ಶಿವಸೇನೆ ಸಂಸದ ರವೀಂದ್ರ ಗಾಯಕ್‌ವಾಡ್ ಏರಿಂಡಿಯಾ ಕಪ್ಪು ಪಟ್ಟಿಗೆ
Team Udayavani, Mar 24, 2017, 11:09 AM IST
ಮುಂಬಯಿ : ಏರಿಂಡಿಯಾ ಸಿಬಂದಿ ಮೇಲೆ ಹಲ್ಲೆಗೈದ ಆರೋಪದ ಮೇಲೆ ಎರಡು ಕೇಸುಗಳು ದಾಖಲಾದ ಒಂದು ದಿನದ ತರುವಾಯ, ಏರಿಂಡಿಯಾ ಸಿಬಂದಿ ವಿರುದ್ಧ ದುರ್ವರ್ತನೆ ತೋರಿದ್ದ ಶಿವಸೇನೆಯ ಉಸ್ಮಾನಾಬಾದ್ ಸಂಸದ ರವೀಂದ್ರ ಗಾಯಕ್‌ವಾಡ್ ಅವರನ್ನು ವಿಮಾನಯಾನ ಸಂಸ್ಥೆಯು ಕಪ್ಪು ಪಟ್ಟಿಗೆ ಸೇರಿಸಿದೆ. ಸಂಸದ ರವೀಂದ್ರ ಗಾಯಕ್‌ವಾಡ್ ಅವರು ಅತ್ಯಂತ ಆಘಾತಕಾರಿಯಾಗಿ ಏರಿಂಡಿಯಾ ಸಿಬಂದಿಯ ಮೇಲೆ ತಮ್ಮ ಚಪ್ಪಲಿಯಿಂದ ಹಲ್ಲೆ ನಡೆಸಿದ್ದರಲ್ಲದೆ ವಿಮಾನದಿಂದಲೇ ಆತನನ್ನು ಹೊರಗೆಸೆಯಲು ಯತ್ನಿಸಿದ್ದರು.
ಗಾಯಕವಾಡ್ ಅವರಿಗೆ ತತ್‌ಕ್ಷಣದಿಂದ ಜಾರಿಗೆ ಬರುವಂತೆ ಇನ್ನು ಮುಂದೆ ತತ್ ಏರಿಂಡಿಯಾ ವಿಮಾನದಲ್ಲಿ ಪ್ರಯಾಣಿಸುವುದಕ್ಕೆ ಅವಕಾಶ ನೀಡದಿರಲು ಅವರನ್ನು ಕಪ್ಪು ಪಟ್ಟಿಗೆ ಸೇರಿಸಲಾಗಿದೆ ಎಂದು ಏರಿಂಡಿಯಾ ಅಧಿಕಾರಿಯೋರ್ವರು ದೃಢೀಕರಿಸಿದ್ದಾರೆ. ಆದರೆ ಎಷ್ಟು ಕಾಲದ ಮಟ್ಟಿಗೆ ಅವರನ್ನು ಕಪ್ಪು ಪಟ್ಟಿಗೆ ಸೇರಿಸಲಾಗಿದೆ ಎಂಬಿತ್ಯಾದಿ ವಿವರಗಳು ಇನ್ನಷ್ಟೇ ಗೊತ್ತಾಗಬೇಕಾಗಿದೆ.
ಅಂತಾರಾಷ್ಟ್ರೀಯ ಹಾಗೂ ಕೆಲವೊಂದು ಭಾರತೀಯ ಖಾಸಗಿ ವಿಮಾನ ಯಾನ ಸಂಸ್ಥೆಗಳಲ್ಲಿ ಸುರಕ್ಷೆ ಹಾಗೂ ಭದ್ರತಾ ಕಾರಣಗಳಿಗಾಗಿ ರೌಡಿ ಪ್ರಯಾಣಿಕರಿಗೆ ವಿಮಾನ ಪ್ರಯಾಣ ನಿಷೇಧ ಹೇರುವ ಕ್ರಮ ಈಗಾಗಲೇ ಜಾರಿಯಲ್ಲಿದೆ. ಆದರೆ ಸರಕಾರಿ ಒಡೆತನದ ಏರಿಂಡಿಯಾ ಇದೇ ಮೊದಲ ಬಾರಿಗೆ ದುರ್ವರ್ತನೆ ತೋರಿದ ಪ್ರಯಾಣಿಕನೋರ್ವನನ್ನು ಕಪ್ಪು ಪಟ್ಟಿಗೆ ಸೇರಿಸಿದೆ.
