ಕನ್ನಡನಾಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ !
Team Udayavani, Dec 2, 2018, 6:00 AM IST
ಬಹಳ ಹಿಂದೆ ಒಂದು ಗ್ರಹಿಕೆ ಇತ್ತು : ಮಾಸ್ತರಿಕೆಗೆ ಭಾರತದಲ್ಲಿ ಸರಿಯಾದ ಸಂಬಳ ಸಿಗದ ಕಾರಣವೇ ಆ ವೃತ್ತಿಯನ್ನು ಯಾರೂ ಆಯ್ಕೆ ಮಾಡಿಕೊಳ್ಳುವುದಿಲ್ಲ , ಆ ಕಾರಣಕ್ಕೇ ಭಾರತದ ಶೈಕ್ಷಣಿಕ ಮಟ್ಟ ಅಂತರಾಷ್ಟ್ರೀಯ ಮಟ್ಟದಲ್ಲಿ ಉತ್ತಮವಾಗಿಲ್ಲ ಎಂದು. ಆದರೆ ಈಗ ಮಾಸ್ತರರ ಸಂಬಳವೂ ಇತರೆ ಸಾರ್ವಜನಿಕ ಉದ್ಯೋಗಗಳಿಗೆ ಸರಿಸಮನಾಗಿದೆ. ಆದರೆ, ಶಾಲೆಯಲ್ಲಿ ಗುಣಮಟ್ಟ ಮೂಡುತ್ತಿಲ್ಲ. ಮಾಸ್ತರರ ಮಾತಂತಿರಲಿ, ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರು ಸಾಫ್ಟ್ವೇರ್ ಮಂದಿಗಿಂತಲೂ ದೊಡ್ಡ ಸಂಬಳವನ್ನು ಪಡೆಯುತ್ತಿದ್ದಾರೆ ಮತ್ತು ಅವರಿಗಿಂತಲೂ ಸುಖದಾಯಕವಾದ ಬದುಕನ್ನು ಅನುಭವಿಸುತ್ತಿದ್ದಾರೆ.
ಒಮ್ಮೆ ಅನುವಾದದ ತಂತ್ರಜ್ಞಾನ ಚುರುಕುಗೊಂಡು ಶೇ. 90 ರಷ್ಟು ಉತ್ತಮ ಅನುವಾದಗಳನ್ನು ಅವು ಕೊಟ್ಟರೆ, ಭಾಷೆಯ ಅಡ್ಡಗೋಡೆ ಕಳಚಿ ಬೀಳುತ್ತದೆ. ಇದು ಕೇವಲ ಲಿಖೀತ ಪಠ್ಯಕ್ಕೆ ಮಾತ್ರವಲ್ಲ, ನಮ್ಮ ಮಾತುಗಳಿಗೂ ಅನುವಾದ ಸಾಧ್ಯವಾಗಬೇಕು. ಅಂದರೆ ನಾವು ಕನ್ನಡದಲ್ಲಿ (ಅಥವಾ ಯಾವುದೇ ದೇಶೀಯ ಭಾಷೆ) ಮಾತನಾಡುತ್ತಿದ್ದರೂ, ತಂತ್ರಜ್ಞಾನದ ಮೂಲಕ ಇಂಗ್ಲಿಶ್ (ಅಥವಾ ಬೇಕಾದ ಭಾಷೆ) ಮುಖಾಂತರ ಅದನ್ನು ಕೇಳುವ ಸಾಧ್ಯತೆ ಸೃಷ್ಟಿಯಾಗಬೇಕು. ಒಮ್ಮೆ ಇದು ಯಶಸ್ವಿಯಾದರೆ, ನಾವು ಯಾವ ಭಾಷೆಯಲ್ಲಿ ವಿದ್ಯೆಯನ್ನು ಕಲಿಯುತ್ತೇನೆ ಮತ್ತು ಯಾವ ಭಾಷೆಯಲ್ಲಿ ಮಾತನಾಡುತ್ತೇನೆ ಎನ್ನುವುದು ಸಮಸ್ಯೆಯೇ ಆಗುವುದಿಲ್ಲ; ಕೇವಲ ನಮ್ಮ ಜ್ಞಾನ ಮಾತ್ರ ವ್ಯವಹಾರದಲ್ಲಿ ಮುಖ್ಯವಾಗುತ್ತದೆ.
