ಹಣ ಎಲ್ಲಿಂದ ಬಂತು? ಎಲ್ಲಿಗೆ ಹೋಯಿತು?; ಬಜೆಟ್ ಎಂಬ ಸರ್ಕಸ್‌ನ ಸುತ್ತ…
Team Udayavani, Jan 30, 2020, 6:40 AM IST
ಇವತ್ತಿನ ಆರ್ಥಿಕ ಹಿಂಜರಿಕೆಗೆ ಇಳಿಕೆಯ ಹಾದಿಯಲ್ಲಿರುವ ಬೇಡಿಕೆಯೇ ಪ್ರಮುಖ ಕಾರಣ. ವೈಯಕ್ತಿಕ ಆದಾಯದಲ್ಲಿ ತೆರಿಗೆ ಕಡಿತವಾದರೆ ಜನರ ಜೇಬಲ್ಲಿ ಹೆಚ್ಚು ಹಣ ತುಂಬಲು ಸಾಧ್ಯ. ಹಣ ಹೆಚ್ಚು ತುಂಬಿದರೆ ಜನರು ಖರ್ಚಿಗೆ ಹಿಂದೆ ಮುಂದೆ ನೋಡುವುದಿಲ್ಲ. ಇದರ ಪರಿಣಾಮ ಬೇಡಿಕೆ ಹೆಚ್ಚಳವಾಗುತ್ತದೆ.
ಪ್ರತಿ ವರ್ಷದಂತೆ ಆಯವ್ಯಯ ಪಟ್ಟಿಯ ತಯಾರಿ, ಮಂಡನೆ ವಿತ್ತೀಯ ವರ್ಷದ ಪೂರ್ವದ ಪ್ರಕ್ರಿಯೆ. ಪಟ್ಟಿ ತಯಾರಾಗುತ್ತಿದೆ. ಮಂಡಿಸಲು ಕ್ಷಣಗಣನೆ ಆರಂಭವಾಗಿದೆ. ಸಾಮಾನ್ಯವಾಗಿ ಬಜೆಟ್ ಅನ್ನು ಫೆಬ್ರವರಿ ಕೊನೆಯ ವಾರದಲ್ಲಿ ಅಥವಾ ಮಾರ್ಚ್ ತಿಂಗಳ ಮೊದಲ ದಿನದಂದು ಮಂಡಿಸಲಾಗುತ್ತಿತ್ತು. ಜೊತೆಗೆ ಈ ಮೊದಲು ಬಜೆಟ್ ಮಂಡನೆ ಸಾಯಂಕಾಲ 5 ಗಂಟೆಯ ನಂತರ ವಿತ್ತ ಸಚಿವರು ಮಂಡಿಸುತ್ತಿದ್ದರು. ಈಗ ಮಂಡನೆ ಕಾರ್ಯ ಫೆಬ್ರವರಿ 1ಕ್ಕೆ ಆಗುತ್ತದೆ. ಅಲ್ಲದೆ ಬೆಳಗ್ಗೆಯೇ ನಡೆದುಹೋಗುತ್ತದೆ.
ಸರಕಾರವು ಆಯವ್ಯಯ ಪಟ್ಟಿಯ ಮೂಲಕ ತಾನು ಜನಸಾಮಾನ್ಯರಿಗೆ ಚುನಾವಣಾ ಪೂರ್ವದಲ್ಲಿ ನೀಡಿದ ಆಶ್ವಾಸನೆಯನ್ನು ಅಥವಾ ಭರವಸೆಯನ್ನು ಈಡೇರಿಸಲು ಬಳಸುವ ದಾರಿ. ಈ ಪಟ್ಟಿಯನ್ನು ತಯಾರಿಸುವ ಮೂಲಕ ಸರಕಾರವು ವಿತ್ತೀಯಶಿಸ್ತನ್ನು ಕಾಪಾಡಿಕೊಳ್ಳಲೂ ಪ್ರಯತ್ನಿಸುತ್ತದೆ.
