ಅನಿರೀಕ್ಷಿತ, ಅಭೂತಪೂರ್ವ, ಆಘಾತಕಾರಿ
Team Udayavani, Jan 13, 2018, 12:09 PM IST
ಹೊಸದಿಲ್ಲಿ: ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ವಿರುದ್ಧ ಬಹಿರಂಗ ವಾಗಿ ಅಸಮಾಧಾನ ವ್ಯಕ್ತಪಡಿಸಿದ ನಾಲ್ವರು ಹಿರಿಯ ನ್ಯಾಯಮೂರ್ತಿಗಳ ಕ್ರಮದ ಬಗ್ಗೆ ದೇಶದ ಕಾನೂನು ತಜ್ಞರು, ನಿವೃತ್ತ ನ್ಯಾಯಮೂರ್ತಿಗಳು ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.
ಕೆಲವು ಕಾನೂನು ತಜ್ಞರು ಇಂಥ ನಡೆಗೂ ಮುನ್ನ ಯೋಚಿಸಬೇಕಿತ್ತು. ಇದರಿಂದಾಗಿ ದೇಶದ ಸರ್ವೋಚ್ಚ ನ್ಯಾಯಾಲಯದ ಮೇಲಿನ ನಂಬಿಕೆಗೆ ಪೆಟ್ಟು ಬಿದ್ದಂತಾ ಗಿದೆ ಎಂದಿದ್ದರೆ, ಇನ್ನೂ ಕೆಲವರು ಇದೊಂದು ಅಭೂತ ಪೂರ್ವ ನಡೆ ಎಂದಿ ದ್ದಾರೆ. ಹೀಗಾಗಿ ನ್ಯಾಯ ಮೂರ್ತಿಗಳ ಈ ನಡೆ ದೇಶಾದ್ಯಂತ ತೀವ್ರ ಚರ್ಚೆಗೂ ಕಾರ ಣವಾಗಿದೆ. ಘಟನೆ ಸಂಬಂಧ ಮಾತ ನಾಡಿದ ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ್ ಅವರು, ಈ ಘಟನೆಯನ್ನು ಸಂಪೂರ್ಣವಾಗಿ ತಪ್ಪಿಸಬಹು ದಿತ್ತು ಎಂದಿದ್ದಾರೆ. ಆದರೆ, ಮುಂದಿನ ಕೆಲ ದಿನಗಳಲ್ಲಿ ಸಮಸ್ಯೆ ಸಂಪೂರ್ಣವಾಗಿ ನಿವಾರಣೆಯಾಗಲಿದೆ ಎಂದು ಅವರು ಆಶಾಭಾವ ವ್ಯಕ್ತಪಡಿಸಿದ್ದಾರೆ. ದಯಮಾಡಿ ನಾಳೆ ಸಂಜೆ ವರೆಗೆ ಕಾದು ನೋಡಿ, ಮುಂದೆ ಏನಾಗುತ್ತದೆ ಎಂಬುದನ್ನು ಆ ನಂತರವಷ್ಟೇ ಹೇಳಬಹುದು ಎಂದೂ ಅವರು ಹೇಳಿದ್ದಾರೆ.
ಜತೆಗೆ ನಿವೃತ್ತ ನ್ಯಾ| ಆರ್.ಎಸ್.ಸೋಧಿ, ನ್ಯಾ| ಮುಕುಲ್ ಮುದ್ಗಲ್, ಹಿರಿಯ ವಕೀಲರಾದ ಕೆ.ಟಿ.ಎಸ್.ತುಳಸಿ, ಮಾಜಿ ಸಚಿವರಾದ ಸಲ್ಮಾನ್ ಖುರ್ಷಿದ್ ಮತ್ತು ಅಶ್ವನಿ ಕುಮಾರ್ ಅವರು ಈ ಬೆಳವಣಿಗೆ ಬಗ್ಗೆ ಆಘಾತ ವ್ಯಕ್ತಪಡಿಸಿದ್ದಾರೆ. ಇಂಥ ಕ್ರಮದಿಂದಾಗಿ ಜನರು ನ್ಯಾಯಾಂಗ ವ್ಯವಸ್ಥೆ ಮೇಲೆ ನಂಬಿಕೆ ಕಳೆದುಕೊಳ್ಳುವ ಆತಂಕವಿದೆ ಎಂದಿದ್ದಾರೆ.
ಆದರೆ ನಿವೃತ್ತ ನ್ಯಾ| ಆರ್.ಎಂ.ಲೋಧಾ, ಹಿರಿಯ ನ್ಯಾಯವಾದಿ ಇಂದಿರಾ ಜೈಸಿಂಗ್, ಪ್ರಶಾಂತ್ ಭೂಷಣ್ ಮತ್ತು ಸುಬ್ರಮಣಿಯನ್ ಸ್ವಾಮಿ ಅವರು ಪತ್ರಿಕಾ ಗೋಷ್ಠಿಯನ್ನು ಸ್ವಾಗತಿಸಿದ್ದು, ಮುಖ್ಯ ನ್ಯಾಯಮೂರ್ತಿ ಗಳು ಈ ನಾಲ್ವರ ಅಭಿಪ್ರಾಯ ಕೇಳಬೇಕಿತ್ತು ಎಂದಿದ್ದಾರೆ. ನ್ಯಾ| ಲೋಧಾ ಅವರು ಮುಖ್ಯ ನ್ಯಾಯಮೂರ್ತಿ ನಾಯಕನಿದ್ದಂತೆ, ಅವರು ತಮ್ಮ ಮುತ್ಸದ್ದಿತನ ತೋರಿಸಬೇಕು. ಈ ನ್ಯಾಯಮೂರ್ತಿಗಳೆಲ್ಲ ಸಾಕಷ್ಟು ಚರ್ಚಿಸಿಯೇ ಇಂಥ ನಿರ್ಧಾರಕ್ಕೆ ಬಂದಿದ್ದಾರೆ. ಅವರ ಅಭಿಪ್ರಾಯಕ್ಕೆ ಮನ್ನಣೆ ನೀಡಬೇಕು ಎಂದಿದ್ದಾರೆ.
ಏನಿದು ಮೆಡಿಕಲ್ ಕಾಲೇಜು ಪ್ರಕರಣ?
ಕಪ್ಪುಪಟ್ಟಿಗೆ ಸೇರಿದ್ದ ಲಕ್ನೋ ಮೂಲದ ಪ್ರಸಾದ್ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಎಂಬ ಕಾಲೇಜು, ನ್ಯಾಯಾಲಯದಲ್ಲಿ ತಮ್ಮ ಪರವಾದ ತೀರ್ಪು ಬರಲಿ ಎಂಬ ಕಾರಣಕ್ಕೆ ಒಡಿಶಾ ಹೈಕೋರ್ಟ್ ಜಡ್ಜ್ ಜತೆಗೆ ಡೀಲ್ ಮಾಡಿಕೊಂಡಿತ್ತು ಎಂದು ಸಿಬಿಐ ತನ್ನ ಎಫ್ಐಆರ್‌ನಲ್ಲಿ ದಾಖಲಿಸಿತ್ತು. ಈ ವಿಚಾರ ಬೆಳಕಿಗೆ ಬರುತ್ತಿದ್ದಂತೆ, ಹಗರಣದ ತನಿಖೆಗೆ ವಿಶೇಷ ತನಿಖಾ ತಂಡ ರಚಿಸುವಂತೆ ಕೋರಿ ಕ್ಯಾಂಪೈನ್ಸ್ ಫಾರ್ ಜ್ಯುಡೀಷಿ ಯಲ್ ಅಕೌಂಟೆಬಿಲಿಟಿ ಆ್ಯಂಡ್ ರಿಫಾಮ್ಸ್ì ಸುಪ್ರೀಂ ಮೆಟ್ಟಿಲೇರಿತು. ವಿಚಾರಣೆ ಕಳೆದ ನವೆಂಬರ್‌ನಲ್ಲಿ ನ್ಯಾ| ಚಲಮೇಶ್ವರ ನೇತೃತ್ವದ ಪೀಠದ ಮುಂದೆ ಬಂತು. ಈ ಹಿಂದೆ ಸಿಜೆಐ ದೀಪಕ್ ಮಿಶ್ರಾ ಒಡಿಶಾ ಹೈಕೋರ್ಟ್ ಜಡ್ಜ್ ಆಗಿದ್ದ ವೇಳೆ, ತನಿಖೆಯಲ್ಲಿರುವ ಮೆಡಿಕಲ್ ಕಾಲೇಜುಗಳ ಪರ ತೀರ್ಪು ನೀಡಿದ್ದ ಕಾರಣ ಅವರು ಈ ಕೇಸಿನ ವಿಚಾರಣೆಯಿಂದ ದೂರ ಸರಿಯಬೇಕು ಎನ್ನುವುದು ಅರ್ಜಿದಾರರ ಕೋರಿಕೆಯಾಗಿತ್ತು. ಹೀಗಾಗಿ, ನ್ಯಾ| ಚಲಮೇ ಶ್ವರ್ ಅವರು ವಿಚಾರಣೆಯನ್ನು ಸಂವಿಧಾನ ಪೀಠಕ್ಕೆ ವರ್ಗಾಯಿಸಿದರು. ಆದರೆ, ಅಚ್ಚರಿಯೆಂಬಂತೆ, ಮಾರನೇ ದಿನವೇ ತರಾತುರಿಯಲ್ಲಿ ಸಿಜೆಐ ದೀಪಕ್ ಮಿಶ್ರಾ ಅವ ರು, ಹಿಂದಿನ ದಿನ ನ್ಯಾ.ಚಲಮೇಶ್ವರ ನೇತೃತ್ವದ ಪೀಠ ಕೊಟ್ಟಿದ್ದ ಆದೇಶವನ್ನೇ ರದ್ದುಗೊಳಿಸಿ, ಬೇರೊಂದು ಪೀಠಕ್ಕೆ ಅದನ್ನು ವರ್ಗಾಯಿಸಿದರು. ಈ ಸಮಯದಲ್ಲಿ ಕೋರ್ಟ್‌ನಲ್ಲಿದ್ದ ಕೆಲವು ನ್ಯಾಯವಾದಿಗಳು ಆಕ್ಷೇಪ ಎತ್ತಿದರೂ, ಸಿಜೆಐ ಕೇಳಲಿಲ್ಲ. ಹೊಸ ಪೀಠವು ವಿಚಾರಣೆ ನಡೆಸಿ, ಅರ್ಜಿದಾರರು ಆಧಾರರಹಿತ ಆರೋಪ ಮಾಡಿದ್ದಾರೆ ಎಂದು ಹೇಳಿದ್ದಲ್ಲದೆ, 25 ಲಕ್ಷ ರೂ.ಗಳ ದಂಡವನ್ನೂ ವಿಧಿಸಿತು.
ಲೋಯಾ ಕೇಸು: ಮರಣೋತ್ತರ ಪರೀಕ್ಷೆ ವರದಿ ಕೇಳಿದ ಸುಪ್ರೀಂ ಗುಜರಾತ್ ಪೊಲೀಸ್ ಇಲಾಖೆ ಹಾಗೂ ರಾಜಕೀಯ ರಂಗದಲ್ಲಿ ತಲ್ಲಣ ಸೃಷ್ಟಿಸಿದ್ದ ಸೊಹ್ರಾಬುದ್ದೀನ್ ಶೇಖ್ ನಕಲಿ ಎನ್‌ಕೌಂಟರ್ ಪ್ರಕರಣದ ವಿಚಾರಣೆ ನಡೆಸುತ್ತಿದ್ದ ಸಿಬಿಐ ವಿಶೇಷ ಕೋರ್ಟ್‌ನ ಜಡ್ಜ್ ಬಿ.ಎಚ್. ಲೋಯಾ ಸಾವಿನ ಪ್ರಕರಣವು ಗಂಭೀರ ಸ್ವರೂಪದ್ದು ಎಂದಿರುವ ಸುಪ್ರೀಂ ಕೋರ್ಟ್ ಮರಣೋತ್ತರ ವರದಿ ಮತ್ತು ಇತರ ದಾಖಲೆಗಳನ್ನು ಸಲ್ಲಿಸುವಂತೆ ಮಹಾರಾಷ್ಟ್ರ ಸರಕಾರಕ್ಕೆ ಆದೇಶ ನೀಡಿದೆ. ಪ್ರಕರಣಕ್ಕೆ ಸಂಬಂಧಿಸಿದ ಮೇಲ್ಮನವಿಯ ವಿಚಾರಣೆ ಕೈಗೆತ್ತಿಗೊಂಡ ನ್ಯಾ| ಅರುಣ್ ಮಿಶ್ರಾ ಹಾಗೂ ನ್ಯಾ| ಎಂ.