ಕಾಫಿ ಬೆಳೆಗಾರರಿಗೆ ಕೇಂದ್ರ ಸರಕಾರದಿಂದ ಅನ್ಯಾಯ: ಹ್ಯಾರಿಸ್
Team Udayavani, Apr 13, 2019, 6:00 AM IST
ಮಡಿಕೇರಿ: ಕೊಡಗಿನ ಕಾಫಿ ಬೆಳೆಗಾರರಿಗೆ ಬಿಜೆಪಿ ನೇತೃತ್ವದ ಕೇಂದ್ರ ಸರಕಾರದಿಂದ ಅನ್ಯಾಯವಾಗಿದ್ದು, ಪ್ರತಾಪ್ ಸಿಂಹ ಅವರ ಕಾರ್ಯ ವೈಖರಿಯ ಬಗ್ಗೆ ಇಲ್ಲಿನ ಜನ ಬೇಸತ್ತಿದ್ದಾರೆ ಎಂದು ಬೆಂಗಳೂರು ಶಾಂತಿನಗರದ ಶಾಸಕ ಎನ್.ಎ.ಹ್ಯಾರಿಸ್ ಆರೋಪಿಸಿದ್ದಾರೆ.
ಮಡಿಕೇರಿಯ ಕಾಂಗ್ರೆಸ್, ಜೆಡಿಎಸ್ ಚುನಾವಣಾ ಮೈತ್ರಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸಾಧನೆ ಏನು ಮಾಡಿದ್ದೀರಿ ಎಂದು ಕೇಳಿದರೆ, ಪಾಸ್‌ಪೋರ್ಟ್ ಆಫೀಸ್ ಆರಂಭಿಸಿದ್ದೇನೆ ಎಂದು ಉತ್ತರಿಸುವ ಪ್ರತಾಪ್ ಸಿಂಹ ಅವರ ನಿಷ್ಕ್ರಿಯತೆಯ ಬಗ್ಗೆ ಕೊಡಗಿನ ಜನರಿಗೆ ಈಗಾಗಲೇ ಮನವರಿಕೆಯಾಗಿದ್ದು, ಈ ಬಾರಿ ಮೈತ್ರಿ ಅಭ್ಯರ್ಥಿ ಸಿ.ಎಚ್.ವಿಜಯಶಂಕರ್ ಅವರ ಗೆಲುವು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕೊಡಗಿನ ಕಾಫಿ ಹಾಗೂ ಕಾಳುಮೆಣಸು ವಿಚಾರದಲ್ಲಿ ಕೊಡಗಿನ ಬೆಳೆಗಾರರಿಗೆ ಮೋದಿ ಸರ್ಕಾರದಿಂದ ಮೋಸವಾಗಿದೆ. ಜನಸಾಮಾನ್ಯರು ರೈತರು ಹಾಗೂ ಬೆಳೆಗಾರರ ಬಗ್ಗೆ ಯಾವುದೇ ಕಾಳಜಿ ಇಲ್ಲ ಎನ್ನುವ ಸತ್ಯ ಬಯಲಾಗಿದೆ. ಮಳೆಯಿಂದ ಹಾನಿ ಸಂಭವಿಸಿದಾಗ ಕೇರಳಕ್ಕೆ ತೋರಿದ ಔದಾರ್ಯವನ್ನು ಕೊಡಗಿನ ಮೇಲೆ ತೋರಿಸುವಲ್ಲಿ ಪ್ರಧಾನಿ ಮೋದಿ ಅವರು ವಿಫಲರಾಗಿದ್ದಾರೆ.
ಬಿಜೆಪಿ ನೀಡಿದ ಭರವಸೆಗಳೆಲ್ಲವೂ ಹುಸಿಯಾಗಿವೆ, ಹೇಳ್ಳೋದು ಒಂದು, ಮಾಡೋದು ಮತ್ತೂಂದು ಎನ್ನುವ ಸ್ಥಿತಿಯಲ್ಲಿ ಮೋದಿ ಇದ್ದಾರೆ. ಈ ಬಾರಿಯ ಬಿಜೆಪಿ ಪ್ರಣಾಳಿಕೆ ಕೂಡ ಅದೇ ಮಾದರಿಯಲ್ಲಿ ಇದೆ ಎಂದು ಹ್ಯಾರಿಸ್ ಆರೋಪಿಸಿದರು.
