Article 370: ಬಿಜೆಪಿಗೆ ಸಂತಸ: ರಾಹುಲ್, ಕೇಜ್ರಿ ಮೌನ
ಸ್ವಾಯತ್ತತೆ ವಿರೋಧಿ ಹೋರಾಟ ನಡೆದು ಬಂದ ಹಾದಿ- ಇಲ್ಲಿದೆ ಮಾಹಿತಿ
Team Udayavani, Dec 11, 2023, 11:44 PM IST
ಹೊಸದಿಲ್ಲಿ: 2019ರಲ್ಲಿ ಕೇಂದ್ರ ಸರಕಾರ 370ನೇ ವಿಧಿ ರದ್ದು ಮಾಡಿದ್ದನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿರುವುದು ಎನ್‌ಡಿಎ ಹಾಗೂ ಐಎನ್‌ಡಿಐಎ ಒಕ್ಕೂಟಕ್ಕೆ ತನ್ನದೇ ಆದ ಪರಿಣಾಮಗಳನ್ನು ಬೀರಲಿದೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಇದನ್ನು ಪೂರ್ಣಪ್ರಮಾಣದಲ್ಲಿ ಬಳಸಿಕೊಳ್ಳುವ ನಿರೀಕ್ಷೆಯಿದೆ. ಆದರೆ ಇನ್ನೊಂದು ಕಡೆ ಐಎನ್‌ಡಿಐಎ ಇಕ್ಕಟ್ಟಿಗೊಳಗಾಗಿದೆ.
ಬಿಜೆಪಿಗೆ ಏನಾಗಲಿದೆ?: 370ನೇ ವಿಧಿ ರದ್ದು ಆರ್‌ಎಸ್‌ಎಸ್‌ನ ಅತ್ಯಂತ ಹಳೆಯ ಸೈದ್ಧಾಂತಿಕ ಯೋಜನೆಗಳಲ್ಲಿ ಒಂದಾಗಿತ್ತು. 2019ರಲ್ಲಿ ಕೇಂದ್ರ ಸರಕಾರ 370ನೇ ವಿಧಿ ರದ್ದು ಮಾಡಿದ್ದನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿರುವುದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರದ ಪ್ರಮುಖ ರಾಜಕೀಯ ಜಯ ಎಂದೇ ಬಣ್ಣಿಸಲಾಗಿದೆ. 2024ರಲ್ಲಿ ಲೋಕಸಭೆ ಚುನಾವಣೆ ಮೇಲೆ ಇದು ಪರಿಣಾಮ ಬೀರುವ ಸಾಧ್ಯತೆಯಿದೆ.
ಇನ್ನೊಂದೆಡೆ, ಮುಂದಿನ ತಿಂಗಳು ಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿರ ಉದ್ಘಾಟನೆಯಾಗಲಿದೆ. ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಬಹು ದಿನಗಳಿಂದ ಹೇಳಿರುವಂತೆ ಒಂದೊಂದೇ ಯೋಜನೆಗಳನ್ನು ಕಾರ್ಯಗತಗೊಳಿಸುತ್ತಿದೆ. ಇವು ಕೇಸರಿ ಪಕ್ಷಕ್ಕೆ ಪ್ಲಸ್ ಪಾಯಿಂಟ್ ಆಗಲಿವೆ ಎನ್ನಲಾಗಿದೆ.
