ಗೋವಿಂದ ಗೀತ
Team Udayavani, Sep 2, 2018, 6:00 AM IST
ಜಯದೇವ ಹನ್ನೆರಡನೆಯ ಶತಮಾನದ ಸುಪ್ರಸಿದ್ಧ ಸಂಸ್ಕೃತ ಕವಿ. ಆತನ “ಗೀತಗೋವಿಂದ’ ಕೃತಿಯ ಕುರಿತು ಕೇಳದ ಭಾರತೀಯನಿಲ್ಲ. “ಗೀತಗೋವಿಂದ’ ಕೃಷ್ಣ ಮತ್ತು ಗೋಪಿಕಾ ವನಿತೆ ರಾಧೆಯ ಪ್ರೇಮಕಾವ್ಯ. ಅಲ್ಲಿ ಕೃಷ್ಣನಿಗಿಂತ ರಾಧೆಗೇ ಪ್ರಾಮುಖ್ಯ ಹೆಚ್ಚು. ದೇವರಿಗಿಂತ ಭಕ್ತನೇ ಪ್ರಧಾನನೆನಿಸುವುದು ಭಕ್ತಿಪಂಥದ ತಾತ್ವಿಕ ನಿಲುವು. ಲೌಕಿಕತೆ ಮತ್ತು ಆಧ್ಯಾತ್ಮಿಕತೆಗಳ ನಡುವೆ ಕಾವ್ಯಸೇತುವನ್ನು ಬೆಸೆಯುವ ಅಷ್ಟಪದಿಗಳ ಗುಚ್ಛ “ಗೀತಗೋವಿಂದ’ದ ಸುತ್ತ ಈ ಚಿಂತನ – ಶ್ರೀಕೃಷ್ಣಜಯಂತಿಯ ನಿಮಿತ್ತ.
ಸಂಸ್ಕೃತ ಕಾವ್ಯಪರಂಪರೆಯಲ್ಲಿ ಶ್ರೀಕೃಷ್ಣನನ್ನು ಪ್ರಧಾನವಾಗಿ ಮೂರು ಬಗೆಯಲ್ಲಿ ಕಾಣಿಸುವುದುಂಟು. ಮೊದಲಿಗೆ ಅವನು ರಾಷ್ಟ್ರನಾಯಕನಾಗಿ, ಮಹಾಮಾನವನಾಗಿ, ಯೋಧನಾಗಿ, ಜ್ಞಾನ-ವಿಜ್ಞಾನಗಳ ಖನಿಯಾಗಿ, ಆಶ್ರಿತವತ್ಸಲನಾಗಿ, ಸಹೃದಯಶಿರೋಮಣಿಯಾಗಿ ತೋರಿದರೆ, ಆ ಬಳಿಕ ಬಾಲಲೀಲೆಗಳ ತವನಿಧಿಯಾಗಿ, ಆಟ-ಪಾಠಗಳ ಪ್ರತಿನಿಧಿಯಾಗಿ ದಿವ್ಯಶಿಶುವೆಂಬಂತೆ ಕಾಣಿಸಿಕೊಳ್ಳುವ ಸೊಗಸೂ ಉಂಟು. ಅನಂತರ ಉತ್ತಾನಶೃಂಗಾರದ ಪ್ರತೀಕವಾಗಿ, ಭವ್ಯಸುಂದರಪ್ರಣಯಿಯಾಗಿ ತೆರೆದುಕೊಳ್ಳುವ ಮಜಲು ಕೂಡ ಸುಪ್ರಸಿದ್ಧ. ಈ ತ್ರಿವೇಣಿಯನ್ನು ಅನೇಕ ಕಾವ್ಯ-ನಾಟಕ-ಸ್ತೋತ್ರಗಳು ಚಿತ್ರಿಸಿದ್ದರೂ ಮುಖ್ಯವಾಗಿ ಮಹಾಭಾರತ, ಶ್ರೀಕೃಷ್ಣಕರ್ಣಾಮೃತ ಮತ್ತು ಗೀತಗೋವಿಂದಗಳು ಇದರ ಪ್ರಾತಿನಿಧಿಕ ಮಾತೃಕೆಗಳೆನಿಸಿವೆ. ದಿಟವೇ, ಮಹಾಭಾರತವೊಂದನ್ನುಳಿದರೆ ಮಿಕ್ಕೆರಡು ಕೃತಿಗಳ ಹಿನ್ನೆಲೆಯಲ್ಲಿ ಹರಿವಂಶ, ವಿಷ್ಣುಪುರಾಣ, ಬ್ರಹ್ಮಪುರಾಣ, ಭಾಗವತಪುರಾಣ, ಬ್ರಹ್ಮವೈವರ್ತಪುರಾಣ ಮುಂತಾದ ಎಷ್ಟೋ ಆರ್ಷಗ್ರಂಥಗಳಿವೆ. ಆದರೂ, ಅವು ಕೇವಲ ಕಚ್ಚಾ ಸಾಮಗ್ರಿಯನ್ನು ಕಲ್ಪಿಸಿಕೊಟ್ಟಿವೆಯಲ್ಲದೆ ಕಾವ್ಯತ್ವವನ್ನು ಕರುಣಿಸಿಲ್ಲ. ಆದುದರಿಂದ ಕೃಷ್ಣಕರ್ಣಾಮೃತ ಮತ್ತು ಗೀತಗೋವಿಂದಗಳಿಗೆ ಅಪ್ರತಿಹತವಾದ ಸ್ಥಾನ-ಮಾನಗಳುಂಟು. ಮಹಾಭಾರತದ ಶ್ರೀಕೃಷ್ಣಚರಿತೆಯನ್ನು ಸಂಸ್ಕೃತದ ಪರವರ್ತಿ ಕವಿಗಳಾರೂ ಸಮಗ್ರವಾಗಿ ಚಿತ್ರಿಸಲಿಲ್ಲ. ಅವರಾರಿಗೂ ಗೋಕುಲೋತ್ತರಚರಿತದಲ್ಲಿ ಮನಸ್ಸಾಗಲಿಲ್ಲವೇನೋ. ಈ ಚಿತ್ರಣಕ್ಕೆ ಲೀಲಾಶುಕನಂಥ, ಜಯದೇವನಂಥ ಮತ್ತೂಬ್ಬ ಕವಿ, ಅತಿಕಾಳಿದಾಸನಾಗಬಲ್ಲ ಪ್ರತಿಭಾಶಾಲಿ ಹುಟ್ಟಿದ್ದಲ್ಲಿ ನಿಜಕ್ಕೂ ಸಂಸ್ಕೃತಸಾಹಿತ್ಯವು ಮತ್ತಷ್ಟು ಉನ್ನತಿಯನ್ನು ಹೊಂದುತ್ತಿತ್ತು. ಆದರೆ, ಭಗವಾನ್ ಶ್ರೀಕೃಷ್ಣನ ಇಚ್ಛೆ ಹೀಗಿರಲಿಲ್ಲವಾಗಿ ನಮಗೆ ಆತನ ಮೇರುವ್ಯಕ್ತಿತ್ವವನ್ನು ಚಿತ್ರಿಸುವ, ಕುಮಾರಸಂಭವ ಕಾವ್ಯಕ್ಕೆ ಸಡ್ಡುಹೊಡೆಯಬಲ್ಲ ನಿಜವಾದ ಮಹಾಕಾವ್ಯವು ದಕ್ಕಲಿಲ್ಲ. ಇರಲಿ; ಅಘಟಿತವನ್ನು ಕುರಿತು ಸಂಕಟಪಡುವುದೇಕೆ? ಉಳಿದಿರುವ ಎರಡು ಮಾದರಿಗಳಲ್ಲಿ ಒಂದಾದ ಗೀತಗೋವಿಂದವನ್ನು ಸದ್ಯಕ್ಕೆ ನೋಡೋಣ.
ಭುವನದ ಭಾಗ್ಯ ಗೀತಗೋವಿಂದ
ಸಂಸ್ಕೃತಸಾಹಿತ್ಯದಲ್ಲಿ ಕೆಲವೊಂದು ಜನಸಂಮೋಹಕವಾದ ಮಾದರಿಗಳಿವೆ: ಮೇಘದೂತ, ಬುದ್ಧಚರಿತ, ಕಿರಾತಾರ್ಜುನೀಯ, ಕಾದಂಬರೀ, ಗಾಥಾಸಪ್ತಶತೀ, ಸೌಂದರ್ಯಲಹರೀ, ಮಾಲವಿಕಾಗ್ನಿಮಿತ್ರ, ಮಾಲತೀಮಾಧವ, ಪ್ರಬೋಧಚಂದ್ರೋದಯ, ಪದ್ಮಪ್ರಾಭೃತಕ, ಪಂಚತಂತ್ರ ಮುಂತಾದುವು. ಇವುಗಳ ಅನುಕರಣೆಗಳಿಗೆ ಕೊನೆ-ಮೊದಲಿಲ್ಲ. ಅಷ್ಟೇಕೆ, ಸಂಸ್ಕೃತಸಾಹಿತ್ಯದ ಗಣನೀಯಗಾತ್ರವೇ ಇಂಥ ಅನುಕರಣಕೃತಿಗಳಿಂದ ತುಂಬಿದೆ. ಹೀಗೆ ತನ್ನ ಅನುಕರಣೆಗಳ ಮೂಲಕವೇ ಸಾಕಷ್ಟು ಪ್ರಸ್ಥಾನಗಳನ್ನು ಹುಟ್ಟಿಸಿದ ಸುಕೃತಶಾಲಿಕಾವ್ಯಗಳ ಪೈಕಿ ಗೀತಗೋವಿಂದವೂ ಒಂದು. ಯಾವುದೇ ಕೃತಿಯು ಅನುಕೃತವಾಗುವುದೆಂದರೆ ಅದು ಕೇವಲ ಜನಪ್ರಿಯತೆಯ ಸಂಕೇತವಲ್ಲ, ಜನಾರಾಧನೆಯ ದಿಕ್ಸೂಚಿಯೂ ಹೌದು. ಮಾತ್ರವಲ್ಲ, ಕಾರಯಿತ್ರೀಪ್ರತಿಭೆಯ ಗಣನೀಯವರ್ಗವನ್ನೂ ಪ್ರಭಾವಿಸಿದ ಮಹಣ್ತೀ ಇಂಥ ಗ್ರಂಥ¨ªಾಗುತ್ತದೆ. ಈ ಬಗೆಯ ಸಿದ್ಧಿಗೆ ಮೂಲಕತೃìವೂ ಆತನ ಕೃತಿಯೂ ತುಂಬ ಶ್ರಮಿಸಿರಬೇಕು. ಬರಿಯ ಶ್ರಮವಷ್ಟೇ ಸಾಲದು; ಭುವನದ ಭಾಗ್ಯವೂ ಇರಬೇಕು. ಹೀಗೆ ಭುವನದ ಭಾಗ್ಯಗಳಲ್ಲೊಂದು ಜಯದೇವಕವಿಯ ಗೀತಗೋವಿಂದ.
