ವರುಣನ ಅವಕೃಪೆ: ಭತ್ತ ಕಟಾವಿಗೂ ಅಡ್ಡಿ; ಅನ್ನದಾತರಿಗೆ ಸಂಕಷ್ಟ
ಭಾರೀ ಗಾಳಿ-ಮಳೆಯಿಂದ ನೆಲಕಚ್ಚಿರುವ ಪೈರು: ಹೆಚ್ಚಿದ ಕಾಡುಪ್ರಾಣಿಗಳ ಹಾವಳಿ
Team Udayavani, Oct 20, 2019, 5:19 AM IST
ಮಳೆಯಿಂದಾಗಿ ನೆಲಕಚ್ಚಿದ ಭತ್ತದ ಪೈರು.
ಆಲಂಕಾರು: ಕೊನೆಯ ಕ್ಷಣದಲ್ಲಿ ಅಬ್ಬರಿಸಿದ ವರುಣನು ಈ ವರ್ಷ ರೈತರಿಗೆ ಮರಣ ಶಾಸನವನ್ನೇ ಬರೆದಿದ್ದಾನೆ. ಈ ಬಾರಿಯ ಬೇಸಾಯದ ಆರಂಭದಿಂದ ಅಂತ್ಯದವರೆಗೆ ವರುಣ ಒಂದಲ್ಲ ಒಂದು ರೀತಿಯಲ್ಲಿ ರೈತರನ್ನು ಸತಾಯಿಸಿದ್ದು, ಇದೀಗ ಭತ್ತ ಕಟಾವು ಹಂತ ತಲುಪಿದ್ದು, ನಿರಂತರವಾಗಿ ಸಂಜೆ ವೇಳೆ ಸುರಿಯುತ್ತಿರುವ ಮಳೆಯಿಂದಾಗಿ ಕಟಾವಿಗಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಬೇಸಾಯದ ಆರಂಭದಲ್ಲಿ ಮಳೆ ಒಂದು ತಿಂಗಳು ತಡವಾದ ಪರಿಣಾಮ ಸೂಕ್ತ ಸಮಯದಲ್ಲಿ ನೇಜಿ ನಾಟಿ ಮಾಡಲು ಸಾಧ್ಯವಾಗದೆ ರೈತರನ್ನು ಒತ್ತಡಕ್ಕೆ ತಳ್ಳಿತ್ತು. ಈಗ ಬೆಳೆದು ನಿಂತ ಪೈರು ಗಾಳಿ – ಮಳೆಯಿಂದಾಗಿ ನೆಲಕಚ್ಚಿ, ಕಟಾವು ಮಾಡಲಾಗದ ಪರಿಸ್ಥಿತಿಯನ್ನು ನಿರ್ಮಿಸಿದ್ದು, ರೈತರಲ್ಲಿ ಆತಂಕವನ್ನು ಸೃಷ್ಟಿಸಿದೆ.
ಇದೀಗ ಪೈರು ಕಟಾವಿನ ಹಂತಕ್ಕೆ ಬಂದಿದ್ದು, ಸಂಜೆ ವೇಳೆ ನಿರಂತರವಾಗಿ ಸುರಿಯುವ ಗಾಳಿ ಮಳೆಯಿಂದಾಗಿ ಭತ್ತ ಗದ್ದೆಯಲ್ಲೇ ಮೊಳಕೆ ಒಡೆಯುವ ಹಂತವನ್ನು ತಲುಪಿದೆ. ಪೈರು ಬಿದ್ದ ಪರಿಣಾಮ ಕಾಡುಪ್ರಾಣಿಗಳಿಗೆ ಸುಲಭದ ಆಹಾರವಾಗುತ್ತಿದೆ. ಕಾಡುಪ್ರಾಣಿಗಳು ನಿರಂತರವಾಗಿ ಗದ್ದೆಗಳಿಗೆ ದಾಳಿ ಮಾಡುತ್ತಿದ್ದು, ಇದ್ದ ಪೈರನ್ನು ನಾಶ ಮಾಡುತ್ತಿವೆ. ರಾತ್ರಿ ವೇಳೆ ಕಾಡು ಹಂದಿ, ಹೆಗ್ಗಣ ದಾಳಿ ಮಾಡಿದರೆ, ಹಗಲಲ್ಲಿ ನವಿಲು, ಗುಬ್ಬಚ್ಚಿ, ಗಿಳಿಗಳ ಹಿಂಡಿನ ಜತೆಗೆ ಮಂಗಗಳು ದಾಳಿ ಮಾಡಿ ಪೈರನ್ನು ನಾಶ ಮಾಡುತ್ತಿವೆ. ಇದರ ಪರಿಣಾಮ ಸಕಾಲದಲ್ಲಿ ಕಟಾವು ಮಾಡಲಾಗದೆ ರೈತರು ನಷ್ಟ ಅನುಭವಿಸುತ್ತಿದ್ದಾರೆ.
