ಪ್ರತಿಭೆಯ ಮಹಾಪಾತ್ರ
Team Udayavani, Jan 6, 2019, 12:30 AM IST
ಉದಯವಾಣಿ ದಿನಪತ್ರಿಕೆಯ ಲಲಿತರಂಗ-ಪುರವಣಿ ವಿಭಾಗದ ಸಂಪಾದಕರಾಗಿ ಮತ್ತು ತುಷಾರ ಮಾಸಪತ್ರಿಕೆಯ ಸಂಪಾದಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ಅನಂತಪುರ ಈಶ್ವರಯ್ಯ ಕನ್ನಡನಾಡಿನೆಲ್ಲೆಡೆ ಹೆಸರಾದವರು. ಸದಭಿರುಚಿಯ ಲಲಿತಕಲಾ ಆಸಕ್ತಿಗಳನ್ನು ತನ್ನೊಳಗು ಮಾಡಿಕೊಂಡು ಉತ್ಕಟವಾದ ಜೀವನಪ್ರೀತಿಯೊಂದಿಗೆ ಬದುಕಿದವರು. ಉದಯವಾಣಿ ಪತ್ರಿಕಾ ಬಳಗವು ಕನ್ನಡ ನಾಡು-ನುಡಿಗೆ ಮಹತ್ತರ ಕೊಡುಗೆ ನೀಡುವ ಕನಸು ಕಂಡಾಗ ಅದನ್ನು ನನಸಾಗಿಸಲು ಶ್ರಮಿಸಿದವರಲ್ಲಿ ಈಶ್ವರಯ್ಯ ಕೂಡ ಒಬ್ಬರು. ಉದಯವಾಣಿ ಮತ್ತು ತುಷಾರ ಓದುಗರ ಅಭಿಮಾನಕ್ಕೆ ಪಾತ್ರರಾಗಿದ್ದ ಅವರು, ತನ್ನ ಪ್ರತಿಭೆಗೆ ಆಸರೆ ನೀಡಿದ್ದ ಪತ್ರಿಕಾಸಂಸ್ಥೆಯ ಆಡಳಿತವರ್ಗವನ್ನು ಸದಾಕಾಲ ಕೃತಜ್ಞತೆಯಿಂದ ಸ್ಮರಿಸುತ್ತಿದ್ದರು. ಇತ್ತೀಚೆಗಿನವರೆಗೂ ಹಲವು ಕಲಾಸಂಘಟನೆಗಳಲ್ಲಿ ಸಕ್ರಿಯರಾಗಿದ್ದ ಈಶ್ವರಯ್ಯ ಈಗಿಲ್ಲ ಎಂಬುದನ್ನು ನಂಬಲಾಗುತ್ತಿಲ್ಲ…
ಕರ್ನಾಟಕದ ಹಿರಿಯ ಅನುಭವಿ ಪತ್ರಕರ್ತ, ಕಲಾ ವಿಮರ್ಶಕ, ಸರಸ ಬರಹಗಾರ ಈಶ್ವರಯ್ಯ ಡಿ. 30ರಂದು ಅವರು ನಿಧನ ಹೊಂದಿದರು. ಅವರ ನಿಧನ ಕಲಾಪ್ರಪಂಚಕ್ಕೆ ತುಂಬಲಾರದ ನಷ್ಟ. ಈ ಕಲಾವಿಹಾರಿಯ ಪಾಂಡಿತ್ಯ ಹಲವು ಮುಖಗಳದ್ದು. ಛಾಯಾಚಿತ್ರ ಗ್ರಹಣ ಮತ್ತು ಸಂಗೀತ ಅವರ ಎರಡು ಕಣ್ಣುಗಳಿದ್ದಂತೆ. ಪತ್ರಿಕಾ ಬರವಣಿಗೆ ಮತ್ತು ಲಲಿತಕಲಾ ವಿಮರ್ಶೆಯ ಕ್ಷೇತ್ರದಲ್ಲಂತೂ ಅವರೊಂದು ತೋರುಗಂಬ. ಅವರ ಮಾತು, ಉಪನ್ಯಾಸಕ್ಕೆ ಅದೇನೋ ಮಾಂತ್ರಿಕ ಶಕ್ತಿ. ವೈಚಾರಿಕ ನೋಟದೊಂದಿಗೆ ವಿಷಯವನ್ನು ವಿಶ್ಲೇಷಿಸುವ; ವಸ್ತುಸ್ಥಿತಿಯನ್ನು ಕೇಳುಗರ ಮನಂಬುಗುವಂತೆ ವಿವರಿಸುವ ಕಲೆ ಅವರಿಗೆ ರಕ್ತಗತ. ಅವರಲ್ಲಿದ್ದ ಸ್ವಾಧ್ಯಾಯ, ಆಸಕ್ತಿ ವೈವಿಧ್ಯ, ಜ್ಞಾನ ಕುತೂಹಲ ಅನನ್ಯ. ಈ ಎಲ್ಲ ಗುಣಗಳನ್ನು ಮೀರಿಸುವಂತೆ ಅವರಲ್ಲಿ ಮನೆ ಮಾಡಿದ್ದ ವಿಶೇಷ ಗುಣ ಎಂದರೆ ಸಹೃದಯತೆ. ಮೇಲ್ನೋಟಕ್ಕೆ ಈಶ್ವರಯ್ಯ ಗಂಭೀರ ವದನರಂತೆ ಕಂಡರೂ ಆತ್ಮೀಯ ಪರಿಧಿಯೊಳಗೆ ಬಂದವರಿಗೆ ಅವರೊಬ್ಬ ಸ್ನೇಹಶೀಲ ವ್ಯಕ್ತಿ ಎನ್ನುವುದರ ಅನುಭವವಾಗಿ ಬಿಡುತ್ತದೆ.
