ಮತ್ತೆ ಬೊಫೋರ್ಸ್ ಭೂತ: ಪ್ರಕರಣಕ್ಕೆ ಮರುಜೀವ ನೀಡಲು ಸಂಸದರ ಆಗ್ರಹ
Team Udayavani, Jul 15, 2017, 4:20 AM IST
ಹೊಸದಿಲ್ಲಿ: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಹೆಸರಿಗೆ ಅತಿದೊಡ್ಡ ಕಳಂಕ ತಂದಂಥ ಹಲವು ದಶಕಗಳ ಹಿಂದಿನ ಬೊಫೋರ್ಸ್ ಹಗರಣ ಮತ್ತೆ ಸದ್ದು ಮಾಡುವ ಲಕ್ಷಣಗಳು ಗೋಚರಿಸುತ್ತಿವೆ. ಮುಚ್ಚಿಹೋಗಿದ್ದ ಪ್ರಕರಣಕ್ಕೆ ಮರು ಜೀವ ನೀಡುವಂತೆ ಹಾಗೂ ಇದಕ್ಕೆ ಅವಕಾಶ ಕೋರಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಲು ಕೇಂದ್ರ ಸರಕಾರದ ಅನುಮತಿ ಪಡೆಯುವಂತೆ ಕೇಂದ್ರ ತನಿಖಾ ಸಂಸ್ಥೆಗೆ (ಸಿಬಿಐ) ಸಂಸದರಿಬ್ಬರು ಆಗ್ರಹಿಸಿದ್ದಾರೆ. ಒಂದು ವೇಳೆ, ಇವರು ಅಂದುಕೊಂಡಂತೆ ನಡೆದಿದ್ದೇ ಆದಲ್ಲಿ, ಕಾಂಗ್ರೆಸ್‌ಗೆ ಬಹುದೊಡ್ಡ ಆಘಾತ ಹಾಗೂ ಮುಖಭಂಗ ಆಗುವುದಂತೂ ಖಚಿತ ಎಂದು ಹೇಳಲಾಗಿದೆ.
ಗುರುವಾರವಷ್ಟೇ ನಡೆದ ರಕ್ಷಣಾ ವಿಚಾರಗಳನ್ನು ಪರಿಶೀಲಿಸುವ ಸಂಸ ದೀಯ ಸಮತಿ ಸಭೆಯಲ್ಲಿ ಬಿಜೆಪಿ ನಾಯಕ ನಿಶಿಕಾಂತ್ ದುಬೆ, ಬಿಜೆಡಿ ನಾಯಕ ಭಾತೃìಹರಿ ಮಹ್ತಾಬ್ ಸಹಿತ ಹಲವು ಸಂಸದರು ಈ ಬಗ್ಗೆ ಪ್ರಸ್ತಾವಿಸಿದ್ದಾರೆ. ಬೊಫೋರ್ಸ್ ಹಗರಣದ ವಿಚಾರಣೆ ರದ್ದುಗೊಳಿಸಿ 2005 ರಲ್ಲಿ ದಿಲ್ಲಿ ಹೈಕೋರ್ಟ್ ನೀಡಿರುವ ಆದೇಶವನ್ನು ಪ್ರಶ್ನಿಸಿ ಸಿಬಿಐ ಸುಪ್ರೀಂ ಕೋರ್ಟ್ ಮೆಟ್ಟಿಲೇರಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ. ಇದಕ್ಕಾಗಿ ಕೇಂದ್ರಕ್ಕೆ ಮನವಿ ಮಾಡುವಂತೆಯೂ ಸಿಬಿಐಗೆ ಸಲಹೆ ನೀಡಿದ್ದಾರೆ. ಬಳಿಕ, ಈ ಕುರಿತು ಏನು ಕ್ರಮ ಕೈಗೊಳ್ಳಲಾಯಿತು ಎಂದು ವಿವರಿಸಿ 2 ವಾರಗಳೊಳಗೆ ಸಂಸದೀಯ ಸಮಿತಿಗೆ ಪ್ರತಿಕ್ರಿಯೆ ಸಲ್ಲಿಸುವಂತೆ ಸಿಬಿಐಗೆ ಸೂಚಿಸಿದ್ದಾರೆ. ಬಿಜೆಪಿ ನಾಯಕರ ವಿರುದ್ಧ ಇರುವ ಅಯೋಧ್ಯೆ ವಿವಾದಿತ ಕಟ್ಟಡ ಧ್ವಂಸ ಪ್ರಕರಣಕ್ಕೆ ಮರುಜೀವ ಕೊಡಬಹುದು ಎಂದಾದರೆ, ಬೊಫೋರ್ಸ್ ಹಗರಣದ ವಿಚಾರಣೆಯನ್ನು ಏಕೆ ಮುಂದುವರಿಸಬಾರದು ಎಂದು ಇದೇ ವೇಳೆ ದುಬೆ ಪ್ರಶ್ನಿಸಿದ್ದಾರೆ ಎಂದು ದಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಅಪರಾಧಕ್ಕೆ ಹಿಡಿದ ಕನ್ನಡಿ: ‘ಬೊಫೋರ್ಸ್ ಪ್ರಕರಣವು ವ್ಯವಸ್ಥಿತ ವೈಫಲ್ಯ ಮತ್ತು ಅಪರಾಧಕ್ಕೆ ಹಿಡಿದ ಕನ್ನಡಿಯಾಗಿದೆ. ಹಾಗಾಗಿ, ಆ ಬಗ್ಗೆ ತನಿಖೆ ಹಾಗೂ ವಿಚಾರಣೆ ಮುಂದುವರಿಯಲೇಬೇಕು. ಇದಕ್ಕೆ ಸಿಬಿಐ ಸುಪ್ರೀಂ ಮೆಟ್ಟಿಲೇರಲೇಬೇಕು’ ಎಂದು ಸಂಸದರು ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೆ, ‘ನೀವು ಈ ಹಿಂದೆಯೇ ಏಕೆ ಸುಪ್ರೀಂ ಕೋರ್ಟ್‌ಗೆ ಹೋಗಲಿಲ್ಲ’ ಎಂದು ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ಅವರನ್ನು ಪ್ರಶ್ನಿಸಿದ್ದಾರೆ. ಇದಕ್ಕೆ ಅಲೋಕ್ ಅವರು, ‘ಸಿಬಿಐ ಈ ಹಿಂದೆಯೇ ಇಂತಹುದೊಂದು ಮನವಿ ಸಲ್ಲಿಸಲು ಮುಂದಾಗಿತ್ತು. ಆದರೆ, ಹಿಂದಿನ ಯುಪಿಎ ಸರಕಾರ ಅದಕ್ಕೆ ಒಪ್ಪಿಗೆ ನಿರಾಕರಿಸಿತ್ತು’ ಎಂದಿದ್ದಾರೆ ಎಂದು ಎನ್‌ಡಿಟಿವಿ ವರದಿ ಮಾಡಿದೆ. ಈ ವೇಳೆ, ಸಿಬಿಐ ಮುಖ್ಯಸ್ಥರಲ್ಲದೆ, ರಕ್ಷಣಾ ಕಾರ್ಯದರ್ಶಿ ಸಂಜಯ್ ಮಿತ್ರಾ ಅವರೂ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಮುಂದೆ ಹಾಜರಿದ್ದರು. 1986ರ ಬೊಫೋರ್ಸ್ ಹಾವಿಟ್ಜರ್ ಗನ್ ಒಪ್ಪಂದಕ್ಕೆ ಸಂಬಂಧಿಸಿದ ಆಡಿಟರ್ ವರದಿಯು 6 ಮಂದಿ ಸಂಸದರ ಸಮಿತಿಯ ಮುಂದಿರುವ ಅತ್ಯಂತ ಹಳೆಯ ವರದಿಯಾಗಿದೆ. ಇದೀಗ ಸಮಿತಿ, ಆ ವರದಿಯ ಪರಿಶೀಲನೆ ನಡೆಸುತ್ತಿದೆ.