ಹಣ ಎಲ್ಲಿಂದ ಬಂತು? ಎಲ್ಲಿಗೆ ಹೋಯಿತು? ಯಾರಿಂದ ಬಂತು? ಹೇಗೆ ಖರ್ಚಾಯಿತು? ಎಂಬೆಲ್ಲಾ ಲೆಕ್ಕಾಚಾರದ ಮೇಲೆ ಸಂಪೂರ್ಣ ಹಿಡಿತ ಸಾಧಿಸುವ ಪ್ರಯತ್ನ. ಈ ಪ್ರಕ್ರಿಯೆ ಇಲ್ಲದಿದ್ದರೆ ಎಲ್ಲವೂ ಅಸ್ತವ್ಯಸ್ತ. ಹೇಗೆ ಕುಟುಂಬದ ಯಜಮಾನ ತನ್ನ ಕುಟುಂಬದ ಆದಾಯ ಮತ್ತು ಖರ್ಚುಗಳ ಲೆಕ್ಕಾಚಾರವನ್ನು ಸರಿದೂಗಿಸುವ ಪ್ರಯತ್ನ ಮಾಡುತ್ತಾರೋ ಹಾಗೆಯೇ ಸರಕಾರದ ಆದಾಯ ಮತ್ತು ಖರ್ಚಿನ ಲೆಕ್ಕಾಚಾರವನ್ನು ಸರಿದೂಗಿಸುವ ಪ್ರಯತ್ನವನ್ನೂ ವಿತ್ತ ಸಚಿವರು ಮಾಡುತ್ತಾರೆ. ಖಾಸಗಿ ವ್ಯಕ್ತಿಯ ಖರ್ಚಿನ ಲೆಕ್ಕಾಚಾರ ತಾನು ಪಡೆಯುವ ಆದಾಯದ ಮೇಲೆ ಅವಲಂಬಿಸಿದೆ. ಆದಾಯ ಸ್ವಲ್ಪವಾದರೆ ಖರ್ಚು ಕಡಿಮೆ. ಸರಕಾರಕ್ಕೆ ಹಾಗಲ್ಲ. ಆದಾಯ ವಿಲ್ಲದಿದ್ದರೆ ಖರ್ಚು ಕಡಿಮೆ ಮಾಡಲು ಸಾಧ್ಯವಿಲ್ಲ. ಅಥವಾ ಆದಾಯವಿಲ್ಲವೆಂದು ಕಣ್ಣುಮುಚ್ಚಿ ಕುಳಿತುಕೊಳ್ಳಲು ಸಾಧ್ಯವಿಲ್ಲ. ಹೇಗಾದರೂ ಮಾಡಿ ನಿಭಾಯಿಸುವ ಜವಾಬ್ದಾರಿ ಸರಕಾರದ್ದು. ಸರಕಾರದ ಖರ್ಚು ಆದಾಯವನ್ನು ನಿರ್ಧರಿಸುತ್ತದೆ.
ಬಜೆಟ್ ಎಂದರೆ ಜನ ಸಾಮಾನ್ಯರಿಗಂತೂ ನಿರಾಸಕ್ತಿ. ಬಜೆಟ್ ಬರುತ್ತದೆ ಹೋಗುತ್ತದೆ. ಆದರೆ ಈ ವರ್ಷದ ಬಜೆಟ್ ಅನೇಕ ಕಾರಣಕ್ಕಾಗಿ ಪ್ರಾಮುಖ್ಯತೆಯನ್ನು ಪಡೆದಿದೆ.
ಯಾಕೆ ಪ್ರಾಮುಖ್ಯತೆ?
ನಮ್ಮ ದೇಶವು ಆರ್ಥಿಕ ಹಿಂಜರಿಕೆಯ ಸಂಕಷ್ಟಕ್ಕೀಡಾಗಿದೆ. ಕಳೆದ 11 ವರ್ಷಗಳಲ್ಲೇ ಅತ್ಯಂತ ಕನಿಷ್ಟ ಅಭಿವೃದ್ಧಿ ದರ ದಾಖಲಾಗಿದೆ. ಹಣದುಬ್ಬರದ ಪ್ರಮಾಣ ಏರುತ್ತಿದೆ. ತೆರಿಗೆಯಿಂದ ಬರಬಹುದಾದ ಆದಾಯದ ಪ್ರಮಾಣ ಆಶಾದಾಯಕವಾಗಿಲ್ಲ. ಕಳೆದೆರಡು ತಿಂಗಳಷ್ಟೇ ಸರಕು ಮತ್ತು ಸೇವಾ ತೆರಿಗೆಯ ಮೂಲಕ ಬರಬಹುದಾದ ತೆರಿಗೆಯ ಪ್ರಮಾಣದಲ್ಲಿ ಚೇತರಿಕೆ ಕಾಣಿಸಿಕೊಂಡಂತಿದೆ. ರಿಯಲ್ ಎಸ್ಟೇಟ್ ಉದ್ದಿಮೆ ಕುಂಟುತ್ತಾ ಸಾಗಿದೆ. ಉತ್ಪಾದನಾ ಕ್ಷೇತ್ರವು ಬೇಡಿಕೆ ಕುಸಿತದ ಪರಿಣಾಮವಾಗಿ ಸಂಕಷ್ಟದಲ್ಲಿದೆ.