ಈಶ್ವರಯ್ಯ ತಮ್ಮ ಇಳಿವಯಸ್ಸಿನಲ್ಲೂ ಕಂಪ್ಯೂಟರ್ ಟೈಪಿಂಗ್ ಮತ್ತು ಪತ್ರಿಕಾ ಪುಟ ವಿನ್ಯಾಸದಲ್ಲಿ ವಿಶೇಷ ಕೌಶಲ ಸಂಪಾದಿಸಿದ್ದರು. ಇಂಟರ್ನೆಟ್, ಫೇಸ್‌ಬುಕ್ ಸಹಿತ ಅನೇಕ ವಿಚಾರಗಳನ್ನು ಇತರರಿಗೆ ತಿಳಿ ಹೇಳುವಷ್ಟರ ಮಟ್ಟಿಗೆ ಪ್ರಭುತ್ವ ಪಡೆದಿದ್ದರು. ಅವರ ಸಂಗ್ರಹದಲ್ಲಿದ್ದ ಹೊಸ ಹೊಸ ಕೆಮರಾಗಳು, ಮೊಬೈಲ್‌ಗಳು ತಾಂತ್ರಿಕ ಹೊಸತನ ಹುಡುಕಾಟದ ಅವರ ಆಸಕ್ತಿಗೆ ಪ್ರತ್ಯಕ್ಷ ಸಾಕ್ಷಿಗಳು. ಇವಲ್ಲದೆ ಅವರಿಗೆ ವೈದ್ಯಕೀಯ ಶಾಸ್ತ್ರಕ್ಕೆ ಸಂಬಂಧಿಸಿದಂತೆ ಜನಸಾಮಾನ್ಯರಿಗಿಂತ ಹೆಚ್ಚಿನ ತಿಳಿವಳಿಕೆ ಇತ್ತು. ಕ್ರಿಕೆಟ್ ಮತ್ತು ಟೆನಿಸ್ ಅವರಿಗೆ ಕಲಾ ಕಾರ್ಯಕ್ರಮಗಳಷ್ಟೇ ಇಷ್ಟವಾಗಿತ್ತು. ಪತ್ರಿಕಾ ಕಚೇರಿಯಲ್ಲೇ ಸಣ್ಣ ರೇಡಿಯೋ ಇಟ್ಟುಕೊಂಡು ಅದರ ವೀಕ್ಷಕ ವಿವರಣೆಯನ್ನು ಅವರು ಆಸಕ್ತಿಯಿಂದ ಕೇಳುತ್ತಿದ್ದರು ಎನ್ನುವುದು ಅವರ ಸಹೋದ್ಯೋಗಿಗಳಿಗೆಲ್ಲ ಗೊತ್ತಿರುವ ಸಂಗತಿ.
ಕಲೆಯ ತವರೂರು
ಈಶ್ವರಯ್ಯ ಹುಟ್ಟಿದ್ದು ಗಡಿನಾಡು ಕಾಸರಗೋಡು ವ್ಯಾಪ್ತಿಯ ಕುಂಬಳೆಗೆ ಸಮೀಪದ ಅನಂತಪುರದಲ್ಲಿ. ಶ್ಯಾನುಭೋಗ ಮನೆತನದಲ್ಲಿ. ಆ ಮನೆ ಯಕ್ಷಗಾನದ ಕಲಾವಿದರನ್ನು, ಸಂಗೀತಗಾರರನ್ನು ಕೈ ಬೀಸಿ ಕರೆಯುವಂತಿತ್ತು. ಈ ಕಾರಣದಿಂದಲೇ ಬಾಲ್ಯದ ದಿನಗಳಲ್ಲೇ ಯಕ್ಷಗಾನ ಹಾಡುಗಳ, ಸಂಗೀತದ ಆಲಾಪನೆಯ ಪರಿಚಯ ಅವರಿಗಾಗಿತ್ತು. ಹುಟ್ಟೂರಲ್ಲಿ ಹಾಗೂ ಪೆರಡಾಲದ ನವಜೀವನ ಹೈಸ್ಕೂಲಿನಲ್ಲಿ ಎಸ್‌ಎಸ್‌ಎಲ್‌ಸಿವರೆಗೆ ವಿದ್ಯಾಭ್ಯಾಸ ನಡೆಸಿದರು. ಆ ದಿನಗಳಲ್ಲೇ ಒಳ್ಳೆಯ ಗೆಳೆಯರಿಂದಾಗಿ ಸಮಕಾಲೀನ ಸಾಹಿತ್ಯ ಕೃತಿಗಳನ್ನು ಓದುವ ಮತ್ತು ವಿಮರ್ಶಿಸುವ ಗುಣ ಅವರಲ್ಲಿ ಬೇರೂರಿತು. ಅವರ ಗೆಳೆಯರ ಬಳಗ ಹೆಚ್ಚಿದಂತೆ ಇಂಗ್ಲಿಷ್ ಕಾದಂಬರಿಗಳನ್ನು ಕೂಡ ಓದಿ ಅರಗಿಸಿಕೊಳ್ಳುವ ಕಲೆಯನ್ನು ನಿಧಾನವಾಗಿ ಮೈಗೂಡಿಸಿಕೊಂಡರು. ಬಳಿಕ ಉಡುಪಿಯ ಎಂಜಿಎಂ ಕಾಲೇಜಿನ ವಿದ್ಯಾರ್ಥಿಯಾಗಿ ಇಂಗ್ಲಿಷ್ ಸಾಹಿತ್ಯ ಪದವಿ ತೇರ್ಗಡೆಯಾದರು. ಕಾಲೇಜು ದಿನಗಳಲ್ಲಿ ಸದಭಿರುಚಿಯ, ಸಾಹಿತ್ಯಾಸಕ್ತ ಮಿತ್ರರ ಬಳಗ ದೊಡ್ಡದಾಯಿತು. ಕಾಲೇಜು ಭಿತ್ತಿ ಪತ್ರಿಕೆ ಅವರ ಬರವಣಿಗೆಗೆ ಒಂದು ವೇದಿಕೆಯಾಯಿತು. ಬೇರೆ ಬೇರೆ ಕನ್ನಡ ಪತ್ರಿಕೆಗಳಿಗೆ ಕತೆ , ಲೇಖನ ಬರೆಯಲಾರಂಭಿಸಿದರು. ಅವು ಪ್ರಕಟಗೊಂಡಂತೆಲ್ಲ ಈಶ್ವರಯ್ಯನವರ ಒಳಗಿದ್ದ ಇಂಗ್ಲಿಷ್ ವಿಮಶಾì ಪ್ರಜ್ಞೆಯ ಬುಡದಿಂದಲೇ ಹುಟ್ಟಿದಂತಿದ್ದ ಕತೆಗಾರ ನಿಧಾನ ಕಣ್ಣು ತೆರೆಯಲಾರಂಭಿಸಿದ. ಇದೇ ವೇಳೆ 1960ರಲ್ಲಿ ಮಣಿಪಾಲದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಿತು. ಈಶ್ವರಯ್ಯ ವಿದ್ಯಾರ್ಥಿ ಸ್ವಯಂ ಸೇವಕರಿಗೆಲ್ಲ ಲೀಡರ್ ಆಗಿ ಉಪನ್ಯಾಸಕರ ಮಾರ್ಗದರ್ಶನದಂತೆ ಈ ಸಮ್ಮೇಳನದಲ್ಲಿ ಪಾಲ್ಗೊಂಡರು.
ಪದವಿ ಬಳಿಕ ಈಶ್ವರಯ್ಯಪಿಡಬ್ಲ್ಯುಡಿ ಇಲಾಖೆಯಲ್ಲಿ ಕೆಲ ಕಾಲ ಕೆಲಸ ಮಾಡಿದರು. ಆ ಶುಷ್ಕ ಕೆಲಸ ಅವರಿಗೆ ಇಷ್ಟವಾಗಲೇ ಇಲ್ಲ. ಆದರೆ, ಪುಸ್ತಕಗಳ ಓದು ಹೆಚ್ಚಲು ಮತ್ತು ವಿಭಿನ್ನ ಪತ್ರಿಕೆಗಳಿಗೆ ಹೊಸ ಹೊಸ ಕತೆ ಬರೆದು ಕಳುಹಿಸಲು ಇದು ಒಂದು ಕಾರಣವಾಯಿತು.
ಲಲಿತರಂಗ
ಆ ದಿನಗಳಲ್ಲಿ ಉಡುಪಿಯ ದಿಗ್ಗಜರಾಗಿದ್ದವರು ಕು. ಶಿ. ಹರಿದಾಸ ಭಟ್ಟರು. ತಮ್ಮ ವಿದ್ಯಾರ್ಥಿಯ ಪ್ರತಿಭೆಯನ್ನು ಬಹುವಾಗಿ ಮೆಚ್ಚಿಕೊಂಡಿದ್ದ ಕುಶಿಯವರು ಪತ್ರಿಕಾರಂಗ ಸೇರುವಂತೆ ಒಂದು ದಿನ ಈಶ್ವರಯ್ಯನವರಿಗೆ ಸೂಚನೆ ನೀಡಿದರು, ಶಿಫಾರಸು ಮಾಡಿದರು. ಈಶ್ವರಯ್ಯನವರು ಖುಷಿಯಿಂದಲೇ 1972ರಲ್ಲಿ ಉದಯವಾಣಿ ಪತ್ರಿಕಾ ಬಳಗ ಸೇರಿದರು. ಕೆಲವೇ ತಿಂಗಳುಗಳಲ್ಲಿ ಮ್ಯಾಗಜಿನ್ ಸಂಪಾದಕರಾಗಿ ನಿಯುಕ್ತಿಗೊಂಡರು. ಕಲಾ ವಿಮರ್ಶೆಗೆ ಪತ್ರಿಕೆಯ ಮೂಲಕ ಹೊಸ ಆಯಾಮ ತಂದು ಕೊಡಬೇಕೆಂಬ ಇಚ್ಛೆ ಈಶ್ವರಯ್ಯನವರಲ್ಲಿ ಕಾಲೇಜು ದಿನಗಳಲ್ಲೇ ಬಲವಾಗಿ ಬೇರೂರಿತ್ತು. ಕಲಾವಿಮರ್ಶೆಗೆಂದೇ ಅವರು ವಾರದಲ್ಲಿ ಪತ್ರಿಕೆಯ ಒಂದು ಪುಟವನ್ನು ಲಲಿತರಂಗ ಎನ್ನುವ ಹೆಸರಲ್ಲಿ ಮೀಸಲಿಟ್ಟರು. ನೃತ್ಯ, ನಾಟಕ , ಯಕ್ಷಗಾನ ,ತಾಳಮದ್ದಳೆ , ಚಿತ್ರಕಲೆ – ಹೀಗೆ ಹಲವು ಪ್ರಕಾರಗಳ ಸದಭಿರುಚಿಯ ವಿಮರ್ಶೆ ಈ ಪುಟದಲ್ಲಿ ಪ್ರಕಟವಾಗತೊಡಗಿತು.ಎಲೆಮರೆಯ ಹೂವಿನಂತಿದ್ದ ಅನೇಕ ಕಲಾವಿದರು ಬೆಳಕಿಗೆ ಬಂದರು. ಹೊಸ ಬರಹಗಾರರು ಹುಟ್ಟಿಕೊಂಡರು. ಕರಾವಳಿ ಭಾಗದಲ್ಲಿ ನಡೆಯುವ ಕಲಾ ಕಾರ್ಯಕ್ರಮಗಳ ವಿಮರ್ಶೆ ಬರತೊಡಗಿತು. ನಮ್ಮ ಸುತ್ತ ಯಾವೆಲ್ಲ ರೀತಿಯ ಕಾರ್ಯಕ್ರಮಗಳಾಗುತ್ತಿವೆ ಎನ್ನುವುದು ಜನರಿಗೆ ಪರಿಚಯವಾಗತೊಡಗಿತು. ಹೊಸತನಕ್ಕಾಗಿ ಹಂಬಲಿಸುತ್ತಿದ್ದ ಓದುಗರನ್ನು ಈ ಪುಟ ಬಹುವಾಗಿ ಆಕರ್ಷಿಸಿತು. ಕಲಾಚಿಂತನೆಯ ಬಗ್ಗೆ ಪತ್ರಿಕಾ ಓದುಗರ ನಡುವೆ ಒಂದು ರೀತಿಯ ಸಂಚಲನ ಉಂಟಾಯಿತು. ಉದಯವಾಣಿ ಪತ್ರಿಕೆ ಕರಾವಳಿ ಜನರ ಕಣ್ಮಣಿಯಾಗಲು ಇದೂ ಒಂದು ಕಾರಣವಾಯಿತು.
ಆ ದಿನಗಳಲ್ಲಿ ಯಕ್ಷಗಾನದ ಬಗ್ಗೆ ಹೇಳಿಕೊಳ್ಳು ವಂಥ ತಾತ್ವಿಕ ಚರ್ಚೆ ನಡೆಯುತ್ತಿರಲಿಲ್ಲ. ಯಕ್ಷಗಾನದ ಬಗ್ಗೆ ನಾವು ವಿಮಶಾìತ್ಮಕ ದೃಷ್ಟಿಯಿಂದ ಮಾತನಾಡಬಹುದೋ ಮಾತನಾಡಬಾರದೋ ಎನ್ನುವ ಗೊಂದಲವೂ ಕಲಾಭಿಮಾನಿಗಳನೇಕರಲ್ಲಿತ್ತು.ಜನರು ತಮ್ಮ ತಮ್ಮೊಳಗೆ ಈ ವಿಚಾರವನ್ನು ಮಾತನಾಡಿ, ಜಗಳಾಡಿ ಎಂಬಂತೆ ಮುಗಿಸುತ್ತಿದ್ದರು. ಕಲಾವಿಹಾರದಲ್ಲಿ ಈಶ್ವರಯ್ಯ ಇಂಥ ಚರ್ಚೆಗೆ ಆಸ್ಪದ ನೀಡಿದರು. ಕಲಾವಿದರ ಬಗ್ಗೆ ಅವರು ನಿರ್ವಹಿಸಿದ ಪಾತ್ರದ ಔಚಿತ್ಯದ ಬಗ್ಗೆ ಬಹಿರಂಗ ಚರ್ಚೆಯೇ ನಡೆಯಿತು. ಈ ಚರ್ಚೆ ಆರೇಳು ವಾರ ನಡೆದದ್ದೂ ಉಂಟು. ಇದರಲ್ಲಿ ಬಲು ದೊಡ್ಡ ಯಕ್ಷಗಾನ ವಿದ್ವಾಂಸರೇ ಪಾಲ್ಗೊಂಡರು. ಕೆಲವೊಮ್ಮೆ ವೈಚಾರಿಕ ಚರ್ಚೆಯೂ ನಡೆಯಲಾರಂಭಿಸಿತು. ಅಲ್ಲಿವರೆಗೆ ಬೀದಿ ಜಗಳದಂತಿದ್ದ ಚರ್ಚೆ ಮಾಧ್ಯಮ ಕೇಂದ್ರಿತವಾದದ್ದು ಕಲಾವಿಹಾರದ ಪ್ರಯತ್ನದಿಂದ.
