ಅನ್ನದಾತೋ ಸುಖೀಭವ
Team Udayavani, May 16, 2020, 7:39 AM IST
“ವ್ಯವಸಾಯ ಅಂದರೆ ಏನು ಗೊತ್ತಾ…. ಅವ- ಸಾಯ… ಇವ -ಸಾಯ…. ಕೊನೆಗೆ, ಕುಟುಂಬದವರೆಲ್ಲರೂ ಸಾಯ… ಎಂದೇ ಅರ್ಥ’. ಮಂಡ್ಯ ಕಡೆಯ ರೈತನ ಮಗನೊಬ್ಬ ಹೀಗೆ ತನ್ನ ಸ್ನೇಹಿತರ ಮುಂದೆ ಹೇಳಿದ್ದು ಖಂಡಿತವಾಗಿ ತಮಾಷೆಗಾಗಿ ಅಲ್ಲ. ಆ ಮಾತು ಹೇಳುವಾಗ ಆತನ ಕಣ್ಣಲ್ಲಿ ಬೇಸರವಿತ್ತು. ಬಣ್ಣಿಸಲಾಗದ ವಿಷಾದವಿತ್ತು. ಕೃಷಿ ಸಾಲಕ್ಕೆ ಹೆದರಿ ಹಗ್ಗದ ಕುಣಿಕೆಗೆ ಕುತ್ತಿಗೆಯನ್ನು ಒಡ್ಡಿದ ತನ್ನ ಸಂಬಂಧಿಕರ, ಹಿರಿಯರ ಆಕ್ರಂದನವಿತ್ತು. ಹೌದು. ಇತ್ತೀಚಿನ ದಶಕಗಳಲ್ಲಿ ರೈತರ ಪರಿಸ್ಥಿತಿ ತೀರಾ ಹೈರಾಣಾ ಗಿದ್ದು ಸುಳ್ಳಲ್ಲ.
ಇದಕ್ಕೆ ನಿಸರ್ಗದ ಮೇಲೆ ಮಾನವ ಎಸಗಿದ ತಪ್ಪುಗಳು ಒಂದು ಕಾರಣವಾದರೆ, ಸರ್ಕಾರದ ದೂರದೃಷ್ಟಿಯಿಲ್ಲದ ನಡೆಗಳು, ಗೊತ್ತುಗುರಿಯಿಲ್ಲದ ಯೋಜನೆಗಳು ಮುಂತಾದವು ರೈತರ ಬದುಕನ್ನು ಮೂರಾಬಟ್ಟೆಯಾಗಿಸಿದ್ದವು. ರೈತರನ್ನು ಸಂಕಷ್ಟಗಳಿಂದ ಪಾರು ಮಾಡಲು ಸರ್ಕಾರಗಳು ನಾನಾ ಯೋಜನೆಗಳನ್ನು ಜಾರಿಗೊಳಿಸಿವೆ ಯಾದರೂ, ಅವುಗಳು ಕೆಲವು ಯಶಸ್ವಿಯಾದರೆ, ಕೆಲವು ಹೆಸರಿಗೆ ಮಾತ್ರ ಯೋಜನೆಗಳು ಎನ್ನುವಂತಾಗಿದ್ದು ಸುಳ್ಳಲ್ಲ. ಇದೆಲ್ಲವನ್ನೂ ಆಮೂಲಾಗ್ರವಾಗಿ ಅಧ್ಯಯನ ಮಾಡಿ, ರೈತರ ಸಮಸ್ಯೆ ಗಳಿಗೆ ಒಂದು ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಹೆಜ್ಜೆಯಿಡ ಲಾಗಿದೆ.
ಕೇವಲ ರೈತರಿಗೆ ಸಾಲ ನೀಡುವುದರಿಂದ ಏನೂ ಬದಲಾವಣೆ ಸಾಧ್ಯವಿಲ್ಲ ಎಂಬುದನ್ನು ತಿಳಿದಿರುವ ಕೇಂದ್ರ ಸರ್ಕಾರ, ಕೃಷಿಗೆ ಸಮಾ ನಾಂತರವಾಗಿರುವ ಅಥವಾ ಕೃಷಿಗೆ ಸಹಾಯಕವಾಗಿರುವ ಕ್ಷೇತ್ರಗಳ ಅಭಿವೃದ್ಧಿಗೂ ಕೈ ಹಾಕಲಾಗಿದೆ. ಕೃಷಿ ಮೂಲ ಸೌಕರ್ಯಾಭಿವೃದ್ಧಿಗೆ 1 ಲಕ್ಷ ಕೋಟಿ ರೂ. ಮೀಸಲಿಡಲು ತೀರ್ಮಾನಿಸಲಾಗಿದ್ದು, ಅದರ ಜೊತೆಯಲ್ಲೇ ಆಹಾರ ಸಂಸ್ಕರಣೆ ಕ್ಷೇತ್ರ, ಮೀನುಗಾರಿಕೆ, ಹೈನುಗಾರಿಕೆ ಗಳ ಅಭಿವೃದ್ಧಿಗೆ ಯೋಜನೆಗಳನ್ನು ಪ್ರಕಟಿಸಲಾಗಿದೆ. ಸ್ಥಳೀಯವಾಗಿ ಸಿಗುವ ಕೃಷಿ ಉತ್ಪನ್ನಗಳಿಗೆ ಜಾಗತಿಕ ಬ್ರಾಂಡ್ ಮೌಲ್ಯವನ್ನು ತಂದುಕೊಡಲು ಕ್ರಮ ಕೈಗೊಳ್ಳಲಾಗಿದೆ.