ಪ್ರತಿಕ್ರಿಯಿಸಿಲ್ಲ ರಾಹುಲ್, ಕೇಜ್ರಿವಾಲ್: ವಿಶೇಷ ಸ್ಥಾನಮಾನ ರದ್ದು ಮಾಡಿದ್ದು ತಪ್ಪೆಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಿಂದೆ ಬಲವಾಗಿ ಹೇಳಿದ್ದರು. ಜಮ್ಮುಕಾಶ್ಮೀರಕ್ಕೆ ರಾಜ್ಯದ ಸ್ಥಾನಮಾನ ಸಿಗಬೇಕೆಂದು ಒತ್ತಾಯಿಸಿದ್ದರು. ಸರ್ವೋಚ್ಚ ನ್ಯಾಯಾಲಯದ ತೀರ್ಪು ಬಂದ ಮೇಲೆ ಅವರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. 2019ರಲ್ಲಿ 370ನೇ ವಿಧಿ ರದ್ದತಿಯನ್ನು ಸಂಸತ್‌ನಲ್ಲಿ ಆಮ್ ಆದ್ಮಿ ಪಕ್ಷ ಬೆಂಬಲಿಸಿತ್ತು. ಈಗ ಅದೂ ಮೌನವಾಗಿದೆ. ಪ್ರಸ್ತುತ ಅದು ಐಎನ್‌ಡಿಐಎ ಭಾಗ ಎನ್ನುವುದನ್ನು ಇಲ್ಲಿ ಗಮನಿಸಬೇಕು. ಸೋಮವಾರದ ತೀರ್ಪು ಐಎನ್‌ಡಿಐಎ ಒಕ್ಕೂಟಕ್ಕೆ ಬಿಸಿತುಪ್ಪವಾಗಿದೆ. ಒಕ್ಕೂಟದ ಭಾಗವಾಗಿರುವ ಪಿಡಿಪಿ (ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ) ಮತ್ತು ಎನ್‌ಸಿ (ನ್ಯಾಷನಲ್ ಕಾನ್ಫರೆನ್ಸ್) ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ರದ್ದತಿಯನ್ನು ಬಲವಾಗಿ ವಿರೋಧಿಸಿವೆ. ಈ ಎಲ್ಲ ಪಕ್ಷಗಳನ್ನು ಸಂಬಾಳಿಸಿಕೊಂಡು ಹೋಗುವುದು ಐಎನ್‌ಡಿಐಎಗೆ ದೊಡ್ಡ ಸವಾಲಾಗಲಿದೆ.
ಹಕ್ಕು ಉಲ್ಲಂಘನೆ ತನಿಖೆ ಆಗಲಿ: ನ್ಯಾ| ಕೌಲ್
ಹೊಸದಿಲ್ಲಿ: ಜಮ್ಮು-ಕಾಶ್ಮೀರದಲ್ಲಿ 1980ರ ಬಳಿಕದಿಂದ ಉಂಟಾಗಿರುವ ಮಾನವ ಹಕ್ಕುಗಳ ಉಲ್ಲಂಘನೆಗಳ ವಿರುದ್ಧ ತನಿಖೆ ನಡೆಯಬೇಕು ಎಂದು ನ್ಯಾಯಪೀಠದಲ್ಲಿದ್ದ ನ್ಯಾ| ಸಂಜಯ ಕಿಶನ್ ಕೌಲ್ ಅಭಿಪ್ರಾಯಪಟ್ಟಿದ್ದಾರೆ. ಪ್ರತ್ಯೇಕ ಟಿಪ್ಪಣಿ ಬರೆದಿರುವ ಅವರು, ಸತ್ಯ ಮತ್ತು ಸಮನ್ವಯತೆಯ ಆಧಾರದಲ್ಲಿ ಈ ಸಮಿತಿ ಮಾನವ ಹಕ್ಕುಗಳ ಉಲ್ಲಂಘನೆಯ ಬಗ್ಗೆ ತನಿಖೆ ನಡೆಸಬೇಕೇ ಹೊರತು, ಸಾಮಾನ್ಯವಾಗಿ ಅಪರಾಧಗಳ ತನಿಖೆ ನಡೆಸುವಂತೆ ಅದರ ವಿಧಾನಗಳು ಇರಬಾರದು ಎಂದು ಅವರು ತಮ್ಮ ತೀರ್ಪಿನಲ್ಲಿ ಅಭಿಪ್ರಾಯಪಟ್ಟಿದ್ದಾರೆ. ಅದರಲ್ಲಿ ಸರಕಾರಗಳ ವತಿಯಿಂದ ಮತ್ತು ಇತರ ಪ್ರಮುಖ ವ್ಯಕ್ತಿ, ಸಂಘಟನೆಗಳಿಂದ ಉಂಟಾಗಿರುವ ಅನ್ಯಾಯಗಳ ವಿರುದ್ಧವೂ ತನಿಖೆ ನಡೆಸಬೇಕಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಲ್ಯಾಟಿನ್ ಅಮೆರಿಕ, ಆಫ್ರಿಕಾ ಖಂಡಗಳಲ್ಲಿ ಜನಾಂಗೀಯ ಹಿಂಸಾಚಾರ ಮುಕ್ತಾಯಗೊಂಡ ಬಳಿಕ ಅನ್ಯಾಯದ ವಿರುದ್ಧ ತನಿಖೆ ನಡೆಸಲು ಇಂಥ ಸಮಿತಿಗಳನ್ನು ನೇಮಿಸಲಾಗಿತ್ತು ಎಂದರು.
