ಬೆಹರಿನ್‌ನಲ್ಲಿ ಕನ್ನಡ ಡಿಂಡಿಮ
Team Udayavani, Nov 4, 2018, 6:00 AM IST
ಕಳೆದ ರವಿವಾರ ಪ್ರಕಟವಾದ ಲೇಖನ ಮುಂದುವರಿದುದು….
ನಾವು ಬೆಹರಿನ್‌ಗೆ ಹೋದದ್ದು ಪ್ರವಾಸಕ್ಕಲ್ಲ, ಸಾಹಿತ್ಯ ಸಮ್ಮೇಳನಕ್ಕೆ. ಹೀಗಾಗಿ ಸಮ್ಮೇಳನ ಮುಗಿದ ಮರುದಿನವೇ ಅಂದರೆ ಅಕ್ಟೋಬರ್ 7ರ ರಾತ್ರಿ ಹೊರಡುವ ವಿಮಾನದಲ್ಲಿ ನಮ್ಮ ಮರುಪ್ರಯಾಣದ ಟಿಕೆಟ್ ಬುಕ್ ಆಗಿತ್ತು. ಆದರೂ ಸಿಕ್ಕ ಅಲ್ಪ ಅವಧಿಯಲ್ಲೆ ಬೆಹರಿನ್ ಕನ್ನಡ ಸಂಘದ ಗೆಳೆಯರು ನಮಗಾಗಿ ಒಂದು ಕಿರು ಪ್ರವಾಸವನ್ನು ಏರ್ಪಡಿಸಿದ್ದರು. ಅಕ್ಟೋಬರ್ 7ರಂದು ಬೆಳಿಗ್ಗೆ ನಮಗೆ ಬೆಹರಿನ್ ದರ್ಶನ ಮಾಡಿಸಲು ಎರಡು ಹವಾನಿಯಂತ್ರಿತ ಬಸ್ಸುಗಳು ಸಿದ್ಧವಾಗಿದ್ದವು. ನಾನು ಕುಳಿತ ಬಸ್ಸಿನಲ್ಲಿ ಕನ್ನಡ ಸಂಘದ ಕಾರ್ಯದರ್ಶಿ ಕಿರಣ್ ಉಪಾಧ್ಯಾಯರು ಬೆಹರಿನ್ ಕುರಿತು ಹಲವು ಮಾಹಿತಿಗಳನ್ನು ನೀಡಿದರು. ಬೆಹರಿನ್ ಅಂದರೆ ಅರೇಬಿಕ್ ಭಾಷೆಯಲ್ಲಿ ಎರಡು ಸಮುದ್ರ ಎಂದು ಅರ್ಥ. ಆ ಎರಡು ಸಮುದ್ರಗಳು ಯಾವುದೆಂಬ ಬಗ್ಗೆ ಇನ್ನೂ ಚರ್ಚೆ ನಡೆಯುತ್ತಿದೆ. ಇಲ್ಲಿನ ಕರೆನ್ಸಿ ಬಹರೇನಿ ದೀನಾರ್. ಒಂದು ದೀನಾರ್ ನಮ್ಮ ದೇಶದ 195 ರೂ.ಗೆ ಸಮ. ಬೆಹರಿನ್ ಬಗ್ಗೆ ಬಸ್ಸಿನಲ್ಲಿ ಕುಳಿತವರು ಕೇಳುತ್ತಿದ್ದ ಪ್ರಶ್ನೆಗಳಿಗೆ ಕಿರಣ್ ಉಪಾಧ್ಯಾಯರು ತಾಳ್ಮೆಯಿಂದ ಉತ್ತರಿಸುತ್ತಿದ್ದರು. ಅಲ್ಲಿ ಕೆಲಸವಿಲ್ಲದವರಿಗೆ ನಿರುದ್ಯೋಗ ಭತ್ತೆ ಇದೆ. ಬಡವರಿಗೆ ಮಹಾರಾಜರು ಮನೆ ಕಟ್ಟಿಸಿಕೊಟ್ಟಿದ್ದಾರೆ ಅಂತ ಉಪಾಧ್ಯಾಯರು ಹೇಳಿದಾಗ ಬಸ್ಸಿನಲ್ಲಿದ್ದ ಗೆಳೆಯರೊಬ್ಬರಿಗೆ ನಮ್ಮ ಆಶ್ರಯ ಮನೆಗಳ ನೆನಪಾಯಿತು. “ಇಲ್ಲಿ ಈ ಮನೆಗಳಿಗೆ ಏನ್ ಹೆಸರಿಟ್ಟಾರ್ರೀ?’ ಅಂತ ಕೇಳಿದರು. ಉಪಾಧ್ಯಾಯರು “ಗೊತ್ತಿಲ್ಲ’ ಅಂದರು. ನಾನು ರಾಜ ಬಿಟ್ಟಿಯಾಗಿ ಕಟ್ಟಿಸಿಕೊಟ್ಟ ಮನೆಗಳಾದ್ದರಿಂದ “ಶೇ-ಕಿಂಗ್ ಹೌಸ್ ಅನ್ನಬಹುದು’ ಅಂದೆ !
ರಾಯಲ್ ಕ್ಯಾಮಲ್ ಫಾರ್ಮ್
ಬೆಹರಿನ್‌ನಲ್ಲಿ ನಾವು ನೋಡಿದ ಮೊದಲ ಪ್ರವಾಸಿ ತಾಣ ರಾಜವಂಶಸ್ಥರ ಒಡೆತನದಲ್ಲಿರುವ ರಾಯಲ್ ಕ್ಯಾಮಲ್ ಫಾರ್ಮ್ ಅರ್ಥಾತ್ ಒಂಟೆ ಸಾಕುವ ಸ್ಥಳ. ಇಲ್ಲಿ 500ಕ್ಕೂ ಹೆಚ್ಚು ವಿವಿಧ ವಯಸ್ಸಿನ ಒಂಟೆಗಳನ್ನು ಸಾಕಲಾಗುತ್ತಿದೆ. ನಮ್ಮಲ್ಲಿ ರೇಸಿಗಾಗಿ ಕುದುರೆಗಳನ್ನು ಸಾಕುವಂತೆ ಅಲ್ಲಿ ಒಂಟೆಗಳನ್ನು ಸಾಕುತ್ತಾರೆ. ಇಲ್ಲಿ ಹೆಣ್ಣು ಒಂಟೆಗಳಿಗೆ ತಿರುಗಾಡಲು ಸ್ವಾತಂತ್ರ್ಯ ಉಂಟು. ಆದರೆ, ಗಂಡು ಒಂಟೆಗಳು ಹೆಣ್ಣಿಗಾಗಿ ಕಚ್ಚಾಡುತ್ತವೆ ಎಂಬ ಕಾರಣಕ್ಕೆ ಅವುಗಳನ್ನು ಕಟ್ಟಿಹಾಕುತ್ತಾರೆ ! ಒಂಟೆಗಳ ತಂಟೆಗೆ ಹೋದರೆ ಅವು ಕಚ್ಚುತ್ತವೆ ಅಂತ ಉಪಾಧ್ಯಾಯರು ಮೊದಲೇ ಎಚ್ಚರಿಕೆ ನೀಡಿದ್ದರಿಂದ ನಾನು ಒಂಟೆಯ ಜೊತೆ ಸೆಲ್ಫಿ ತೆಗೆದುಕೊಳ್ಳುವ ಸಾಹಸ ಮಾಡಲಿಲ್ಲ. ಅಲ್ಲಿದ್ದ ಖರ್ಜೂರದ ಗಿಡದಲ್ಲಿ ಕೈಗೆಟಕುವ ಎತ್ತರದಲ್ಲಿ ಹಣ್ಣಿನ ಗೊನೆ ಇತ್ತು. ನಮ್ಮಲ್ಲಿ ಕೆಲವರು ಹಣ್ಣುಗಳನ್ನು ಕಿತ್ತು ರುಚಿ ನೋಡತೊಡಗಿದರು. ಇದನ್ನು ಗಮನಿಸಿದ ವಿಮರ್ಶಕ ಎಸ್. ಆರ್. ವಿಜಯಶಂಕರ್ ಬೇಸರದಿಂದ, “ನಮ್ಮ ಜನರಿಗೆ ನಾಗರಿಕ ಪ್ರಜ್ಞೆಯೇ ಇಲ್ಲ’ ಅಂದರು. ನಾನು, “ನಿಜ, ಹಣ್ಣುಗಳನ್ನು ಕೀಳುವವರು ಕೀಳು ಬುದ್ಧಿಯವರು’ ಅಂದಾಗ ಗಂಭೀರ ವಿಮರ್ಶಕ ಎಸ್.ಆರ್. ವಿ. ಮೊಗದಲ್ಲೂ ನಗು ಮೂಡಿತ್ತು.