ಎಂ. ಶಾಂತನಗೌಡರ್ ಅವರುಳ್ಳ ನ್ಯಾಯಪೀಠ, ನ್ಯಾ| ಲೋಯಾ ಅವರ ನಿಗೂಢ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ವತಂತ್ರ ತನಿಖೆ ನಡೆಸಬೇಕೆಂದು ಸಲ್ಲಿಸಲಾಗಿರುವ ಮೇಲ್ಮನವಿಗಳಿಗೆ ಸೂಕ್ತವಾಗಿ ಸ್ಪಂದಿಸುವಂತೆ ಮಹಾರಾಷ್ಟ್ರ ಸರಕಾರಕ್ಕೆ ಸುಪ್ರೀಂ ಕೋರ್ಟ್ ಸೂಚಿಸಿದೆ. ತನ್ನ ಈ ಸೂಚನೆ ಕುರಿತಂತೆ ಜನವರಿ 15ರೊಳಗೆ ಪ್ರತಿಕ್ರಿಯಿಸುವಂತೆ ಮಹಾರಾಷ್ಟ್ರ ಸರಕಾರದ ಸಲಹೆಗಾರ ನಿಶಾಂತ್ ಆರ್. ಕಾಂತೇಶ್ವರ್ಕರ್ ಅವರಿಗೆ ನ್ಯಾಯಪೀಠ ತಾಕೀತು ಮಾಡಿದೆ. ಏತನ್ಮಧ್ಯೆ, ಪ್ರಕರಣಕ್ಕೆ ಸಂಬಂಧಿಸಿದ ಮೇಲ್ಮನವಿಗಳ ವಿಚಾರಣೆ ಬಾಂಬೆ ಹೈಕೋರ್ಟ್‌ನಲ್ಲಿ ಜಾರಿಯಿರುವಾಗ ಸುಪ್ರೀಂ ಕೋರ್ಟ್‌ನಲ್ಲಿ ಅದರ ವಿಚಾರಣೆ ನಡೆಯುವುದು ಸರಿಯಲ್ಲ ಎಂದು ಬಾಂಬೆ ಹೈಕೋರ್ಟ್ ವಕೀಲರ ಸಂಘದ ವಕೀಲ ದುಷ್ಯಂತ್ ದಾವೆ, ನ್ಯಾಯಪೀಠ ವನ್ನು ಕೋರಿದರು. ಇದಕ್ಕೆ ಸ್ಪಂದಿಸಿದ ನ್ಯಾಯಪೀಠ, ಮೇಲ್ಮನವಿಗಳನ್ನು ತಾನು ಅವಲೋಕಿಸಿದರೂ ಈ ಬಗ್ಗೆ ಎದ್ದಿರುವ ಆಕ್ಷೇಪಗಳನ್ನೂ ಗಮನದಲ್ಲಿಟ್ಟುಕೊಂಡು ಮುಂದುವರಿಯುವುದಾಗಿ ಸ್ಪಷ್ಟಪಡಿಸಿತು.
ಯಾರು ಏನು ಹೇಳಿದರು?
ಇದೊಂದು ಸ್ವಾಗತಾರ್ಹ ಬೆಳವಣಿಗೆ. ದಿಟ್ಟ ನಿರ್ಧಾರ ಕೈಗೊಂಡ ನಾಲ್ವರು ಜಡ್ಜ್ಗಳನ್ನು ನಾನು ಅಭಿನಂದಿಸುತ್ತೇನೆ. ಎಲ್ಲೋ ಏನೋ ತಪ್ಪಾಗುತ್ತಿದೆ, ಅದನ್ನು ಸರಿಪಡಿಸಬೇಕಾದ ಅಗತ್ಯವಿದೆ ಎಂಬುದನ್ನು ದೇಶಕ್ಕೆ ತಿಳಿಸಬೇಕಾಗಿತ್ತು. ನ್ಯಾಯಾಂಗವೆಂಬ ಸಂಸ್ಥೆಯು ನನಗೆ ಹಾಗೂ ನಿಮಗೆ ಉಳಿಯುವಂತೆ ಮಾಡುವುದೇ ಇವರ ಉದ್ದೇಶ.