ಇಂದಿನ ಸರಕಾರಿ ಶಾಲೆಗಳ ಸ್ಥಿತಿಗತಿಗಳು ಅತ್ಯಂತ ಚಿಂತಾಜನಕ ಸ್ಥಿತಿಯನ್ನು ತಲುಪಿವೆ. ಕನ್ನಡವನ್ನು ಆಡುಭಾಷೆಯಾಗಿ ಸಮಾಜ ನಮಗೆ ಕಲಿಸಿಕೊಟ್ಟರೂ, ಭಾಷೆಯಲ್ಲಿ ಪ್ರಬುದ್ಧತೆಯನ್ನು ಬೆಳೆಸುತ್ತಿದ್ದುದು, ಹೆಮ್ಮೆಯನ್ನು ಕಲಿಸುತ್ತಿದ್ದುದು ನಮ್ಮ ಸರಕಾರಿ ಶಾಲೆಗಳೇ ಆಗಿದ್ದವು. ಆದರೆ, ಈಗವು ವ್ಯವಸ್ಥಿತವಾಗಿ ಮೂಲೆಗುಂಪಾಗಿ ಬಿಟ್ಟಿವೆ. ಗುಣಪಡಿಸಲಾಗದ ರೋಗ ಹಿಡಿದಂತೆ ನರಳುತ್ತಿವೆ. ಎಲ್ಲಿಯವರೆಗೆ ಸರಕಾರಿ ಶಾಲೆಗಳ ಗುಣಮಟ್ಟ ಸುಧಾರಿಸುವುದಿಲ್ಲವೋ, ಅಲ್ಲಿಯವರೆಗೆ ಕನ್ನಡದ ಏಳಿಗೆಯನ್ನು ಊಹಿಸುವುದು ಕಷ್ಟ.
ನಮಗೆ ಸೊಗಸಾದ ವಿದ್ಯೆಯನ್ನು ಧಾರೆಯೆರೆದು ಈ ಮಟ್ಟಕ್ಕೆ ಬೆಳೆಸಿದ ಈ ಕನ್ನಡ ಶಾಲೆಗಳು ಹೀಗೇಕೆ ಆಗಿವೆ- ಎಂದು ಒಮ್ಮೆ ಆಲೋಚಿಸೋಣ. ಉತ್ತರ ಅಷ್ಟೇನೂ ಸಂಕೀರ್ಣವಾದದ್ದಲ್ಲ. ಸುಮಾರು 80ರ ದಶಕದ ಹೊತ್ತಿಗೆ ಸಮಾಜವು ಇಂಗ್ಲಿಶ್ ಭಾಷೆಯ ಮಹತ್ವವನ್ನು ಅರಿಯಲಾರಂಭಿಸಿತು. ಜಗತ್ತಿನಾದ್ಯಂತ ಇಂಗ್ಲಿಶ್ ಭಾಷೆ ಬಲಿಷ್ಠವಾಗತೊಡಗಿದ್ದು ಸುಸ್ಪಷ್ಟವಾಗಿತ್ತು. ಯಾವ ವಿದ್ಯೆಯು ಬಾರದಿದ್ದರೂ ಚಿಂತೆಯಿಲ್ಲ, ಸೊಗಸಾಗಿ ಇಂಗ್ಲಿಶ್ ಮಾತಾಡಲು ಬಂದರೆ ಸಾಕು- ಒಳ್ಳೆಯ ಉದ್ಯೋಗವನ್ನು ಸಂಪಾದಿಸಬಹುದು ಎನ್ನುವುದನ್ನು ಸಮಾಜ ಅರ್ಥ ಮಾಡಿಕೊಳ್ಳತೊಡಗಿತು. ಅವರ ಈ ನಂಬಿಕೆ ತಪ್ಪಾಗಿಯೇನೂ ಇರಲಿಲ್ಲ. ಇಂಗ್ಲಿಶ್ ಭಾಷೆ ಕ್ರಮೇಣವಾಗಿ ದೇಶೀಯ ಭಾಷೆಗಳ ಮೇಲೆ ಆಕ್ರಮಣ ಮಾಡಲು ತೊಡಗಿತ್ತು. ಸಹಜವಾಗಿಯೇ ಪೋಷಕರು ಮಕ್ಕಳನ್ನು ಇಂಗ್ಲಿಶ್ ಚೆನ್ನಾಗಿ ಕಲಿಸುವ ಶಾಲೆಗಳಿಗೆ ಕಳುಹಿಸಲು ಶುರುವಿಟ್ಟರು.
