗಂಭೀರ ಸಾಹಿತ್ಯಕ ಚರ್ಚೆಗಳಿಗಿಂತಲೂ ಹೆಚ್ಚು ಭಾಷಾಭಿಮಾನದ ಮಹಾಪೂರವನ್ನೇ ಕಾಣುತ್ತೇವೆ. ಈಗೀಗ ಅದು ಲೇಖಕರನ್ನೂ ಒಳಗೊಂಡಂತೆ ಬೇಕುಬೇಕಾದವರ ಜೊತೆ ಸೆಲ್ಫಿ ಚಿತ್ರಿಸಿಕೊಳ್ಳುವ ಸ್ಥಳಗಳಾಗಿಯೂ ಮಾರ್ಪಡುತ್ತಿವೆ. ಇಂಥ ಜಾತ್ರೆಗಳ ಬಗ್ಗೆ ಪರ-ವಿರೋಧದ ಚರ್ಚೆ ಇದ್ದದ್ದೇ. ಅನೇಕ ಸಂದರ್ಭಗಳಲ್ಲಿ ಯಾಕಾದರೂ ಈ ಜಾತ್ರೆಗಳು ಬೇಕು ಅಂತಲೂ, ಇಲ್ಲ ಇಂಥವು ನಡೆಯಲೇಬೇಕು ಎಂಬ ನಿಲುವುಗಳಲ್ಲಿ ನಾವೆಲ್ಲರೂ ಇರುತ್ತೇವೆ.
ಗಂಭೀರ ಸಾಹಿತ್ಯಾವಲೋಕನ, ವಾಚನ, ವಿಚಾರವಿಮರ್ಶೆ ನಡೆಯುತ್ತಲೇ ಇರಲಿಲ್ಲ ಎಂದಲ್ಲ. ರಾಜ್ಯ ಸಾಹಿತ್ಯ ಅಕಾಡೆಮಿಗಳು, ಕೇಂದ್ರ ಸಾಹಿತ್ಯ ಅಕಾಡೆಮಿ ಮುಂತಾದ ಕೆಲವು ಸಂಸ್ಥೆಗಳು ತಮ್ಮ ನಿಯಮಾವಳಿಗನುಗುಣವಾಗಿ ಗಂಭೀರ ಸಾಹಿತ್ಯಾವಲೋಕನ ನಡೆಸುತ್ತಿರುವುದುಂಟು.
ಅದಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರತಿವರ್ಷ ತನ್ನ ಬಹುಮಾನ ವಿತರಣಾ ಸಂದರ್ಭದಲ್ಲಿ ನಡೆಸುವ “ಫೆಸ್ಟಿವಲ್ ಆಫ್ ಲೆಟರ್’ ಒಂದು ಒಳ್ಳೆಯ ಉದಾಹರಣೆ. ಇದನ್ನೇ ಉದಾಹರಿಸುತ್ತಿರುವುದಕ್ಕೆ ಕಾರಣ ಅದು ಪಡೆದುಕೊಳ್ಳುವ ಅಖೀಲ ಭಾರತೀಯ ಸ್ವರೂಪಕ್ಕಾಗಿ. ಬಹುತೇಕ ಮುಖ್ಯ ಭಾರತೀಯ ಭಾಷೆಗಳನ್ನು ಪ್ರತಿನಿಧಿಸುವ ಲೇಖಕ-ಲೇಖಕಿಯರು ವಾಚನ, ಚರ್ಚೆಗಳಲ್ಲಿ ಭಾಗವಹಿಸುತ್ತಾರೆ.
ಜೈಪುರ ಸಾಹಿತ್ಯೋತ್ಸವ
ಸಾಹಿತ್ಯದ ಹೆಸರಿನಲ್ಲಿ ನಡೆಸಲಾಗುವ ಇಂಥ ಕೂಟಗಳು ಕಳೆದ ಹತ್ತು-ಹನ್ನೆರಡು ವರ್ಷಗಳಿಂದೀಚೆಗೆ ಬೇರೆಯದೇ ಸ್ವರೂಪಗಳನ್ನು ಪಡೆದುಬಿಟ್ಟಿವೆ. ಇಂಥ ಮಾದರಿಗೆ ಚಾಲನೆ ಸಿಕ್ಕಿದ್ದು “ಜೈಪುರ ಸಾಹಿತ್ಯೋತ್ಸವ’. ಜೈಪುರದಲ್ಲಿ ನಡೆದ ಪ್ರಾರಂಭದ ಉತ್ಸವಗಳಲ್ಲಿ ಇದು ಭಾರತೀಯರಲ್ಲದ ವಿದೇಶಿ ಲೇಖಕರ ಹಾಜರಿಯಿಂದಾಗಿ ದೇಶಾದ್ಯಂತ ಗಮನ ಸೆಳೆಯಿತು. ನೊಬೆಲ್ ವಿಜೇತರಾದಿಯಾಗಿ ಬಹುಚರ್ಚಿತ, ಬಹುವಿವಾದಕ್ಕೀಡಾದ ಲೇಖಕ-ಲೇಖಕಿಯರು ಭಾರತಕ್ಕೆ ಭೆಟ್ಟಿ ಕೊಡಬಹುದಾದ ಒಂದು ಪ್ರವಾಸಿ ಮೇಳಗಳೇ ಆದವು. ಜೈಪುರ ಸಾಹಿತ್ಯೋತ್ಸವ ಪ್ರಾರಂಭವಾಗುವುದಕ್ಕಿಂತಲೂ ಮುಂಚಿನಿಂದ ಅತ್ಯಂತ ಪ್ರಸಿದ್ಧ ಪ್ರವಾಸಿಕೇಂದ್ರ. ದಿಲ್ಲಿಗೆ ಹತ್ತಿರವಾದದ್ದು. ದಿಲ್ಲಿ, ಆಗ್ರಾ, ಜೈಪುರ, ಉದಯಪುರ ಈ ಮುಂತಾದ ಕೆಲವು ಸ್ಥಳಗಳು ಅತ್ಯಂತ ಪ್ರಸಿದ್ಧ ಪ್ರವಾಸಿ ಕೇಂದ್ರಗಳಾಗಿವೆ. ವಿದೇಶಿಯರು ಹೆಚ್ಚು ಸಂಖ್ಯೆಯಲ್ಲಿ ಭೇಟಿ ಕೊಡುತ್ತಾರೆ. ಜೈಪುರ ಸಾಹಿತ್ಯೋತ್ಸವವನ್ನು ಆಯೋಜಕರು ವಿದೇಶಿಯರಿಗೆ ಅನುಕೂಲಕರವಾಗಿರುವ ಹವಾಮಾನ ಇದ್ದಾಗಲೇ ನಡೆಸುವುದು! ಇದರಿಂದ ಅನೇಕ ವಿದೇಶಿ ಲೇಖಕರು ಅಲ್ಲಿಗೆ ಬಂದು ನಂತರ ಸುತ್ತಮುತ್ತಲ ಪ್ರವಾಸಿ ಕೇಂದ್ರಗಳನ್ನು ಭೇಟಿಮಾಡಿ ಹಿಂತಿರುಗುತ್ತಾರೆ. ಎಷ್ಟೇ ಆಗಲಿ, ಲೇಖಕರು ಪ್ರವಾಸಪ್ರಿಯರಲ್ಲವೇ! ಹೀಗೆ, ಪ್ರಾರಂಭವಾದ ಜೈಪುರ ಸಾಹಿತ್ಯೋತ್ಸವಕ್ಕೆ ಸಿಕ್ಕ ಅಪಾರ ಪ್ರಚಾರ ದೇಶೀಯ ಭಾಷಾ ಲೇಖಕರ ಕೆಂಗಣ್ಣಿಗೆ ಗುರಿಯಾದದ್ದೂ ಉಂಟು. ಎರಡು-ಮೂರು ದಿನಗಳ ಕಾಲ ನಡೆಯುವ ಉತ್ಸವವಿಡೀ ವಿದೇಶಿ ಸಾಹಿತಿಗಳ ಇಂಗ್ಲಿಶ್ ಭಾಷೆಯ ವಿಚಾರಸಂಕಿರಣಗಳಾದವು. ನಂತರ ಯಾವುದಾದರೂ ಕೆಲವು ಗೋಷ್ಠಿಗಳಲ್ಲಿ ಕೆಲವು