![Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?](https://www.udayavani.com/wp-content/uploads/2025/02/6-20-415x249.jpg)
![Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?](https://www.udayavani.com/wp-content/uploads/2025/02/6-20-415x249.jpg)
Team Udayavani, Aug 21, 2022, 6:45 AM IST
ನವದೆಹಲಿ: ಅಬಕಾರಿ ಪ್ರಕರಣದಲ್ಲಿ ದೆಹಲಿ ಡಿಸಿಎಂ ಮನೀಷ್ ಸಿಸೋಡಿಯಾ ಅವರ ಹೆಸರು ಕೇಳಿಬಂದ ಬೆನ್ನಲ್ಲೇ ಬಿಜೆಪಿ ಮತ್ತು ಆಮ್ ಆದ್ಮಿ ಪಕ್ಷದ ನಡುವಿನ ವಾಗ್ಯುದ್ಧ ತೀವ್ರಗೊಂಡಿದೆ.
ಶನಿವಾರ ಬಿಜೆಪಿ ನಾಯಕರಾದ ಸಚಿವ ಅನುರಾಗ್ ಠಾಕೂರ್, ಮನೀಷ್ ತಿವಾರಿ ಮತ್ತಿತರರು ಆಪ್ ವಿರುದ್ಧ ಕೆಂಡಕಾರಿದ್ದಾರೆ.
“ಅವರು ಮನೀಷ್ ಸಿಸೋಡಿಯಾ ಅಲ್ಲ, “ಮನಿ’ “ಶ್’ ಸಿಸೋಡಿಯಾ. ಮೊದಲು ಹಣ ಮಾಡುತ್ತಾರೆ, ನಂತರ ಮೌನಕ್ಕೆ ಶರಣಾಗುತ್ತಾರೆ. ಕೇಜ್ರಿವಾಲ್ ಅವರೇ ಈ ಹಗರಣದ ಕಿಂಗ್‌ಪಿನ್’ ಎಂದು ಆರೋಪಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಸಿಸೋಡಿಯಾ, “ಆಪ್ ಸರ್ಕಾರದ ಉತ್ತಮ ಕೆಲಸಗಳೇ ಈ ರೀತಿ ಟಾರ್ಗೆಟ್ ಮಾಡಲು ಕಾರಣ’ ಎಂದಿದ್ದಾರೆ.
ಇನ್ನು, ದೆಹಲಿ ಕಾಂಗ್ರೆಸ್ ಶನಿವಾರ ಭಾರೀ ಪ್ರತಿಭಟನೆ ನಡೆಸಿದ್ದು, ಉಪಮುಖ್ಯಮಂತ್ರಿ ಸಿಸೋಡಿಯಾ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದೆ. ಇದೇ ವೇಳೆ, ಪ್ರಕರಣ ಸಂಬಂಧ ಕೆಲವು ಆರೋಪಿಗಳಿಗೆ ಸಿಬಿಐ ಸಮನ್ಸ್ ಜಾರಿ ಮಾಡಿದೆ.
ರೇವಡಿ-ಬೇವಡಿ ಸರ್ಕಾರ: ಬಿಜೆಪಿ
– ಆಪ್‌ನ ನಿಜಬಣ್ಣ ಬಯಲಾಗಿದೆ. ಸಿಬಿಐ ತನಿಖೆಯಲ್ಲೂ ರಾಜಕೀಯ ಮಾಡುವ ಮೂಲಕ ಆ ಪಕ್ಷ ಜನರ ದಾರಿ ತಪ್ಪಿಸುತ್ತಿದೆ.
– ಹಲವು ಚುನಾವಣೆಗಳಲ್ಲಿ ಆಮ್ ಆದ್ಮಿ ಪಕ್ಷವು ದೊಡ್ಡ ದೊಡ್ಡ ಘೋಷಣೆಗಳನ್ನು ಮಾಡಿದ್ದರೂ, ಪ್ರಧಾನಿ ನರೇಂದ್ರ ಮೋದಿಯವರ ಮುಂದೆ ಯಾವುದೂ ನಿಲ್ಲಲಿಲ್ಲ.
– 2014ಕ್ಕಿಂತ 2019ರ ಚುನಾವಣೆಯಲ್ಲಿ ಹೆಚ್ಚು ಸೀಟು ಗೆದ್ದಂತೆ, ಬಿಜೆಪಿ 2024ರ ಚುನಾವಣೆಯಲ್ಲೂ ಹೆಚ್ಚಿನ ಸ್ಥಾನಗಳಲ್ಲಿ ಜಯ ಗಳಿಸಲಿದೆ.
– ಆಪ್ ಸರ್ಕಾರ ಸಂಪುಟದ ಒಪ್ಪಿಗೆ ಪಡೆಯದೇ 144 ಕೋಟಿ ರೂ.ಗಳನ್ನು ಮದ್ಯದ ಕಂಪನಿಗಳಿಗೆ ಪಾವತಿಸಿದ್ದೇಕೆ ಎಂದು ಉತ್ತರಿಸಲಿ.
