ಕೋವಿಡ್ 19 ಕಳವಳ : ಪಾತಾಳಕ್ಕೆ ಕುಸಿದ ಷೇರು ಮಾರುಕಟ್ಟೆ
Team Udayavani, Mar 24, 2020, 11:49 AM IST
ಮುಂಬಯಿ: ಭಾರತೀಯ ಷೇರು ಮಾರುಕಟ್ಟೆ ಸೋಮವಾರ ಪಾತಾಳ ಕುಸಿತ ಕಂಡಿದೆ. ಕೊರೊನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಹೂಡಿಕೆದಾರರು ಮಾರುಕಟ್ಟೆಯಿಂದ ಹಿಂದೆ ಸರಿದ ಕಾರಣದಿಂದ ಮಹಾಪತನ ಉಂಟಾಗಿದೆ.
ಸೋಮವಾರ ಒಂದೇ ದಿನದಲ್ಲಿ ಷೇರು ಮಾರುಕಟ್ಟೆ ಶೇ.13ರಷ್ಟು ಕುಸಿತ ಕಂಡಿದ್ದು ಐತಿಹಾಸಿಕ ಪತನವಾಗಿದೆ. ಸೆನ್ಸೆಕ್ಸ್ 3935 ಅಂಕ ಕಳೆದುಕೊಂಡು 25,981 ರಲ್ಲಿ ಹಾಗೂ ಎನ್‌ಎಸ್‌ಇ ನಿಫ್ಟಿ 1135 ಅಂಕ ಕಳೆದುಕೊಂಡು 4 ವರ್ಷದ ಅತಿ ಕನಿಷ್ಠ ಎಂದರೆ 7,610 ರಲ್ಲಿ ಕೊನೆಗೊಂಡಿದೆ.
ದೊಡ್ಡ ಷೇರುಗಳು ಮಾತ್ರವಲ್ಲದೆ ನಿಫ್ಟಿ ಮಿಡ್‌ಕ್ರಾಪ್ ಮತ್ತು ನಿಫ್ಟಿ ಸ್ಮಾಲ್ ಕ್ಯಾಪ್ ಅನುಕ್ರಮವಾಗಿ ಶೇ.14.5 ಮತ್ತು ಶೇ.13ರಷ್ಟು ಕುಸಿತ ಕಂಡಿವೆ. ಬೃಹತ್ ವಲಯದ ಕಂಪನಿಗಳಾದ ಹೆಚ್‌ಡಿಎಫ್ಸಿ ಬ್ಯಾಂಕ್, ಆರ್‌ಐಎಲ್, ಐಸಿಐಸಿಐ ಬ್ಯಾಂಕ್ ಮತ್ತು ಆ್ಯಕ್ಸಿಸ್ ಬ್ಯಾಂಕ್ ಷೇರುಗಳು ಅತಿ ಹೆಚ್ಚು ಮೌಲ್ಯ ಕಳೆದುಕೊಂಡಿವೆ. ಕೊರೊನಾ ಆತಂಕದಿಂದ ಭಾರತದ 75 ಕ್ಕೂ ಹೆಚ್ಚು ಜಿಲ್ಲೆಗಳನ್ನು ಸಂಪೂರ್ಣ ಲಾಕ್‌ಡೌನ್ ಮಾಡಿದ್ದು, ಬಸ್ ಹಾಗೂ ರೈಲು ಸಂಚಾರವನ್ನು ನಿಷೇಧಿಸಿದ ಕ್ರಮಗಳಿಂದ ಮಾರುಕಟ್ಟೆ ಕುಸಿತಕ್ಕೆ ಪ್ರಮುಖ ಕಾರಣಗಳಾಗಿವೆ.
ರೂಪಾಯಿ ಸಹ ಐತಿಹಾಸಿಕ ಕುಸಿತ
ಸೋಮವಾರದಂದು ಭಾರತೀಯ ರೂಪಾಯಿ ಡಾಲರ್ ಎದುರು ಐತಿಹಾಸಿಕ ಕೆಳಮಟ್ಟಕ್ಕೆ ಕುಸಿದಿದೆ. ಈ ಹಿಂದಿನ ಅತಿ ಕನಿಷ್ಠ ಮಟ್ಟವಾದ 75.19 ದಾಟಿದ್ದ ರೂಪಾಯಿ ಈಗ ಪ್ರತಿ ಡಾಲರ್ 76.16 ರೂ. ಗೆ ಬಂದು ನಿಂತಿದೆ. ದಿನದ ಆರಂಭ ದಲ್ಲಿ 75.69 ರೂ. ರಿಂದ ವಹಿವಾಟು ಆರಂಭಿಸಿ, ರೂಪಾಯಿ ದಿನದಂತ್ಯಕ್ಕೆ ಐತಿಹಾಸಿಕ ಕನಿಷ್ಠ ಮಟ್ಟವಾದ 76.16 ರೂ. ಗೆ ಕುಸಿದಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.