ಗಾಯಕ್‌ವಾಡ್ ಘಟನೆಯನ್ನು ಅನುಸರಿಸಿ ನಿನ್ನೆಯಷ್ಟೇ ಏರಿಂಡಿಯಾ ಸಂಸ್ಥೆ ಇತರ ವಿಮಾನಯಾನ ಸಂಸ್ಥೆಗಳನ್ನು ಅನುಸರಿಸಿ ತಾನು ಕೂಡ ಅಂಕೆತಪ್ಪುವ ಪ್ರಯಾಣಿಕರನ್ನು “ನೋ ಫ್ಲೈ’ ಲಿಸ್ಟ್ ಕ್ರಮವನ್ನು ಜಾರಿಗೆ ತರಲು ಚಿಂತಿಸುತ್ತಿರುವುದಾಗಿ ಹೇಳಿತ್ತು.
ಏರ್ ಇಂಡಿಯಾ ಸಿಬಂದಿಗೆ ಶಿವಸೇನೆ ಸಂಸದನ ಚಪ್ಪಲಿಯೇಟು
ಹೊಸದಿಲ್ಲಿ /ಮುಂಬಯಿ: ತನ್ನ ತಂದೆ ವಯಸ್ಸಿನ ಏರ್ ಇಂಡಿಯಾ ಸಿಬಂದಿಯನ್ನು ಕ್ಷುಲ್ಲಕ ಕಾರಣಕ್ಕಾಗಿ ಚಪ್ಪಲಿಯಿಂದ ಥಳಿಸಿದ್ದಲ್ಲದೆ, ‘ನಾನು ಅವನಿಗೆ 25 ಬಾರಿ ಚಪ್ಪಲಿಯಿಂದ ಹೊಡೆದೆ,” ಎಂದು ಉದ್ಧಟತನದ ಹೇಳಿಕೆ ನೀಡುವ ಮೂಲಕ ಶಿವಸೇನೆ ಸಂಸದ ರವೀಂದ್ರ ಗಾಯಕ್ವಾಡ್ ಉತ್ತರನ ಪೌರುಷ ಮೆರೆದಿದ್ದಾರೆ. ಪುಣೆಯಿಂದ ದಿಲ್ಲಿಗೆ ಬಂದ ಏರ್ ಇಂಡಿಯಾ ವಿಮಾನದಲ್ಲಿ ಗುರುವಾರ ಘಟನೆ ನಡೆದಿದ್ದು, ಬ್ಯುಸಿನೆಸ್ ಕ್ಲಾಸ್‌ನಲ್ಲಿ ಸೀಟು ಕೊಡಲಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ಏರ್ ಇಂಡಿಯಾದ 60 ವರ್ಷ ವಯಸ್ಸಿನ ಹಿರಿಯ ಡ್ಯೂಟಿ ಮ್ಯಾನೇಜರ್ ಶಿವಕುಮಾರ್‌ರನ್ನು ಶಿವಸೇನೆ ಸಂಸದ ರವೀಂದ್ರ ಗಾಯಕ್ವಾಡ್ ಚಪ್ಪಲಿಯಿಂದ ಥಳಿಸಿದ್ದಾರೆ. ಸಂಸದನ ದುಂಡಾ ವರ್ತನೆಗೆ ರಾಜಕೀಯ ವಲಯ ಸೇರಿದಂತೆ ದೇಶದ ಬಹುತೇಕ ಗಣ್ಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಪುಣೆಯಿಂದ ಹೊರಟಿದ್ದ ಏರ್ ಇಂಡಿಯಾ ವಿಮಾನ ಗುರುವಾರ ಬೆಳಗ್ಗೆ 10.30ಕ್ಕೆ ದಿಲ್ಲಿಯಲ್ಲಿ ಲ್ಯಾಂಡ್ ಆಗಿ, ಸಂಸದ ಗಾಯಕ್ವಾಡ್ ವಿಮಾನದಿಂದ ಇಳಿಯಲು ನಿರಾಕರಿಸಿದಾಗ ವಾಗ್ವಾದದ ಕಿಡಿ ಹೊತ್ತಿದೆ. ಸಂಪೂರ್ಣ ಎಕಾನಮಿ ಕ್ಲಾಸ್ ವ್ಯವಸ್ಥೆಯ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಗಾಯಕ್ವಾಡ್, ತಮ್ಮ ಬಳಿ ಓಪನ್ ಬ್ಯುಸಿನೆಸ್ ಕ್ಲಾಸ್ ಟಿಕೆಟ್ ಇರುವುದರಿಂದ ಅಲ್ಲಿ ಸೀಟು ನೀಡುವಂತೆ ಸಿಬಂದಿಯನ್ನು ಕೇಳಿದ್ದಾರೆ. ಇದಕ್ಕೆ ಸಿಬಂದಿ ನಿರಾಕರಿಸಿದಾಗ, “ನಾನೊಬ್ಬ ಸಂಸದ, ನನ್ನೆದುರು ಧ್ವನಿ ಏರಿಸಿ ಮಾತನಾಡಬೇಡ” ಎಂದು ಗದರಿದ್ದಾರೆ. ಇದಕ್ಕೆ ಉತ್ತರವಾಗಿ, “ಯಾವ ಸಂಸದ? ನಾನು ಈ ಬಗ್ಗೆ ಮೋದಿ ಅವರೊಟ್ಟಿಗೆ ಮಾತನಾಡುತ್ತೇನೆ,” ಎಂದು ಸಿಬಂದಿ ನುಡಿದಾಗ, ತಮ್ಮ ಕಾಲಲ್ಲಿದ್ದ ಚಪ್ಪಲಿ ತೆಗೆದುಕೊಂಡ ಗಾಯಕ್ವಾಡ್ ಸಿಬಂದಿ ಮೇಲೆ ಮನಸೋ ಇಚ್ಛೆ ಥಳಿಸಿದ್ದಾರೆ. ಇದೇ ಮೊದಲ ಬಾರಿ ಸಂಸದರಾಗಿ ಆಯ್ಕೆಯಾಗಿರುವ ರವೀಂದ್ರ ಗಾಯಕ್ವಾಡ್‌ರ ಈ ವರ್ತನೆ ಬಗ್ಗೆ, ಮಹಾರಾಷ್ಟ್ರದ ಬಿಜೆಪಿ – ಶಿವಸೇನೆ ಮೈತ್ರಿ ಸರಕಾರ ವಿಷಾದ ವ್ಯಕ್ತಪಡಿಸಿದೆ. “ಇಂಥ ದುರ್ವರ್ತನೆಯನ್ನು ಸಮರ್ಥಿಧಿಸಿಕೊಳ್ಳುವ ಪ್ರಶ್ನೆಯೇ ಇಲ್ಲ. ಚುನಾಯಿತ ಪ್ರತಿನಿಧಿಗಳು ಸಾರ್ವಜನಿಕರನ್ನು ಗೌರವಿಸುವುದನ್ನು ಮೊದಲು ಕಲಿಯಬೇಕು,” ಎಂದು ಬಿಜೆಪಿ ನಾಯಕಿ ಶೈನಾ ಎನ್‌ಸಿ ಹೇಳಿದ್ದಾರೆ. ಗಾಯಕ್ವಾಡ್ ಅವರನ್ನು ಸಂಸತ್‌ನಿಂದಲೇ ಉಚ್ಚಾಟಿಸುವಂತೆ ಎನ್‌ಸಿಪಿಯ ನವಾಬ್ ಮಲಿಕ್ ಆಗ್ರಹಿಸಿದ್ದಾರೆ. ಇತ್ತ ಶಿವಸೇನೆ ಅಧ್ಯಕ್ಷ ಉದ್ಧವ್ ಠಾಕ್ರೆ ಕೂಡ ಗಾಯಕ್‌ವಾಡ್‌ರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಕಪ್ಪುಪಟ್ಟಿಗೆ ಸಂಸದ: ಶಿವಸೇನೆ ಸಂಸದ ದುಂಡಾವರ್ತಿಗೆ ಅಕ್ಷರಶಃ ಕಂಗೆಟ್ಟ ಏರ್ ಇಂಡಿಯಾ ಘಟನೆಯ ಬಗ್ಗೆ ಸತ್ಯಾಂಶ ತಿಳಿಯಲು ಆಂತರಿಕ ತನಿಖಾ ಸಮಿತಿ ನೇಮಿಸಿದೆ. ಇದರ ಜತೆಗೆ ಗಾಯಕ್ವಾಡ್‌ರನ್ನು ಕಪ್ಪುಪಟ್ಟಿಗೆ ಸೇರಿಸಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಸರ್ಕಾರಿ ಸ್ವಾಮ್ಯದ ವಿಮಾನ ಸಂಸ್ಥೆಯಲ್ಲಿ ಪ್ರಯಾಣಿಸಲು ಅವಕಾಶ ಸಿಗಲಾರದು. ಪೊಲೀಸರು ದಾಖಲಿಸಿರುವ ಎಫ್ಐಆರ್‌ನಲ್ಲಿ ಸಂಸದರ ಹೆಸರೂ ಸೇರ್ಪಡೆಯಾಗಿದೆ. ಮತ್ತೂಂದು ಬೆಳವಣಿಗೆಯಲ್ಲಿ ಕ್ರುದ್ಧಗೊಂಡ ಸಂಸದ ರವೀಂದ್ರ ಗಾಯಕ್ವಾಡ್ ಸರ್ಕಾರಿ ಸ್ವಾಮ್ಯದ ವಿಮಾನ ಸಂಸ್ಥೆಯಲ್ಲಿನ ನ್ಯೂನತೆಗಳನ್ನು ಪಟ್ಟಿ ಮಾಡಿ ನಾಗರಿಕ ವಿಮಾನ ಖಾತೆ ಸಚಿವಾಲಯಕ್ಕೆ ಪತ್ರ ಬರೆದಿದ್ದಾರೆ.
