ಲೇಖಕಿ ವಾಣಿ ಎಂಬ ಚಿಕ್ಕಮ್ಮ


Team Udayavani, Mar 10, 2019, 12:30 AM IST

s-8.jpg

ಕನ್ನಡದ ಪ್ರಸಿದ್ಧ ಲೇಖಕಿ ತ್ರಿವೇಣಿಯವರ ಬಗ್ಗೆ ಎಲ್ಲರಿಗೂ ತಿಳಿದಿದೆ. ಅವರ ಬಂಧುವಾಗಿದ್ದ ವಾಣಿಯವರೂ ಪ್ರತಿಭಾವಂತ ಲೇಖಕಿಯಾಗಿದ್ದರು. ಅವರ ಕಥಾಸಂಕಲನಕ್ಕೆ ಮಾಸ್ತಿ ವೆಂಕಟೇಶ ಅಯ್ಯಂಗಾರರು ಮುನ್ನುಡಿ ಬರೆದಿದ್ದರು. ಅವರ ಕಾದಂಬರಿಗಳು ಚಲನಚಿತ್ರಗಳಾಗಿ ಜನಪ್ರಿಯವಾಗಿದ್ದವು. ಅಂದಹಾಗೆ, ವಾಣಿ ಈಗ ಇರುತ್ತಿದ್ದರೆ ಅವರಿಗೆ ನೂರೊಂದು ವರ್ಷ ತುಂಬುತ್ತಿತ್ತು !

ಆಗಿನ್ನೂ ನಾನು ಹೈಸ್ಕೂಲಿನಲ್ಲಿದ್ದೆ. ತ್ರಿವೇಣಿ ಮತ್ತು ವಾಣಿಯವರ ಕಾದಂಬರಿಗಳು ಒಂದರ ಹಿಂದೆ ಒಂದು ಬರುತ್ತಿರುವ ಕಾಲ ಅದು. ನಾವು ಪ್ರತಿಯೊಬ್ಬರೂ ಲೈಬ್ರೆರಿಯನ್‌ ಬಳಿ ಅವರ ಕಾದಂಬರಿಗಳು ಬಂದೊಡನೆ ಫ‌ಸ್ಟ್‌ ನಮಗೇ ಕೊಡಬೇಕೆಂದು ಹಟ ಹಿಡಿಯುತ್ತಿದ್ದೆವು! ಆತನೋ, ಅದು ಬಂದೊಡನೆ ಯಾರು ಮೊದಲು ಕಣ್ಣಿಗೆ ಬೀಳುತ್ತಾರೋ ಅವರನ್ನು ಕರೆದು ಕೊಡುವ ನ್ಯಾಯವಾದಿಯಾಗಿದ್ದ. ಹೀಗಾಗಿ ಒಮ್ಮೊಮ್ಮೆ ಹೊಸ ಹೊಸ ಪರಿಮಳದ ಪುಸ್ತಕ, ಒಮ್ಮೊಮ್ಮೆ ಘಲಘಲ ಜೀರ್ಣವಾಗಿದ್ದ, ಬುಕ್‌ಬೈಂಡೂ ಆಗಿ ಮುಗಿದ ಪುಸ್ತಕ ನಮಗೆ ದೊರೆಯುತ್ತಿತ್ತು. ಪುಸ್ತಕ ಸಿಕ್ಕ ನಮ್ಮ ಸಂಭ್ರಮವೆಂದರೆ! ಒಂದು ರೀತಿಯಲ್ಲಿ ನಮಗೆ ಕನ್ನಡ ಓದಿನ ರುಚಿ ಹತ್ತಿಸಿ ಆ ದಾರಿಯಲ್ಲಿ ನಿಧಾನವಾಗಿ ನಮ್ಮನ್ನು ಕ‌ನ್ನಡ ಸಾಹಿತ್ಯಕ್ಕೆ ಕರೆತಂದವರು ವಾಣಿ ಮತ್ತು ತ್ರಿವೇಣಿಯವರು, ಅನುಪಮಾ ನಿರಂಜನ, ಎಂ. ಕೆ. ಜಯಲಕ್ಷ್ಮೀ ಮುಂತಾದವರು; ನವೋದಯ ಚಳವಳಿಯ ಇಳಿಹೊತ್ತು. ಪ್ರಗತಿಶೀಲ ಚಳವಳಿಯ ಆರಂಭದ ಕಾಲದಲ್ಲಿ ಉದಯಿಸಿದವರು ಇವರು. ಮುಂದಣ ಮಾರ್ಗವನ್ನು ನಮಗೆ ಹದಗೊಳಿಸಿ ಕೊಟ್ಟವರು. ಅವರ ಋಣ ತೀರಿಸಲುಂಟೆ? ಪೂರ್ವಸೂರಿಗಳು ಅಂತ ಹೇಳುತ್ತಾರಲ್ಲ, ಬರೆಯುವ ನನ್ನ ಮಟ್ಟಿಗೆ ಇವರೆಲ್ಲ ನನಗೆ ಅಪೂರ್ವ ಪೂರ್ವಿಕರು. ಹಳೆಮೈಸೂರು ಪ್ರಾಂತ್ಯದ ಈ ಲೇಖಕಿಯರ ಕೃತಿಗಳನ್ನು ಓದುತ್ತ ಕತೆ ಬರೆಯುವ ಭಾಷೆ ಮೈಸೂರು ಕನ್ನಡದಲ್ಲೆ ಇರಬೇಕು ಅಂತ ನಾನು ಕಲ್ಪಿಸಿಕೊಂಡಿದ್ದೆ. ಓದಿಓದಿಯೇ ಅಭ್ಯಾಸ ಮಾಡಿಕೊಂಡ ಆ ಭಾಷೆಯಲ್ಲೇ ಮುಂದೆ ಮನೆಮಟ್ಟಿಗೆ ಎರಡು-ಮೂರು ಕತೆಗಳನ್ನೂ ಬರೆದೆ. ನನ್ನದೇ ಒಂದು ಭಾಷೆಯಿದೆ ಎಂಬ ತಿಳಿಸುವ ಮೆಟ್ಟಲಾಗಿ ಇದು ಕೆಲಸ ಮಾಡಿತು ಎಂಬುದನ್ನು ಮೊದಲಿಗೇ ಕೃತಜ್ಞತೆಯಿಂದ ನೆನೆಯುತ್ತಿದ್ದೇನೆ.   

ಸುಬ್ಬಮ್ಮ ವಾಣಿಯಾದರು !
ವಾಣಿ ಅವರ ಹೆಸರು ಬೇರೆ, ಇದು ಅವರ ಬರಹನಾಮ ಅಂತನೂ ನಮಗೆ ಆಗ ಗೊತ್ತಿರಲಿಲ್ಲ. ಅವರ ನಿಜ ನಾಮಧೇಯ ಬಿ. ಎನ್‌. ಸುಬ್ಬಮ್ಮ ಅಂತ ತಿಳಿದದ್ದು ಬಹಳ ಕಾಲದ ಮೇಲೆ. ಕೇಳಿದೊಡನೆ “ಸುಬ್ಬಮ್ಮ’ ಎಂಬ ಹೆಸರೇ ಮುದ್ದಾಗಿತ್ತು. ಒಂದು ರೀತಿಯಲ್ಲಿ ಅದು ಅವರ ಕಾಲವನ್ನು ಪ್ರತಿನಿಧಿಸುವ ಹೆಸರೂ ಆಗಿತ್ತು ಅಂತನಿಸಿತು. ವಾಣಿ ಎಂಬ ಹೆಸರನ್ನು ಅವರಿಗಿಟ್ಟದ್ದು ಕಥಾಂಜಲಿ ಪತ್ರಿಕೆಯ ಸಂಪಾದಕರಂತೆ. ವಾಣಿ ಅವರು ತಾರಾ ಎಂಬ ತಮ್ಮ ಪ್ರಥಮ ಕತೆಯನ್ನು ಆ ಪತ್ರಿಕೆಗೆ ಕಳಿಸಿಕೊಟ್ಟಿದ್ದರು. ಮಹಿಳೆಯ ಹೆಸರು ಕಂಡು ಪ್ರಕಟ ಮಾಡುವರೋ ಇಲ್ಲವೋ ಎಂಬ ಆತಂಕವಾಗಿ “ಶ್ರೀನಾಥ’ ಎಂಬ ಹೆಸರಿನಲ್ಲಿ ಕಳಿಸಿದರಂತೆ! (ಸುಮ್ಮನೊಂದು ಪ್ರಯೋಗದ ನೆನಪು: ನಳಿನೀ ದೇಶಪಾಂಡೆ; ಕವನ, ಲ್ಯಾಂಬ್ರಟಾ ವೆಸ್ಪಾ;- ತೇಜಸ್ವಿ) ಆದರೆ ಕಥಾಂಜಲಿಯ ಸಂಪಾದಕರು ಆ ಹೆಸರು ಬೇಡ, ಹೆಸರು ನಿಮ್ಮದೇ ಇರಲಿ, ಬೇಕಾದರೆ ಕಾವ್ಯನಾಮ ಇಟ್ಟುಕೊಳ್ಳಿ, ಅದು ವಾಣಿ ಅಂತಿರಲಿ ಎಂದು ನಾಮಕರಣ ಮಾಡಿದರಂತೆ. ಹೀಗೆ ಸುಬ್ಬಮ್ಮ ಇದ್ದವರು ಕಥಾಪ್ರಕಟಣೆಯ ಹೊತ್ತಲ್ಲಿ  ವಾಣಿಯಾದರು. ಮುಂದೆ ಸುಮಾರು ಆರು ಕಥಾಸಂಕಲನಗಳನ್ನು, ಹತ್ತೂಂಬತ್ತು  ಕಾದಂಬರಿಗಳನ್ನು, ತಾರಮ್ಮಯ್ಯ ಎಂಬ ಹರಟೆಯ ಸಂಗ್ರಹವನ್ನು, ವಾಣಿ ಎಂಬ ಹೆಸರಿನಲ್ಲೇ ರಚಿಸಿದರೆ  ಐನೂರಕ್ಕೂ ಮಿಕ್ಕಿದ ವಚನಗಳನ್ನು ಬರೆಯುವಾಗ ವಾಗೀಶ್ವರಿ ಎಂದು ಅಂಕಿತನಾಮ ಇರಿಸಿಕೊಂಡರು. 

ಶ್ರೀರಂಗಪಟ್ಟಣ ಅವರ ಹುಟ್ಟಿದೂರು. 1917ರ ಮೇ ಹನ್ನೆರಡನೆಯ ತಾರೀಕಿನಲ್ಲಿ ಸಾಂಪ್ರದಾಯಿಕವೂ ಸಾತ್ವಿಕವೂ ಆದ ಮನೆತನದಲ್ಲಿ ಜನಿಸಿದರು ವಾಣಿ. ಅವರ ತಂದೆ ರಾಜಸೇವಾಸಕ್ತ ಬಿರುದಾಂಕಿತ ಬೆಸಗರಹಳ್ಳಿ ನರಸಿಂಗರಾಯರು, ಶಾಸನ ಸಭೆಯ ಸದಸ್ಯರಾಗಿದ್ದವರು. ವೃತ್ತಿಯಲ್ಲಿ ವಕೀಲರು. ತಾಯಿ ಹಿರಿಯಕ್ಕಮ್ಮ. ಈ ದಂಪತಿಗಳ  ಕೊನೆಯ ಮಗಳು ನಮ್ಮ ಈ ಸುಬ್ಬಮ್ಮ. ಅಕ್ಕ ಮತ್ತು ಅಣ್ಣನ ನಡುವೆ ಬೆಳೆದ ಹುಡುಗಿಗೆ ಬಾಲ್ಯದಿಂದಲೂ ಓದುವುದೆಂದರೆ ಪಂಚಪ್ರಾಣ. ಓದೋದೂ ಓದೋದೂ ಎಷ್ಟೆಂದರೆ ತಿಂದ ತಿಂಡಿ ಉಂಡ ಊಟದ ನೆನಪಾಗದಷ್ಟು . ಸುಸಂಸ್ಕೃತ ಮನೆ, ಪುಸ್ತಕಗಳಿಗೆ ಕೊರತೆಯಿರಲಿಲ್ಲ. ಕನ್ನಡ ಇಂಗ್ಲಿಷ್‌ ಏನು ಸಿಕ್ಕಿತೋ ಅದನ್ನೆಲ್ಲವನ್ನೂ ಗಟಗಟನೆ ಓದುವುದೇ. ಆದರೆ, ಎಸೆಸ್ಸೆಲ್ಸಿ ಮುಗಿಯುತ್ತಲೂ ಶಾಲೆ ಖೈದು ಮಾಡಬೇಕಾಯ್ತು. ಇನ್ನೂ ತುಂಬ ಕಲಿಯುವ ಆಸೆ ತನಗೆ ಎಂದು ಹೇಳಲುಂಟೆ? ಕಾಲದ ಚಹರೆಯಂತೆ ಹದಿಮೂರು ವರ್ಷದ ಹುಡುಗಿ ಮದುವೆಯಾಗಿ ಪತಿಗೃಹಕ್ಕೆ ಕಾಲಿಟ್ಟಳು. ಪತಿ ಬಿ. ಎನ್‌. ನಂಜುಂಡಯ್ಯ ಅವರೂ ವಕೀಲರು. ಅವರು ಹೆಂಡತಿಯನ್ನು “ಮೇಡಂ’ ಅಂತ ಕರೆಯುತ್ತಿದ್ದರಂತೆ. ವಕೀಲರ ಮನೆಯಿಂದ ವಕೀಲರ ಮನೆ ಸೇರಿದ ಅವರ ಒಂದಲ್ಲ ಒಂದು ಕೃತಿಯಲ್ಲಿ ವಕೀಲರಿರುವುದೂ ಈ ಹಿನ್ನೆಲೆಯಲ್ಲಿಯೇ ಎನ್ನುತ್ತಾರೆ. ನಲ್ವತ್ತಕ್ಕೂ ಮಿಕ್ಕಿದ ಜನರಿದ್ದ ತುಂಬಿದ ಮನೆ. ಸದಾ ಬಂದು ಹೋಗುವ ನೆಂಟರಿಷ್ಟರು. ಎಳೆಯ ಹೆಗಲ ಮೇಲೆ ವಿವಿಧ ಜವಾಬ್ದಾರಿಗಳು. ಆದರೆ, ಅವುಗಳನ್ನು  ನಿಭಾಯಿಸಲು ಕಲಿತರು ವಾಣಿ. ಬಹಳ ಸೌಲಭ್ಯಗಳಿದ್ದ ಲೇಖಕಿಯಲ್ಲವಾಗಿ, ಮನೆಯೊಳಗಿನ ಬದುಕಿನಲ್ಲೇ ಅರಳಿದರು. ರಾತ್ರಿ ನಿದ್ದೆ ಬೀಳದಾಗ ಬರವಣಿಗೆಗೆ ಶರಣಾದರು. ತಾನು ಕಂಡ-ಕೇಳಿದ ಘಟನೆಗಳನ್ನು ಕಣ್ಣಿಗೆ ಕಟ್ಟಿದಂತೆ ಬರೆಯುವ ಲೇಖಕಿ ಅವರು. ಮಾನವೀಯತೆಗೆ ಹೆಚ್ಚು ಆದ್ಯತೆ ನೀಡಿದವರು. ಸಾತ್ವಿಕ ರೀತಿಯಲ್ಲಿಯೇ ಕಟುವಾಗಿ ಪ್ರತಿಭಟಿಸಲು ಯತ್ನಿಸಿದವರು. ಅಂಥ ದೊಡ್ಡ ಕುಟುಂಬದಲ್ಲಿದ್ದುಕೊಂಡು ಬರೆದಿರಿ ಹೇಗೆ? ಎಂದರೆ “ಬರೆಯುವ ಎಣೆಯಿಲ್ಲದ ಆಸೆ. ಅದು ಆಂತರ್ಯದಿಂದ ಜಲ ಉಕ್ಕುವ ಹಾಗೆ ಸಹಜವಾಗಿ ತನ್ನಲ್ಲಿತ್ತು’ ಎಂದವರು.  

