Lok Sabha Election 2024: ಸ್ವಾಭಿಮಾನದ ಕಿಚ್ಚು; ಯಾರಿಗೆ ನಷ್ಟ-ಲಾಭ !
Team Udayavani, May 30, 2024, 5:39 PM IST
■ ವೀರೇಶ ಕುರ್ತಕೋಟಿ/
ಮಲ್ಲಿಕಾರ್ಜುನ ಇಂದರಗಿ/
ಭೀಮಣ್ಣ ಗಾಣಗೇರ
ಉದಯವಾಣಿ ಸಮಾಚಾರ
ಹುನಗುಂದ/ಇಳಕಲ್ಲ/ಕಂದಗಲ್ಲ: ಎರಡು ತಾಲೂಕು ಕೇಂದ್ರ, ಅತೀ ಹೆಚ್ಚು ಹಳ್ಳಿಗಳನ್ನು ಹೊಂದಿರುವ ಹುನಗುಂದ ಕ್ಷೇತ್ರ, ರಾಜಕೀಯ ರಂಗದಲ್ಲಿ ತನ್ನದೇ ಆದ ವೈಶಿಷ್ಟ್ಯ ಹೊಂದಿದೆ. ರಾಜ್ಯಕ್ಕೆ ಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷರನ್ನು ನೀಡಿದ ಈ ಕ್ಷೇತ್ರ ಈಚಿನ ದಿನಗಳಲ್ಲಿ ಜಿಲ್ಲೆಯ ರಾಜಕೀಯ ವಲಯದಲ್ಲಿ ರೆಬೆಲ್ ನಾಯಕರನ್ನು ಹೊಂದಿದ ಖ್ಯಾತಿಯೂ ಹೊಂದಿದೆ.
ಎಸ್.ಆರ್. ಕಂಠಿ ಅವರಂತಹ ಮುತ್ಸದ್ಧಿ ನಾಯಕರನ್ನು ಈ ರಾಜ್ಯದ ಸಿಎಂ ಕೂಡ ಮಾಡಿದ ಈ ಕ್ಷೇತ್ರ ಕೆಪಿಸಿಸಿಗೆ ಉತ್ತರ ಕರ್ನಾಟಕ ಭಾಗದ ಮೊದಲ ಅಧ್ಯಕ್ಷ ಎಸ್.ಬಿ. ನಾಗರಾಳರನ್ನು ನೀಡಿದ್ದು ಇದೇ ಹುನಗುಂದ ಕ್ಷೇತ್ರ. ಕಳೆದ 2018ಕ್ಕೂ ಮುಂಚೆ ಕಾಂಗ್ರೆಸ್ -ಬಿಜೆಪಿ ನೇರ ಹಣಾಹಣಿ ಈ ಕ್ಷೇತ್ರದಲ್ಲಿ ನಡೆಯುತ್ತ ಬಂದಿದ್ದು, 2018ರ ಬಳಿಕ ಇಲ್ಲಿ ತ್ರಿಕೋನ ಸ್ಪರ್ಧೆ ನಡೆದಿವೆ.