ಭಾರತೀಯ ಲೇಖಕರ ಪ್ರತಿನಿಧೀಕರಣ ಪ್ರಾರಂಭವಾಯಿತು. ಅಲ್ಲಿ ಇನ್ನೊಂದು ಸಮಸ್ಯೆ! ಇಂಗ್ಲಿಶ್ ಭಾಷೆಯಲ್ಲಿ ಸಂವಹನ ಮಾಡಬಲ್ಲ ಭಾರತೀಯ ಭಾಷಾ ಲೇಖಕರು ಅಲ್ಲಿ ಪ್ರಾತಿನಿಧ್ಯ ಪಡೆದು ಮಿಂಚತೊಡಗಿದರು. ಈ ಮೊದಲೂ ಅಂಥವರು ಭಾರತದ ರಾಜಧಾನಿ ಮತ್ತಿತರ ಪ್ರಮುಖ ಸ್ಥಳಗಳಲ್ಲಿ ತಮ್ಮ ಇಂಗ್ಲಿಶ್ ಪರಿಣತಿಯಿಂದಾಗಿ ತಮ್ಮ ಭಾಷಾ ಸಾಹಿತ್ಯವನ್ನು ಮುಖ್ಯವಾಗಿ ತಮ್ಮದೇ ಸಾಹಿತ್ಯವನ್ನು ಪ್ರತಿನಿಧಿಸುತ್ತಿದ್ದರು. ಅಂಥವರು ಈಗ ವಿದೇಶಿ ಲೇಖಕರು ತುಂಬಿಕೊಂಡಿರುತ್ತಿದ್ದ “ಜೈಪುರ ಉತ್ಸವ’ಗಳಲ್ಲಿ ಕಾಣಿಸಿಕೊಳ್ಳತೊಡಗಿದರು.
ಸಾಹಿತ್ಯೋತ್ಸವದಲ್ಲಿ ಹೊಸಟ್ರೆಂಡ್
ಆನಂತರ ಸಾಹಿತ್ಯೋತ್ಸವಗಳು ಬೇರೊಂದು ಮಾರ್ಗ ಹುಡುಕಿಕೊಂಡವು. ಪರಿಣಾಮವಾಗಿ ಮುಂಬೈನಲ್ಲಿ ಗೇಟ್‌ವೇ ಲಿಟ್ ಫೆಸ್ಟ್ , ದಿಲ್ಲಿಯಲ್ಲಿ ಜಸ್ನರೆ ರೇಖತಾ, ಗೋವಾದಲ್ಲಿ ಗೋವಾ ಆರ್ಟ್ಸ್ ಅಂಡ್ ಲಿಟರೇಚರ್ ಫೆಸ್ಟಿವಲ್, ಕೇರಳದಲ್ಲಿ ಕೇರಳ ಲಿಟರೇಚರ್ ಫೆಸ್ಟಿವಲ್, ಒರಿಸ್ಸಾದಲ್ಲಿ ಕಳಿಂಗ ಲಿಟರರಿ ಫೆಸ್ಟಿವಲ್, ಉತ್ತರ ಪ್ರದೇಶದಲ್ಲಿ ಲಕ್ನೋ ಲಿಟರರಿ ಫೆಸ್ಟಿವಲ್, ತಮಿಳುನಾಡಿನಲ್ಲಿ ಲಿಟ್‌ಫಾರ್ ಲೈಫ್ ಮುಂತಾದ ಉತ್ಸವಗಳು ಪ್ರಾರಂಭಗೊಂಡವು. ಈ ಎಲ್ಲ ಸಾಹಿತ್ಯೋತ್ಸವಗಳಲ್ಲಿ ಒಂದು ಚಮತ್ಕಾರ ನಡೆಯಿತು. ಕೇವಲ ಸಾಹಿತಿ, ಕವಿಗಳಿಗೆ ಮೀಸಲಾಗಿದ್ದ ಇಂಥ ಸಮಾರಂಭಗಳಲ್ಲಿ ಸಾಹಿತ್ಯೇತರ ಕ್ಷೇತ್ರದ ಹೆಸರಾಂತ ವ್ಯಕ್ತಿಗಳು ಭಾಗವಹಿಸತೊಡಗಿದರು. ಶಿಕ್ಷಣ, ಕಲೆ, ಸಮಾಜ ವಿಜ್ಞಾನಿಗಳು, ರಾಜಕೀಯ ಧುರೀಣರು, ಚಿತ್ರರಂಗದ ನಟ-ನಟಿಯರು, ನಿರ್ದೇಶಕರು ಭಾಗಿಗಳಾದಾಗ ಉಂಟಾದ ಈ ಚಮತ್ಕಾರ ಒಂದು ರೀತಿಯಲ್ಲಿ ಸ್ವಾಗತಾರ್ಹವೇ ಆದರೂ ಈ ಉತ್ಸವಗಳಿಗೆ “ಗ್ಲಾಮರಸ್’ ಎಂಬ ಬಿರುದು ಪಡೆದವು.
