210 ಜಾಲತಾಣಗಳಲ್ಲಿ ಆಧಾರ್ ಬಟಾಬಯಲು
Team Udayavani, Jul 20, 2017, 7:20 AM IST
ನವದೆಹಲಿ: ಆಧಾರ್‌ನಿಂದಾಗಿ ಜನರ ಖಾಸಗಿತನ ಬಯಲಾಗುತ್ತಿರುವ ಬಗ್ಗೆ ಕೇಂದ್ರ ಸರ್ಕಾರವೇ ಒಪ್ಪಿಕೊಂಡಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಸೇರಿದ 210 ವೆಬ್‌ಸೈಟ್‌ಗಳಲ್ಲಿ ಜನರ ಆಧಾರ್ ಸಂಖ್ಯೆ, ವಿಳಾಸ ಬಯಲಾಗಿದೆ ಎಂದು ಹೇಳಿದೆ. ಈ ನಡುವೆಯೇ ಜನರ ಖಾಸಗಿತನದ ಬಗ್ಗೆ ದೇಶವ್ಯಾಪಿ ಚರ್ಚೆ ನಡೆಯುತ್ತಿದ್ದು, ಸುಪ್ರೀಂಕೋರ್ಟ್‌ನ ಒಂಬತ್ತು ನ್ಯಾಯಮೂರ್ತಿಗಳ ವಿಸ್ತೃತ ಪೀಠ ವಿಚಾರಣೆಯನ್ನೂ ಶುರು ಮಾಡಿದೆ.
ಗುರುವಾರವೂ ವಿಚಾರಣೆ ಮುಂದುವರಿಯಲಿದ್ದು, ಸದ್ಯದಲ್ಲೇ ಖಾಸಗಿ ಹಕ್ಕಿನ ಬಗ್ಗೆ ನಿರ್ಧಾರವೂ ಆಗಲಿದೆ. ಬುಧವಾರ ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರ ನೀಡಿರುವ ಎಲೆಕ್ಟ್ರಾನಿಕ್ ಮತ್ತು ಐಟಿ ಖಾತೆಯ ಸಹಾಯಕ ಸಚಿವ
ಪಿ ಪಿ ಚೌಧರಿ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಸೇರಿದ 210 ವೆಬ್‌ಸೈಟ್‌ಗಳು ಜನರ ಆಧಾರ್ ಸಂಖ್ಯೆಯನ್ನು ಬಹಿರಂಗಗೊಳಿಸಿವೆ ಎಂದು ಒಪ್ಪಿಕೊಂಡಿದ್ದಾರೆ. ಕೇವಲ ಸಂಖ್ಯೆಯಷ್ಟೇ ಅಲ್ಲ, ಆಧಾರ್ ಸಂಖ್ಯೆಯನ್ನು ಹೊಂದಿರುವ ಜನರ ವೈಯಕ್ತಿಕ ದಾಖಲೆಗಳೂ ಬಯಲಾಗಿವೆ ಎಂದು ಅವರು ಹೇಳಿದ್ದಾರೆ. ಈ ವಿಚಾರವನ್ನು ಯುಐಡಿಎಐ ಗಂಭೀರವಾಗಿ ಪರಿಗಣಿಸಿದ್ದು, 210 ವೆಬ್‌ಸೈಟ್‌ಗಳಲ್ಲಿರುವ ಎಲ್ಲಾ ಮಾಹಿತಿಯನ್ನು ತೆಗೆಯುವಂತೆ ಸೂಚನೆ ನೀಡಿದೆ ಎಂಬ ಅಂಶವನ್ನೂ ಸದನಕ್ಕೆ ತಿಳಿಸಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಇಲಾಖೆಗಳ ವೆಬ್‌ಸೈಟ್‌ಗಳು ಹಾಗೂ ಶಿಕ್ಷಣ ಸಂಸ್ಥೆಗಳು “ಜನತೆ ಸರ್ಕಾರದಿಂದ ಪಡೆದಿರುವ ಫಲಾನುಭವ, ಹೆಸರು, ವಿಳಾಸ’ ಪ್ರಕಟಿಸಿದೆ. ಆದರೆ, ಯುಐಡಿಎಐ ಆಧಾರ್ ಮಾಹಿತಿ ಸೋರಿಕೆ ಮಾಡಿಲ್ಲ ಎಂದು ಚೌಧರಿ ಸ್ಪಷ್ಟಪಡಿಸಿದ್ದಾರೆ.
