ಭಾವೋದ್ರೇಕವಿಲ್ಲದ ವಿಮರ್ಶಾ ಧೀಮಂತಿಕೆ; ಗಿರಡ್ಡಿ ಗೋವಿಂದರಾಜ
Team Udayavani, Mar 3, 2019, 12:30 AM IST
ಗಿರಡ್ಡಿ ಗೋವಿಂದರಾಜ ನನ್ನ ಅಂತರಂಗದ ಒಡನಾಡಿ ಆದದ್ದು ಯಾವಾಗ ಎಂದು ಯೋಚಿಸುತ್ತಿದ್ದೇನೆ. ಒಟ್ಟಿಗೇ ಅನೇಕ ನೆನಪುಗಳು ಮನಸ್ಸಿಗೆ ಮುತ್ತಿಗೆ ಹಾಕುತ್ತವೆ. ಮೊದಲು ರಿಂಗಣ ಹಾಕಿದ ನೆನಪು ಯಾವುದು ಹೊಳೆಯುತ್ತಲೇ ಇಲ್ಲ. ಕೆಲವರ ವಿಷಯದಲ್ಲಿ ಹೀಗಾಗುತ್ತದೆ. ಬೀಸುವ ತಂಗಾಳಿಯಂತೆ ಅವರು ಯಾವಾಗಲೋ ನಮ್ಮ ಮನಸ್ಸು ಹೊಕ್ಕುಬಿಟ್ಟಿರುತ್ತಾರೆ. ಆಯಾತ-ನಿರ್ಯಾತಗಳಲ್ಲಿ ಮನಸ್ಸಿನ ಒಳಕ್ಕೆ ಹೊರಕ್ಕೆ ಬಂದುಹೋಗುತ್ತ ಸಹಜವಾಗಿ ನಮ್ಮೊಂದಿಗೆ ಇದ್ದುಬಿಡುತ್ತಾರೆ. ಹಾಗೆ ಗಾಳಿಯಂತೆ ಗೊತ್ತೇ ಆಗದಂತೆ ಅಂತರಂಗದ ಗೆಳೆಯರಾದವರು ಗಿರಡ್ಡಿ.
ಗಿರಡ್ಡಿ ಅಂದಕೂಡಲೇ ಸುಲಭಕ್ಕೆ ಯಾವುದನ್ನೂ ಒಪ್ಪದ ಅವರ ಕುಸುಬಿಷ್ಟಿ ನನಗೆ ಮೊದಲು ನೆನಪಾಗುತ್ತದೆ. ಅವರ ಸಂಪಾದಕತ್ವದಲ್ಲಿ ಸಾಹಿತ್ಯ ಅಕಾಡೆಮಿಗಾಗಿ ನಾನು ಕಥನಕವನದ ಬಗ್ಗೆ ಒಂದು ಪುಸ್ತಕ ಬರೆಯಬೇಕಾಗಿ ಬಂತು. ನನ್ನ ಹಸ್ತಪ್ರತಿಯನ್ನು ಗಿರಡ್ಡಿ ಒಂದಕ್ಷರವೂ ಬಿಡದಂತೆ ಓದಿ, ಬಿಡಬೇಕಾದ ವಿಷಯಗಳೇನು, ಸೇರಿಸಬೇಕಾದ ಸಂಗತಿಗಳು ಯಾವುವು ಎಂಬುದನ್ನು ಮತ್ತೆ ಮತ್ತೆ ತಿಳಿಸಿದ್ದಲ್ಲದೆ ಅಕ್ಷರ ದೋಷಗಳನ್ನೂ ಗುರುತಿಸಿ ಕಳಿಸುತ್ತಿದ್ದರು. ಕೊನೆಯಲ್ಲಿ ಮ. ಮ. ಕೂಡ ಇರುತ್ತಿತ್ತು. ಮ. ಮ. ಅಂದರೆ ಮರೆತ ಮಾತು. ಒಂದೇ ವಾಕ್ಯದ ಎದೆ ಝಲ್ಲೆನಿಸುವ ಮಾತು! “ಮತ್ತೂಮ್ಮೆ ತಿದ್ದಿ ಹಸ್ತಪ್ರತಿ ಕಳಿಸಿ ಪ್ಲೀಜ್!’
