Bagalkot; ಸಚಿವರ ಪುತ್ರಿ ಕೈ ಅಭ್ಯರ್ಥಿ: ವೀಣಾ ಕಾಶಪ್ಪನವರ ನಡೆಯ ಕುತೂಹಲ
ಬೆಂಗಳೂರಲ್ಲಿ ಶಿಕ್ಷಣ.. ವಿಜಯಪುರದಲ್ಲಿ ರಾಜಕೀಯ.. ಬಾಗಲಕೋಟೆಯಲ್ಲಿ ಟಿಕೆಟ್ !
Team Udayavani, Mar 21, 2024, 10:15 PM IST
ಬಾಗಲಕೋಟೆ : ಜಿಲ್ಲೆಯ ವಿಧಾನಸಭೆ ಹಾಗೂ ಲೋಕಸಭೆ ಕ್ಷೇತ್ರಗಳಿಗೆ ಹೊರಗಿನವರ ಸ್ಪರ್ಧೆ ಹೊಸ ವಿಚಾರವೆನಲ್ಲ. ಅನೇಕ ಬಾರಿ ಘಟಾನುಘಟಿ ನಾಯಕರು ತಮ್ಮ ರಾಜಕೀಯ ಭವಿಷ್ಯಕ್ಕಾಗಿ ಇಲ್ಲಿನ ವಿಧಾನಸಭೆ, ಲೋಕಸಭೆಗೆ ಸ್ಪರ್ಧಿಸಿ ಸೋಲು, ಗೆಲವು ಎರಡನ್ನೂ ಕಂಡಿದ್ದಾರೆ. ಹಲವರಿಗೆ ರಾಜಕೀಯ ಪುನರ್ವಸತಿ ಕೊಟ್ಟರೆ, ಇನ್ನೂ ಕೆಲವರ ರಾಜಕೀಯ ಭವಿಷ್ಯ ಮಂಕು ಮಾಡಿದ ಖ್ಯಾತಿ ಮುಳುಗಡೆ ಜಿಲ್ಲೆ ಬಾಗಲಕೋಟೆಗಿದೆ.
ಹೌದು, ಮುಳಗಡೆ ಜಿಲ್ಲೆ ಬಾಗಲಕೋಟೆ ಜನರು, ಅಪ್ಪಿಕೊಂಡ್ರೆ ಜೀವ ಕೊಡ್ತಾರೆ, ಅಪನಂಬಿಕೆ ಮಾಡಿದರೆ, ಜೀವ ಹೋದರೂ ಕೈ ಹಿಡಿಯಲ್ಲ ಎಂಬ ಮಾತು ರಾಜಕೀಯ ವಲಯದಲ್ಲೂ ಇದೆ.
ಹಾಗೆಯೇ, ಜಿಲ್ಲೆಗೆ ರಾಜಕೀಯ ಪುನರ್ವಸತಿ ಬಯಸಿ ಬಂದವರಿಗೆ ಇಲ್ಲಿನ ಮತದಾರರು, ಕೈ ಹಿಡಿದು ಮೇಲಕೆತ್ತಿದ್ದಾರೆ. ಪ್ರತಿಷ್ಟೆಗಾಗಿ ಬಂದವರ ಸೋಲಿಸಿ, ಶಾಶ್ವತವಾಗಿ ಮನೆಗೆ ಕಳುಹಿಸಿದ್ದಾರೆ ಎಂಬುದು ಇಲ್ಲಿನ ಹಿರಿಯ ರಾಜಕೀಯ ಕಾರ್ಯಕರ್ತರ ವಿಶ್ಲೇಷಣೆ.