ಅಲ್ ಜಸ್ರಾ ಹೌಸ್
ಬೆಹರಿನ್‌ನ ಸಾಂಪ್ರದಾಯಿಕ ವಾಸ್ತುಶಿಲ್ಪಕ್ಕೆ ಸಾಕ್ಷಿಯಾಗಿರುವ ಈ ಮನೆಯನ್ನು 1907ರಲ್ಲಿ ದೊರೆ ಶೇಕ್ ಹಮದ್ ಬಿನ್ ಅಬ್ದುÇÉಾ ಅಲ್ ಖಲೀಫ್ ಕಟ್ಟಿಸಿದರು. ಹೊರಗಿನಿಂದ ತೀರಾ ಸರಳವಾಗಿ ಕಾಣುವ ಈ ಕಟ್ಟಡದ ಒಳಗೆ ಹಲವು ಆಕರ್ಷಕವಾಗಿ ಅಲಂಕರಿಸಿದ ಕೊಠಡಿಗಳಿವೆ. ಹವಳದ ಕಲ್ಲು, ಜಿಪ್ಸಮ್, ಸುಣ್ಣ, ಖರ್ಜೂರದ ಮರ, ಬಿದಿರು ಮುಂತಾದ ಸ್ಥಳೀಯವಾಗಿ ಸಿಗುವ ವಸ್ತುಗಳಿಂದಲೇ ಈ ಮನೆಯನ್ನು ನಿರ್ಮಿಸಲಾಗಿದೆ. ಗೋಡೆಗಳು ದಪ್ಪವಾಗಿದ್ದು ಶಾಖವನ್ನು ತಡೆಯುವುದರಿಂದ ಹೊರಗೆ ವಿಪರೀತ ಬಿಸಿ ಇದ್ದರೂ ಮನೆಯ ಒಳಗೆ ಸದಾ ತಣ್ಣಗಿರುತ್ತದೆ. ಅಲ್ಲಿನ ಪ್ರತಿಯೊಂದು ಕೊಠಡಿಯೂ, “ಕಥೆ ಹೇಳುವೆ ನನ್ನ ಕಥೆ ಹೇಳುವೆ’ ಎಂದು ನಮ್ಮನ್ನು ಕರೆಯುತ್ತಿತ್ತು.
