ರೈತರ ಆತಂಕ, ಸರಕಾರದ ಭರವಸೆಯ ನಡುವೆ…
Team Udayavani, Dec 8, 2020, 6:19 AM IST
ಸಾಂದರ್ಭಿಕ ಚಿತ್ರ
ಕೇಂದ್ರ ಸರಕಾರ ಇತ್ತೀಚೆಗೆ ಜಾರಿ ಮಾಡಿರುವ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಒಂದೆಡೆ ದೇಶಾದ್ಯಂತ ಪ್ರತಿಭಟನೆಗಳು ನಡೆಯುತ್ತಿವೆ, ಮಂಗಳವಾರ ದೇಶಾದ್ಯಂತ ಬಂದ್‌ಗೂ ಕರೆ ಕೊಡಲಾಗಿದೆ. ಈ ಪ್ರತಿಭಟನೆಗಳಿಗೆ ವಿಪಕ್ಷಗಳೂ ಕೈ ಜೋಡಿಸಿವೆ. ಇನ್ನೊಂದೆಡೆ ರೈತ ಒಕ್ಕೂಟಗಳು ಹಾಗೂ ಕೇಂದ್ರ ಸರಕಾರದ ನಡುವೆ ಡಿಸೆಂಬರ್ 9ರಂದು ಮತ್ತೂಂದು ಸುತ್ತಿನ ಮಾತುಕತೆಯೂ ನಡೆಯಲಿದೆ. ನೂತನ ಕಾಯ್ದೆಗಳ ವಿಚಾರದಲ್ಲಿ ರೈತರಿಗಿರುವ ಆತಂಕಗಳೇನು? ಸರಕಾರ ನೀಡುತ್ತಿರುವ ಭರವಸೆಯೇನು? ಮಾಹಿತಿ ಇಲ್ಲಿದೆ…
ಮೂರು ಕಾಯ್ದೆಗಳ ಜಾರಿ…
2020ರೊಳಗೆ ದೇಶದ ರೈತರ ಆದಾಯವನ್ನು ದ್ವಿಗುಣಗೊಳಿಸುವ ಹಾಗೂ ಕೃಷಿ ಮಾರುಕಟ್ಟೆಯ ವ್ಯಾಪ್ತಿಯನ್ನು ವಿಸ್ತರಿಸುವ ಉದ್ದೇಶದಿಂದ ಕೇಂದ್ರ ಸರಕಾರ ಸೆಪ್ಟಂಬರ್ ತಿಂಗಳಲ್ಲಿ ಕೃಷಿ ಉತ್ಪನ್ನ ವ್ಯಾಪಾರ ಮತ್ತು ವಾಣಿಜ್ಯ(ಉತ್ತೇಜನ ಮತ್ತು ಸೌಲಭ್ಯ) ಮಸೂದೆ-2020, ರೈತರ(ಸಶಕ್ತೀಕರಣ ಮತ್ತು ಸಂರಕ್ಷಣೆ) ಬೆಲೆ ಖಾತರಿ ಒಪ್ಪಂದದ ಭರವಸೆ ಮತ್ತು ಕೃಷಿ ಸೇವೆ 2020, ಅಗತ್ಯ ಸರಕುಗಳ(ತಿದ್ದುಪಡಿ)2020 ಕಾಯ್ದೆಗಳನ್ನು ಜಾರಿಗೆ ತಂದಿತು. ಈ ವಿಷಯವಾಗಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿಯವರು ಇದು ಭಾರತದ ಕೃಷಿ ಕ್ಷೇತ್ರದ “ಅಭೂತಪೂರ್ವ ಕ್ಷಣ’ ಎಂದರಷ್ಟೇ ಅಲ್ಲದೇ ದಶಕಗಳಿಂದಲೂ ದಲ್ಲಾಳಿಗಳ ಕಪಿಮುಷ್ಠಿಯಲ್ಲಿ ಸಿಲುಕಿರುವ ದೇಶದ ರೈತರನ್ನು ಇವು ಪಾರು ಮಾಡಲಿವೆ, ಇನ್ನು ಮುಂದೆ ಕೃಷಿ ಕ್ಷೇತ್ರ ಎದುರಿಸುತ್ತಿದ್ದ ಸಂಕಷ್ಟಗಳು ನಿವಾರಣೆಯಾಗಲಿವೆ ಎಂದಿದ್ದರು.
