ಕನ್ನಡಿಗರಿಗೇ ಕಾವೇರಮ್ಮ
Team Udayavani, Feb 17, 2018, 8:15 AM IST
ದಶಕಗಳ ಇತಿಹಾಸ ಹೊಂದಿರುವ ಕಾವೇರಿ ಜಲ ವಿವಾದ ತಾರ್ಕಿಕ ಅಂತ್ಯಕ್ಕೆ ಬಂದು ನಿಂತಿದೆ. ನದಿ ಮೇಲೆ ಯಾರ ಸವಾರಿಯೂ ಬೇಡ ಎಂದಿರುವ ಸುಪ್ರೀಂಕೋರ್ಟ್ ಕರ್ನಾಟಕ, ತಮಿಳುನಾಡಿಗೆ ಈಗಾಗಲೇ ನಿಗದಿಯಾಗಿದ್ದ ನೀರು ಮರು ಹಂಚಿಕೆ ಮಾಡಿದೆ. ತೀರ್ಪು ಬಂದಾಗಿದೆ, ಕೇಂದ್ರ ನಿರ್ವಹಣಾ ಮಂಡಳಿ ಮಾಡಲಿ, ಎಲ್ಲರೂ ತೀರ್ಪು ಜಾರಿಗೆ ತನ್ನಿ ಎಂದು ಕಟ್ಟು ನಿಟ್ಟಿನ ಸೂಚನೆ ನೀಡಿ ದೆ. 15 ವರ್ಷ ಇತ್ತ ಬರಲೇ ಬೇಡಿ ಎಂದೂ ಹೇಳಿದೆ.
ನವದೆಹಲಿ/ಬೆಂಗಳೂರು: ಅಂತೂ ದಶಕಗಳ ಕಾವೇರಿ ವಿವಾದಕ್ಕೊಂದು ತಾರ್ಕಿಕ ಅಂತ್ಯ ಸಿಕ್ಕಿದ್ದು, 2007ರ ಕಾವೇರಿ ಜಲ ವಿವಾದ
ನ್ಯಾಯಾಧಿಕರಣದ ತೀರ್ಪನ್ನು ಸ್ವಲ್ಪ ಅದಲು-ಬದಲು ಮಾಡಿ ಸುಪ್ರೀಂಕೋರ್ಟ್ ತೀರ್ಪು ನೀಡಿದೆ. ಶುಕ್ರವಾರದ ಸುಪ್ರೀಂ ಅಂತಿಮ ತೀರ್ಪು ಕನ್ನಡಿಗರ ಪಾಲಿಗೆ ಕೊಂಚ ಸಂತಸ ತಂದಿದ್ದರೆ, ತಮಿಳುನಾಡಿಗೆ 2007ರ ತೀರ್ಪಿನಲ್ಲಿ ನೀಡಲಾಗಿದ್ದ ನೀರಿಗಿಂತ
14.75 ಟಿಎಂಸಿ ನೀರನ್ನು ಕಡಿತ ಮಾಡಲಾಗಿದೆ. ಮುಖ್ಯನ್ಯಾಯ ಮೂರ್ತಿ ದೀಪಕ್ ಮಿಶ್ರಾ, ನ್ಯಾ. ಅಮಿತಾವ್‌ರಾಯ್ ಮತ್ತು
ನ್ಯಾ. ಎ.ಎಂ. ಕನ್ವಿಲ್ಕರ್ ಅವರನ್ನೊಳಗೊಂಡ ತ್ರಿಸದಸ್ಯ ಪೀಠ ಈ ತೀರ್ಪು ನೀಡಿದ್ದು, ಮುಂದಿನ 15 ವರ್ಷಗಳ ವರೆಗೆ ಇದು ಜಾರಿಯಲ್ಲಿರಲಿದೆ ಎಂದು ಖಡಕ್ಕಾಗಿ ಹೇಳಿದೆ. ಅಲ್ಲದೆ ಯಾವುದೇ ಕಾರ ಣಕ್ಕೂ ಕಾವೇರಿ ಮೇಲೆ ಯಾರೊಬ್ಬರೂ ತಮ್ಮದು
ಎಂಬ ಹಕ್ಕು ಚಲಾಯಿಸಕೂಡದು ಎಂದು ಕಟ್ಟುನಿಟ್ಟಾಗಿ ಹೇಳಿದೆ. ಅಲ್ಲದೆ ಬಿಳಿಗೊಂಡ್ಲು ಜಲಾಶಯದ ಬಳಿ ಇರುವ ಮಾಪನ ಕೇಂದ್ರ
ಮೂಲಕವೇ ಕರ್ನಾಟಕ ತಮಿಳುನಾಡಿಗೆ ವರ್ಷಕ್ಕೆ 177.25 ಟಿಎಂಸಿ ನೀರನ್ನು ಬಿಡಬೇಕಾಗಿದೆ.