ಪ್ರಥಮ ತೈಲಬಾವಿ
ಕೊಲ್ಲಿ ರಾಷ್ಟ್ರಗಳ ಆರ್ಥಿಕತೆಯ ಜೀವಾಳ ಪೆಟ್ರೋಲಿಯಂ ಉತ್ಪನ್ನಗಳು. ಪರ್ಸಿಯನ್ ಕೊಲ್ಲಿಯ ಪ್ರಥಮ ತೈಲಬಾವಿ ಬೆಹರಿನ್‌ನಲ್ಲಿದೆ. 1932ರ ಜೂನ್ 2ರಂದು ಇಲ್ಲಿ ಮೊದಲ ಬಾರಿಗೆ ತೈಲವನ್ನು ತೆಗೆಯಲಾಯಿತು. ಇದನ್ನು ಈಗ “ಫಸ್ಟ್ ಆಯಿಲ್ ವೆಲ್’ ಎಂಬ ಹೆಸರಿನಲ್ಲಿ ಒಂದು ಸ್ಮಾರಕವಾಗಿ ಉಳಿಸಿಕೊಂಡಿದ್ದಾರೆ. ಆಗ ಎಣ್ಣೆ ತೆಗೆಯಲು ಬಳಸುತ್ತಿದ್ದ ಕೊಳವೆ ಬಾವಿ, ಏತ, ಪಂಪು ಇತ್ಯಾದಿಗಳನ್ನು ಇಲ್ಲಿ ಪ್ರದರ್ಶನಕ್ಕೆ ಇಟ್ಟಿದ್ದಾರೆ. ಇದನ್ನು ನೋಡಿ ಬಂದ ಬಳಿಕ ಕವಿ ಸಿದ್ಧಲಿಂಗಯ್ಯನವರು, “ಎಣ್ಣೆ ಬಾವಿ ಅಂತ ಹೇಳಿದಾಗ, ನಾನು ಇನ್ನೇನೋ ನಿರೀಕ್ಷೆ ಮಾಡಿದ್ದೆ’ ಎಂದರು. ಇಲ್ಲಿ ಸಿಗುವ ಎಣ್ಣೆ ಎಡಿಬಲ್ ಅಲ್ಲ, ಕುಡಿಬಲ್ ಎಣ್ಣೆಯೂ ಅಲ್ಲ !
ಟ್ರೀ ಆಫ್ ಲೈಫ್
ಬೆಹರಿನ್ ಎಂಬುದನ್ನು ಕೆಲವರು ಬಹರೈನ್ ಅಂತಲೂ ಬರೆಯು ತ್ತಾರೆ. ಆದರೆ, ಇಲ್ಲಿ ರೈನ್ ಬರುವುದೇ ಇಲ್ಲ ! ಖರ್ಜೂರ ಬಿಟ್ಟರೆ ಇತರ ಸಸ್ಯಗಳು ಬೆಳೆಯುವುದಿಲ್ಲ. ಇಂಥ ಮರುಭೂಮಿಯಲ್ಲೂ 32 ಅಡಿ ಎತ್ತರದ ಹಚ್ಚಹಸಿರಾದ ಮರ ಇದೆ ಎಂದರೆ ನಂಬುತ್ತೀರಾ? ನಂಬಲೇ ಬೇಕು. ಏಕೆಂದರೆ, ನಾವು ಅದನ್ನು ಕಣ್ಣಾರೆ ಕಂಡಿದ್ದೇವೆ. ಟ್ರೀ ಆಫ್ ಲೈಫ್ ಎಂದು ಕರೆಯಲ್ಪಡುವ ಈ ಮರ ಮನಾಮದಿಂದ 40 ಕಿ.ಮೀ. ದೂರದಲ್ಲಿದೆ. ಇದು 400 ವರ್ಷಗಳಷ್ಟು ಹಳೆಯದು ಎಂದು ಅಂದಾಜು ಮಾಡಲಾಗಿದೆ. ನೀರಿಲ್ಲದೆ ಬದುಕುತ್ತಿರುವ ಈ ಮರವನ್ನು ನೋಡಲು ವರ್ಷಕ್ಕೆ ಸುಮಾರು 50,000 ಜನ ಪ್ರವಾಸಿಗರು ಬರುತ್ತಾರಂತೆ. ಕೆಲ ವರು ಮರದ ಮೇಲೆ ತಮ್ಮ ಹೆಸರು ಕೆತ್ತಿ ಅಜರಾ-ಮರರಾಗುವ ಪ್ರಯತ್ನ ನಡೆಸಿದ್ದಾರೆ. ನೀರಿಲ್ಲದಿದ್ದರೂ ಈ ಮರ ನಿತ್ಯಹರಿದ್ವರ್ಣದಿಂದ ಕಂಗೊಳಿಸುತ್ತಿರುವುದು ಹೇಗೆ? ಎಂಬ ಬಗ್ಗೆ ಈಗಲೂ ಚರ್ಚೆ ನಡೆಯುತ್ತಿದೆ.