ವೈರಿಗಳ ವಿರುದ್ಧ ಹೋರಾಟಕ್ಕೆ: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ನಿರ್ವಹಿಸಲು ಸೇನೆಯನ್ನು ಬಳಸಬೇಕಾಗಿರುವುದಕ್ಕೆ ಅವರು ವಿಷಾದಿಸಿದ್ದಾರೆ. “ವೈರಿಗಳ ವಿರುದ್ಧದ ಹೋರಾಟ ನಡೆಸಲು ಸೇನೆಯನ್ನು ಬಳಕೆ ಮಾಡಬೇಕು. ಅದರ ಬದಲಾಗಿ ಜಮ್ಮು- ಕಾಶ್ಮೀರದಲ್ಲಿ ಜನರನ್ನು ನಿಯಂತ್ರಿಸಲು ಬಳಸುವುದು ತರವಲ್ಲ. ಆದರೆ ಅಲ್ಲಿ ಅದೇ ರೀತಿ ಮಾಡಲಾಗಿದೆ ಎಂದರು. ಮಕ್ಕಳು ಮತ್ತು ಮಹಿಳೆಯರು ಭಾರೀ ಬೆಲೆ ತೆತ್ತಿದ್ದಾರೆ ಎಂದು ವಿಷಾದಿಸಿದ್ದಾರೆ.
ವಕ್ರ ಒಕ್ಕೂಟ ವ್ಯವಸ್ಥೆ: ಮತ್ತೊಂದು ಪ್ರತ್ಯೇಕ ಅಭಿಪ್ರಾಯದ ಟಿಪ್ಪಣಿ ಬರೆದಿರುವ ನ್ಯಾ| ಸಂಜೀವ್ ಖನ್ನಾ ಅವರು 370ನೇ ವಿಧಿಯ ಅಂಶ ಜಾರಿಯಲ್ಲಿ ಇದ್ದರೆ ಅದು ವಕ್ರ ಒಕ್ಕೂಟ ವ್ಯವಸ್ಥೆಗೆ ಮಾದರಿಯಾಗಿ ಇರುತ್ತಿತ್ತು ಎಂದರು. ಅದನ್ನು ರದ್ದುಪಡಿಸಿದ್ದರಿಂದ ಒಕ್ಕೂಟ ವ್ಯವಸ್ಥೆಗೆ ಧಕ್ಕೆ ಆಗುವುದಿಲ್ಲ ಎಂದರು.
ಪಿಒಕೆ ಕೂಡ ನಮ್ಮದಾಗಲಿ
370ನೇ ವಿಧಿ ರದ್ದನ್ನು ನಾವು ಬಯಸಿದ್ದೆವು, ಬೆಂಬಲಿಸಿದ್ದೆವು. ಇದೀಗ ಅದನ್ನು ಎತ್ತಿಹಿಡಿಯುವ ಸುಪ್ರೀಂ ಕೋರ್ಟ್ ತೀರ್ಪನ್ನು ಸ್ವಾಗತಿಸುತ್ತಿದ್ದೇವೆ. ಕಣಿವೆ ಚುನಾವಣೆ ಶೀಘ್ರವೇ ನಡೆಯಲಿ ಎಂದು ಆಶಿಸುತ್ತಿದ್ದೇವೆ. ಅದರ ಜತೆಗೆ ಚುನಾವಣೆಗೂ ಮುನ್ನ ಪಾಕಿಸ್ತಾನ ಆಕ್ರಮಿತ ಕಾಶ್ಮೀರವೂ ನಮ್ಮದಾದರೆ ಇನ್ನೂ ಸಂತಸ.
-ಉದ್ದವ್, ಶಿವಸೇನೆ (ಯುಬಿಟಿ) ಮುಖ್ಯಸ್ಥ
ಮೋದಿ ಆಶಯ ಪೂರೈಸಿದೆ
ಮೋದಿ ಕಣಿವೆಯ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸುವ ಮೂಲಕ ದೇಶದ ಇತಿಹಾಸದಲ್ಲಿ ಹೊಸ ಅಧ್ಯಾಯವನ್ನು ಸೃಷ್ಟಿಸಿದ್ದು ಮಾತ್ರವಲ್ಲ , ಭಾರತದ ಸಮಗ್ರತೆ ಮತ್ತು ಏಕತೆಗೆ ಬಲವನ್ನೂ ನೀಡಿದ್ದರು. ಆ ಆಶಯವನ್ನು ಸುಪ್ರೀಂ ಕೋರ್ಟ್ ಇಂದು ಪುರಸ್ಕರಿಸಿದೆ.
-ರಾಜನಾಥ ಸಿಂಗ್, ಕೇಂದ್ರ ರಕ್ಷಣಾ ಸಚಿವ
ಶಾಶ್ವತ ಶಾಂತಿಸ್ಥಾಪನೆಯೇ ಆದ್ಯತೆ
ಜಮ್ಮುಕಾಶ್ಮೀರ, ಲಡಾಖ್‌ನಲ್ಲಿ ಶಾಶ್ವತ ಶಾಂತಿ ಸ್ಥಾಪಿಸುವುದು ನಮ್ಮ ಸರಕಾರದ ಪ್ರಮುಖ ಉದ್ದೇಶ ಹಾಗೂ ನಾವು ಅದಕ್ಕೆ ಬದ್ಧವಾಗಿದ್ದೇವೆ. ಏಕ ಭಾರತ- ಶ್ರೇಷ್ಠ ಭಾರತ ಎನ್ನುವ ತಣ್ತೀಕ್ಕೆ ಸುಪ್ರೀಂ ಕೋರ್ಟ್ ತೀರ್ಪು ಇಂಬು ನೀಡಿದೆ.
-ಯೋಗಿ ಆದಿತ್ಯನಾಥ್, ಉತ್ತರ ಪ್ರದೇಶ ಸಿಎಂ
ಹೋರಾಟ ಮುಂದುವರಿಸುತ್ತೇವೆ
ಸುಪ್ರೀಂ ಕೋರ್ಟ್ ತೀರ್ಪಿನಿಂದ ಜಮ್ಮು-ಕಾಶ್ಮೀರದ ಜನತೆ ಭರವಸೆ ಕಳೆದುಕೊಳ್ಳುವುದಿಲ್ಲ. ನಮ್ಮ ಘನತೆ ಮತ್ತು ಗೌರವಗಳಿಗಾಗಿ ನಡೆಸುತ್ತಿರುವ ಹೋರಾಟವನ್ನು ನಾವು ಮುಂದುವರಿಸುತ್ತೇವೆ. ವಿಧಿ ರದ್ದು ನಿರ್ಣಯ ನೇಣಿಗೆ ಸಮ.
-ಮೆಹಬೂಬಾ ಮುಫ್ತಿ, ಪೀಪಲ್ ಡೆಮಾಕ್ರಟಿಕ್ ಪಕ್ಷದ ಮುಖ್ಯಸ್ಥೆ
ಸ್ಥಾನಮಾನ ಮರುಸ್ಥಾಪಿಸುತ್ತೇವೆ
ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಲು ಬಿಜೆಪಿ ಸರಕಾರ ದಶಕಗಳ ಸಮಯ ತೆಗದುಕೊಂಡಿದೆ. ಈಗ ನಾವು ಅದಕ್ಕಿಂತ ಹೆಚ್ಚು ಸಮಯ ತೆಗೆದುಕೊಂಡರೂ ಸರಿಯೇ ಕಣಿವೆಯ ವಿಶೇಷ ಸ್ಥಾನಮಾನ ಮರು ಸ್ಥಾಪಿಸುತ್ತೇವೆ.