ಇಂದಿರಾ ಜೈಸಿಂಗ್, ಹಿರಿಯ ನ್ಯಾಯವಾದಿ
ಇಡೀ ನ್ಯಾಯಾಂಗ ವ್ಯವಸ್ಥೆ ಪ್ರತಿಷ್ಠೆ ಕಳೆದು ಕೊಂಡಿತು. ನೀವು ಜನರ ನಂಬಿಕೆಯನ್ನೇ ಕಳೆದುಕೊಂಡಿರಿ ಎಂದಾದರೆ ಇನ್ನು ಉಳಿಯುವುದಾದರೂ ಏನು?
ಹನ್ಸರಾಜ್ ಭಾರದ್ವಾಜ್, ಕೇಂದ್ರದ ಮಾಜಿ ಕಾನೂನು ಸಚಿವ
ನ್ಯಾಯಮೂರ್ತಿಗಳು ಮಾತನಾಡುವಾಗ ಅವರ ಮುಖದಲ್ಲಿದ್ದ ನೋವು ಎಲ್ಲವನ್ನೂ ಹೇಳುತ್ತಿತ್ತು. ಈ ಇಡೀ ಅಧ್ಯಾಯವೇ ನ್ಯಾಯಾಂಗದ ಔಚಿತ್ಯಕ್ಕೆ ಸಂಬಂಧಿಸಿದ್ದು. ಕಾನೂನು ಜನಸಾಮಾನ್ಯನಿಗೆ ಹೇಗೋ, ನ್ಯಾಯಮೂರ್ತಿ ಗಳಿಗೂ ಹಾಗೆಯೇ. ಅಲ್ಲದೆ, ಅವರು ಯಾವತ್ತೂ ಅನುಮಾನಾತೀತರು .
ಕೆ.ಟಿ.ಎಸ್. ತುಳಸಿ, ಹಿರಿಯ ನ್ಯಾಯವಾದಿ
ಈ ನಾಲ್ವರು ಕೂಡ ಪ್ರಚಾರದ ಹಸಿವು ಇರುವಂಥ ನ್ಯಾಯಮೂರ್ತಿಗಳಲ್ಲ, ಅನಗತ್ಯ ಪ್ರಚಾರ ಬಯಸುವವರೂ ಅಲ್ಲ.
ನ್ಯಾ| ಮುಕುಲ್ ಮುದ್ಗಲ್, ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ
ನ್ಯಾಯಾಂಗದ ಇತಿಹಾಸದಲ್ಲೇ ಇದೊಂದು ಕರಾಳ ದಿನ. ಜಡ್ಜ್ಗಳ ಸುದ್ದಿಗೋಷ್ಠಿಯು ಕೆಟ್ಟ ನಿದರ್ಶನಕ್ಕೆ ಕಾರಣವಾಗಲಿದೆ. ಇನ್ನು ಮುಂದೆ ಪ್ರತಿಯೊಬ್ಬ ಶ್ರೀಸಾಮಾನ್ಯನೂ ನ್ಯಾಯಾಲಯದ ಎಲ್ಲ ಆದೇಶಗಳನ್ನೂ ಅನುಮಾನದಿಂದಲೇ ನೋಡುವಂತಾಗುತ್ತದೆ. ಪ್ರತಿಯೊಂದು ತೀರ್ಪನ್ನೂ ಪ್ರಶ್ನಿಸಲು ಆರಂಭಿಸುತ್ತಾನೆ.
