ಗೆಹಲೋಟ್ ಸಂಸ್ಕೃತ, ಕನ್ನಡದಲ್ಲಿ ರಾಜೀವ್ ಪ್ರಮಾಣ ಸ್ವೀಕಾರ
Team Udayavani, Apr 4, 2018, 9:55 AM IST
ಹೊಸದಿಲ್ಲಿ: ಕಳೆದ ತಿಂಗಳ 23ರಂದು ಮುಕ್ತಾಯವಾದ ರಾಜ್ಯಸಭೆ ಚುನಾವಣೆಯಲ್ಲಿ ಜಯಗಳಿಸಿರುವ 58 ಸಂಸದರ ಪೈಕಿ ಮಂಗಳವಾರ 41 ಮಂದಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ವಿಶೇಷವೆಂದರೆ, ಕರ್ನಾಟಕದಿಂದ ಆಯ್ಕೆಯಾಗಿರುವ ಬಿಜೆಪಿ ಸಂಸದ ರಾಜೀವ್ ಚಂದ್ರಶೇಖರ್ ಕನ್ನಡದಲ್ಲಿಯೇ ಪ್ರಮಾಣ ವಚನ ಸ್ವೀಕರಿಸಿದ್ದು. ರಾಜ್ಯದವರೇ ಆಗಿರುವ ಎಲ್.ಹನುಮಂತಯ್ಯ ಪ್ರಮಾಣ ಸ್ವೀಕರಿಸಲಿಲ್ಲ. ಒಟ್ಟು ಒಂಭತ್ತು ಪ್ರಾದೇಶಿಕ ಭಾಷೆಗಳಲ್ಲಿ ವಿವಿಧ ರಾಜ್ಯಗಳನ್ನು ಪ್ರತಿನಿಧಿಸುವ ಸಂಸದರು ಪ್ರಮಾಣ ಸ್ವೀಕರಿಸಿ ಪ್ರಾದೇಶಿಕ ಸೊಗಡು ಮೆರೆದಿದ್ದಾರೆ ಎಂದು ರಾಜ್ಯಸಭೆ ಸಭಾಪತಿ ವೆಂಕಯ್ಯ ನಾಯ್ಡು ಹೇಳಿದ್ದಾರೆ.
ಕೇಂದ್ರ ಸಚಿವ ಥಾವರ್ ಚಂದ್ ಗೆಹಲೋಟ್ ಸಂಸ್ಕೃತದಲ್ಲಿ, ಶಿವಸೇನೆಯ ಅನಿಲ್ ದೇಸಾಯಿ ಮರಾಠಿಯಲ್ಲಿ, ಉತ್ತರಾಖಂಡದಿಂದ ಆಯ್ಕೆಯಾದ ಬಿಜೆಪಿ ಸಂಸದ ಅನಿಲ್ ಬಲೂನಿ ಹಿಂದಿಯಲ್ಲಿ ಪ್ರಮಾಣ ಸ್ವೀಕರಿಸಿದ್ದಾರೆ. ಉತ್ತರ ಪ್ರದೇಶದ ಎಸ್‌ಪಿಯಿಂದ ಪುನಾಯ್ಕೆಯಾದ ಜಯಾ ಬಚ್ಚನ್ ಗೈರಾಗಿದ್ದರು. ಕೇಂದ್ರ ಸಚಿವರಾದ ಮಾನ್ಸುಖ್ ಮಾಂಡವ್ಯ (ಗುಜರಾತ್), ಜೆ.ಪಿ.ನಡ್ಡಾ (ಹಿಮಾಚಲ ಪ್ರದೇಶ), ಧರ್ಮೇಂದ್ರ ಪ್ರಧಾನ್ (ಮಧ್ಯಪ್ರದೇಶ), ರವಿಶಂಕರ ಪ್ರಸಾದ್ (ಬಿಹಾರ), ಪ್ರಕಾಶ್ ಜಾವಡೇಕರ್ (ಮಹಾರಾಷ್ಟ್ರ) ಕೂಡ ಪ್ರಮಾಣ ಸ್ವೀಕರಿಸಿದ್ದಾರೆ. ರಾಜಸ್ಥಾನ, ತೆಲಂಗಾಣ ಮತ್ತು ಒಡಿಶಾದಿಂದ ಆಯ್ಕೆಯಾದ ಸಂಸದರು ಸದಸ್ಯರಾಗಿ ಪ್ರಮಾಣ ಸ್ವೀಕರಿಸಲಿಲ್ಲ. ಬಿಜೆಪಿಯ ಸರೋಜ್ ಪಾಂಡೆ ಕಾಲು ಮುರಿದು ಹೋಗಿದ್ದರಿಂದ ಕುಳಿತೇ ಪ್ರಮಾಣ ಸ್ವೀಕರಿಸಲು ಅವಕಾಶ ಕಲ್ಪಿಸಲಾಯಿತು.
ರಾಜ್ಯಸಭೆ ನಾಯಕರಾಗಿ ಜೇಟ್ಲಿ: ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ರಾಜ್ಯಸಭೆ ನಾಯಕರಾಗಿ ಪುನರಾಯ್ಕೆಯಾಗಿದ್ದಾರೆ. ಉತ್ತರ ಪ್ರದೇಶದಿಂದ ರಾಜ್ಯಸಭೆಗೆ ಜೇಟ್ಲಿ ಮತ್ತೆ ಚುನಾಯಿತರಾದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಈ ನಿರ್ಧಾರ ಕೈಗೊಂಡಿದ್ದಾರೆ. ಸದನ ಸಮಾವೇಶ ಗೊಳ್ಳುತ್ತಿದ್ದಂತೆಯೇ ಸಂಸದೀಯ ವ್ಯವಹಾರಗಳ ಸಚಿವ ಅನಂತಕುಮಾರ್ ಈ ಬಗೆಗಿನ ಪತ್ರವನ್ನು ಸಭಾಪತಿ ವೆಂಕಯ್ಯ ನಾಯ್ಡುಗೆ ಹಸ್ತಾಂತರಿಸಿದರು. ಆದರೆ ಜೇಟ್ಲಿ ಸದಸ್ಯರಾಗಿ ಮಂಗಳವಾರ ಪ್ರಮಾಣ ವಚನ ಸ್ವೀಕರಿಸಿರಲಿಲ್ಲ.
ಶೂನ್ಯ ಕಲಾಪದತ್ತ ಸಂಸತ್
ಸತತ 19ನೇ ದಿನವಾದ ಮಂಗಳವಾರವೂ ಲೋಕಸಭೆ, ರಾಜ್ಯಸಭೆಯಲ್ಲಿ ಯಾವುದೇ ರೀತಿಯ ಕಲಾಪ ನಡೆಯಲೇ ಇಲ್ಲ. ಏ.6ರಂದು ಬಜೆಟ್ ಅಧಿವೇಶನದ ಎರಡನೇ ಹಂತ ಮುಕ್ತಾಯವಾಗಲಿದೆ. ಎರಡೂ ಸದನಗಳಲ್ಲಿ ವಿವಿಧ ವಿಚಾರಗಳಿಗೆ ಸಂಬಂಧಿಸಿ ವಿವಿಧ ಪಕ್ಷಗಳು ಗದ್ದಲ ಎಬ್ಬಿಸಿದ್ದರಿಂದ ಬುಧವಾರಕ್ಕೆ ಕಲಾಪ ಮುಂದೂಡಲಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.