ಅವರ ಅಪೂರ್ಣ ಎಂಬ ಕತೆ ನೆನಪಾಗುತ್ತಿದೆ. ಅಕ್ಕ ಮತ್ತು ಭಾವನೊಂದಿಗೆ ಅವರ ಮಕ್ಕಳನ್ನು ನೋಡಿಕೊಳ್ಳಲು ಒಂದು ವಿಶ್ರಾಂತಿಧಾಮಕ್ಕೆ ಬಂದ ತಂಗಿಯ ಕತೆಯದು. ಆರೋಗ್ಯ ಸುಧಾರಿ ಸಲು ಬಂದ ಭಾವ, ಅಕ್ಕನೊಂದಿಗೆ ಒಂದೆಡೆ ಹೋಗಿದ್ದರೆ, ಈಕೆ ಮಕ್ಕಳೊಂದಿಗೆ ಇನ್ನೊಂದು ಕಡೆ ಇದ್ದಾಳೆ. ಸುತ್ತಾಡಲೆಂದೇ ಅಲ್ಲಿಗೆ ಬಂದ ವ್ಯಕ್ತಿಯೊಬ್ಬ ಎರಡು-ಮೂರು ದಿನ ನಿತ್ಯವೂ ಆಕೆಯನ್ನು ಭೇಟಿಯಾಗುತ್ತಿರುತ್ತಾನೆ. ನಿಧಾನವಾಗಿ ತಂಗಿಯ ಮನಸ್ಸಿನಲ್ಲಿ ಏನೋ ಒಂದು ಮಧುರ ಭಾವ ಆವರಿಸುತ್ತದೆ. ಮುಂದೆ ಆಕೆಗೆ ಆತನ ಪತ್ನಿಯ ಭೇಟಿಯಾಗಿ, ಆತ ಒಬ್ಬ ಚಿತ್ರಕಾರನೆಂದು ತಿಳಿಯು ತ್ತದೆ. ಪತ್ನಿಯೊಂದಿಗೆ ಅವರ ಕೋಣೆಗೆ ಹೋದ ಅವಳು ಆತ ಅರೆ ಬರೆದಿಟ್ಟ ತನ್ನ ಚಿತ್ರವನ್ನೂ ನೋಡುತ್ತಾಳೆ. ಭಾವನೆಯ ಸೆಳೆತ ಅಲ್ಲಿಗೇ ಕಡಿಯುತ್ತದೆ. ಪೂರ್ಣವಾಗದೆ ಅಪೂರ್ಣತೆಯಲ್ಲೇ ಮುಕ್ತಾಯ ವಾಗುತ್ತದೆ- ಸ್ಥೂಲ ಕತೆ ಇದು. ಇದನ್ನೊಮ್ಮೆ ನನ್ನ ಗೆಳತಿಯೊಡನೆ, ನೋಡಲು ಸರಳವೆಂದು ಕಾಣುವ ಈ ವಸ್ತುವನ್ನು ವಾಣಿ ಆಕರ್ಷಕ ರೀತಿಯಲ್ಲಿ ಬರೆದಿರುವುದನ್ನು ಹೇಳುತ್ತಿದ್ದಾಗಲೇ ಆಕೆ ಅರೆಗಣ್ಣಾದಳು. “ತಡೆ, ತಡೆ. ಇದನ್ನು ಕೇಳುತ್ತಿದ್ದಂತೆ ನನಗಿನ್ನೇನೋ ನೆನಪಾಗುತ್ತಿದೆ’ ಎಂದು ತನ್ನ ಅನುಭವವೊಂದನ್ನು ಬಿಚ್ಚಿಟ್ಟಳು. 