-ಓಮರ್ ಅಬ್ದುಲ್ಲಾ,
ನ್ಯಾಷನಲ್ ಕಾನ್ಫರೆನ್ಸ್ ಉಪಾಧ್ಯಕ್ಷ
ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದತಿಯನ್ನು ಪ್ರಶ್ನಿಸಿ ಇಬ್ಬರು ವಕೀಲರಾದ ಎಂ.ಎಲ್.ಶರ್ಮ, ಶಕೀರ್ ಶಬಿರ್ ಮೊದಲು ಅರ್ಜಿ ಸಲ್ಲಿಸಿದ್ದರು. ಅನಂತರ ನ್ಯಾಶನಲ್ ಕಾನ್ಫರೆನ್ಸ್ ಅದಕ್ಕೆ ಕೈಜೋಡಿಸಿತ್ತು. ರದ್ದತಿಯನ್ನು ಪ್ರಶ್ನಿಸಿದ ಅರ್ಜಿದಾರರು, ಅದಕ್ಕೆ ಕೇಂದ್ರ ಸರಕಾರ ನೀಡಿದ ಉತ್ತರಗಳು ಇಲ್ಲಿವೆ.
ಅರ್ಜಿದಾರರು ಹೇಳಿದ್ದೇನು?
1. 1951ರಿಂದ 1957ರವರೆಗೆ ಜಮ್ಮುಕಾಶ್ಮೀರ ಸಾಂವಿಧಾನಿಕ ರಚನಾ ಸಮಿತಿ ಅಸ್ತಿತ್ವದಲ್ಲಿತ್ತು. ಅದಕ್ಕೆ ವಿಶೇಷ ಸ್ಥಾನಮಾನವನ್ನು ರದ್ದು ಮಾಡಬೇಕೇ, ಬೇಡವೇ ಎಂದು ನಿರ್ಧರಿಸಲು ಅಧಿಕಾರವಿತ್ತು. ಅದು ನಿರ್ಧಾರ ತೆಗೆದುಕೊಳ್ಳದಿದ್ದರಿಂದ ವಿಶೇಷ ಸ್ಥಾನಮಾನ ಖಾಯಂ ಆಯಿತು. ಅನಂತರ 370ನೇ ವಿಧಿಯನ್ನು ಹಿಂತೆಗೆದುಕೊಳ್ಳಲು ಸಾಂವಿಧಾನಿಕ ಮಾರ್ಗವೇ ಉಳಿಯಲಿಲ್ಲ. ಸದ್ಯ ರಾಜಕೀಯಪ್ರೇರಿತವಾಗಿ ವಿಶೇಷ ಸ್ಥಾನಮಾನ ರದ್ದು ಮಾಡಲಾಗಿದೆ.
2 .ಭಾರತ ಮತ್ತು ಜಮ್ಮುಕಾಶ್ಮೀರದ ನಡುವೆ ಯಾವುದೇ ವಿಲೀನ ಒಪ್ಪಂದ ಆಗಿರಲಿಲ್ಲ. ಕೇವಲ ಸೇರ್ಪಡೆ ಒಪ್ಪಂದ ಮಾತ್ರ ಆಗಿತ್ತು. ಐಒಎ ಪ್ರಕಾರ ಆಂತರಿಕ ಸಾರ್ವಭೌಮತೆ ಕಳೆದುಹೋಗಿಲ್ಲ.
3. ಜಮ್ಮುಕಾಶ್ಮೀರಕ್ಕಾಗಿ ಕಾನೂನು ರೂಪಿಸುವ ಅಧಿಕಾರ ಸಂಸತ್ತಿಗೆ ಇಲ್ಲ ಎಂದು 370ನೇ ವಿಧಿ ಹೇಳುತ್ತದೆ.
4. ಜಮ್ಮುಕಾಶ್ಮೀರದ ರಾಜ್ಯಪಾಲರಿಗೆ ಶಾಸನಸಭೆಯನ್ನು ವಿಸರ್ಜನೆ ಮಾಡುವ ಅಧಿಕಾರವಿಲ್ಲ. ರಾಜ್ಯದ ಸಚಿವರ ಸಮಿತಿಯ ಸಲಹೆ ಬೇಕೇಬೇಕು.