ಚಿತ್ರರಾಗಕಾವ್ಯ ಗೀತಗೋವಿಂದ
ಶಾಸ್ತ್ರೀಯವಾಗಿ ಹೇಳುವುದಾ ದರೆ, ಗೀತಗೋವಿಂದವು ಉಪರೂಪಕ ಪ್ರಕಾರಗಳಲ್ಲೊಂದು. ಇದನ್ನು ಸಾಮಾನ್ಯವಾಗಿ ಗೀತಕಾವ್ಯವೆಂದು ಹೇಳುವರಾದರೂ ಶಾಸ್ತ್ರಗ್ರಂಥಗಳಲ್ಲಿದು ರಾಗಕಾವ್ಯವೆಂಬ ಉಪರೂಪಕಪ್ರಭೇದಕ್ಕೆ ಸೇರುತ್ತದೆ. ಮತ್ತೂ ಸೂಕ್ಷ್ಮವಾಗಿ ಹೇಳುವುದಾದರೆ, ಒಂದೇ ರಾಗದಲ್ಲಿ ನಿಬದ್ಧವಾದ ಗೀತಗಳಿರುವ ಅಭಿನೇಯರಚನೆಗೆ ರಾಗಕಾವ್ಯವೆಂದು ಹೆಸರಾದರೆ, ಅನೇಕರಾಗಗಳಲ್ಲಿ ರಚಿತವಾದ ಇಂಥ ಕೃತಿಗೆ ಚಿತ್ರರಾಗಕಾವ್ಯವೆಂದು ಅಭಿಧಾನ. ಈ ಬಗೆಗೆ ಅಭಿನವಗುಪ್ತ (ಅಭಿನವಭಾರತಿ), ಭೋಜರಾಜ (ಶೃಂಗಾರಪ್ರಕಾಶ), ಪುರುಷೋತ್ತಮ (ಸಂಗೀತನಾರಾಯಣ), ನಾರಾಯಣ (ಸಂಗೀತಸಾರಣಿ) ಮುಂತಾದ ಶಾಸ್ತ್ರಕಾರರು ಕೆಲಮಟ್ಟಿಗೆ ಬೆಳಕು ಚೆಲ್ಲಿ¨ªಾರೆ. ಈ ಪರಿಯ ಚಿತ್ರರಾಗಕಾವ್ಯವು ಪರವರ್ತಿರಂಗಕಲೆಗಳಾದ ಯಕ್ಷಗಾನ, ಕಥಕಳಿ, ಭಾಗವತಮೇಳ, ದೊಡ್ಡಾಟ, ತೆರುಕ್ಕೂತ್ತು ಮುಂತಾದ ಎಷ್ಟೋ ದೇಶಭಾಷಾರಚನೆಗಳಿಗೆ ಮಾದರಿ.
ಗೀತಗೋವಿಂದವನ್ನು ಪ್ರಾಕೃತಪ್ರಭಾವದಿಂದ ಹೊಮ್ಮಿದ ಕೃತಿಯೆಂದು ಹೇಳುವರಾದರೂ ಅದಕ್ಕೆ ಸಂಸ್ಕೃತಪರಂಪರೆಯೇ ಮೂಲವೆಂಬುದು ನಿರ್ವಿವಾದ. ಆದರೆ ಸಂಸ್ಕೃತ-ಪ್ರಾಕೃತಗಳು ವಿಭಿನ್ನ ಅಥವಾ ವಿರುದ್ಧಪರಂಪರೆಗಳ ಮೂಲಕ ಬೆಳೆದಿಲ್ಲವೆಂಬುದನ್ನೂ ಮರೆಯುವಂತಿಲ್ಲ. ವಸ್ತುತಃ ಇವೆರಡೂ ಪ್ರತ್ಯೇಕ ಭಾಷೆಗಳೇ ಅಲ್ಲ, ಪ್ರತ್ಯೇಕಸಂಸ್ಕೃತಿಯಂತೂ ಅಲ್ಲವೇ ಅಲ್ಲ. ಗೀತಗೋವಿಂದವು ತನ್ನ ಕಾಲದ ಮತ್ತು ಆ ಮುಂದಿನ ಪೀಳಿಗೆಯ ಪ್ರಾಕೃತ-ಅಪಭ್ರಂಶಗಳೆನ್ನಬಹುದಾದ ಬ್ರಜ, ಅವಧಿ, ಮೈಥಿಲಿ, ಒರಿಯಾ, ಬಂಗಾಳಿ, ಅಸ್ಸಾಮಿ, ಮಣಿಪುರಿ, ಗುಜರಾತಿ, ಭೋಜಪುರಿ, ಬುಂದೇಲ್‌ಖಂಡಿ ಮುಂತಾದ ಭಾಷೆಗಳಿಗೂ ಪ್ರೇರಣೆಯಾಯಿತು. ಅಷ್ಟೇಕೆ, ಈ ಎಷ್ಟೋ ಭಾಷೆಗಳ ಸಾಹಿತ್ಯದ ಉದ್ಗಮವನ್ನೇ ಅವುಗಳ ಗೀತಗೋವಿಂದಾನುಸರಣೆಯಲ್ಲಿ ಕಾಣಬಹುದು. ಹೀಗೆ ಬೇರೆ ಬೇರೆ ನುಡಿಗಟ್ಟುಗಳಲ್ಲಿ ಮರುಹುಟ್ಟುಗಳಿಸಿದ ಗೀತಗೋವಿಂದವು ಸಂಸ್ಕೃತದಲ್ಲಿ ಅನುಕರಣೆಗಳನ್ನು ಪ್ರೇರಿಸದಿರುತ್ತದೆಯೇ? ಗೀತಗೌರೀಪತಿ, ಗೀತಗಂಗಾಧರ, ಸಂಗೀತರಾಘವ, ರಾಮಾಷ್ಟಪದಿ ಮುಂತಾದ ಅಸಂಖ್ಯ ಕೃತಿಗಳು ಜಯದೇವನ ಪದ್ಯ-ಗೀತಗಳ ತದ್ವತ್ತಾದ ಅನುಕರಣೆಯ ಮೂಲಕ ತಮ್ಮನ್ನು ತಾವು ಸಾರ್ಥಕಗೊಳಿಸಿಕೊಂಡಿವೆ. ಈ ರೀತಿಯಲ್ಲಿ ಗೀತಗೋವಿಂದಸಾಹಿತ್ಯವೇ ಒಂದು ಬಹುಭಾಷಾ ಗ್ರಂಥಾಲಯವಾಗಿದೆ.