ಈ ಮಧ್ಯೆ, ಶುಕ್ರವಾರದ ತೀರ್ಪಿನ ಪ್ರಕಾರ ತಮಿಳುನಾಡಿಗೆ 404.25 ಟಿಎಂಸಿ, ಕರ್ನಾ ಟ ಕಕ್ಕೆ 284.75 ಟಿಎಂಸಿ ನೀರು ನೀಡಲಾಗಿದೆ. ಹೀಗಾಗಿ ರಾಜ್ಯದ 270 ಟಿಎಂಸಿ ಬದ ಲಾಗಿ 14.75 ಟಿಎಂಸಿ ಹೆಚ್ಚಳ ಮಾಡಲಾಗಿದೆ. ಕೇರಳ ಮತ್ತು ಪುದುಚೇರಿಗೆ ನೀಡಲಾಗಿದ್ದ ಕ್ರಮವಾಗಿ 30 ಟಿಎಂಸಿ ಮತ್ತು 7 ಟಿಎಂಸಿ ಪಾಲಿನಲ್ಲಿ ಬದಲಾವಣೆ ಮಾಡಿಲ್ಲ. ಆದರೆ ತಮಿಳುನಾಡು ಕಾವೇರಿ ಜಲಾನಯನ ಪ್ರದೇಶದಲ್ಲಿ ಅಂತರ್ಜಲದ ಮೂಲಕ 10 ಟಿಎಂಸಿ ಮತ್ತು ಕರ್ನಾಟಕ ಅಂತರ್ಜಲದ ಮೂಲಕ 10 ಟಿಎಂಸಿ ನೀರು ಪಡೆಯಬಹುದಾಗಿದೆ.
ಕುಡಿವ ನೀರಿಗೇ ಪ್ರಾಧಾನ್ಯತೆ: ಎಲ್ಲಕ್ಕಿಂತ ಮೊದಲು ಕುಡಿಯುವ ನೀರು ಎಂದು ಅಭಿಪ್ರಾಯ ಪಟ್ಟ ಕೋರ್ಟ್, ಬೆಂಗಳೂರಿನ ಆದ್ಯತೆಗೆ ಮನ್ನಣೆ ನೀಡಿದೆ. ಹೀಗಾ ಗಿ 4.75 ಟಿಎಂಸಿ ನೀರನ್ನು ಮೀಸಲಾಗಿ ಇರಿಸಿದೆ. ಈ ನೀರನ್ನು ತಮಿಳುನಾಡಿನ ಕಡೆಯಿಂದ ಕಿತ್ತು ನೀಡಿದೆ. ಈ ವೇಳೆ ಬೆಂಗಳೂರನ್ನು “ಜಾಗತಿಕ ಮಟ್ಟ’ದಲ್ಲಿ ಇರಿಸಿದ ಕೋರ್ಟ್, ಅಲ್ಲಿನ ಕುಡಿಯುವ ನೀರಿನ ಪ್ರಮಾಣ, ಮತ್ತದರ ಅಗತ್ಯತೆಯನ್ನು ವಿವರಿಸಿದೆ. ನ್ಯಾಯಾಧಿಕರಣದ ತೀರ್ಪನ್ನು ಉಲ್ಲೇಖೀಸಿದ ನ್ಯಾಯಪೀಠ, ಬೆಂಗಳೂರಿನ ಕುಡಿಯುವ ನೀರಿಗೆ ಆಗ ಆದ್ಯತೆ ನೀಡಲಾಗಿರಲಿಲ್ಲ. ಹೀಗಾಗಿ ಬೆಂಗಳೂರು ಅಂತರ್ಜಲವನ್ನೇ ಶೇ.60ರಷ್ಟು ಅವಲಂಬಿಸಬೇಕಾಗಿತ್ತು. ಸದ್ಯದ ಸ್ಥಿತಿಯಲ್ಲಿ ಇದು ಅಸಾಧ್ಯವೆಂದ ಪೀಠ, ಬೆಂಗಳೂರಿಗಾಗಿಯೇ 4.75 ಟಿಎಂಸಿ ನೀರನ್ನು ಮೀಸಲಾಗಿ ಇರಿಸಿದೆ. ಅಲ್ಲದೆ ಈ ನಗರ ಕಾವೇರಿ ಜಲಾನಯನ ಪ್ರದೇಶದಲ್ಲಿ ಬರದಿದ್ದರೂ ಪರ್ವಾಗಿಲ್ಲ. ಆ ನಗರಕ್ಕೆ ಕುಡಿಯುವ ನೀರು ಒದಗಿಸಲೇಬೇಕು ಎಂದು ಅಭಿಪ್ರಾಯಪಟ್ಟಿದೆ.