ಮತ್ತೂಂದೆಡೆ, ಜೇನು ಕೃಷಿ, ಗಿಡಮೂಲಿಕೆ ಕೃಷಿಯಲ್ಲಿ ತೊಡಗಿಸಿಕೊಳ್ಳುವ ರೈತರ ಮೊಗದಲ್ಲಿ ಮಂದಹಾಸ ತರಿಸುವ ಪ್ರಯತ್ನ ಮಾಡಲಾಗಿದೆ. ಇದರ ಜೊತೆಗೆ, ರೈತರ ಬೆಳೆಗಳ ಮಾರಾಟಕ್ಕೆ ಇದ್ದ ಅಡ್ಡಿಯಾದ ಲೈಸನ್ಸ್ – ಪರ್ಮಿಟ್‌ಗಳ ಸಂಸ್ಕೃತಿಯನ್ನು ಬದಲಾವಣೆ ಮಾಡಿ, ರೈತರು ತಾವು ಬೆಳೆದ ಕೃಷಿ ಉತ್ಪನ್ನಗಳನ್ನು ಸರಾಗವಾಗಿ ತಂದು ಮಾರಾಟ ಮಾಡಿ, ಉತ್ತಮ ಲಾಭ ಗಳಿಸಲು, ತಾವು ಬೆಳೆದ ಬೆಳೆಗಳನ್ನು ರಾಜ್ಯದಿಂದ ರಾಜ್ಯಕ್ಕೆ ಕೊಂಡೊಯ್ದು ಸರಾಗವಾಗಿ ಮಾರಾಟ ಮಾಡುವಂತೆ ಅನುಕೂಲಗಳನ್ನೂ ಕಲ್ಪಿಸಲು ತೀರ್ಮಾನಿಸಲಾಗಿದೆ. ಅದಕ್ಕಾಗಿ ಅಗತ್ಯ ಪದಾರ್ಥಗಳ ಕಾಯ್ದೆಗೆ ತಿದ್ದುಪಡಿ ತರಲು ನಿರ್ಧರಿಸಲಾಗಿದೆ.
ಇದರ ಜೊತೆಗೆ, ರೈತರು ಯಾವ ಹವಾಮಾನದಲ್ಲಿ ಯಾವ ಬೆಳೆ ಬೆಳೆದರೆ ಚೆನ್ನ, ಯಾವ ಬೆಳೆಗೆ ಮಾರುಕಟ್ಟೆಯಲ್ಲಿ ಇನ್ನು ಕೆಲವೇ ದಿನಗಳಲ್ಲಿ ಉತ್ತಮ ಬೆಲೆ ಬರುತ್ತದೆ, ಯಾವ ರೀತಿಯ ಬೆಳೆ ಬೆಳೆದರೆ ಉತ್ತಮ ಲಾಭ ಗಳಿಸಬಹುದು ಅಥವಾ ಈಗ ಬೆಳೆದಿರುವ ಬೆಳೆಯ ಗುಣಮಟ್ಟವ ನ್ನು ಎಷ್ಟರ ಮಟ್ಟಿಗೆ ಕಾಪಾಡಿಕೊಂಡರೆ ಅವು ಉತ್ತಮ ಬೆಲೆಗೆ ಮಾರಾಟ ವಾಗುತ್ತವೆ ಎಂಬಿತ್ಯಾದಿ ಮಾಹಿತಿಗಳು ರೈತನಿಗೆ ಮೊದಲೇ ಸಿಗುವಂತೆ ಮಾಡಲು ರಾಷ್ಟ್ರೀಯ ನೀತಿಯೊಂದನ್ನು ರೂಪಿಸಲು ನಿರ್ಧರಿಸಲಾ ಗಿದೆ. ಇವೆಲ್ಲವುಗಳಿಂದ ಮುಂದಿನ ದಿನಗಳಲ್ಲಿ ಕೃಷಿ ಕ್ಷೇತ್ರದ ಅಭಿವೃದ್ಧಿ ಯಲ್ಲಿ ಇದು ಖಂಡಿತವಾಗಿಯೂ ಮಹತ್ವದ ಪಾತ್ರ ವಹಿಸಲಿದೆ.
ಕಾಯ್ದೆಗೆ ತಿದ್ದುಪಡಿ: ರೈತನಿಗೆ ತಾನು ಬೆಳೆಯುವ ಬೆಳೆಯ ಬಗ್ಗೆ ಹಾಗೂ ಅದಕ್ಕೆ ಸಿಗುವ ಬೆಲೆಯ ಬಗ್ಗೆ ಒಂದು ಅಂದಾಜು ಇರುವಂತೆ ಮಾಡಲು ಹಾಗೂ ಕೃಷಿ ಕ್ಷೇತ್ರವನ್ನು ಸ್ಪರ್ಧಾತ್ಮಕವನ್ನಾಗಿಸಲು 1955ರ ಅಗತ್ಯ ಪದಾರ್ಥ ಗಳ ಕಾಯ್ದೆಗೆ ತಿದ್ದುಪಡಿ ತರಲಾಗುತ್ತದೆ. ಅದರನ್ವಯ, ಧಾನ್ಯ, ಖಾದ್ಯ ಎಣ್ಣೆ – ಎಣ್ಣೆ ಕಾಳುಗಳು, ದ್ವಿದಳ ಧಾನ್ಯಗಳು, ಈರುಳ್ಳಿ ಹಾಗೂ ಆಲೂಗೆಡ್ಡೆಗೆ ಸಂಬಂಧಿಸಿದ ನಿಯಮಗಳಲ್ಲಿ ಬದಲಾವಣೆ ತರಲಾಗುತ್ತದೆ. ಇವುಗಳ ದಾಸ್ತಾನಿನ ಮೇಲೆ ಯಾವುದೇ ನಿಬಂಧನೆಗಳಿರವು. ರಾಷ್ಟ್ರೀಯ ವಿಪತ್ತು ನಿರ್ವಹಣೆ ಸಂದರ್ಭಗಳಲ್ಲಿ ಮಾತ್ರ ಇವುಗಳ ದಾಸ್ತಾನಿನ ಬಗ್ಗೆ ಸರ್ಕಾರ ನಿಯಮಗಳನ್ನು ಜಾರಿಗೊಳಿಸುತ್ತದೆ. ಆದರೆ, ಇವುಗಳ ಪ್ರಾಸೆಸಿಂಗ್ ಘಟಕಗಳಿಗೆ, ರಫ್ತುದಾರರಿಗೆ ನಿಬಂಧನೆಗಳಿರುವುದಿಲ್ಲ.
* ಕೃಷಿಕರು ಎದುರಿಸುತ್ತಿರುವ ದೊಡ್ಡ ಸಮಸ್ಯೆಯೆಂದರೆ, ಸಂಸ್ಕರಣಾ ಕೇಂದ್ರಗಳು, ಕೊಯ್ಲಿನ ನಂತರ ಬೆಳೆಗಳನ್ನು ಸರಿಯಾಗಿ ಸಂಗ್ರಹಿಸುವ ಮೂಲ ಸೌಕರ್ಯಗಳ ಕೊರತೆ. ಇದುವರೆಗೆ ಸಣ್ಣ ಬೆಳೆಸಾಲಗಳಿಗೆ ಆದ್ಯತೆ ನೀಡಲಾಗಿದೆಯೇ ಹೊರತು, ದೀರ್ಘಾವಧಿಯ ಮೂಲ ಸೌಕರ್ಯ ನಿರ್ಮಾಣ ಮಾಡುವ ಹೂಡಿಕೆಗೆ ಗಮನ ನೀಡಿಲ್ಲ. ಇದನ್ನು ಗಮನದಲ್ಲಿಟ್ಟುಕೊಂಡು, ಮೂಲಸೌಕರ್ಯ ನಿರ್ಮಾಣ ಕ್ಕಾಗಿ 1 ಲಕ್ಷ ಕೋಟಿ ರೂ. ನೀಡಲು ಕೇಂದ್ರ ನಿರ್ಧರಿಸಿದೆ. ಕೃಷಿ ಸಹಕಾರ ಸಂಘಗಳು, ರೈತರ ಉತ್ಪಾದಕ ಸಂಸ್ಥೆಗಳು, ಕೃಷಿ ಉದ್ಯಮಿ ಗಳು, ಸ್ಟಾರ್ಟಪ್‌ಗ್ಳು ಇತ್ಯಾದಿಗಳಲ್ಲಿ ಮೂಲಸೌಕರ್ಯ ನಿರ್ಮಾಣ ಕ್ಕೆ ಕೂಡಲೇ ಹಣ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ. ಇಲ್ಲಿ ಸ್ಪರ್ಧಾತ್ಮಕ ವೆಚ್ಚದಲ್ಲಿ ಗುಣಮಟ್ಟ ಸಾಧಿಸುವುದು, ಕೃಷಿ ಕೇಂದ್ರಗಳ ಅಭಿವೃದ್ಧಿ ಪಡಿಸುವುದು ಇವೆಲ್ಲ ಕೇಂದ್ರದ ಉದ್ದೇಶಗಳು.