5. ಸಂವಿಧಾನದ ವಿಧಿ 3ರ ಪ್ರಕಾರ ಹೊಸ ರಾಜ್ಯ ನಿರ್ಮಾಣ, ಪರಿಷ್ಕರಣೆ, ಗಡಿಮಿತಿಯನ್ನು ನಿರ್ಧರಿಸುವ ಮಸೂದೆಗಳನ್ನು ರಾಷ್ಟ್ರಪತಿಗಳು ಕಡ್ಡಾಯವಾಗಿ ಶಾಸನಸಭೆಗೆ ಕಳಿಸಲೇಬೇಕು. ಜಮ್ಮುಕಾಶ್ಮೀರದ ಮರುವಿಂಗಡಣೆ ಮಸೂದೆಯನ್ನು ಶಾಸನಸಭೆಗೆ ಕಳಿಸಿಯೇ ಇಲ್ಲ.
ಕೇಂದ್ರ ಸರಕಾರದ ಉತ್ತರ
1. ವಿಶೇಷ ಸ್ಥಾನಮಾನ ರದ್ದತಿ ವಿಚಾರದಲ್ಲಿ ರಾಷ್ಟ್ರಪತಿಗಳ ಘೋಷಣೆ ಸಂವಿಧಾನಕ್ಕೆ ಮಾಡಿದ ಮೋಸವಲ್ಲ. ಆ ವೇಳೆ ಎಲ್ಲ ಸಾಂವಿಧಾನಿಕ ಪ್ರಕ್ರಿಯೆಗಳನ್ನು ನಡೆಸಲಾಗಿದೆ.
2. ಹಿಂದಿನ ಜಮ್ಮುಕಾಶ್ಮೀರ ಭಾರತಕ್ಕೆ ಸೇರಿಕೊಳ್ಳುವಾಗ ಸಾರ್ವ ಭೌಮತೆಯನ್ನು ಬಿಟ್ಟುಕೊಟ್ಟಿತು. ಇಲ್ಲಿ ಅರ್ಜಿದಾರರು ಗೊಂದಲ ಹುಟ್ಟಿಸುತ್ತಿದ್ದಾರೆ.
3. ಮಹಾರಾಜ ಹರಿಸಿಂಗ್ ಪುತ್ರ ಕರಣ್ ಸಿಂಗ್ 1949ರಲ್ಲಿ ಘೋಷಣೆ ಹೊರಡಿಸಿದ್ದರು. ಅದರಲ್ಲಿ ಭಾರತದ ಸಂವಿಧಾನವನ್ನು ದೇಶ ಸದ್ಯದಲ್ಲೇ ಅಳವಡಿಸಿಕೊಳ್ಳಲಿದೆ. ಅದು ಜಮ್ಮುಕಾಶ್ಮೀರಕ್ಕೂ ಅನ್ವಯವಾಗುತ್ತದೆ. ಸಂವಿಧಾನದ ನಿಯಮಗಳು ಇಲ್ಲಿ ಜಾರಿಯಾದೊಡನೆ, ಅದು ನೀಡಿದ ಇತರೆಲ್ಲ ವಿನಾಯ್ತಿಗಳು ರದ್ದಾಗುತ್ತವೆ ಎಂದು ಕರಣ್ ಸಿಂಗ್ ಅವರೇ ಹೇಳಿದ್ದರು. ಇಲ್ಲೇ ಭಾರತದ ಸಂವಿಧಾನವನ್ನು ಪರಮೋಚ್ಚ ಎಂದು ಒಪ್ಪಿಕೊಳ್ಳಲಾಗಿದೆ.
4. ಭಾರತದ ಸಂವಿಧಾನ ರಚನಾ ಸಮಿತಿಯಂತೆ ಜಮ್ಮುಕಾಶ್ಮೀರದ ಸಂವಿಧಾನ ರಚನಾ ಸಮಿತಿ ಒಂದು ಪೂರ್ಣ ಪ್ರಮಾಣದ ವ್ಯವಸ್ಥೆಯಾಗಿರಲಿಲ್ಲ. ಅದು ರಚನೆಯಾಗುವಾಗಲೇ ಆ ರಾಜ್ಯದ ಸಾರ್ವಭೌಮತೆಯೂ ಇಲ್ಲವಾಗಿತ್ತು. ಆದ್ದರಿಂದ ಎರಡು ಸಂವಿಧಾನಗಳು ಇರಲು ಸಾಧ್ಯವೇ ಇಲ್ಲ.
5. ಜಮ್ಮುಕಾಶ್ಮೀರಕ್ಕೆ ನೀಡಲಾಗಿರುವ ಕೇಂದ್ರಾಡಳಿತ ಸ್ಥಾನಮಾನ ತಾತ್ಕಾಲಿಕ. ಆ ರಾಜ್ಯಕ್ಕೆ ರಾಜ್ಯದ ಸ್ಥಾನಮಾನ ಬರುವುದಕ್ಕೆ ಸಮಯ ಬೇಕು. ಅಲ್ಲಿ ಅದರದ್ದೇ ಆದ ಸಮಸ್ಯೆಗಳು ಇವೆ.
ಸ್ವಾಯತ್ತತೆ ವಿರೋಧಿ ಹೋರಾಟ ನಡೆದು ಬಂದ ಹಾದಿ
1947
ಭಾರತದೊಂದಿಗೆ ಜಮ್ಮು-ಕಾಶ್ಮೀರ ವಿಲೀನದ ಒಪ್ಪಂದಕ್ಕೆ ಮಹಾರಾಜ ಹರಿ ಸಿಂಗ್ ಸಹಿ.
1950
ಈ ವರ್ಷದ ಜ.26ರಂದು ಭಾರತದ ಸಂವಿಧಾನ ಅಸ್ತಿತ್ವಕ್ಕೆ. ಇದರಲ್ಲಿ 370ನೇ ವಿಧಿ ಕುರಿತು ಪ್ರಸ್ತಾಪ.
1950
370ನೇ ವಿಧಿ ಅಡಿ ಅಂದಿನ ರಾಷ್ಟ್ರಪತಿ ರಾಜೇಂದ್ರ ಪ್ರಸಾದ್ ಆದೇಶ. ಜಮ್ಮು ಕಾಶ್ಮೀರದಲ್ಲಿ ವಿದೇಶಾಂಗ, ರಕ್ಷಣೆ ಕ್ಷೇತ್ರಗಳಲ್ಲಿ ಕೇಂದ್ರಕ್ಕೆ ಅಧಿಕಾರ.
1951
ಅ.31ರಂದು 75 ಸದಸ್ಯರ ಜಮ್ಮು-ಕಾಶ್ಮೀರ ಸಂವಿಧಾನ ಸಭೆ ರಚನೆ. ಶೇಖ್ ಅಬ್ದುಲ್ಲಾ- ಜಮ್ಮುಕಾಶ್ಮೀರದ ಪ್ರಧಾನಿ.
1952
ಕೇಂದ್ರ ಸರಕಾರ ಮತ್ತು ಜಮ್ಮು-ಕಾಶ್ಮೀರ ಸರಕಾರಗಳ ನಡುವೆ ದೆಹಲಿ ಒಪ್ಪಂದಕ್ಕೆ ಸಹಿ.
1954
ಅಂದಿನ ರಾಷ್ಟ್ರಪತಿ ರಾಜೇಂದ್ರ ಪ್ರಸಾದ್ ಅವರಿಂದ 1954ರ ಮೇ 14ರಂದು ದೆಹಲಿ ಒಪ್ಪಂದದ ಅನುಷ್ಠಾನ.
1956
ನ.17ರಂದು ಜಮ್ಮು-ಕಾಶ್ಮೀರಕ್ಕೆ ಪ್ರತ್ಯೇಕ ಸಂವಿಧಾನ ಅಸ್ತಿತ್ವಕ್ಕೆ. ರಾಜ್ಯವು ಸದಾ ಭಾರತದ ಅವಿಭಾಜ್ಯ ಅಂಗವಾಗಿರಲಿದೆ ಎಂದು ಘೋಷಣೆ.
1959
ಎಲ್ಲಾ ಅಧ್ಯಕ್ಷೀಯ ಆದೇಶಗಳು ಸಂವಿಧಾನ ಸಭೆಯ ಅನುಮೋದನೆಗೆ ಒಳಪಟ್ಟಿರುತ್ತದೆ ಎಂದು ಸುಪ್ರೀಂ ತೀರ್ಪು.
1962
ಜಮ್ಮುಕಾಶ್ಮೀರದಲ್ಲಿ ತಿದ್ದುಪಡಿ ಮಾಡುವ ಅಧಿಕಾರ ರಾಷ್ಟ್ರಪತಿಗೆ ನೀಡಿ ಸುಪ್ರೀಂ ತೀರ್ಪು.