ಈ ಉತ್ಸವಗಳು ಪ್ರತಿವರ್ಷ ಕೆಲವು “ಥೀಮ್’ಗಳ ಸುತ್ತ ಆಚರಣೆಗೊಂಡವು. ವಿಚಾರಸಂಕಿರಣದ ವಸ್ತು ವಿಷಯಗಳ ಸುತ್ತ ಹಲವು ಸಂದರ್ಭಗಳಲ್ಲಿ ಪರವಿರೋಧ ಚರ್ಚೆಗಳಿಗೆ ಕಾರಣವಾದವು ಮತ್ತು ಆಗುತ್ತಿವೆ. ಹೀಗೆ ಒಂದು “ಥೀಮ್’ನ್ನು ಉದಾಹರಿಸಬೇಕೆಂದರೆ ಇತ್ತೀಚೆಗೆ ದೇಶಾದ್ಯಂತ ನಡೆದ “ಅವಾರ್ಡ್ ವಾಪಸಿ’. ಇದನ್ನೇ ಕುರಿತು ಈ ಸಾಹಿತ್ಯೋತ್ಸವಗಳಲ್ಲಿ ಚರ್ಚೆ ನಡೆದಿದ್ದುಂಟು. ಈಚಿನ ದಿನಗಳಲ್ಲಿ ಸಹಿಷ್ಣುತೆ, ಅಸಹಿಷ್ಣುತೆ, ವಿವಿಧತೆಯಲ್ಲಿ ಐಕ್ಯತೆ ಅಥವಾ ಏಕತೆ ಇತ್ಯಾದಿ ಇತ್ಯಾದಿ ಗಂಭೀರ ಸಮಸ್ಯೆಗಳನ್ನು ಈ ಉತ್ಸವಗಳಲ್ಲಿ ಚರ್ಚಿಸಲಾಗುತ್ತಿದೆ.
ಜೈಪುರ ಉತ್ಸವಾನಂತರ ಹುಟ್ಟಿಕೊಂಡ ಪ್ರಾದೇಶಿಕ ಸಾಹಿತ್ಯೋತ್ಸವಗಳಲ್ಲಿ ಭಾಷಾ ಸಾಹಿತ್ಯಕ್ಕೆ ಪ್ರಾಮುಖ್ಯತೆ ಸಿಕ್ಕಿತೇ ಎಂಬ ಪ್ರಶ್ನೆ ಏಳುತ್ತದೆ. ಅವು ಕೂಡ ಜೈಪುರವನ್ನು ಅನುಸರಿಸಿದಂತೆ ಕಾಣುತ್ತವೆ. ಜೈಪುರದ ಉತ್ಸವ ನಡೆದದ್ದು “ದಿಗ್ಗಿ ಅರಮನೆ’ಯಲ್ಲಿ ! ಒಂದು ಐಶಾರಾಮಿ ಶ್ರೀಮಂತ ಹೊಟೇಲ್‌ನಲ್ಲಿ. ಇವು ಕೂಡ ಅರಮನೆ ಮೈದಾನಗಳನ್ನು, ಲೀಲಾ ಪ್ಯಾಲೇಸ್‌ಗಳನ್ನು , ತಿರುವನಂತಪುರದ ಕಡಲತೀರದ ಸ್ಟಾರ್ ಹೊಟೇಲ್‌ಗಳ ಸಭಾಂಗಣಗಳನ್ನು ತಮ್ಮ ಉತ್ಸವಗಳ ವೆನ್ಸೂಗಳನ್ನಾಗಿಸಿಕೊಂಡವು. ಅಲ್ಲೂ ಇಂಗ್ಲಿಶ್ ಮೆರವಣಿಗೆ ನಡೆಯಿತು. ಪ್ರಾದೇಶಿಕ ಭಾಷೆಯ ಪ್ರಾತಿನಿಧ್ಯಕ್ಕಾಗಿ ಸಾರ್ವಜನಿಕವಾಗಿ ದನಿಯೆತ್ತಲಾಯಿತು. ಬೆಂಗಳೂರು ಲಿಟರರಿ ಫೆಸ್ಟಿವಲ್ ಪ್ರಾರಂಭವಾದಾಗ ಈ ಪ್ರಶ್ನೆ ಉದ್ಭವವಾದದ್ದು ನೆನಪಿನಲ್ಲಿರಬೇಕು. ಸಾಹಿತ್ಯ ಇಂಥ ಉತ್ಸವಗಳ ಮೂಲಕ ಒಂದು ಐಶಾರಾಮಿ ವಸ್ತುವಾಯಿತು. ಅದರ ಸುತ್ತ ಸಾಹಿತ್ಯೇತರ, ವೈಯಕ್ತಿಕ ಆಸಕ್ತಿ ಕಾಳಜಿಗಳು ಬೆಳೆಯತೊಡಗಿದವು. ನೀವು ಯಾವುದಾದರೂ ಒಂದು ಇಂಥ “ಫೆಸ್ಟ್’ನ ಆಮಂತ್ರಣ ಪತ್ರಿಕೆಯನ್ನು ಗಮನಿಸಿದರೆ ಈ ರೀತಿಯ ಉತ್ಸವಗಳ ಹಿಂದಿನ ಆರ್ಥಿಕ ಶಕ್ತಿಯ ಅರಿವಾಗುತ್ತದೆ. ಅಲ್ಲಿ ನಾನಾ ಕಂಪೆನಿಗಳ, ಐಟಿಬಿಟಿಗಳ, ವಿಮಾನ ಸಂಸ್ಥೆಗಳ, ಸ್ಟಾರ್ ಹೊಟೇಲ್‌ಗಳ ಲೋಗೋಗಳು ಮುದ್ರಣಗೊಂಡಿರುತ್ತವೆ. ಅವರು ನೀಡುವ ದೇಣಿಗೆ ಸ್ಪಾನ್ಸರ್‌ಶಿಪ್‌ಗ್ಳು ಯಾವ ರೀತಿಯಿಂದಲೂ ಸಾರ್ವಜನಿಕ ಲೆಕ್ಕಪತ್ರಕ್ಕೆ ಸಿಕ್ಕುವುದಿಲ್ಲ. ಇದು ತಪ್ಪಲ್ಲ , ಆದರೆ ಸಾಮಾನ್ಯ ಜನ ಮತ್ತು ಸಾಹಿತ್ಯಾಸಕ್ತರಿಂದ ದೂರವಾಗುವ ಮಾದರಿ.
ಹೀಗೆ ಅರಮನೆ ಮತ್ತು ಸ್ಟಾರ್ ಹೊಟೇಲ್‌ಗಳಲ್ಲಿ ನಡೆಯುವ ಸಾಹಿತ್ಯೋತ್ಸವಗಳಿಗೆ ಪ್ರತಿಯಾಗಿ ಜನರ ನಡುವೆ ನಡೆಸುವ ಪ್ರಯತ್ನಗಳೂ ನಮ್ಮ ದೇಶದ ಹಲವು ಭಾಗಗಳಲ್ಲಿ ನಡೆಯುತ್ತಿವೆ. ಈಶಾನ್ಯ ಭಾರತದ ಕೆಲವು ಗುಡ್ಡಗಾಡು ಭಾಷೆಯನ್ನಾಡುವ ಜನಸಮುದಾಯ ಕೊಲ್ಕತಾದಲ್ಲಿ ಬೋಯಿ ಮೇಳದಲ್ಲಿ ನಡೆಯುವ ಸಾಹಿತ್ಯಕ ಚರ್ಚೆಗಳನ್ನು ಮುಖ್ಯವಾಗಿ ಗುರುತಿಸಬಹುದು. ನಮ್ಮ ಧಾರವಾಡದಲ್ಲಿ ನಡೆಯುತ್ತಿರುವ “ಸಾಹಿತ್ಯ ಸಂಭ್ರಮ’ ಕೂಡ ಒಂದು ದೇಸೀ ಸಾಹಿತ್ಯೋತ್ಸವ. ಅಂಥ “ಮಧ್ಯಮ ಮಾರ್ಗೀಯ’ ಸಾಹಿತ್ಯೋತ್ಸವಕ್ಕೂ ಹಲವರಿಂದ ಅಸಮಾಧಾನವಾಗಿರುವುದುಂಟು. ಅದು ಬೇರೆ ವಿಚಾರ.