ಬೆಂಗಳೂರಿನ ಹಿರಿಯ ಲೇಖಕಿ ಲಲಿತಮ್ಮ ಡಾ. ಚಂದ್ರಶೇಖರ್‌ ಅವರಿಗೆ ಬರೆದ ಪತ್ರದಲ್ಲಿ ವಾಣಿಯವರ ಕೈಬರಹ

ತನಗಿನ್ನೂ  ಮದುವೆಯಾಗಿರಲಿಲ್ಲ. ಯಾವುದೋ ಸೆಮಿನಾರಿಗೆಂದು ಹೈದರಾಬಾದಿಗೆ ಪಯಣಿಸುತ್ತಿದ್ದೆ. ರಿಸರ್ವೇಶನ್‌ ಸಿಗದೆ ಕುಳಿತೇ ಇದ್ದೆ. ಪಕ್ಕದ ಬರ್ತ್‌ನವನು, ತನ್ನ ಅವಸ್ಥೆ ನೋಡಿ ಅವನ ಬರ್ತ್‌ ಬಿಟ್ಟುಕೊಟ್ಟು ತಾನು ನೆಲದ ಮೇಲೆ ಪೇಪರ್‌ ಹಾಸಿಕೊಂಡು ಮಲಗಿದ. ಎಂತಹ ಸೌಜನ್ಯವೇ ಆತನದು! ಅದು ತನಗೆ ಇಷ್ಟವಾಯಿತು ಎಂಬುದು ಹೇಗೂ ಆಯಿತಲ್ಲ. ಮತ್ತೆ, ಆತ ಚೆನ್ನಾಗಿಯೂ ಇದ್ದ. ಯಾಕೋ ಆ ಪಯಣವಿಡೀ ಹಿಂದುಮುಂದಿಲ್ಲದ ಒಂದು ಮಧುರತೆಯಲ್ಲಿ ಕಳೆದು ಹೋಯ್ತು. ಆತ ಯಾರೋ ಎಲ್ಲಿನವನೋ ಯಾವ ಕಡೆ ಹೋದನೋ ಪುಣ್ಯಾತ್ಮ, ಈಗ ಎಲ್ಲಿರುವನೋ. ಆದರೆ ಈಗಲೂ, ಮದುವೆಯಾಗಿ ಎರಡು ಮಕ್ಕಳಾದ ಮೇಲೆಯೂ ಅವನನ್ನು ಮರೆತಿಲ್ಲ ನೋಡಿದೆಯ ಮನಸ್ಸು? ನೆನಪು ಹೇಗೆ ಇನ್ನೂ ಹಸಿಯಾಗಿ ಇದೆ! ಇದುವರೆಗೂ ಯಾರಿಗೂ ಹೇಳಿರಲಿಲ್ಲವೆ ! ನೀನು ಹೇಳಿದ ಕತೆ ಕೇಳುತ್ತಲೂ, ಮತ್ತೆ ನೆನಪಾಯ್ತು, ನಿನಗೇ ಮೊದಲಾಗಿ ಮುಚ್ಚಳ ತೆರೆಯುತಿದ್ದೇನೆ ಎಂದು ನಕ್ಕಳು. 

ಕತೆಯಿಂದ ಕತೆ ಹುಟ್ಟಿ ಪಯಣಿಸುವುದೋ, ಮುಂದರಿಯುವುದೋ  - ಹೀಗೇಯೇ ಇರಬಹುದೆ? ಕತೆಯೊಂದು ಸರಳವೋ ಕ್ಲಿಷ್ಟವೋ ನಮ್ಮೊಳಗಿನ ಏನಕ್ಕೋ ಕೊಂಡಿ ಹಾಕಿ ಬೆಳೆಯುವುದು ಹೀಗೆಯೂ ಇರಬಹುದೆ? ವಾಣಿಯವರ ಆ ಪುಟ್ಟ ಕತೆ ಇಲ್ಲಿ ಬೇರೆಯೆ ದಾರಿ ಹಿಡಿದಿತ್ತು. ಸರಳವಾಗಿಯೂ ಸುಲಭವೆಂದು ಕಾಣುವಂತೆೆಯೂ ಇರುವ ವಾಣಿಯವರ ಬರಹದಲ್ಲಿ ಬದುಕಿನ ನವಿರನ್ನು ಹಿಡಿದಿಡುವ ಗುಣವಿತ್ತು. ಆಕೆಯೂ ಹಾಗೆಯೇ ಇದ್ದರಂತೆ. ಸರಳವಾಗಿ, ನಿಷ್ಕಪಟಿಯಾಗಿ, ನಿರಹಂಕಾರಿಯಾಗಿ. ಪ್ರಸಿದ್ಧಿಯೆಂದರೆ ಹಿಂದೆ ಸರಿಯುವ ಸಂಕೋಚದವರಾಗಿ.  