1968
ಸಂವಿಧಾನಿಕ ಸಭೆಯು ವಿಸರ್ಜನೆಗೊಂಡರೂ 370ನೇ ವಿಧಿಯು ಅಸ್ತಿತ್ವದಲ್ಲಿರುತ್ತದೆ ಎಂದು ಸುಪ್ರೀಂ ತೀರ್ಪು.
1972
370ನೇ ವಿಧಿಯಡಿ ಯಲ್ಲಿ ರಾಷ್ಟ್ರಪತಿಗಳು ಕೆಲವು ಪದಗಳ ವ್ಯಾಖ್ಯಾನವನ್ನು ತಿದ್ದುಪಡಿ ಮಾಡಲು ಅಧಿಕಾರ ಹೊಂದಿರುತ್ತಾರೆ ಎಂದು ಸುಪ್ರೀಂ ತೀರ್ಪು.
2018
ಪಿಡಿಪಿಗೆ ನೀಡಿದ್ದ ಬೆಂಬಲವನ್ನು ಬಿಜೆಪಿ ಹಿಂಪಡೆದ ಬಳಿಕ 2018ರ ಜೂ.20ರಂದು ರಾಜ್ಯಪಾಲರ ಆಳ್ವಿಕೆ ಆರಂಭ.
2018
2018ರ ಡಿ.19ರಂದು ರಾಮ ನಾಥ್ ಕೋವಿಂದ್‌ರಿಂದ ರಾಷ್ಟ್ರಪತಿ ಆಳ್ವಿಕೆ ಜಾರಿ.
2019
ಕೇಂದ್ರ ಸಂಪುಟದ ಅನು ಮೋದನೆಯೊಂದಿಗೆ 2019ರ ಜು.13ರಿಂದ 6 ತಿಂಗಳ ಕಾಲ ರಾಷ್ಟ್ರಪತಿ ಆಳ್ವಿಕೆ ವಿಸ್ತರಣೆ.
2019
ಆ.5ರಂದು 370ನೇ ವಿಧಿ ರದ್ದು ವಿಧೇಯಕಕ್ಕೆ ಸಂಸತ್ ಅನುಮೋದನೆ. ಆ.6ರಂದು ರಾಷ್ಟ್ರಪತಿಗಳಿಂದ ಈ ವಿಧೇಯಕದ ಅಂಗೀಕಾರ.
2019
ಆ.9ರಂದು ಜಮ್ಮು ಕಾಶ್ಮೀರ ಹಾಗೂ ಲಡಾಖ್ ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶಗಳು ಎಂದು ಘೋಷಿಸುವ ವಿಧೇಯಕಕ್ಕೆ ರಾಷ್ಟ್ರಪತಿ ಅಂಗೀಕಾರ.
2019
ಆ.28ರಂದು 370ನೇ ವಿಧಿ ರದ್ದುಪಡಿಸಿದ ರಾಷ್ಟ್ರಪತಿಗಳ ಆದೇಶ ಪ್ರಶ್ನಿಸಿ, ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಕೆ.
2020
ಅರ್ಜಿಯನ್ನು ದೊಡ್ಡ ಸಂವಿಧಾನ ಪೀಠಕ್ಕೆ ವರ್ಗಾವಣೆಗೆ ಸುಪ್ರೀಂ ಕೋರ್ಟ್‌ನ ಐವರು ನ್ಯಾಯಮೂರ್ತಿಗಳ ನ್ಯಾಯಪೀಠ ನಕಾರ.
2023
ಜು.3ರಿಂದ ಐವರು ನ್ಯಾಯಮೂರ್ತಿಗಳ ನ್ಯಾಯಪೀಠದ ಎದುರು ಅರ್ಜಿಯ ವಿಚಾರಣೆ.
2023
ಸುಪ್ರೀಂ ಕೋರ್ಟ್‌ನ ಸಂವಿಧಾನ ಪೀಠದಿಂದ ಆ.2ರಿಂದ ಅರ್ಜಿಯ ವಿಚಾರಣೆ ಆರಂಭ.
2023
ಸುಪ್ರೀಂ ಕೋರ್ಟ್‌ನ ಸಂವಿಧಾನ ಪೀಠದಿಂದ ಡಿ.11ರಂದು ಅಂತಿಮ ತೀರ್ಪು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.