ಕೇಂದ್ರ ಹೇಳುವುದೇನು?
ಭಾರತದ ರೈತರು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಹಲವಾರು ನಿರ್ಬಂಧಗಳನ್ನು ಎದುರಿಸುತ್ತಿದ್ದರು. ಎಪಿಎಂಸಿ ಮಾರುಕಟ್ಟೆಯ ಹೊರಗೆ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಲು ಅನೇಕ ನಿರ್ಬಂಧಗಳಿದ್ದವು. ರೈತರು ಉತ್ಪನ್ನಗಳನ್ನು ರಾಜ್ಯ ಸರಕಾರಗಳ ನೋಂದಾಯಿತ ಪರವಾನಿಗೆದಾರರಿಗೆ ಮಾತ್ರ ಮಾರಾಟ ಮಾಡುವ ಅವಕಾಶವಿತ್ತು. ಇದಲ್ಲದೆ, ರಾಜ್ಯ ಸರಕಾರಗಳು ಜಾರಿಗೆ ತಂದ ವಿವಿಧ ಎಪಿಎಂಸಿ ಕಾಯ್ದೆಗಳಿಂದಾಗಿ ವಿವಿಧ ರಾಜ್ಯಗಳ ನಡುವೆ ಕೃಷಿ ಉತ್ಪನ್ನಗಳ ಮುಕ್ತ ಹರಿವಿನಲ್ಲಿ ಅಡೆತಡೆಗಳು ಅಸ್ತಿತ್ವದಲ್ಲಿದ್ದವು. ಕೃಷಿ ಉತ್ಪನ್ನ ವ್ಯಾಪಾರ ಮತ್ತು ವಾಣಿಜ್ಯ(ಉತ್ತೇಜನ ಮತ್ತು ಸೌಲಭ್ಯ) ಕಾಯ್ದೆಯು ದೇಶದ ಕೃಷಿ ಮಾರುಕಟ್ಟೆಗಳನ್ನು ಮುಕ್ತಗೊಳಿಸುವ ಒಂದು ಐತಿಹಾಸಿಕ ಹೆಜ್ಜೆಯಾಗಿದೆ. ಇದು ರೈತನಿಗೆ ಹೆಚ್ಚಿನ ಆಯ್ಕೆಗಳನ್ನು ಒದಗಿಸುತ್ತದೆ, ರೈತರಿಗೆ ಮಾರುಕಟ್ಟೆ ವೆಚ್ಚವನ್ನು ಕಡಿಮೆ ಮಾಡುತ್ತದೆ ಮತ್ತು ಉತ್ತಮ ಬೆಲೆಗಳನ್ನು ಪಡೆಯಲು ಸಹಾಯ ಮಾಡುತ್ತದೆ. ಹೆಚ್ಚುವರಿ ಉತ್ಪನ್ನಗಳನ್ನು ಹೊಂದಿರುವ ಪ್ರದೇಶಗಳ ರೈತರಿಗೆ ಉತ್ತಮ ಬೆಲೆಗಳನ್ನು ಪಡೆಯಲು ಮತ್ತು ಕೊರತೆಯಿರುವ ಪ್ರದೇಶಗಳ ಗ್ರಾಹಕರು ಕಡಿಮೆ ಬೆಲೆಗೆ ಪಡೆಯಲು ಇದು ಸಹಾಯ ಮಾಡುತ್ತದೆ. ಇನ್ನು ಅಗತ್ಯ ಸರಕುಗಳ ತಿದ್ದುಪಡಿ ಕಾಯ್ದೆಯು ರೈತರು ಕಂಪೆನಿಯೊಂದರ ಜತೆ ಲಿಖೀತ ಒಪ್ಪಂದಕ್ಕೆ ಸಹಿ ಹಾಕಲು ಅವಕಾಶ ನೀಡಿದೆ. ಕೃಷಿಕರು ಹಾಗೂ ವ್ಯಾಪಾರಸ್ಥರು ಎಪಿಎಂಸಿ ಹೊರತಾಗಿಯೂ ಅನ್ಯ ಕಡೆಗಳಲ್ಲಿ ಸುಲಭವಾಗಿ ತಮ್ಮ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಬಹುದಾದ ವಾತಾವರಣವನ್ನು ನಿರ್ಮಿಸುತ್ತದೆ. ರೈತರ (ಸಶಕ್ತೀಕರಣ ಮತ್ತು ಸಂರಕ್ಷಣೆ) ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ 2020 ರ ಒಪ್ಪಂದ ಕಾಯಿದೆಯೂ ಕೃಷಿ ವ್ಯವಹಾರಗಳಿಗೆ ರಾಷ್ಟ್ರೀಯ ಚೌಕಟ್ಟನ್ನು ಒದಗಿಸಲು ಪ್ರಯತ್ನಿಸುತ್ತದೆ. ಇದು ಕೃಷಿ-ವ್ಯಾಪಾರ ಸಂಸ್ಥೆಗಳು, ಸಂಸ್ಕರಣ ಘಟಕಗಳು, ಸಗಟು ವ್ಯಾಪಾರಿಗಳು, ರಫ್ತುದಾರರು ಅಥವಾ ದೊಡ್ಡ ಚಿಲ್ಲರೆ ವ್ಯಾಪಾರಿಗಳೊಂದಿಗೆ ತೊಡಗಿಸಿಕೊಳ್ಳಲು ರೈತರಿಗೆ ಅಧಿಕಾರ ನೀಡುತ್ತದೆ. ಭವಿಷ್ಯದ ಕೃಷಿ ಉತ್ಪನ್ನಗಳ ಸೇವೆಗಳು ಮತ್ತು ಮಾರಾಟವು ಪರಸ್ಪರ ಒಪ್ಪಿತ ಬೆಲೆ ಚೌಕಟ್ಟಿನಲ್ಲಿ ನ್ಯಾಯಯುತ ಮತ್ತು ಪಾರದರ್ಶಕ ರೀತಿಯಲ್ಲಿ ನಡೆಯಲು ಅನುವು ಮಾಡಿಕೊಡುತ್ತದೆ ಎನ್ನುವುದು ಕೇಂದ್ರ ಸರಕಾರದ ಭರವಸೆ.
ರೈತ ಸಂಘಟನೆಗಳ ವಾದವೇನು?
ಈ ಹೊಸ ಕಾಯ್ದೆಗಳು ಕೃಷಿ ವಲಯವನ್ನು ಕಾರ್ಪೊರೆಟ್ ತೆಕ್ಕೆಗೆ ಹಾಕುವ ಹುನ್ನಾರ, ಇದರಿಂದ ರೈತರ ಭವಿಷ್ಯ ಅತಂತ್ರವಾಗಲಿದೆ ಎನ್ನುವುದು ಆರೋಪ. ಮುಖ್ಯವಾಗಿ ಎಪಿಎಂಸಿ ಮಾರುಕಟ್ಟೆಯ ಹೊರಗೆ ವ್ಯಾಪಾರ ನಡೆದರೆ ರಾಜ್ಯ ಸರಕಾರಗಳಿಗೆ ಮಾರುಕಟ್ಟೆ ಶುಲ್ಕ ಅಥವಾ ಲೆವಿ ಸಂಗ್ರಹಿಸಲು ಸಾಧ್ಯವಾಗುವುದಿಲ್ಲ. ರಾಜ್ಯ ಸರಕಾರದ ಕಾನೂನು ಮತ್ತು ಮಾರುಕಟ್ಟೆ ಸಮಿತಿಯ ವ್ಯಾಪ್ತಿಗೂ ಇದು ನಿಲುಕ¨ªಾಗಿರುತ್ತದೆ. ಇದರಿಂದಾಗಿ ಕ್ರಮೇಣ ಸರಕಾರಿ ನಿಯಂತ್ರಿತ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಸ್ಥೆಯೇ ದುರ್ಬಲವಾಗಿಬಿಡುತ್ತದೆ. ಎಪಿಎಂಸಿಗಳು