ಸರಕಾರದ ಎಲ್ಲಾ ಪ್ರಯತ್ನಗಳು ಈ ಕ್ಷೇತ್ರವನ್ನು ಮೇಲೆತ್ತುವುದರಲ್ಲಿ ಸಫಲವಾಗಿಲ್ಲ. ಜಾಗತಿಕವಾಗಿಯೂ ಜೊತೆಗೆ ನಮ್ಮ ದೇಶದ ಅಭಿವೃದ್ಧಿಯು ರಿಯಲ್ ಎಸ್ಟೇಟ್ ಮತ್ತು ಮೂಲಭೂತ ಸೌಕರ್ಯ ಅಭಿವೃದ್ಧಿಯ ಮೇಲೆ ಅವಲಂಬಿತವಾಗಿದೆ. ಈ ಎರಡೂ ಕ್ಷೇತ್ರಗಳು ದೇಶದ ಆರ್ಥಿಕ ಅಭಿವೃದ್ಧಿಯ ಪಥವನ್ನು ಹಳಿಗೆ ತರುವ ಶಕ್ತಿಯನ್ನು ಪಡೆದಿವೆ. ಸರಕಾರವು 2024ರ ಒಳಗಾಗಿ 5 ಟ್ರಿಲಿಯನ್ ಡಾಲರ್ ಆರ್ಥಿಕತೆ ಸಾಧಿಸಲು, 102 ಲಕ್ಷ ಕೋಟಿಗಳನ್ನು ಮೂಲಭೂತ ಅಭಿವೃದ್ಧಿ ಉತ್ತಮ ಪಡಿಸಲು ಕಾರ್ಯ ಯೋಜನೆಯನ್ನು ರೂಪಿಸಿದೆ. ಇದರ ಲಾಭವೇನಿದ್ದರೂ ದೀರ್ಘಾ ವಧಿಯಲ್ಲಿ ಮಾತ್ರ. 5 ಟ್ರಿಲಿಯನ್ ಡಾಲರ್ ಆರ್ಥಿಕತೆಯ ಕನಸು ಸಾಧ್ಯವೇ ಎಂಬ ಅನುಮಾನ ದೇಶಕ್ಕೆ ಕಾಡತೊಡಗಿದೆ.
ಬಂಡವಾಳ ಹಿಂತೆಗೆತದಿಂದ ಬರಬಹುದಾದ ಆದಾಯದ ಬಗ್ಗೆ ಆತಂಕ ಕಾಡುತ್ತಿದೆ. ರಫ್ತಿನ ಕುಸಿತದಿಂದಾಗಿ ಉತ್ಪಾದನೆಯಾದ ವಸ್ತುಗಳಿಗೆ ಬೇಡಿಕೆ ಇಳಿದಿದೆ. ಎಲ್ಲೆಲ್ಲೂ ಬೇಡಿಕೆ ಕುಸಿತದ್ದೇ ಆತಂಕ. ಬೇಡಿಕೆಯನ್ನು ಸೃಷ್ಟಿಸುವುದೇ ಸರಕಾರಕ್ಕೆ ಮುಂದಿರುವ ಬಹುದೊಡ್ಡ ಸವಾಲು.
ಬ್ಯಾಂಕುಗಳು ನೀಡುವ ಸಾಲದ ಪ್ರಮಾಣ ಆಶಾದಾಯಕವಾಗಿಲ್ಲ. ಇತ್ತೀಚೆಗೆ ಸರಕಾರವು ಕಾರ್ಪೊರೇಟ್ ತೆರಿಗೆಯನ್ನು ಕಡಿಮೆ ಮಾಡುವ ಮೂಲಕ ಉದ್ಯಮ ವಲಯವನ್ನು ಸಂತೈಸುವ ಪ್ರಯತ್ನ ಮಾಡಿದೆ. ಇದೇ ಉತ್ತೇಜನವನ್ನು ಸಂಬಳ ಪಡೆಯುವ ಯುವ ವರ್ಗವೂ ಸರಕಾರದಿಂದ ನಿರೀಕ್ಷಿಸುತ್ತಿದೆ. ಉದ್ಯಮಪತಿಗಳಿಗೆ ದೊರೆತ ಲಾಭ ನಮಗೆ ಯಾಕೆ ಸಿಗಬಾರದೆಂಬುದು ಈ ವರ್ಗದ ಪ್ರಶ್ನೆ. ವೈಯಕ್ತಿಕ ಆದಾಯದ ಮೇಲೆ ಸರಕಾರ ನೀಡಬಹುದಾದ ತೆರಿಗೆಯ ರಿಯಾಯಿತಿ ಮೇಲೆಯೇ ನಮ್ಮೆಲ್ಲರ ದೃಷ್ಟಿ. ನಮ್ಮ ದೇಶದಲ್ಲಿ ತಿಂಗಳ ಕೊನೆಯಲ್ಲಿ ಸಂಬಳ ತೆಗೆದುಕೊಳ್ಳುವ ವರ್ಗವಷ್ಟೇ ಸರಕಾರಕ್ಕೆ ಸರಿಯಾಗಿ ತೆರಿಗೆ ನೀಡುತ್ತದೆ. ಈ ವರ್ಗಕ್ಕೆ ರಿಯಾಯಿತಿ ನೀಡಿದರೆ ಸರಕಾರದ ಆದಾಯಕ್ಕೆ ಹೊಡೆತ ಬೀಳಬಹುದೆಂಬ ಆತಂಕ ಮತ್ತೂಂದೆಡೆ.