* ದೇಶದ ಆರ್ಥಿಕತೆಯನ್ನು ಮೇಲೆತ್ತಲು ಕೇಂದ್ರ ಸರ್ಕಾರ 20 ಲಕ್ಷ ಕೋಟಿ ರೂ. ಪ್ಯಾಕೇಜ್ ಘೋಷಿಸಿದೆ. ಆದರೆ ಕೊರೊನಾದಿಂದ ದಿಗ್ಬಂಧನಕ್ಕೊಳಗಾಗಿರುವ ಎರಡು ತಿಂಗಳ ಅವಧಿಯಲ್ಲೂ ಕೇಂದ್ರ ಹಲವು ರೀತಿಯಲ್ಲಿ ರೈತರಿಗೆ ನೆರವಾಗಿದೆ. ಅವು ಹೀಗಿವೆ: 1. ಕನಿಷ್ಠ ಬೆಂಬಲ ಬೆಲೆ ಮೂಲಕ 74,300 ಕೋಟಿ ರೂ. ಮೊತ್ತ ವೆಚ್ಚ ಮಾಡಿ ರೈತರ ಬೆಳೆಗಳನ್ನು ಖರೀದಿಸಲಾಗಿದೆ. 2. ಪ್ರಧಾನ ಮಂತ್ರಿ ರೈತ ನಿಧಿ (ಪಿಎಂ ಕಿಸಾನ್ ಫಂಡ್) ಯೋಜನೆಯಡಿ 18,700 ಕೋಟಿ ರೂ. ಗಳನ್ನು ವಿವಿಧ ಖಾತೆಗಳಿಗೆ ವರ್ಗಾಯಿಸಲಾಗಿದೆ. 3. ಪ್ರಧಾನಮಂತ್ರಿ ಫಸಲ್ ವಿಮಾ ಯೋಜನೆಯಡಿ ಅರ್ಜಿ ಸಲ್ಲಿಸಿದವರಿಗೆ ಇದುವರೆಗೆ ಒಟ್ಟು 6,400 ಕೋಟಿ ರೂ.ಗಳನ್ನು ನೀಡಲಾಗಿದೆ. ಈ ಕ್ರಮಗಳ ಮೂಲಕ ದಿಗ್ಬಂಧನದ ಅವಧಿಯಲ್ಲಿ ರೈತರನ್ನು ಪ್ರೋತ್ಸಾಹಿಸುವ ಯತ್ನ ಮಾಡಲಾಗಿದೆ.
* ಭಾರತೀಯ ರೈತರು ಎದುರಿಸುತ್ತಿರುವ ಮುಖ್ಯ ಸಮಸ್ಯೆಗಳಲ್ಲಿ ಅಸ್ಥಿರತೆಯೂ ಒಂದು. ಅಂದರೆ ತಾವು ಬಿತ್ತನೆ ಮಾಡುವಾಗ ಇರುವ ಬೆಲೆಯೇ, ಮಾರಾಟ ಮಾಡುವಾಗ ಇರುತ್ತದೆ ಎಂದಿಲ್ಲ ಅಥವಾ ಬಿತ್ತನೆ ಮಾಡುವಾಗ ಬೆಲೆಯ ಅಂದಾಜು ಸಿಕ್ಕುವುದಿಲ್ಲ. ಇದನ್ನು ಸರಿ ಮಾಡುವ ಉದ್ದೇಶದಿಂದ ಒಂದು ಕಾನೂನಿನ ಚೌಕಟ್ಟನ್ನು ನಿರ್ಮಿಸಲಾಗುತ್ತದೆ. ಇದರಿಂದ ರೈತರಿಗೆ ಹಲವು ಪ್ರಯೋಜನಗಳಿವೆ. ರೈತರು ತಮ್ಮ ಬೆಳೆಗಳ ಸಂಸ್ಕಾರಕರು, ಪ್ರಮಾಣ ಪರಿಶೋಧಕರು, ಬೃಹತ್ ಚಿಲ್ಲರೆ ವ್ಯಾಪಾರಿಗಳು, ರಫ್ತುದಾರರು ಇವರೆಲ್ಲರೊಂದಿಗೆ ಕಾನೂನಿನ ಚೌಕಟ್ಟಿನಲ್ಲೇ ವ್ಯವಹರಿಸಲು ಸಾಧ್ಯವಾಗುತ್ತದೆ. ರೈತರ ಸವಾಲುಗಳನ್ನು ತಗ್ಗಿಸುವುದು, ನಿರ್ದಿಷ್ಟ ಲಾಭ ಗಳಿಕೆ, ಗುಣಮಟ್ಟದ ಸ್ಥಿರೀಕರಣ ಮಾಡುವುದು, ಇವೆಲ್ಲವೂ ಸರ್ಕಾರ ತಯಾರು ಮಾಡುವ ಕಾನೂನು ಚೌಕಟ್ಟಿನ ವ್ಯಾಪ್ತಿಯಲ್ಲಿ ಬರುತ್ತವೆ.