ಈ ಹೊತ್ತಿನಲ್ಲಿ ಸರಕಾರವು ಎಚ್ಚೆತ್ತುಕೊಂಡು, ಸರಕಾರಿ ಶಾಲೆಗಳಲ್ಲಿಯೂ ಇಂಗ್ಲಿಶ್ ಭಾಷೆಯನ್ನು ಪ್ರಬುದ್ಧವಾಗಿ ಕಲಿಸಿಕೊಡುವುದಕ್ಕೆ ಸಜ್ಜಾಗಿದ್ದರೆ ಯಾವ ಸಮಸ್ಯೆಯೂ ಇರುತ್ತಿರಲಿಲ್ಲ. ಒಂದು ಭಾಷೆಯನ್ನು ಕಲಿಸಿಕೊಡುವುದು ಯಾವ ದೊಡ್ಡ ಸಾಹಸವೂ ಆಗಿರಲಿಲ್ಲ. ಇರುವ ಅಧ್ಯಾಪಕರಿಗೇ ಹೆಚ್ಚಿನ ತರಬೇತಿಯನ್ನು ಕೊಟ್ಟೋ ಅಥವಾ ಹೊಸ ಅಧ್ಯಾಪಕರನ್ನು ನಿಯಮಿಸಿಕೊಂಡೋ ಈ ಸಮಸ್ಯೆಯನ್ನು ಸುಲಭವಾಗಿ ಪರಿಹರಿಸಿಕೊಳ್ಳಬಹುದಾಗಿತ್ತು. ಹಾಗಾಗಿದ್ದರೆ ಪೋಷಕರು ಖಂಡಿತ ತಮ್ಮ ಮಕ್ಕಳನ್ನು ಕನ್ನಡ ಶಾಲೆಗಳಿಂದ ಬಿಡಿಸುತ್ತಿರಲಿಲ್ಲ. ಆದರೆ, ಸರಕಾರಕ್ಕೆ ತನ್ನದೇ ಕುಂಭಕರ್ಣ ಆಲಸ್ಯವಿರುತ್ತದೆ. ಕುತ್ತಿಗೆಯ ತನಕ ಬಾರದಿದ್ದರೆ ಯಾವ ಕೆಲಸವನ್ನೂ ಮಾಡುವುದಿಲ್ಲ. ಬೇರೆಲ್ಲಾ ವಿಷಯಗಳನ್ನು ಈ ಶಾಲೆಗಳು ಅಚ್ಚುಕಟ್ಟಾಗಿ ಕಲಿಸಿಕೊಡುತ್ತಿದ್ದರೂ, ಇಂಗ್ಲಿಶ್ ಭಾಷೆಯನ್ನು ಮಾತಾಡಲು ಬರುವಂತೆ ಹೇಳಿಕೊಡುವುದಿಲ್ಲ ಎಂಬ ಏಕೈಕ ಕಾರಣದಿಂದಲೇ ಬಹುತೇಕ ಪೋಷಕರು ಮಕ್ಕಳನ್ನು “ಕಾನ್ವೆಂಟ್’ ಶಾಲೆಗಳಿಗೆ ಕಳುಹಿಸಿಕೊಡಲು ಶುರುವಿಟ್ಟರು. ಅಲ್ಲಿ ಇಂಗ್ಲಿಶ್ ಭಾಷೆಯ ಕಲಿಕೆಗೆ ಮಹತ್ವವಿತ್ತು ಎನ್ನುವುದು ಸತ್ಯ. ಆದರೆ, ಇತರೆ ವಿಷಯಗಳನ್ನು ಅವು ಸರಕಾರಿ ಶಾಲೆಗಳಿಗಿಂತಲೂ ಚೆನ್ನಾಗಿಯೇನೂ ಕಲಿಸಿಕೊಡುತ್ತಿರಲಿಲ್ಲ.