ಕೋರ್ಟ್ ಹೇಳಿದ್ದು
ಎಲ್ಲಾ ನದಿಗಳೂ ದೇಶದ ಸಂಪತ್ತು ಎನ್ನಿಸಿಕೊಂಡಿವೆ. ಹೀಗಾಗಿ ಇದರ ಮೇಲೆ ಯಾರೂ ಹಕ್ಕು ಚಲಾಯಿಸಕೂಡದು. ಅಂತಾರಾಜ್ಯ ನದಿ ನೀರಿನ ಹಂಚಿಕೆ ತತ್ವಗಳಾದ ಮೇಲಿನ ರಾಜ್ಯ ಮತ್ತು ಕೆಳಗಿನ ರಾಜ್ಯಗಳು ನದಿ ನೀರನ್ನು ಹಂಚಿಕೊಳ್ಳಬೇಕು. 1892 ಮತ್ತು 1924 ಒಪ್ಪಂದಗಳಿಗೆ ಪ್ರಾಥಮಿಕ ತತ್ವಗಳು ಅನ್ವಯವಾಗುವುದಿಲ್ಲ. ಆಗ ರಾಜಕೀಯ ಉದ್ದೇಶಕ್ಕಾಗಿ ಒಪ್ಪಂದ ಮಾಡಿಕೊಂಡಿರಲಿಲ್ಲ. ಪ್ರಧಾನವಾಗಿ ಜನರ ಹಿತಾಸಕ್ತಿಗಾಗಿಯೇ ಈ ನಿರ್ಧಾರ ತೆಗೆದುಕೊಳ್ಳಲಾಗಿತ್ತು. ಜತೆಗೆ, ಈ ಎರಡೂ ಒಪ್ಪಂದಗಳು ಸ್ವಾತಂತ್ರ್ಯ ಬರುವುದಕ್ಕಿಂತ ಮುನ್ನ ಮಾಡಿಕೊಂಡವಾಗಿದ್ದು, ಸಂವಿಧಾನದ ಪರಿಚ್ಛೇದ 363ರಂತೆ ಅನ್ವಯವಾಗುವುದಿಲ್ಲವೆಂಬ ವಾದವನ್ನೂ ಕೋರ್ಟ್ ತಳ್ಳಿಹಾಕಿದೆ. ಅದು ಸರಿ, ಸ್ವಾತಂತ್ರ್ಯ ಬಂದ ಕೂಡಲೇ ಏಕೆ ಈ ಎರಡೂ ಒಪ್ಪಂದಗಳನ್ನು ರದ್ದು ಮಾಡಲಿಲ್ಲವೆಂದೂ ಸುಪ್ರೀಂಕೋರ್ಟ್ ಕರ್ನಾಟಕವನ್ನು ಪ್ರಶ್ನಿಸಿದೆ. ಈ ಎರಡೂ ಒಪ್ಪಂದಗಳ ಊರ್ಜಿತದ ಬಗ್ಗೆಯೇ ಕರ್ನಾ ಟಕ ಸುಪ್ರೀಂನಲ್ಲಿ ವಾದ ಮಾಡಿತ್ತು. ಜತೆಗೆ ರಾಜ್ಯಗಳ ನಡುವಿನ ನದಿ ನೀರು ಹಂಚಿಕೆ ವಿಚಾರದಲ್ಲಿ ಕೋರ್ಟ್ ಏನೂ ಮಾಡುವಂತಿಲ್ಲ, ಅದು ಸಂಪೂರ್ಣವಾಗಿ ಸಂಸತ್‌ಗೆ ಬಿಟ್ಟ ವಿಚಾರವೆಂದ ಕೇಂದ್ರ ಸರ್ಕಾರದ ವಾದವನ್ನೂ ತಳ್ಳಿ ಹಾಕಿದೆ. ಹೆಚ್ಚು ಕಡಿಮೆ 2007ರ ಕಾವೇರಿ ನ್ಯಾಯಾಧಿಕರಣ ನೀಡಿದ್ದ ತೀರ್ಪಿನ ಅಂಶಗಳನ್ನು ಹಾಗೆಯೇ ಕೋರ್ಟ್ ಇರಿಸಿ ಕೊಂಡಿದೆ.
ಮಂಡಳಿಯ ಆಘಾತ
ಸದ್ಯ ಕರ್ನಾಟಕಕ್ಕೆ 14.75 ಟಿಎಂಸಿ ನೀರು ಹೆಚ್ಚು ಸಿಕ್ಕಿದೆ ಎಂಬುದು ಖುಷಿ ವಿಚಾರವಾದರೂ, ಕೋರ್ಟ್‌ನಲ್ಲಿ ಭಾರಿ ದೊಡ್ಡ ಹೊಡೆ ತವೇ ಬಿದ್ದಿದೆ. ನ್ಯಾಯ ಮಂಡಳಿಯ ಆದೇಶದಂತೆ ಕಾವೇರಿ ನದಿ ನೀರಿನ ನಿರ್ವ ಹಣಾ ಮಂಡಳಿಯನ್ನು ಕೇಂದ್ರ ಸರ್ಕಾರ ರಚಿಸಲೇಬೇಕಾಗಿದೆ. ಒಂದೊಮ್ಮೆ ಈ ಮಂಡಳಿ ರಚಿಸಿದರೆ ಕಾವೇರಿಕೊಳ್ಳದ ಜಲಾಶಯಗಳ ಮೇಲಿನ ಹಕ್ಕನ್ನು ಕರ್ನಾ ಟಕ ಸಂಪೂರ್ಣವಾಗಿ ಕಳೆದುಕೊಳ್ಳುತ್ತದೆ. ಈ ರೀತಿ ಆದಲ್ಲಿ, ರಾಜ್ಯದಲ್ಲಿ ಮಳೆ ಬರದೇ ಬರ ಸ್ಥಿತಿ ಉಂಟಾದರೂ, ಕರ್ನಾಟಕವನ್ನು