* ರಾಷ್ಟ್ರೀಯ ಔಷಧೀಯ ಸಸ್ಯಗಳ ಮಂಡಳಿ (ಎನ್‌ಎಂಪಿಬಿ) ದೇಶದ 2.25 ಲಕ್ಷ ಹೆಕ್ಟೇರ್‌ಗಳಲ್ಲಿ ಗಿಡಮೂಲಿಕೆಗಳ ಬೆಳೆಗಳನ್ನು ಉತ್ತೇಜಿಸುತ್ತಿದೆ. ಇದನ್ನು ಹೆಚ್ಚುವರಿಯಾಗಿ, 1 ಲಕ್ಷ ಹೆಕ್ಟೇರ್ ಭೂಮಿಯಲ್ಲಿ ಬೆಳೆಯಲು ಹೊಸ ಯೋಜನೆಯನ್ನು ರೂಪಿಸಲಾ ಗಿದ್ದು ಇದಕ್ಕಾಗಿ 4,000 ಕೋಟಿ ರೂ.ಗಳನ್ನು ಮೀಸಲಿಡಲಾ ಗುತ್ತದೆ. ಇದರಿಂದ, ಈ ಕ್ಷೇತ್ರದಲ್ಲಿ ದುಡಿಯುವ ರೈತರಿಗೆ 5,000 ಕೋಟಿ ರೂ. ಆದಾಯವನ್ನು ನಿರೀಕ್ಷಿಸಲಾಗಿದೆ. ಅಲ್ಲದೆ, ಗಿಡಮೂಲಿಕೆಗಳನ್ನು ಅವು ಬೆಳೆಯುವ ಹೊಲಗಳು, ತೋಟಗಳಿಂದ ಮಾರುಕಟ್ಟೆಗೆ ತಲುಪಿಸಲು ಅತ್ಯುತ್ತಮ ವ್ಯವಸ್ಥೆಯನ್ನು ನಿರ್ಮಿಸಲಾಗುತ್ತದೆ. ಅವುಗಳಿಗೆ ಸ್ಥಳೀಯ ಮಂಡಿಗಳ ನೆರವನ್ನೂ ಒದಗಿಸಲಾಗುತ್ತದೆ. ಈ ಗಿಡಮೂಲಿಕೆಗಳನ್ನು ಜನೌಷಧಿಗೂ ಬಳಸುವ ಆಶಯವಿದೆ. ವಿಶೇಷವೆಂದರೆ, ಗಂಗಾ ನದಿಯ ಇಕ್ಕೆಲಗಳ 800 ಹೆಕ್ಟರ್‌ಗಳಲ್ಲಿ ಮೂಲಿಕೆಗಳನ್ನು ಬೆಳೆಯಲು ಎನ್‌ಎಂಪಿಬಿ ವತಿಯಿಂದ ಕ್ರಮ ಕೈಗೊಳ್ಳಲಾಗುತ್ತದೆ.
* ಪ್ರಾಣಿಗಳಿಗೆ ರೋಗಗಳು ಸಾಮಾನ್ಯ. ಅದರಲ್ಲೂ ಅವನ್ನು ತಡೆಗಟ್ಟದಿದ್ದರೆ ಅವುಗಳಿಂದ ಮನುಷ್ಯನಿಗೂ ಹಬ್ಬಿಕೊಳ್ಳುವ ಸಾಧ್ಯತೆಯಿರುತ್ತದೆ. ಅದರಲ್ಲೂ ನಮಗೆ ಹಾಲು ನೀಡುವ ಹಸು, ಎಮ್ಮೆಗಳ ಆರೋಗ್ಯದ ಬಗ್ಗೆ ಕಾಳಜಿಯಿರಲೇಬೇಕು. ಆದ್ದರಿಂದ ರಾಷ್ಟ್ರೀಯ ಪ್ರಾಣಿರೋಗ ನಿಯಂತ್ರಣ ಕಾರ್ಯಕ್ರಮವನ್ನು ಕೇಂದ್ರ ಜಾರಿ ಮಾಡಿದೆ. ಬಾಯಿ, ಕಾಲು ಹಾಗೂ ಜ್ವರದ ನಿಯಂತ್ರಣಕ್ಕೆ 13,343 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ. ಈ ಯೋಜನೆಯಹಸು, ಎಮ್ಮೆ, ಕುರಿ, ಮೇಕೆ, ಹಂದಿ ಸೇರಿ ಒಟ್ಟು 53 ಕೋಟಿ ಪ್ರಾಣಿಗಳನ್ನು ರೋಗ ನಿಯಂತ್ರಣಕ್ಕೊಳಪಡಿಸಲಾಗುತ್ತದೆ. ಅಂದರೆ ಪಾದ, ಬಾಯಿ ಹಾಗೂ ಬ್ರೂಸೆಲ್ಲಾಸಿಸ್ ಎಂಬ ಜ್ವರ ನಿಯಂತ್ರಣದ ಔಷಧ ನೀಡಲಾಗುತ್ತದೆ. ಇದುವರೆಗೆ 1.5 ಕೋಟಿ ಹಸುಗಳು ಹಾಗೂ ಎಮ್ಮೆಗಳನ್ನು ಗುರ್ತಿಸಿ, ಅವಕ್ಕೆ ಔಷಧ ನೀಡಲಾಗಿದೆ.