ಬೆಂಗಳೂರಿನಲ್ಲಿ ಇಂದು ನಡೆಯಲಿರುವ ಸಾಹಿತ್ಯೋತ್ಸವದ ವಿಶೇಷತೆಯೇನು? “ಗ್ರಾಮ ಸೇವಾಸಂಘ’ ಇದನ್ನು “ದಕ್ಷಿಣಾಯನ’ ಸಂಸ್ಥೆ ಜೊತೆಗೆ ನಡೆಸುತ್ತಿದೆ. ಇವರ ಥೀಮ್ ಅಸಹಿಷ್ಣುತೆಯ ಪ್ರತಿಭಟನೆ. ಇವರು ಅರಮನೆಗಳನ್ನು ಹುಡುಕದೆ ಕಾಲದಿಂದಲೂ ವಿಚಾರಸಂಕಿರಣಗಳಿಗೆ ಮನೆಯಾಗಿರುವ ಸೆನೆಟ್ ಹಾಲಿನಲ್ಲಿ ಜನರ ನಡುವೆ ನಡೆಸುತ್ತಿರುವುದು. ಇದಕ್ಕೆ ಬೇಕಾದ ದುಡ್ಡನ್ನು ಸಾರ್ವಜನಿಕರಿಂದ ಸಂಗ್ರಹಿಸಿ ನಡೆಸುತ್ತಿರುವುದು. ಇದೊಂದು ಭಿನ್ನ ಮಾರ್ಗ ಮತ್ತು ಸ್ವಾಗತಾರ್ಹ ಮಾರ್ಗ. ನೋಡೋಣ, ಈ ಉತ್ಸವವೂ ನಡೆಯಲಿ. ಇಲ್ಲಿ ಪ್ರೀತಿಯ, ಸಹಬಾಳ್ವೆಯ, ಸಮಾನತೆಯ, ಜಾತ್ಯತೀತೆಯ ದಾರಿ ಇನ್ನಷ್ಟು ನಿಚ್ಚಳವಾಗಿ ತೆರೆದುಕೊಳ್ಳಲಿ.
ಅಗ್ರಹಾರ ಕೃಷ್ಣಮೂರ್ತಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Chhattisgarh: ವಿವಾಹಿತ ಮಹಿಳೆಯರ ಖಾತೆಗೆ ಹಣ-ಸನ್ನಿ ಲಿಯೋನ್ ಹೆಸರಲ್ಲಿ ವಂಚನೆ!
Hubli: ಅಯ್ಯಪ್ಪ ಶಿಬಿರದಲ್ಲಿ ಅಗ್ನಿ ಆಕಸ್ಮಿಕ: ಒಂಬತ್ತು ವೃತಧಾರಿಗಳಿಗೆ ಗಂಭೀರ ಗಾಯ
Punjab ಪೊಲೀಸರ ಮೇಲೆ ಗ್ರೆನೇಡ್ ದಾಳಿ ನಡೆಸಿದ್ದ ಮೂವರು ಖಲಿಸ್ತಾನಿ ಉ*ಗ್ರರ Encounter
Tollywood: ‘ಗೇಮ್ ಚೇಂಜರ್ʼಗೆ ರಾಮ್‌ಚರಣ್ ರಾಷ್ಟ್ರ ಪ್ರಶಸ್ತಿ ಪಡೆಯುತ್ತಾರೆ – ಸುಕುಮಾರ್
Mudigere: ಹೊರನಾಡು ದೇವರ ದರ್ಶನಕ್ಕೆ ಬರುತ್ತಿದ್ದವರ ವಾಹನ ಪಲ್ಟಿ… ನಾಲ್ವರಿಗೆ ಗಂಭೀರ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.