ಹೇಳದೇ ಕೇಳದೇ ಈ ಮಂಡಳಿ ತಮಿಳುನಾಡಿಗೆ ನೀರು ಹರಿಸಬಹುದಾಗಿದೆ. ಮಂಡಳಿಯಲ್ಲಿ ರಾಜ್ಯದ ಒಬ್ಬ ಅಧಿಕಾರಿಯೂ ಇರಲಿದ್ದು, ಈ ಮಂಡಳಿ ಅಧ್ಯಕ್ಷತೆಯನ್ನು ಕೇಂದ್ರ ಜಲ ಸಂಪನ್ಮೂಲ ಸಚಿವಾಲಯದ ಕಾರ್ಯದರ್ಶಿ ಹೊಂದಿರುತ್ತಾರೆ. ಜತೆಯಲ್ಲಿ ತಮಿಳುನಾಡು, ಕೇರಳ ಮತ್ತು ಪುದುಚೇರಿಯ ಅಧಿಕಾರಿಗಳೂ ಇರುತ್ತಾರೆ. ಮಂಡಳಿ ನೀರು ಬಿಡುಗಡೆ ಕುರಿತು ನಿರ್ಧಾರ ತೆಗೆದುಕೊಳ್ಳುವ ಮುನ್ನ 4 ರಾಜ್ಯಗಳ ನೀರಿನ ಲಭ್ಯತೆ ಮತ್ತು ಅವಶ್ಯಕತೆಯನ್ನು ಪರಿಗಣಿಸಬೇಕಾಗುತ್ತದೆ. ಹೀಗಾಗಿ ಮಂಡಳಿ ರಚನೆಯಾದರೂ ಅಪಾಯವಿಲ್ಲ ಎಂದು ಕಾನೂನು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
15 ವರ್ಷದವರೆಗೆ ಪಾಲಿಸಿ
ಶುಕ್ರವಾರದ ತೀರ್ಪನ್ನು ಮುಂದಿನ 15 ವರ್ಷಗಳ ವರೆಗೆ ಬದಲಾಯಿಸುವಂತಿಲ್ಲವೆಂದು ಕೋರ್ಟ್ ಖಡಕ್ಕಾಗಿಯೇ ಹೇಳಿದೆ. ಹೆಚ್ಚು
ನೀರಿಗಾಗಿ ಅರ್ಜಿ ಸಲ್ಲಿಸಿದ್ದ ಕೇರಳ ಮತ್ತು ಪುದುಚೇರಿಗಳ ಮನವಿ ತಳ್ಳಿ ಹಾಕಿದ ಅದು, ನಿಮಗೆ 2007ರ ನ್ಯಾಯಾಧಿಕರಣದಲ್ಲಿ ಮಾಡಲಾಗಿದ್ದ ಹಂಚಿಕೆ ಪ್ರಮಾಣವೇ ಮುಂದುವರಿಯಲಿದೆ ಎಂದಿದೆ. ಈ ಮೂಲಕ ಕೇರಳಕ್ಕೆ 30 ಟಿಎಂಸಿ ಹಾಗೂ ಪುದು ಚೇ ರಿಗೆ 7 ಟಿಎಂಸಿ ನೀರನ್ನಷ್ಟೇ ನಿಗದಿ ಮಾಡಿದೆ. ಹೀಗಾಗಿ ಕೇರಳ 43,000 ಎಕರೆಗಳನ್ನಷ್ಟೇ ಕಾವೇರಿ ಅವಲಂಬಿತ ನೀರಾವರಿ ವ್ಯವಸಾಯ ಮಾಡಬಹುದಾಗಿದೆ. ಇದಕ್ಕಿಂತ ಹೆಚ್ಚು ಮಾಡುವಂತಿಲ್ಲ ಎಂದೂ ಸೂಚಿಸಿದೆ.
ಮಹದಾಯಿಯಲ್ಲೂ ಸಿಹಿ?
ಕಾವೇರಿ ನದಿ ನೀರು ಹಂಚಿಕೆಯಲ್ಲಿ ಅನುಸರಿಸಲಾಗಿರುವ ನೀತಿಯನ್ನೇ ಮಹದಾಯಿ ವಿಚಾರದಲ್ಲೂ ಅಳವಡಿಸಿದರೆ ಕರ್ನಾಟಕಕ್ಕೆ ನ್ಯಾಯ ಸಿಗುವ ಸಾಧ್ಯತೆಗಳು ಹೇರಳವಾಗಿವೆ. ಅಂದರೆ, ಸುಪ್ರೀಂಕೋರ್ಟ್ ಇಡೀ ದೇಶ ದಲ್ಲಿ ಯಾವುದೇ ರಾಜ್ಯ ಗಳು, ಯಾವುದೇ ನದಿಗಳ ಮೇಲೆ ಹಕ್ಕು ಸಾಧಿಸುವಂತಿಲ್ಲ ಎಂದು ಸ್ಪಷ್ಟವಾಗಿ ಹೇಳಿದೆ. ಹೀಗಾಗಿ ಗೋವಾ ಮಹದಾಯಿಯನ್ನು ತನ್ನ ನದಿ ಎಂದು ಹೇಳಿಕೊಳ್ಳುವಂತಿಲ್ಲ. ಅಲ್ಲದೆ ಮಹದಾಯಿ ವಿಚಾರದಲ್ಲೂ ಕರ್ನಾಟಕ ಕುಡಿಯುವ ನೀರಿಗಾಗಿಯೇ ಗೋವಾದಿಂದ ನೀರು ಕೇಳುತ್ತಿದೆ.
ಬೆಂಗಳೂರಿಗೇಕೆ ಮಹತ್ವ?