ಓಹೋ! ಇವರನ್ನು ಒಪ್ಪಿಸುವುದು ಕಷ್ಟವಪ್ಪಾ ಅನ್ನಿಸಿತು ನನಗೆ. ನನ್ನ ಕವಿತೆಯನ್ನು ತಿದ್ದಿ ಬರೆಯುವುದಕ್ಕಿಂತ ಹೆಚ್ಚು ಸಲ ಕಥನಕವನ ಪುಸ್ತಕವನ್ನು ನಾನು ತಿದ್ದಿ ಬರೆದಿದ್ದೇನೆ! ಕೊನೆಗೂ ಒಮ್ಮೆ ಗಿರಡ್ಡಿ ಎರಡು ಸಾಲಿನ ಕಾಗದ ಒಂದನ್ನು ಬರೆದೇಬಿಟ್ಟರು. “”ಈಗ ಅಡ್ಡಿಯಿಲ್ಲ. ಚಲೋ ಬರಹ! ಅಭಿನಂದನೆ ಎಚ್ಚೆಸ್ವಿ!”. ನಾನು ಅಬ್ಟಾ! ಪುಸ್ತಕ ಮುಗಿಯಿತಲ್ಲ ಎಂದು ನೆಮ್ಮದಿಯ ನಿಟ್ಟುಸಿರು ಬಿಟ್ಟು ಸರಳೀತ ಉಸಿರಾಟ ಶುರುಮಾಡಿ ಎರಡು ದಿನಗಳಾಗಿಲ್ಲ. ಮತ್ತೆ ಗಿರಡಿª ಕಾಗದ. “”ಎಚ್ಚೆಸ್ವಿ! ನೀವು ಓದಿದ್ದೀರೋ ಇಲ್ಲವೋ ತಿಳಿಯದು. ಮಾಸ್ತಿಯವರ ಸೋಜಿಗದ ಹೊಳಲು ಕಥನ ಕವನದ ಬಗ್ಗೆ ಚೆನ್ನಾಗಿ ಬರೆದಿರುವಿರಿ. ತದ್ವತ್ ಇದೇ ವಸ್ತುವನ್ನು ಆಧರಿಸಿ ನವರತ್ನ ರಾಮರಾವ್ ಗದ್ಯಕಥೆಯೊಂದನ್ನು ಬರೆದಿದ್ದಾರೆ. ಅವೆರಡನ್ನೂ ಹೋಲಿಸಿ ಒಂದು ನೋಟ್ ಬರೆದರೆ ತುಂಬ ಚೆನ್ನಾಗಿರುತ್ತದೆ. ನವರತ್ನರಾಮರಾವ್ ಅವರ ಕಥೆ- ತಾವರೆ ಕೋಟೆ. ನಿಮಗೆ ದೊರೆಯದಿದ್ದರೆ ಅದನ್ನು ನಾನು ನಿಮಗೆ ಕಳಿಸಿಕೊಡುತ್ತೇನೆ. ಅದನ್ನೂ ಸೇರಿಸಿಬಿಡಿ ಮತ್ತೆ. ಪುಸ್ತಕ ಇನ್ನೂ ಚಲೋದಾಗುತ್ತೆ.”
“ಆಯಿತು! ಕಳಿಸಿ ಸ್ವಾಮಿ!’ ಎಂದು ಬರೆದದ್ದಾಯ್ತು. ಆಶ್ಚರ್ಯ! ಮಾಸ್ತಿ ಕವನ ರೂಪದಲ್ಲಿ ಬರೆದ ಕಥೆಯನ್ನೇ ನವರತ್ನರಾಮರಾವ್ ಗದ್ಯ ಕಥೆಯಾಗಿ ಬರೆದಿದ್ದಾರೆ. ನಾನು ಹೌದಲ್ಲ, ಇದು ಬಹಳ ವಿಶೇಷ ಸಂಗತಿ ಅಂದುಕೊಂಡು ಮಾಸ್ತಿ ಮತ್ತು ನರತ್ನರಾಮರಾವ್ ಕಥೆಯನ್ನು ಇದಿರಾಬದಿರು ಇರಿಸಿ ಒಂದು ನೋಟ್ ಬರೆದು ಕಳಿಸಿದೆ. ಹಂಸಪಾದಗಳಿರುವ ತನಕ ಹಕ್ಕಿಗಳು ಪಂಕ್ತಿಗೆ ಇಳಿಯುವುದಕ್ಕೆ ಯಾವ ಅಡ್ಡಿಯೂ ಇಲ್ಲ. ಗಿರಡ್ಡಿಗೆ ತೃಪ್ತಿ ಆಯಿತು (ಹಾಗಂತ ಅಂದುಕೊಂಡೆ!). ಮುದ್ರಿತ ಪುಸ್ತಕ ನೋಡಿದಾಗ ಗಿರಡ್ಡಿ ಪುಟದ ಕೆಳಗೆ ತಮ್ಮದೂ ಒಂದು ಅಡಿಟಿಪ್ಪಣಿ ಹಾಕಿದ್ದಾರೆ. ನನ್ನ ಮಾತಿನ ಜೊತೆಗೆ ಸಂಪಾದಕರ ಅಡಿಟಿಪ್ಪಣಿಯಲ್ಲಿ ಅವರು ಸೇರಿಸಿದ್ದು: ಸಂವೇದನೆಯ ಕೆಲವು ವಿಶಿಷ್ಟ ಅಂಶಗಳನ್ನು ಗದ್ಯ ಎಷ್ಟೇ ಸಮರ್ಥವಾದರೂ ಅಭಿವ್ಯಕ್ತಿಸಲಾರದು, ಅದು ಕಾವ್ಯಕ್ಕೆ ಮಾತ್ರ ಸಾಧ್ಯ ಎಂಬ ಎಲಿಯಟ್‌ನ ಇನ್ನೊಂದು ವಾದವನ್ನು ಇಲ್ಲಿ ಗಮನಿಸಬಹುದು. ಕಾವ್ಯದ ಈ ವಿಶಿಷ್ಟತೆಯಿಂದಾಗಿಯೇ ಕಾವ್ಯ ನಾಟಕ, ಕಥನ ಕವನಗಳ ಆವಶ್ಯಕತೆ ಇಂದಿಗೂ ಇದೆ-
ಸಂ. ಧಾರವಾಡ ನನ್ನ ಎರಡನೆಯ ತವರು ಎಂದು ನಾನು ಆಗಾಗ ಹೇಳುವುದುಂಟು. ಬೆಂಗಳೂರಿನ ಅಸಮಂಜಸ ವಿಸ್ತಾರದಲ್ಲಿ ನಮಗೆ ಹತ್ತಿರದವರೂ ದೂರವಾಗಿ ಬಿಡುತ್ತಾರೆ. ಧಾರವಾಡದ ಅಡಕ ಗುಣದಿಂದ ನಮಗೆ ದೂರದವರೂ ಹತ್ತಿರವಾಗಿಬಿಡುತ್ತಾರೆ. ಇದು ಗಿರಡ್ಡಿ ಮನೆ. ದೊಡ್ಡ ಮುಂದೋಟ. ಮಾವಿನ ಮರ, ಮಲ್ಲಿಗೆ ಬಳ್ಳಿ ಇತ್ಯಾದಿ. ಇಲ್ಲಿಂದ ಕಾಲ್ನಡಿಗೆಯ ದೂರದಲ್ಲಿ ಆಮೂರರ ಮನೆ. ಅಲ್ಲೂ ಮುಂದೋಟದಲ್ಲಿ ಹರವಾಗಿ ಬೆಳೆದ ಮರಗಿಡಬಳ್ಳಿಗಳು. ಕಲ್ಯಾಣ ನಗರಕ್ಕೆ ರಾಘವೇಂದ್ರ ಪಾಟೀಲರನ್ನು ನೋಡಲು (ಅಷ್ಟೆಯೋ ಅಥವಾ ಅವರ ಮನೆಯ ರೊಟ್ಟಿ ಎಣ್ಣೆಗಾಯಿನ ರುಚಿ ಸವಿಯಲೋ) ಹೋದರೆ ಅಲ್ಲಿಂದ ಹತ್ತು ಹೆಜ್ಜೆ ಪೂರ್ವಕ್ಕೆ ಹಿರಿಯ ಕವಿ ಹಿತಮಿತಮಧುರವಚನದ ಸರದಾರ ಕಣವಿ ಅವರ ಮನೆ. ಅಲ್ಲಿಂದ ಕಾಲ್ನಡಿಗೆ ದೂರದಲ್ಲಿ ಖಡಕ್ ಮಾತಿನ ಕಲಬುರ್ಗಿ ಸರ್ ಮನೆ. ರಿûಾ ಹಿಡಿದು ಹತ್ತು ಮಿನಿಟ್ಟು ಪಯಣಿಸಿದರೆ ಮಲ್ಲಿಕಾರ್ಜುನ ಹಿರೇಮಠರು. ಪಟ್ಟಣಶೆಟ್ಟಿ ಮನೆ ಅಲ್ಲಿಂದ ಬಹುದೂರವೇನಿಲ್ಲ. ದಾರಿಯಲ್ಲೇ ಚಂಪಾ ಮನೆಯೂ ನಮಗೆ ಕಾಣಬಹುದು. ಬೆಂಗಳೂರಲ್ಲಿ ಪ್ರೀತಿ-ಜಗಳ ಯಾವುದಕ್ಕೂ ಜನ ಸಿಕ್ಕುವುದಿಲ್ಲ. ನಾನು ಧಾರವಾಡ ತಲುಪಿದ ಕೂಡಲೇ ಗಿರಡ್ಡಿಗೆ ಒಂದು ಫೋನ್ ಹಚ್ಚಿ ಯೇ ಹಚ್ಚುವೆನು. “ಸರ್, ನಿಮ್ಮೂರಿಗೆ ಬಂದಿದ್ದೇನೆ’. “ಒಳ್ಳೇದು. ರಾತ್ರಿ ಊಟಕ್ಕೆ ಸೇರೋಣು ಮತ್ತೆ!’
