New Year: ಅವಳು ನಿರ್ವಾತ ಸೃಷ್ಟಿಸಿ ಹೋದವಳು!
Team Udayavani, Dec 31, 2023, 12:18 PM IST
ಕೆಲವೊಂದು ಘಟನೆಗಳು ಬೇಡ ಬೇಡ ಎಂದಷ್ಟೂ ಪದೇ ಪದೇ ಹೃದಯವನ್ನು ಘಾಸಿಗೊಳಿಸುತ್ತಲೇ ಇರುತ್ತವೆ. ಅದು ವ್ಯಕ್ತಿಗಳ ಅನುಪಸ್ಥಿತಿ ಆಗಿರಬಹುದು ಅಥವಾ ಕೆಲವು ಘಟನೆಗಳ ಪ್ರಭಾವವೂ ಇರಬಹುದು. ವರ್ಷದ ಇಣುಕು ನೋಟ ಎಂದು ಹಿಂದಿನದ್ದು ಮೆಲುಕು ಹಾಕುವಾಗ ಅದೆಷ್ಟೋ ಒಳ್ಳೆಯ ಮತ್ತು ಅಷ್ಟೇನೂ ರುಚಿಸದ ವಿಷಯಗಳು ಹಾದುಹೋಗುತ್ತವೆ. ಬಹುಶಃ 2023 ನನ್ನ ಪಾಲಿಗೆ ತೀರಾ ಕೆಟ್ಟದ್ದೂ ಅಲ್ಲದ, ಆದರೆ ಒಳ್ಳೆಯದೂ ಅಲ್ಲದ ವರ್ಷ ಎಂದರೆ ತಪ್ಪಾಗಲಿಕ್ಕಿಲ್ಲ. ಕೆಲಸಕ್ಕೆ ಅಂಟಿಕೊಳ್ಳಬಾರದು, ಯಾವುದೇ ಕಚೇರಿಯ ಜೊತೆ ಭಾವನೆಗಳನ್ನು ಥಳುಕು ಹಾಕಬಾರದು ಎಂದು ಅರ್ಥವಾಗಿದ್ದು, ಅತೀ ಹೆಚ್ಚು ಪ್ರೀತಿಸುತ್ತಿದ್ದ ಕೆಲಸಕ್ಕೆ ತಿಲಾಂಜಲಿ ನೀಡಬೇಕಾದಾಗ. ಬಿದ್ದರೆ ಭಯ ಬೇಡ, ಮುಂದೆ ಸಾಗುವ ಗುರಿ ಇದ್ದರೆ ಸಾಕು, ಎದ್ದು ಮುಂದೆ ನಡೆಯಬಹುದು ಎನ್ನುವುದನ್ನು ಪಾಲಿಸುತ್ತಲೇ ಬರುತ್ತಿದ್ದೇನೆ. ಅದೇ ರೀತಿ ಆ ಘಟನೆಯಿಂದ ಹೊರಬಂದು ಅದಕ್ಕಿಂತಲೂ ಉನ್ನತ ಹುದ್ದೆ ದಕ್ಕಿದಾಗ ಕಾದಿದ್ದು ಅವಳದೇ ಅನುಪಸ್ಥಿತಿ.
ಬದುಕಲ್ಲಿ ಹಿಂದೆ ತಿರುಗಿ ನೋಡಿದಾಗ ಆದ ವಿದ್ಯಮಾನಗಳನ್ನು ಹಂಚಿಕೊಳ್ಳಲು ಅವಳೇ ಇಲ್ಲ ಎಂದಾಗ ಆಗುವ ಗಾಯ ಅಗಾಧ. ಅವಳು ನನ್ನಜ್ಜಿ. ಸತತ 10-12 ವರ್ಷಗಳ ಕಾಲ ಕ್ಯಾನ್ಸರ್ ಜೊತೆ ಸೆಣಸಾಡಿ ನಮ್ಮನ್ನು ಅಗಲಿ ವರ್ಷವಾಯ್ತು. ಕೆಲವೇ ಕೆಲವರು ಮಾತ್ರವೇ ಬದುಕಲ್ಲಿ ಸೃಷ್ಟಿಸಬಹುದಾದ ನಿರ್ವಾತ ಸೃಷ್ಟಿಸಿ ಅವಳು ಎದ್ದು ಹೋದಾಗ ಆದ ನೋವು ಕಣ್ಣೀರು ಹರಿಸಿ ಮುಗಿಯುವುದಿಲ್ಲ. ಏನೇ ಸಣ್ಣ ಕೆಲಸವಾಗಲಿ, ದೊಡ್ಡ ಸಾಧನೆಯಾಗಲಿ ಹೇಳಲು ಅವಳೇ ಇಲ್ಲ ಎನ್ನುವಾಗ ಅದೆಲ್ಲಕ್ಕೂ ಬೆಲೆಯೇ ಇಲ್ಲವಲ್ಲ ಎನ್ನಿಸುವುದು ಅಜ್ಜಿಯ ಬಾಲವಾಗಿದ್ದ ನನ್ನನ್ನು ಕೊನೆಯವರೆಗೂ ಕಾಡುತ್ತಲೇ ಉಳಿಯುವ ನೆನಪು ಅದು.
-ಶ್ವೇತಾ ಭಿಡೆ, ಬೆಂಗಳೂರು
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.