ಸುಪ್ರೀಂಕೋರ್ಟ್ ವಿಚಾರಣೆ ವೇಳೆ ಹಲವಾರು ಬಾರಿ ಬೆಂಗಳೂರಿಗೆ ಕಾವೇರಿ ನೀರು ಕೊಡಬೇಕೇ, ಬೇಡವೇ ಎಂಬ ಬಗ್ಗೆ ಸುದೀರ್ಘ ವಾದ-ಪ್ರತಿವಾದ ನಡೆದಿತ್ತು. ಬೆಂಗಳೂರು ಕಾವೇರಿ ಜಲಾನಯನ ಪ್ರದೇಶದಲ್ಲಿ ಬರುವುದೇ ಇಲ್ಲ. ಹೀಗಾಗಿ ಆ ನಗರಕ್ಕೆ ನೀರು ಕೊಡುವ ಹಾಗಿಲ್ಲ ಎಂದು ತಮಿಳುನಾಡು ವಾದಿಸಿತ್ತು. ಇದಕ್ಕೆ ಪ್ರತಿಯಾಗಿ ವಾದ ನಡೆಸಿದ್ದ ರಾಜ್ಯ ಪರ ವಕೀಲ ಫಾಲಿ ನಾರಿಮನ್ ಅವರು, ಚೆನ್ನೈಗೆ ಕೃಷ್ಣಾ ನದಿಯಿಂದ ನೀರು ತರುತ್ತಿಲ್ಲವೇ. ಕುಡಿಯುವ ಸಲುವಾಗಿ ಎಲ್ಲಿಂದ ಬೇಕಾದರೂ ನೀರು ಒದಗಿಸಬಹುದು. ಕೃಷ್ಣಾ ಜಲಾನಯನ ಪ್ರದೇಶದಲ್ಲಿ ಚೆನ್ನೈ ಇರದಿದ್ದರೂ, ಮಾನವೀಯತೆಯ ದೃಷ್ಟಿಯಿಂದ ನೀರು ಕೊಡಲಾಗುತ್ತಿದೆ ಎಂದು ವಾದಿಸಿದ್ದರು. ಹೀಗಾಗಿ ಬೆಂಗಳೂರಿಗೆ ಕಾವೇರಿ ನೀರು ಬೇಕೇ ಬೇಕು ಎಂದು ಪ್ರಬಲವಾಗಿಯೇ ಪ್ರತಿ ಪಾದಿಸಿದ್ದರು. ಇನ್ನು ಕೆಲವು ದಿನಗಳ ಹಿಂದಷ್ಟೇ ಬಿಬಿಸಿ ವೆಬ್ ಸೈಟ್ ಬೆಂಗಳೂರಿನ ನೀರಿನ ಕೊರತೆ ಬಗ್ಗೆ ವಿಸ್ತೃತವಾಗಿ ವರದಿ ಪ್ರಕಟಿಸಿ 2025ರ ವೇಳೆಗೆ ಬೆಂಗಳೂರಲ್ಲಿ ನೀರು ಖಾಲಿಯಾಗುತ್ತದೆ ಎಂದು ಎಚ್ಚರಿಕೆ ನೀಡಿತ್ತು. ಇದರ ಬೆನ್ನಲ್ಲೇ ಸುಪ್ರೀಂಕೋರ್ಟ್ ಶುಕ್ರವಾರದ ತೀರ್ಪಿನ ವೇಳೆ ಬೆಂಗಳೂರಿನ ಮಹತ್ವದ ಬಗ್ಗೆ ಸಾರಿ ಹೇಳಿದೆ. ಇದಕ್ಕೆ ಗ್ಲೋಬಲ್ ಸ್ಟೇಟಸ್ ಇದ್ದು, ಆ ನಗರಕ್ಕೆ ಕುಡಿಯುವ ಉದ್ದೇಶಕ್ಕಾಗಿ ನೀರು ಕೊಡಲೇಬೇಕು ಎಂದು ಹೇಳಿದೆ. ಈ ಮೂಲಕ ತಮಿಳುನಾಡು ಸರ್ಕಾರಕ್ಕೆ ಮುಖ ಭಂಗವಾಗಿದೆ.
ತಮಿಳುನಾಡಿನಲ್ಲಿ ಆಘಾತ
ಸುಪ್ರೀಂಕೋರ್ಟ್‌ನ ಕಾವೇರಿ ತೀರ್ಪು ರಾಜ್ಯದ ಪಾಲಿಗೆ ಖುಷಿ ತಂದು ಕೊಟ್ಟಿದ್ದರೆ, ಅತ್ತ ತಮಿಳುನಾಡಿನಲ್ಲಿ ತೀವ್ರ ಅಸಮಾಧಾನಕ್ಕೂ ಕಾರಣವಾಗಿದೆ. ಡಿಎಂಕೆ ಮತ್ತು ಎಐಎಡಿಎಂಕೆ ಪಕ್ಷಗಳು ಪರಸ್ಪರ ವಾಕ್ಸಮರದಲ್ಲಿ ತೊಡಗಿವೆ. ರಾಜ್ಯಕ್ಕೆ 14 ಟಿಎಂಸಿ ಕಡಿಮೆ ಮಾಡಲಾಗಿದ್ದು, ಇದರಿಂದ ತಮಿಳುನಾಡಿಗೆ ದ್ರೋಹವಾಗಿದೆ ಎಂದು ಡಿಎಂಕೆ ನಾಯಕರು ಆರೋಪಿಸಿದ್ದಾರೆ. ಆದರೆ, ಆಡಳಿತದಲ್ಲಿರುವ ಎಐಎಡಿಎಂಕೆ ಪಕ್ಷ, ಕಾವೇರಿಗಾಗಿ ಹೋರಾಟ ಮುಂದುವರಿಸಲು ಸಿದ್ಧವಿರುವುದಾಗಿ ಹೇಳಿದೆ. ಇನ್ನು ಈಗಷ್ಟೇ ರಾಜಕಾರಣಕ್ಕೆ ಧುಮುಕಲು ಸಿದ್ಧವಾಗುತ್ತಿರುವ ಹಿರಿಯ ನಟ ಕಮಲ್ ಹಾಸನ್, ದಕ್ಷಿಣ ಭಾರತದಲ್ಲಿರುವ ತಮಿಳು ನಾಡು ಮತ್ತು ಕರ್ನಾಟಕ ರಾಜ್ಯಗಳು ಒಗ್ಗಟ್ಟು ಪ್ರದರ್ಶಿಸಿ, ಮಾತುಕತೆ ನಡೆಸಿಕೊಳ್ಳಬೇಕು. ಇದರಲ್ಲಿ ಯಾವುದೇ ಕಾರಣಕ್ಕೂ ರಾಜಕೀಯ ಮಾಡಬಾರದು. ಜನರಿಗಾಗಿ ವಿವಾದ ಮುಂದುವರಿಸದೇ ಜನರಿಗಾಗಿ ಒಂದು ನಿರ್ಧಾರಕ್ಕೆ ಬರಬೇಕು ಎಂದು ಹೇಳಿದ್ದಾರೆ. ಈ ಮಧ್ಯೆ, ತಮಿಳುನಾಡಿನ ಕೆಲವೆಡೆಗಳಲ್ಲಿ ತೀರ್ಪು ವಿರೋಧಿಸಿ ಪ್ರತಿಭಟನೆಗಳು ನಡೆದಿವೆ. ಸರ್ವಪಕ್ಷಗಳ ಸಭೆ ಕರೆಯುವಂತೆ ಡಿಎಂಕೆ ನಾಯಕ ಸ್ಟಾಲಿನ್ ಆಗ್ರ ಹಿಸಿದ್ದಾರೆ.