ಕೊನೆಗೊಂಡುಬಿಟ್ಟರೆ, ಕನಿಷ್ಠ ಬೆಂಬಲ ಬೆಲೆಯೂ ಮುಂದಿನ ದಿನಗಳಲ್ಲಿ ಹೊರಟುಹೋಗುತ್ತದೆ ಎನ್ನುವುದು ಅವರ ಆರೋಪ. ಈ ಕಾರಣಕ್ಕಾಗಿಯೇ, ಕನಿಷ್ಠ ಬೆಂಬಲ ಬೆಲೆ ವ್ಯವಸ್ಥೆಯ ಖಾತ್ರಿಯನ್ನು ಕಾನೂನಿನ ರೂಪದಲ್ಲಿ ಜಾರಿ ಮಾಡಿ ಎಂದು ಸರಕಾರವನ್ನು ಆಗ್ರಹಿಸಲಾಗುತ್ತಿದೆ.
ಸರಕಾರದ ಭರವಸೆ
ಕನಿಷ್ಠ ಬೆಂಬಲ ಬೆಲೆ ವ್ಯವಸ್ಥೆ ಹಾಗೂ ಕೃಷಿ ಉತ್ಪನ್ನ ಮಾರುಕಟ್ಟೆ ಮುಂದುವರಿಯಲಿದೆ. ಇದನ್ನು ಅಂತ್ಯಗೊಳಿಸುವ ಯಾವುದೇ ಯೋಜನೆ ಸರಕಾರದ ಮುಂದಿಲ್ಲ. ರೈತರಿಗೆ ಮುಕ್ತ ಮಾರುಕಟ್ಟೆ ಸಿಗಲಿದೆಯೇ ಹೊರತು ಯಾವುದೇ ಸಮಸ್ಯೆ ಆಗುವುದಿಲ್ಲ. ಇನ್ನು ರೈತರಿಂದ ಎಂಎಸ್‌ಪಿ ಮೇಲೆ ಬೆಳೆಗಳ ಖರೀದಿ ಮುಂದುವರಿಯುತ್ತದೆ ಎಂದು ಕೇಂದ್ರ ಸರಕಾರ ಸ್ಪಷ್ಟಪಡಿಸಿದೆ. ಆದರೆ ಕೇಂದ್ರವು ಕಾಯ್ದೆಗಳಲ್ಲಿ ಕೆಲವು ಲೋಪಗಳಿರುವುದನ್ನು ಒಪ್ಪಿಕೊಂಡಿದೆ ಎಂದು ರೈತ ಮುಖಂಡರು ಹೇಳುತ್ತಿದ್ದಾರೆ.
ಆತಂಕ ಬಗೆಹರಿಯಬೇಕು
ಕೃಷಿ ತಜ್ಞರೂ ಹೊಸ ಕಾಯ್ದೆಗಳ ವಿಚಾರದಲ್ಲಿ ಕೆಲವು ಸಂಶಯಗಳು ನಿವಾರಣೆಯಾಗಬೇಕು ಎನ್ನುತ್ತಿದ್ದಾರೆ. ರೈತರು ಕಂಪೆನಿಯೊಂದರ ಜತೆ ಒಪ್ಪಂದ ಮಾಡಿಕೊಂಡರೆ ನಿರ್ದಿಷ್ಟ ಗುಣಮಟ್ಟದ ಉತ್ಪನ್ನವನ್ನೇ ಖರೀದಿಸುತ್ತೇವೆ ಎಂಬ ನಿಯಮವೂ ಅದರಲ್ಲಿ ಇರಬಹುದು. ಒಂದು ವೇಳೆ ಆ ಬೆಳೆ ತಾನು ನಿಗದಿಪಡಿಸಿದ ಗುಣಮಟ್ಟ ಹೊಂದಿಲ್ಲ ಎಂದು ಖರೀದಿ ಸಂಸ್ಥೆಯು ನಿರಾಕರಿಸಿತೆಂದರೆ ರೈತರು ಸಂಕಷ್ಟಕ್ಕೆ ಸಿಲುಕುತ್ತಾರೆ. ಅಂಥ ಸಂದರ್ಭಗಳಲ್ಲಿ ರೈತರ ಸಹಾಯಕ್ಕೆ ಏನು ದಾರಿಗಳಿವೆ ಎನ್ನುವುದು ಅವರ ಪ್ರಶ್ನೆ. ಈ ವಿಚಾರವೂ ಡಿಸೆಂಬರ್ 9ರ ಮಾತುಕತೆಯಲ್ಲಿ ಚರ್ಚೆಯಾಗುವ ಸಾಧ್ಯತೆ ಇದೆ.