ಈ ಹೊತ್ತಿನಲ್ಲಿ ಮತ್ತೂಂದು ಭ್ರಷ್ಟತೆ ಶುರುವಾಯ್ತು. ಯಾವಾಗ “ಕಾನ್ವೆಂಟ್’ ಶಾಲೆಗಳು ಹೆಚ್ಚಿನ ವಿದ್ಯಾರ್ಥಿಗಳ ದಾಖಲಾತಿಯನ್ನು ಹೊಂದಲು ಶುರು ಮಾಡಿದವೋ, ಆಗ ವಾಣಿಜ್ಯ ಸಮುದಾಯ ಎಚ್ಚೆತ್ತುಕೊಂಡು ಹೊಸ ಖಾಸಗಿ ಶಾಲೆಗಳನ್ನು ಪ್ರಾರಂಭಿಸಲು ಶುರುವಿಟ್ಟುಕೊಂಡಿತು. ಹೊಸ ಆದಾಯದ ಮಾರ್ಗವನ್ನು ಅದು ಕಂಡುಕೊಂಡಿತ್ತು. ಇಂತಹ ಶಾಲೆಗಳನ್ನು ತೆರೆಯಲು ಸರಕಾರದ ಒಪ್ಪಿಗೆಯನ್ನು ಪಡೆಯಲೇ ಬೇಕಲ್ಲವೆ? ಈ ಒಪ್ಪಿಗೆ ಪಡೆಯುವ ಕ್ರಮ ರಾಜಕೀಯ ನಾಯಕರ ಬೊಕ್ಕಸ ತುಂಬಿಸಲು ಶುರು ಮಾಡಿತು. ಅವರೂ ಹೊಸ ಆದಾಯದ ಮಾರ್ಗವನ್ನು ಕಂಡುಕೊಂಡರು. ವಾಣಿಜ್ಯ ಸಮುದಾಯ ಮತ್ತು ರಾಜಕೀಯ ನಾಯಕರಿಬ್ಬರೂ ಲಾಭ ಗಳಿಸುವುದಕ್ಕೆ ಇದ್ದ ಏಕೈಕ ಮಾರ್ಗವೆಂದರೆ ಸರಕಾರಿ ಶಾಲೆಗಳನ್ನು ವ್ಯವಸ್ಥಿತವಾಗಿ ಹಾಳುಗೆಡುಹುವುದಾಗಿತ್ತು. ಅವರಿಬ್ಬರೂ ಅದನ್ನು ಅಚ್ಚುಕಟ್ಟಾಗಿಯೇ ಮಾಡಿದರು. ದಶಕಗಳ ಕಳೆದ ನಂತರ ಈಗ ನಮ್ಮ ಶಾಲೆಗಳತ್ತ ನೋಡಿದರೆ ದುಃಖವಾಗುತ್ತದೆ.
ಮಾಸ್ತರರ ಸಂಬಳ ಚೆನ್ನಾಗಿದೆ !
ಬಹಳ ಹಿಂದೆ ನನಗೊಂದು ಭ್ರಮೆಯಿತ್ತು. ಮಾಸ್ತರಿಕೆಗೆ ಭಾರತದಲ್ಲಿ ಸರಿಯಾದ ಸಂಬಳ ಸಿಗದ ಕಾರಣವೇ ಆ ವೃತ್ತಿಯನ್ನು ಯಾರೂ ಆಯ್ಕೆ ಮಾಡಿಕೊಳ್ಳುವುದಿಲ್ಲ; ಆ ಕಾರಣಕ್ಕೇ ಭಾರತದ ಶೈಕ್ಷಣಿಕ ಮಟ್ಟ ಅಂತರಾಷ್ಟ್ರೀಯ ಮಟ್ಟದಲ್ಲಿ ಗಮನಾರ್ಹವಾಗಿಲ್ಲ ಎಂದು ನಂಬಿಕೊಂಡಿದ್ದೆ. ಆದರೆ ಈಗ ಮಾಸ್ತರರ ಸಂಬಳವೂ ಇತರೆ ಸಾರ್ವಜನಿಕ ಉದ್ಯೋಗಗಳಿಗೆ ಸರಿಸಮನಾಗಿದೆ. ಆದರೆ, ಶಾಲೆಯಲ್ಲಿ ಗುಣಮಟ್ಟ ಮೂಡುತ್ತಿಲ್ಲ. ಮಾಸ್ತರರ ಮಾತಂತಿರಲಿ, ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರು ಸಾಫ್ಟ್ವೇರ್ ಮಂದಿಗಿಂತಲೂ ದೊಡ್ಡ ಸಂಬಳವನ್ನು ಪಡೆಯುತ್ತಿದ್ದಾರೆ ಮತ್ತು ಅವರಿಗಿಂತಲೂ ಸುಖದಾಯಕವಾದ ಬದುಕನ್ನು ಅನುಭವಿಸುತ್ತಿದ್ದಾರೆ. ಆದರೆ, ನಮ್ಮ ವಿಶ್ವವಿದ್ಯಾಲಯಗಳು ಯಾವ ಅಧೋಗತಿಗಿಳಿದಿವೆ ಎಂಬುದನ್ನು ನೋಡುವುದು ಕಷ್ಟವಾಗುತ್ತಿದೆ. ಈಗ ನನ್ನ ಭ್ರಮೆ ಕಳೆದಿದೆ. ಆಸಕ್ತ ವಿದ್ಯಾರ್ಥಿಗಳನ್ನು ಒದಗಿಸದೆ, ಸಮಾಜದ ಮನೋಭಾವ ಬದಲಿಸದೆ, ಆಡಳಿತದ ಪ್ರಾಮಾಣಿಕತೆ ಹೆಚ್ಚಿಸದೆ, ಶಿಕ್ಷಕ ವೃಂದದ ನೈತಿಕತೆ ಹೆಚ್ಚಿಸದೆ ಬರೀ ಸಂಬಳವನ್ನು ಏರಿಸಿದರೆ ಯಾವ ಪ್ರಗತಿಯೂ ಆಗುವುದಿಲ್ಲ ಎಂಬುದನ್ನು ಅರ್ಥ ಮಾಡಿಕೊಂಡಿದ್ದೇನೆ.