ಹೊರಗಿನವರು ಹೊಸದಲ್ಲ
ಈ ಜಿಲ್ಲೆಯ ವಿವಿಧ ಕ್ಷೇತ್ರಗಳಿಂದ, ರಾಜ್ಯದ ಬೇರೆ ಬೇರೆ ಜಿಲ್ಲೆಯವರು ಸ್ಪರ್ಧೆ ಮಾಡುವುದು ಹೊಸದೇನಲ್ಲ. ಅಂದಿನ ಹಾಲಿ ಮುಖ್ಯಮಂತ್ರಿಗಳೇ ಇಲ್ಲಿ ಸ್ಪರ್ಧಿಸಿ, ರಾಜಕೀಯ ಏಳು-ಬೀಳು ಕಂಡಿದ್ದಾರೆ. ಅಂದಹಾಗೆ ಅವಿಭಜಿತ ವಿಜಯಪುರ ಜಿಲ್ಲೆ ಇದ್ದಾಗ ಎಸ್. ನಿಜಲಿಂಗಪ್ಪ ಅವರನ್ನು ರಾಜ್ಯದ ಮುಖ್ಯಮಂತ್ರಿ ಗದ್ದುಗೆಗೆ ಕೂಡ್ರಿಸಲು ಬಾಗಲಕೋಟೆ ವಿಧಾನಸಭೆ ಕ್ಷೇತ್ರದಿಂದ ಅವಿರೋಧ ಆಯ್ಕೆ ಮಾಡಲಾಗಿತ್ತು ಎಂಬುದು ವಿಶೇಷ. ಆಗ ಹಾಲಿ ಶಾಸಕರಾಗಿದ್ದ ಬಿ.ಟಿ. ಮುರನಾಳ ಅವರು, ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ನಿಜಲಿಂಗಪ್ಪ ಅವರಿಗೆ ಸಿಎಂ ದಾರಿ ಸುಗಮಗೊಳಿಸಿದ್ದರು.
ಇನ್ನು ಮಾಜಿ ಸಿಎಂ ವೀರೇಂದ್ರ ಪಾಟೀಲ ಅವರಿಗೆ ರಾಜಕಿಯ ಪುನರ್ ಜನ್ಮ ನೀಡುವ ಮೂಲಕ ರಾಷ್ಟ್ರ ರಾಜಕಾರಣಕ್ಕೆ ಕಳುಹಿಸಲು ಬಾಗಲಕೋಟೆ ಲೋಕಸಭೆಯಿಂದ ಆಯ್ಕೆ ಮಾಡಿ ಕಳುಹಿಸಲಾಗಿತ್ತು. ಬಳಿಕ ಅವರು ಕೇಂದ್ರದಲ್ಲಿ ಮಂತ್ರಿ ಕೂಡ ಆಗಿದ್ದರು.
ಪ್ರಧಾನಿ ಅಭ್ಯರ್ಥಿ ಎಂದೇ ಬಿಂಬಿತರಾಗಿದ್ದ ಆಗಿನ ಸಿಎಂ (1992) ರಾಮಕೃಷ್ಣ ಹೆಗಡೆ ಅವರನ್ನು ರಾಷ್ಟ್ರ ರಾಜಕಾರಣಕ್ಕಾಗಿ ಬಾಗಲಕೋಟೆ ಲೋಕಸಭೆಯಿಂದ ಜನತಾದಳದಿಂದ ನಿಲ್ಲಿಸಲಾಗಿತ್ತು. ನಾನಾ ರಾಜಕೀಯ ವಿದ್ಯಮಾನಗಳು ಇದೇ ವೇಳೆ ಘಟಿಸಿದ ಪರಿಣಾಮ ಅವರು ಸೋಲು ಕಂಡರು. ಆಗ ಬ್ಯಾರೇಜ್ ಹೀರೋ ಎಂದು ಬಿಂಬಿತರಾಗಿದ್ದ ದಿ.ಸಿದ್ದು ನ್ಯಾಮಗೌಡ ಎಂಬ ಯುವ ನಾಯಕ, ಹೆಗಡೆ ಅವರನ್ನು ಸೋಲಿಸಿ, ಕೇಂದ್ರದಲ್ಲಿ ಕಲ್ಲಿದ್ದಲು ಖಾತೆ ಸಚಿವರೂ ಆದರು.