ಇದೇ ವೇಳೆ ಸಂಗೀತ ವಿಮರ್ಶೆಗೂ ಕಲಾವಿಹಾರದಲ್ಲಿ ಆದ್ಯತೆ ನೀಡಬೇಕೆಂಬ ಚಿಂತನೆ ಈಶ್ವರಯ್ಯನವರಿಗೆ ಬಂತು. ಅವರ ಮನಸ್ಸಿನಲ್ಲಿ ಆ ವೇಳೆ ಎರಡು ಉದ್ದೇಶಗಳಿದ್ದವು. ಒಂದು, ಒಳ್ಳೆಯ ಸಂಗೀತದ ಹೆಸರಿನಲ್ಲಿ ಘಟಾನುಘಟಿ ಕಲಾವಿದರು ನೀಡುವ ಕಾರ್ಯಕ್ರಮ ಹೇಗಿರುತ್ತದೆ ಎಂದು ವಿಶ್ಲೇಷಿಸುವುದು. ಇನ್ನೊಂದು ಒಳ್ಳೆಯ ಸಂಗೀತದ ಕಡೆಗೆ ಉದಯೋನ್ಮುಖರನ್ನು ಟ್ಯೂನ್ ಮಾಡುವುದು.ಸ್ವತಃ ಸಂಗೀತ ವಿಮರ್ಶಕರಾಗಿದ್ದ ಈಶ್ವರಯ್ಯ ಆರಂಭದ ದಿನಗಳಲ್ಲಿ ಕೊಂಚ ಕಟುವಾಗಿಯೇ ಕಾರ್ಯಕ್ರಮ ವಿಮರ್ಶೆ ಬರೆಯುತ್ತಿದ್ದರು.ಆದರೆ, ಕ್ರಮೇಣ ದೊಡ್ಡ ದೊಡ್ಡ ಕಲಾವಿದರು ಕೂಡ ಹೊಗಳಿಕೆ ತೆಗಳಿಕೆಯನ್ನು ಸಮನಾಗಿ ಸ್ವೀಕರಿಸುವ ಅಭ್ಯಾಸ ರೂಢಿಸಿಕೊಂಡರು. ಕಲಾವಿಹಾರದ ವಿಮರ್ಶೆಗಳು ಈ ದಿಕ್ಕಿನತ್ತ ದಾರಿದೀಪವಾದವು .
ಕ್ರಮೇಣ ಲಲಿತರಂಗ ಪುಟದಲ್ಲಿ ಕ್ಯಾಸೆಟ್ ವಿಮರ್ಶೆಗೂ ಸ್ಥಾನ ದೊರೆಯಿತು. ಆ ದಿನಗಳಲ್ಲಿ ಯಕ್ಷಗಾನ ತಾಳ ಮದ್ದಳೆ, ತಂತಿ ವಾದ್ಯ , ಹಾಡುಗಾರಿಕೆ ಕ್ಯಾಸೆಟ್ ಕೊಳ್ಳುವವರಿಗೆ ಈ ವಿಮರ್ಶೆ ಕೈ ದೀವಿಗೆಯಾಯಿತು. ಪುಸ್ತಕ ವಿಮರ್ಶೆಯ ಮಾದರಿಯಲ್ಲೇ ಕ್ಯಾಸೆಟ್ ಮಾರಾಟಗಾರರಿಗೂ ಇದು ಸ್ಥೂಲ ಮಾರ್ಗದರ್ಶಿಯಾಯಿತು.
ಕರಾವಳಿಯಲ್ಲಿ ಮಂಗಳೂರು ಆಕಾಶವಾಣಿ ನಿಲಯ ತಲೆ ಎತ್ತಿದಾಗ ಆಕಾಶವಾಣಿ ಬಿತ್ತರಿಸುವ ಕಾರ್ಯಕ್ರಮಗಳನ್ನು ಜನರೆಲ್ಲ ಕಿವಿಗೊಟ್ಟು ಕೇಳಲಾರಂಭಿಸಿದರು. ಆರಂಭದ ದಿನಗಳಲ್ಲಿ ಪ್ರಸಾರವಾದ ಕಾರ್ಯಕ್ರಮಗಳ ಬಗ್ಗೆ ಜನರ ಅನಿಸಿಕೆಯನ್ನು ಶಬ್ದ ಮಿತಿಯಲ್ಲಿ ಆಹ್ವಾನಿಸಿ ಲಲಿತರಂಗದಲ್ಲಿ ಪ್ರಕಟಿಸಲು ಈಶ್ವರಯ್ಯ ನಿರ್ಧರಿಸಿದರು. ಇದು ಹೊಸ ಬರಹಗಾರರಿಗೆ ಒಂದು ವೇದಿಕೆಯಾಯಿತು ಮಾತ್ರವಲ್ಲ, ಆಕಾಶವಾಣಿಯ ಕಾರ್ಯಕ್ರಮಗಳು ಇನ್ನಷ್ಟು ಸತ್ತÌಯುತವಾಗಿ ಮೂಡಿ ಬರುವಂತಾಗಲು ಪ್ರೇರಣೆಯಾಯಿತು ಎನ್ನಬಹುದು.