ಆಧಾರ್ ಸಂಖ್ಯೆ ಪಾಸ್‌ವರ್ಡ್-ಪಿನ್ ಅಲ್ಲವಲ್ಲ!: ಆಧಾರ್ ಮಾಹಿತಿ ಸೋರಿಕೆಯಾಗಿರುವ ಬಗ್ಗೆ ಆಂಗ್ಲ ವೆಬ್‌ತಾಣ ಸಾðಲ್. ಇನ್ ಜತೆ ಮಾತನಾಡಿರುವ ಯುಐಡಿಎಐ ಮುಖ್ಯಸ್ಥ ಅಜಯ್ ಭೂಷಣ್ ಪಾಂಡೆ, ಜನರ ಮೇಲೆ ಗೊಂದಲ, ಗೋಜಲುಗಳ ಸರಮಾಲೆಯನ್ನೇ ಹಾಕಿದ್ದಾರೆ. ನಂಬರ್ ಸೋರಿಕೆ ಮಾಡೋದು ಅಪರಾಧ ಎಂದು ಹೇಳುವ ಅವರು, ಈಗಾಗಲೇ ಸೋರಿಕೆಯಾಗಿರುವ ಮಾಹಿತಿ ಆಧರಿಸಿ ದೂರು ದಾಖಲಿಸುತ್ತೀರಾ ಎಂಬ ಪ್ರಶ್ನೆಗೆ ಇಲ್ಲ ಎಂದು ಹೇಳಿದ್ದಾರೆ. ಕಳೆದ ವಾರವಷ್ಟೇ ರಿಲಯನ್ಸ್ ಜಿಯೋ ಆಧಾರ್ ಮಾಹಿತಿ ಸೋರಿಕೆ ಮಾಡಿದ್ದರೆ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವೆಬ್‌ಸೈಟ್‌ಗಳೂ ಜನರ ಸ್ವವಿವರಗಳನ್ನು ಜಗಜ್ಜಾಹೀರು ಮಾಡಿದ್ದವು.
ಪಾಂಡೆ ಹೇಳಿದ್ದು,
1. ಖಾಸಗಿ ಸಂಸ್ಥೆಗಳು ಅವರದ್ದೇ ದತ್ತಕೋಶ ಇರಿಸಿವೆಯಂತೆ?
– ಇಲ್ಲ, ಆಧಾರ್ ಮಾಹಿತಿ ನಮ್ಮ ಬಳಿಯೇ ಇದೆ,
ಅವುಗಳಿಗೆ ನೀಡಿಲ್ಲ. ಸಂಖ್ಯೆಯಷ್ಟೇ ಕೋಟ್ಟಿರುವುದು.
2. ಒಂದು ವೇಳೆ ಸೋರಿಕೆ ಮಾಡಿಬಿಟ್ಟರೆ ಅಥವಾ ದುರ್ಬಳಕೆ ಮಾಡಿಕೊಂಡರೆ?
– ಆಗ, ಕ್ರಿಮಿನಲ್ ಅಪರಾಧವಾಗುತ್ತದೆ. ಅಂಥ ಸಂಸ್ಥೆ ಅಥವಾ ವ್ಯಕ್ತಿಗಳಿಗೆ ಶಿಕ್ಷೆಯುಂಟು.