2007ರ ನ್ಯಾಯ ಮಂಡಳಿ ತೀರ್ಪು (ಟಿಎಂಸಿಗಳಲ್ಲಿ)
ತ.ನಾಡು ಕೇಳಿದ್ದು 562
ಟ್ರಿಬ್ಯುನಲ್ ಕೊಟ್ಟದ್ದು 419
ಕರ್ನಾಟಕ ಕೇಳಿದ್ದು 465
ಟ್ರಿಬ್ಯುನಲ್ ಕೊಟ್ಟದ್ದು 270
ಕೇರಳ ಕೇಳಿದ್ದು 100
ಟ್ರಿಬ್ಯುನಲ್ ಕೊಟ್ಟದ್ದು 30
ಪುದುಚೇರಿ ಕೇಳಿದ್ದು 9
ಟ್ರಿಬ್ಯುನಲ್ ಕೊಟ್ಟದ್ದು 7
ಕಾವೇರಿ ನ್ಯಾಯ ಮಂಡಳಿ 2007ರ ಫೆ.5 ರಂದು ನೀಡಿದ್ದ ತೀರ್ಪು ರಾಜ್ಯದ ಪಾಲಿಗೆ ಮಾರಕವಾಗಿತ್ತು. ಬೆಂಗಳೂರಿಗೆ ಕುಡಿಯುವ
ನೀರಿಗಾಗಿ ತುಸು ಹೆಚ್ಚು ನೀರು ಕೇಳಿದ್ದರೂ ಕೊಟ್ಟಿರಲಿಲ್ಲ. ನಿವೃತ್ತ ನ್ಯಾ. ಎನ್.ಪಿ.ಸಿಂಗ್ ನೇತೃತ್ವದ ತ್ರಿಸದಸ್ಯ ಮಂಡಳಿ 1000 ಪುಟಗಳ ತೀರ್ಪು ನೀಡಿದ್ದು, ಇದರಲ್ಲಿ ಸಾಮಾನ್ಯ ವರ್ಷವೊಂದರಲ್ಲಿ ತಮಿಳು ನಾಡಿಗೆ 419 ಟಿಎಂಸಿ, ಕರ್ನಾಟಕಕ್ಕೆ 270 ಟಿಎಂಸಿ, ಕೇರಳಕ್ಕೆ 30 ಟಿಎಂಸಿ ಮತ್ತು ಪುದುಚೇರಿಗೆ 7 ಟಿಎಂಸಿ ನೀಡಿತ್ತು. 1990ರಲ್ಲಿ ವಿ.ಪಿ. ಸಿಂಗ್ ನೇತೃ ತ್ವದ ಸರ್ಕಾರ ನ್ಯಾಯ ಮಂಡಳಿ ರಚನೆ ಮಾಡಿತ್ತು. 1992ರಲ್ಲೇ ಮಧ್ಯತರ ಆದೇಶ ನೀಡಿ 205 ಟಿಎಂಸಿ ನೀರನ್ನು ತಮಿಳುನಾಡಿಗೆ ಬಿಡುವಂತೆ ಸೂಚಸಿತ್ತು. ಆದರೆ ಕರ್ನಾಟಕದಲ್ಲಿ ಆಗ ಆಡಳಿತದಲ್ಲಿದ್ದ ಎಸ್.ಎಂ.ಕೃಷ್ಣ ಸರ್ಕಾರ ನೀರು ಬಿಡಲು ಸುತಾರಾಂ ಒಪ್ಪಿರಲಿಲ್ಲ. ಅಲ್ಲದೆ, ಈ ನ್ಯಾಯ ಮಂಡಳಿ ರಚನೆಗೇ ವಿರೋಧಿಸಿದ್ದ ರಾಜ್ಯ, ವಿಧಾನಸಭೆಯಲ್ಲಿ ಶಾಸನವೊಂದನ್ನು ಜಾರಿ ಮಾಡಿತ್ತಲ್ಲದೇ, ಇದನ್ನು ಸುಪ್ರೀಂಕೋರ್ಟ್ ವಜಾ ಮಾಡಿತ್ತು.
ಯಾವ ತಿಂಗಳಲ್ಲಿ ಎಷ್ಟು ನೀರು?
