LS Polls: “ಕಾಂಗ್ರೆಸ್ಸಿಗರಿಗೆ ಬಡವರೆಂದರೆ ನಾಟಕೀಯ ಪ್ರೀತಿ’: ಗಾಯತ್ರಿ ಸಿದ್ದೇಶ್ವರ್
Team Udayavani, May 6, 2024, 10:45 AM IST
ದಾವಣಗೆರೆ: ಕಾಂಗ್ರೆಸ್ ಹಾಗೂ ಕಾಂಗ್ರೆಸ್ಸಿಗರಿಗೆ ಬಡವರೆಂದರೆ ನಾಟಕೀಯ ಪ್ರೀತಿ. ಅವರ ಮೇಲೆ ನಿಜವಾದ ಕಾಳಜಿಯೇ ಇಲ್ಲ ಎಂದು ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ್ ಕಾಂಗ್ರೆಸ್ ವಿರುದ್ಧ ಗುಡುಗಿದರು.
ಭಾನುವಾರ ದಾವಣಗೆರೆ ಉತ್ತರ, ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕೊನೆ ದಿನದ ಬಹಿರಂಗ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, 60 ವರ್ಷ ದೇಶವನ್ನಾಳಿದ ಕಾಂಗ್ರೆಸ್ ಬಡತನ ನಿರ್ಮೂಲನೆಗೆ ಪ್ರಾಮಾಣಿಕ ಪ್ರಯತ್ನ ಮಾಡಲೇ ಇಲ್ಲ. ಗಾಂಧಿ ಪರಿವಾರ ತಮ್ಮ ಕುಟುಂಬದ ಅಸ್ತಿತ್ವಕ್ಕಾಗಿ ರಾಜಕಾರಣ ಮಾಡಿದೆಯೇ ವಿನಃ ದೇಶದ ಅಭಿವೃದ್ಧಿ, ಬಡವರ ಕಾಳಜಿಗಾಗಿ ರಾಜಕಾರಣ ಮಾಡಿಲ್ಲ ಎಂದರು.
ಮೂರು ತಲೆಮಾರು ದೇಶದ ಪ್ರಧಾನಿಗಳಾಗಿದ್ದ ಗಾಂಧಿ ಕುಟುಂಬಕ್ಕೆ ದೇಶದ ಬಡವರ ಕಷ್ಟ ಅರ್ಥವಾಗಲೇ ಇಲ್ಲ. ರೋಟಿ-ಕಪಡಾ-ಮಕಾನ್ ಎಂಬುವುದು 60 ವರ್ಷ ಕೇವಲ ಘೋಷಣೆಯಾಗಿಯೇ ಉಳಿದಿತ್ತು. ಅದನ್ನು ಪೂರ್ತಿ ಮಾಡುವ ನಿಟ್ಟಿನಲ್ಲಿ ಕಾರ್ಯ ಮಾಡಿದ್ದು ನರೇಂದ್ರ ಮೋದಿ ಜೀ ಅವರೇ ವಿನಃ ಕಾಂಗ್ರೆಸ್ ಅಲ್ಲ ಎಂದು ತಿಳಿಸಿದರು.
ನರೇಂದ್ರ ಮೋದಿ ಅವರು ಪ್ರಧಾನಿಯಾಗಿ 10 ವರ್ಷದಲ್ಲೇ 3 ಕೋಟಿ ಮನೆ ನಿರ್ಮಾಣ ಮಾಡಿದ್ದಾರೆ. ದೇಶದ 80 ಕೋಟಿಗೂ ಹೆಚ್ಚು ಜನರಿಗೆ ಉಚಿತ ಪಡಿತರ ನೀಡುತ್ತಿದ್ದಾರೆ. ಬಡವರ ಕಲ್ಯಾಣಕ್ಕಾಗಿ ಹಲವಾರು ಯೋಜನೆ ಜಾರಿಗೊಳಿಸಿದ್ದಾರೆ. ಕೇವಲ 10 ವರ್ಷದಲ್ಲಿ ಮೋದಿಯವರು ಇಷ್ಟೆಲ್ಲ ಸಾಧನೆ ಮಾಡಿದ್ದಾರೆ ಎಂದಾದರೆ 60 ವರ್ಷ ದೇಶ ಆಳಿದ ಕಾಂಗ್ರೆಸ್‌ಗೆ ಏಕೆ ಸಾಧ್ಯವಾಗಲಿಲ್ಲ ಎಂದು ಪ್ರಶ್ನಿಸಿದರು.
ಮೋದಿ ಅವರ ಸರ್ಕಾರದಲ್ಲಿ ಹಲವಾರು ಉದ್ದಿಮೆಗಳು ಲಾಭದತ್ತ ಮುಖ ಮಾಡಿವೆ. ಇದಕ್ಕೆ ಕಾರಣ ಮೋದಿ ಜೀ ಅಳವಡಿಸಿಕೊಂಡಿರುವ ಆತ್ಮನಿರ್ಭಾರ ಭಾರತ ಯೋಜನೆ. ಈ ಯೋಜನೆ ಮೂಲಕ ಭಾರತ ಸ್ವಾವಲಂಭನೆಯತ್ತ ದಾಪುಗಾಲು ಇಡುತ್ತಿದೆ. ಭಾರತ ಈಡ ಸೆಮಿಕಂಡಕ್ಟರ್ ಉದ್ಪಾನೆ ಬಗ್ಗೆ ಚಿಂತಿಸುತ್ತಿದೆ. ಅಭಿವೃದ್ಧಿ ಎಂದರೆ ಇದಲ್ಲವೇ ಎಂದು ಪ್ರಶ್ನಿಸಿದರು.