ಗಿರಡ್ಡಿಗೆ ಫೋನಿನಲ್ಲಿ ಸ್ಪಷ್ಟ ಕೇಳುತ್ತೆ. ಈ ಕಿವಿಸುಮಾರಿನ ವಿಷಯ ಬರೆಯುವಾಗ ಹೆಗ್ಗೊàಡಿನ ಸಭೆಯೊಂದರ ನೆನಪಾಗುತ್ತದೆ. ನಾನು ಅಭ್ಯಾಸದ ಗೆಳೆಯರೊಂದಿಗೆ ಹೆಗ್ಗೊàಡಿಗೆ ಬಂದಿಳಿದರೆ ಗಿರಡ್ಡಿ, ಪಾಟೀಲ, ಹಿರೇಮಠ ಸಾಗರದ ನಮ್ಮ ಠಿಕಾಣಿಯ ವರದಶ್ರೀ ಹೋಟೆಲ್ ಮುಂದೆ ಪ್ರತ್ಯಕ್ಷ. ಅವರೆಲ್ಲ ಮುಂಜಾನೆಯ ಹವಾಸೇವನೆಗೆ ಹೊರಟಿದ್ದಾರೆ. “ಬರ್ತೀರೇನು? ಐದು ಮಿನಿಟ್ಟು ಕಾಯ್ತಿàವಿ ನಿಮಗೆ!’ ಗೆಳೆಯರೊಂದಿಗೆ ಮುಂಜಾನೆಯ ವಾಕ್ ಯಾರಿಗೆ ಪ್ರಿಯವಾಗದು? “ಹತ್ತೇ ನಿಮಿಷ. ಕೋಣೆಯಲ್ಲಿ ಕಿಟ್ ಬಿಸಾಕಿ ಬರುತ್ತೇನೆ’. ಆಗ ಸಾಗರದಲ್ಲಿ ಇನ್ನೂ ಚುಮುಚುಮು ಬೆಳಗ್ಗೆ. ನಾವು ಕೆರೆ ಏರಿಯ ರಸ್ತೆಯಲ್ಲಿ ಅದೂ ಇದೂ ಹರಟುತ್ತ ಸಾವಧಾನ ಸಾಗುತ್ತೇವೆ. “ನೆನ್ನೆ ಕಾರ್ಯಕ್ರಮ ಹೇಗಾಯಿತು ಸರ್?’ ನಾನು ಗಿರಡ್ಡಿಯವರನ್ನು ಕೇಳುತ್ತೇನೆ. “ನೆನ್ನೆ ಪ್ರಖ್ಯಾತ ಲೇಖಕರೊಬ್ಬರ ವಿಶೇಷ ಉಪನ್ಯಾಸವಿತ್ತು’. ಗಿರಡ್ಡಿ ನನ್ನನ್ನು ಮಿಕಿಮಿಕಿ ನೋಡುತ್ತಾರೆ.
“ಚಂದಾಗಿ ಮಾತಾಡಿದರು ಕಾಣತ್ತೆ. ಜನ ತನ್ಮಯರಾಗಿ ಕೇಳ್ತಾ ಇದ್ದರು. ನಿಮ್ಮ ಅಭಿಪ್ರಾಯ ಹೇಳಿ!’ ಎಂದೆ ನಾನು. “ಅವರ ಭಾಷಣದ ಒಂದು ಅಕ್ಷರವೂ ನನ್ನ ಕಿವಿಗೆ ಬೀಳಲಿಲ್ಲ ಮಾರಾಯರೆ. ಹೇಳಿದ್ದು ಕೇಳಿದ್ದರೆ ತಾನೇ ನಾನು ಏನಾದರೂ ಹೇಳ್ಳೋದು?’