ಪಾರಂಪರಿಕ ಮತಗಳು :ಈ ಕ್ಷೇತ್ರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ತಮ್ಮದೇ ಆದ ಪಾರಂಪರಿಕ ಮತ ಹೊಂದಿವೆ. 2004ರಲ್ಲಿ ಬೇರೆ ತಾಲೂಕಿನಿಂದ ಆಗಮಿಸಿದ ದೊಡ್ಡನಗೌಡ ಪಾಟೀಲರಿಗೆ ಬಿಜೆಪಿಯಿಂದ ಟಿಕೆಟ್ ಕೊಟ್ಟಾಗಲೂ ಬಿಜೆಪಿ ಮತ ಬುಟ್ಟಿಯೇ ಅವರನ್ನು ಗೆಲ್ಲಿಸಿದ ಕೀರ್ತಿ ಇದೆ. ಜಿಲ್ಲೆಯ ಇತರ ಕ್ಷೇತ್ರಗಳಿಗೆ ಹೋಲಿಸಿದರೆ ಇಲ್ಲಿನ ರಾಜಕೀಯ ರಂಗ, ಚುನಾವಣೆ ಪ್ರಚಾರದ ಭಾಷಣಗಳು ವಿಶಿಷ್ಟವಾಗಿ ನಡೆಯುತ್ತವೆ. ನಾಯಕರ ಫಿಲ್ಟರ್ ಇಲ್ಲದ ಭಾಷಣಗಳನ್ನೇ ಇಲ್ಲಿನ ಜನರೂ ಇಷ್ಟಪಟ್ಟು ಕೇಕೆ ಹಾಕೋದು ಇಲ್ಲಿನ ಈಚಿನ ರಾಜಕೀಯ ಸಂಸ್ಕೃತಿಯಾಗಿ ಬದಲಾಗಿದೆ ಕೂಡ.
ಸ್ವಾಭಿಮಾನದ ಕಿಚ್ಚು: ಜಿಪಂ ಅಧ್ಯಕ್ಷೆಯಾಗಿ 2019ರ ಲೋಕಸಭೆ ಕ್ಷೇತ್ರದ ಅಭ್ಯರ್ಥಿಯಾಗಿ, ಚುನಾವಣೆಯಲ್ಲಿ ಪರಾಭವಗೊಂಡರೂ ಕ್ಷೇತ್ರದಲ್ಲಿ ತಮ್ಮದೇ ಆದ ಹಿಡಿತ ಹೊಂದಿರುವ ವೀಣಾ ಕಾಶಪ್ಪನವರ ಅವರಿಗೆ ಈ ಬಾರಿ
ಟಿಕೆಟ್ ತಪ್ಪಿರುವುದು, ಕಾಂಗ್ರೆಸ್‌ಗೆ ಒಂದಿಷ್ಟು ಹಿನ್ನಡೆಯಾಗಬಹುದು ಎಂಬ ಲೆಕ್ಕಾಚಾರಗಳಿವೆ. ಇದು ಒಂದು ಹಂತದಲ್ಲಿ ಬಿಜೆಪಿಗೆ ವರವಾಗಬಹುದೆಂಬುದು ಕೆಲವರ ಅಭಿಪ್ರಾಯ.
ಲೋಕ ಸಮರಕ್ಕಾಗಿ ಐದು ವರ್ಷ ನಿರಂತರ ತಯಾರಿ ಮಾಡಿಕೊಂಡಿದ್ದ ವೀಣಾ ಅವರಿಗೆ ಟಿಕೆಟ್ ತಪ್ಪಿದ ಸ್ವಾಭಿಮಾನ ಕಿಚ್ಚು ಇಲ್ಲಿನ ಕೆಲ ಕಾಂಗ್ರೆಸ್ ಕಾರ್ಯಕರ್ತರಲ್ಲಿದೆ. ಅದು ಮತದಾನದಲ್ಲಿ ಆಕ್ರೋಶವಾಗಿ ಪರಿಣಾಮ ಬೀರುವ ಸಾಧ್ಯತೆಯೂ ಇದೆ ಎಂದು ಕೆಲವರು ಲೆಕ್ಕಾಚಾರ ಹಾಕಿದ್ದಾರೆ. ಆದರೆ ಅದು ದೊಡ್ಡ ಮಟ್ಟದಲ್ಲಿ ಪರಿಣಾಮ ಬೀರುವ ಸಾಧ್ಯತೆ ಕಡಿಮೆ ಎಂಬುದು ಕಾಂಗ್ರೆಸ್‌ನಲ್ಲೇ ಇರುವ ಕೆಲವರ ಮತ್ತೂಂದು ಲೆಕ್ಕಾಚಾರ.