3. ಈಗಾಗಲೇ ಸೋರಿಕೆಯಾಗಿದೆಯಲ್ಲ?
– ಸೋರಿಕೆಯಾಗಿದ್ದರೆ ಚಿಂತೆ ಏಕೆ? ಅದೇನು ನಿಮ್ಮ ಪಾಸ್‌ವರ್ಡ್ ಅಥವಾ ಪಿನ್ ಅಲ್ಲವಲ್ಲ. ಇದರಿಂದ ನಾಳೆಯೇ ನಿಮ್ಮ ಜೀವನದಲ್ಲಿ ಬಹುದೊಡ್ಡ ಗಂಡಾಂತರ ವಾಗಲ್ಲ. ಅಲ್ಲದೆ ಅಷ್ಟೊಂದು ಚಿಂತೆ ಮಾಡಲು ಇದೇನು ನಿಮ್ಮ ಬ್ಯಾಂಕ್ ಅಕೌಂಟ್ ನಂಬರ್ ಅಲ್ಲವಲ್ಲ.
4. ಏನಾದರೂ ಅಪಾಯವಾಗಬಹುದೇ?
– ಇಲ್ಲವೇ ಇಲ್ಲ. ಅವರಿಗೆ ಜಸ್ಟ್ 12 ನಂಬರ್‌ಗಳ ಒಂದು ಸಂಖ್ಯೆ ಸಿಗುತ್ತದೆ. ಈ ಸಂಖ್ಯೆ ನಿಮ್ಮ ಯಾವುದೇ ವಿವರ ಕೊಡಲ್ಲ. ಇದನ್ನು ಬಳಸಿಕೊಳ್ಳಬೇಕಿದ್ದರೆ ನಿಮ್ಮ ಬಯೋ ಮೆಟ್ರಿಕ್ ಅಥವಾ ಮೊಬೈಲ್ ನಂಬರ್ ಬೇಕು.
5. ಆದರೂ, ಜನರ ವಿವರ ಬಯಲಾಗುತ್ತದೆಯಲ್ಲ?
– ಜನರ ಮಾಹಿತಿ ತೀರಾ ರಹಸ್ಯವಾಗಿ ಇರುವುದಿಲ್ಲ.
ನಾವು ಬ್ಯಾಂಕ್ ಅಕೌಂಟ್ ನಂಬರ್ ಅನ್ನು ತೀರಾ ಸೂಕ್ಷ್ಮವಾದದ್ದು ಎನ್ನುತ್ತಿವೆ. ಇದು ಹೊರಜಗತ್ತಿಗೆ ಗೊತ್ತಾಗಬಾರದು, ರಹಸ್ಯವಾಗಿರಬೇಕು ಎಂದೂ ಹೇಳುತ್ತೇವೆ. ಆದರೆ ಇದು ಬಯಲಾದರೆ ಅಪಾಯ ವುಂಟೇ? ಇಲ್ಲ. ಹಾಗೆಯೇ ಆಧಾರ್
ನಂಬರ್ ಕೂಡ. ಇದೂ ಸೆನ್ಸಿಟೀವ್. ಆದರೂ ಒಂದೊಮ್ಮೆ ಬಯಲಾದರೆ ಏನೂ ಆಗಲ್ಲ. ಈ ಬಗ್ಗೆ ಚಿಂತೆಯೂ ಬೇಡ. ನಾವು ಆಗಾಗ ಆಧಾರ್ ಸಂಖ್ಯೆ, ಬ್ಯಾಂಕ್‌ಅಂಕೌಂಟ್ ಸಂಖ್ಯೆ, ವಿಳಾಸವನ್ನು ನೀಡುತ್ತಿರಲೇಬೇಕು. ಇವುಗಳನ್ನು ಕೊಟ್ಟ ಮಾತ್ರಕ್ಕೆ ಏನೂ ಆಗಲ್ಲ. ಆದರೆ ನಿಮ್ಮ ಬಯೋಮೆಟ್ರಿಕ್ ಮಾಹಿತಿ ಮಾತ್ರ ಬಹಿರಂಗವಾಗಬಾರದು ಅಷ್ಟೇ. ಅದು ನಮ್ಮಲ್ಲೇ ಸುರಕ್ಷಿತವಾಗಿದೆ.