ಯುರೋಪ್ ಮತ್ತು ಅಮೆರಿಕ ದೇಶಗಳಲ್ಲಿ ಪ್ರಾಥಮಿಕ ಶಿಕ್ಷಣಕ್ಕೆ ಬಹಳ ಪ್ರಾಮುಖ್ಯ ಕೊಟ್ಟಿ¨ªಾರೆ. ಬಹುತೇಕ ಪ್ರಾಥಮಿಕ ವಿದ್ಯಾಭ್ಯಾಸ ಉಚಿತವಾಗಿದ್ದು, ಖಾಸಗಿ ಶಾಲೆಗಳು ಅಲ್ಲಿ ಕಡಿಮೆ. ಆದರೆ ಅನಂತರದ ಉನ್ನತ ವ್ಯಾಸಂಗವು ಬಹು ದುಬಾರಿಯಾಗಿದೆ. ಆದ್ದರಿಂದ ಆಸಕ್ತಿಯಿದ್ದವರು ಮಾತ್ರ ಉನ್ನತ ವ್ಯಾಸಂಗಕ್ಕೆ ಹೋಗುತ್ತಾರೆ. ಆದರೆ, ಅತ್ಯುತ್ತಮ ಪ್ರಾಥಮಿಕ ಶಿಕ್ಷಣವನ್ನಂತೂ ಎಲ್ಲ ಮಕ್ಕಳೂ ಹಕ್ಕಿನಿಂದ ಉಚಿತವಾಗಿ ಪಡೆದುಕೊಳ್ಳುತ್ತಿದ್ದಾರೆ. ನಮ್ಮ ದೇಶದ ಮಕ್ಕಳು ಅದರಿಂದ ವಂಚಿತವಾಗಿ ಬಿಟ್ಟಿದ್ದಾರೆ. ತಂದೆ-ತಾಯಿಗಳು ದುಡಿಯುವ ಹಣವೆಲ್ಲವೂ ಖಾಸಗಿ ಶಾಲೆಗಳ ಬೊಕ್ಕಸ ತುಂಬುವುದಕ್ಕೆ, ಆ ಮೂಲಕ ರಾಜಕೀಯ ನಾಯಕರ ಮತ್ತು ಉದ್ಯೋಗಪತಿಗಳ ಭ್ರಷ್ಟತೆಗೆ ಇಂಬು ಕೊಡುವುದಕ್ಕೆ ವಿನಿಯೋಗವಾಗುತ್ತಿದೆ.