ನಾವು ನೋಡಿದ ಇನ್ನೆರಡು ಪ್ರೇಕ್ಷಣೀಯ ಸ್ಥಳಗಳೆಂದರೆ ಸೌದಿ ಕಾಸ್‌ವೇ ಮತ್ತು ಕ್ರಾಫ್ಟ್ ಮ್ಯೂಸಿಯಂ. ಸೌದಿ ಕಾಸ್‌ವೇ ಬಹರೇನ್ ದೇಶವನ್ನು ಅದರ ನೆರೆಯ ರಾಷ್ಟ್ರವಾದ ಸೌದಿಅರೇಬಿಯಾದೊಂದಿಗೆ ಬೆಸೆಯುವ 25 ಕಿ.ಮೀ. ಉದ್ದದ ಸೇತುವೆಗಳ ಸಾಲು. ಇದನ್ನು 1981ರಲ್ಲಿ ಆರಂಭಿಸಿ 1986ರಲ್ಲಿ ಪೂರ್ಣಗೊಳಿಸಲಾಯಿತು. ಈ ಸೇತುವೆಯ ಅಧಿಕೃತ ಹೆಸರು ಕಿಂಗ್ ಫಾದ್ ಕಾಸ್‌ವೇ. ಸೌದಿಅರೇಬಿಯಾದೊಂದಿಗೆ ಬೆಹರಿನ್‌ನ ಸಂಬಂಧ ಉತ್ತಮವಾಗಿರುವುದರಿಂದ ಅನೇಕರು ಉದ್ಯೋಗ ವ್ಯವಹಾರದ ನಿಮಿತ್ತ ದಿನವೂ ಈ ಸೇತುವೆಯ ಮೂಲಕ ಅಲ್ಲಿಗೆ ಹೋಗಿಬರುತ್ತಾರೆ.
ಕ್ರಾಫ್ಟ್ ಮ್ಯೂಸಿಯಂನಲ್ಲಿ ಮಡಕೆ ಮಾಡುವುದು, ಕೈಮಗ್ಗ, ಮರದ ಕೆತ್ತನೆ ಮುಂತಾದ ವಿವಿಧ ವೃತ್ತಿಗಳನ್ನು ಪರಿಚಯಿಸುವ ವ್ಯವಸ್ಥೆಯಿದೆ. ಸಮಯದ ಅಭಾವದಿಂದ ಅದನ್ನು ವಿವರವಾಗಿ ನೋಡಲು ಸಾಧ್ಯ ವಾಗಲಿಲ್ಲ. ಕೆಲಸಕ್ಕೆ ಹೋಗುವ ಗಡಿಬಿಡಿಯಲ್ಲಿರುವವರು ದರ್ಶನಿಯಲ್ಲಿ ನಿಂತುಕೊಂಡೇ ಉಪಾಹಾರ ಮಾಡುವಂತೆ ನಮ್ಮ ಬೆಹರಿನ್ ದರ್ಶನವೂ ತುಂಬಾ ತರಾತುರಿಯಲ್ಲಿ ಮುಗಿಯಿತು. ಇಷ್ಟಾದರೂ ನೋಡಲು ಅನುವು ಮಾಡಿಕೊಟ್ಟ ಬೆಹರಿನ್ ಕನ್ನಡ ಸಂಘದ ಗೆಳೆಯರಿಗೆ ಧನ್ಯವಾದ ಹೇಳಲೇಬೇಕು. ಬೆಹರಿನ್‌ನ ಗಗನಚುಂಬಿ ಕಟ್ಟಡಗಳು, ಅಗಲವಾದ ರಸ್ತೆಗಳು, ಶಾಪಿಂಗ್ ಮಾಲ್‌ಗಳು, ದೊಡ್ಡ ದೊಡ್ಡ ಕಾರು, ಬಸ್ಸುಗಳು, ಖರ್ಜೂರದ ಮರಗಳನ್ನು ನೋಡಿದಾಗ ಅದು ನಾನು ಈ ಹಿಂದೆ ನೋಡಿದ ಇತರ ಗಲ್ಫ್ ದೇಶಗಳಿಗಿಂತ ತೀರಾ ಭಿನ್ನ ಅನ್ನಿಸಲಿಲ್ಲ. ಹವಾಮಾನವೂ ಹಾಗೆಯೇ ಅನ್ನಬಹುದು.