6. ಇತ್ತೀಚೆಗಷ್ಟೇ ಸರ್ಕಾರದ ವೆಬ್‌ಸೈಟ್‌ಗಳೇ ಆಧಾರ್ ವಿವರ ಕೊಟ್ಟಿವೆ?
– ಹೌದು, ಈ ಬಗ್ಗೆ ನಮಗೂ ಗೊತ್ತಾಗಿದೆ. ಅವರನ್ನು ಕೇಳಿದಾಗ, ಈ ವಿವರಗಳು ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ ಬರುವುದರಿಂದ ಹಾಕಿದ್ದೇವೆ ಎಂದಿದ್ದಾರೆ. ಆಗ ನಾವು ಆಧಾರ್ ಸಂಖ್ಯೆಯ ಸುರಕ್ಷತೆ ಬಗ್ಗೆ ಹೇಳಿ ಆ ಮಾಹಿತಿಗಳನ್ನು ತೆಗೆಯಲು ಹೇಳಿದ್ದೇವೆ. ಮುಂದೆ ಮಾಹಿತಿ ಹಾಕದಂತೆ ಎಚ್ಚರಿಕೆ ಕೊಟ್ಟಿದ್ದೇವೆ.
7. ಈ ವೆಬ್‌ಸೈಟ್‌ಗಳ ವಿರುದ್ದ ದೂರು ದಾಖಲಿಸಿದ್ದೀರಾ?
– ಇಲ್ಲ, ಇಲ್ಲಿ ಅಪರಾಧಿಕ ಉದ್ದೇಶ ಇಲ್ಲವಾದ್ದರಿಂದ ನಾವು ದೂರು ದಾಖಲಿಸಿಲ್ಲ.
8. 34,000 ಖಾಸಗಿ ಆಪರೇಟರ್‌ಗಳ ಪರವಾನಗಿ ರದ್ದು ಮಾಡಿದ್ದೀರಂತೆ?
– ಆಧಾರ್ ನೋಂದಣಿ ಜವಾಬ್ದಾರಿಯನ್ನು ರಿಜಿಸ್ಟ್ರರ್‌ಗೆ ನೀಡಿದ್ದೇವೆ. ಅವರು ಏಜೆನ್ಸಿ ಮೂಲಕ ಮಾಡುತ್ತಾರೆ. ಇವರ ಮೇಲೆ ನಾವು ಹದ್ದಿನ ಕಣ್ಣಿಟ್ಟಿರುತ್ತೇವೆ. ಆದರೂ ಕೆಲವರು ಮಾಹಿತಿ ಸೋರಿಕೆ ಮಾಡಿದ್ದರಿಂದ 34,000
ಆಪರೇಟರ್‌ಗಳ ಪರವಾನಗಿ ರದ್ದು ಮಾಡಿದ್ದೇವೆ.
**
ಇನ್ನು ನಿಮ್ಮ ಕಿಸೆಯಲ್ಲೇ ಇರಲಿದೆ ಆಧಾರ್ !