“ಯಾಕೆ ಸರ್? ನಿಮ್ಮ ಕರ್ಣಾಭರಣ ಹಾಕಿಕೊಂಡಿರಲಿಲ್ಲವೆ?’ “ಅದನ್ನು ಹಾಕಿಕೊಂಡರೆ ಕೇಳಬಾರದ್ದೆಲ್ಲಾ ಕೇಳತ್ತೆ. ಕೇಳಬೇಕಾದ್ದು ಸುತರಾಂ ಕೇಳ್ಳೋದಿಲ್ಲ’ ಎಲ್ಲರೂ ಹೊಟ್ಟೆ ತುಂಬಾ ನಕ್ಕು ವಾಕ್ ಮುಂದುವರೆಸಿದ್ದಾಯಿತು. “ಅಗೋ! ಅಲ್ಲೊಂದು ಗೂಡಂಗಡಿ. ಅಲ್ಲಿ ಬಿಸಿಬಿಸೀ ಚಾ ಸಿಗಬಹುದು… ಬರ್ರಿ ನಮ್ಮ ಅದೃಷ್ಟ ಪರೀಕ್ಷೆ ಮಾಡೋಣು’ ಎಂದರು ಗಿರಡ್ಡಿ ತುಂಟ ಕಿರುನಗೆಯ ಸಮೇತ.
ಮಧ್ಯಾಹ್ನ ಬಿಡುವಿನ ವೇಳೆ. ನಾನು ಗಿರಡ್ಡಿ ಪಾಟೀಲ ಹೆಗ್ಗೊàಡಿನ ದೇಸಿ ಅಂಗಡಿಗೆ ಹೋಗುತ್ತೇವೆ. ಯಥಾಪ್ರಕಾರ ಖಾದಿಜುಬ್ಬದ ಖರೀದಿ. “”ನಿಮ್ಮ ಪರ್ಸಾನಾಲಿಟಿಗೆ ಈ ಜುಬ್ಟಾº ಭಾಳ ಚಂದ ಒಪ್ಪುತ್ತದೆ ಸರ್’ ಅಂತ ನಾವು ಅನ್ನೋದು. “ಹಂಗೇನರಿ? ಸರೀಮತ್ತೆ. ತಗೊಂಡೇ ಬಿಡೋಣು’ ಮಧ್ಯಾಹ್ನ ಸಭೆಯಲ್ಲಿ ಗಿರಡ್ಡಿ ಹೊಸ ಜುಬ್ಬದೊಂದಿಗೆ ಮಿಂಚುತ್ತಿದ್ದಾರೆ. ಅದನ್ನು ಎಲ್ಲಿ ಯಾವಾಗ ಗಿರಡ್ಡಿ ಧರಿಸಿದರು ಎನ್ನುವುದೇ ಒಂದು ಚಿದಂಬರ ರಹಸ್ಯ.
ನಾನು ಮೊದಲೇ ಹೇಳಿದೆನಲ್ಲ, ಯಾವ ಪೇಪರ್ರಿಗೂ ಗಿರಡ್ಡಿ ನೂರಕ್ಕೆ ನೂರು ಅಂಕ ಹಾಕುವವರಲ್ಲ. ಚೆನ್ನಾಗಿದೆ ಅನಿಸಿದರೆ ಅವರು ಹೇಳುವ ಒಂದೇ ಮಾತು- “ಅಡ್ಡಿಯಿಲ್ಲ!’ ನಾನು ಗಿರಡ್ಡಿಗೆ ಎಂಬತ್ತು ಆದಾಗ ಅವರ ಅಭಿನಂದನ ಭಾಷಣ ಮಾಡುತ್ತ “ಅಡ್ಡಿಯಿಲ್ಲ’ ಎಂಬ ಅವರ ಖಾಸಾ ನುಡಿಗಟ್ಟಿನ ಬಗ್ಗೆಯೇ ಒಂದು ಜೋಕು ಹಾರಿಸಿದೆ. ನನ್ನ ಭಾಷಣ ಭಾಳ ಚಲೋದಾಗಿ ಬಂತು ಎಂದು ಅವತ್ತು ಗೆಳೆಯರೆಲ್ಲರ ಅಂಬೋಣ. ನನಗೆ ಗಿರಡಿª ಏನನ್ನುವರು ಎನ್ನುವ ಕುತೂಹಲ. ಅವರು ಎಣ್ಣೆ ನಗೆ ನಗುತ್ತ ಕಣ್ಣಲ್ಲೇ ಏನೋ ಹೇಳುತ್ತ ಇದ್ದಾರೆ. ದೂರದ ಮರದ ಕೆಳಗೆ ಗಿರಡ್ಡಿ ಹೊಗೆ ಎಳೆಯುತ್ತಿದ್ದಾಗ ನಾನು ಅವರನ್ನು ಸಮೀಪಿಸಿ, “”ಈವತ್ತಿನ ನನ್ನ ಭಾಷಣ ನಿಮಗೆ ಏನನ್ನಿಸಿತು?” ಎಂದು ಕೇಳಿಯೇ ಬಿಟ್ಟೆ. ಗಿರಡ್ಡಿ ಆವಾಗಲೂ ತಣ್ಣಗೆ “ಅಡ್ಡಿಯಿಲ್ಲ’ ಅಂದು ಬಿಡೋದೆ!
ತಮ್ಮ ವಿಮರ್ಶೆ, ಕಥೆ, ಕವಿತೆ, ಈಚೆಗೆ ಪ್ರಬಂಧಗಳಿಂದ ನನ್ನ ಮನಸ್ಸನ್ನು ಸೂರೆ ಮಾಡಿದ ಗೆಳೆಯರು ಗಿರಡ್ಡಿ. ಅವರು ಸಭೆಸಮಾರಂಭಗಳಲ್ಲಿ ಮಾತಾಡುವಾಗ ಸಖತ್ತು ಪೂರ್ವಸಿದ್ಧತೆ ಮಾಡಿಕೊಂಡಿರುತ್ತಾರೆ. ಏನು ಹೇಳಬೇಕು ಎಷ್ಟು ಹೇಳಬೇಕು ಎಲ್ಲ ಅವರಿಗೆ ಖಚಿತ. ಏರಿಳಿವಿಲ್ಲದ ಏಕಶ್ರುತಿಯ ನಿರಾಳ ಹರಿವಿನ ಅವರ ಮಾತುಗಳನ್ನು ನಾನು ಅದೆಷ್ಟು ಬಾರಿ ಕೇಳಿರುವೆನೋ! ಆ ಮಾತುಗಳಲ್ಲಿ ಕಾಣುವ ನವುರಾದ ಹಾಸ್ಯ, ಕೆಲವೊಮ್ಮೆ ನಿಷ್ಠುರ ವ್ಯಂಗ್ಯ, ಮುಚ್ಚುಮರೆಯಿಲ್ಲದ ಬಿಚ್ಚು ನುಡಿ ನನಗೆ ಯಾವಾಗಲೂ ಇಷ್ಟವಾಗುವಂಥದ್ದು! ಮುಲಾಜಿಗೆ ಗಿರಡ್ಡಿ ಯಾವತ್ತೂ ಮಣೆ ಹಾಕುವವರಲ್ಲ!
ಇನ್ನು ಅವರೊಂದಿಗೆ ನಡೆಯುವ ಖಾಸಗಿ ಮಾತುಕತೆೆಯ ಚಂದವೇ ಬೇರೆ. ಈವತ್ತೂ ಸಿಪ್ಪು$ಮತ್ತು ಗಾಸಿಪ್ಪು$ಎರಡೂ ಅವರಿಗೆ ಪ್ರಿಯ ಎಂದು ಸಾನೆಟ್ಟೊಂದರಲ್ಲಿ ನಾನು ಬರೆದಿದ್ದೇನೆ. “ನೀವು ಸಾನೆಟ್ಟಿನ ಬಿಗಿದ ಮುಖದ ಸ್ನಾಯುಗಳು ಸಡಿಲವಾಗುವಂತೆ ಬರೆಯುತ್ತೀರಿ’ ಎಂದು ಅವರು ಮೆಚ್ಚು ನುಡಿ ಆಡಿದ್ದಾರೆ. ಗಾಸಿಪ್ಪು ಅವರಿಗೆ ಪ್ರಿಯ ನಿಜ. ಆದರೆ, ಗಾಸಿಪ್ಪಿಗೂ ಆಧಾರ ಹುಡುಕಿ ಅಸ್ತಿವಾರ ಕಲ್ಪಿಸುವ ಸಂಶೋಧಕನ ಶಿಸ್ತು ಅವರದ್ದು. ಅವರೊಂದಿಗೆ ಗಂಟೆಗಟ್ಟಲೆ ಹರಟಿದ್ದ ಎಷ್ಟೋ ಸಂಜೆಗಳಿವೆ. ಸಂಜೆ ಎಂಬುದು ಆರಂಭದ ಬಿಂದುವಷ್ಟೆ.ಎಲ್ಲವೂ ಹಿತ-ಮಿತ. ಅಹಿತವೂ ಕೂಡ ಅವರ ಮಾತಲ್ಲಿ ಹಿತವೇ!