ಅಬ್ಟಾ ಅದೆಷ್ಟು ಬಿಸಿ, ಉರಿ
ಬೆಂಕಿ ಉಗುಳುವ ಈ
ಕೊಲ್ಲಿ ರಾಷ್ಟ್ರ ಬಹರೇನು!
ಹವಾನಿಯಂತ್ರಿತ ವಾಹನ
ವಸತಿ ವ್ಯವಸ್ಥೆ ಇಲ್ಲದಿದ್ದರೆ
ಇಲ್ಲಿಗೆ ಜನ ಬಹರೇನು?
ಎಲ್ಲೆಲ್ಲೂ ಕನ್ನಡದ ಕಲರವ
ಬೆಹರಿನ್‌ನಲ್ಲಿ ನಾವು ನಾಲ್ಕು ದಿನ ಇದ್ದರೂ ಕರ್ನಾಟಕದಿಂದ ಹೊರಗಿದ್ದೇವೆ ಅನ್ನಿಸಲಿಲ್ಲ. ಏಕೆಂದರೆ, ನಮ್ಮ ತಂಡದಲ್ಲಿ 90ಕ್ಕೂ ಮಿಕ್ಕಿ ಕನ್ನಡಿಗರಿದ್ದೆವು. ನಾವಿದ್ದ ಹೊಟೇಲ್‌ನ ಮಾಲಿಕರು, ಕೆಲಸಗಾರರು, ನವåಗೆ ತಿಂಡಿ ಊಟ ಒದಗಿಸುತ್ತಿದ್ದವರು ಎಲ್ಲರೂ ಕನ್ನಡದವರು. ಬೆಹರಿನ್ ಕನ್ನಡ ಸಂಘದ ಕಾರ್ಯಕರ್ತರು ಉಪಾಹಾರ ಮತ್ತು ಊಟದ ಸಮಯದಲ್ಲಿ ನಮಗೆ ಮಾಡುತ್ತಿದ್ದ ಉಪಚಾರವನ್ನು ಕಂಡಾಗ ನಾವು ಯಾವುದೋ ವಿವಾಹ ಸಮಾರಂಭಕ್ಕೆ ಬಂದಿದ್ದೇವೆ ಅನ್ನಿಸುತ್ತಿತ್ತು. ಅಲ್ಲಿನ ಕನ್ನಡಿಗರು ಸಮ್ಮೇಳನಕ್ಕೆ ಬಂದ ತಮ್ಮ ನೆಚ್ಚಿನ ಸಾಹಿತಿಗಳ ಬಳಿ, “ಪತ್ರಿಕೆಗಳಲ್ಲಿ ನಿಮ್ಮ ಬರಹಗಳನ್ನು ಓದುತ್ತೇವೆ, ಟಿವಿಯಲ್ಲಿ ನೋಡಿದ್ದೇವೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿ ಫೋಟೋ ತೆಗೆಸಿಕೊಂಡು ಸಂಭ್ರಮಿಸಿದರು. ಒಬ್ಬ ಸಾಹಿತಿಗೆ ಇದಕ್ಕಿಂತ ಹೆಚ್ಚು ಸಂತೋಷವನ್ನು ಬಹುಶಃ ಯಾವ ಪ್ರಶಸ್ತಿಯೂ ಕೊಡಲಾರದು. ಬೆಹರಿನ್ ಪ್ರವಾಸದಿಂದ ಇನ್ನೊಂದು ಲಾಭವೆಂದರೆ ಬೆಂಗಳೂರಿನಲ್ಲಿದ್ದಾಗ ಸದಾ ಒತ್ತಡದಲ್ಲಿರುವ ಪರಿಷತ್ತಿನ ಅಧ್ಯಕ್ಷರಾದ ಮನು ಬಳಿಗಾರ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಎಸ್.