ಹಿಂದಿನ ಘಟನಾವಳಿಗಳು
2015ರ ಆರಂಭ: ಚೆನ್ನೈ ಮೆಟ್ರೋ ರೈಲಿನಲ್ಲಿ ಸಹಪ್ರಯಾಣಿಕನ ಕೆನ್ನೆಗೆ ಬಾರಿಸಿದ್ದ ಡಿಎಂಕೆ ನಾಯಕ ಎಂ.ಕೆ. ಸ್ಟಾಲಿನ್.
ನವೆಂಬರ್ 2015: ಸಮಯಕ್ಕೆ ಸರಿಯಾಗಿ ವಿಮಾನ ಹೊರಡಲಿಲ್ಲ ಎಂಬ ಕಾರಣಕ್ಕೆ ಏರ್ ಇಂಡಿಯಾ ಸಿಬಂದಿ ಕೆನ್ನೆ ಬಿಸಿ ಮಾಡಿದ್ದ ವೈಎಸ್‌ಆರ್ ಕಾಂಗ್ರೆಸ್ ಸಂಸದ ಮಿಥುನ್ ರೆಡ್ಡಿ
ಜೂನ್ 2016: ಸಾರ್ವಜನಿಕರು ಪ್ರಶ್ನೆ ಕೇಳುವ ವೇಳೆ ತಮ್ಮ ಫೋಟೋ ತೆಗೆದ ವ್ಯಕ್ತಿಗೆ ಕಪಾಳಮೋಕ್ಷ ಮಾಡಿದ್ದ ಶಿವಸೇನೆ ಶಾಸಕ ಸದಾ ಸರ್ವಾಂಕರ್
ಫೆ. 2016: ಚಾಲನೆ ಮಾಡುವಾಗ ಕಾರು ನಿಲ್ಲಿಸಿದ ಮಹಿಳಾ ಟ್ರಾಫಿಕ್ ಕಾನ್‌ಸ್ಟೆಬಲ್ ಮೇಲೆ ಹಲ್ಲೆ ನಡೆಸಿದ ಶಿವಸೇನೆ ಮುಖಂಡ ಶಶಿಕಾಂತ್ ಕಲ್ಗುಡೆ
ಜೂನ್ 2016: ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಸಿಬಂದಿ ಕೆನ್ನೆಗೆ ಬಾರಿಸಿದ್ದ ಶಿವಸೇನೆ ಮುಖಂಡ ಪ್ರವೀಣ್ ಶಿಂದೆ
ಸಂಸದರು ಸಾರ್ವಜನಿಕವಾಗಿ ಎಚ್ಚರಿಕೆಯಿಂದ ವರ್ತಿಸಬೇಕು. ಏರ್ ಇಂಡಿಯಾ ಸಿಬ್ಬಂದಿ ಅಥವಾ ಸಾಮಾನ್ಯ ಜನರ ಮೇಲೆ ಸಂಸದರು ಹಲ್ಲೆ ನಡೆಸುವುದು ಅವರ ಸ್ಥಾನಕ್ಕೆ ಶೋಭೆಯಲ್ಲ. ನಮ್ಮ ಸಹೋದ್ಯೋಗಿ ಸಂಸದರು ತಪ್ಪೆಸಗಿದ್ದಾರೆ ಎಂಬುದರಲ್ಲಿ ಎರಡು ಮಾತಿಲ್ಲ.