ಇನ್ನು ತೀರಾ ಇತ್ತೀಚೆಗೆ 2018 ರಲ್ಲಿ ಸಿದ್ದರಾಮಯ್ಯ ಅವರನ್ನು 2ನೇ ಬಾರಿಗೆ ರಾಜ್ಯದ ಮುಖ್ಯಮಂತ್ರಿ ಮಾಡಬೇಕು ಎನ್ನುವ ಉದ್ದೇಶದೊಂದಿಗೆ ಈ ಭಾಗದ ಕಾಂಗ್ರೆಸ್ ಮುಖಂಡರು ಬಾದಾಮಿಗೆ ಕರೆತಂದು ನಿಲ್ಲಿಸಿದರು. ಸಿದ್ದರಾಮಯ್ಯ ನಿರೀಕ್ಷೆಯಂತೆ ಗೆಲುವು ಸಾಧಿಸಿದರಾದರೂ ಕಾಂಗ್ರೆಸ್ – ಜೆಡಿಎಸ್ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದ ಪರಿಣಾಮ ಸಿಎಂ ಆಗಲಿಲ್ಲ. ಆದರೆ, ಸಿದ್ದರಾಮಯ್ಯ ಅವರಿಗೆ ರಾಜಕೀಯ ಪುನರ್ವಸತಿ ನೀಡಿದ್ದು ಬಾಗಲಕೋಟೆ ಜಿಲ್ಲೆಯ ಬಾದಾಮಿ ಕ್ಷೇತ್ರ ಎಂಬುದು ಸುಳ್ಳಲ್ಲ.
ಇದೀಗ ಲೋಕಸಭೆ ಚುನಾವಣೆಗೆ ಬಾಗಲಕೋಟೆ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ಆಗಲು ಅನೇಕ ಜನ ಪ್ರಬಲ ಆಕಾಂಕ್ಷಿಗಳು ಇದ್ದರೂ ಅಖಂಡ ವಿಜಯಪುರ ಜಿಲ್ಲೆಯ ಸಚಿವ ಶಿವಾನಂದ ಪಾಟೀಲರ ಪುತ್ರಿ ಸಂಯುಕ್ತ ಪಾಟೀಲ ಅವರನ್ನು ಕಾಂಗ್ರೆಸ್ಸಿನಿಂದ ಕಣಕ್ಕಳಿಸಲಾಗುತ್ತಿದೆ. ಜಿಲ್ಲೆಯ ಬಹುತೇಕ ಕಾಂಗ್ರೆಸ್ ಶಾಸಕರು ಸಂಯುಕ್ತ ಪಾಟೀಲ ಪರವಾಗಿ ಬ್ಯಾಟಿಂಗ್ ಮಾಡಿರುವ ಪರಿಣಾಮ ಅವರಿಗೆ ಟಿಕೆಟ್ ಕೂಡ ಪಕ್ಕಾ ಆಗಿದೆ ಎಂಬ ಮಾತೂ ಕೇಳಿರುತ್ತಿದೆ.
ಬೆಂಗಳೂರಲ್ಲಿ ಶಿಕ್ಷಣ.. ವಿಜಯಪುರದಲ್ಲಿ ರಾಜಕೀಯ.. ಬಾಗಲಕೋಟೆಯಲ್ಲಿ ಟಿಕೆಟ್ !
ಪ್ರಸ್ತುತ ಲೋಕಸಭೆ ಚುನಾವಣೆಯಲ್ಲಿ ಬಾಗಲಕೋಟೆ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ಪಡೆಯುವಲ್ಲಿ ಬಹುತೇಕ ಯಶಸ್ವಿಯಾಗಿರುವ ಸಂಯುಕ್ತ ಪಾಟೀಲರು, 30 ವರ್ಷದ ಯುವ ನಾಯಕಿ.