ಪ್ರೇಮಕಥನ ಗೀತಗೋವಿಂದ
ಜಯದೇವನ ಸಮಕಾಲೀನನೂ ಸಹೋದ್ಯೋಗಿಯೂ ಆದ ಗೋವರ್ಧನನು ತನ್ನ ಆರ್ಯಾಸಪ್ತಶತಿಯಲ್ಲಿ ಸುಕುಮಾರಸುಂದರಭಾವಗಳನ್ನು ಸಂಸ್ಕೃತದಲ್ಲಿ ಹೇಳುವುದು ಸಾಗರದತ್ತ ಸಾಗುವ ಗಂಗೆಯನ್ನು ಮತ್ತೆ ಹಿಮಗಿರಿಯ ಕಡೆಗೆ ತಿರುಗಿಸುವಷ್ಟೇ ಕಷ್ಟದ ಕೆಲಸವೆಂದು ಬಿಸುಸುಯ್ಯುತ್ತಾನೆ. ಈ ಸವಾಲನ್ನು ಅವಲೀಲೆಯಿಂದಲೆಂಬಂತೆ ಗೀತಗೋವಿಂದವು ಸ್ವೀಕರಿಸಿದೆ. ಇಲ್ಲಿರುವ ಇಪ್ಪತ್ತನಾಲ್ಕು ಅಷ್ಟಪದಿಗಳಿಗೆ ಹೊಂದಿಕೊಂಡು ಕಥನತಂತ್ರಕ್ಕಾಗಿ ಒದಗಿಬರುವ ತೊಂಬತ್ತಾರು ಪದ್ಯಗಳು ಹಲವು ಬಗೆಯ ವೃತ್ತಗಳಲ್ಲಿವೆ. ಇವುಗಳಲ್ಲಿ ಹರ್ಷವರ್ಧನನ ಕಾಲದಿಂದೀಚೆಗೆ ಬೆಳೆದುಬಂದ ಸಂಸ್ಕೃತಪದ್ಯರೀತಿಯ ಸಿದ್ಧಶೈಲಿಯುಂಟು. ಆದರೆ, ಪ್ರಾಯಿಕವಾಗಿ ಪ್ರತಿಯೊಂದು ಅಷ್ಟಪದಿಗೆ ಒಂಬತ್ತು ಚರಣಗಳೆಂಬಂತೆ ಇನ್ನೂರ ಮೂವತ್ತಕ್ಕೂ ಹೆಚ್ಚು ಗೀತಖಂಡಗಳಲ್ಲಿ ಮಾತ್ರ ಆವರೆಗಿನ ಸಂಸ್ಕೃತಸಾಹಿತ್ಯವು ಕಾಣದ ನಯ-ನವುರುಗಳುಂಟು. ಮುಖ್ಯವಾಗಿ ಚತುರ್ಮಾತ್ರಾಲಯವೇ ಇಲ್ಲಿ ತಾಂಡವಿಸಿದೆಯಾದರೂ ಖಂಡಗತಿ ಮತ್ತು ಮಿಶ್ರಗತಿಗಳ ಸೊಗಸೂ ಅಲ್ಲಲ್ಲಿದೆ. ಇದು ಕಾವ್ಯದ ಶಾಬ್ದಿಕರೂಪವಾಯಿತು. ಇನ್ನು ಆರ್ಥಿಕಸ್ವರೂಪವನ್ನು ಕಂಡರೆ, ಅಂಥ ಕಲ್ಪನೆಗಳ ಅತಿಶಯತೆಯು ತೋರದಿದ್ದರೂ ಕುಸುರಿಗೆಲಸಕ್ಕೆ ಮಾತ್ರ ಕೊರತೆಯಿಲ್ಲ. ಜೊತೆಗಿದು ಗೀತ-ನೃತ್ಯಗಳಿಗೆ ಪರ್ಯಾಪ್ತವೂ ಹೌದು. ಒಂದು ವೇಳೆ ಕಾಳಿದಾಸನೇ ಗೀತಗೋವಿಂದವನ್ನು ಬರೆದಿದ್ದರೆ ಅದರ ಪರಿ ಹೇಗೆಂಬುದನ್ನು ಸರಸ್ವತಿಯೂ ಊಹಿಸಲಾರಳು! ಪ್ರಾಯಶಃ ಇಂಥ ಉಸಿರುಗಟ್ಟುವ ಶಬ್ದಾರ್ಥಸ್ವಾರಸ್ಯದ ಚರಮಸೀಮೆಯು ನಮ್ಮಂಥ ಮರ್ತ್ಯರಿಗೆ ಹೆಚ್ಚಾದೀತೆಂದು ಭಾವಿಸಿ ಆಕೆಯೇ ಜಯದೇವನ ಕೃತಿಯಲ್ಲಿ ಗೀತಗೋವಿಂದವನ್ನು ಕಾಣಿಸಿದಳು; ಕಾವ್ಯಗೋವಿಂದವನ್ನಲ್ಲ.
ತನ್ನದಾದ ಸಾಹಿತ್ಯಕಲಾಲೋಕದಲ್ಲಿ ಈ ಪರಿಯ ಸ್ಫೂರ್ತಿಯನ್ನು ನೀಡಿದ ಗೀತಗೋವಿಂದವು ಗೀತ-ನೃತ್ಯ-ಚಿತ್ರಾದಿಕಲೆಗಳ ಜಗತ್ತಿಗೆ ಪ್ರೇರಣೆಯನ್ನು ಕೊಡದಿದ್ದರೆ ಹೇಗೆ?