ಜಿ. ಸಿದ್ಧರಾಮಯ್ಯ, ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾದ ವಸುಂಧರಾ ಭೂಪತಿ, ರಾಜ್ಯಸಭಾ ಸದಸ್ಯ ಎಲ್. ಹನುಮಂತಯ್ಯ ಮುಂತಾದವರು ನಾಲ್ಕು ದಿನ ಆರಾಮವಾಗಿ ನಗುನಗುತ್ತ ಹರಟೆ ಹೊಡೆಯಲು ಸಿಕ್ಕರು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ನಡೆದ ಡಾ. ಜಯದೇವಿ ಜಂಗಮಶೆಟ್ಟಿಯವರ ಗಾಯನ, ಬಿ. ವಿ. ಕಾರಂತರನ್ನು ನೆನಪಿಸಿದ ಅವರ ಶಿಷ್ಯ ಅರುಣ್‌ಸಾಗರ ಅವರ ಹಾಡು, ನಿರೂಪಣೆ ಹಾಗೂ ಸ್ಥಳೀಯ ಕಲಾವಿದರ ಪ್ರತಿಭಾ ಪ್ರದರ್ಶನ ಪ್ರೇಕ್ಷಕರಿಗೆ ಮುದನೀಡಿದವು.
ನಾನು ಬೆಹರಿನ್‌ಗೆ ಹೋಗುತ್ತಿರುವ ಸಂಗತಿಯನ್ನು ಫೇಸ್‌ಬುಕ್ ಮೂಲಕ ತಿಳಿದುಕೊಂಡ ಮಿತ್ರ ತಿಲಕನಾಥ್ ಮಂಜೇಶ್ವರ, “ಅಲ್ಲಿ ನನ್ನ ತಮ್ಮ ರಮೇಶ ಇದ್ದಾನೆ’ ಅಂತ ಸಂದೇಶ ಕಳಿಸಿದ್ದರು. ನಾನು ಅವರನ್ನು ಹುಡುಕುವ ಮೊದಲೇ ರಮೇಶ್ ಮಂಜೇಶ್ವರ ನನ್ನನ್ನು ಭೇಟಿಯಾದರು. ವಾಪಸು ಹೊರಡುವಾಗ ನಮ್ಮ ಹೊಟೇಲ್‌ಗೆ ಬಂದು ಬೆಹರಿನ್ ಕನ್ನಡ ಸಂಘ 2016ರಲ್ಲಿ ಏರ್ಪಡಿಸಿದ್ದ ಬೆಹರಿನ್ ಯಕ್ಷ ವೈಭವದ ಸ್ಮರಣ ಸಂಚಿಕೆಯನ್ನು ಕೊಟ್ಟರು. ಜೊತೆಗೆ ಖರ್ಜೂರದ ಉಡುಗೊರೆಯನ್ನೂ ನೀಡಿದರು.