ಬೆಲೆ ಏರಿಕೆಯನ್ನು ನಿಯಂತ್ರಿಸಲಾಗದ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದಿಂದ ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಷ್ಟೆಲ್ಲಾ ವೈಫಲ್ಯಗಳ ನಡುವೆಯೂ ನನ್ನ ಮುಖ ನೋಡ್ಬೇಡಿ, ಮೋದಿ ಮುಖ ನೋಡಿ ಓಟು ಹಾಕಿ ಎಂದು ಪ್ರತಾಪ್ ಸಿಂಹ ಮನವಿ ಮಾಡುತ್ತಿದ್ದಾರೆ. ಇದರಿಂದ ಮೈತ್ರಿ ಅಭ್ಯರ್ಥಿಯ ಗೆಲುವು ನಿಶ್ಚಿತ ಎನ್ನುವುದು ಸಾಬೀತಾಗಿದೆ.
ಯುವ ಸಮೂಹ “”ಮೋದಿ, ಮೋದಿ” ಎಂದು ಜಪ ಮಾಡುವುದು ಸರಿಯಲ್ಲ, ಯುವಕರ ಭವಿಷ್ಯ ಹಾಳು ಮಾಡಿದ್ದೇ ಮೋದಿ ಸರ್ಕಾರ ಎಂದು ಆರೋಪಿಸಿದ ಹ್ಯಾರೀಸ್, ಈ ಬಗ್ಗೆ ಯುವ ಮತದಾರರು ಯೋಚಿಸಬೇಕಾಗಿದೆೆ ಎಂದರು.
ಕಳೆದ ಬಾರಿ ರಾಮ ಮಂದಿರ ನಿರ್ಮಾ ಣದ ಭರವಸೆ ಬಿಜೆಪಿ ಪ್ರಣಾಳಿಕೆಯಲ್ಲಿತ್ತು. ಈ ಬಾರಿಯೂ ಅದೇ ಮಂದಿರದ ಭರವಸೆ ಪ್ರಣಾಳಿಕೆಯಲ್ಲಿದೆ. ರಾಜಕೀಯಕ್ಕಾಗಿ ಬಿಜೆಪಿ ರಾಮಮಂದಿರದ ಹೆಸರು ಬಳಸಿಕೊಳ್ಳುತ್ತಿದೆ ಎಂದರು.
ಮೈತ್ರಿ ಕೂಟಕ್ಕೆ ಹೆದರಿರುವ ಬಿಜೆಪಿ ಏನು ಬೇಕಾದರು ಮಾಡಲು ಸಿದ್ಧವಿದೆ. ಪರೋಕ್ಷವಾಗಿ ಭದ್ರತಾ ಲೋಪಕ್ಕೆ ಮೋದಿ ಸರ್ಕಾರವೇ ನೇರ ಕಾರಣ, ಉತ್ತರ ಪ್ರದೇಶದಲ್ಲಿ ಬಿಜೆಪಿ ಸರ್ಕಾರ ಇರುವುದರಿಂದಲೇ ರಾಹುಲ್ ಗಾಂಧಿಗೆ ಎಸ್‌ಪಿಜಿ ಭದ್ರತೆ ಕಡಿಮೆ ಮಾಡಿರಲೂ ಬಹುದು. ಐಟಿ, ಈಡಿ ಎಲ್ಲವನ್ನೂ ನಿಯಂತ್ರಿಸುತ್ತಿರುವವರು ಇದನ್ನೂ ಯಾಕೆ ಮಾಡಿರಬಾರದು ಎಂದು ಹ್ಯಾರಿಸ್ ಆರೋಪಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.