1973ರಲ್ಲಿ ಉದಯವಾಣಿಯ ಪತ್ರಿಕಾ ಬಳಗದಿಂದ ತುಷಾರ ಮಾಸ ಪತ್ರಿಕೆ ಆರಂಭವಾಯಿತು. ಈಶ್ವರಯ್ಯ ಅದರ ಸ್ಥಾಪಕ ಸಂಪಾದಕರಾಗಿ ನಿಯುಕ್ತಿಗೊಂಡರು. ಕನ್ನಡದ ಉಳಿದ ಮಾಸಪತ್ರಿಕೆಗಳಿಗಿಂತ ಭಿನ್ನವಾಗಿ ತುಷಾರ ಮೂಡಿ ಬರಬೇಕು ಎಂದು ಸಂಕಲ್ಪ ಮಾಡಿದ ಈಶ್ವರಯ್ಯ ಹಲವಾರು ಹೊಸ ಹೊಸ ಪ್ರಯೋಗಗಳನ್ನು ನಡೆಸಿದರು. ಈ ಮೂಲಕ ಹಲವು ವರ್ಷಗಳವರೆಗೆ ಅವರು ತುಷಾರವನ್ನು ಜನ ಮಾನಸದಲ್ಲಿ ಅಚ್ಚೊತ್ತುವಂತೆ ಮಾಡಿದರು. ಕನ್ನಡದ ಬೇರೆ ಮಾಸ ಪತ್ರಿಕೆಗಳ ಸಂಪಾದಕರು ಆ ದಿನಗಳಲ್ಲಿ ಪ್ರಕಟಿಸಲು ಅನುಮಾನಿಸಿದ್ದ ಪೂರ್ಣಚಂದ್ರ ತೇಜಸ್ವಿಯವರ ಕರ್ವಾಲೋ ಹಸ್ತಪ್ರತಿಯನ್ನು ಓದಿ ಮೆಚ್ಚಿಕೊಂಡ ಈಶ್ವರಯ್ಯ ಅದನ್ನು ಧಾರಾವಾಹಿಯಾಗಿ ಪ್ರಕಟಿಸಿದರು. ಆ ದಿನಗಳಲ್ಲಿ ಅದು ದೊಡ್ಡ ಮಟ್ಟದ ಸಾಹಿತ್ಯ ಚರ್ಚೆಯ ವಿಷಯವೂ ಆಯಿತು. ತುಷಾರದಲ್ಲಿ ಪ್ರಕಟವಾಗುವ ಲೇಖನ, ಕತೆ, ಪ್ರಬಂಧ , ಫೋಟೋಗಳ ಗುಣಮಟ್ಟವನ್ನು ಅವರೇ ನಿರ್ಧರಿಸುತ್ತಿದ್ದರು. ತುಷಾರದ ಛಾಯಾಚಿತ್ರಗ್ರಹಣ ಸ್ಪರ್ಧೆ ಅನೇಕ ಛಾಯಾಚಿತ್ರಗ್ರಾಹಕರ ಹುಟ್ಟಿಗೆ ಕಾರಣವಾಯಿತು. ಫೋಟೋಗ್ರಫಿಯ ತಂತ್ರಜ್ಞಾನದ ಬಗ್ಗೆ ಅನೇಕ ಗಣ್ಯರು ಬರೆದ ಲೇಖನಗಳು ಛಾಯಾಚಿತ್ರ ಗ್ರಾಹಕರ ಜ್ಞಾನದಾಹ ತಣಿಸುವಂತಿದ್ದವು. ಇದೇ ವೇಳೆ ಈಶ್ವರಯ್ಯ ಏಕಲವ್ಯನಂತೆ ಫೂಟೋಗ್ರಫಿ ಕಲಿತರು. ಸಮಾನ ಮನಸ್ಸಿನ ಗೆಳೆಯರ ಜತೆಗೂಡಿ ಫೋಕಲ್ ಫೋಟೋ ಕ್ಲಬ್ ಸ್ಥಾಪಿಸಿದರು. ಈ ಮೂಲಕ ಆಸಕ್ತ ಯುವಕರಿಗೆ ಛಾಯಾಚಿತ್ರ ಗ್ರಹಣದ ಮೂಲಭೂತ ವಿಚಾರಗಳನ್ನು ಹೇಳಿಕೊಡಬೇಕು ಎನ್ನುವ ಉದ್ದೇಶ ಅವರದಾಗಿತ್ತು. ಇದೇ ವೇದಿಕೆಯ ಆಶ್ರಯದಲ್ಲಿ ಈಶ್ವರಯ್ಯ ಉಡುಪಿಯಲ್ಲಿ ಎರಡು ಅಂತಾರಾಷ್ಟ್ರೀಯ ಛಾಯಾಚಿತ್ರ ಪ್ರದರ್ಶನಗಳನ್ನು ಏರ್ಪಡಿಸಿದ್ದಾರೆ. ಗಣ್ಯ ಛಾಯಾಚಿತ್ರ ಗ್ರಾಹಕರನ್ನು ಆಹ್ವಾನಿಸಿ ಉಳ್ಳಾಲ ಕಡಲ ಕಿನಾರೆಯಲ್ಲಿ ದೊಡ್ಡ ಕಾರ್ಯಕ್ರಮವೊಂದನ್ನು ಯಶಸ್ವಿಯಾಗಿ ನಡೆಸಿದ್ದು ಇನ್ನೂ ಅನೇಕರ ಮನಸ್ಸಿನಲ್ಲಿ ಹಸಿರಾಗಿದೆ. ತುಷಾರದ ಮೂಲಕ ಹೊಸ ಕತೆಗಾರರ ಬಳಗವೇ ಸೃಷ್ಟಿಯಾಯಿತೆನ್ನಬೇಕು. ಹೊಸತನ ಬಯಸುವ ಓದುಗರೂ ಕೂಡ ಸೃಷ್ಟಿಯಾದರು. ಇದರಲ್ಲಿ ಸಾಮಾನ್ಯ ಕತೆಯಿಂದ ಹಿಡಿದು ಬಲು ಗಟ್ಟಿಯಾದ ಕತೆಯವರೆಗೆ; ಕಾಲೇಜು ವಿದ್ಯಾರ್ಥಿಯಿಂದ ಹಿಡಿದು ಪ್ರಶಸ್ತಿ ವಿಜೇತರ ವರೆಗೆ ಅನೇಕರ ಕತೆ-ಬರೆಹಗಳು ಪ್ರಕಟವಾದವು. ತುಷಾರ ಸಾಗಿ ಬಂದ ಮೈಲುಗಲ್ಲುಗಳ ಕಡೆ ದೃಷ್ಟಿ ಹಾಯಿಸುವಾಗೆಲ್ಲ ಈಶ್ವರಯ್ಯನವರಿಗೆ ತಮ್ಮ ಇಳಿ ವಯಸ್ಸಿನಲ್ಲೂ ಥಟ್ಟನೆ ನೆನಪಾಗುತ್ತಿದ್ದುದು ಕೆ. ಕೆ. ನಾಯರ್ ಅನುವಾದಿಸಿದ ಲಲಿತಾಂಬಿಕಾ ಅಂತರ್ಜನಂ ಅವರ ಅಗ್ನಿ ಸಾಕ್ಷಿ ಕಾದಂಬರಿ , ಬನ್ನಂಜೆ ಗೋವಿಂದಾಚಾರ್ಯರು ಋತುಗಳ ಬಗ್ಗೆ ಬರೆದ ಆರು ಲೇಖನಗಳು, ಪ್ರಾದೇಶಿಕ ಭಾಷೆಗೆ ಸಂಬಂಧಿಸಿದ ಕೆಲವು ವಿಶೇಷ ಸಂಚಿಕೆಗಳು ಮತ್ತು ಗಣ್ಯರನೇಕರ ಫೂಟೋ ಲೇಖನಗಳು. ಸುಮಾರು ಮೂರೂವರೆ ದಶಕಗಳ ಕಾಲ ಈಶ್ವರಯ್ಯ ಸೇವೆ ಸಲ್ಲಿಸಿದರು.
ನಿವೃತ್ತರಾದ ಬಳಿಕ 2008ರಿಂದ ತೊಡಗಿ ಹಲವು ತಿಂಗಳು ಹಿಂದಿನವರೆಗೂ ಅವರು ಉಡುಪಿಯಿಂದ ಪ್ರಕಟವಾಗುವ ರಾಗಧನಶ್ರೀ ಸಂಗೀತ ಮಾಸಿಕದ ಸಂಪಾದಕರಾಗಿ ಕಾರ್ಯ ನಿರ್ವಹಿಸಿದರು.
ಕಲಾವಿಮರ್ಶಕರಾದರೂ ಪೂರ್ಣ ಪ್ರಮಾಣದಲ್ಲಿ ಸಂಗೀತ ಕಲಿಯಲು ತನ್ನಿಂದ ಸಾಧ್ಯವಾಗಲಿಲ್ಲವಲ್ಲ ಎನ್ನುವ ಕೊರಗು ಈಶ್ವರಯ್ಯನವರನ್ನು ಆಗೀಗ ಕಾಡುತ್ತಿತ್ತು. ಈ ಕಾರಣದಿಂದಾಗಿಯೇ ಅವರು ಉಡುಪಿಯಲ್ಲಿ ಸಂಗೀತ ಕಲಿಯುವ ಮಕ್ಕಳಿಗೆ ಉತ್ತಮ ವಾತಾವರಣ ಒದಗಿಕೊಡಬೇಕು ಎಂದು ತೀರ್ಮಾನಿಸಿದರು. ಸಂಗೀತ ಪ್ರಿಯರು ಹುಟ್ಟು ಹಾಕಿದ ಸಂಗೀತಕ್ಕೆ ಮೀಸಲಾದ ರಾಗಧನ ಸಂಸ್ಥೆಯನ್ನು ನೀರೆರೆದು ಪೋಷಿಸಿದರು. ಉದಯೋನ್ಮುಖ ಸಂಗೀತಗಾರರನ್ನು ಅದರಲ್ಲೂ ಮುಖ್ಯವಾಗಿ ಎಳೆಯರನ್ನು ಪ್ರೋತ್ಸಾಹಿಸುವುದರೊಂದಿಗೆ ಕಲಾರಸಿಕರಿಗೆ ಸಂಗೀತದ ಬಗ್ಗೆ ಆಸಕ್ತಿ ಮೂಡುವಂತೆ ಮಾಡುವುದು ಈ ಸಂಸ್ಥೆಯ ಮುಖ್ಯ ಉದ್ದೇಶ. ಒಂದೊಂದು ರಾಗದ ಬಗ್ಗೆ , ವಾಗ್ಗೇಯಕಾರರ ಬಗ್ಗೆ , ಪಂಚರತ್ನ ಕೃತಿಗಳ ಬಗ್ಗೆ -ಹೀಗೆ ಹತ್ತಾರು ವಿಧಗಳಲ್ಲಿ ಸಂಗೀತವನ್ನು ತೆರೆದಿಡುವ ಪ್ರಯತ್ನ ರಾಗಧನದಿಂದ ನಡೆಯುತ್ತ ಬಂದಿದೆ.