ಕಟಾವಿಗೆ ಯಂತ್ರವೂ ಆಗುವುದಿಲ್ಲ
ಕೂಲಿ ಕಾರ್ಮಿಕರ ಕೊರತೆಯ ಪರಿಣಾಮ ಹೆಚ್ಚಿನ ಬೇಸಾಯ ಕೆಲಸ – ಕಾರ್ಯಗಳು ಯಾಂತ್ರೀಕೃತವಾಗಿಯೇ ನಡೆಯುತ್ತಿದೆ. ಗದ್ದೆ ಉಳುಮೆಗೆ ಪವರ್ ಟಿಲ್ಲರ್ ಉಪಯೋಗಿಸಿದರೆ, ನಾಟಿಗೂ ಯಂತ್ರದ ಮೊರೆಹೋಗುತ್ತಾರೆ. ಇತ್ತೀಚೆಗೆ ಕಟಾವಿಗೂ ಯಂತ್ರವನ್ನು ಉಪಯೋಗಿಸುತ್ತಿದ್ದು, ಭತ್ತ ಬೇರ್ಪಡಿಸುವ ಕಾರ್ಯವನ್ನೂ ಯಂತ್ರದ ಮೂಲಕವೇ ನಡೆಸಲಾಗುತ್ತಿದೆ. ದುಬಾರಿ ಕೂಲಿ ಕೊಡುವ ಅನಿವಾರ್ಯತೆಯಿಂದ ರೈತರು ಮುಕ್ತವಾಗಿ, ಸಕಾಲದಲ್ಲಿ ಬೇಸಾಯದ ಎಲ್ಲ ಕೆಲಸ – ಕಾರ್ಯಗಳು ನಡೆಯುತ್ತಿದ್ದವು. ಆದರೆ ಈ ಬಾರಿಯ ಪೈರು ಗಾಳಿ, ಮಳೆಯಿಂದಾಗಿ ನೆಲಕಚ್ಚಿರುವುದರ ಪರಿಣಾಮ ಯಂತ್ರದಲ್ಲಿ ಕಟಾವು ಸಾಧ್ಯವಾಗದೆ ಕೂಲಿ ಕಾರ್ಮಿಕರನ್ನೇ ಅವಲಂಬಿಸಬೇಕಾಗಿದೆ.
ಸಂಜೆ ವೇಳೆ ಕೃತಕ ನೆರೆ
ಕಳೆದ ವರ್ಷ ಆರಂಭದಲ್ಲೇ ಗದ್ದೆಗಳಿಗೆ ನೆರೆ ನೀರು ನುಗ್ಗಿದ ಪರಿಣಾಮ ಕಡಬ ತಾಲೂಕಿನ ಆಲಂಕಾರು ಗ್ರಾಮ ಅತೀ ಹೆಚ್ಚು ಭತ್ತ ಬೇಸಾಯವನ್ನು ಕಳೆದುಕೊಂಡಿದೆ. ಆಲಂಕಾರು ಗ್ರಾಮದ ಪಜ್ಜಡ್ಕ, ಪೊಯ್ಯಲಡ್ಡ, ಬುಡೇರಿಯಾ, ಶರವೂರು ಹಾಗೂ ಕೊಂಡಾಡಿ ಮುಂತಾದ ಪ್ರದೇಶಗಳಲ್ಲಿ 17 ಎಕ್ರೆ ಗದ್ದೆ ನೆರೆ ನೀರಲ್ಲಿ ಮುಳುಗಿತ್ತು. ಈ ವರ್ಷ ನೆರೆ ನೀರು ಗದ್ದೆಗಳಿಗೆ ಬಂದಿದ್ದರೂ ನೇಜಿಗೆ ಯಾವುದೇ ಹಾನಿಯಾಗಿರಲಿಲ್ಲ. ಹಿಂಗಾರು ಮಳೆ ಚುರುಕುಗೊಂಡಿದ್ದು, ಸಂಜೆ ವೇಳೆ ಸುರಿಯುವ ಗಾಳಿ ಮಳೆಯ ನೀರು ಗದ್ದೆಗಳಿಗೆ ನುಗ್ಗುತ್ತಿದೆ. ತೆನೆ ತುಂಬಿದ ಪೈರು ನೆಲಕಚ್ಚುತ್ತಿದೆ. ಕಟಾವು ಮಾಡಿದ ಭತ್ತವನ್ನು ದೀರ್ಘ ಕಾಲ ಸಂಗ್ರಹಿಸಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ.