* ಗರಿಷ್ಠ ಪ್ರಮಾಣದಲ್ಲಿ ಹಾಲು ಉತ್ಪಾದಿಸಲು ದೇಶದ ಹಲವಾರು ಕಡೆ, ಖಾಸಗಿ ಹೂಡಿಕೆಗೆ ಅವಕಾಶವಿದೆ. ಈ ಕ್ಷೇತ್ರದಲ್ಲಿ ಹೂಡಿಕೆ ಮಾಡುವುದರಿಂದ ಉದ್ಯಮವೂ ಬೆಳೆಯುತ್ತದೆ, ವೃತ್ತಿಪರತೆಯೂ ಬರುತ್ತದೆ, ಉದ್ಯೋಗಾವಕಾಶಗಳೂ ಹೆಚ್ಚುತ್ತವೆ. ಇಂತಹ ಹೂಡಿಕೆಗಳಿಗೆ ಬೆಂಬಲ ನೀಡುವ ಉದ್ದೇಶ ಕೇಂದ್ರದ ಮುಂದಿದೆ. ಅಂದರೆ ಪಶು ಸಂಗೋಪನೆಯನ್ನು ಪ್ರೋತ್ಸಾಹಿಸುವುದು ಸರ್ಕಾರದ ಉದ್ದೇಶ. ಹಾಲು ಉತ್ಪನ್ನಗಳ ಸಂಸ್ಕರಣೆ, ಗುಣಮಟ್ಟ ವೃದ್ಧಿ, ಹಸುವಿನ ಆಹಾರ ತಯಾರಿ ಮೂಲಸೌಕರ್ಯಗಳು, ಇವೆಲ್ಲ ಸದ್ಯ ಖಾಸಗಿ ಹೂಡಿಕೆ ಮಾಡಬಹುದಾದ ಕ್ಷೇತ್ರಗಳು. ಇದಕ್ಕಾಗಿ ಪಶು ಸಂಗೋಪನೆ ಅಭಿವೃದ್ಧಿ ನಿಧಿಯಾಗಿ 15,000 ಕೋಟಿ ರೂ.ಗಳನ್ನು ಎತ್ತಿಡಲಾಗುತ್ತದೆ. ಪ್ರಾಣಿ ಸಾಕಣೆ ಕೇಂದ್ರ ನಿರ್ಮಾಣಕ್ಕೆ ಬೇಕಾದ ವಸ್ತುಗಳನ್ನು ರಫ್ತು ಮಾಡಲು, ಜಾಗ ಸಿದ್ಧ ಮಾಡುವವರಿಗೆ ಪ್ರೋತ್ಸಾಹವನ್ನೂ ನೀಡಲಾಗುತ್ತದೆ.
* ಮೊನ್ನೆ ಮೊನ್ನೆ ಪ್ರಧಾನಿ ಮೋದಿ, ವೋಕಲ್ ಫಾರ್ ಲೋಕಲ್ ಎಂದಿದ್ದರು. ಆ ಮೂಲಕ, ಸ್ಥಳೀಯ ಉತ್ಪನ್ನಗಳನ್ನು ಇನ್ನು ಗ್ಲೋಬಲ್ ಬ್ರಾಂಡ್ ಮಾಡಲು ಎಲ್ಲರೂ ಶ್ರಮಿಸಬೇಕೆಂದು ಕರೆ ನೀಡಿದ್ದರು. ಅದರನ್ವಯ, ಸ್ಥಳೀಯವಾಗಿ ಆಹಾರ ಸಿದ್ಧಪಡಿಸುವ ಎಂಎಫ್ ಇಗಳಿಗೆ (ಸೂಕ್ಷ್ಮಆಹಾರ ಉದ್ಯಮ) ಉತ್ತೇಜನ ನೀಡಲು 10,000 ಕೋಟಿ ರೂ. ಘೋಷಿಸಲಾಗಿದೆ. ಇದರಿಂದ 2 ಲಕ್ಷ ಎಂಎಫ್ಇಗಳು ಸ್ವಾವಲಂಬಿಯಾಗಲು, ಭಾರತೀಯ ಆಹಾರ ಸುರಕ್ಷಾ ಮತ್ತು ಗುಣಮಟ್ಟ ಪ್ರಾಧಿಕಾರದ ಮಾನದಂಡಗಳನ್ನು ಸರಿಗಟ್ಟಲು ಸಾಧ್ಯವಿದೆ. ರೈತ ಉತ್ಪಾದಕ ಸಂಸ್ಥೆಗಳು, ಸ್ವಸಹಾಯ ಸಂಘಗಳು, ಸಹಕಾರ ಸಂಘಗಳಿಗೆ ನೆರವಾಗುತ್ತದೆ. ವಲಯಾಧಾರಿತವಾಗಿಯೂ ನೆರವಾಗುತ್ತದೆ. ಉದಾಹರಣೆಗೆ ಉತ್ತರಪ್ರದೇಶದಲ್ಲಿ ಮಾವಿನ ಹಣ್ಣು, ಜಮ್ಮುಕಾಶ್ಮೀರದಲ್ಲಿ ಕೇಸರಿ, ಈಶಾನ್ಯ ರಾಜ್ಯಗಳಲ್ಲಿ ಬಿದಿರು, ಆಂಧ್ರಪ್ರದೇಶದಲ್ಲಿ ಮೆಣಸು, ತಮಿಳುನಾಡಿನಲ್ಲಿ ಮರಗೆಣಸು ಹೀಗೂ ನೆರವು ನೀಡಲು ಸಾಧ್ಯ.