ಸ್ವಕ್ಷೇತ್ರದಲ್ಲಿ ಹಿನ್ನಡೆ :2013ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನ ವಿಜಯಾನಂದ ಕಾಶಪ್ಪನವರ 72,720 ಮತ ಪಡೆದಿದ್ದರೆ, ಬಿಜೆಪಿಯ ದೊಡ್ಡನಗೌಡ ಪಾಟೀಲ 56,923 ಮತ ಪಡೆದಿದ್ದರು. 15,787 ಮತಗಳ ಅಂತರದಿಂದ ಗೆದ್ದು ಕಾಶಪ್ಪನವರ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದರು.
ಒಂದೇ ವರ್ಷದ ಅಂತರದಲ್ಲಿ ನಡೆದ 2014ರಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ಆಗ ಕಾಂಗ್ರೆಸ್‌ನ ಸರನಾಯಕ, 58,460 ಮತ ಪಡೆದರೆ, ಬಿಜೆಪಿಯ ಗದ್ದಿಗೌಡರ 63,931 ಮತಗಳನ್ನು ಈ ಹುನಗುಂದ ಕ್ಷೇತ್ರದಲ್ಲಿ ಪಡೆದಿದ್ದರು. ವಿಧಾನಸಭೆ ಚುನಾವಣೆಯಲ್ಲಿ 15 ಸಾವಿರ ಲೀಡ್ ಪಡೆದಿದ್ದ ಕಾಂಗ್ರೆಸ್, ಲೋಕಸಭೆ ಚುನಾವಣೆಯಲ್ಲಿ 5,471 ಮತಗಳ ಲೀಡ್, ಬಿಜೆಪಿಗೆ ಬಂದಿತ್ತು.
2018ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನ ವಿಜಯಾನಂದ 59,785, ಪಕ್ಷೇತರರಾಗಿದ್ದ ಎಸ್.ಆರ್. ನವಲಿಹಿರೇಮಠ 25,850 ಮತ ಪಡೆದಿದ್ದರು.ಬಿಜೆಪಿಯ ದೊಡ್ಡನಗೌಡ ಪಾಟೀಲ 65,012 ಮತ ಪಡೆದಿದ್ದರು. ಕಾಂಗ್ರೆಸ್‌ನ ಮತಗಳ ವಿಭಜನೆ ಹಾಗೂ ಐದು ವರ್ಷಗಳ ಕಾಶಪ್ಪನವರ ಆಡಳಿತಕ್ಕೆ ಒಂದಷ್ಟು ಇಲ್ಲಿ ಹಿನ್ನಡೆಯಾಗಿತ್ತು.
ಇನ್ನು 2019ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ವೀಣಾ ಕಾಶಪ್ಪನವರ, 11,369 ಮತಗಳ ಹಿನ್ನಡೆ ಅನುಭವಿಸಿದ್ದರು. ಸ್ವಕ್ಷೇತ್ರವಾದರೂ ಹೆಚ್ಚಿನ ಮತ ಪಡೆಯಲು ವಿಫಲರಾಗಿದ್ದರು. ಆಗ ಇಡೀ ದೇಶದಲ್ಲಿ ಮೋದಿ ಅಲೆ ಇರುವುದು ಮತ್ತೂಂದು ಕಾರಣವಾಗಿತ್ತು. ಈ ಬಾರಿ ಕಾಂಗ್ರೆಸ್ ಮತಗಳ ವಿಭಜನೆ ತಪ್ಪಿಸಲು ಹಾಗೂ ವೀಣಾಗೆ ಟಿಕೆಟ್ ತಪ್ಪಿದ್ದನ್ನು ಮತಗಳ ಮೇಲೆ ಪರಿಣಾಮ ಬೀರದಿರಲು ಸ್ವತಃ ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತಾ ಅವರ ತಂದೆ, ಸಚಿವ ಶಿವಾನಂದ ಪಾಟೀಲ, ಸಾಕಷ್ಟು ರಾಜಕೀಯ ತಂತ್ರ ಹೆಣೆದಿದ್ದರು. ಅದು ಸಕ್ಸಸ್ ಆಗುವ ಮೊದಲೇ ಮತದಾನ ಎರಡು ದಿನ ಹಿಂದೆ ಇಡೀ
ಕ್ಷೇತ್ರದಲ್ಲಿ ಕಾಂಗ್ರೆಸ್ ವಿರುದ್ಧ ಹಲವು ವದಂತಿ ಹರಡಿದ್ದವು.