ವ್ಯಾಸ-ವಾಲ್ಮೀಕಿ-ಕಾಳಿದಾಸ-ವಿಷ್ಣು ಶರ್ಮ(ಪಂಚತಂತ್ರದ ಕತೃì)ರ ಕೃತಿಗಳ ಬೆಳಕಿನಲ್ಲಿ ಅಭಿಜಾತಭಾರತೀಯ ಶಿಲ್ಪಕಲೆಯು ಸಮೃದ್ಧವಾಗಿ ಬೆಳೆದರೆ, ಚಿತ್ರಕಲೆಯಲ್ಲಿ ತನ್ನದಾದ ಛಾಪನ್ನೊತ್ತಿದ್ದು ಗೀತಗೋವಿಂದದ ಮಹಣ್ತೀ. ದಿಟವೇ, ರಾಮಾಯಣ ಮತ್ತು ಮಹಾಭಾರತಗಳು ಚಿತ್ರಕಲೆಯಲ್ಲಿಯೂ ಅವಿಚ್ಛಿನ್ನವಾಗಿ ಬೆಳೆದುಬಂದಿವೆ. ಈ ಆರ್ಷಕಾವ್ಯಗಳ ಸನಾತನ ಸ್ಫೂರ್ತಿ-ವ್ಯಾಪ್ತಿಗಳ ಪರಿಯೇ ಬೇರೆಯ ತೆರನಾದುದು. ಇವು ಸರ್ವಾರ್ಥದಲ್ಲಿ ನಿರುಪಮ, ನಿರತಿಶಯ. ಆದರೆ ಕಾಳಿದಾಸ-ವಿಷ್ಣುಶರ್ಮರಂಥವರು ಚಿತ್ರಕಲೆಯಲ್ಲಿ ಅಷ್ಟಾಗಿ ರಾಜಿಸದಿರುವುದನ್ನೂ ಜಯದೇವನು ಇಲ್ಲಿ ಮಿಗಿಲಾಗಿ ಮಿಂಚುವುದನ್ನೂ ಕಂಡಾಗ ನಮಗೆ ಗೀತಗೋವಿಂದದ ಸಾಂದ್ರಪ್ರಭಾವ ಗೋಚರಿಸದಿರದು. ಪಟಚಿತ್ರ, ಬಾಸೋಹ್ಲಿ, ಕಾಂಗಡಾ, ಚಾಂಬಾ, ಮಂಡೀ, ಜಯಪುರೀ, ಪಹಾಡೀ, ಕಲಂಕಾರೀ, ತಂಜಾವೂರು, ಮೈಸೂರು ಮುಂತಾದ ಚಿತ್ರಕಲಾಶೈಲಿಗಳಲ್ಲಿ ಜಯದೇವನು ಮತ್ತೆ ಮತ್ತೆ ಕಾಣಿಸಿಕೊಳ್ಳುತ್ತಾನೆ. ಈತನ ಕೃತಿಯು ಚಿತ್ರಕಲಾಪ್ರಕಾರಕ್ಕೆ ನೀಡಿದ ಕೊಡುಗೆ ಅಪಾರ. ಇದನ್ನು ಕುರಿತು ಎಂ. ಎಸ್. ರಾಂಧವಾ, ಆನಂದಕುಮಾರಸ್ವಾಮಿ, ಕಪಿಲಾ ವಾತ್ಸಾಯನ ಮುಂತಾದವರು ಸಾಕಷ್ಟು ಸಂಶೋಧಿಸಿದ್ದಾರೆ.
ಹೇಳಿ ಕೇಳಿ ಗೀತಗೋವಿಂದವು ಗೀತ; ಗೋವಿಂದನ ಗೀತ, ಹಾಡಲೆಂದೇ ಹವಣುಗೊಂಡ ಸಾಹಿತ್ಯ. ವಸ್ತುತಃ ಜಯದೇವನೇ ಇದನ್ನು ಹಾಡಿ ಪ್ರಚುರಿಸಿದನೆಂದೂ ಅವನ ಪತ್ನಿ ಪದ್ಮಾವತಿಯೇ ನರ್ತಿಸುತ್ತಿದ್ದಳೆಂದೂ ಪ್ರತೀತಿಯುಂಟು. ಗೀತಗೋವಿಂದಕ್ಕಿರುವ ಅಸಂಖ್ಯವ್ಯಾಖ್ಯಾನಗಳು ಇಲ್ಲಿಯ ಸಂಗೀತಸ್ವಾರಸ್ಯವನ್ನು ಗುರುತಿಸಿ ವಿವರಿಸಿವೆ. ಒಂದು ವ್ಯಾಖ್ಯಾನವಂತೂ ಇದರ ಪ್ರತಿಪದ್ಯ-ಪದಕ್ಕೆ ಅಭಿನಯನಿರ್ದೇಶನವನ್ನೂ ಮಾಡಿದೆ. ಈ ಕಾವ್ಯದ ಅಷ್ಟಪದಿಗಳಿಗೆ ಜಯದೇವನೇ ಸೂಚಿಸಿದ ರಾಗ-ತಾಳಗಳಿಂದು ಉಳಿದುಬಂದಿಲ್ಲವಾದರೂ ರಾಣಾ ಕುಂಭಕರ್ಣನ ಕಾಲದಿಂದೀಚೆಗೆ ನಿರ್ದೇಶಿತವಾದ ರಾಗ-ತಾಳ ಸೂಚನೆಗಳು ಉಪಲಬ್ಧವಿವೆ. ಇಂದೂ ಸಹ ಗೀತಗೋವಿಂದಕ್ಕೆ ಹೊಸ ಹೊಸ ಬಗೆಯಲ್ಲಿ ರಾಗ-ತಾಳಸಂಯೋಜನೆಯನ್ನು ಮಾಡುತ್ತಲೇ ಬಂದಿ¨ªಾರೆ. ಉತ್ತರಾದಿ, ದಕ್ಷಿಣಾದಿ, ಶಾಸ್ತ್ರೀಯ, ಲಘುಶಾಸ್ತ್ರೀಯ, ಚಲನಚಿತ್ರೀ¿åವೇ ಮುಂತಾದ ಭೇದಗಳಿಲ್ಲದೆ ಎಲ್ಲ ಪದ್ಧತಿಗಳಲ್ಲಿಯೂ ಗೀತಗೋವಿಂದವು ಜನಮಾನಸದಲ್ಲಿ ಗುನುಗುನಿಸಿದೆ. ಹೆಚ್ಚೇನು, ಯಕ್ಷಗಾನಶೈಲಿಯಲ್ಲಿಯೂ ಇದರ ಹಾಡುಗಳು ಬಿತ್ತರಗೊಂಡಿವೆ.