ಕಾಯ್ದೆಯಿಂದ ಹೋರಾಟದವರೆಗೂ…
ಜೂ. 5 ಕೃಷಿ ವಲಯದ ಆಮೂಲಾಗ್ರ ಸುಧಾರಣೆಗಾಗಿ ಮೂರು ಕೃಷಿ ಕಾಯ್ದೆಗಳಿಗೆ ಅನುಮೋದನೆ ನೀಡಿದ ಕೇಂದ್ರ ಕ್ಯಾಬಿನೆಟ್
ಜು. 26 ಅಖೀಲ ಭಾರತ ರೈತ ಸಂಘರ್ಷ ಸಮಿತಿಯಿಂದ ಪ್ರತಿಭಟನೆ. ಮುಖ್ಯವಾಗಿ ಪಂಜಾಬ್, ಹರಿಯಾಣ ಮತ್ತು ಉತ್ತರಪ್ರದೇಶದಲ್ಲಿ
ತೀವ್ರಗೊಂಡ ವಿರೋಧ
– ಸೆ. 20-22 ಸಂಸತ್ತಿನ ಎರಡೂ ಸದನಗಳಲ್ಲಿ ಪಾಸ್ ಆದ ಬಿಲ್‌ಗಳು, ಪ್ರತಿಭಟನಾರ್ಥವಾಗಿ ಹೆದ್ದಾರಿ ಮತ್ತು ರೈಲ್ವೇ ಟ್ರಾÂಕ್‌ಗಳನ್ನು ಬಂದ್ ಮಾಡಿದ ಪಂಜಾಬ್ ರೈತ ಗುಂಪುಗಳು
– ಅ. 14 ರೈತ ಸಂಘಟನೆಗಳು ಮತ್ತು ಕೇಂದ್ರದ ಮಧ್ಯೆ ಚರ್ಚೆ ನಡೆಸುವ ಮೊದಲ ಪ್ರಯತ್ನ. ಸಭೆಗೆ ಯಾವೊಬ್ಬ ಕೇಂದ್ರ ಸಚಿವರೂ ಹಾಜರಾಗದ ಕಾರಣ ಸಭೆ ವಿಫಲ.
– ಅ. 20-31 ಕೇಂದ್ರದ ಕೃಷಿ ಕಾಯ್ದೆಗಳನ್ನು ನಿರಾಕರಿಸಿ ಶಾಸನ ಜಾರಿ ಮಾಡಿದ ಪಂಜಾಬ್, ಛತ್ತೀಸ್‌ಗಢ ಮತ್ತು ರಾಜಸ್ಥಾನ ಸರಕಾರಗಳು.
