ಹೆಣ್ಣಿಗೆ ಅವಕಾಶದ ಹಾದಿ ಕ್ಲಿಷ್ಟಕರ !
Team Udayavani, Mar 8, 2019, 12:30 AM IST
ನೃತ್ಯ, ರಂಗಭೂಮಿ ಎರಡೂ ಅನಿವಾರ್ಯವಾಗಿ ನನ್ನ ಆಯ್ಕೆಯ ಕ್ಷೇತ್ರವಾಗಿರುವುದು ಒಂದು ಆಕಸ್ಮಿಕ ಅನಿಸಿದರೂ ಸಂತಸವನ್ನೇ ನೀಡಿದೆ. ಇಂದಿಗೂ ಕಲಾಮಾಧ್ಯಮವನ್ನು ಆರಿಸಿಕೊಂಡು ಒಂದು ಗ್ರಾಮೀಣ ಪ್ರದೇಶದಲ್ಲಿರುವುದು ಹೆಣ್ಣಿಗೆ ಸಲೀಸಾಗಿಲ್ಲ. ನಾನೂ ಅಂತಹ ಗ್ರಾಮೀಣ ಪ್ರದೇಶದಿಂದಲೇ ಬಂದಿರುವುದರಿಂದ ಈ ಕಲಾಪ್ರಕಾರಗಳನ್ನು ಆಯ್ಕೆ ಮಾಡಿಕೊಳ್ಳುವಲ್ಲಿ ಗೊಂದಲದೊಂದಿಗೆ ಭಯವೇ ಹೆಚ್ಚಾಗಿತ್ತು.
ಒಂದು ನಿರ್ದಿಷ್ಟ ಕಾಲಾವಧಿಯ ಪರಿಮಿತಿ ನಮಗೆ ಇಲ್ಲದೇ ಇರುವುದರಿಂದ ಮನೆಯ ಇತರ ಸದಸ್ಯರಿಗೆ ಅದನ್ನು ಅರ್ಥಮಾಡಿಸುವುದು ನಮ್ಮ ಕೆಲಸದ ಒಂದು ಭಾಗ. ಇನ್ನು ಸಾಮಾಜಿಕ ಬದುಕು ಅದೂ ಹೆಣ್ಣು ಅನ್ನುವಾಗ ನೋಡುವ ದೃಷ್ಟಿ ಬದಲಾಗಿಲ್ಲ ಅನ್ನೋದು ಸತ್ಯವೇ. ಸಿಕ್ಕಿದ ಅವಕಾಶಗಳನ್ನು ಬಳಸಿಕೊಳ್ಳುವುದು, ಅವಕಾಶಗಳನ್ನು ದಕ್ಕಿಸಿಕೊಳ್ಳುವುದು, ಅಥವಾ ಹೊಸ ಅವಕಾಶಗಳನ್ನು ಸೃಷ್ಟಿಸಿಕೊಳ್ಳುವುದು ನನ್ನ ಅಭಿವ್ಯಕ್ತಿಗೆ ನನ್ನ ಮುಂದಿರುವ ಸವಾಲು. ಅದನ್ನೆಲ್ಲ ಎದುರಿಸಲು ನಾನು ಕಂಡುಕೊಂಡಿರುವ ಮಾರ್ಗ ಅಂದರೆ ಹೊಸ ಸಾಧ್ಯತೆಗಳ ಹುಡುಕಾಟದಲ್ಲಿ ತೊಡಗಿಕೊಂಡಿರುವುದು. ಹೊಸತನದ ಹುಡುಕಾಟ ಅಂದರೆ ಅನವರತ ಶೋಧನೆ. ಅಲ್ಲಿ ಏಕಾಗ್ರತೆ, ತನ್ಮಯತೆ ಎಲ್ಲ ಬೇಕು. ಮನೆಗೆಲಸಗಳು, ಉದ್ಯೋಗದ ನಡುವೆ ಹೊಸತೇನನ್ನೋ ಕೊಡಬೇಕೆಂಬ ತುಡಿತಕ್ಕೆ ಒಪ್ಪಿಸಿಕೊಳ್ಳುವ ಸವಾಲುಗಳ ಮೆಟ್ಟಿಲನ್ನು ಒಂದೊಂದಾಗಿ ಏರುತ್ತಿದ್ದೇನೆ. ಏರಬೇಕಿರುವ ಮಜಲುಗಳು ಇನ್ನೂ ಬಹಳ ಇವೆ. ನಿರ್ದಿಷ್ಟ ಗುರಿ ನನ್ನ ಮುಂದಿದೆ. ದಾರಿಯೂ ಸ್ಪಷ್ಟವಾಗಿದೆ. ಸಾಗುವುದಕ್ಕೆ ಅವಕಾಶಗಳ ಚೈತನ್ಯ ಬೇಕಾಗಿದೆ. ಈ ಅವಕಾಶದ ಹಾದಿ ಹೆಣ್ಣಿಗೆ ಸ್ವಲ್ಪ ಕ್ಲಿಷ್ಟಕರ. ಆದರೆ, ನನ್ನ ಪರಿಶ್ರಮ, ಕೊಡುಗೆಗಳೂ ಆ ಅವಕಾಶದ ಹೆಬ್ಟಾಗಿಲನ್ನು ತೆರೆಸುತ್ತ ಬಂದಿವೆ. ಮುಂದೆಯೂ ಬರಬಲ್ಲುದು ಎನ್ನುವ ವಿಶ್ವಾಸ ನನಗಿದೆ. ಸಂಘಟಕರ, ಪ್ರೇಕ್ಷಕರ ಪ್ರೋತ್ಸಾಹವೇ ಕಲಾವಿದರಿಗೆ ಧೀಶಕ್ತಿ ತಾನೇ?
ನನ್ನ ಕೆಲಸ ನಾನು ಮಾಡುತ್ತೇನೆ, ಯೋಗ-ಯೋಗ್ಯತೆ ಎಲ್ಲವೂ ಈ ಕೆಲಸವನ್ನೇ ಅವಲಂಬಿಸಿವೆ ಎನ್ನುವ ವಿನಯದೊಂದಿಗೆ ಮುಂದುವರಿಯುವುದೇ ಸೂಕ್ತ ಅಂತ ಬಲವಾಗಿ ನಂಬಿದವಳು ನಾನು.
ಮಂಜುಳಾ ಸುಬ್ರಹ್ಮಣ್ಯ
ನೃತ್ಯ, ನಾಟಕ ಕಲಾವಿದೆ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.