ಇವತ್ತಿನ ಆರ್ಥಿಕ ಹಿಂಜರಿಕೆಗೆ ಇಳಿಕೆಯ ಹಾದಿಯಲ್ಲಿರುವ ಬೇಡಿಕೆಯೇ ಪ್ರಮುಖ ಕಾರಣ. ವೈಯಕ್ತಿಕ ಆದಾಯದಲ್ಲಿ ತೆರಿಗೆ ಕಡಿತವಾದರೆ ಜನರ ಜೇಬಲ್ಲಿ ಹೆಚ್ಚು ಹಣ ತುಂಬಲು ಸಾಧ್ಯ. ಹಣ ಹೆಚ್ಚು ತುಂಬಿದರೆ ಜನರು ಖರ್ಚಿಗೆ ಹಿಂದೆ ಮುಂದೆ ನೋಡುವುದಿಲ್ಲ. ಇದರ ಪರಿಣಾಮ ಬೇಡಿಕೆ ಹೆಚ್ಚಳವಾಗುತ್ತದೆ. ಉದ್ಯೋಗ ಸೃಷ್ಟಿಯ ಬಹುದೊಡ್ಡ ಸಮಸ್ಯೆ ಸರಕಾರದ ಮುಂದಿದೆ. ಮಿಲೇನಿಯಂ ವರ್ಗದ ಮಹಿಳೆಯರೇ ಹೆಚ್ಚಿರುವ ನಮ್ಮ ದೇಶಕ್ಕೆ ಬಜೆಟ್ ಏನು ಟಾನಿಕ್ ನೀಡಬಹುದೆಂಬ ಲೆಕ್ಕಾಚಾರ. Ease of living ಉತ್ತಮ ಪಡಿಸುವುದರಲ್ಲಿ ಬಜೆಟ್ ಏನು ಮಹತ್ತರ ಪಾತ್ರವಹಿಸಬಹುದು? ಎಂಬೆಲ್ಲಾ ಸಂದಿಗ್ಧ ಸ್ಥಿತಿಯಲ್ಲಿ ಬಜೆಟ್ ತಯಾರಿಕೆ ಬಹಳ ತ್ರಾಸದಾಯಕ.
ನಮ್ಮ ದೇಶದಲ್ಲಿ ಸಾವಿರಗಟ್ಟಲೆ ವೇತನ ಪಡೆಯುವವರು ಸಾವಿರಗಟ್ಟಲೆ ತೆರಿಗೆ ನೀಡುತ್ತಾರೆ. ಲಕ್ಷಗಟ್ಟಲೆ ಹಣ ಸಂಪಾದಿಸುವವರು ನೂರರ ಅಂಕಿಯಲ್ಲಿ ತೆರಿಗೆ ನೀಡುತ್ತಾರೆ. ತೆರಿಗೆ ಸೋರಿಕೆಯಲ್ಲಿನ ಲೋಪದೋಷಗಳನ್ನು ಸರಿಪಡಿಸಬೇಕಾದ ಅನಿವಾರ್ಯತೆ ದೇಶಕ್ಕಿದೆ. ಹೊಸ ಹೊಸ ತೆರಿಗೆ ಕಾರ್ಯರೂಪಕ್ಕೆ ಬಂದರೆ ತೆರಿಗೆ ತಪ್ಪಿಸುವ ಹೊಸ ಹೊಸ ಮಾರ್ಗಗಳನ್ನು ಕಂಡುಕೊಳ್ಳುತ್ತಾರೆ. ಅವರಂತೂ ತೆರಿಗೆ ತಪ್ಪಿಸುವ ಕಲೆಯನ್ನು ಕರಗತ ಮಾಡಿಕೊಂಡಿರುತ್ತಾರೆ. ಬಜೆಟ್ ಎಂಬುದು ಜನಸಾಮಾನ್ಯರ ಆಶೋತ್ತರಗಳನ್ನು ನೀಗಿಸುವ ಮಾರ್ಗ ವಾಗಿ ಹೊರಹೊಮ್ಮಬೇಕೆಂದು ನಮ್ಮೆಲ್ಲರ ಆಶಯ. ಇಲ್ಲದಿದ್ದರೆ ಬಜೆಟ್ ಬರುತ್ತದೆ, ಹೋಗುತ್ತದೆ. ನಮ್ಮ ಸಮಸ್ಯೆ ಯಥಾ ಸ್ಥಿತಿ ಮುಂದುವರಿಯುತ್ತದೆ. ಈ ಮಧ್ಯೆ ಅಮೆರಿಕ-ಚೀನಾ ನಡುವಿನ ವಾಣಿಜ್ಯ ಕದನ ಕೊನೆಗೊಳ್ಳುವ ಲಕ್ಷಣಗಳು ಕಾಣಿಸಿಕೊಳ್ಳುತ್ತಿದೆ.