– ಕಿರಿಟ್ ಸೋಮಯ್ಯ, ಬಿಜೆಪಿ ಸಂಸದ
ಕ್ಷೇತ್ರದಲ್ಲಿ ಉತ್ತಮ ನಡವಳಿಕೆಗೆ ಹೆಸರಾದ ಗಾಯಕ್ವಾಡ್, ವಿನಾಕಾರಣ ತಾಳ್ಮೆ ಕಳೆದುಕೊಳ್ಳುವ ವ್ಯಕ್ತಿಯಲ್ಲ. ಆದರೂ ಅವರ ಈ ವರ್ತನೆಗೆ ಕಾರಣ ತಿಳಿದುಕೊಳ್ಳುತ್ತೇವೆ. ಗಾಯಕ್ವಾಡ್ ಮಾತ್ರವಲ್ಲ, ಪಕ್ಷದ ಯಾವುದೇ ಸದಸ್ಯರ ಇಂಥ ವರ್ತನೆಯನ್ನು ಶಿವಸೇನೆ ಸಹಿಸದು.
– ಮನಿಶಾ ಕಾಯಂಡೆ, ಶಿವಸೇನಾ ವಕ್ತಾರೆ
ಈ ಘಟನೆ ಖಂಡನಾರ್ಹ. ಸಂಸದರ ವಿರುದ್ಧ ಕೂಡಲೇ ಕಠಿನ ಕ್ರಮ ಕೈಗೊಳ್ಳಲೇಬೇಕು. ಆದರೆ ಶಿವಸೇನೆ ಮುಖಂಡರು ಸಂಸದರ ಬಗ್ಗೆ ಅನುಕಂಪ ತೋರುವುದು ಸರಿಯಲ್ಲ. ಘಟನೆಗೆ ಶಿವಸೇನೆ ಮಾತ್ರವಲ್ಲ, ಆಡಳಿತಾರೂಢ ರಾಜ್ಯ ಸರಕಾರವೂ ಹೊಣೆಯಾಗಿದೆ.
– ಪ್ರಿಯಾಂಕ ಚತುರ್ವೇದಿ, ಕಾಂಗ್ರೆಸ್ ವಕ್ತಾರೆ
ಸಂಸದರಿಗಾಗಲಿ, ಸಾಮಾನ್ಯ ನಾಗರಿಕರಿಗಾಗಲಿ ಯಾರನ್ನೂ ದಂಡಿಸುವ ಅಧಿಕಾರವಿಲ್ಲ. ಸರ್ಕಾರಿ ಉದ್ಯೋಗಿಗಳಿಗೆ ಗೌರವ ನೀಡುವುದು ಸಂಸದರ ಕರ್ತವ್ಯ. ಸರ್ಕಾರಿ ಉದ್ಯೋಗಿಗಳನ್ನು ಎಲ್ಲರೂ ಮಾನವೀಯ ದೃಷ್ಟಿಯಿಂದ ನೋಡಬೇಕು ಎಂಬ ಮನವಿ ನನ್ನದು.
– ಆಸ್ಕರ್ ಫೆರ್ನಾಂಡಿಸ್, ಕಾಂಗ್ರೆಸ್ ಮುಖಂಡ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf; ಅಮಾನತುಲ್ಲಾ ಖಾನ್ ಗೆ ಜಾಮೀನು: ಮೋದಿಯ ಸುಳ್ಳು ಪ್ರಕರಣ ಬಹಿರಂಗ ಎಂದ ಆಪ್
Kochi airport; ಶಬರಿಮಲೆ ಭಕ್ತರಿಗೆ ಅನುಕೂಲವಾಗುವಂತೆ ವಿಶೇಷ ವ್ಯವಸ್ಥೆಗಳು
Maharashtra Election; ಫಡ್ನವಿಸ್ ಪತ್ನಿಯ ವಿರುದ್ಧ ಕನ್ಹಯ್ಯಾ ಕುಮಾರ್ ಹೇಳಿಕೆ
Modiji ಸಂವಿಧಾನವನ್ನು ಓದಲೇ ಇಲ್ಲ, ಹಾಗಾಗಿ…: ರಾಹುಲ್ ಗಾಂಧಿ
Kasturi Shankar: ನಟಿ ಕಸ್ತೂರಿ ಶಂಕರ್ ಜಾಮೀನು ಅರ್ಜಿ ವಜಾ; ಶೀಘ್ರ ಬಂಧನ ಸಾಧ್ಯತೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.