ಜೂನ್ – 10
ಜುಲೈ – 34
ಆಗಸ್ಟ್ – 50
ಸೆಪ್ಟೆಂಬರ್ – 40
ಅಕ್ಟೋ ಬರ್ – 22
ನವೆಂಬರ್ – 15
ಡಿಸೆಂಬರ್ – 8
ಜನ ವರಿ – 3
ಫೆ -ಮೇ – 2.5
ಶತಮಾನಗಳ ಕಾವೇರಿ ಕಲಹ
ಕಾವೇರಿ ನದಿ ನೀರಿನ ಹಂಚಿಕೆ ವಿವಾದ ಇಂದು ನಿನ್ನೆಯದಲ್ಲ. ಇದಕ್ಕೆ ಶತಮಾನಗಳ ಇತಿಹಾಸವಿದೆ. ಕರ್ನಾಟಕ ಮತ್ತು ತಮಿಳುನಾಡು ರಾಜ್ಯ ಗಳು ಕಾವೇರಿ ನದಿಯ ಒಂದು ಹನಿ ನೀರನ್ನೂ ಹೆಚ್ಚು ಕಡಿಮೆಯಾಗಿ ಹಂಚಿಕೊಳ್ಳಲು ತಯಾರಿಲ್ಲ. ಎರಡೂ ರಾಜ್ಯಗಳ ಪಾಲಿಗೆ ಕಾವೇರಿ ಜೀವನದಿ.
1892 ಯೋಜನೆಗೂ ಮುನ್ನ ಮದ್ರಾಸ್ ಪ್ರಸಿಡೆನ್ಸಿಯ ಒಪ್ಪಿಗೆ ಪಡೆಯಲು ಮೈಸೂರು ರಾಜ್ಯದ ಒಪ್ಪಿಗೆ
1911 ಕೆಆರ್‌ಎಸ್ ನಿರ್ಮಿಸುವ ಮೈಸೂರು ಪ್ರಸ್ತಾಪಕ್ಕೆ ಮದ್ರಾಸ್ ವಿರೋಧ. ಮೈಸೂರಿಗೆ ಬ್ರಿಟಿಷರ ಬಲ
1924 ಮುಂದಿನ 50 ವರ್ಷಗಳ ವರೆಗೆ ಹಿಂದಿನ ಆದೇಶವನ್ನೇ ಅನುಸರಿಸಿಕೊಂಡು ಹೋಗುವ ಬಗ್ಗೆ ಒಪ್ಪಂದ
1972 ಕಾವೇರಿ ಸತ್ಯಶೋಧನಾ ತಂಡ ರಚನೆ. ಪರ ಸ್ಪರ ಮಾತುಕತೆಗಳ ಮುಂದುವರಿಕೆಗೆ ಒಪ್ಪಿಗೆ
1990 ಕಾವೇರಿ ನ್ಯಾಯಾಧಿ ಕರಣ ರಚನೆ ಮಾಡಿದ ಕೇಂದ್ರ
1991 ಮಧ್ಯಂತರ ಆದೇಶದಲ್ಲಿ ತ.ನಾಡಿಗೆ 205 ಟಿಎಂಸಿ ನೀರು ಬಿಡಲು ಆದೇಶ. ರಾಜ್ಯದಲ್ಲಿ ಹೋರಾಟ
1995 96 ಬರದ ಹಿನ್ನೆಲೆಯಲ್ಲಿ ನೀರು ಬಿಡಲು ಕರ್ನಾಟಕದ ನಿರಾಕರಣೆ. ನೀರು ಬಿಡಿ ಎಂದ ಆಗಿನ ಪ್ರಧಾ ನಿ
1997 ಕಾವೇರಿ ನದಿ ಪ್ರಾಧಿಕಾರ ಮತ್ತು ಮೇಲ್ವಿಚಾರಣಾ ಸಮಿತಿ ರಚನೆ
2002 ಬರದ ಕಾರಣದಿಂದಾಗಿ ನೀರಿಗಾಗಿ ಕರ್ನಾಟಕ, ತಮಿಳುನಾಡಿನ ನಡುವೆ ಕಿತ್ತಾಟ.
1991ರ ಆದೇಶ ಪಾಲಿಸುವುದಿಲ್ಲ ವೆಂದ ಕರ್ನಾಟಕ. ಸುಪ್ರೀಂ ಮಧ್ಯ ಪ್ರವೇಶ. ನೀರು ಬಿಡಲು ಕರ್ನಾಟಕಕ್ಕೆ ಆದೇಶಿಸಿದರೂ, ಪಾಲಿಸಲ್ಲವೆಂದ ಕರ್ನಾಟಕ.
2016 ಆಗಸ್ಟ್ ಕರ್ನಾಟಕದಿಂದ ನೀರು ಕಡಿಮೆ ಯಾಗುತ್ತಿರುವ ಬಗ್ಗೆ ಸುಪ್ರೀಂ ಕದ ತಟ್ಟಿದ ತಮಿಳುನಾಡು.