ಒಬ್ಬ ಉತ್ತಮ ಕಲಾವಿದರ ಕಚೇರಿ ನಡೆದ ಬಳಿಕ ಮಕ್ಕಳೆದುರು ಆ ಕಚೇರಿಯ ಕುರಿತು ಮಾಹಿತಿ ರೂಪದಲ್ಲಿ ಮಾತಾಡುವ ಪರಿಪಾಠ ಇಲ್ಲಿದೆ. “ಮನೆಮನೆ ಸಂಗೀತ’ ಎನ್ನುವುದು ರಾಗಧನ ಹಮ್ಮಿಕೊಂಡ ವಿಶಿಷ್ಟ ಕಾರ್ಯಕ್ರಮ. ಇದರಲ್ಲಿ ಯಾವ ಕಲಾವಿದರು ತಮ್ಮ ಮನೆಯಲ್ಲಿ ಕಾರ್ಯಕ್ರಮ ನಡೆಸಿಕೊಡಬೇಕು ಎನ್ನುವ ನಿರ್ಧಾರ ಕಾರ್ಯಕ್ರಮ ನಡೆಸುವ ಮನೆಯವರಿಗೆ ಬಿಟ್ಟದ್ದು. ಈ ಕಾರ್ಯಕ್ರಮದ ಹಿಂದೆಯೂ ಎರಡು ಉದ್ದೇಶಗಳಿವೆ. ಒಂದು ವೇದಿಕೆ ಸಿಗದ ಉದಯೋನ್ಮುಖ ಕಲಾವಿದರಿಗೆ ವೇದಿಕೆ ಒದಗಿಸುವುದು. ಇನ್ನೊಂದು ಆಸಕ್ತ ಜನರನ್ನು ಮತ್ತೆ ಮತ್ತೆ ಸಂಗೀತದೆಡೆಗೆ ಸೆಳೆಯುವಂತೆ ಮಾಡುವುದು. ಆ ಮನೆಯ ಅಕ್ಕಪಕ್ಕದವರ ಕಿವಿಗೂ ಸಂಗೀತ ಕೇಳಿಸುವಂತೆ ಮಾಡುವುದು.ಇಂಥ ಪ್ರಯತ್ನದಿಂದಾಗಿ ಸಂಗೀತದ ಆಸಕ್ತಿ ಹೆಚ್ಚಿ ಅನೇಕ ಮಕ್ಕಳು ಹೆಚ್ಚಿನ ಸಂಗೀತ ಶಿಕ್ಷಣಕ್ಕಾಗಿ ಚೆನ್ನೈ ಕಡೆ ಮುಖ ಮಾಡುವಂತಾಯಿತು.
ಹವ್ಯಾಸಿ ಛಾಯಾಚಿತ್ರಗ್ರಾಹಕರಿಗಾಗಿ ಫೋಕಲ್ ಫೂಟೋ ಕ್ಲಬ್ ಸ್ಥಾಪಿಸಿದ ಅವರು ಅಭಿರುಚಿ ಸಂಘಟನೆಯ ಸ್ಥಾಪಕರೂ ಹೌದು. ಮಂಗಳೂರು ಸಂಗೀತ ಸಂಗಮದ ಅಧ್ಯಕ್ಷರಾಗಿ , ರಾಗಧನ ಉಡುಪಿ ಸಂಸ್ಥೆಯ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದಾರೆ.
ಸಾಹಿತ್ಯ ಕೃಷಿ
ಪತ್ರಕರ್ತರಾಗಿ ಅನೇಕ ಸಾಂದರ್ಭಿಕ ಲೇಖನಗಳನ್ನು ಬರೆದ ಈಶ್ವರಯ್ಯ ಸರಸ ಅಂಕಣದಿಂದ ಓದುಗರಿಗೆ ಚಿರಪರಿಚಿತ. ಅವರ ಈ ಲಲಿತ ಪ್ರಬಂಧಗಳು ಸಂಕಲನ ರೂಪದಲ್ಲಿ ಪ್ರಕಟಗೊಂಡಿವೆ. ಪ್ರಮಾಣ ಅವರು ಬರೆದ ಕಥಾ ಸಂಕಲನ. ಅವಸಾನ ಅವರು ಅನುವಾದಿಸಿದ ಕತೆಗಳ ಸಂಕಲನ. ಇದಲ್ಲದೆ ಸಂಗೀತ ಕ್ಷೇತ್ರದ ಅನೇಕ ಮೇರು ವ್ಯಕ್ತಿಗಳ ಸಂದರ್ಶನ ಲೇಖನಗಳನ್ನೂ ಪತ್ರಿಕೆಯಲ್ಲಿ ಆಗೀಗ ಪ್ರಕಟಿಸಿದ್ದಾರೆ. ಆಕಾಶವಾಣಿಗಾಗಿಯೂ ಅವರ ಅನೇಕ ಗಣ್ಯ ಕಲಾವಿದರ ಸಂದರ್ಶನ ನಡೆಸಿದ್ದಾರೆ.
ಮಂಗಳೂರು ಸಂಗೀತ ಸಮ್ಮೇಳನದ ಅಧ್ಯಕ್ಷತೆ, ಮಂಬಯಿಯಲ್ಲಿ ನಡೆದ ಯಕ್ಷಗಾನ ಸಮ್ಮೇಳನದ ಅಧ್ಯಕ್ಷತೆ ಈಶ್ವರಯ್ಯನವರನ್ನು ಅರಸಿಕೊಂಡು ಬಂದಿದೆ.
ಈಶ್ವರಯ್ಯರ ಅಗಲಿಕೆಯಿಂದ ನಮ್ಮೆದುರು ಒಂದು ಶೂನ್ಯ ನಿರ್ಮಾಣವಾದಂತಾಗಿದೆ.
ಎಸ್. ನಿತ್ಯಾನಂದ ಪಡ್ರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Harapanahalli: ಪ್ರತಿಷ್ಠೆಯ ಕಣವಾದ ಬಿ90 ಸೊಸೈಟಿ ಚುನಾವಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.