* ಮೀನುಗಾರಿಕೆ ಉತ್ತೇಜನಕ್ಕೆ ಬಜೆಟ್ ಮಂಡನೆ ವೇಳೆ ನೀಡಲಾಗಿದ್ದ ನಾಲ್ಕು ವಾಗ್ಧಾನಗಳನ್ನು ಕಾಪಾಡಿಕೊಳ್ಳಲಾಗಿದೆ. ಅದರಂತೆ, ಮೀನುಗಾರರಿಗೆ ಸಿಹಿ ಸುದ್ದಿ ನೀಡಿರುವ ಕೇಂದ್ರ ಸರ್ಕಾರ, ಸೀಗಡಿ ಮೀನಿನ ಆಮದಿಗೆ ಶುದ್ಧತಾ ಪ್ರಮಾಣಪತ್ರ ಪಡೆಯಲು ಇದ್ದ ಗಡುವನ್ನು ಮೂರು ತಿಂಗಳುಗಳವರೆಗೆ ವಿಸ್ತರಿಸಿದೆ. ಎರಡನೆಯದಾಗಿ, ತಿಂಗಳು ತಡವಾದರೂ ಅದಕ್ಕೆ ಕ್ಷಮೆಯಿದೆ. ಮೂರನೆಯದ್ದಾಗಿ, ರದ್ದಾದ ಸರಕುಗಳಿಗೆ ಪ್ರತ್ಯೇಕ ಕೋಣೆಗಳನ್ನು ಮರು ಪಡೆಯಲು ಯಾವುದೇ ಹೆಚ್ಚುವರಿ ಶುಲ್ಕ ವಿಧಿಸಲಾಗುವು ದಿಲ್ಲ. ನಾಲ್ಕನೆಯದ್ದಾಗಿ, ಪ್ರತ್ಯೇಕ ವಾಸಕ್ಕೆ ದಾಖಲೆಗಳ ಪರಿಶೀಲನೆ, ನಿರಾಕ್ಷೇಪಣಾ ಪತ್ರ ನೀಡುವ ಅವಧಿಯನ್ನು 7 ದಿನಗಳಿಂದ 3 ದಿನಗಳಿಗೆ ಇಳಿಸಲಾಗಿದೆ. ಐದನೆಯದಾಗಿ, ಸೀಗಡಿಯನ್ನು ಬೆಳೆಸುವ 242 ಸಂಸ್ಥೆಗಳ ನೋಂದಣಿ ಮಾ.31ಕ್ಕೆ ಮುಗಿದಿದ್ದು, ಈ ಅವಧಿಯನ್ನು ಮೂರು ತಿಂಗಳು ವಿಸ್ತರಿಸಲಾಗಿದೆ.
* ಕೇಂದ್ರಸರ್ಕಾರ ಸದ್ಯದಲ್ಲೇ “ಪ್ರಧಾನಮಂತ್ರಿ ಮತ್ಸé ಸಂಪದ ಯೋಜನೆ’ಯನ್ನು (ಪಿಎಂಎಂಎಸ್‌ವೈ) ಜಾರಿ ಮಾಡಲಿದೆ. ಇದಕ್ಕೆ 20,000 ಕೋಟಿ ರೂ. ಮೀಸಲಿಡಲಾಗುವುದು. ಇದರಲ್ಲಿ 11,000 ಕೋಟಿ ರೂ. ಮೊತ್ತವನ್ನು ಸಮುದ್ರ ಮತ್ತು ಒಳನಾಡಿನ ಮೀನುಗಾರಿಕೆಗೆ, ಇನ್ನುಳಿದ 9,000 ಕೋಟಿ ರೂ. ಮೀನುಗಾರಿಕೆ ಕೇಂದ್ರಗಳು, ಮಾರುಕಟ್ಟೆ, ಸಂಸ್ಕರಣಾ ಸರಪಳಿಯ ಉತ್ತೇಜನ, ಹೊಸ ದೋಣಿ ಮುಂತಾದ ಚಟುವಟಿಕೆಗಳಿಗೆ ಬಳಸಲಾಗುತ್ತದೆ. ಮೀನುಗಾರಿಕೆಗೆ ನಿಷೇಧವಿರುವ ಸಮಯದಲ್ಲೂ ಮೀನುಗಾರರಿಗೆ ಸರ್ಕಾರದಿಂದ ಬೆಂಬಲ ನೀಡಲು ನಿರ್ಧರಿಸಲಾಗಿದೆ. ಖಾಸಗಿ ದೋಣಿಗಳಿಗೆ ವಿಮೆ ನೀಡಲಾಗುತ್ತದೆ. 5 ವರ್ಷದಲ್ಲಿ 70 ಲಕ್ಷ ಟನ್ ಮೀನು ಉತ್ಪಾದಿಸುವುದು, 55 ಲಕ್ಷ ಮಂದಿಗೆ ಉದ್ಯೋಗ ನೀಡಿ, ರಫ¤ನ್ನು 1 ಲಕ್ಷ ಕೋಟಿ ರೂ.ಗೆ ಏರಿಸುವ ಗುರಿಯನ್ನು ಈ ಯೋಜನೆಯಲ್ಲಿ ಅಳವಡಿಸಲಾಗಿದೆ.