ಅನುಪಮಾ- ವಾಣಿ
ಅನುಪಮಾ ನಿರಂಜನ ಅವರು ಮೈಸೂರಿನಲ್ಲಿ ಓದುತ್ತಿರು ವಾಗ ವಾಣಿಯವರ ಮನೆಗೆ ಆಗಾಗ ಹೋಗಿ ಬರುತ್ತಿದ್ದರು. ತಮ್ಮ ನೆನಪು ಸಿಹಿಕಹಿಯಲ್ಲಿ ಅವರು ವಾಣಿಯವರನ್ನು ಆಪ್ತವಾಗಿ ನೆನೆಸಿಕೊಂಡಿದ್ದಾರೆ. ಅವರು ಕಂಡಂತೆ- ವಾಣಿಯವರು ಮೈಸೂರಿನ ಖ್ಯಾತ ಕತೆಗಾತಿ. ಇವರಿಗೂ ನನಗೂ ಹಿಂದೆಯೇ ಪತ್ರವ್ಯವಹಾರ ಆರಂಭವಾಗಿತ್ತಲ್ಲ. ಅವರನ್ನು ನೋಡುವ ಕುತೂಹಲ ನನಗೆ. ಹೀಗಾಗಿ ಒಂದು ದಿನ ಮಧ್ಯಾಹ್ನ ಮಟಮಟ ಬಿಸಿಲಲ್ಲಿ ಚಾಮರಾಜಪುರದಲ್ಲಿದ್ದ ಅವರ ಮನೆಗೆ ಹೋದೆ. ಎತ್ತರದಲ್ಲಿದ್ದ ಮನೆ. ಕಟೆಕಟೆಯಿದ್ದ ವೆರಾಂಡಾ. ಸೊಂಪಾಗಿ ಬೆಳೆದ ಬಣ್ಣಬಣ್ಣದ ಕ್ರೋಟನ್‌ ಗಿಡಗಳು ಮನೆಗೆ ಶೋಭೆಯಾಗಿದ್ದವು. ಮೆಟ್ಟಲೇರಿ ನಾನು ಕರೆಗಂಟೆಯನ್ನೊತ್ತಿದೆ. ಕೆಲವೇ ನಿಮಿಷಗಳಲ್ಲಿ ವಾಣಿಯವರು ಅಲ್ಲಿಗೆ ಬಂದರು. ಎತ್ತರದ ನಿಲುವಿನ ಮಧ್ಯವಯಸ್ಕ ಮಹಿಳೆ. ಹಾಲು ಬಿಳುಪಿನ ಮೈಬಣ್ಣ. ಮುಖದಲ್ಲಿ ತಿಳಿನಗೆ ಹರಡಿದ್ದರೂ ಒಂದು ರೀತಿಯ ಗಾಂಭೀರ್ಯವಿತ್ತು. ಅವರನ್ನು ನೋಡಿದ ಕೂಡಲೇ ನನಗೆ ಗೌರವಭಾವ ಉಂಟಾಯಿತು. ಪ್ರಾಯಶಃ ವಾಣಿಯವರ ಬಗ್ಗೆ ಇಂಥ ವಿವರಣೆ ಸಿಗುವುದು ಅನುಪಮಾ ಅವರ ನೆನಪಿನ ಕೃತಿಯಲ್ಲಿ ಮಾತ್ರ. ವಾಣಿಯವರ ಮನೆಗೆ ಆಗಾಗ ಹೋಗಿ ಬರುತ್ತಿದ್ದರು ಅನುಪಮಾ. ಅವರ ಆಸೆಯಂತೆ ವಾಣಿಯವರು ಅಲ್ಲೇ ಆಚೆ ರಸ್ತೆಯಲ್ಲಿರುವ ತ್ರಿವೇಣಿ ಯವರ ಮನೆಗೂ ಅವರನ್ನು ಕರಕೊಂಡು ಹೋದರಂತೆ. ಹೀಗೆ ಆ ಇಬ್ಬರು ಲೇಖಕಿಯರೊಡನೆಯೂ ಅನುಪಮಾರಿಗೆ ಒಡನಾಟ ಬೆಳೆಯಿತು. ಅದಾಗಲೇ ವಾಣಿಯವರಿಗೆ ನಿರಂಜನರ ಪರಿಚಯ ಚೆನ್ನಾಗಿಯೇ ಇತ್ತು. ನಿರಂಜನರು ಮೈಸೂರಿಗೆ ಭೇಟಿ ಕೊಟ್ಟಾಗ ವಾಣಿಯವರ ಮನೆಗೂ ಬಂದು 
ಹೋಗುತ್ತಿದ್ದರು. ಮುಂದೆ ಅನುಪಮಾ ಮತ್ತು ನಿರಂಜನರ ಮದುವೆ ನಿರಾತಂಕ ವಾಗಿ ನಡೆಯುಲ್ಲಿಯೂ ವಾಣಿಯವರ ಪಾತ್ರ ಹಿರಿದಾಗಿತ್ತು- ಎನ್ನುತ್ತಾರೆ. 

ಅವರ ಕೃತಿಗಳ ಕುರಿತು ಅವುಗಳಲ್ಲಿ ಬೌದ್ಧಿಕತೆಗೆ ಒತ್ತು ಕಡಿಮೆ, ಇನ್ನೂ ಹಳೆಯ ಜಾಡಿನಲ್ಲೇ ಮತ್ತು ಜಾಡಿಯಲ್ಲೇ ತಂಗುವ ಕತೆಗಳು ಅವು ಎಂದವರೂ ಇದ್ದಾರೆ. ಆದರೆ, ಅವರು ಮೂಲತಃ ಬೌದ್ಧಿಕತೆಯನ್ನು ಹೃದಯದ ಬಾಗಿಲ ಮೂಲಕ ಅರ್ಥಮಾಡಿಕೊಂಡವರು. ಹೆಣ್ಣುಮಕ್ಕಳ ಮುಗ್ಧತೆಯ ಹಾಗೂ ಅಸಹಾಯಕತೆಯ ಮೇಲೆ ಬೀಳುವ ಬರೆಗಳನ್ನು ಹತ್ತಿರದಿಂದ ಕಂಡ ಲೇಖಕಿ. ಅಂದಿನ ಸಾಮಾಜಿಕ ಸ್ಥಿತಿಗತಿಯಲ್ಲಿ ವಿಷಮ ವಿವಾಹಗಳು, ಗಂಡಂದಿರನ್ನು ಕಳಕೊಂಡ ಮಹಿಳೆಯರು, ಪರಿತ್ಯಕ್ತರು, ಭಗ್ನ ಪ್ರಣಯಿಗಳು… ಹೀಗೆ ನಾನಾ ಪಾತ್ರಗಳನ್ನು ಕಣ್ಣಾರೆ ಕಂಡು ಮನ ಮಿಡಿದವರು. ಎಂತಲೇ ಅವರು ಸೃಷ್ಟಿಸಿದ ಮಹಿಳಾ ಪಾತ್ರಗಳೆಲ್ಲ ಬದುಕಿನ ನೇರ ಸ್ಪರ್ಶದಿಂದ ಕಡೆದಂಥವು. ವಿದ್ಯೆ ಕಡಿಮೆ ಇದ್ದ ಆ ದಿನಗಳಲ್ಲಿ ಮನೆ ಬಿಟ್ಟು ಹೊರಬಂದರೆಂದರೆ ಅಂಥ ಮಹಿಳೆಯರ ಪಡಿಪಾಟಲು ಏನೆಂದು ಅವರಿಗೆ ತಿಳಿದಿತ್ತು. 