ಉಜ್ವಲ್ ನಿಕಂ, ಹಿರಿಯ ನ್ಯಾಯವಾದಿ
ನ್ಯಾಯಮೂರ್ತಿಗಳು ಸುದ್ದಿಗೋಷ್ಠಿ ಕರೆಯುವ ನಿರ್ಧಾರಕ್ಕೆ ಬಂದಿರುತ್ತಾರೆೆಂದರೆ, ಖಂಡಿತಾ ಪರಿಸ್ಥಿತಿಯು ನಿಯಂತ್ರಣ ಮೀರಿದೆ ಎಂಬುದು ಖಚಿತ. ಪ್ರಕರಣಗಳನ್ನು ಹಂಚುವಾಗ ಸಿಜೆಐ ತಮ್ಮ ಆಡಳಿತಾತ್ಮಕ ಅಧಿಕಾರ ದುರ್ಬಳಕೆ ಮಾಡುತ್ತಿದ್ದಾರೆಂದು ಅವರು ಆರೋಪಿಸಿದ್ದಾರೆ.
ಪ್ರಶಾಂತ್ ಭೂಷಣ್, ನ್ಯಾಯವಾದಿ
ನ್ಯಾಯಮೂರ್ತಿಗಳು ಹೊರಬಂದು ಸುದ್ದಿಗೋಷ್ಠಿ ನಡೆಸುತ್ತಾರೆಂದರೆ, ಅದರಲ್ಲಿ ಲೋಪ ಹುಡುಕುವುದನ್ನು ಬಿಟ್ಟು, ಅವರ ವಿಚಾರಗಳನ್ನು ಗಂಭೀರವಾಗಿ ಪರಿಗಣಿಸಲೇಬೇಕಾಗುತ್ತದೆ. ಪ್ರಧಾನಿ ಮೋದಿ ಅವರೇ ಮುಂದೆ ಬಂದು, ಸಿಜೆಐ ಹಾಗೂ ನಾಲ್ವರು ಜಡ್ಜ್ಗಳೊಂದಿಗೆ ಸಮಾಲೋಚನೆ ನಡೆಸಿ ಪರಿಹಾರ ಸೂಚಿಸಬೇಕು.
ಸುಬ್ರಹ್ಮಣ್ಯನ್ ಸ್ವಾಮಿ, ಬಿಜೆಪಿ ಸಂಸದ
ಇಲ್ಲಿ ಗೊತ್ತಾದ ಪ್ರಮುಖ ಅಂಶವೆಂದರೆ, ದೇಶದ ಹಿತಾಸಕ್ತಿಯು ಅಪಾಯಕ್ಕೆ ಸಿಲುಕಿದಾಗ, ಸಾಮಾನ್ಯ ನಿಯಮಗಳು ಅನ್ವಯಿಸುವುದಿಲ್ಲ ಎಂಬುದು.
ಯಶ್ವಂತ್ ಸಿನ್ಹಾ, ಕೇಂದ್ರದ ಮಾಜಿ ಸಚಿವ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Wrong Spelling: ಅಪಹರಣದ ಪತ್ರದಲ್ಲಿ ಅಕ್ಷರ ತಪ್ಪು ಬರೆದು ಸಿಕ್ಕಿಬಿದ್ದ ಭೂಪ!
ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್: ವಿ.ನಾರಾಯಣನ್
Successful: ರಾಜ್ಯದ 4,873 ಗ್ರಾಮಗಳು ಬಯಲು ಶೌಚ ಮುಕ್ತ: ಕೇಂದ್ರದ ಮೆಚ್ಚುಗೆ
Assam Coal Mine Tragedy: ಅಸ್ಸಾಂ ಗಣಿ ದುರಂತ… ಒಬ್ಬನ ಮೃತ ದೇಹ ಪತ್ತೆ
ತಿಮ್ಮಪ್ಪನ ಸನ್ನಿಧಾನದಲ್ಲಿ ನೂಕುನುಗ್ಗಲು ಕಾಲ್ತುಳಿತ… 6 ಸಾ*ವು, ಹಲವರ ಸ್ಥಿತಿ ಗಂಭೀರ
MUST WATCH
ಹೊಸ ಸೇರ್ಪಡೆ
Wrong Spelling: ಅಪಹರಣದ ಪತ್ರದಲ್ಲಿ ಅಕ್ಷರ ತಪ್ಪು ಬರೆದು ಸಿಕ್ಕಿಬಿದ್ದ ಭೂಪ!
Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ
ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್: ವಿ.ನಾರಾಯಣನ್
Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು
Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್ ನಿಶ್ಶಬ್ದ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.