ಹೊಸದಿಲ್ಲಿ: ಇನ್ನು ಮುಂದೆ ಆಧಾರ್ ಕಾರ್ಡ್ ಎಲ್ಲೆಂದರಲ್ಲಿ ಹೊತ್ತೂಯ್ಯುವ ಅಗತ್ಯ ಇಲ್ಲ ಅಥವಾ ನಂಬರ್ ನೆನಪಿಟ್ಟುಕೊಳ್ಳುವ ಅಗತ್ಯವೂ ಇಲ್ಲ. ಅದು ಬೆರಳ ತುದಿಯಲ್ಲೇ ಇರಲಿದೆ. ಬಳಕೆದಾರರಿಗೆ ಉಪಯೋಗವಾಗುವ ನಿಟ್ಟಿನಲ್ಲಿ ವಿಶಿಷ್ಟ ಗುರುತು ಚೀಟಿ ಪ್ರಾಧಿಕಾರ (ಯುಐಡಿಎಐ) ವಿನೂತನ ಆಧಾರ್ ಮೊಬೈಲ್ ಆ್ಯಪ್ ಒಂದನ್ನು ಬಿಡುಗಡೆ ಮಾಡಿದೆ. ಸದ್ಯ ಆ್ಯಂಡ್ರಾಯ್ಡ ಆವೃತ್ತಿಯ ಫೋನ್‌ಗಳಿಗೆ ಮಾತ್ರ ಈ ಆ್ಯಪ್ (ಬೆಟಾ ಆವೃತ್ತಿ; ಮುಂದಿನ ದಿನಗಳಲ್ಲಿ ಸುಧಾರಿತ ಆ್ಯಪ್ ಬರಲಿದೆ) ಲಭ್ಯವಿದೆ.
ಇನ್‌ಸ್ಟಾಲ್ ಮಾಡೋದು ಹೇಗೆ?
“ಎಂಆಧಾರ್’ ಹೆಸರಿನ ಆ್ಯಪ್ ಇದಾಗಿದ್ದು ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಲಭ್ಯವಿದೆ. ಇದ ಕ್ಕಾಗಿ ಗೂಗಲ್ ಪ್ಲೇಸ್ಟೋರ್ http://bit.ly/2uCqE91 ಮೂಲಕ ಡೌನ್‌ಲೋಡ್ ಮಾಡಬೇಕು. ಆ್ಯಪ್ ಅನ್ನು ಬಳಸಲು ಫೋನ್‌ನಲ್ಲಿ ಆಧಾರ್‌ಗೆ ನೀಡಿದ ಫೋನ್ ಸಂಖ್ಯೆ ಅವಶ್ಯವಾಗಿದೆ. ಡೌನ್‌ಲೋಡ್ ಬಳಿಕ ಆ್ಯಪ್‌ಗೆ ಪಾಸ್‌ವರ್ಡ್ ನೀಡಬೇಕಿರುತ್ತದೆ. ಬಳಿಕ ಆಧಾರ್ ಸಂಖ್ಯೆಯನ್ನು ನಮೂದಿಸಿ, ವನ್ ಟೈಮ್ ಪಾಸ್‌ವರ್ಡ್ ಅನ್ನು ನೀಡಿ ಆಧಾರ್ ಜತೆಗೆ ನಿಮ್ಮ ಮೊಬೈಲ್ ಸಂಖ್ಯೆಯನ್ನು ಖಾತರಿ ಮಾಡಬೇಕಿರುತ್ತದೆ. ಒಂದು ವೇಳೆ ಬೇರೆಯ ಮೊಬೈಲ್ ನಂಬರ್, ಅಥವಾ ಆಧಾರ್ ಸಂಖ್ಯೆ ತಪ್ಪಾಗಿ ಕೊಟ್ಟಿದ್ದರೆ, ಆಧಾರ್ ಆ್ಯಪ್ ಬಳಕೆ ಸಾಧ್ಯವಾಗುವುದಿಲ್ಲ.
ಏನು ಪ್ರಯೋಜನ?