ಆಕೆ ಒಂದೋ ಬೀದಿಗೆ ಬೀಳಬೇಕು, ಇಲ್ಲ ಇನ್ನೊಬ್ಬರ ಮನೆ ಚಾಕರಿಗೆ ಬೀಳಬೇಕು. ಎಂತಲೇ ಅವರು ಸಾರಾಸಗಟಾಗಿ ಬದುಕನ್ನು ತಳ್ಳಿ ಹೊರಬರುವ ಪಾತ್ರಗಳಿಗಿಂತ ಇರುವ ಬದುಕನ್ನು ನೇರ್ಪುಗೊಳಿಸಿ ಅಲ್ಲಲ್ಲೇ ನಿಭಾಯಿಸುವ ಅನೇಕ ಪಾತ್ರಗಳನ್ನು ಕಡೆದರು. ಹೊಂದಾಣಿಕೆಗಾಗಿ ಅವಳಿಗೆ ನಿಭಾವಣೆರೂಪೀ ಹೋರಾಟದ ಅಗತ್ಯ ಎಷ್ಟೆಂಬ ಅರಿವಿತ್ತು ಅವರಿಗೆ. ಅದು ಅವಳ ಹೋರಾಟ ಹೊರತು ಸೋಲಲ್ಲ. ಅವಳ ಎದೆಗಾರಿಕೆ ಮತ್ತು ಜಾಣ್ಮೆ ಹೊರತು ದೈನ್ಯವಲ್ಲ ಎಂದು ಅವರ ಮನಸ್ಸು ಹೇಳುತಿತ್ತು. ಅವರ ಎರಡು ಕನಸು, ಶುಭಮಂಗಳ, ಹೊಸಬೆಳಕು ಜನಪ್ರಿಯ ಕಾದಂಬರಿಗಳಷ್ಟೇ ಅಲ್ಲ, ಮುಂದೆ ಯಶಸ್ವೀ ಚಲನಚಿತ್ರಗಳೂ ಆದವು. ಅವಳ ಭಾಗ್ಯ ಆಕೆಯ ಇನ್ನೊಂದು ಉಲ್ಲೇಖನೀಯ ಕಾದಂಬರಿ. ವಾಣಿಯವರ ಯಾವುದೇ ಕೃತಿಯಲ್ಲಿ ಇರುವುದು ಬದುಕು ದೊಡ್ಡದು ಎಂಬ ವಿವೇಕ. ಹೆಣ್ಣುಗಂಡಿನ ಸಮಾನತೆಯ ಕುರಿತು ಸಾಮರಸ್ಯದ ನಿಲುವು. ಯಾವ ಆಡಂಬರವಿಲ್ಲದ ಸುಂದರ ಕನ್ನಡದಿಂದ ಕೂಡಿದ ಮುದಮುದದ ಶೈಲಿ. 

ಜೀವನದಲ್ಲಿ ಮಾಗಿದ ಲೇಖಕಿ ವಾಣಿ. ತ್ರಿವೇಣಿಯವರ ಖಾಸಾ ಚಿಕ್ಕಮ್ಮ. ಬಿ. ಎಂ. ಶ್ರೀಯವರ ಹತ್ತಿರದ ಸಂಬಂಧಿ. ಆಗಲೇ ಹೇಳಿದಂತೆ ಸುರಕ್ಷಿತ-ಸುಶಿಕ್ಷಿತ ಮನೆಯಿಂದ ಬಂದವರು. ಹೆಣ್ಣು ಬರೆಯುವುದಿರಲಿ, ಓದುತ್ತ ಕುಳಿತುಕೊಳ್ಳುವ ದೃಶ್ಯವೇ ವಿಚಿತ್ರ ಮತ್ತು ಬೇಜವಾಬ್ದಾರಿ ಕೃತ್ಯ ಎಂಬಂತೆ ಕಾಣುತ್ತಿದ್ದ ಕಾಲದಲ್ಲಿ ವಿದ್ಯೆ, ಸಾಹಿತ್ಯ, ವಿಚಾರ ವಿಮರ್ಶೆ ಇತ್ಯಾದಿ ಇದ್ದ ವಿಶಿಷ್ಟ ವಾತಾವರಣದಲ್ಲಿ ಕಣ್ತೆರೆದ ಪುಣ್ಯಶಾಲಿ. ಆದರೆ ಅಷ್ಟರಲ್ಲೇ ಅವರು ಕಳೆದುಹೋಗಲಿಲ್ಲ. ಬದಲು ಪ್ರಭಾವಳಿಯ ನಡುವೆಯೂ ತನ್ನದೇ ಸ್ವಂತ ಚಿಂತನೆಯ ಕೃತಿ ರಚಿಸಿದರು. ಮಧ್ಯಮವರ್ಗದ ಕುಟುಂಬಗಳ ಎಲ್ಲ ಒಳ ಬಿಕ್ಕಟ್ಟುಗಳನ್ನೂ ಅನುಭವದಿಂದ ಗ್ರಹಿಸಿದವರು ಅವರು. ಅಂದಿನ ಸಾಮಾನ್ಯ ಸಮಾಜದೆದುರು ಹೆಣ್ಣು ಅಕ್ಷರವನ್ನು ಬರೆಯಲು ಬಳಸುವುದೂ ಒಂದು ದೊಡ್ಡ ಪ್ರತಿಭಟನೆಯ ಕ್ರಿಯೆಯಷ್ಟೆ? ಅಂಥಲ್ಲಿ, ತನಗೆ ಹೇಳಬೇಕೆನಿಸಿದ್ದನ್ನು ಯಾವ ಪ್ರಭಾವಕ್ಕೂ ಒಳಗಾಗದೆ, ಪ್ರಾಮಾಣಿಕವಾಗಿ ಕಥಿಸಿ, ಅದಕ್ಕೂ ಮುಂದಣ ಹೆಜ್ಜೆಗೆ ನಮ್ಮನ್ನು ಅನುಗೊಳಿಸಿದವರು ವಾಣಿ. ಆ ರೀತಿಯಲ್ಲಿ ನಾವು ಲೇಖಕಿಯರಿಗೆಲ್ಲ ಅವರು ಚಿಕ್ಕಮ್ಮನೇ. 