ನೃತ್ಯನಾಟಕೀಯ ಗೀತಗೋವಿಂದ
ಗೀತವನ್ನನುಸರಿಸಿ ಬರುವಂಥದ್ದು ನೃತ್ಯ. ಇವೆರಡೂ ಕಲೆಗಳು ಹೀಗಾಗಿ ಅನ್ಯೋನ್ಯಸಮರಸವಾಗಿವೆ. ಇಂಥ ನೃತ್ಯಲೋಕದಲ್ಲಿ ಶಿಖರಪ್ರಾಯವಾದ ರಸಾಭಿನಯಕ್ಕೆ ಜಯದೇವನೇ ಒರೆಗಲ್ಲು. ಕಥಕ್, ಒಡಿಸ್ಸಿ, ಸತ್ರೀಯ, ಕೂಚಿಪೂಡಿ, ಸದಿರ್ / ದಾಸಿಯಾಟ್ಟ, ತಾಫಾ, ಭರತನೃತ್ಯ ಮುಂತಾದ ಅವೆಷ್ಟೋ ನೃತ್ಯಪ್ರಕಾರಗಳಲ್ಲಿ ಗೀತಗೋವಿಂದವನ್ನು ಅಭಿನಯಿಸುತ್ತ ಬಂದಿ¨ªಾರೆ. ವಿಶೇಷತಃ ಜಗನ್ನಾಥಪುರಿಯ ದೇವಾಲಯದಲ್ಲಿ ಭಗವಂತನಿಗೆ ಸಲ್ಲಿಸುವ ನೃತ್ಯಸೇವೆಯಲ್ಲಿ ಗೀತಗೋವಿಂದಕ್ಕೇ ಅಗ್ರತಾಂಬೂಲ. ಅಷ್ಟೇಕೆ, ಒಡಿಸ್ಸಿ ನೃತ್ಯವೇ ಗೀತಗೋವಿಂದದ ಅಡಿಜಾಡಿನಲ್ಲಿ ಹೆಜ್ಜೆಯಿರಿಸಿ ನಡೆದಿದೆ, ನಲಿದಿದೆ. ಏಕಹಾರ್ಯನೃತ್ಯಕ್ಕೆ ಮಾತ್ರವಲ್ಲದೆ ಬಹುಹಾರ್ಯವಾದ ಸಮೂಹನೃತ್ಯ ಮತ್ತು ನೃತ್ಯನಾಟಕಗಳಿಗೂ ಗೀತಗೋವಿಂದವು ಆಸ್ಪದವಾಗಿದೆ.
ಇದನ್ನನುಸರಿಸಿ ಹಲವಾರು ಕಿರುಚಿತ್ರಗಳೂ ಪೂರ್ಣಾವಧಿಯ ಚಲನಚಿತ್ರಗಳೂ ನಿರ್ಮಿತವಾಗಿವೆಯೆಂದರೆ ಇದರ ಮಹಿಮೆ ಮನದಟ್ಟಾದೀತು.
ಹೀಗೆ ತ್ತೈಲೋಕ್ಯಮೋಹಕವಾದ ಗೀತಗೋವಿಂದದ ಆಕರ್ಷಣೆಯಾದರೂ ಏನು? ಇದರÇÉಾವ ರಹಸ್ಯವೂ ಇಲ್ಲ. ಜಯದೇವನೇ ತನ್ನ ಕೃತಿಯ ಆದಿಯಲ್ಲಿ ಹೇಳಿರುವಂತೆ ಇದರ ಆಸಕ್ತಿಸ್ಥಾನಗಳು ಮೂರು: ಪರಬ್ರಹ್ಮಸ್ವರೂಪಿಯಾದ ಶ್ರೀಕೃಷ್ಣನ ದಿವ್ಯಮಾನುಷಲೀಲೆ, ರಸಬ್ರಹ್ಮಸ್ವರೂಪಿಯಾದ ಇಲ್ಲಿಯ ಪದ್ಯ-ಪದಗಳ ಮಧುರಕೋಮಲಕಾಂತಪದಾವಲಿ ಮತ್ತು ಎಲ್ಲ ಬಗೆಯ ಕಲಾಪ್ರಕಾರಗಳಿಗೂ ತನ್ಮೂಲಕ ಉನಿ¾àಲಿಸುವ ಆರಾಧನೆಗಳಿಗೂ ಅವಕಾಶವೀಯಬಲ್ಲ ಸಂವಿಧಾನಕ.
ಈ ಕಾವ್ಯದಲ್ಲಿ ಬರುವ ಪಾತ್ರಗಳು ಮೂರು: ರಾಧೆ, ರಾಧೆಯ ಸಖೀ ಮತ್ತು ಶ್ರೀಕೃಷ್ಣ . ಇದು ರಸಿಕರ ವಲಯಕ್ಕೆ ಪರ್ಯಾಪ್ತವಾದ ಸಂಗತಿಯಾದರೂ, ಶ್ರದ್ಧಾಳುಗಳಿಗೆ ಇವು ಮೂರೂ ಜೀವಾತ್ಮ, ಸದ್ಗುರು ಮತ್ತು ಪರಮಾತ್ಮರ ಸಂಕೇತ. ಯದ್ಯಪಿ ಇಡಿಯ ಈ ಕಾವ್ಯದಲ್ಲಿ ಇಂಥ ಸಂಕೇತವನ್ನು ಅಪ್ಪಿ-ತಪ್ಪಿಯೂ ಜಯದೇವನು ಕೊಟ್ಟಿಲ್ಲವಾದರೂ ಈ ಪರಿಯ ಶ್ರದ್ಧಾಸಮಯಗಳಿಲ್ಲದೆ ಭಕ್ತ-ಭಾವುಕರಿಗೆ ಇಲ್ಲಿಯ ಉತ್ತಾನಶೃಂಗಾರವನ್ನು ಅರಗಿಸಿಕೊಳ್ಳಲು ಸಾಧ್ಯವಿಲ್ಲ. ವಸ್ತುತಃ ಗೀತಗೋವಿಂದವು ಚಿತ್ರಿಸುವ ಉತ್ಕಟಪ್ರಣಯ ಮತ್ತದರ ಅಡಿಪಾಯವಾದ ಸಂಗಾತಿಗಳ ಪರಸ್ಪರ ಸಮರ್ಪಣೆಯೇ ನಿಜವಾದ ಅಧ್ಯಾತ್ಮ. ಪ್ರೀತಿಯಲ್ಲಲ್ಲದೆ ಮತ್ತೆಲ್ಲಿ ಸ್ವಸಂತೋಷದಿಂದ ಅಹಂಕಾರ ಪರಿತ್ಯಾಗಕ್ಕೆ ಅವಕಾಶವುಂಟು? ಅಹಂಕಾರದ ಅಳಿವೇ ಅಲ್ಲವೆ ಅಧ್ಯಾತ್ಮದ ಅಂತರಂಗ! ಹೀಗೆ ಜೀವಸಾಮಾನ್ಯದ ಚೈತನ್ಯಮೂಲವಾದ ರತಿ ಮತ್ತು ರಾಗಗಳು (ಸುಖ ಮತ್ತು ಸುಖೇಚ್ಛೆ) ಪ್ರಣಯಿಗಳ ಸ್ವತಾವಿಸ್ಮತಿಯಲ್ಲಿ ಶೃಂಗಾರ ಮತ್ತು ಅನುರಾಗಗಳಾಗಿ ತೇರ್ಗಡೆಹೊಂದುವುದು ಜೀವತಾರಕವಲ್ಲದೆ ಮತ್ತೇನು? ಅರಸಿಕರಾದ ಭಕ್ತಾಭಾಸಭಾತರು ಕೂಡ ಇಂಥ ರಸಾನುಭವಕ್ಕೂ ಅದು ನೀಡುವ ಸೌಖ್ಯಸಂಸ್ಕಾರಕ್ಕೂ ಅರ್ಹರಾಗಲೆಂದು ಪ್ರಾಯಶಃ ಅನುಗ್ರಹಬುದ್ಧಿಯಿಂದಲೇ ನಮ್ಮ ಹಿರಿಯರು ಹೀಗೆ ಸಂಕೇತಗಳನ್ನು ಕಲ್ಪಿಸಿರಬಹುದು. ಈ ಕಾರಣದಿಂದಲೇ ಇಂಥ ವ್ಯಾಖ್ಯಾನಗಳಿಂದ ಕಲೆಗೆ ಅಪಚಾರವಾಗಿಲ್ಲ.
ಯಾವುದೇ ಜೀವಕ್ಕೆ ಆಕರ್ಷಣೆಯೇ ಜಿಜೀವಿಷೆ. ಶ್ರೀಕೃಷ್ಣನು ಅಂಥ ಪರಮಾಕರ್ಷಣೆ (ಕರ್ಷತೀತಿ ಕೃಷ್ಣಃ). ಜೀವಕ್ಕಾದರೋ ತನ್ನ ಅಸ್ತಿತ್ವವೇ ತನ್ನ ಪಾಲಿನ ಹೆಮ್ಮೆ, ಮತ್ತಿದನ್ನು ತಾನೊಲಿದ ಆಕರ್ಷಕವಸ್ತುವಿಗೆ ಒಪ್ಪಿಸಿಕೊಳ್ಳುವುದರಲ್ಲಿಯೇ ಎಲ್ಲಿಲ್ಲದ ಹಿಗ್ಗು (ರಾಧಾ ಶಬ್ದದ ಮೂಲವಾದ ರಾಧೃ ಎಂಬ ಧಾತುವಿನ ಅರ್ಥ ಶ್ರೇಷ್ಠ ಮತ್ತು ಅರ್ಪಣೆಯೆಂದು). ಹೀಗೆ ಈ ಕಾವ್ಯದ ನಾಯಕ-ನಾಯಿಕೆಯರ ತಣ್ತೀಸ್ವಾರಸ್ಯವನ್ನು ವರ್ಣಿಸುವುದುಂಟು. ಇನ್ನು ಇವರಿಬ್ಬರ ನಡುವಣ ಸಂಧಾನತಂತುವೆನಿಸಿದ ಸಖೀಯು ಜೀವ-ಬ್ರಹ್ಮಗಳ ಸಾಮರಸ್ಯವನ್ನು ಕಲ್ಪಿಸುವ ವೇದಾಂತಾಚಾರ್ಯನಾಗಿ ರೂಪುಗೊಳ್ಳಲು ತಡವೆಲ್ಲಿ? ಆದರೆ ಇಂಥ ಸದ್ಗುರುವು ಸಖ್ಯಭಾವದ, ನಿಸ್ಸಾ$Ìರ್ಥಸಹಕಾರದ ಸಾಕಾರವಾದ ಕಾರಣವೇ ಈ ಬಗೆಯ ಎಷ್ಟೆಲ್ಲ ವ್ಯಾಖ್ಯಾನಗಳಿಗೂ ಜುಗುಪ್ಸೆಯಾಗದ ಅವಕಾಶವಿದೆ.