– ಪಂಜಾಬ್‌ನಿಂದ ದೆಹಲಿವರೆಗೂ ಆಪ್‌ನ ಭ್ರಷ್ಟಾಚಾರ ಎದ್ದು ಕಾಣುತ್ತಿದೆ. ಇದು ರೇವಡಿ(ಉಚಿತ ಕೊಡುಗೆಗಳು) ಮತ್ತು ಬೇವಡಿ (ಕುಡುಕರು) ಸರ್ಕಾರ.
– ಸಿಸೋಡಿಯಾ ಅವರು ಈ ಹಗರಣದಲ್ಲಿ ಆರೋಪಿ ನಂಬರ್ 1 ಆಗಿದ್ದರೆ, ಕೇಜ್ರಿವಾಲ್ ಅವರು ಇಡೀ ಹಗರಣದ ಕಿಂಗ್‌ಪಿನ್ ಆಗಿದ್ದಾರೆ.
ಮೋದಿ ವರ್ಸಸ್ ಕೇಜ್ರಿವಾಲ್: ಸಿಸೋಡಿಯಾ
– ಕೇಜ್ರಿವಾಲ್ ಅವರು ಪ್ರಧಾನಿ ಮೋದಿ ಅವರಿಗೆ “ರಾಷ್ಟ್ರೀಯ ಪರ್ಯಾಯ ನಾಯಕ’ನಾಗಿ ಹೊರಹೊಮ್ಮುತ್ತಿದ್ದಾರೆ. ಅದೇ ಕಾರಣಕ್ಕೆ ನಮ್ಮನ್ನು ಹೆದರಿಸಲಾಗುತ್ತಿದೆ
– 2024ರ ಲೋಕಸಭೆ ಚುನಾವಣೆಯು ಅರವಿಂದ ಕೇಜ್ರಿವಾಲ್ ಮತ್ತು ಪ್ರಧಾನಿ ಮೋದಿ ನಡುವಿನ ಸಮರವಾಗಿರಲಿದೆ.
– ಮೋದಿ ಮತ್ತು ಕೇಜ್ರಿವಾಲ್ ನಡುವಿನ ವ್ಯತ್ಯಾಸವೇನೆಂದರೆ, ಕೇಜ್ರಿವಾಲ್ ಬಡವರ ಪರ ಯೋಚಿಸುತ್ತಾರೆ, ಮೋದಿ ಶ್ರೀಮಂತರ ಬಗ್ಗೆಯಷ್ಟೇ ಯೋಚಿಸುತ್ತಾರೆ.
– ಮುಂದಿನ 3-4 ದಿನಗಳಲ್ಲಿ ಸಿಬಿಐ ಅಥವಾ ಇ.ಡಿ. ನನ್ನನ್ನು ಬಂಧಿಸಬಹುದು. ಆದರೆ ನಾವು ಹೆದರುವುದಿಲ್ಲ, ಏಕೆಂದರೆ ನಾವು ಭಗತ್‌ಸಿಂಗ್‌ರ ಅನುಯಾಯಿಗಳು.
– ಬಿಜೆಪಿಗೆ ಭ್ರಷ್ಟಾಚಾರದ ಬಗ್ಗೆ ಚಿಂತೆಯಿಲ್ಲ, ಬದಲಿಗೆ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಆಪ್ ಸರ್ಕಾರದ ಕೆಲಸವು ಜಗತ್ತಿನಾದ್ಯಂತ ಮೆಚ್ಚುಗೆ ಗಳಿಸಿರುವುದೇ ಈ ಹುನ್ನಾರದ ಹಿಂದಿನ ಮರ್ಮ.
– ಅದಕ್ಕಾಗಿಯೇ ಮೊದಲು ಆರೋಗ್ಯ ಸಚಿವ ಸತ್ಯೇಂದ್ರ ಜೈನ್‌ರನ್ನು ಬಂಧಿಸಿದರು, ಇನ್ನು ಸದ್ಯದಲ್ಲೇ ಶಿಕ್ಷಣ ಮಂತ್ರಿಯಾದ ನನ್ನನ್ನು ಬಂಧಿಸುತ್ತಾರೆ.
2024ರ ಲೋಕಸಭೆ ಚುನಾವಣೆಯಲ್ಲಿ ಮೋದಿ ವರ್ಸಸ್ ಕೇಜ್ರಿವಾಲ್ ಆದರೆ, ಬಿಜೆಪಿ ಮತ್ತಷ್ಟು ಸುಲಭದಲ್ಲಿ ಗೆಲುವು ಸಾಧಿಸಲಿದೆ. ಅನೇಕ ರಾಜ್ಯಗಳಲ್ಲಿ ಜನರಿಗೆ ಕೇಜ್ರಿವಾಲ್ ಯಾರೆಂದೇ ಗೊತ್ತಿಲ್ಲ. ಹಾಗಾಗಿ, ಬಿಜೆಪಿಯ ಸೀಟುಗಳು ಇನ್ನಷ್ಟು ಹೆಚ್ಚಳವಾಗುವುದರಲ್ಲಿ ಸಂಶಯವಿಲ್ಲ.
– ಹಿಮಾಂತ ಬಿಸ್ವ ಶರ್ಮಾ, ಅಸ್ಸಾಂ ಮುಖ್ಯಮಂತ್ರಿ
You seem to have an Ad Blocker on.
To continue reading, please turn it off or whitelist Udayavani.