2016 ಸೆಪ್ಟೆಂಬರ್ 10 ದಿನಗಳಲ್ಲಿ 15 ಸಾವಿರ ಕ್ಯುಸೆಕ್ ನೀರು ಬಿಡಲು ಸುಪ್ರೀಂ ಆದೇಶ. ಒಪ್ಪದ ಕರ್ನಾಟಕ
2017 ಸೆಪ್ಟೆಂಬರ್ ಕರ್ನಾಟಕ, ತ.ನಾಡು, ಕೇರಳ, ಪುದುಚೇರಿ ಸಲ್ಲಿಸಿದ್ದ ಅರ್ಜಿ ತೀರ್ಪು ಕಾಯ್ದಿರಿಸಿದಸುಪ್ರೀಂಕೋರ್ಟ್
2018 ಜನವರಿ ಜ.9 ರಂದು ವಿಚಾರಣೆ, ತಿಂಗಳಲ್ಲಿ ತೀರ್ಪು ಜಾರಿ ಭರವಸೆ, ತಮಿಳುನಾಡಿಂದ ನೀರಿಗೆ ಕೋರಿಕೆ, ಬಿಡಲ್ಲವೆಂದ ಕರ್ನಾಟಕ
ಬೆಂಗಳೂರು ಬೆಳೆಯುತ್ತಿರುವ ನಗರ. ಹೀಗಾಗಿ ಹೆಚ್ಚಿನ ನೀರಿನ ಅವಶ್ಯ ಕತೆ ಇದೆ. ಸುಪ್ರೀಂ ತೀರ್ಪು ಸಮಾ ಧಾನ ತಂದಿದೆ.
● ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ನಾಯಕ
ನಾವು ಸಾಧಿಸಿದ್ದ ಎಲ್ಲಾ ಹಕ್ಕುಗಳು ನಾಶವಾಗಿವೆ. ಇದಕ್ಕೆ ಪಳನಿ ಸ್ವಾಮಿ ಸರ್ಕಾರವೇ ಕಾರಣ. ಈ ಕೂಡಲೇ ಸರ್ವ ಪಕ್ಷ ಸಭೆ ಕರೆಯಲಿ.
● ಸ್ಟಾಲಿನ್, ಡಿಎಂಕೆ ನಾಯಕ
ಕಾವೇರಿ ಕರ್ನಾಟಕದ ಸ್ವತ್ತಲ್ಲ ಎಂದು ಹೇಳಿದೆ. ಕಾವೇರಿ ಪ್ರಾಧಿಕಾರ ರಚನೆಗೆ ಮುಂದಾಗಿರುವುದು ಒಳ್ಳೆಯ ಬೆಳವಣಿಗೆ.
● ಪಿ. ಅಯ್ಯಕಣ್ಣು, ತಮಿಳುನಾಡಿನ ವಕೀಲ
ಈ ತೀರ್ಪು ಸ್ವಾಗತಾರ್ಹ. ಎರಡೂ ರಾಜ್ಯಗಳಿಗೆ ನ್ಯಾಯ ಒದಗಿಸಿದೆ. ಶಾಂತಿ ನಿರ್ಮಾಣಕ್ಕೂ ಸಹಕಾರಿ.
● ಮೋಹನ್ ಕಾತರಕಿ, ರಾಜ್ಯದ ಪರ ವಕೀಲ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
JPC on Adani issue;ನಿಯಮ 267 ಅಡಿಯಲ್ಲಿ ಪ್ರಸ್ತಾಪಿಸಲು ಅವಕಾಶ ನೀಡದ್ದಕ್ಕೆ ಖರ್ಗೆ ಆಕ್ರೋಶ
Kuno National Park; ಮರಿಗಳಿಗೆ ಜನ್ಮ ನೀಡಿದ ಚೀತಾ ನೀರ್ವಾ: ಸಂಖ್ಯೆ ಹೆಚ್ಚಳ
Adani funding; 100 ಕೋಟಿ ನಿಧಿಯನ್ನು ಸ್ವೀಕರಿಸುವುದಿಲ್ಲ ಎಂದ ರೇವಂತ್ ರೆಡ್ಡಿ
Andaman: ಕೋಸ್ಟ್ ಗಾರ್ಡ್ ಕಾರ್ಯಾಚರಣೆ… ಮೀನುಗಾರಿಕಾ ದೋಣಿಯಲ್ಲಿದ್ದ 5ಟನ್ ಮಾದಕ ವಸ್ತು ವಶ
Maharashtra: ಕಾಂಗ್ರೆಸ್ ಗೆ ಕೇವಲ 16 ಸ್ಥಾನ; ಕೈ ಅಧ್ಯಕ್ಷ ಸ್ಥಾನಕ್ಕೆ ಪಟೋಲೆ ರಾಜೀನಾಮೆ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Gangolli: ಬೈಕ್‌ಗೆ ಕಾರು ಢಿಕ್ಕಿ; ಇಬ್ಬರಿಗೆ ಗಾಯ
Udupi: ಪಿಕಪ್ ವಾಹನ ಢಿಕ್ಕಿ ಹೊಡೆದು ವ್ಯಕ್ತಿ ಗಾಯ
Gift: ಶಿಗ್ಗಾವಿಯಲ್ಲಿ ನಾಮಪತ್ರ ವಾಪಸ್ ಪಡೆದ ಖಾದ್ರಿಗೆ ಹೆಸ್ಕಾಂ ಅಧ್ಯಕ್ಷಗಿರಿ ಹುದ್ದೆ!
Davanagere: ʼಸೋಲಿಲ್ಲದ ಸರದಾರʼ ಎನಿಸಿದ್ದ ʼಬೆಳ್ಳೂಡಿ ಕಾಳಿʼ ಟಗರು ಅನಾರೋಗ್ಯದಿಂದ ನಿಧನ
IFFI 2024; ಫಿಲ್ಮ್ ಬಜಾರ್: ಮತ್ತೊಂದು ಯಶಸ್ವಿ ಮುನ್ನುಡಿಯೊಂದಿಗೆ ಉತ್ಸವ ಸಮಾಪನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.