– ನ. 13-23 ಕೇಂದ್ರ ಮತ್ತು ರೈತ ಸಂಘಟನೆಗಳ ಮಧ್ಯೆ ಮಾತುಕತೆಯ ಎರಡನೇ ಪ್ರಯತ್ನ. ರಾಜನಾಥ್ ಸಿಂಗ್, ಪಿಯೂಷ್ ಗೋಯಲ್ ಮತ್ತು ನರೇಂದ್ರ ಸಿಂಗ್ ತೋಮರ್ ನೇತೃತ್ವದಲ್ಲಿ ನಡೆದ ಸಭೆ. ರೈಲ್ವೇ ಟ್ರ್ಯಾಕ್‌ಗಳನ್ನು ತೆರವುಗೊಳಿಸಲು ನ 23ರಂದು ಒಪ್ಪಿಕೊಂಡ ರೈತ ಸಂಘಟನೆಗಳು. ಡಿ.3 ಕ್ಕೆ ಮುಂದಿನ ಸುತ್ತಿನ ಮಾತುಕತೆಗೆ ದಿನ ನಿಗದಿ.
– ನ. 26-29 ಹೊಸದಿಲ್ಲಿಯಲ್ಲಿ ಪಂಜಾಬ್‌ನ ರೈತ ಸಂಘಟನೆಗಳಿಂದ ಬೃಹತ್ ಪ್ರತಿಭಟನ ರ್ಯಾಲಿ ಆಯೋಜನೆ. ದೇಶದ ಅನೇಕ ರಾಜ್ಯಗಳ ರೈತ ಒಕ್ಕೂಟಗಳಿಂದ ಬೆಂಬಲ.
-ಡಿ. 3-4 ಯಾವುದೇ ಸ್ಪಷ್ಟ ನಿರ್ಣಯವಿಲ್ಲದೇ ಮುಗಿದ ಸಭೆ. ಡಿಸೆಂಬರ್ 9ಕ್ಕೆ ಮತ್ತೂಂದು ಸುತ್ತಿನ ಮಾತುಕತೆಗೆ ದಿನ ನಿರ್ಧಾರ. ಕೇಂದ್ರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಡಿಸೆಂಬರ್ 8ರಂದು ಭಾರತ ಬಂದ್ ನಡೆಸಲು ರೈತ ಸಂಘಟನೆಗಳಿಂದ ಘೋಷಣೆ. ದೇಶದ ಒಟ್ಟು 40ಕ್ಕೂ ಹೆಚ್ಚು ರೈತ ಒಕ್ಕೂಟಗಳು ಕರೆ ನೀಡಿರುವ ಭಾರತ ಬಂದ್‌ಗೆ ಕಾಂಗ್ರೆಸ್, ಆಪ್ ಸೇರಿದಂತೆ ಹಲವು ವಿಪಕ್ಷಗಳು ಬೆಂಬಲ ನೀಡಿವೆ. ಭಾರತ ಬಂದ್‌ಗೆ ಕರ್ನಾಟಕದಲ್ಲೂ ಬೆಂಬಲ ವ್ಯಕ್ತವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ambedkar Remarks: ಕನಸಲ್ಲೂ ಅಂಬೇಡ್ಕರ್‌ರನ್ನು ಅವಮಾನಿಸಿಲ್ಲ: ಅಮಿತ್ ಶಾ
Hydarabad: ಪುಷ್ಪ-2 ಚಿತ್ರದ ಪ್ರದರ್ಶನ ವೇಳೆ ಗಾಯಗೊಂಡಿದ್ದ ಬಾಲಕನ ಸ್ಥಿತಿ ಗಂಭೀರ
ನಾವು ಅಧಿಕಾರಕ್ಕೆ ಬಂದರೆ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಚಿಕಿತ್ಸೆ: ಕೇಜ್ರಿವಾಲ್
Noida: ಟಾಯ್ಲೆಟಲ್ಲಿ ರಹಸ್ಯ ಕ್ಯಾಮರಾ ಇಟ್ಟಿದ್ದ ಶಾಲಾ ನಿರ್ದೇಶಕ… ಪತ್ತೆ ಹಚ್ಚಿದ ಶಿಕ್ಷಕಿ
Mumbai: ಗೇಟ್‌ವೇ ಆಫ್ ಇಂಡಿಯಾ ಬಳಿ ಮುಳುಗಿದ 67 ಪ್ರಯಾಣಿಕರಿದ್ದ ಬೋಟ್… ರಕ್ಷಣಾ ತಂಡ ದೌಡು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.