2004 ರಿಂದ 2014 ರವರೆಗಿನ ಯುಪಿಎ (ಕಾಂಗ್ರೆಸ್) ಆಡಳಿತಾವ ಧಿ ಬಾಂಬ್ ಬ್ಲಾಸ್ಟ್, ಭ್ರಷ್ಟಾಚಾರ, ಸೈನಿಕರ ಮೇಲೆ ದಾಳಿ, ಭಯೋತ್ಪಾದಕರ ಅಟ್ಟಹಾಸ, ಕಾಮನ್ ವೆಲ್ತ್ ಹಗರಣ, ಕೋಲ್ ಹಗರಣ, ಸತ್ಯಂ ಹಗರಣ, ಐಪಿಎಲ್ ಹಗರಣ ಹೀಗೆ ಸಾಲು ಸಾಲು ಹಗರಣಗಳ ಸರಮಾಲೆಯೇ ಸುದ್ದಿಯಾಗುತ್ತಿತ್ತು. ಆದರೆ, ಮೋದಿ ಅಧಿಕಾರಕ್ಕೆ ಬಂದು 10 ವರ್ಷದಲ್ಲಿ ಒಂದೇ ಒಂದು ಕಪ್ಪು ಚಕ್ಕೆ ಇಲ್ಲದಂತೆ ಅಧಿಕಾರ ನಡೆಸಿದ್ದಾರೆ. ದೇಶದ ಅಭಿವೃದ್ಧಿ, ಆರ್ಥಿಕ ಚೇತರಿಕೆ ಸೇರಿದಂತೆ ಅನೇಕ ಯಶೋಗಾಥೆಗಳಿಗೆ ಮೋದಿ ಅವರ ದಿಟ್ಟ ನಾಯಕತ್ವ ಕಾರಣ ಎಂದು ತಿಳಿಸಿದರು.
ಚಿತ್ರ ನಟಿ, ಮಾಳವಿಕಾ ಅವಿನಾಶ್, ಮಾಜಿ ಸಚಿವ ಎಸ್.ಎ. ರವೀಂದ್ರನಾಥ್, ಎನ್. ರವಿಕುಮಾರ್, ಲೋಕಿಕೆರೆ ನಾಗ ರಾಜ್, ಬಿ.ಎಸ್. ಜಗದೀಶ್, ಡಾ| ಎ.ಎಚ್. ಶಿವಯೋಗಿಸ್ವಾಮಿ, ಪಾಲಿಕೆ ಸದಸ್ಯರಾದ ಪ್ರಸನ್ನ ಕುಮಾರ್, ವೀಣಾ ನಂಜಪ್ಪ, ರೇಖಾ ಸುರೇಶ್ ಇತರರು ಇದ್ದರು.
ದಾವಣಗೆರೆ ಲೋಕಸಭಾ ಕ್ಷೇತ್ರದ ಅಭಿವೃದ್ಧಿಗೆ ಶಾಮನೂರು ಕುಟುಂಬ ಅಡ್ಡಿಯಾಗಿದೆ ಎಂದು ಆರೋಪಿಸಿದರು. ದಾವಣಗೆರೆಗೆ ಅವಶ್ಯಕವಾಗಿರುವ ಸರ್ಕಾರಿ ಮೆಡಿಕಲ್ ಕಾಲೇಜು ಬಾರದಂತೆ ಶಾಮನೂರು ಕುಟುಂಬ ನೋಡಿಕೊಳ್ಳುತ್ತಿದೆ. ಸರ್ಕಾರಿ ಮೆಡಿಕಲ್ ಕಾಲೇಜು ದಾವಣಗೆರೆ ಬಂದರೆ ಚಿಗಟೇರಿ ಆಸ್ಪತ್ರೆಯಿಂದ ಅವರಿಗೆ ಸಿಗುತ್ತಿರುವ ಕೋಟ್ಯಂತರ ಆದಾಯಕ್ಕೆ ಹೊಡೆತ ಬೀಳಲಿದೆ ಎಂಬ ಉದ್ದೇಶ ಶಾಮನೂರು ಕುಟುಂಬದ್ದು. ಶಾಮನೂರು ಕುಟುಂಬದವರಿಗೆ ಬಡವರ ಕಷ್ಟ ಹೇಗೆ ಅರ್ಥವಾದೀತು
– ಗಾಯಿತ್ರಿ ಸಿದ್ದೇಶ್ವರ, ಬಿಜೆಪಿ ಅಭ್ಯರ್ಥಿ.
ಬಿಜೆಪಿ ಅಭ್ಯರ್ಥಿ ಗಾಯಿತ್ರಿ ಸಿದ್ದೇಶ್ವರ ಕನಿಷ್ಠ 2 ಲಕ್ಷ ಲೀಡ್‌ನಲ್ಲಿ ಗೆಲ್ಲುತ್ತಾರೆ. ಶಾಮನೂರು ಕುಟುಂಬದ ದೌರ್ಜನ್ಯದಿಂದ ಕ್ಷೇತ್ರದ ಮತದಾರರು ಹೈರಾಣಾಗಿದ್ದಾರೆ. ಗಾಯಿತ್ರಿ ಸಿದ್ದೇಶ್ವರ್ ಅವರು ಗೆಲ್ಲುವು ಖಚಿತ, ನಿಶ್ಚಿತ.
– ಮಾಳವಿಕಾ ಅವಿನಾಶ್, ಬಿಜೆಪಿ ವಕ್ತಾರೆ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.