ಅಂದು 6 ದಿನ, ಇಂದು 12 ದಿನ
ಗದ್ದೆಗಳು ಯಾವುದೇ ಪ್ರಾಕೃತಿಕ ವಿಕೋಪ, ಕಾಡು ಪ್ರಾಣಿ ದಾಳಿಯಾಗದಿದ್ದರೆ ಕೇವಲ ಆರು ದಿನಗಳಲ್ಲಿ ಕಟಾವು ಕಾರ್ಯ ಮುಗಿಯುತ್ತಿತ್ತು. ಯಂತ್ರದ ಮೂಲಕ ಕಟಾವಾದರೆ ಕೇವಲ 3 ಗಂಟೆಯಲ್ಲಿ ಎಲ್ಲವೂ ಮುಗಿಯುತ್ತಿತ್ತು. ಆದರೆ ಈ ಬಾರಿ ಯಂತ್ರ ಉಪಯೋಗಿಸಲು ಸಾಧ್ಯವಿಲ್ಲ. ಕಾರ್ಮಿಕರ ಮೂಲಕವೇ ಕಟಾವು ಮಾಡಬೇಕಾಗುತ್ತದೆ. ಕಳೆದ ಬಾರಿಯ ತನಕ ಆರು ದಿನಗಳಲ್ಲಿ ಮುಗಿಯುತ್ತಿದ್ದ ಕಟಾವು ಕಾರ್ಯಕ್ಕೆ ಈ ವರ್ಷ 12 ದಿನ ಬೇಕಾದೀತು. ಇದು ಹೊರೆಯಾಗಲಿದೆ ಎಂದು ಸಂತ್ರಸ್ತ ರೈತ ಬಾಬು ನೆಕ್ಕರೆ ತಿಳಿಸಿದ್ದಾರೆ.
ಪರಿಶೀಲನೆ ನಡೆಸಿ ನಷ್ಟಕ್ಕೆ ಪರಿಹಾರ
ಬೆಳೆ ಕಳೆದುಕೊಂಡ ರೈತರಿಗೆ ಪ್ರಾಕೃತಿಕ ವಿಕೋಪದಡಿ ಪರಿಹಾರ ನೀಡಲು ಸಾಧ್ಯವಿದೆ. ಸವಿಸ್ತಾರವಾದ ಮಾಹಿತಿಯುಳ್ಳ ಅರ್ಜಿಯನ್ನು ತಹಶೀಲ್ದಾರರಿಗೆ ನೀಡಬೇಕು. ತಹಶೀಲ್ದಾರರಿಂದ ಸೂಚನೆ ಬಂದ ಕೂಡಲೆ ಕೃಷಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪೈರು ಯಾವ ಹಂತದಲ್ಲಿದೆ ಎಂದು ಪರಿಶೀಲಿಸಿ ನಷ್ಟದ ಪಟ್ಟಿ ತಯಾರಿಸುತ್ತಾರೆ. ಪೈರು ಪ್ರಾರಂಭಿಕ ಹಂತದಲ್ಲಿದ್ದರೆ ಎಕ್ರೆಗೆ 2,720 ರೂ. ಪರಿಹಾರ ನೀಡಲಾಗುವುದು. ಕಟಾವಿನ ಹಂತದಲ್ಲಿದ್ದರೆ ಇಳುವರಿಯ ಪ್ರಮಾಣ ಗಮನಿಸಿ ಪರಿಹಾರ ನೀಡಲಾಗುವುದು.
– ತಿಮ್ಮಪ್ಪ ಗೌಡ, ಕಡಬ ವಲಯ ಕೃಷಿ ಅಧಿಕಾರಿ
- ಸದಾನಂದ ಆಲಂಕಾರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.