ಭೀಷ್ಮರು ಹೆಣ್ಣಿನ ಕೈಹಿಡಿಯೋದಿಲ್ಲ ಎಂದು ವೀರ ಪ್ರತಿಜ್ಞೆ ಮಾಡಿದಂತೆ ತಾನು ಮುನ್ನುಡಿ ಬರೆಯೆನು ಎಂಬುದು ಗಿರಡ್ಡಿಯವರ ವೀರ ಪ್ರತಿಜ್ಞೆ. ಕೆಲವೊಮ್ಮೆ ಆ ಪ್ರತಿಜ್ಞೆ ಭಂಗವಾಗಿರುವುದೂ ಉಂಟು. ನಾನು ಅವರೊಂದಿಗೆ ಚೇಷ್ಟೆ ಮಾಡಿದ್ದಿದೆ: ನನ್ನ ಕಾವ್ಯ ಮೋಹಿನಿ ನಿಮಗೆ ಬಲೆ ಹಾಕಲು ಕಾದಿದ್ದಾಳೆ. ಈವತ್ತಲ್ಲ ನಾಳೆ ನೀವು ಪ್ರತಿಜ್ಞಾnಭಂಗ ಮಾಡಿ ಅವಳ ಕೈ ಹಿಡಿಯಲೇ ಬೇಕು. ಆದರೆ, ನನ್ನ ಅಪೇಕ್ಷೆ ಕೈಗೂಡಲೇ ಇಲ್ಲ. ಗಿರಡ್ಡಿ ಸುದ್ದಿ-ಸುಳಿವು ಕೊಡದೆ ಹೋಗಿಬಿಟ್ಟರು- ಅವರಿಗೆ ಪ್ರಿಯವಾದ ಚಾ ಕಪ್ಪು$ ಕೈಯಲ್ಲಿ ಹಿಡಿದುಕೊಂಡೇ! ಧಾರವಾಡದ ಆಕಾಶದಲ್ಲಿ ಮತ್ತೆ ಸ್ವಲ್ಪ ಕತ್ತಲು. ಅವರ ಆಪ್ತಗೆಳೆಯರ ಕೂಟದಲ್ಲೂ ಒಂದು ವಿಷಾದದ ಮಬ್ಬು.
ಗಿರಡ್ಡಿಯವರೊಂದಿಗೆ ಮಾಡಿದ ಒಂದು ರಾತ್ರಿಯ ಬಸ್ ಪ್ರಯಾಣ ಈಗ ನೆನಪಾಗುತ್ತಿದೆ. ಬೆಂಗಳೂರಿಂದ ಧಾರವಾಡಕ್ಕೆ ಪ್ರಯಾಣ. ಬಹಳ ಹೊತ್ತು ಇಬ್ಬರಿಗೂ ನಿದ್ದೆಯಿಲ್ಲ. ಏನೇನೋ ಮಾತು. ಒಬ್ಬರ ಮುಖ ಮತ್ತೂಬ್ಬರಿಗೆ ಕಾಣದ ಸಾದುಗತ್ತಲು. ಆವತ್ತು ಕೇವಲ ಸಾಹಿತ್ಯ ಕುರಿತು ನಾವು ಮಾತಾಡಲಿಲ್ಲ. ನಮ್ಮ ಸಂಸಾರ, ಮಕ್ಕಳು, ಕುಟುಂಬದ ಬಿಕ್ಕಟ್ಟುಗಳು ಎಲ್ಲವೂ ಆ ಇರುಳ ಮಾತಿನಲ್ಲಿ ಜಾಲಿಸಿಕೊಂಡವು. ಗಿರಡ್ಡಿ ಎಂಥ ಆದ್ರì ಹೃದಯಿ ಎನ್ನುವುದು ಅವತ್ತೇ ನನಗೆ ಗೊತ್ತಾದದ್ದು. ಯಾವುದಾದರೂ ಚೆನ್ನಾಗಿ ಕಾಣಬೇಕೆಂದರೆ ಸ್ವಲ್ಪ$ ಕತ್ತಲು ಬೇಕು. ನನ್ನ ಅನಾತ್ಮಕಥನ ಪ್ರಕಟವಾದ ದಿನಗಳು ಅವು. ಗಿರಡ್ಡಿ ವಾರದ ಹಿಂದೆಯಷ್ಟೇ ಅನಾತ್ಮಕಥನ ದ ಪ್ರಬಂಧಗಳನ್ನು ಓದಿದ್ದರು. “ನಿಮ್ಮ ಬರವಣಿಗೆ ಸೃಷ್ಟಿಸಿರುವುದು ಕಥಾ ಪಾತ್ರಗಳನ್ನಲ್ಲ, ವಾಸ್ತವ ಜಗತ್ತಿನ ಜೀವಂತ ವ್ಯಕ್ತಿಗಳನ್ನ’ ಎಂದರು. ಈ ಮಾತು ಹೇಳುವಾಗ ಅವರ ಮುಖದಲ್ಲಿ ಯಾವ ಭಾವದ ಗೆರೆ ಮೂಡಿರಬಹುದು ಎಂದು ನಾನು ಅವರ ಮುಖವನ್ನು ದಿಟ್ಟಿಸಿ ನೋಡಿದೆ. ಕತ್ತಲು ಎಲ್ಲವನ್ನೂ ಮರೆಮಾಡಿತ್ತು. ಇದಾದ ವಾರದಲ್ಲಿ ಗಿರಡಿªಯವರಿಂದ ಒಂದು ಕಾಗದ ಬಂತು: ಎಚ್ಚೆಸ್ವಿ… ನಿಮ್ಮ ಅನಾತ್ಮಕಥನ ಸಿಕ್ಕ ಕೂಡಲೇ ಓದಲು ಆರಂಭಿಸಿದೆ. ಮುಗಿಸುವವರೆಗೂ ಪುಸ್ತಕ ಕೆಳಗಿಡಗೊಡಲಿಲ್ಲ. ಬಹಳ ಆತ್ಮೀಯವಾದ ಬರಹಗಳು. ಬರಹದ ಹಿಂದಿನ ಭಾವಗಳ ವೈವಿಧ್ಯ ಕುತೂಹಲಕಾರಿಯಾಗಿದೆ. ಸುಂದರವಾದ ಮುಗುಳು ನಗೆಯ ಸಿಂಚನದಿಂದ ಬರಹಕ್ಕೆ ಲವಲವಿಕೆ ಬಂದಿದೆ. ಎಲ್ಲೂ ನಾಯಕನೊಬ್ಬ ದೊಡ್ಡ ಮನುಷ್ಯ ಎಂಬ ಭಾವನೆ ಬರದಂಥ ಸಂಯಮ ಕಾಣುತ್ತದೆ. ಮುಗುಳು ನಗೆಯ ಜೊತೆಗೆ ತೆಳುವಾದ ಕಾವ್ಯಮಯತೆಯಿಂದ ಬರವಣಿಗೆ ಹೃದ್ಯವಾಗಿದೆ. ಶ್ರೀಮತಿ ರಾಜಲಕ್ಷ್ಮೀ ಮತ್ತು ಡಾ. ಮೂರ್ತಿಯವರ ಬಗೆಗಿನ ಬರಹಗಳಂತೂ ಮನಸ್ಸನ್ನು ಕಲಕಿಬಿಡುತ್ತವೆ.
ನನಗೆ ವಿಶೇಷವಾಗಿ ಕಾಣುವ ಅಂಶ ಆ ದೀರ್ಘ ಪತ್ರದಲ್ಲಿ ಎಲ್ಲೂ ಗಿರಡ್ಡಿ ಒಂದಾದರೂ ಭಾವಸೂಚಕ ಚಿಹ್ನೆಯನ್ನು ಬಳಸದಿರುವುದು! ಅದು ಅವರ ವಿಮರ್ಶೆಯ ಮನಸ್ಸು ಹಿಡಿದ ಬಹುಕಾಲದ ಸಂಯಮದ ವ್ರತ. ಉದ್ರಿಕ್ತವಾಗದ ಸಮಾಧಾನದ ಮೆಚ್ಚುಗೆ ಅವರ ವಿಮಶಾì ಶೈಲಿಯ ಜೀವಜೀವಾಳ. ಅವರ ಮಾತಲ್ಲಾಗಲಿ, ಪತ್ರದಲ್ಲಾಗಲಿ ಕಾಣುವುದು ಅದೇ ಸಂಯಮದ ಆದ್ರìಮನದ ಅಭಿವ್ಯಕ್ತಿ. ಮಾತಿನ ಸಂಯಮ, ಮಾತಿನ ಗಾಂಭೀರ್ಯ, ಮಾತಿನ ಜೀವಶಕ್ತಿ, ಮಾತಿನ ನಿಚ್ಚಳ ಪಾರದರ್ಶಕತ್ವ ಉಳಿಸಿಕೊಳ್ಳಿ- ಎಂದು ಗಿರಡ್ಡಿ ಯಾವಾಗಲೂ ನಮಗೆ ತಗ್ಗಿದ ತಣ್ಣನೆ ದನಿಯಲ್ಲಿ ಪಿಸುಗುಡುವರೆಂಬ ಭ್ರಮೆ ಅವರನ್ನು ನೆನೆದಾಗಲೆಲ್ಲ ನನ್ನ ಮನಸ್ಸಲ್ಲಿ ಮೂಡುತ್ತದೆ.
ಎಚ್. ಎಸ್. ವೆಂಕಟೇಶಮೂರ್ತಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.