ಹೀಗಾಗಿ ಈ ಬಾರಿಯೂ ಹುನಗುಂದ ಕ್ಷೇತ್ರದಲ್ಲಿ ಬಿಜೆಪಿ ಮುನ್ನಡೆ ಸಾಧಿಸುವ ಸಾಧ್ಯತೆ ಇದೆ. ಕಳೆದ 33 ಸಾವಿರಕ್ಕೂ ಹೆಚ್ಚು ಮತ ಪಡೆದಿದ್ದ ಎಸ್.ಆರ್. ನವಲಿಹಿರೇಮಠರ ಬೆಂಬಲದ ಗುಟ್ಟು ಯಾರಿಗೆ ಎಂಬುದು ಬಹಿರಂಗಗೊಂಡಿಲ್ಲ. ಆದರೂ ಅವರ ಬಲ ನಮಗೆ ಸಿಕ್ಕಿದೆ ಎಂಬ ಲೆಕ್ಕಾಚಾರದಲ್ಲಿ ಬಿಜೆಪಿಗರಿದ್ದಾರೆ ಎನ್ನಲಾಗಿದೆ.
ಕಾಂಗ್ರೆಸ್‌ನ ಗ್ಯಾರಂಟಿ ಯೋಜನೆಗಳು, ನಮ್ಮ ಶಾಸಕ ವಿಜಯಾನಂದ ಕಾಶಪ್ಪನವರ ಅವರು ಕ್ಷೇತ್ರದ ಜನರಿಗಾಗಿ ಹಗಲಿರುಳು ಶ್ರಮಿಸುತ್ತಿದ್ದು, ಈ ಲೋಕಾ ಚುನಾವಣೆಯಲ್ಲಿ ನಮ್ಮ ಹುನಗುಂದ ಮತಕ್ಷೇತ್ರ ಕನಿಷ್ಟ 15 ಸಾವಿರ ಲೀಡ್ ಕೊಡಲಿದೆ. ಈ ಚುನಾವಣೆಯಲ್ಲಿ ಬಾಗಲಕೋಟೆದಿಂದ ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತಾ ಪಾಟೀಲ ಆಯ್ಕೆ ಖಚಿತ.
●ಗಂಗಾಧರ ದೊಡಮನಿ
ಬ್ಲಾಕ್ ಅಧ್ಯಕ್ಷರು, ಹುನಗುಂದ
ಇಡೀ ದೇಶದ ಜನರು ಮೋದಿ ಮತ್ತೆ ಪ್ರಧಾನಿಯಾಗ ಬೇಕೆಂದು ಬಯಸಿದ್ದಾರೆ. ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು, ಜನರಿಗೆ ಲಾಭ ಕೊಡುವುದಕ್ಕಿಂತ ತೊಂದರೆಯೇ ಹೆಚ್ಚು ಕೊಟ್ಟಿವೆ. ಹೀಗಾಗಿ ಈ ಬಾರಿ ಇಳಕಲ್ಲ ತಾಲೂಕಿನಲ್ಲಿ 7 ಸಾವಿರಕ್ಕೂ ಹೆಚ್ಚು ಲೀಡ್ ಬಿಜೆಪಿ ಪಡೆಯಲಿದೆ.
●ಅರವಿಂದ ಮಂಗಳೂರ
ನಗರ ಮಂಡಲ ಅಧ್ಯಕ್ಷರು, ಇಳಕಲ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.