ಅಟ್ಟದ ಮೇಲೇರಿದ್ದ ತೈಲ ಬೆಲೆ ಇಳಿಕೆಯ ಹಾದಿಯಲ್ಲಿದೆ. ಅಮೆರಿಕ-ಇರಾನ್ ನಡುವಿನ ಯುದ್ಧ ವಾತಾವರಣ ತಿಳಿಯಾಗುತ್ತಿದೆ. ಸಂದಿಗ್ಧತೆಯ ಕಾರ್ಮೋಡದಲ್ಲಿ ಬೆಳ್ಳಿ ಚುಕ್ಕಿಗಳು ಕಾಣಿಸಿಕೊಳ್ಳಲಾರಭಿಸಿವೆ. ಮುಂದೆಲ್ಲಾ ಸರಿ ಹೋಗಬಹುದೆಂಬ ಭರವಸೆಯೊಂದಿಗೆ ಈ ಬಜೆಟ್ ಮಂಡನೆಯಾಗುತ್ತದೆ.
(ಲೇಖಕರು ನಿಟ್ಟೆಯ ಡಾ.ಎನ್.ಎಸ್.ಎ.ಎಂ. ಪ್ರಥಮ ದರ್ಜೆ ಕಾಲೇಜಿನ ಇಕಾನಾಮಿಕ್ಸ್ ಡಿಪಾರ್ಟ್‌ಮೆಂಟ್‌ನ ಪ್ರೊಫೆಸರ್)
– ಡಾ. ರಾಘವೇಂದ್ರ ರಾವ್, ನಿಟ್ಟೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Rule; 5, 8ನೇ ತರಗತಿಯಲ್ಲಿ ಫೈಲ್ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!
Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು
Kerala; ಸರಕಾರಿ ಶಾಲೆಯಲ್ಲಿ ಕ್ರಿಸ್ಮಸ್ ಆಚರಣೆಗೆ ಅಡ್ಡಿ,ಗೋದಲಿ ಧ್ವಂಸ: ವ್ಯಾಪಕ ಆಕ್ರೋಶ
Mahakumbh 2025: 45 ಕೋಟಿ ಯಾತ್ರಾರ್ಥಿಗಳ ನಿರೀಕ್ಷೆ
Drama ಬಿಟ್ಟು ಅಂಬೇಡ್ಕರ್ ಅವರಿಗೆ ನಿರಂತರ ಅವಮಾನ ಮಾಡಿದ್ದಕ್ಕೆ ಕಾಂಗ್ರೆಸ್ ಕ್ಷಮೆ ಕೇಳಲಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಸುಮ್ನೆ ಬ್ಯಾಂಡೇಜ್ ಹಾಕಿಕೊಳ್ಳಲು ಯಾರಿಗೂ ತಲೆ ಕೆಟ್ಟಿಲ್ಲ: ಸಿ.ಟಿ.ರವಿ ಪತ್ನಿ ಪಲ್ಲವಿ
ಬಿಜೆಪಿ, ಕಾಂಗ್ರೆಸ್‌ಗೆ ಪ್ರತ್ಯೇಕ ಕಾನೂನಿಲ್ಲ, ನನ್ನ ದೂರಿಗೆ ಕ್ರಮವಿಲ್ಲವೇಕೆ?: ಸಿ.ಟಿ.ರವಿ
Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ
Road Mishap: ಬೈಕ್- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು
Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.