ಇದಿಷ್ಟೂ ಹಿನ್ನೆಲೆಯಾಯಿತು. ಇನ್ನು ಗೀತಗೋವಿಂದದ ಮುನ್ನೆಲೆಯೆಂದರೆ ಜಗದ್ರಂಜಕವಾದ ವಸಂತ ಋತುವಿನ ಕಾಲದಲ್ಲಿ ಯಮುನಾತೀರದ ವೃಂದಾವನವೆಂಬ ದೇಶದಲ್ಲಿ ಕೃಷ್ಣ-ರಾಧೆಯರ ಸುಮ್ಮಾನ-ದುಮ್ಮಾನಗಳು, ಸಖೀಯ ಸಂಧಾನವಿಧಾನಗಳು, ಹಾಡು-ಕುಣಿತಗಳ ಹಬ್ಬಗಳು, ಪ್ರೌಢೋಜ್ಜ$Ìಲಪದ್ಯಗಳ ಹಾಗೂ ಶ್ರುತಿಪೇಶಲಪದಗಳ (ಅಷ್ಟಪದಿಗಳ) ನಾದ-ಮೋದಗಳು. ಇಲ್ಲಿ ಫೊÅàಷಿತಪತಿಕೆಯೆಂಬ ಒಂದು ಬಗೆಯನ್ನುಳಿದು ಮಿಕ್ಕೆಲ್ಲ ರೀತಿಯ ಶೃಂಗಾರನಾಯಿಕೆಯರಿಗೆ ಅವಕಾಶವುಂಟು. ಪರಮಪುರುಷನಾದ ಶ್ರೀಕೃಷ್ಣನೂ ಪ್ರೀತಿ-ಪ್ರಣಯಗಳ ಸುಳಿಗೆ ಸಿಲುಕಿದಾಗ ಸಾಮಾನ್ಯಪುರುಷನಾಗುತ್ತಾನೆ. ಹೀಗಾಗಿಯೇ ಅವನು ನಮ್ಮೆಲ್ಲರ ಪಾಲಿಗೆ ದಿಟವಾದ ಪರಮಪುರುಷನೆನಿಸುತ್ತಾನೆ. ಜಗನ್ಮಾತೆಯೆನಿಸಿದ ರಾಧೆಯೂ ಅಸೂಯೆ-ಸಂದೇಹಗಳಿಗೆ ತುತ್ತಾಗುತ್ತಾಳೆ, ವ್ಯಥೆಯ ಮಾಯೆಯಲ್ಲಿ ತೊಳಲುತ್ತಾಳೆ. ಆದುದರಿಂದಲೇ ಆಕೆ ನಮ್ಮ ಪಾಲಿಗೆ ಜಗನ್ಮಾಯೆಯಾಗುತ್ತಾಳೆ. ಹೀಗೆ ಅಲೌಕಿಕರಾದ ರಾಧಾ-ಕೃಷ್ಣರು ಲೌಕಿಕರಾಗುವ ಕಾರಣದಿಂದಲೇ ಅಲೌಕಿಕವಾದ ಶೃಂಗಾರರಸವು ನಮಗೆ ಸಿದ್ಧಿಸುತ್ತದೆ. ಇಲ್ಲವಾದಲ್ಲಿ ಪುರಾಣಗಳಲ್ಲಿ ಚಿತ್ರಿತವಾದಂತೆ ಬರಿಯ ನೀರಸಾರಾಧನೆ ಮಾತ್ರ ಉಳಿಯುತ್ತಿತ್ತು. ಈ ಅರ್ಥದಲ್ಲಿ ಕೃಷ್ಣನನ್ನು ನಮಗೆ ಮತ್ತೆ ತಂದುಕೊಟ್ಟ ಜಯದೇವ ಅಭಿವಂದನೀಯ. ದಿಟವೇ, ಈ ಕಾವ್ಯಕ್ಕೆ ಅನೇಕವ್ಯಾಖ್ಯಾನಗಳಿವೆ, ಅನುವಾದಗಳಿವೆ. ಆದರೆ, ಎಲ್ಲಕ್ಕಿಂತ ಮಿಗಿಲಾದ ವ್ಯಾಖ್ಯಾನವೆಂದರೆ ಪ್ರೀತಿಯ ಸವಿಯನ್ನು ಅನುಭವಿಸಿದ ಜೀವಿಯ ಸಂವೇದನೆ. ಈ ಸ್ಪಂದವು ಎಲ್ಲಿಯವರೆಗೆ ಉಳಿದಿರುವುದೋ ಅಲ್ಲಿಯವರೆಗೆ ಜಯದೇವನ ಕಾವ್ಯವು ಮತ್ತೆ ಮತ್ತೆ ನಮ್ಮೊಳಗೇ ಅನುಗೀತವಾಗುತ್ತಿರುತ್ತದೆ, ಅಭಿನೀತವೂ ಆಗುತ್ತಿರುತ್ತದೆ. ಇದು ನಮ್ಮ ಸಂಸ್ಕೃತಿಯ ಭಾಗ್ಯ.
ಶತಾವಧಾನಿ ಆರ್. ಗಣೇಶ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ
Road Mishap: ಬೈಕ್- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು
Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು
Rule; 5, 8ನೇ ತರಗತಿಯಲ್ಲಿ ಫೈಲ್ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!
Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.