ತಿದ್ದಿ ಬರೆದವರಲ್ಲ !
ಕನ್ನಡ ಲೇಖಕಿಯರಲ್ಲಿ ಎಂ. ಕೆ. ಇಂದಿರಾಗೆ ಹೆಚ್ಚು ಸನಿಹವೆನಿಸುವ ವಾಣಿಯವರ ಕೃತಿಗಳಲ್ಲಿ ಕಾಣುವುದು ಮೈಸೂರಿನ ಘಮ. ಮೈಸೂರಿನ ಮನೆಗಳ ಗೃಹಕೃತ್ಯ, ಅಲ್ಲಿನ ಸಾಂಸ್ಕೃತಿಕ ಆವರಣ, ಮಾತುಕತೆ, ನಿತ್ಯದ ಕಷ್ಟಸುಖ ಮತ್ತು ಅಡುಗೆಮನೆ. ಬಿಸಿಬೇಳೆ ಹುಳಿಯನ್ನವನ್ನು ಸಾಹಿತ್ಯದಲ್ಲಿ ತಂದವರೇ ವಾಣಿ ಮತ್ತು ತ್ರಿವೇಣಿಯವರಲ್ಲವೆ? ಎಂ. ಕೆ. ಇಂದಿರಾ ಅವರು ಎದುರಿಟ್ಟ ಮೃದುವಾದ ಮೆಂತೆ ದೋಸೆ ಮತ್ತು ಅದರ ಮೇಲೆ ನಿಧಾನವಾಗಿ ಹೊಳಪಾಗಿ ಕರಗಿ ನೀರಾಗಿ (ಓದುಗರ ಬಾಯಲ್ಲಿ ನೀರೂರಿಸುವ) ಹರಿವ ಹಸನಾದ  ಹಸುವಿನ ಬೆಣ್ಣೆಯಂತೆ? ಅದುವರೆಗೆ ಮದ್ರಾಸು ಪ್ರಾಂತ್ಯಕ್ಕೆ ಸೇರಿದ ನಮ್ಮ ಜಿಲ್ಲೆಯಂತೂ ಹಳೇಮೈಸೂರಿನ ಆ ತಿಂಡಿಗಳನ್ನು ಸವಿಯುವುದಿರಲಿ, ಅವುಗಳ ಹೆಸರನ್ನೇ ಕೇಳಿರಲಿಲ್ಲ. ಯಾವಾಗ ಆಧುನಿಕ ಕನ್ನಡ ಸಾಹಿತ್ಯ ಈ ಲೇಖಕಿಯರಿಂದಾಗಿ ಅಡುಗೆಮನೆ ಪ್ರವೇಶಿಸಿತೋ, ಮಹಿಳೆಯರ ಸಾಹಿತ್ಯ “ಅಡುಗೆಮನೆ ಸಾಹಿತ್ಯ’ ಎಂಬ ಹೆಸರು ಪಡೆಯಿತು. ಬಿಸಿಬೇಳೆ ಹುಳಿಯನ್ನ, ಮೈಸೂರ್‌ ಪಾಕ್‌ ಮುಂತಾಗಿ ಅಡುಗೆಮನೆಯಲ್ಲಿ ಏನೇನು ತಯಾರು ಆಗುತ್ತೋ ಎಲ್ಲವನ್ನೂ ಮೆಲ್ಲುತ್ತಲೇ ಇಂಥ ಮಾತನ್ನು ಆಡಲು ಆ “ಯಜಮಾನರು’ಗಳಿಗೆ ದಾರ್ಷ್ಟ್ಯವಾದರೂ ಎಲ್ಲಿಂದ ಬಂತೋ! ಅಂಥ ಮೂದಲಿಕೆಗೂ ವಾಣಿ, “ಯಶಸ್ಸನ್ನು ಸಮಾಜ ಸಹಿಸುವುದಿಲ್ಲ. ಈಗ ನಾವು ಸ್ತ್ರೀಯರು ಹೆಚ್ಚು ಹೆಚ್ಚು ಬರೀತಿರೋದ್ರಿಂದ ಸ್ವಲ್ಪ$ದಿನ ಈ ಥರ ಮೂದಲಿಕೆ ಎದುರಿಸಲೇ ಬೇಕಾಗುತ್ತೆ. ಒಂದು ದಿನ ಶ್ರೇಷ್ಠ ಸಾಹಿತ್ಯ ಇವರಿಂದಲೇ ಮೂಡಿಬಂದಿದೆ ಎಂದು ತೆಪ್ಪಗಾಗ್ತಾರೆ’ ಎಂದು ನಿರಾಳವಾಗಿ ನುಡಿದರಂತೆ. 

ವಿಶೇಷವೆಂದರೆ ವಾಣಿಯವರು ಒಮ್ಮೆ ಬರೆದದ್ದೇ ಅಂತಿಮ ಪ್ರತಿ. ಮತ್ತೆ ತಿದ್ದುವವರಲ್ಲ. ಅನುಪಮಾ ಕೂಡ ಹಾಗೆಯೇ, ಅವರ ಮೊದಲ ಪ್ರತಿಯೇ ಕೊನೆಯ ಪ್ರತಿಯೆಂದು ಕೇಳಿರುವೆ. ತಮ್ಮ ಎಲ್ಲೋ ಕೆಲವೇ ಕೆಲ ಬಿಡುವಿನ ಕ್ಷಣಗಳ ಸೀಳಿನಲ್ಲಿ ಬರವಣಿಗೆಗೆ ಕುಳಿತವರಷ್ಟೆ ಈ ಇಬ್ಬರು ಲೇಖಕಿಯರೂ.
ವಾಣಿಯವರ ಬಳಿ “ನೀವು ಆತ್ಮಕತೆ ಬರೆಯಲಿಲ್ಲ ಯಾಕೆ’ ಎಂದು ಕೇಳಿದರೆ “ಎಲ್ಲ ವಿಷಯಗಳನ್ನೂ ಯಾಕೆ ಹೇಳಿಕೋ ಬೇಕು? ಯಾರಿಗಾಗಿ? ಕೆಲಸಂಗತಿಗಳನ್ನು ಹೇಳಲು ಸಾಧ್ಯವೂ ಇಲ್ಲ. ಹೇಳುತ್ತ ಹೇಳುತ್ತ ನನ್ನಿಂದ ಯಾರಿಗಾದರೂ ನೋವಾಗಿಬಿಟ್ಟರೆ ಸಹಿಸಲೂ ಸಾಧ್ಯವಿಲ್ಲ’ ಎಂದರಂತೆ. ಇಷ್ಟಾಗಿಯೂ ತನ್ನ ಜೀವನಕ್ಕೆ ಸಂಬಂಧಿಸಿದ ಕೆಲವಿಚಾರಗಳನ್ನು ತನ್ನ ಕೃತಿಯಲ್ಲಿ ಹೇಳಿಕೊಂಡಿದ್ದೇನೆ ಅಂತಲೂ. ಎಲ್ಲವನ್ನೂ ಬರೆದಿಡುವ ಶಿಸ್ತಿನ ಈ ಲೇಖಕಿ ಕೃತಿ ರಚನೆಯ ಆರಂಭದ ದಿನ ಮುಗಿದ ದಿನ, ಅಚ್ಚಾದ ವರ್ಷ, ಸಿಕ್ಕಿದ ಸಂಭಾವನೆ, ಪುಸ್ತಕಕ್ಕೆ ಬಳಸಿದ ಕಾಗದದ ಗುಣ ಎಲ್ಲವನ್ನೂ ಬರೆದಿಡುತ್ತಿದ್ದರಂತೆ. 