ಹಾಗಂತ ಕೇವಲ ರಾಜಕೀಯ ಮತ್ತು ವಾಣಿಜ್ಯವನ್ನು ಮಾತ್ರ ದೂರಿಬಿಟ್ಟರೆ ಅದು ತಪ್ಪಾಗುತ್ತದೆ. ಸಮಾಜವೂ ಈ ವಿನಾಶದಲ್ಲಿ ಭಾಗಿಯಾಗಿದೆ. ಭಾಷೆಯ ಮಹತ್ವವನ್ನೇ ಅದು ಮರೆತು ಬಿಟ್ಟಿದೆ. ಬರೀ ಹಣ ಗಳಿಸಲು ಸಹಾಯ ಮಾಡುವ ಅಧ್ಯಯನದಲ್ಲಿ ಮಾತ್ರ ಮಕ್ಕಳು ತೊಡಗಿಕೊಳ್ಳಬೇಕೆನ್ನುವ ಭ್ರಮೆಗೆ ಬಿದ್ದುಬಿಟ್ಟಿದೆ. ಕನ್ನಡವೇ ಆಗಲಿ, ಇಂಗ್ಲಿಶೇ ಆಗಲಿ- ಭಾಷೆಯನ್ನು ಅಚ್ಚುಕಟ್ಟಾಗಿ ಕಲಿಯುವುದಕ್ಕೆ ಸಮಾಜಕ್ಕೆ ಆಸಕ್ತಿಯೇ ಹೊರಟು ಹೋಗಿದೆ. ಶಿಕ್ಷಣವೆನ್ನುವುದು ಬರೀ ಉದ್ಯೋಗ ಗಳಿಕೆಯ ಏಣಿಯೆಂದು ಅವರು ಭಾವಿಸುತ್ತಿದ್ದಾರೆ. ಬದುಕನ್ನು ಹಸನುಗೊಳಿಸಲು ಭಾಷೆ ಅದೆಷ್ಟು ಅವಶ್ಯಕವೆಂದು ಅವರು ಮರೆತು ಬಿಟ್ಟಿದ್ದಾರೆ. ಮಕ್ಕಳು ಕನ್ನಡ ಅಥವಾ ಇಂಗಿಶ್ ಭಾಷೆಯಲ್ಲಿ ಕಡಿಮೆ ಅಂಕ ತೆಗೆದರೆ ಯಾವ ತಂದೆ-ತಾಯಿಗಳಿಗೂ ಬೇಸರವಿಲ್ಲ.
ಕೇವಲ ವಿಜ್ಞಾನ, ಗಣಿತ, ಕಂಪ್ಯೂಟರ್‌ಗಳಲ್ಲಿ ಅವರು ಚುರುಕಾಗಿದ್ದರೆ ಸಾಕು ಎಂದು ಅವರು ನಂಬುತ್ತಿದ್ದಾರೆ. ಆದ್ದರಿಂದಲೇ ಬಹುತೇಕ ಇಂಜಿನಿಯರಿಂಗ್ ಓದಿದ, ಡಾಕ್ಟರಿಕೆ ಮಾಡಿದ ಮಕ್ಕಳಿಗೆ ಇಂಗ್ಲೀಷ್ ಮತ್ತು ಕನ್ನಡ ಭಾಷೆಗಳೆರಡರಲ್ಲೂ ಪ್ರಬುದ್ಧತೆ ಇರುವುದಿಲ್ಲ. ಬರೀ ತಂತ್ರಜ್ಞಾನದ ವಿಷಯದಲ್ಲಿ ಮಾತ್ರ ಪರಿಣತಿಯನ್ನು ಪಡೆದಿರುತ್ತಾರೆ.
ಹೊರದೇಶಗಳಲ್ಲಿ ಶೈಕ್ಷಣಿಕ ಪರಿಸ್ಥಿತಿ ಇಷ್ಟು ಕೆಟ್ಟದ್ದಾಗಿಲ್ಲ. ಅಮೆರಿಕ ಮತ್ತು ಯುರೋಪಿನ ಮಕ್ಕಳು ತಮ್ಮ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣಗಳಲ್ಲಿ ಯಥೇತ್ಛವಾಗಿ ಭಾಷೆಯನ್ನು ಕಲಿಯುತ್ತಿದ್ದಾರೆ. ಹತ್ತನೆಯ ತರಗತಿಗೆ ಬರುವುದರೊಳಗೆ ಮಗುವು ಶೇಕ್ಸ್‌ಪಿಯರ್, ಜಾರ್ಜ್ ಆರ್ವೆಲ್ ಮುಂತಾದ ಪ್ರಮುಖ ಲೇಖಕರ ಸಾಹಿತ್ಯವನ್ನು ಓದಿಕೊಂಡಿರುತ್ತದೆ. ಒಮ್ಮೆ ಓದುವ ರುಚಿ ಹತ್ತಿಸಿದರೆ ಆಯ್ತು. ಮುಂದೆ ಮಗು ಬೆಳೆದಂತೆ ತನಗೆ ಬೇಕಾದ ಓದಿನ ಮಾರ್ಗವನ್ನು ಅರಸಿಕೊಳ್ಳುತ್ತದೆ. ಓದುವ ಹವ್ಯಾಸವನ್ನು ಬಾಲ್ಯದಲ್ಲಿಯೇ ಬೆಳೆಸಬೇಕು. ನಾವು ಅದನ್ನೇ ಮರೆತು ಬಿಟ್ಟಿದ್ದೇವೆ. ಭಾಷೆಯ ಮಹತ್ವವನ್ನು ಅರಿಯದ ಸಮಾಜ ನಿಧಾನಕ್ಕೆ ನೈತಿಕತೆಯಲ್ಲಿ ಅವನತಿಯನ್ನು ಕಾಣಲು ಪ್ರಾರಂಭಿಸುತ್ತದೆ. ಭಾರತದಲ್ಲಿ ನಾವು ಈಗಾಗಲೇ ಅದನ್ನು ಕಾಣುತ್ತಿದ್ದೇವೆ.