ಸಂಪೂರ್ಣ ಮುಚ್ಚಿಹೋಗಿಲ್ಲ: 2005ರಲ್ಲಿ ದಿಲ್ಲಿ ಹೈಕೋರ್ಟ್ ಪ್ರಕರಣದ ವಿಚಾರಣೆ ರದ್ದುಗೊಳಿಸಿದ್ದರೂ ಪ್ರಕರಣ ಸಂಪೂರ್ಣವಾಗಿ ಮುಚ್ಚಿಹೋಗಿಲ್ಲ. 2016ರ ಡಿಸೆಂಬರ್‌ನಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ಈ ಕುರಿತು ಪ್ರಸ್ತಾವವಾಗಿತ್ತು. ಆಗ ಕೋರ್ಟ್‌ಗೆ ಹಾಜರಾಗಿದ್ದ ಸಿಬಿಐ, ‘ಹೈಕೋರ್ಟ್ ಆದೇಶ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲು ಯುಪಿಎ ಸರಕಾರ ಅನುಮತಿ ನೀಡಿರಲಿಲ್ಲ ಎಂದು ನುಡಿದಿತ್ತು.
ಏನಿದು ಬೊಫೋರ್ಸ್ ಹಗರಣ?
1987ರಲ್ಲಿ ಭಾರತ ಮತ್ತು ಸ್ವೀಡನ್ 1.4 ಶತಕೋಟಿ ಡಾಲರ್ ಮೊತ್ತದ ಶಸ್ತ್ರಾಸ್ತ್ರ ಖರೀದಿ ಒಪ್ಪಂದಕ್ಕೆ ಸಹಿ ಹಾಕಿದ್ದವು. ಅದರಂತೆ, ಸ್ವೀಡನ್‌ನ ಶಸ್ತ್ರಾಸ್ತ್ರ ಉತ್ಪಾದಕ ಕಂಪೆನಿಯಾದ ‘ಎ ಬಿ ಬೊಫೋರ್ಸ್’ ಭಾರತಕ್ಕೆ 400 ಹೊವಿಟ್ಜರ್ ಗನ್‌ಗಳನ್ನು ಪೂರೈಕೆ ಮಾಡಿತ್ತು. ಕಂಪೆನಿಯು ಈ ಮೊತ್ತದ ಎರಡು ಪಟ್ಟುಗಳಷ್ಟು ಪೂರೈಕೆಯ ಗುತ್ತಿಗೆ ಪಡೆಯಿತು. ಇದು ಸ್ವೀಡನ್ ಹಿಂದೆಂದೂ ನೋಡಿರದಷ್ಟು ದೊಡ್ಡ ಮೊತ್ತದ ಒಪ್ಪಂದವಾಗಿತ್ತು. ಆದರೆ 1987ರಲ್ಲಿ ಸ್ವೀಡನ್‌ನ ರೇಡಿಯೋವೊಂದು ಆಘಾತಕಾರಿ ಮಾಹಿತಿಯೊಂದನ್ನು ಬಿತ್ತರಿಸಿತು. ‘ಡೀಲ್ ಅನ್ನು ತನ್ನದಾಗಿಸಿಕೊಳ್ಳಲು ಬೊಫೋರ್ಸ್ ಕಂಪೆನಿಯು ಭಾರತದ ರಾಜಕಾರಣಿಗಳು ಹಾಗೂ ಪ್ರಮುಖ ರಕ್ಷಣಾ ಅಧಿಕಾರಿಗಳಿಗೆ ಬರೋಬ್ಬರಿ 640 ದಶಲಕ್ಷ ರೂ.ಗಳನ್ನು ಕಿಕ್‌ಬ್ಯಾಕ್ ರೀತಿ ನೀಡಿದೆ’ ಎಂಬ ಸುದ್ದಿ ಇದಾಗಿತ್ತು.