ತಂದೆ-ಸಚಿವ ಶಿವಾನಂದ ಪಾಟೀಲರ ರಾಜಕೀಯ ಗರಡಿಯಲ್ಲಿ ಪಳಗಿರುವ ಅವರು, ತಂದೆಯಂತೆಯೇ ಟ್ರಿಬಲ್ ಶೂಟರ್ ರೀತಿ, ಜಿಲ್ಲೆಯ ಎಲ್ಲ ನಾಯಕರು-ಪ್ರಮುಖ ಜಾತಿ-ಜನಾಂಗದವರ ಬೆಂಬಲ ಪಡೆಯಲು ಕಾರ್ಯತಂತ್ರ ನಡೆಸುತ್ತಿದ್ದಾರೆ ಎಂಬ ಮಾತಿದೆ. ಅಂದಹಾಗೆ ಸಂಯುಕ್ತಾ ಪಾಟೀಲರು, ಶಿವಾನಂದ ಪಾಟೀಲ ಮತ್ತು ಭಾಗ್ಯಶ್ರೀ ಶಿವಾನಂದ ಪಾಟೀಲರ ಮೊದಲ ಪುತ್ರಿ. ಎಸ್ಸೆಸ್ಸೆಲ್ಸಿ, ಪಿಯುಸಿ, ಬಿ.ಎ, ಎಲ್‌ಎಲ್‌ಬಿ ಶಿಕ್ಷಣವನ್ನು ಬೆಂಗಳೂರಿನಲ್ಲಿ ಪೂರೈಸಿದ್ದಾರೆ. ಬಿಎ, ಎಲ್‌ಎಲ್‌ಬಿಯಲ್ಲಿ ಟಾಪ್-10 ಸಾಧನೆ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.
ಕಳೆದ 2017ರಲ್ಲಿ ಎಲ್‌ಎಲ್‌ಬಿ ಪೂರ್ಣಗೊಂಡ ಬಳಿಕ, ವಿಜಯಪುರದ ಸ್ಪರ್ಶಾ ಫೌಂಡೇಶನ್ ಮೂಲಕ ಸಾಮಾಜಿಕ ಚಟುವಟಿಕೆ ಆರಂಭಿಸಿದ ಅವರು, ಮಹಿಳಾ ಸಬಲೀಕರ. ಮಹಿಳೆಯರ ಹಕ್ಕುಗಳು, ಗ್ರಾಮೀಣ ಪ್ರದೇಶದಲ್ಲಿ ಹಲವು ಕ್ರೀಡೆ, ಸಾಮಾಜಿಕ ಚಟುವಟಿಕೆ ಮೂಲಕ ಗಮನ ಸೆಳೆದಿದ್ದಾರೆ.
2018ರಲ್ಲಿ ವಿಜಯಪುರ ಡಿಸಿಸಿ ಬ್ಯಾಂಕ್ ನಿರ್ದೇಶಕಿಯಾಗಿಯೂ ಸಹಕಾರ ರಂಗಕ್ಕೆ ಕಾಲಿಟ್ಟ ಸಂಯುಕ್ತಾ, 2017ರಿಂದ ಯುವ ಕಾಂಗ್ರೆಸ್ ಮೂಲಕ ರಾಜಕೀಯ ಆರಂಭಿಸಿದ್ದಾರೆ. ಡಿಜಿಟಲ್ ಸದಸ್ಯತ್ವಕ್ಕೆ ಹೆಚ್ಚಿನ ಆದ್ಯತೆ ನೀಡಿ, ಕಾಂಗ್ರೆಸ್ ಸದಸ್ಯತ್ವ ಅಭಿಯಾನದಲ್ಲಿ ಅತ್ಯಽಕ ಸದಸ್ಯರನ್ನು ಸೇರಿಸಿದ ಖ್ಯಾತಿ ಅವರಿಗಿದೆ ಎನ್ನಲಾಗಿದೆ.
2020ರಿಂದ ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ನಡೆದ ಚುನಾವಣೆಯಲ್ಲಿ ಅತ್ಯಽತ ಮತಗಳಿಂದ ಗೆಲವು ಸಾಽಸಿದ್ದರು. 2017ರಿಂದ ರಾಜಕೀಯ ಆರಂಭಿಸಿದರೂ, ಅತಿಬೇಗ ರಾಜ್ಯ ಮಟ್ಟದಲ್ಲಿ ಮುನ್ನಲೆಗೆ ಬಂದಿರುವ ನಾಯಕಿ ಎಂಬ ಖ್ಯಾತಿ ಪಡೆದಿದ್ದಾರೆ.
ಶ್ರೀಶೈಲ ಕೆ. ಬಿರಾದಾರ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.