ಮರಳಿ ಬೆಂಗಳೂರಿಗೆ
ಅಕ್ಟೋಬರ್ 7ರ ಸಂಜೆ ಬೆಹರಿನ್ ಕನ್ನಡಿಗರಿಗೆ ವಿದಾಯ ಹೇಳುವ ಸಮಯ ಹತ್ತಿರವಾಗುತ್ತಿದ್ದಂತೆ ಎಲ್ಲರ ಹೃದಯ ಭಾರವಾಗತೊಡಗಿತು. ಮೊಬೈಲ್‌ನಲ್ಲಿ ಸೆಲ್ಫಿ ಹಾಗೂ ಫೋಟೋ ತೆಗೆಸಿಕೊಳ್ಳುತ್ತಿದ್ದವರನ್ನು ವಿಮಾನ ನಿಲ್ದಾಣಕ್ಕೆ ಹೊರಡಲು ಸಿದ್ಧವಾಗುತ್ತಿದ್ದ ಬಸ್ ಹತ್ತುವಂತೆ ಸಂಘಟಕರು ಪದೇಪದೇ ವಿನಂತಿಸಿಕೊಳ್ಳುತ್ತಿದ್ದರು. ಸಂಘದ ಪದಾಧಿಕಾರಿಗಳು ವಿಮಾನ ನಿಲ್ದಾಣದವರೆಗೂ ಬಂದು ವಿದಾಯ ಕೋರಿದರು. ಶಾಪಿಂಗ್‌ಗೆ ಹೆಚ್ಚು ಸಮಯ ಸಿಗದೇ ಇದ್ದದ್ದರಿಂದ ನಮ್ಮ ತಂಡದಲ್ಲಿದ್ದ ಕೆಲವರು ಬಹರೇನ್ ವಿಮಾನ ನಿಲ್ದಾಣದ ಡ್ನೂಟಿ ಫ್ರೀ ಅಂಗಡಿಗಳಲ್ಲಿ ತಮಗೆ ಬೇಕಾದ ವಸ್ತುಗಳನ್ನು ಖರೀದಿಸಿದರು. ನನ್ನೊಂದಿಗಿದ್ದ ಕವಿ ಲಕ್ಷ್ಮಣರಾವ್ ಅವರ ಹೆಂಡತಿಗೆ ಚಿನ್ನದ ಸರ ಕೊಂಡುಕೊಳ್ಳಲು ನನ್ನನ್ನು ಕರೆದಾಗ ನನಗೆ ಆಶ್ಚರ್ಯವಾಯಿತು. “”ಏನು ವಿಶೇಷ?” ಅಂತ ಕೇಳಿದೆ. “”ಇವತ್ತು ಅವಳ ಹುಟ್ಟುಹಬ್ಬ. ಮರೆತೇ ಬಿಟ್ಟಿದ್ದೆ” ಅಂದರು. ಆ ತಪ್ಪಿಗೆ ಪ್ರಾಯಶ್ಚಿತ್ತವಾಗಿ ಗೆಳೆಯ ಬಿ.ಆರ್.ಎಲ್. 30,000 ರೂ. ಖರ್ಚು ಮಾಡಬೇಕಾಯಿತು! ಬೆಹರಿನ್ ಮುತ್ತು ಹಾಗೂ ಹವಳಕ್ಕೆ ಪ್ರಸಿದ್ಧ. “”ನೀವು ಮುತ್ತು ತೆಗೆದುಕೊಳ್ಳಲಿಲ್ಲವಾ?” ಅಂತ ಮಿತ್ರರೊಬ್ಬರು ಕೇಳಿದಾಗ ನಾನು ನಗುತ್ತ, “”ಈಗ ನಾನು ಮುತ್ತು ತೆಗೆದುಕೊಳ್ಳುವ ಮತ್ತು ಕೊಡುವ ವಯಸ್ಸನ್ನು ದಾಟಿದ್ದೇನೆ” ಎಂದೆ.
(ಮುಗಿಯಿತು)
ಎಚ್. ಡುಂಡಿರಾಜ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Harapanahalli: ಪ್ರತಿಷ್ಠೆಯ ಕಣವಾದ ಬಿ90 ಸೊಸೈಟಿ ಚುನಾವಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.