ಮೈಸೂರು ವಿ. ವಿ. ಯ ಕನ್ನಡ ಅಧ್ಯಯನ ಸಂಸ್ಥೆಯ ದಶಮಾನೋತ್ಸವ ಸಮಾರಂಭದಲ್ಲಿ ಹಾಮಾನಾ ಅವರು ಕನ್ನಡ ಲೇಖಕಿಯರ ಸಮ್ಮೇಳನ ಸಂಘಟಿಸಿದ್ದರು. ಅದರಲ್ಲಿ ವಾಣಿಯವರು ಬಹಳ ಉತ್ಸಾಹದಿಂದ ಪಾಲ್ಗೊಂಡಿದ್ದರಂತೆ. ಆ ಸಮ್ಮೇಳನದಲ್ಲಿ ಸ್ವಯಂಸೇವಕಿಯಾಗಿ ದುಡಿದ ಖ್ಯಾತ ವಿಮರ್ಶಕಿ ಡಾ. ಎಚ್‌. ಎಸ್‌. ಸುಜಾತಾ ಅವರಿಗೆ ಅಂದು ವಾಣಿಯವರ ಪರಿಚಯವಾಗಿ ಮುಂದೆ ಅವರ ನಿಕಟವರ್ತಿಯಾದರು. 1975ರ ಸೆ. 30ರಂದು ಮಂಗಳೂರಿನಲ್ಲಿ ಎಸ್‌. ವಿ. ಪರಮೇಶ್ವರ ಭಟ್ಟ ಅವರ‌ ನೇತೃತ್ವದಲ್ಲಿ  ನಡೆದ ವಾಣಿಯವರ ಸನ್ಮಾನ ಸಮಾರಂಭಕ್ಕೆ ಅವರ ಜೊತೆಗೆ ಪತಿ ನಂಜುಂಡಯ್ಯನವರೂ ಬಂದಿದ್ದರಂತೆ. ದಂಪತಿಗಳನ್ನು ಕೂಡಿಸಿ ಸನ್ಮಾನ  ಮಾಡಿದರಂತೆ. ಅಂದು ಅಭಿನಂದನಾ ಭಾಷಣ ಮಾಡಿದ ಸುಜಾತಾ ಅವರ ನೆನಪಿನಲ್ಲಿ ಇದೆಲ್ಲವೂ ಸೇರಿವೆ.  

ಅದೇ ಮುಂದಿನ ವರ್ಷ, 1976; ಪತಿ ನಂಜುಂಡಯ್ಯನವರು ರಸ್ತೆ ಅಪಘಾತದಲ್ಲಿ ನಿಧನರಾದರು. ಮುಂದೆ ಕೆನಡಾದಲ್ಲಿದ್ದ ಒಬ್ಬ ಮಗ ಅಲ್ಲಿಯೇ ತೀರಿಕೊಂಡ ಸುದ್ದಿ. ಆಘಾತದ ಮೇಲೆ ಆಘಾತದಲ್ಲಿ ವಾಣಿ ನಲುಗಿದರು. ಆದರೂ ಲೇಖನ-ಕತೆ ಕೇಳಿದವರಿಗೆ ಆಗದು ಎನ್ನದೆ ಬರೆಯುತ್ತಿದ್ದರಂತೆ. ಅದು ಅವರ ಮನಸ್ಸಿನ ಮೂಲ ನೆಲೆಸೆಲೆೆಯೇ ಆಗಿತ್ತಲ್ಲವೆ, ಮನಸ್ಸಿನ ಸಮಸ್ಥಿತಿಯನ್ನು ಕಾಪಾಡಿಕೊಳ್ಳುವ ಉಪಾಯವೂ. ಏನಂದರೂ ಬದುಕಿನ ಆಘಾತಗಳಿಂದ ಮತ್ತು ಚಿಂತೆಗಳಿಂದ ಒಳಗೊಳಗೇ ಕುಸಿಯುತ್ತ ಹೋದರು ವಾಣಿ. ಅಂತಿಮವಾಗಿ ಪಕ್ಷಾಘಾತಕ್ಕೆ ಒಳಗಾಗಿ, ಚಿಕಿತ್ಸೆಗೆ ಸ್ಪಂದಿಸದೆ 1988 ಫೆಬ್ರವರಿ 14ರಂದು ಕಣ್ಮುಚ್ಚಿದರು. 

ಈಗಿದ್ದಿದ್ದರೆ ನೂರೊಂದು ವರ್ಷ ತುಂಬುತ್ತಿದ್ದ ಈ ಮನೆಯೊಳಗಿನ ಲೇಖಕಿ ಭೌತಿಕವಾಗಿ ನಮ್ಮೊಂದಿಗಿಲ್ಲ, ನಿಜ. ಆದರೆ ಅವರ ಕೃತಿಗಳು ಕನ್ನಡ ಸಾಹಿತ್ಯದ ಚಿರಂತನ ಪ್ರೀತಿಯ ಕೃತಿಗಳಾಗಿ ಉಳಿದಿವೆ. ಅವುಗಳ ವೈಶಿಷ್ಟ್ಯವೇ ಶತಮಾನ ಕಳೆದರೂ ಅವುಗಳನ್ನು ಓದಿಸುತ್ತವೆ. 

ವೈದೇಹಿ

ಟಾಪ್ ನ್ಯೂಸ್

Turkey: ಟೇಕ್‌ ಆಫ್‌ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು

Turkey: ಟೇಕ್‌ ಆಫ್‌ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು

87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!

87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!

ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ

ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ

Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ

Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ

9

Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು

CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್‌ ರನ್ ಆರಂಭಿಸಿದ ಸಿ.ಟಿ.ರವಿ

CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್‌ ರನ್ ಆರಂಭಿಸಿದ ಸಿ.ಟಿ.ರವಿ

Minister Priyank Kharge stays away from Jayadeva Hospital inauguration ceremony

Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೊಡುವುದರಿಂದ ಕೊರತೆಯಾಗದು!

ಕೊಡುವುದರಿಂದ ಕೊರತೆಯಾಗದು!

Stories: ಹಾಡಿನಂಥ ಕಾಡುವಂಥ ಕಥೆಗಳು

Stories: ಹಾಡಿನಂಥ ಕಾಡುವಂಥ ಕಥೆಗಳು

256

ಶಾಲ್ಮಲಾ ನಮ್ಮ ಶಾಲ್ಮಲಾ!

Life Lesson: ಬುದ್ಧ ಹೇಳಿದ ಜೀವನ ಪಾಠ ಬಿಟ್ಟುಕೊಡುವ ಕಲೆ

Life Lesson: ಬುದ್ಧ ಹೇಳಿದ ಜೀವನ ಪಾಠ ಬಿಟ್ಟುಕೊಡುವ ಕಲೆ

‌Second hand book stores: ಸೆಕೆಂಡ್‌ ಹ್ಯಾಂಡ್‌ಗೆ ಶೇಕ್‌ ಹ್ಯಾಂಡ್‌

‌Second hand book stores: ಸೆಕೆಂಡ್‌ ಹ್ಯಾಂಡ್‌ಗೆ ಶೇಕ್‌ ಹ್ಯಾಂಡ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Turkey: ಟೇಕ್‌ ಆಫ್‌ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು

Turkey: ಟೇಕ್‌ ಆಫ್‌ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು

87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!

87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!

6

Mangaluru: ಕ್ರಿಸ್ಮಸ್‌ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು

5

Health: ಶೀಘ್ರ ಕ್ಯಾನ್ಸರ್‌ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?

ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ

ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.