ಅಧಿಕಾರ ಕಳೆದುಕೊಂಡ ರಾಜೀವ್
ರೇಡಿಯೋದಲ್ಲಿ ಬಂದ ವರದಿಯಂತೆ, ಕಿಕ್‌ಬ್ಯಾಕ್ ಪ್ರಕರಣದಲ್ಲಿ ಇಟಲಿಯ ಉದ್ಯಮಿ ಒಟ್ಟಾವಿಯೋ ಕ್ವಟ್ರೋಚಿ ಮಧ್ಯವರ್ತಿಯಾಗಿ ಕೆಲಸ ಮಾಡಿದ್ದ ಎಂದು ಆರೋಪಿಸಲಾಗಿತ್ತು. ಕ್ವಟ್ರೋಚಿಯು ಆಗಿನ ಪ್ರಧಾನಿ ರಾಜೀವ್ ಗಾಂಧಿ ಕುಟುಂಬದ ಆಪ್ತನಾಗಿದ್ದ. ಇದು ಪ್ರಕರಣಕ್ಕೆ ಮಹತ್ವದ ತಿರುವು ನೀಡಿತು. ಆದರೆ, ಇದನ್ನು ಅಲ್ಲಗಳೆದಿದ್ದ ರಾಜೀವ್ ಅವರು, ಯಾವ ಮಧ್ಯವರ್ತಿಯೂ ಭಾಗಿಯಾಗಿರಲಿಲ್ಲ, ಕಿಕ್‌ಬ್ಯಾಕ್ ಅನ್ನೂ ಪಡೆದಿಲ್ಲ ಎಂದು ಲೋಕಸಭೆಯಲ್ಲಿ ಹೇಳಿದ್ದರು. ಆದರೆ, ಈ ಹಗರಣಕ್ಕಾಗಿ ಕಾಂಗ್ರೆಸ್ ಬಹುದೊಡ್ಡ ಬೆಲೆ ತೆರಬೇಕಾಯಿತು. 1989ರ ಲೋಕಸಭೆ ಚುನಾವಣೆಯಲ್ಲಿ ರಾಜೀವ್ ಅಧಿಕಾರ ಕಳೆದುಕೊಳ್ಳಬೇಕಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Henley Passport Index: ಸಿಂಗಾಪುರಕ್ಕೆ ಮೊದಲ ಸ್ಥಾನ: ಭಾರತದ ಪಾಸ್‌ಪೋರ್ಟ್ ಎಷ್ಟು ಸದೃಢ?
Dense Fog: ದೆಹಲಿ-ಲಖನೌ ಹೆದ್ದಾರಿಯಲ್ಲಿ ಸರಣಿ ಅಪಘಾತ, ವಿಮಾನ, ರೈಲು ಸಂಚಾರದಲ್ಲಿ ವ್ಯತ್ಯಯ
ಸೊಸೆಯಾಗಿ ಬರಬೇಕಾಗಿದ್ದವಳನ್ನೇ ಮದುವೆಯಾದ ಅಪ್ಪ… ಬೇಸರದಿಂದ ಸನ್ಯಾಸಿಯಾಗಲು ಹೊರಟ ಮಗ
Bhopal: ಬಿಜೆಪಿ ಮಾಜಿ ಶಾಸಕ ಸಿಂಗ್ ನಿವಾಸದ ಮೇಲೆ ಐಟಿ ದಾಳಿ; ನಗದು, 3 ಮೊಸಳೆ ಪತ್ತೆ!
ಪರೀಕ್ಷೆಯಿಂದ ತಪ್ಪಿಸಿಕೊಳ್ಳಲು 23ಶಾಲೆಗೆ ಬಾಂಬ್ ಬೆದರಿಕೆ ಹಾಕಿದ್ದ 12ನೇ ತರಗತಿ ವಿದ್ಯಾರ್ಥಿ
MUST WATCH
ಹೊಸ ಸೇರ್ಪಡೆ
Mangaluru: ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ
Vijayapura: ಕರ್ನಾಟಕ ಸಾವಿನ ಮನೆಯಾಗಿದೆ: ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ
Viral: ಇದು ಇರುವೆಗಳ ಎಂಜಿನಿಯರಿಂಗ್ ಕೌಶಲ್ಯ! ನೀರು ದಾಟಲು ಇರುವೆಗಳ ಸೇತುವೆ ನಿರ್ಮಾಣ
Indian Cricket: ಕ್ರಿಕೆಟ್ ಜೀವನಕ್ಕೆ ಗುಡ್ ಬೈ ಹೇಳಿದ ಆರ್‌ಸಿಬಿ ಮಾಜಿ ಆಟಗಾರ
Nature: ಶ್ರೀಮಂತನಾದರೂ, ಬಡವನಾದರೂ ಪ್ರಕೃತಿಗೆ ಅವಲಂಬಿಯೇ ಅಲ್ಲವೇ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.