ಕನ್ನಡದ ಅಭಿಮಾನ ಬೆಳೆಯಲಿಕ್ಕೆ, ಕನ್ನಡದ ಪರಂಪರೆಯನ್ನು ಮಕ್ಕಳಿಗೆ ತಿಳಿಸಲಿಕ್ಕೆ, ನಾಡಿನ ಬಗ್ಗೆ ಹೆಮ್ಮೆ ಮೂಡಿಸಲಿಕ್ಕೆ ನಾವು ಮೊದಲು ಸರಕಾರಿ ಶಾಲೆಗಳನ್ನು ಗಟ್ಟಿಗೊಳಿಸಬೇಕಾಗಿದೆ. ಆದರೆ, ಭ್ರಷ್ಟತೆಯ ರುಚಿಯನ್ನು ಕಂಡಿರುವ ನಮ್ಮ ರಾಜಕೀಯ ನಾಯಕರು ಅದನ್ನು ಆಗಗೊಡುವರೆ? ಕೊನೆಗೆ ಕನ್ನಡವೆಂಬುದು ಕೇವಲ ಆಡುಭಾಷೆಯಾಗಿ ಉಳಿದುಬಿಡುತ್ತದೇನೋ ಎಂದು ನನಗೆ ಆತಂಕವಾಗುತ್ತದೆ.
ಹಲವಾರು ಮಾರ್ಗಗಳಿಂದ ಈ ಸಮಸ್ಯೆಗಳಿಗೆ ಪರಿಹಾರವನ್ನು ಯೋಚಿಸಬಹುದಾದರೂ, ತಂತ್ರಜ್ಞಾನ ನನಗೆ ಪರಿಚಯವಿರುವುದರಿಂದ ಆ ದಾರಿಯಲ್ಲಿ ಪರಿಹಾರವೊಂದು ಸಂಭವನೀಯವೆನ್ನಿಸುತ್ತದೆ. ಸಾಹಿತ್ಯದ ಭಾಷೆಯ ಅನುವಾದ ಕಷ್ಟವೇ ಹೊರತು ವ್ಯವಹಾರದ ಭಾಷೆಯ ಅನುವಾದ ಅಂತಹ ಕಷ್ಟವಲ್ಲ. ವ್ಯವಹಾರದ ಭಾಷೆಯ ಅನುವಾದವನ್ನು ಮಾಡುವಂತಹ ಸಾಫ್ಟ್ವೇರ್‌ಗಳು ಇತ್ತೀಚೆಗೆ ಕಂಡು ಬರುತ್ತಿವೆ. ಸದ್ಯಕ್ಕೆ ಅವುಗಳ ಗುಣಮಟ್ಟ ಹೇಳಿಕೊಳ್ಳುವಂತೇನೂ ಇಲ್ಲ. ಆದರೆ, ಮುಂಬರುವ ದಿನಗಳಲ್ಲಿ ಅವು ಅಭಿವೃದ್ಧಿ ಹೊಂದುವ ಎಲ್ಲ ಲಕ್ಷಣಗಳೂ ಕಾಣುತ್ತಿವೆ. ಒಮ್ಮೆ ಅನುವಾದದ ತಂತ್ರಜ್ಞಾನ ಚುರುಕುಗೊಂಡು ಶೇ. 90 ರಷ್ಟು ಉತ್ತಮ ಅನುವಾದಗಳನ್ನು ಅವು ಕೊಟ್ಟರೆ, ಭಾಷೆಯ ಅಡ್ಡಗೋಡೆ ಕಳಚಿ ಬೀಳುತ್ತದೆ. ಇದು ಕೇವಲ ಲಿಖೀತ ಪಠ್ಯಕ್ಕೆ ಮಾತ್ರವಲ್ಲ, ನಮ್ಮ ಮಾತುಗಳಿಗೂ ಅನುವಾದ ಸಾಧ್ಯವಾಗಬೇಕು. ಅಂದರೆ ನಾನು ಕನ್ನಡದಲ್ಲಿ (ಅಥವಾ ಯಾವುದೇ ದೇಶೀಯ ಭಾಷೆ) ಮಾತನಾಡುತ್ತಿದ್ದರೂ, ತಂತ್ರಜ್ಞಾನದ ಮೂಲಕ ನಿಮಗೆ ಇಂಗ್ಲೀಷ್ (ಅಥವಾ ಬೇಕಾದ ಭಾಷೆ) ಮುಖಾಂತರ ಅದನ್ನು ಕೇಳುವ ಸಾಧ್ಯತೆ ಸೃಷ್ಟಿಯಾಗಬೇಕು. ಒಮ್ಮೆ ಇದು ಯಶಸ್ವಿಯಾದರೆ, ನಾನು ಯಾವ ಭಾಷೆಯಲ್ಲಿ ವಿದ್ಯೆಯನ್ನು ಕಲಿಯುತ್ತೇನೆ ಮತ್ತು ಯಾವ ಭಾಷೆಯಲ್ಲಿ ಮಾತನಾಡುತ್ತೇನೆ ಎನ್ನುವುದು ಸಮಸ್ಯೆಯೇ ಆಗುವುದಿಲ್ಲ; ಕೇವಲ ನಮ್ಮ ಜ್ಞಾನ ಮಾತ್ರ ವ್ಯವಹಾರದಲ್ಲಿ ಮುಖ್ಯವಾಗುತ್ತದೆ. ಒಮ್ಮೆ ಕನ್ನಡ ಅಥವಾ ಇಂಗ್ಲೀಷ್ ಭಾಷೆಗಳೆರಡೂ ಬೇಕಾದ ರೂಪ ಗಳಿಸುವ ಶಕ್ತಿ ಪಡೆದರೆ, ಸಹಜವಾಗಿಯೇ ಇಂಗ್ಲೀಷ್ ಭಾಷೆಯ ಮಹತ್ವ ಜಗತ್ತಿನಲ್ಲಿ ಕಡಿಮೆಯಾಗುತ್ತದೆ. ಆಗ ಮತ್ತೆ ನಾವು ಮಾತೃಭಾಷೆಯಾದ ಕನ್ನಡದ ಕಡೆಗೆ ವಾಲುತ್ತೇವೇನೋ ಎಂಬುದು ನನ್ನ ನಿರೀಕ್ಷೆ.
ನನ್ನ ಕನಸು ಬಹು ದೊಡ್ಡದು ಮತ್ತು ಸಂಕೀರ್ಣವಾದದ್ದು ಎಂದು ನನಗೆ ಗೊತ್ತು. ಆದರೆ, ಮಾತೃಭಾಷೆಯ ಮೇಲಿನ ಪ್ರೀತಿ ನನಗೆ ಅಂತಹ ಕನಸು ಕಾಣುವುದು ತಪ್ಪಲ್ಲವೆಂದು ಧೈರ್ಯ ಹೇಳುತ್ತಿದೆ.
ವಸುಧೇಂದ್ರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BGT 2024-25: ಆಸೀಸ್ ನಲ್ಲಿ ಲಯಕ್ಕೆ ಮರಳಿದ ವಿರಾಟ್ ಕೊಹ್ಲಿ
Stock Market: ಷೇರುಪೇಟೆ ಸೂಚ್ಯಂಕ 500ಕ್ಕೂ ಅಧಿಕ ಅಂಕ ಕುಸಿತ; 23,400ಕ್ಕೆ ಇಳಿದ ನಿಫ್ಟಿ
Yadagiri: ಸ್ನಾನಕ್ಕೆಂದು ತೆರಳಿದ ಇಬ್ಬರು ಬಾಲಕರು ನೀರುಪಾಲು
Baaghi 4: ಟೈಗರ್ ಶ್ರಾಫ್ ʼಬಾಘಿ – 4ʼ ಗೆ ಕನ್ನಡದ ಎ.ಹರ್ಷ ಆ್ಯಕ್ಷನ್ ಕಟ್; ಪೋಸ್ಟರ್ ಔಟ್
Belagavi ವಿಮಾನ ನಿಲ್ದಾಣ ಕಂಪೌಂಡ್ ಬಳಿ ಯುವಕನ ಹತ್ಯೆ; ಕಾರಣ ನಿಗೂಢ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.