ಈ ಆ್ಯಪ್ ಅನ್ನು ಮೊಬೈಲ್‌ನಲ್ಲಿ ಸ್ಥಾಪಿಸಿಕೊಂಡರೆ, ಸರಕಾರಿ ಕಚೇರಿಗಳಲ್ಲಿ, ಇತರೆಡೆ ಗುರುತು ಪತ್ರಗಳನ್ನು ಕೇಳಿದಾಗ ಕೂಡಲೇ ತೆರೆದು ತೋರಿಸಬಹುದು. ಅಲ್ಲದೇ ಬಯೋಮೆಟ್ರಿಕ್ ಬಳಕೆಯನ್ನು ಲಾಕ್-ಅನ್‌ಲಾಕ್ ಮಾಡುವ ಸೌಲಭ್ಯ ಇದರಲ್ಲಿದೆ. ಇದರಿಂದ ಆಧಾರ್ ದುರುಪಯೋಗವನ್ನು ತಪ್ಪಿಸಿಕೊಳ್ಳಬಹುದು. ಆಧಾರ್ ಪ್ರೊಫೈಲ್ ಅನ್ನು ಕ್ಯುಆರ್ ಕೋಡ್, ಬಾರ್‌ಕೋಡ್ ಮುಖಾಂತರ ಹಂಚಿಕೊಳ್ಳಲು ಸಾಧ್ಯವಿದೆ. ಅಲ್ಲದೇ ವಿವಿಧ ಟೆಲಿಕಾಂ ಕಂಪೆನಿಗಳು, ಗ್ಯಾಸ್ ಸಂಪರ್ಕ ಇತ್ಯಾದಿಗಳಿಗೆ ಬೇಕಾದ ಇಕೆವೈಸಿ (ಇಲೆಕ್ಟ್ರಾನಿಕ್ ನೋ ಯುವರ್ ಕಸ್ಟಮರ್) ಅನ್ನು ಸುಲಭವಾಗಿ ನೀಡಲು ಸಾಧ್ಯವಿದೆ.
ಆ್ಯಪ್ ಬಳಕೆ ಸುರಕ್ಷಿತವೇ?
ಆಧಾರ್ ಆ್ಯಪ್‌ನ ಉದ್ದೇಶ ಮೊಬೈಲ್ ಮೂಲಕ ಕೂಡಲೇ ಆಧಾರ್ ಮಾಹಿತಿಯನ್ನು ಹಂಚಿಕೊಳ್ಳುವುದನ್ನು ಸುಲಭಗೊಳಿಸುವ ಯತ್ನ. ಆಧಾರ್ ಮಾಹಿತಿ ಹಂಚುವಿಕೆಗೂ ಮೊದಲು ಆ್ಯಪ್‌ಗೆ ಬಳಕೆದಾರರು ನೀಡಿದ ಪಾಸ್‌ವರ್ಡ್ ಅನ್ನು ನಮೂದಿಸಬೇಕು. ಪ್ರತಿ ಬಾರಿಯೂ ಬಳಕೆ ಮೊದಲು ಪಾಸ್‌ವರ್ಡ್ ಹಾಕಬೇಕಿರುತ್ತದೆ. ಇದರಿಂದ ಒಂದು ವೇಳೆ ಮೊಬೈಲ್ ಕಳೆದುಹೋದರೂ ಆಧಾರ್ ಮಾಹಿತಿ ಬೇರೆಯವರ ಪಾಲಾಗುವುದು ಸಾಧ್ಯವಿಲ್ಲ. ಜತೆಗೆ ಆಧಾರ್ ಬಯೋಮೆಟ್ರಿಕ್ ಮಾಹಿತಿಗಳು ಸೋರಿಕೆಯಾಗದಂತೆ ತಡೆಯಲು ಲಾಕ್-ಅನ್‌ಲಾಕ್ ವ್ಯವಸ್ಥೆ ಇದೆ. ಒಂದು ವೇಳೆ ಇದನ್ನು ಲಾಕ್ ಮಾಡಿದಲ್ಲಿ ಹೊಸ ಸೇವೆಗಳಿಗೆ ಆಧಾರ್ ಮಾಹಿತಿ ನೀಡಲು ಸಾಧ್ಯವಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್ ಮುಖ್ಯಸ್ಥೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.