* ಚಿಕ್ಕದಾದರೂ ಗಮನಾರ್ಹವಾದ ಉದ್ದಿಮೆಗಳಲ್ಲಿ ಜೇನು ಕೃಷಿಯೂ ಒಂದು. ಇದಕ್ಕೆ ಸಂಬಂಧಿಸಿದ ಚಟುವಟಿಕೆಗಳನ್ನು ಉತ್ತೇಜನಗೊಳಿಸುವ ನಿಟ್ಟಿನಲ್ಲಿ ಸರ್ಕಾರ 500 ಕೋಟಿ ರೂ.ಗಳ ನೆರವನ್ನು ಘೋಷಿಸಿದೆ. ಜೇನು ಹಾಗೂ ಅದರ ಉಪ ಉತ್ಪನ್ನವಾದ ಮೇಣದ ತಯಾರಿಕೆಗಾಗಿ ಅಂತರ್ಗತ ಜೇನು ಸಾಕಾಣಿಕೆ ಅಭಿವೃದ್ಧಿ ಕೇಂದ್ರಗಳು, ಜೇನು ಸಂಗ್ರಹ ಕೇಂದ್ರಗಳು, ಮಾರುಕಟ್ಟೆ ಮತ್ತು ಸಂಸ್ಕರಣಾ ಕೇಂದ್ರಗಳು, ಜೇನು ಇಳುವರಿ ನಂತರದ ಚಟುವಟಿಕೆಗಳ ನಿರ್ವಹಣೆ ಹಾಗೂ ಜೇನಿನ ಗುಣಮಟ್ಟ ಹೆಚ್ಚಿಸುವ ಚಟುವಟಿಕೆಗಳನ್ನು ನಿರ್ವಹಿಸಲು ಇದನ್ನು ಬಳಸಲಾಗುತ್ತ ದೆ. ಅದಲ್ಲದೆ, ಜೇನು ಹುಳುಗಳ ಪತ್ತೆ ಹಚ್ಚುವಿಕೆ ಕ್ರಮಗಳ ಅಭಿವೃದ್ಧಿ, ಈ ಕ್ಷೇತ್ರದಲ್ಲಿ ದುಡಿಯುವ ಮಹಿಳೆಯರ ಕ್ಷಮತೆ ಹೆಚ್ಚಿಸಲು ಕ್ರಮ, ಜೇನು ತಳಿ ಅಭಿವೃದ್ಧಿಗಾಗಿಯೂ ಈ ನಿಧಿ ಬಳಸಲಾಗುತ್ತದೆ.
* ಕೃಷಿ ಉತ್ಪನ್ನ ಮಾರುಕಟ್ಟೆ ಮಳಿಗೆಯಲ್ಲಿ (ಎಪಿಎಂಸಿ) ರೈತರು, ಪರವಾನಗಿ ಹೊಂದಿರುವವರಿಗಷ್ಟೇ ತಮ್ಮ ಬೆಳೆಗಳನ್ನು ಮಾರಾಟ ಮಾಡಲು ಅವಕಾಶವಿದೆ. ಆದರೆ, ಕೈಗಾರಿಕಾ ವಲಯಕ್ಕೆ ಇಂಥ ನಿರ್ಬಂಧವಿಲ್ಲ. ಹಾಗಾಗಿ, ಕೃಷಿ ಕ್ಷೇತ್ರದಲ್ಲಿ ರೈತರು ಬೆಳೆಯುವ ಬೆಳೆಗಳು ಸರಾಗವಾಗಿ ಮಾರುಕಟ್ಟೆಗೆ ತಲುಪುತ್ತಿಲ್ಲ. ಜೊತೆಗೆ, ರೈತರಿಗೆ ತಾವು ಬೆಳೆದ ಬೆಳೆಗಳಿಗೆ ಸೂಕ್ತ ಬೆಲೆಯೂ ಸಿಗುತ್ತಿಲ್ಲ. ಈ ಸಂಕಷ್ಟದಿಂದ ರೈತರನ್ನು ಪಾರು ಮಾಡಲು ಕೃಷಿ ಉತ್ಪನ್ನಗಳ ಮಾರಾಟಕ್ಕಾಗಿ ರಾಷ್ಟ್ರೀಯ ನೀತಿಯೊಂದನ್ನು ರೂಪಿಸಲು ಕೇಂದ್ರ ನಿರ್ಧರಿಸಿದೆ. ಇದರಡಿ ರೈತರು ತಮ್ಮ ಬೆಳೆಗಳಿಗೆ ಸೂಕ್ತ ವಾದ ಬೆಲೆಗೆ ಮಾರಾಟ ಮಾಡಬಹುದು. ತಮ್ಮ ಬೆಳೆಗಳನ್ನು ರಾಜ್ಯದಿಂದ ರಾಜ್ಯಕ್ಕೆ ಯಾವುದೇ ಕಾನೂನಾತ್ಮಕ ಅಡೆತಡೆಯಿಲ್ಲ ದೆ ಸಾಗಿಸಬಹುದು. ಉತ್ಪನ್ನಗಳ ಮಾರಾಟಕ್ಕಾಗಿ ಇ-ಟ್ರೇಡಿಂಗ್ ವ್ಯವಸ್ಥೆ ಜಾರಿಗೊಳಿಸಲಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.